ದೇಶದ ಬಹುತೇಕ ರಾಜ್ಯಗಳಲ್ಲಿ ಮಖಾಡೆ ಮಲಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಡೇ ಪಕ್ಷ ಕರ್ನಾಟಕದಲ್ಲಾದರೂ ಆಕ್ಸಿಜೆನ್ ತುಂಬಿ ಓಡುವ, ಹಾರುವ, ಜಿಗಿಯುವ ಹಂತಕ್ಕೆ ಅದನ್ನು ತಂದು ನಿಲ್ಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಾವು ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮುಖ್ಯಮಂತ್ರಿ (Karnataka CM) ಸ್ಥಾನವನ್ನು ದಯಪಾಲಿಸಬೇಕೆಂದು ಗೋಗರೆದ ಮತ್ತು ತಥಾಕಥಿತ “ಕೈ” ಕಮಾಂಡು ಅದನ್ನು ನಿರಾಕರಿಸಿದ ರೀತಿ ಕಲಿಯುವ ಮನಸ್ಸು ಇರುವರಿಗೆ ಸಾವಿರ ಪಾಠ ಹೇಳುವಂತಿದೆ.
ವಿಧಾನ ಸಭೆಯ 135 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಡಿಕೆಶಿ ತಮ್ಮ ಸಂಘಟನಾ ಸಾಮಥ್ರ್ಯವನ್ನು ಸಾದರಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಅಂದ ಮಾತ್ರಕ್ಕೆ ಮುಖ್ಯಮಂತ್ರಿ ಪಟ್ಟವೇ ಬೇಕೆಂದು ಹಟ ಹಿಡಿಯುವುದಕ್ಕೆ ಪ್ರಾದೇಶಿಕ ಪಕ್ಷಗಳ ಹೊರತಾಗಿ ರಾಷ್ಟ್ರೀಯ ಪಕ್ಷಗಳಲ್ಲಿ ಅವಕಾಶವಿಲ್ಲ. ಪಕ್ಷದ ನಾಯಕತ್ವವನ್ನು ಈ ನಿಟ್ಟಿನಲ್ಲಿ ಮಣಿಸಬಲ್ಲೆ ಎಂಬ ಹುಂಬತನವನ್ನು ಅವರಲ್ಲಿ ಅಂತರ್ಗತವಾಗಿರುವ ಸಂವೈಧಾನೇತರ ಶಕ್ತಿ (ಎಕ್‍ಸ್ಟ್ರಾ ಕಾನ್ಸ್ಟಿಟ್ಯೂಷನಲ್ ಪವರ್) ಉದ್ದೀಪಿಸಿರಬಹುದು. ತಮಗಲ್ಲದೆ ಬೇರೆ ಯಾರಿಗೆ ಸೋನಿಯಾ ಗಾಂಧಿ ವರ ನೀಡುತ್ತಾರೆಂಬ ಅತಿಯಾದ ಆತ್ಮವಿಶ್ವಾಸ ಅವರಿಗೆ ಮೊದಲಿಗೆ ಆಘಾತ ತಂದ ಬೆಳವಣಿಗೆ. ಮುಖ್ಯಮಂತ್ರಿ ಸ್ಥಾನ ಅದಲ್ಲವಾದರೆ ಬೇರಾವ ಹುದ್ದೆಯೂ ಬೇಡವೇ ಬೇಡ ಎಂದು ಮೊಂಡುಹಟ ಹಿಡಿದಿದ್ದ ಡಿಕೆಶಿ, ಸಿದ್ದರಾಮಯ್ಯ ಅಡಿಯಲ್ಲಿ ಉಪಮುಖ್ಯಮಂತ್ರಿಯಾಗಲು ಒಪ್ಪಿದ್ದಾರೆಂದರೆ ಒಂದಿಷ್ಟು ಮೆಟ್ಟಿಲು ಇಳಿದಿದ್ದಾರೆಂದೇ ಅರ್ಥ.
ಈ ಒಪ್ಪಿಗೆ ನೀಡುವುದಕ್ಕೆ “ಕೈ”ಕಮಾಂಡ್‍ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಹೈಕಮಾಂಡ್ ಆಗಿರುವ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಕೆ.ಸಿ. ವೇಣುಗೋಪಾಲ್, ಸೂರ್ಜೆವಾಲಾ, ಜೈರಾಂ ರಮೇಶ್ ಮುಂತಾದವರುಳ್ಳ ತಂಡ ಹಗಲೂರಾತ್ರಿ ನಡೆಸಿದ ಮಾತುಕತೆ ಕಾರಣವಾಯಿತೆ…? ಈ ವಿಚಾರದಲ್ಲಿ ಕುತೂಹಲ ತಣಿಸಿಕೊಳ್ಳಲು ಪತ್ರಿಕೆ ಓದುವ, ಟಿವಿ ನೋಡುವ ಮತದಾರರನ್ನು ನಂಬಿಸುವ ರೀತಿಯಲ್ಲಿ ಸುದ್ದಿಗಳು ಬರುತ್ತಿವೆ. ವಾಸ್ತವದಲ್ಲಿ ಡಿಕೆಶಿ ಈಗ ಒಪ್ಪಿರುವ ಸಂಧಾನದ ಹಿಂದಿರುವ ಅಸಲಿ ಕಾರಣ ಪಕ್ಷದ ಯಾವೊಬ್ಬ ಮುಖಂಡರೂ ಅಲ್ಲ. ಬದಲಿಗೆ ಅವರಿಗೆ ದಶಕಗಳಿಂದ ರಾಜಕೀಯ, ಧಾರ್ಮಿಕ ಮಾರ್ಗದರ್ಶಕರಾಗಿರುವ “ಗುರು”ವೊಬ್ಬರ ಸಲಹೆ ಮೇರೆಗೆ ಸಿಎಂ ಸ್ಥಾನಕ್ಕೆ ಬಿಗಿಪಟ್ಟು ಹಾಕಿದ್ದ ಈ ಮುಖಂಡ ಪಟ್ಟು ಸಡಿಲಿಸಿದ್ದು.
ಮೇ 13ರಂದು ಮಧ್ಯಾಹ್ನದ ವೇಳೆಗೆಲ್ಲ ಯಾವ ಪಕ್ಷಕ್ಕೆ ಜನ ಅಧಿಕಾರ ಕೊಟ್ಟಿದ್ದಾರೆ ಎನ್ನುವುದು ನಿಚ್ಚಳವಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿ ಮೆರೆಯುತ್ತಿದ್ದ 13 ಜನರನ್ನು ಒಳಗೊಂಡಂತೆ ಆಡಳಿತ ಪಕ್ಷದ ಮುಖಂಡರು ಮತ್ತು ಅ-ಮುಖಂಡರು ಮನೆಗೆ ಹೋಗುವಂತೆ ಮಾಡಿದ ಮತದಾರ ಕಾಂಗ್ರೆಸ್‍ಗೆ ಅಧಿಕಾರ ನೀಡಿದ. ಮತದಾರರಿಗೆ ಮೂರನೇ ಪರ್ಯಾಯವಾಗಿರುವ ಜೆಡಿಎಸ್ ಒಳದೌರ್ಬಲ್ಯದ ಕಾರಣವಾಗಿ ಅಪ್ರಸ್ತುತವಾಗುತ್ತಿರುವ ಈ ಸಮಯದಲ್ಲಿ ಇದು ಬೇಡ ಎಂದಾದರೆ ಅದನ್ನಷ್ಟೇ ಪಡೆಯಬೇಕು ಎಂಬಂಥ ಸ್ಥಿತಿಯಲ್ಲಿ ಜನತೆ ಕಾಂಗ್ರೆಸ್‍ಗೆ ಅಧಿಕಾರ ನೀಡಿದೆ. ಇದೇನೇ ಇದ್ದರೂ ಡಾ.ಜಿ. ಪರಮೇಶ್ವರ್ ಅಧ್ಯಕ್ಷರಾಗಿದ್ದ ಚುನಾವಣಾ ಪ್ರಣಾಳಿಕೆ ಜನರನ್ನು ಮೋಡಿ ಮಾಡಿ ಮತ-ದಾನಕ್ಕೆ ಜನ ಮನವೊಲಿಸಿ ಪ್ರೇರೇಪಿಸಿದ್ದು ಯಾರೂ ಒಪ್ಪಬೇಕಾದ ಸಂಗತಿ.
ಪ್ರತಿಮನೆಗೂ 200 ಯೂನಿಟ್ ಉಚಿತ ವಿದ್ಯುತ್ತು, ಪ್ರತಿಯೊಬ್ಬ ಮನೆಯೊಡತಿಗೂ ಮಾಸಿಕ ಎರಡು ಸಾವಿರ ರೂಪಾಯಿ ಉಡುಗೊರೆ, ನಿರುದ್ಯೋಗಿ ಪದವೀಧರರಿಗೆ, ಡಿಪ್ಲೊಮಾ ದಾರರಿಗೆ ಮಾಸಿಕ ಸಂಭಾವನೆ, ಪ್ರತಿ ಕುಟುಂಬಕ್ಕೆ ಐದು ಕೆಜಿ ಬದಲಿಗೆ ಹತ್ತು ಕೆಜಿ ಅಕ್ಕಿ ಹೀಗೆ ಪ್ರಣಾಳಿಕೆ ನೀಡಿರುವ ಮುಖ್ಯವಾದ “ಐದು ಭರವಸೆ” ಕಾರ್ಯಸಾಧುವೆ, ಅನುಷ್ಟಾನ ಸಾಧ್ಯವೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಇದಕ್ಕೆಲ್ಲ ಸಂಪನ್ಮೂಲ ಸಂಗ್ರಹ ಹೇಗೆ, ಎಲ್ಲಿಂದ ಎನ್ನುವುದು ಹೊಸ ಸರ್ಕಾರ ಮೊದಲ ವಿಧಾನ ಸಭಾಧಿವೇಶನದಲ್ಲೇ ಮಂಡಿಸಲಿರುವ ಚೊಚ್ಚಲ ಬಜೆಟ್‍ನಲ್ಲಿ ಸ್ಪಷ್ಟವಾಗಬೇಕು. ಈಗಾಗಲೇ ನಮ್ಮನ್ನಾಳಿದ ಎಲ್ಲ ಪಕ್ಷ ಸರ್ಕಾರದ ಅದಕ್ಷತೆ ಕಾರಣವಾಗಿ ಐದು ಲಕ್ಷ ಕೋಟಿಗೂ ಅಧಿಕ ಮೊತ್ತದ ಸಾಲ ಜನರ ನೆತ್ತಿ ಮೇಲೆ ತೂಗುತ್ತಿರುವ ಕತ್ತಿಯಂತೆ ಆತಂಕ ಸೃಷ್ಟಿಸಿದೆ. ಈ ಭರವಸೆಗಳ ಈಡೇರಿಕೆಂದೇ ಮತ್ತಷ್ಟು ಲಕ್ಷ ಕೋಟಿ ಸಾಲ ಮಾಡಲು ಹೊಸ ಸರ್ಕಾರವೂ ಮುಂದಾದರೆ ಜನರಿಟ್ಟ ವಿಶ್ವಾಸವನ್ನು ಅದು ಕಳೆದುಕೊಳ್ಳಬೇಕಾಗುತ್ತದೆ. ಬಜೆಟ್‍ಗೆ ಎಚ್ಚರದಿಂದ ಕಾಯೋಣ.
ಗುರು ಆಣತಿಯಂತೆ ಸರ್ಕಾರದ ಭಾಗವಾಗಲು ಡಿಕೆಶಿ ಒಪ್ಪಿದ್ದಾಗಿದೆ. ಒಪ್ಪಲು ಕಾರಣವಾದ ಗುರು ತೋರಿದ ಮಾರ್ಗದರ್ಶಕ ಸೂತ್ರವಾದರೂ ಏನು; ತೊಡೆತಟ್ಟಿ, ತೋಳೇರಿಸಿ ತಾವೇ ಹಾಕಿದ ಸಿಎಂ ಸ್ಥಾನ ಮಾತ್ರವೆಂಬ ಡಿಕೆಶಿ ಹಾಕಿದ ಹಟದ ಪಟ್ಟು ಸಡಿಲಗೊಂಡು ಕರಗಲು ಆ ಸೂತ್ರ ಹೇಗೆ ಕಾರಣವಾಯಿತು ಎನ್ನುವುದು ಕುತೂಹಲಕಾರಿ. ಗುರು ನೀಡಿದ್ದಾರೆಂಬ ಸಲಹೆ ಪ್ರಕಾರ, ಡಿಕೆಶಿ ಜಾತಕದಲ್ಲಿ ತಕ್ಷಣವೇ ಮುಖ್ಯಮಂತ್ರಿಯಾಗುವ ಫಲವೇ ಇಲ್ಲ. ಜಾತಕದಲ್ಲಿ ಗುರುಬಲ ಎನ್ನುವುದೊಂದು ಇದೆ ಎನ್ನುತ್ತಾರೆ ಬಲ್ಲವರು. ಡಿಕೆಶಿ ಜಾತಕದಲ್ಲಿ ಅದು ಇರಬೇಕಾದ ಮನೆಯಲ್ಲಿ ಇಲ್ಲ. ಯಾರದೋ ಮನೆಯಲ್ಲಿರುವ ಅದು ಸ್ವಂತ ಸ್ಥಳಕ್ಕೆ ಬರಲು ಸಮಯಾವಕಾಶ ಹಿಡಿಯುತ್ತದಂತೆ. ಅಲ್ಲೀವರೆಗೆ ಎಷ್ಟೇ ತಿಣುಕಿ ತಿಪ್ಪರಲಾಗ ಹಾಕಿದರೂ ಅವರು ಸಿಎಂ ಆಗುವುದು ಸಾಧ್ಯವೇ ಇಲ್ಲ, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಒಪ್ಪಿಕೊಳ್ಳುವುದು ವಿಹಿತ ಎಂಬ ಗುರು ಸಲಹೆಯನ್ನು ಡಿಕೆಶಿ ಪ್ರಸಾದ ರೂಪವಾಗಿ ಸ್ವೀಕರಿಸಿದ ಪರಿಣಾಮ ಕಾಂಗ್ರೆಸ್ ಇಕ್ಕಟ್ಟಿನಿಂದ ಬಚಾವ್ ಆಗಿದ್ದು.
ರಾಜಸ್ಥಾನದಲ್ಲಿ ಅಶೋಕ ಗೆಹ್ಲೋಟ್, ಚತ್ತೀಸ್‍ಘಡದಲ್ಲಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರಗಳಿವೆ. ಪ್ರಮಾಣ ವಚನ ಸ್ವೀಕರಿಸುವಾಗ ಎರಡೂವರೆ ವರ್ಷದ ಬಳಿಕ ಸ್ಥಾನ ತ್ಯಜಿಸಿ ಹೈಕಮಾಂಡ್ ಸೂಚಿಸಿದವರಿಗೆ ಅಧಿಕಾರ ಹಸ್ತಾಂತರಿಸುವ ವಚನವನ್ನು ಅವರಿಬ್ಬರೂ ನೀಡಿದ್ದರು. ಗೆಹ್ಲೋಟ್, ಬಘೇಲರಿಬ್ಬರೂ ವಚನಭ್ರಷ್ಟರ ಸಾಲಿಗೆ ಸೇರಿದ್ದಾರೆ. ಅವರ ವಿರುದ್ಧ ಏನೂ ಕ್ರಮ ಜರುಗಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಹೈಕಮಾಂಡ್ ಇದೆ. ಕರ್ನಾಟಕದಲ್ಲಿ ತಾವು ಒಪ್ಪಿರುವಂತೆ ಎರಡು ಎರಡೂವರೆ ವರ್ಷದ ಬಳಿಕ ಸಿದ್ದರಾಮಯ್ಯ ಸ್ಥಾನತ್ಯಜಿಸಿ ಡಿಕೆಶಿಗೆ ಕುರ್ಚಿ ಬಿಟ್ಟುಕೊಟ್ಟಾರೆಯೇ… ಇವರೂ ಗೆಹ್ಲೋಟ್, ಭಗೇಲರಂತೆ ವಚನ ಭ್ರಷ್ಟರಾದರೆ…? ಈ ಪ್ರಶ್ನೆ ಡಿಕೆಶಿ ಮೆದುಳನ್ನು ಮೊಸರುಗಡಿಗೆ ಮಾಡಿದೆ. ಅವರು ನಂಬಿರುವ ಗುರುಗಳಲ್ಲಿಯೂ ಈ ಪ್ರಶ್ನೆಗೆ ಉತ್ತರ ರೂಪದ ಪ್ರಸಾದ ಇರಲಾರದು.
ಇಷ್ಟೆಲ್ಲ ಅನುಮಾನವಿದ್ದೂ ಅವರೇಕೆ ಸಂಪುಟ ಸೇರಬೇಕು…? ಗುರುಗಳು ಹೇಳುವ ಪ್ರಕಾರ, ಕೇವಲ ಶಾಸಕನಾಗಷ್ಟೇ ಉಳಿದರೆ ಪವರ್ ಪಾಲಿಟಿಕ್ಸ್‍ನ ಕೇಂದ್ರ ಬಿಂದುವಿನಿಂದ ಡಿಕೆಶಿ ಹೊರಗೇ ಇರಬೇಕಾಗುತ್ತದೆ. ಬೆಂಬಲಿಗ ಶಾಸಕರೂ ಕೂಡಾ ಕಾಲಕ್ರಮೇಣ ಒಂದಲ್ಲ ಒಂದು ನೆಪ ಮುಂದಿಟ್ಟು ದೂರಸರಿದು ಪವರ್ ಪಾಲಿಟಿಕ್ಸ್ ಕೇಂದ್ರಕ್ಕೆ ಹತ್ತಿರವಾಗುತ್ತಾರೆ. ದಿನಗಳೆದಂತೆ ಅಧಿಕಾರಸ್ಥರಿಗೆ, ಅಧಿಕಾರಕ್ಕೆ ಹತ್ತಿರವಾದ ಸ್ಥಿತಿ ಕಾರಣವಾಗಿ ವಿಸ್ಮøತಿ ಪೊರೆ ಅವರ ಬುದ್ಧಿಭಾವವನ್ನು ಆವರಿಸುತ್ತದೆ. ಅದೊಂದು ರೀತಿಯಲ್ಲಿ ಆತ್ಮಹತ್ಯಾಕಾರಿ ಬೆಳವಣಿಗೆ. ಅದಾಗದಂತೆ ತಡೆಯಬೇಕು ಎಂದಾದರೆ ಡಿಕೆಶಿ, ಡಿಸಿಎಂ ಸ್ಥಾನ ಒಪ್ಪಿಕೊಳ್ಳುವುದು; ಮಹತ್ವದ ಖಾತೆಗಳನ್ನು ಪಡೆಯುವುದು; ಅಚಲ ಬೆಂಬಲಿಗರ ಪಡೆಯೊಂದನ್ನು ಸಂಪುಟ ಸೇರುವಂತೆ ಮಾಡಿ ಅವರಿಗೆಲ್ಲ ಮಹತ್ವದ ಖಾತೆ ನಿರ್ವಹಣೆಯ ಜವಾಬ್ದಾರಿ ದಕ್ಕಿಸುವುದು; ಸರ್ಕಾರದ ಬಹು ಮುಖ್ಯ ಯೋಜನೆ- ಕಾರ್ಯಕ್ರಮಗಳ ಅನುಷ್ಟಾನದಲ್ಲಿ ಡಿಕೆಶಿ ಮತ್ತವರ ಸಂಪುಟ ಸಹೋದ್ಯೋಗಿಗಳ ಸಮರ್ಥ ಪಾಲುಗೊಳ್ಳವಿಕೆ ಜನಮನಕ್ಕೆ ಮುಟ್ಟುವಂತೆ ಮಾಡುವುದು ಅಗತ್ಯ ಎನ್ನುವುದು ಗುರುಗಳ ಸಲಹೆ. ಡಿಕೆಶಿ ಇದನ್ನು ಪ್ರಸಾದವಾಗಿ ಮತ್ತೊಮ್ಮೆ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ
ಕೇವಲ ಶಾಸಕನಾಗಷ್ಟೇ ಉಳಿದರೆ ವಿಧಾನ ಸಭೆಯೊಳಗೆ ಒಂದು ಕುರ್ಚಿ, ಮತಕ್ಷೇತ್ರದ ಕೇಂದ್ರ ಕನಕಪುರದಲ್ಲಿ ಕುರ್ಚಿಸಹಿತ ಶಾಸಕರ ಕಚೇರಿಯಷ್ಟೇ ಇರುತ್ತದೆ. ಕರುವಿನ ನೆಗೆತ ಕಂಭದ ಎತ್ತರಕ್ಕೆ ಮಾತ್ರ ಎಂಬಂತೆ. ಬಿಡಿಗಾಸಿನ ಖರ್ಚೂ ಇಲ್ಲದೆ ರಾಜ್ಯವ್ಯಾಪಿ ಸುತ್ತಾಡುವುದಕ್ಕೆ, ಬೆಂಬಲಿಗ ಕಾರ್ಯಕರ್ತರನ್ನು ಹುರಿದುಂಬಿಸಿ ಯಾವ ಕೆಲಸಕ್ಕೂ ಸಿದ್ಧವಾಗಿರುವಂತೆ ಸಂಘಟನೆ ಮಾಡುವುದಕ್ಕೆ ಮಂತ್ರಿಗಿರಿ ಅನಿವಾರ್ಯ. ಸಂಘಟನೆಗಾಗಿ ಪಕ್ಷ ದೇಣಿಗೆ ಸಂಪನ್ಮೂಲ ಸಂಗ್ರಹಿಸುವುದಕ್ಕೂ ಇದರಷ್ಟು ಉತ್ತಮ ದಾರಿ ಮತ್ತೊಂದಿಲ್ಲ. ಶಾಸಕನಾಗಿ ಬೇಡಿದರೂ ಕಾಸು ಬಿಚ್ಚದವರು ಅದೇ ಶಾಸಕ ಸಚಿವನಾಗಿ ಕೇಳಿದರೆ ಎಷ್ಟೂ ಕಪ್ಪ ಸಲ್ಲಿಸುತ್ತಾರೆ. ಮಂತ್ರಿಗಿರಿ ಬೇಡ ಎನ್ನುವುದು ಈ ದೃಷ್ಟಿಯಿಂದ ಅತ್ಯಾಗತ್ಯ ಎನ್ನುವ ಗುರೂಪದೇಶ ಡಿಕೆಶಿ ಪಟ್ಟು ಸಡಿಲಿಸಿರುವ ಮಗದೊಂದು ಮಹತ್ವದ ಬೆಳವಣಿಗೆ.
ಡಿಕೆಶಿಯವರನ್ನು ಮುಖ್ಯಮಂತ್ರಿ ಮಾಡಬೇಕೆನ್ನುವುದು ಒಕ್ಕಲಿಗ ಸಮುದಾಯದ ಆಗ್ರಹ. ಇದಕ್ಕೆ ಒಕ್ಕಲಿಗ ಪೀಠಗಳೂ ಧ್ವನಿ ಸೇರಿಸಿದ್ದಾರೆ. ಅವರೆಲ್ಲರಿಗೂ ಒಪ್ಪಿತವಲ್ಲದ ಡಿಸಿಎಂ ಪದವಿಗೆ ತಮ್ಮ ಕೊರಳನ್ನು ಡಿಕೆಶಿ ಒಡ್ಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಆಗದಂತೆ ತಡೆಯುವಲ್ಲಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಯಶಸ್ವಿಯಾಗಿದ್ದಾರೆ. ಕುರುಬ ಸಮುದಾಯದ ಮಠದವರು ಸಿದ್ದರಾಮಯ್ಯ ಬೆಂಬಲಕ್ಕೆ ಸಹಜವಾಗಿ ನಿಂತಿದ್ದಾರೆ. ದೋಷಾರೋಪ ಹೊತ್ತಿರುವವರು ನಾಡಿನ ಮುಖ್ಯಮಂತ್ರಿ ಆಗಬಾರದೆಂಬ ಅವರ ಮಾತಿನಲ್ಲಿ ಡಿಕೆಶಿ ಹೊತ್ತಿರುವ ಹಲವು ಆರೋಪ-ಮೊಕದ್ದಮೆಗಳ ಸಾರವಡಗಿದೆ. ಏತನ್ಮಧ್ಯೆ ಮೂರ್ನಾಲ್ಕು ಡಿಸಿಎಂ ಸ್ಥಾನ ರಚಿಸಲಾಗುವುದು ಎಂಬ ವದಂತಿ ಕಾಲು ಕೈ ಮುರಿದುಕೊಂಡು ನಿಶ್ಚಲಾವಸ್ಥೆಗೆ ಸಂದಿದೆ. ಲಿಂಗಾಯತ ಸಮುದಾಯಕ್ಕೆ (ಬಬಲಾಪುರದ ಶಾಸಕ ಎಂ.ಬಿ. ಪಾಟೀಲ); ದಲಿತ ಸಮುದಾಯಕ್ಕೆ (ದೇವನಹಳ್ಳಿ ಶಾಸಕ ಕೆ.ಎಚ್. ಮುನಿಯಪ್ಪ ಇಲ್ಲವೇ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ) ಡಿಸಿಎಂ ಸ್ಥಾನ ಕಲ್ಪಿಸಲಾಗುವುದೆಂಬುದು ಆ ವದಂತಿ. ಏಕೈಕ ಉಪ ಮುಖ್ಯಮಂತ್ರಿ ಸ್ಥಾನ ಇರಬೇಕು ಅದು ತನ್ನ ಕೈಯಲ್ಲಿ ಮಾತ್ರವೇ ಇರಬೇಕೆಂಬ ಡಿಕೆಶಿ ವಾದವನ್ನು ಹೈಕಮಾಂಡ್-ಕೈಕಮಾಂಡ್‍ಗಳೆರಡೂ ಒಪ್ಪಿವೆ. ದಲಿತ, ಲಿಂಗಾಯತ ಸಮುದಾಯ ಈ ಬೆಳವಣಿಗೆಯಿಂದ ಬೇಸರಗೊಂಡಿವೆ. ಇದರ ಜೊತೆಗೆ ಮುಸ್ಲಿಂ ಶಾಸಕರೂ ಡಿಸಿಎಂ (ಒಂದು ಡಿಸಿಎಂ, ಐವರು ಸಚಿವ ಸ್ಥಾನ ಒಂಭತ್ತು ಶಾಸಕರಿರುವ ಅವರ ಬೇಡಿಕೆ) ಸ್ಥಾನ ಸಿಗದ ಅಸಮಾಧಾನದಲ್ಲಿ ಕೊತಕೊತ ಕುದಿಯುತ್ತಿದ್ದಾರೆ. ಇವರನ್ನೆಲ್ಲ ಸಿದ್ದರಾಮಯ್ಯ-ಡಿಕೆಶಿ ಎಂಬ ಜೋಡೆತ್ತು ಹೇಗೆ ಸಮಾಧಾನಗೊಳಿಸಲಿದೆಯೋ ಆ ದೇವರಿಗೂ ಗೊತ್ತಿರಲಾರದು.
ಇದನ್ನೂ ಓದಿ: ಮೊಗಸಾಲೆ ಅಂಕಣ: ಮೊಗಸಾಲೆ ಅಂಕಣ: ಕವಲು ದಾರಿಯಲ್ಲಿ ಮತದಾರ, ಎತ್ತ ಅವನ ಒಲವು?