ಮುಂದಿನ ವಾರದ ಈ ಅಂಕಣ ಬರಹ ನಿಮ್ಮ ಮುಂದೆ ಬರುವವೇಳೆಗೆಲ್ಲ ಕರ್ನಾಟಕ ವಿಧಾನ ಸಭೆ ಚುನಾವಣೆ (Karnataka Election 2023) ಮುಗಿದಿರುತ್ತದೆ. ಮತದಾರನ ಮನಸ್ಸು ವಿದ್ಯುನ್ಮಾನ ಮತ ಚಲಾವಣೆ ಯಂತ್ರಗಳಲ್ಲಿ (ಎವಿಎಂ) ಭದ್ರವಾಗಿದ್ದು ಪ್ರಕಟಗೊಳ್ಳುವ ಸಮಯಕ್ಕೆ ಕಾದಿರುತ್ತದೆ. ಎವಿಎಂಗಳು ಯಂತ್ರಗಳೇನೋ ಖರೆ. ಜೀವಿಗಳು ಅನುಭವಿಸುವ ನೋವು ಸಂಕಟ ಸಂತಸಗಳನ್ನು ಇವುಗಳಿಗೆ ಆರೋಪಿಸಿ ನೋಡಿದರೆ ಗರ್ಭ ಇಳಿಸಿ ಹಗುರಾಗುವ ಭಾವದಲ್ಲಿ ಅವು ಮೇ ತಿಂಗಳ 13ರ ಮುಹೂರ್ತಕ್ಕೆ ಕಾದಿರುತ್ತವೆ ಎನ್ನಬಹುದು. ಒಳಗಿನಿಂದ ಅವು ಹೊರ ಹಾಕಲಿರುವುದನ್ನು ಹೊರಗೆ ಇರುವ ನಾವೆಲ್ಲ ಕುತೂಹಲ ಕಾತರದಲ್ಲಿ ಕಾಯುತ್ತಿರುತ್ತೇವೆ. ರಾಜ್ಯ ವಿಧಾನ ಸಭೆಗೆ ಅದರದೇ ಆದ ರೋಚಕ ಇತಿಹಾಸವಿದೆ. ಯಾವು ಯಾವುದೋ ಹೆಸರಿನಲ್ಲಿ ಹುಟ್ಟಿ ಕಾಲದ ಪ್ರವಾಹದಲ್ಲಿ ಕರಗಿ ಹೋದ ಹಲವಾರು ಪಕ್ಷಗಳ ಐತಿಹ್ಯ ಅಲ್ಲಿದೆ. ಹೊಸ ಬಗೆಯ ಸೈದ್ಧಾಂತಿಕ ರಾಜಕಾರಣಕ್ಕೆ ವೇದಿಕೆ ಕಲ್ಪಿಸೀತೆಂಬ ಭರವಸೆಯನ್ನು ಹುಟ್ಟು ಹಾಕಿದ್ದ ಪಕ್ಷಗಳನ್ನು ಜನ ಒಪ್ಪಿಕೊಳ್ಳದೆ “ಅಪ್ಪ ನೆಟ್ಟಾಲಕ್ಕೆ ನೇಣು ಬಿಗಿದುಕೊಂಡ” ಅವಸ್ಥೆಯೂ ರಾಚುತ್ತದೆ. ಇಂಥ ಸಂಗತಿಗಳತ್ತ ಸಣ್ಣ ಪ್ರಮಾಣದಲ್ಲಿಯೇ ಆದರೂ ಒಂದು ಪಕ್ಷಿನೋಟ ಬೀರುವುದು ಮತದಾನಕ್ಕೆ ಹೊರಟ ನಮಗೆಲ್ಲ ಒಂದಿಷ್ಟು ಖುಷಿಯನ್ನೂ ಒಂದಿಷ್ಟು ನೋವನ್ನೂ ಕೊಡಬಹುದೋ ಏನೋ.
ಮಹಾರಾಜರ ಆಳ್ವಿಕೆ ಕಾಲದಲ್ಲೂ ಜನಪ್ರತಿನಿಧಿ ಸಭೆ ಎಂಬ ಹೆಸರಿನಲ್ಲಿ ವಿಧಾಯಕ ಸಭೆ ಇದ್ದುದು ಮೈಸೂರು ಪ್ರಾಂತ್ಯದ ಅಗ್ಗಳಿಕೆ. ಅದನ್ನು ಪಕ್ಕಕ್ಕೆ ಇಟ್ಟು ಸ್ವಾತಂತ್ರ್ಯಾನಂತರದಲ್ಲಿ ಅಂದರೆ 1952ರಲ್ಲಿ ನಡೆದ ಮೊದಲ ವಿಧಾನ ಸಭೆ ಚುನಾವಣೆ ಮತ್ತು ತದನಂತರದತ್ತ ದೃಷ್ಟಿ ಹಾಯಿಸೋಣ. 1952ರಲ್ಲಿ ವಿಧಾನ ಸಭೆ ಸದಸ್ಯ ಬಲ 99 ಸ್ಥಾನ. ಆಗ ಅದು ಮೈಸೂರು ವಿಧಾನ ಸಭೆ. “ದೇಶಕ್ಕೆ ಸ್ವಾತಂತ್ರ್ಯ ತಂದಿತ್ತ ಪಕ್ಷ” ಎಂಬ ಅಗ್ಗಳಿಕೆ ಕಾಂಗ್ರೆಸ್‍ಗೆ. ಹಾಗಾಗಿ ಅದರದೇ ಜಮಾನಾ. ಆ ಚುನಾವಣೆಯಲ್ಲಿ ಆ ಪಕ್ಷ ಅಧಿಕಾರಕ್ಕೆ ಬರುವ ವಿಚಾರದಲ್ಲಿ ಯಾರಿಗೂ ಶಂಕೆ ಅನುಮಾನ ಇರಲಿಲ್ಲ. 74 ಸ್ಥಾನ ಅದಕ್ಕೆ ಒಲಿದಾಗ ಅದು ಆಶ್ಚರ್ಯ ತರಲಿಲ್ಲ. ಆದರೆ ಈಗಿನ ಪೀಳಿಗೆ ಕೇಳರಿಯದ ಕೆಲವು ಪಕ್ಷಗಳು ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿರುವುದು ಗೊತ್ತಾಗುತ್ತದೆ. ಕಿಸಾನ್ ಮಜದೂರು ಪ್ರಜಾಪಾರ್ಟಿ (ಕೆಎಂಪಿಪಿ) ಆ ಚುನಾವಣೆಯಲ್ಲಿ 59 ಸ್ಥಾನಕ್ಕೆ ಸ್ಪರ್ಧಿಸಿ 8 ಸೀಟನ್ನು ಗೆದ್ದು ಅಚ್ಚರಿ ಮೂಡಿಸಿತ್ತು.
ಸೋಷಲಿಸ್ಟ್ ಪಾರ್ಟಿ 47 ಸೀಟುಗಳಲ್ಲಿ ಕಣಕ್ಕೆ ಇಳಿದು ಮೂರು ಸ್ಥಾನ ಗೆದ್ದಿತ್ತು. ಪರಿಶಿಷ್ಟ ಜಾತಿ ಒಕ್ಕೂಟ ಏಳರಲ್ಲಿ ಸ್ಪರ್ಧಿಸಿ ಮೂರು ಸೀಟನ್ನೂ; ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಐದರಲ್ಲಿ ಸೆಣೆಸಿ ಒಂದು ಸೀಟನ್ನೂ ಗೆದ್ದಿದ್ದವು. ಪಕ್ಷೇತರರು 11 ಸ್ಥಾನ ಗೆದ್ದಿದ್ದವು.
ಐದು ವರ್ಷದ ಬಳಿಕ 1957ರ ಚುನಾವಣೆ ವೇಳೆಗೆ ವಿಧಾನ ಸಭೆಯ ಸ್ಥಾನ ಬಲ 208ಕ್ಕೆ ಏರಿತ್ತು. ಕಾಂಗ್ರೆಸ್ 150 ಸ್ಥಾನ ಗೆದ್ದು ಯಥಾಪ್ರಕಾರ ಜಯಭೇರಿ ಬಾರಿಸಿತ್ತು. ಆದರೆ ಚುನಾವಣೆ ಗಮನ ಸೆಳೆದಿದ್ದಕ್ಕೆ ಕಾರಣವಾಗಿದ್ದು ಕಾಂಗ್ರೆಸ್ ಜಯವಾಗಿರದೆ ಪಿಎಸ್‍ಪಿ (ಪ್ರಜಾ ಸೋಷಲಿಸ್ಟ್ ಪಾರ್ಟಿ)ಯ ಏರುಮುಖ. ಅದು 79 ಸ್ಥಾನದಲ್ಲಿ ಸ್ಪರ್ಧಿಸಿ 18 ಸೀಟು ಗೆದ್ದು ಆಡಳಿತ ಪಕ್ಷದಲ್ಲಿ ಆತಂಕದ ಛಾಯೆ ಆವರಿಸುವಂತೆ ಮಾಡಿತ್ತು. ಆ ವರ್ಷ ಸಿಪಿಐ 20ರಲ್ಲಿ ಸೆಣೆಸಿ ಒಂದು ಸ್ಥಾನ ಗಳಿಸಿತ್ತು. ಎಸ್‍ಸಿ ಒಕ್ಕೂಟ ಆರು ಕಡೆ ಸ್ಪರ್ಧಿಸಿ ಎರಡು ಸ್ಥಾನ ಗೆದ್ದಿತ್ತು. ಅದೇ ಮೊದಲಬಾರಿಗೆ ಚುನಾವಣಾ ಅಖಾಡಾಕ್ಕೆ ಬಂದಿದ್ದ ಭಾರತೀಯ ರೈತರು, ಕಾರ್ಮಿಕರ ಪಾರ್ಟಿ ಎರಡು ಸ್ಥಾನ ಗಳಿಸಿದ್ದರೆ ಪಕ್ಷೇತರರು 35 ಸ್ಥಾನ ಗೆದ್ದಿದ್ದರು. ಮೊದಲ ಚುನಾವಣೆಯಲ್ಲಿ ಹನ್ನೊಂದು ಸೀಟು ಗೆದ್ದಿದ್ದ ಪಕ್ಷೇತರರ ಬಲ ಈ ಸಲ 35 ಸ್ಥಾನಕ್ಕೆ ಜಿಗಿಯಿತು.
ವಿಧಾನ ಸಭೆ 1962ರಲ್ಲಿ ಚುನಾವಣೆಗೆ ಹೋದಾಗ ಅದರ ಸ್ಥಾನಬಲ ಹೆಚ್ಚಾಗಿರದೆ 208 ಮಾತ್ರವೇ ಇತ್ತು. ಕಾಂಗ್ರೆಸ್ 138 ಸ್ಥಾನದೊಂದಿಗೆ ಅಧಿಕಾರಕ್ಕೆ ಮರಳಿತ್ತು. ಹ್ಯಾಟ್ರಿಕ್ ಜಯ ಎನ್ನಬಹುದು. ಅದೇ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ರಾಜಾಜಿ ನೇತೃತ್ವದ ಸ್ವತಂತ್ರ ಪಾರ್ಟಿ 59 ಕಡೆ ಸ್ಪರ್ಧಿಸಿ ಒಂಭತ್ತು ಸ್ಥಾನ ಗೆದ್ದಿತ್ತು. ಕನ್ನಡಿಗರ ಸಖೇದಾಶ್ಚರ್ಯಕ್ಕೆ ಕಾರಣವಾಗಿದ್ದು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಆರು ಸದಸ್ಯರು ಅಸೆಂಬ್ಲಿಗೆ ಆಯ್ಕೆಯಾಗಿದ್ದು. ಬೆಳಗಾವಿ, ಕಾರವಾರ, ನಿಪ್ಪಾಣಿ, ಅಕ್ಕಲಕೋಟೆ ಸೇರಿದಂತೆ ಗಡಿ ಪ್ರದೇಶದ ಹಲವಾರು ನಗರ ಪಟ್ಟಣ ಹಳ್ಳಿ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಏಕೈಕ ಚುನಾವಣಾ ಅಜೆಂಡಾ ಎಂಇಎಸ್‍ನದಾಗಿತ್ತು. ಅದಕ್ಕೆ ಜನಮನ ಸಮ್ಮತಿ ಸೂಚಿಸಿದೆಯೋ ಎಂಬಂತೆ ಆ ಪ್ರದೇಶದ ಆರೂ ಸ್ಥಾನ ಗಳಿಸಿದ ಆ ಸಂಘಟನೆ ವಿಧಾನ ಸಭಾ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ್ದು ಮುಂದಿನ ಐದು ವರ್ಷದ ಬೆಳವಣಿಗೆ. ಪಿಎಸ್‍ಪಿ 84ಕ್ಕೆ ಸ್ಪರ್ಧಿಸಿ 20 ಸೀಟನ್ನೂ; ಲೋಕ ಸೇವಕ ಸಂಘ 17 ಸ್ಥಾನದಲ್ಲಿ ಸ್ಪರ್ಧಿಸಿ 4 ಸೀಟನ್ನೂ; ಸಿಪಿಐ 31 ಕಡೆ ಕಣಕ್ಕಿಳಿದು ಮೂರನ್ನೂ; ಸೋಷಲಿಸ್ಟ್ ಪಾರ್ಟಿ ಒಂಭತ್ತು ಕಡೆ ಸ್ಪರ್ಧಿಸಿ ಒಂದು ಸೀಟನ್ನೂ; ಪಕ್ಷೇತರರು 27 ಸ್ಥಾನವನ್ನೂ ಗೆದ್ದಿದ್ದವು.
ತದನಂತರದಲ್ಲಿ 1967ರ ಚುನಾವಣೆ. ಶಾಸನ ಸಭೆಯ ಸ್ಥಾನಬಲ 208ರಿಂದ 216ಕ್ಕೆ ಹೆಚ್ಚಿತ್ತು. ಕಾಂಗ್ರೆಸ್‍ಗೆ ಎದುರಾಳಿ ಇರಲಿಲ್ಲ. 126 ಸ್ಥಾನ ಅದಕ್ಕೆ. ಆಡಳಿತಕ್ಕೆ ಬೇಕಾದ ನಿರುಮ್ಮಳ ಬಹುಮತ. ಮೊದಲ ಮೂರು ಚುನಾವಣೋತ್ತರ ಘಟನಾವಳಿಯಂತೆ ನಾಲ್ಕನೇ ವಿಧಾನ ಸಭೆಯಲ್ಲೂ ಅಧಿಕೃತ ವಿರೋಧ ಪಕ್ಷ ಇರಲಿಲ್ಲ. ಕಾಂಗ್ರೆಸ್ ವಿರುದ್ಧ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ ವಿರೋಧ ಪಕ್ಷಗಳಲ್ಲಿ ಸಾಕಾರವಾಗಲಿಲ್ಲ. ಈಗಿಂತೆಯೇ ಆಗಲೂ ವಿರೋಧ ಪಕ್ಷಗಳ ರಾಜಕಾರಣದ ನೀತಿ “ಎತ್ತು ಏರಿಗೆ ಕೋಣ ನೀರಿಗೆ”. ಪಿಎಸ್‍ಪಿ 20; ಸ್ವತಂತ್ರ ಪಾರ್ಟಿ 16; ಎಸ್‍ಎಸ್‍ಪಿ 6; ಸಿಪಿಎಂ ಒಂದು; ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‍ಪಿಐ) ಒಂದು; ಸಿಪಿಐ ಒಂದು ಸ್ಥಾನ ಗಳಿಸಿದ್ದವು. ಅದೇ ಮೊದಲಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದ ಭಾರತೀಯ ಜನಸಂಘ 37 ಸ್ಥಾನಕ್ಕೆ ಸ್ಪರ್ಧಿಸಿ ನಾಲ್ಕು ಸ್ಥಾನ ಜೈಸಿತ್ತು. ಪಕ್ಷೇತರ ಕೈಗೆ 41 ಸ್ಥಾನ ಒಲಿದಿತ್ತು.
ನಂತರದ 1972ರ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಪಕ್ಷ ಹೋಳಾಗಿತ್ತು. 1969ರಲ್ಲಿ ಬೆಂಗಳೂರು ಲಾಲ್‍ಬಾಗ್‍ನಲ್ಲಿ ನಡೆದ ಏಐಸಿಸಿ ಸಮಾವೇಶ ಒಡಕಿಗೆ ಅಧಿಕೃತ ಮುದ್ರೆ ಒತ್ತಿತ್ತು. ಇಂದಿರಾ ಗಾಂಧಿ ಜೊತೆಗಿದ್ದವರು ಕಾಂಗ್ರೆಸ್ (ಆರ್); ಎಸ್.ನಿಜಲಿಂಗಪ್ಪ ಬಣದೊಂದಿಗೆ ಗುರುತಿಸಿಕೊಂಡವರು ಕಾಂಗ್ರೆಸ್ (ಒ) ದಲ್ಲಿ ಹಂಚಿಹೋದರು. ಕರ್ನಾಟಕದಲ್ಲಿ ಕಾಂಗ್ರೆಸ್ (ಆರ್)ಜೊತೆ ದೇವರಾಜ ಅರಸು ನಿಂತರು. 72ರ ಚುನಾವಣೆಯಲ್ಲಿ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ (ಕಾಂಗ್ರೆಸ್-ಒ) ಕಾಂಗ್ರೆಸ್ 176 ಕಡೆ ಸ್ಪರ್ಧಿಸಿ ಗೆದ್ದಿದ್ದು 24 ಸ್ಥಾನ ಮಾತ್ರ. ಇಂದಿರಾ ನೇತೃತ್ವದ ರೂಲಿಂಗ್ ಕಾಂಗ್ರೆಸ್ (ಕಾಂಗ್ರೆಸ್-ಆರ್) 212 ಸ್ಥಾನಕ್ಕೆ ಸ್ಪರ್ಧಿಸಿ 165 ಸೀಟನ್ನು ಬಾಚಿಕೊಂಡಿತು. ಮುಂದಕ್ಕೆ ಸಂಸ್ಥಾ ಕಾಂಗ್ರೆಸ್ ರಾಜಕೀಯವಾಗಿ ಚೇತರಿಸಿಕೊಳ್ಳುವ ಅವಕಾಶವೇ ಬರಲಿಲ್ಲ. ಸಿಪಿಐ-3 ಶಾಸಕರು; ಎಸ್‍ಎಸ್‍ಪಿ-3 ಶಾಸಕರು; ಜೆಪಿಪಿ-1 ಶಾಸಕರು; ಪಕ್ಷೇತರರು-20 ಸ್ಥಾನ ಗೆದ್ದರು.
ಮೈಸೂರು ಪ್ರಾಂತ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಆದ ನಂತರದಲ್ಲಿ 1978ರ ಚುನಾವಣೆ. ಶಾಸನ ಸಭೆಯ ಸ್ಥಾನ ಬಲ 224ಕ್ಕೆ ಹೆಚ್ಚಿತ್ತು. ಕರ್ನಾಟಕ ನಾಮಕರಣಕ್ಕೆ ಕಾರಣರಾಗಿದ್ದ ಮುಖ್ಯಮಂತ್ರಿ ಅರಸು, ಮತ್ತೆ ಜನಾದೇಶ ಬಯಸಿದಾಗ ಜನ 149 ಸೀಟು ನೀಡಿದರು. ತುರ್ತು ಪರಿಸ್ಥಿತಿ ಕುಲುಮೆಯಲ್ಲಿ ನಾಲ್ಕಾರು ಪಕ್ಷಗಳ ಸಹಯೋಗವಾಗಿ ಹುಟ್ಟಿದ ಜನತಾ ಪಕ್ಷ 222 ಕಡೆ ಕಣಕ್ಕಿಳಿದು 59 ಸ್ಥಾನ ಗೆದ್ದಿತ್ತು. ಸಿಪಿಐ-ಮೂರು; ಆರ್‍ಪಿಐ-ಒಂದು, ಸಂಸ್ಥಾ ಕಾಂಗ್ರೆಸ್-ಎರಡು; ಪಕ್ಷೇತರ-ಹತ್ತು ಸ್ಥಾನ ಪಡೆದಿದ್ದವು.
ತುರ್ತು ಪರಿಸ್ಥಿತಿ ಸುನಾಮಿಯಲ್ಲೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಚಾವ್ ಆಗಿತ್ತು. ಲೋಕಸಭಾ ಚುನಾವಣೆಯಲ್ಲಿ ರಾಯ್‍ಬರೈಲಿ ಕ್ಷೇತ್ರದಲ್ಲಿ ಸೋತು ಮೂಲೆ ಹಿಡಿದಿದ್ದ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಹುಟ್ಟು ನೀಡಿದ್ದ ದೇವರಾಜ ಅರಸು ಅವರನ್ನು ಹೊಹಾಕಿದ್ದ ಕಾಂಗ್ರೆಸ್ಸು ಗುಂಡೂರಾಯರ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. “ಇಂದಿರಾ ಗಾಂಧಿ ಕೃಪಾ ಪೋಷಿತ ನಾಟಕ ಮಂಡಳಿ” ತಮ್ಮ ಸರ್ಕಾರವೆಂದು ಗುಂಡೂರಾಯರು ಬಹಿರಂಗವಾಗೇ ಹೇಳಿಕೊಂಡಿದ್ದರು. ಅರಸು ಆಳ್ವಿಕೆಗೂ ಗುಂಡೂರಾಯರ ಆಡಳಿತಕ್ಕೂ ಇರುವ ವ್ಯತ್ಯಾಸ ಚರ್ಚೆಗೆ ಗ್ರಾಸವಾಗಿತ್ತು. 1983ರ ಚುನಾವಣೆಯ ವಸ್ತು ಅದೇ ಆಯಿತು. ಪರಿಣಾಮವೆಂದರೆ ಅದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ಸು ಅಧಿಕಾರಕ್ಕೆ ಎರವಾಗಿದ್ದು.
ಜನತಾ ಪಕ್ಷ 193 ಕಡೆ ಸ್ಪರ್ಧಿಸಿ 95 ಸ್ಥಾನ ಪಡೆದರೆ, ಆಡಳಿತಾರೂಢ ಕಾಂಗ್ರೆಸ್ಸು 221 ಸ್ಥಾನಕ್ಕೆ ಸ್ಪರ್ಧಿಸಿ 82 ಸ್ಥಾನಕ್ಕೆ ತೃಪ್ತಿ ಪಡೆಯಿತು. ಜನತಾ ಪಕ್ಷದಲ್ಲಿ ಐಕ್ಯವಾಗಿದ್ದ ಪಕ್ಷಗಳಲ್ಲಿ ಒಂದಾಗಿದ್ದ ಜನಸಂಘ ತನ್ನ ಪೂರ್ವಾಶ್ರಮದ ಹೆಸರನ್ನು ಕಳಚಿಕೊಂಡು ಭಾರತೀಯ ಜನತಾ ಪಾರ್ಟಿ ಹೆಸರಲ್ಲಿ ಮರುಹುಟ್ಟು ಪಡೆದಿತ್ತು. ಈ ಚುನಾವಣೆಯಲ್ಲಿ ಅದು 110 ಸ್ಥಾನಕ್ಕೆ ಸ್ಪರ್ಧಿಸಿ 18 ಸೀಟನ್ನು ಗೆದ್ದುಕೊಂಡಿತು. ಸಿಪಿಐ-3; ಸಿಪಿಎಂ-3; ಅಣ್ಣಾ ಡಿಎಂಕೆ-1; ಪಕ್ಷೇತರರು-22 ಸ್ಥಾನ ಗೆದ್ದರು. ಬೆಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ ಒಂದಿಷ್ಟು ಸ್ಥಾನ ಗೆದಿಯುವುದು ಸಾಮಾನ್ಯವಾಗಿತ್ತು. ಎಂಜಿಆರ್ ನಾಮಬಲದ ಅಣ್ಣಾಡಿಎಂಕೆ 1983ರ ಚುನಾವಣೆಯಲ್ಲಿ ವಿಧಾನ ಸಭೆಯನ್ನು ಪ್ರವೇಶಿಸಿತು. ಅಷ್ಟು ಮಾತ್ರವೇ ಅಲ್ಲ ಎಂಇಎಸ್ ಬಲ ಗಡಿ ಪ್ರದೇಶದಲ್ಲಿ ಗಣನೀಯವಾಗಿ ಕುಸಿದಿದ್ದಕ್ಕೂ ಚುನಾವಣೆ ಫಲಿತಾಂಶ ಸಾಕ್ಷಿಯಾಯಿತು.
1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಚನೆಯಾದ ಜನತಾ ಪಕ್ಷ ಸರ್ಕಾರ ರಾಜ್ಯದ ಮಟ್ಟಿಗೆ ಒಂದು ವಿಚಿತ್ರ ಪ್ರಯೋಗ. ಬಿಜೆಪಿ ಹಾಗೂ ಉಭಯ ಕಮ್ಯೂನಿಸ್ಟ್ ಪಕ್ಷಗಳದು ಹಾವು-ಮುಂಗಸಿ ಮೈತ್ರಿ. ಎಣ್ಣೆ ಸೀಗೇಕಾಯಿ ಸಂಬಂಧ. ಆದರೆ ಇವು ತಕರಾರು ಮಾಡದೆ ಸರ್ಕಾರ ರಚನೆಗೆ ಬಾಹ್ಯ ಬೆಂಬಲ ನೀಡಿದವು. ಕೆಲವು ಪಕ್ಷೇತರರು ಸಚಿವ- ಮಂಡಳಿ-ನಿಗಮ ಹುದ್ದೆ ಅನುಭವಿಸಿದರು. 84ರಲ್ಲಿ ಲೋಕಸಭಾ ಚುನಾವಣೆ. ಜನತಾ ಪಕ್ಷ ಮುಗ್ಗರಿಸಿತ್ತು. ಸೋಲಿನ ಹೊಣೆ ಹೊತ್ತ ಹೆಗಡೆ, ಜನರಿಂದ ಮತ್ತೆ ಜನಾದೇಶ ಬಯಸಿ ವಿಧಾನ ಸಭೆ ವಿಸರ್ಜಿಸಿ ಚುನಾವಣೆಗೆ ಹೋದರು. 1985ರ ಅವರ ಲೆಕ್ಕಾಚಾರ ಹುಸಿ ಹೋಗಲಿಲ್ಲ. ಹೆಗಡೆಯವರೇ ಮುಖ್ಯಮಂತ್ರಿ ಆಗಬೇಕೆಂಬ ಜನಾದೇಶ ಅವರಿಗೆ 139 ಸದಸ್ಯ ಬಲ ಕೊಟ್ಟಿತು. ಕಾಂಗ್ರೆಸ್ 65 ಸ್ಥಾನಕ್ಕೆ ಕುಸಿದರೆ ಬಿಜೆಪಿ 18 ಸ್ಥಾನ ಹೊದಿದ್ದುದು 2 ಸೀಟಿಗೆ ಇಳಿಯಿತು. ಸಿಪಿಐ-3; ಸಿಪಿಎಂ-2; ಪಕ್ಷೇತರ-13 ಸ್ಥಾನ ಪಡೆದವು. ಹಗರಣಗಳ ಭಾರದಲ್ಲಿ ಹೆಗಡೆ ನಿರ್ಗಮಿಸುವ ಘಟ್ಟ ಮುಟ್ಟಿದಾಗ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆದರೆ ಆಡಳಿತರೂಢ ಜನತಾ ಪಕ್ಷದೊಳಗೇ ಉಲ್ಬಣಿಸಿದ ಬಂಡಾಯ ಬೊಮ್ಮಾಯಿ ಪದಚ್ಯುತಿಗೆ ಕಾರಣವಾಯಿತು.
ಜನತಾ ಪಕ್ಷದ ಕಚ್ಚಾಟ ಎಲ್ಲ ಮೇರೆ ಮೀರಿತ್ತು. 1989ರ ಚುನಾವಣೆ ಹೊತ್ತಿಗೆ ಜನತಾ ದಳ ಎಂಬ ಕವಲಿನ ಉದಯವಾಗಿ ಅದರ ಸ್ಥಾನಬಲ 24 ಕ್ಕೆ ಇಳಿದು ನೆಲ ಮುಟ್ಟಿತ್ತು. ಜನತಾ ಪಾರ್ಟಿ-2; ನಂಜುಂಡಸ್ವಾಮಿ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ-2; ಅಣ್ಣಾ ಡಿಎಂಕೆ-1; ಮುಸ್ಲಿಂ ಲೀಗ್-1; ಪಕ್ಷೇತರ-12 ಸ್ಥಾನ ಗಳಿಸಿದವು. ವೀರೇಂದ್ರ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 178 ಸ್ಥಾನ ಗಳಿಸಿ ಹಳೆ ಇತಿಹಾಸ ಮರುಕಳಿಸುವಂತಾಯಿತು. ತುರ್ತು ಪರಿಸ್ಥಿತಿ ತರುವಾಯದಲ್ಲಿ ಕಾಂಗ್ರೆಸ್ ಕಥೆ ಮುಗಿಯಿತು ಎಂಬ ಭಾವನೆ ಬಲಿತಿದ್ದುದು ಈ ಫಲಿತಾಂಶದಿಂದ ಪಕ್ಷ ಚೇತರಿಕೆ ಕಂಡುಕೊಂಡಿತು. ಆದರೆ ಅನಾರೋಗ್ಯದ ನೆಪದಲ್ಲಿ ವೀರೇಂದ್ರರನ್ನು ನಡೆಸಿಕೊಂಡ ಪಕ್ಷದ ನಿಲುವು ತುಸು ಹೆಚ್ಚೂ ಕಡಿಮೆ ಅರಸು ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯಲ್ಲೇ ಇತ್ತು. ವೀರೇಂದ್ರರ ಪದಚ್ಯುತಿ ಬಳಿಕ ಬಂಗಾರಪ್ಪ, ವೀರಪ್ಪ ಮೊಯಿಲಿ ಮುಖ್ಯಮಂತ್ರಿಗಳಾದರೂ ಪಕ್ಷ ಮರಳಿ ಅಧಿಕಾರಕ್ಕೆ ಬರಲಿಲ್ಲ.
ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವೊದಗಿಸಿದ್ದು 1994ರ ಚುನಾವಣೆ. ಆಗ ಜನತಾ ದಳ 221 ಸ್ಥಾನಕ್ಕೆ ಸ್ಪರ್ಧಿಸಿ 115 ಸೀಟು ಗೆದ್ದು ಎಚ್.ಡಿ. ದೇವೇಗೌಡರು ಮುಖ್ಯ ಮಂತ್ರಿ ಆದರು. ಬಿಜೆಪಿ, ಕಾಂಗ್ರೆಸ್ ಕ್ರಮವಾಗಿ 40 ಮತ್ತು 34 ಸ್ಥಾನ ಗಳಿಸಿದವು. ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ಕೆಸಿಪಿ ಕಟ್ಟಿದ್ದ ಬಂಗಾರಪ್ಪ ಹತ್ತು ಸ್ಥಾನ ಗಳಿಸಿದ್ದರು. ಆದರೆ 20-30 ಕಡೆಗಳಲ್ಲಿ ಕಾಂಗ್ರೆಸ್ ಸೋಲಿಗೆ ಅವರು ಕಾರಣವಾದರು. ರಾಜ್ಯ ರೈತ ಸಂಘ-1; ಬಿಎಸ್‍ಪಿ-1; ಸಿಪಿಎಂ-1; ಅಣ್ಣಾಡಿಎಂಕೆ-1; ಇಂಡಿಯನ್ ನ್ಯಾಷನಲ್ ಲೀಗ್-1; ವಾಟಾಳ್ ಪಕ್ಷ-1; ಆರ್‌ಪಿಐ-1; ಪಕ್ಷೇತರ-18 ಸ್ಥಾನ ಗೆದ್ದವು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೇ ಪ್ರಧಾನಿ ಪಟ್ಟಕ್ಕೆ ಆಯ್ಕೆಯಾಗಿ ದೆಹಲಿಗೆ ಹೋಗುವ ಪ್ರಮೇಯ ಬಂದ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆದವರು ಜೆ.ಎಚ್.ಪಟೇಲರು.
ಪಟೇಲರ ಅಧಿಕಾರಾವಧಿಯ ಕೊನೆ ದಿನಗಳು ಕಾಂಗ್ರೆಸ್‍ಗೆ ದಂರೂಟ್ ಹಲ್ವಾ ಮೆದ್ದ ಸ್ಥಿತಿ ನಿರ್ಮಿಸಿದ್ದವು. ಜನತಾ ದಳ (ಎಸ್) ಆಳ್ವಿಕೆ 1999ರಲ್ಲಿ ಕೊನೆಗೊಂಡಿದ್ದು ಕಾಂಗ್ರೆಸ್‍ನ 132 ಸೀಟು ಗಳಿಕೆಯಲ್ಲಿ. ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಆ ಪಕ್ಷ ಅಧಿಕಾರಕ್ಕೆ ಬಂತು; ಕೃಷ್ಣ ಸಿಎಂ ಆದರು. ನಂಬರ್ ಒನ್ ಮುಖ್ಯಮಂತ್ರಿ, ಅತ್ಯಂತ ಜನಪ್ರಿಯ ಸರ್ಕಾರ ಇತ್ಯಾದಿ ಇತ್ಯಾದಿ ಹೊಗಳಿಕೆಯಲ್ಲಿ ಕೃಷ್ಣ ಮೈಮರೆತರು. ಆಗ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ. ಭಾರತ ಪ್ರಕಾಶಿಸುತ್ತಿದೆ ಎನ್ನುವುದು ಆ ಸರ್ಕಾರದ ಭ್ರಮೆ ಪೊರೆಯ ಘೋಷಾವಾಕ್ಯವಾಗಿತ್ತು. ಆರು ತಿಂಗಳು ಮೊದಲೇ ಚುನಾವಣೆಗೆ ಹೋಗಿ ಜನಾದೇಶ ಪಡೆಯುವ ತೀರ್ಮಾನಕ್ಕೆ ವಾಜಪೇಯಿ ಬಂದರು. ಅವರು ತೆಗೆದುಕೊಂಡ ತಪ್ಪು ನಿರ್ಧಾರ, ಐತಿಹಾಸಿಕ ಪ್ರಮಾದವೆನಿಸಿತು. ಲೋಕಸಭಾ ಚುನಾವಣೆಯೊಂದಿಗೆ ಅವಧಿ ಪೂರೈಸುವ ಮೊದಲೇ ರಾಜ್ಯ ವಿಧಾನ ಸಭೆಗೂ ಚುನಾವಣೆ ನಡೆಸಿ ಅಧಿಕಾರಕ್ಕೆ ಮರಳುವ ತೀರ್ಮಾನಕ್ಕೆ ಬಂದ ಕೃಷ್ಣ ಅವರದು ಕೂಡಾ ಎಡವಟ್ಟು ನಿರ್ಧಾರವಾಯಿತು. ಅಲ್ಲಿ ವಾಜಪೇಯಿ ಸರ್ಕಾರ ಇಲ್ಲಿ ಕೃಷ್ಣ ಸರ್ಕಾರ ಸೋತವು. ಕೃಷ್ಣ ಸಂಪುಟದ ಬಹುತೇಕ ಸಚಿವರು ಸೋತು ಮನೆಯಲ್ಲಿ ಕೂತರು.
2004ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ತ್ರಿಶಂಕು ಸದನ ನಿರ್ಮಿಸಿತು. ಅಧಿಕ ಸ್ಥಾನ ಬಿಜೆಪಿಗೆ (79) ಸಿಕ್ಕಿತ್ತು. ನಂತರದಲ್ಲಿ ಕಾಂಗ್ರೆಸ್-65; ಜೆಡಿಎಸ್-58; ಜೆಡಿಯು-5; ಪಕ್ಷೇತರ-17 ಸೀಟು ಪಡೆದವು. ಅದೇ ಮೊದಲಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಧರ್ಮಸಿಂಗ್ ಸಿಎಂ ಆದರು. ಎಚ್.ಡಿ. ಕುಮಾರಸ್ವಾಮಿ ತಾವು ಸಿಎಂ ಆಗಬೇಕೆಂದು ನಡೆಸಿದ ಕ್ಷಿಪ್ರ ಕಾರ್ಯಾಚರಣೆ ಧರ್ಮಸಿಂಗ್ ಸರ್ಕಾರ ಉರುಳಲು ಮತ್ತು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಬರಲು ಕಾರಣವಾಯಿತು. ಧರ್ಮಸಿಂಗ್ ಸರ್ಕಾರ ಇಪ್ಪತ್ತು ತಿಂಗಳು ಅಧಿಕಾರದಲ್ಲಿತ್ತು. ಜೆಡಿಎಸ್-ಬಿಜೆಪಿ ಒಪ್ಪಂದದಂತೆ 20-20 ತಿಂಗಳ ಸರ್ಕಾರ ರಚನೆ ಆಗಬೇಕಿತ್ತು. ತಮ್ಮ ಅಧಿಕಾರಾವಧಿ 20 ತಿಂಗಳು ಕಳೆದ ಳ ಬಳಿಕ ಮಾತಿನಂತೆ ಅಧಿಕಾರ ಹಸ್ತಾಂತರಿಸದ ಕುಮಾರಸ್ವಾಮಿ “ವಚನ ಭ್ರಷ್ಟ”ರೆನಿಸಿದರು. ಅದು ಬಿಜೆಪಿಗೆ ಒಲಿದ ವರವಾಯಿತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಚುನಾವಣಾ ಭ್ರಷ್ಟಾಚಾರ; ಮತದಾರನಿಗೆ ಆಯ್ಕೆಯಿಲ್ಲ, ಆಯೋಗಕ್ಕೆ ಪರಮಾಧಿಕಾರವಿಲ್ಲ
2008ರ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗಳಿಸಿ ಅಧಿಕಾರ ಸೂತ್ರ ಹಿಡಿಯಿತು. ಕಾಂಗ್ರೆಸ್, ಜೆಡಿಎಸ್ ಕ್ರಮವಾಗಿ 80-28 ಸ್ಥಾನ ಗಳಿಸಿದವು. ಆರು ಸ್ಥಾನ ಪಕ್ಷೇತರರಿಗೆ. ಸರಳ ಬಹುಮತದ (113) ಕೊರತೆಯಲ್ಲಿ ನರಳುತ್ತಿದ್ದ ಬಿಜೆಪಿ ಅದನ್ನು ತುಂಬಿಕೊಳ್ಳಲು ಆಪರೇಷನ್ ಕಮಲ ಎಂಬ ವಾಮ ಮಾರ್ಗ ಹಿಡಿಯಿತು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆರೋಪಗಳ ಕುಣಿಕೆ ಬಲಗೊಂಡು ಜೈಲಿಗೆ ಹೋಗುವ ಸ್ಥಿತಿ ಬಂದಾಗ ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿ “ನಾಮಕರಣ” ಮಾಡಿದರು. ಕ್ರಮೇಣ ಅವರನ್ನು ಬದಲಿಸಿ ಜಗದೀಶ ಶೆಟ್ಟರ್ ಅವರನ್ನು ಆ ಸ್ಥಾನಕ್ಕೆ ತರಲಾಯಿತು.
2013ರ ಚುನಾವಣೆ ಕಾಂಗ್ರೆಸ್‍ನ ಅದೃಷ್ಟವನ್ನೂ ಸಿದ್ದರಾಮಯ್ಯನವರ ಅದೃಷ್ಟವನ್ನೂ ಖುಲಾಯಿಸಿತ್ತು. 122 ಸ್ಥಾನ ಕಾಂಗ್ರೆಸ್‍ಗೆ ಒಲಿದರೆ ಜೆಡಿಎಸ್-ಬಿಜೆಪಿ ಸಮಸಮ ಎಂಬಂತೆ ಕ್ರಮವಾಗಿ 40-40 ಸ್ಥಾನ ಗಳಿಸಿದವು. ಯಡಿಯೂರಪ್ಪನವರ ಕೆಜೆಪಿ-6; ಶ್ರೀರಾಮುಲು ಅವರ ಬಿಎಸ್‍ಆರ್-4; ಎಸ್ಪಿ-1; ಕರ್ನಾಟಕ ಮಕ್ಕಳ ಪಕ್ಷ-1; ಸರ್ವೋದಯ ಕರ್ನಾಟಕ ಪಕ್ಷ-1 ಸ್ಥಾನ ಗೆದ್ದರೆ 9 ಸ್ಥಾನ ಇತರರ ಪಾಲಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಆಡಳಿತ ನಡೆಸಿದರು. ಕೆಜೆಪಿ ಬಿಜೆಪಿಗೆ ಗ್ರಹಣವಾಯಿತು.
ಐದು ವರ್ಷದ ತರುವಾಯ 2018ರಲ್ಲಿ ನದೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡ ಜನಪರ ಕಾರ್ಯಕ್ರಮಗಳ್ಯಾವವೂ ಕಾಂಗ್ರೆಸ್ ಚುನಾವಣಾ ಜಯದ ಕೆಲಸಕ್ಕೆ ಬರಲಿಲ್ಲ. ಆ ಪಕ್ಷದ ಬಲ 80ಕ್ಕೆ ಕುಸಿಯಿತು. ಬಿಜೆಪಿ ಬಲ 104ಕ್ಕೆ ಜಿಗಿಯಿತು. ಜೆಡಿಎಸ್-37; ಬಿಎಸ್ಪಿ-1; ಕೆಪಿಜೆಪಿ-1; ಪಕ್ಷೇತರ್ರ-9 ಸ್ಥಾನ ಗಳಿಸಿದವು. ಬಹುಮತದ ಕೊರತೆ ತುಂಬಿಕೊಳ್ಳಲು ಬಿಜೆಪಿ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಿತು. 2013ರಲ್ಲಿ ಬಿಜೆಪಿಗೆ ಮುಳುವಾದ ಯಡಿಯೂರಪ್ಪ ಮರಳಿ ಅದೇ ಪಕ್ಷದ ಸಿಎಂ ಆದರು. ಕಾಲ ಕ್ರಮೇಣ ಆ ಹುದ್ದೆ ಬಸವರಾಜ ಬೊಮ್ಮಾಯಿಯವರಿಗೆ ಒಲಿಯಿತು.
ಇಷ್ಟೆಲ್ಲ ಇತಿಹಾಸದ ನಮ್ಮ ವಿಧಾನ ಸಭೆಯಲ್ಲಿ ಯಾವುದಾದರೊಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕರೆ ಸಾಕೆನ್ನುವುದು ಜನಮನದ ಆಶಯ. ಸಿದ್ಧಾಂತ, ರಾಜಕೀಯ ನೀತಿ, ನ್ಯಾಯಪರತೆ, ಬಡವರ ಹಿತ ಮೂಲೆಗುಂಪಾಗಿರುವ ರಾಜಕೀಯಕ್ಕೆ ಒತ್ತು ಕೊಟ್ಟಿರುವ ಮೂರೂ ಪಕ್ಷಗಳ ಹೊರತಾಗಿ ಮತ್ತೊಂದು ಆಯ್ಕೆಗೆ ಅವಕಾಶವೇ ಇಲ್ಲದ ಸ್ಥಿತಿಯಲ್ಲಿ ಮತದಾರರು ಕವಲು ದಾರಿಯಲ್ಲಿ ನಿಂತಿದ್ದಾರೆ. ಮೇ ಹತ್ತರಂದು ಯಾರತ್ತ ಅವರ ಚಿತ್ತ…ಗೊತ್ತಿಲ್ಲ. ಗೋಪಾಲಕೃಷ್ಣ ಅಡಿಗರ ಪದ್ಯದ ಸಾಲು “ಹೆಳವನ ಹೆಗಲ ಮೇಲೆ ಕುರುಡ ಕುಳಿತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು” ನೆನಪಾಗುತ್ತದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿಚ್ಚಳ ಬಹುಮತ ಮರೀಚಿಕೆ; ನಡೆದಿದೆ ಹೊಸ ಹೊಸ ಹಂಚಿಕೆ