ಕರ್ನಾಟಕ ವಿಧಾನ ಸಭೆಯ ಚುನಾವಣೆಗೆ (karnataka election 2023) ನಾಮಪತ್ರ ಸಲ್ಲಿಕೆಯ ಗಡುವು ಗುರುವಾರ ಸಂಜೆಗೆ ಮುಕ್ತಾಯಗೊಂಡಿದ್ದು ನಾಮಪತ್ರ ಹಿಂತೆಗೆತ, ನಾಮಪತ್ರ ಪರಿಶೀಲನೆ, ಪ್ರತಿಯೊಂದೂ ಕ್ಷೇತ್ರದಲ್ಲಿ ಉಳಿದಿರುವ ಅಧಿಕೃತ ಅಭ್ಯರ್ಥಿಗಳ ಘೋಷಣೆ, ಕಣದಲ್ಲಿರುವ “ಅಪಾಯಕಾರಿ” ಸ್ವತಂತ್ರರ ನಿವೃತ್ತಿಗೆ ಪುಸಲಾವಣೆ… ಮುಂತಾದ ಕಸರತ್ತುಗಳು ಕ್ರಮೇಣ ಮುಂದಿನ ಒಂದು ವಾರ ರಾಜ್ಯದ ಮಹಾಜನತೆಗೆ ಸಖತ್ ಮತ್ತು ಪುಕಟ್ ಮನರಂಜನೆ ನೀಡಲಿವೆ.
ರಾಜ್ಯದಲ್ಲಿ ಈ ಬಾರಿ ಮತ ಚಲಾಯಿಸುವವರಲ್ಲಿ 2.62 ಕೋಟಿ ಪುರುಷರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ 2.59 ಕೋಟಿಯಷ್ಟಿದೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿದೆ. ಹೊಸ ಮತದಾರರು, ಅಂಗವಿಕಲರು, ತೃತೀಯ ಲಿಂಗಿಗಳು, ಶತಾಯುಷಿಗಳು…ಹೀಗೆ ಮತದಾರರು ಇದ್ದಾರೆ. ಮೇ ಮಾಹೆ ಹತ್ತರಂದು ಇವರೆಲ್ಲರೂ ಮತಗಟ್ಟೆಗೆ ತೆರಳಿ ತಮ್ಮ ಬೇಕು-ಬೇಡ ಎಂಬ ಶರಾ ಬರೆಯಬೇಕಿದೆ. ಅಲ್ಲಿಂದ ಮೂರೇ ದಿವಸಕ್ಕೆ ಮೇ 13ರಂದು ಮತ ಎಣಿಕೆ ಶುರುವಾಗಿ ಮಧ್ಯಾಹ್ನದ ವೇಳೆಗೆ ಫಲಿತಾಂಶ ಸ್ಪಷ್ಟಗೊಂಡು ಮುಂದಿನ ದಿಕ್ಕುದೆಸೆ ಯೋಚನೆ ಜನರ ಮನಸ್ಸು ಕೊರೆಯಲಿದೆ.
ಯಾವ ಪಕ್ಷ ಅಧಿಕಾರಕ್ಕೆ ಬರಬಹುದು; ಆ ಪಕ್ಷ ಬಂದರೆ ಯಾರು ಮುಖ್ಯಮಂತ್ರಿ ಆಗಬಹುದು; ಈ ಪಕ್ಷ ಬಂದರೆ ಯಾರು ಪೀಠಕ್ಕೇರಬಹುದು; ಮೂರನೆಯ ಅದೃಷ್ಟಶಾಲಿ ಪಕ್ಷ ಯಾವುದು..? ಸಿಎಂ ಯಾರಾಗಬಹುದು ಎಂಬ ಜಿಜ್ಞಾಸೆ ಈ ಹೊತ್ತಿನ ಮುಖ್ಯ ಚರ್ಚೆಯಾಗಿ ಸಾಗಿದೆ. ಫಲಿತಾಂಶ ನಿಚ್ಚಳವಾಗುವವರೆಗೂ ಚರ್ಚೆ ನಡೆದೇ ಇರುತ್ತದೆ. ಹಲವು ಚುನಾವಣೆಗಳನ್ನು ಹತ್ತಿರದಿಂದ ನೋಡಿರುವ, ಚುನಾವಣಾ ರಾಜಕೀಯದ ಗಾಳಿ ಎತ್ತ ಬೀಸಿದರೆ ಯಾವ ಕಾಯಿ ಉದುರಬಹುದೆಂಬ ರಾಜಕೀಯ ಹವಾಮಾನದ ಗುಣಲಕ್ಷಣ ಅರ್ಥ ಮಾಡಿಕೊಂಡಿರುವ ರಾಜಕೀಯ ಪಂಡಿತರ ಪ್ರಕಾರ “ಈ ಬಾರಿ ತ್ರಿಶಂಕು ವಿಧಾನ ಸಭೆಯೇ ಗಟ್ಟಿ”. ಇದನ್ನು ಅವರು ಹೇಳುವಾಗ “ಈ ಕ್ಷಣದಲ್ಲಿ ಚುನಾವಣೆ ನಡೆದರೆ…” ಎಂಬ ಅಡಿ ಬರಹ ಸೇರಿಸುತ್ತಾರೆ. ನಾಳೆ ಏನೂ ಆಗಬಹುದು ಎಂಬುದು ಅದರ ಅರ್ಥ. ನಿಜ, ಮತಚಲಾವಣೆಗೆ ಇನ್ನೂ ಮೂರು ವಾರ ಕಾಲ ಇರುವುದರಿಂದ ಎಂಥದೂ ಘಟಿಸಬಹುದು.
ಐದು ವರ್ಷದ ಹಿಂದೆ 2018ರ ಚುನಾವಣೆ ನಡೆದಾಗ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಿಚ್ಚಳ (122 ಸೀಟು) ಬಹುಮತದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರಷ್ಟೆ ಅಲ್ಲ, ಜನಪ್ರಿಯ ಮುಖ್ಯಮಂತ್ರಿ ಎಂದು ಜನಮನದಲ್ಲಿ ಬಿಂಬಿಸುವ ಕೆಲಸವನ್ನು ಅವರ ಪಕ್ಷ ಮಾಡಿತ್ತು. ಜನಪ್ರಿಯತೆಯ ಮಾನದಂಡ ನಿರ್ಧರಿಸುವವರು ಮತದಾರರೇ ಶಿವಾಯಿ ರಾಜಕೀಯ ಪಕ್ಷಗಳಲ್ಲ ಎನ್ನುವುದನ್ನು ಚುನಾವಣೋತ್ತರ ಫಲಿತಾಂಶ ಸಾಬೀತುಪಡಿಸಿತು. ಸ್ವಾತಂತ್ರ್ಯಾನಂತರದ ಕರ್ನಾಟಕ ಇತಿಹಾಸದಲ್ಲಿ “ಇವರೇ ನಮ್ಮ ಮುಖ್ಯಮಂತ್ರಿಯಾಗಬೇಕು” ಎಂಬ ಜನಾದೇಶ ಪಡೆದ ಏಕೈಕ ಹುದ್ದರಿ ರಾಮಕೃಷ್ಣ ಹೆಗಡೆ ಮಾತ್ರ.
ದೇವರಾಜ ಅರಸು ಸತತ ಎರಡನೇ ಅವಧಿಗೆ ಗೆದ್ದಿದ್ದು ಹೌದಾದರೂ ಅದರ ಎಲ್ಲ ಶ್ರೇಯಸ್ಸು ಇಂದಿರಾ ಗಾಂಧಿಗೆ ಅರ್ಪಣೆ ಆಗಿತ್ತು. ಇಂದಿರಾ ಹೆಸರಲ್ಲಿ ಆ ಚುನಾವಣೆ ನಡೆಸಿದ ಅರಸು, ತಾವು ಧರಿಸಬೇಕಿದ್ದ ಕಿರೀಟವನ್ನು ಇಂದಿರಾರ ನೆತ್ತಿಗೆ ತೊಡಿಸಿದ್ದರು. ಹೆಗಡೆ ಮೊದಲಿಗೆ ಮುಖ್ಯಮಂತ್ರಿ ಆದುದು 1983ರಲ್ಲಿ. 85ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ನೇತೃತ್ವದ ಜನತಾ ಪಕ್ಷ ಹೀನಾಯ ಸೋಲು ಅನುಭವಿಸಿದಾಗ ಜನರಿಂದ ಮತ್ತೆ ಜನಾದೇಶ ಪಡೆಯುವ ಉದ್ದೇಶದಲ್ಲಿ ವಿಧಾನ ಸಭೆ ವಿಸರ್ಜಿಸಿ ಜನರ ಮುಂದೆ ಹೋಗಿ, 139 ಸ್ಥಾನ ಬಲದ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು. ಅರಸು ಮತ್ತು ಹೆಗಡೆ ಹೆಸರಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ಉದ್ದೇಶ ಸಿದ್ದರಾಮಯ್ಯ ಅವರಲ್ಲಿತ್ತು. ಆದರೆ ಅವರ “ತಥಾಕಥಿತ ಜನಪ್ರಿಯತೆ” ಚುನಾವಣೆಯಲ್ಲಿ ಕೆಲಸಕ್ಕೆ ಬರಲಿಲ್ಲ.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪಕ್ಷ 122 ಸ್ಥಾನದಿಂದ 80ಕ್ಕೆ ಕುಸಿಯಿತು. ಬಿಜೆಪಿ 64 ಹೆಚ್ಚುವರಿ ಸ್ಥಾನ ಗಳಿಸಿ 104 ಸೀಟು ತುಂಬಿತು. ಜೆಡಿಎಸ್ ಮೂರು ಸೀಟು ಕಳೆದುಕೊಂಡು 37ಕ್ಕೆ ತೃಪ್ತಿ ಪಟ್ಟುಕೊಂಡಿತು. ಅತಿ ದೊಡ್ಡ ಪಕ್ಷ ಬಿಜೆಪಿ ಶೇಕಡಾ 36.35; ಕಾಂಗ್ರೆಸ್ ಶೇ.38.14 ಹಾಗೂ ಜೆಡಿಎಸ್ ಶೇ.18.3 ಮತಗಳಿಸಿದ್ದು ಪ್ರಸಕ್ತದಲ್ಲಿ ನಡೆದಿರುವ ಚುನಾವಣೆಯಲ್ಲಿ ಕುತೂಹಲ ಕೆರಳಿಸುತ್ತಿರುವ ಸಂಗತಿಗಳಲ್ಲಿ ಒಂದು. ಕಾಂಗ್ರೆಸ್‍ಗೆ ಅತಿ ಹೆಚ್ಚು ಓಟು ಬಿದ್ದರೂ ಗಳಿಸಿದ ಸ್ಥಾನ ಕಡಿಮೆಯಾದುದು ಕುತೂಹಲದ ಮೂಲ. ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿದ ಮಾತ್ರಕ್ಕೆ ಶಾಸನ ಸಭೆಯಲ್ಲಿ ಸಂಖ್ಯಾಬಲ ಏರುತ್ತದೆಂಬುದಕ್ಕೆ ಯಾವ ಭರವಸೆಯೂ ಇಲ್ಲ. ವಿಧಾನ ಸಭಾ ಚುನಾವಣೆಯಲ್ಲಿ 36.35 ಪ್ರತಿಶತ ಮತ ಗಳಿಸಿದ ಬಿಜೆಪಿ ಕೆಲವೇ ತಿಂಗಳ ಅಂತರದಲ್ಲಿ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಶತ 51.75 ಮತ ಗಳಿಸಿತು ಎನ್ನುವುದು ವಿಶೇಷ.
ವಿಧಾನ ಸಭಾ ಚುನಾವಣೆಯಲ್ಲಿ 104 ಕ್ಷೇತ್ರಗಳಲ್ಲಿ ಬಹುಮತ ಗಳಿಸಿ ಗೆದ್ದಿದ್ದ ಆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ 170 ವಿಧಾನ ಸಭಾ ಕ್ಷೇತ್ರಗಳಲ್ಲಿ ಲೀಡ್ ಪಡೆದು 28ರಲ್ಲಿ 26 ಲೋಕಸಭಾ ಸ್ಥಾನವನ್ನು ವಶಪಡಿಸಿಕೊಂಡಿತು. 80 ವಿಧಾನ ಸಭಾ ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 36 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಲೀಡ್ ಪಡೆಯುವುದು ಸಾಧ್ಯವಾಯಿತು. ಜೆಡಿಎಸ್ 11 ವಿಧಾನ ಸಭಾ ಕ್ಷೇತ್ರದಲ್ಲಿ ಬಹುಮತ ಪಡೆದ ಬಳಿಕದ ಫಲಿತಾಂಶವೆಂದರೆ ಕಾಂಗ್ರೆಸ್, ಜೆಡಿಎಸ್ ತಲಾ ಒಂದೊಂದು ಲೋಕಸಭಾ ಸ್ಥಾನ ಗೆಲ್ಲಲು ಮಾತ್ರವೇ ಸಾಧ್ಯವಾಗಿದ್ದು. 28ನೇ ಸ್ಥಾನ ಘೋಷಿತ ಬಿಜೆಪಿ ಬೆಂಬಲಿತ, ಅಘೋಷಿತ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯ ಮಡಿಲು ಸೇರಿತು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂಬ ಕೌತುಕದ ಗೂಡು
ಈ ಇತಿಹಾಸವನ್ನು ಮರೆತು ಈ ಚುನಾವಣೆಯನ್ನು ನೋಡಲಾಗದು. ಐದು ವರ್ಷದ ಹಿಂದೆ ಮೂರೂ ಪಕ್ಷಗಳು ಚುನಾವಣಾ ಚದುರಂಗದ ಭಾಗವಾಗಿ ಉರುಳಿಸಿದ ದಾಳಗಳು, ವಾಗ್ಬಾಣಗಳು ಈ ಚುನಾವಣೆಯಲ್ಲಿ ಕೆಲಸಕ್ಕೆ ಬರದ ಸವಕಲು ನಾಣ್ಯವಾಗಿವೆ. ಆಗ ಕಾಂಗ್ರೆಸ್ ಪಕ್ಷ ಟಿಪ್ಪೂ ಸುಲ್ತಾನನನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತ ಮುಸ್ಲಿಂ ಮತಗಳನ್ನು ಕ್ರೋಡೀಕರಿಸುವ ಯತ್ನ ನಡೆಸಿತು. ಟಿಪ್ಪೂ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವಾಗಿ ಘೋಷಿಸಿದ ಕಾಂಗ್ರೆಸ್ ಸರ್ಕಾರ, ತನಗೆ ಗೊತ್ತೇ ಇಲ್ಲದಂತೆ ಹಿಂದೂ ಮತಗಳ ಕ್ರೋಡೀಕರಣಕ್ಕೆ ಕಾರಣವೊದಗಿಸಿತು. ತಮ್ಮ ಆಪ್ತರಾದ ಜಮೀರ್ ಅಹಮದ್, ನಸೀರ್ ಅಹಮದ್ ಮುಂತಾದವರ ಮಾತು ಕೇಳಿದ ಸಿದ್ದರಾಮಯ್ಯ ಅದಕ್ಕೆ ಬಲಿಪಶು ಆದರು. ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಕೊಟ್ಟರೆ ಲಿಂಗಾಯತರೆಲ್ಲರೂ ಹೋಲ್‍ಸೇಲ್ ಆಗಿ ಕಾಂಗ್ರೆಸ್‍ಗೆ ಮತ ಹಾಕುತ್ತಾರೆಂಬ ಎಂ.ಬಿ.ಪಾಟೀಲ, ಬಸವರಾಜ ರಾಯರೆಡ್ಡಿ, ವಿನಯ್ ಕುಲಕರ್ಣಿ ಮಾತು ಕೇಳಿ ತಲೆದಂಡ ತೆರುವಂತಾಗಿದ್ದು ಸಿದ್ದರಾಮಯ್ಯ. ಇದು ಅವರ ರಾಜಕೀಯ ಜೀವನದ ಕಥೆಯೂ ಹೌದು; ವ್ಯಥೆಯೂ ಹೌದು. ಆ ಪಕ್ಷದ ಶಾಸಕ ಸ್ಥಾನಾಕಾಂಕ್ಷಿಗಳು ಟಿಪ್ಪೂ ಹೊತ್ತು ಮೆರೆದ ರೀತಿ, ಲಿಂಗಾಯತ-ವೀರಶೈವರನ್ನು ಒಡೆಯಲು ಹವಣಿಸಿದ ರೀತಿ ಆ ಪಕ್ಷದ ಹಿನ್ನಡೆಗೆ ಕಾರಣವಾದ ಪ್ರಮುಖ ಅಂಶಗಳಾದವು. ಬಿಜೆಪಿ ತನ್ನ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯವೂ ಸೇರಿದಂತೆ ಬಗೆಬಗೆಯ ಭಾಗ್ಯಗಳಿಂದ ರಾಜ್ಯದ ಬೊಕ್ಕಸ ಬರಿದಾಗಿದೆ ಎಂಬ ಆರೋಪ ಹೊರಿಸಿಯೇ ಜನರ ದಿಕ್ಕು ತಪ್ಪಿಸುವಲ್ಲಿ ಸಫಲವಾಯಿತು.
ಸಿದ್ದರಾಮಯ್ಯ 2013ರ ಚುನಾವಣೆಗೆ ಮುನ್ನ ವಿರೋಧ ಪಕ್ಷದ ನಾಯಕರೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿದ್ದರು. ಆಗಷ್ಟೆ ಹೊರಬಿದ್ದಿದ್ದ ರಾಜ್ಯ ಗಣಿ ಅಕ್ರಮ ಹಗರಣ ಕುರಿತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ವರದಿಯನ್ನು ಮುಂದಿಟ್ಟುಕೊಂಡು ವಿಧಾನ ಸಭೆಯಲ್ಲಿ ಅವರು ನಡೆಸಿದ ಸಾಂವೈಧಾನಿಕ ಹೋರಾಟ, ಅವರ ವಿಚಾರದಲ್ಲಿ ನಂಬಿಕೆ ವಿಶ್ವಾಸ ಮೂಡಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲೋಕಾಯುಕ್ತ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಉಗ್ರ ಕಾನೂನು ಕ್ರಮ ಜರುಗಿಸುವ ಭರವಸೆಯನ್ನು ನೀಡಿ ಜನ ನಂಬುವಂತೆ ಮಾಡಿ ಅದರ ಚುನಾವಣಾ ರಾಜಕೀಯ ಲಾಭ ಪಡೆದಿದ್ದರು. ಅದನ್ನು ನಂಬಿದರು ಎಂದೋ; ಬಿಜೆಪಿ ಸರ್ಕಾರ ಸಾಕುಸಾಕಾಯಿತು ಎಂದೋ 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜನ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಕೊಟ್ಟರು. ಕುರ್ಚಿ ಹಿಡಿದ ಸಿದ್ದರಾಮಯ್ಯ ಮರುಕ್ಷಣದಿಂದಲೇ ತಾವಿತ್ತ ವಚನವನ್ನು ಮರೆತರು; ವರದಿ ಅನುಷ್ಠಾನಕ್ಕೆ ಬರಲಿಲ್ಲ; ಅಕ್ರಮವೆಸಗಿದವರಿಗೆ ಶಿಕ್ಷೆಯಾಗಲಿಲ್ಲ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು
ಅದಕ್ಕಿಂತಲೂ ಸಿದ್ದರಾಮಯ್ಯ ಸರ್ಕಾರ ಮಾಡಿದ ಜನರಿಟ್ಟ ವಿಶ್ವಾಸಕ್ಕೆ ದ್ರೋಹ ಬಗೆದ ಕೆಲಸವೆಂದರೆ ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವನ್ನಾಗಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಂಬ ಸರ್ಕಾರಿ ಕೃಪಾಪೋಷಿತ ಸಂಸ್ಥೆಯನ್ನು ಸ್ಥಾಪಿಸಿದ್ದು. ಒಬ್ಬ ಪೊಲೀಸ್ ಅಧಿಕಾರಿ ಎಸಿಬಿ ಮುಖ್ಯಸ್ಥರಾಗಿರುತ್ತಾರೆ. ಎಷ್ಟೆಂದರೂ ಅವರು ಸರ್ಕಾರದ ಅಧೀನ ಅಧಿಕಾರಿ. ಸರ್ಕಾರ ಅನುಮತಿ ಇಲ್ಲದೆ ಎಸಿಬಿ ತನಿಖೆ ಕಾರ್ಯಾಚರಣೆ ನಡೆಯದು. ರಾಜ್ಯದಲ್ಲಿ ಎಸಿಬಿ ಭ್ರಷ್ಟರ ವಿರುದ್ಧ ಒಂದಿಷ್ಟು ದಾಳಿ ನಡೆಸಿತೇನೋ ನಿಜ, ಆದರೆ ಅವರಲ್ಲಿ ಯಾರ ವಿರುದ್ಧವೂ ಪ್ರಕರಣ ಮುಂದುವರಿಸುವುದಕ್ಕೆ ಸರ್ಕಾರ ಎಸಿಬಿಗೆ ಅನುಮತಿಯನ್ನೇ ನೀಡಲಿಲ್ಲ. ಸಿದ್ದರಾಮಯ್ಯ ಸರ್ಕಾರ ಇಂಥ ನಿಲುವು ತೆಗೆದುಕೊಂಡಿದ್ದಕ್ಕೆ ಅವರದೇ ಪಕ್ಷದ ಕೆಲವು ಮುಖಂಡರ ಒತ್ತಾಯ ಪ್ರಭಾವ ಕಾರಣವಿರಬಹುದು. ಆದರೆ ಅದರಿಂದ ಮರ್ಯಾದೆ ಹೋಗಿದ್ದು ಸಿದ್ದರಾಮಯ್ಯನವರದು.
ಇನ್ನೊಂದು ವಿಶೇಷವನ್ನು ಮರೆಯಬಾರದು. ಐದು ವರ್ಷದ ಹಿಂದೆ ಚುನಾವಣಾ ಪ್ರಚಾರ ಸಭೆಗಳಲ್ಲಿ ವ್ಯಕ್ತಿಗತ ನೆಲೆಯಲ್ಲಿ ಕೇಳಿಬರುತ್ತಿದ್ದ “ಅಪ್ಪನ…ಮಗನ” ಮುಂತಾದ ಮಾತುಗಳು ಈ ಸಲ ಇನ್ನೂ ಕೇಳಿಬಂದಿಲ್ಲ. “ಎಚ್.ಡಿ.ಕುಮಾರಸ್ವಾಮಿಯವರು ಅವರ ಅಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ” ಎಂದು ಪ್ರಚಾರ ಸಭೆಗಳಲ್ಲಿ ಸಿದ್ದರಾಮಯ್ಯ ಎಷ್ಟು ಬಾರಿ ಹೇಳಿದ್ದರೋ, ಲೆಕ್ಕವಿಟ್ಟವರಿಲ್ಲ. ಈ ಬಾರಿ ತಪ್ಪಿಯೂ ಆ ಮಾತು ಹೊರಬಿದ್ದಿಲ್ಲ. ತ್ರಿಶಂಕು ವಿಧಾನ ಸಭೆ ಆದರೂ ಆಗಬಹುದೆಂಬ ಭಯದಲ್ಲಿ ಸಿದ್ದರಾಮಯ್ಯ ತಮ್ಮ ನಾಲಗೆ ಮೇಲೆ ನಿಯಂತ್ರಣ ಹೇರಿರಬಹುದೇ ಎಂಬ ಸಂದೇಹ ಬರುತ್ತಿದೆ. ಅತ್ತ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಮಂಡ್ಯದಲ್ಲಿ ಉದ್ಘಾಟಿಸಿದ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ಒಂದೇ ಒಂದು ಶಬ್ದವನ್ನೂ ಮಾತಾಡಿರಲಿಲ್ಲ. ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ; ಶಾಶ್ವತ ಶತ್ರುಗಳೂ ಇಲ್ಲ ಎನ್ನುವುದನ್ನು ನೆನಪಿಸುವ ಬೆಳವಣಿಗೆ ಇದು.
ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ಕಲಿಯಲೊಲ್ಲದ ಪಾಠ