Site icon Vistara News

ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ

AICC president mallikarjun Kharge

ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದರೊಂದಿಗೆ ಪಕ್ಷದೊಳಗಣ ಗುಂಪುಗಾರಿಕೆ ಶಮನವಾಗುತ್ತದೆ; ಕಾಂಗ್ರೆಸ್‍ನ ಹಿರಿ ತಲೆಮಾರಿನ ಕೆಲವು ಅನೇಕರ ಅಸಮಾಧಾನಕ್ಕೆ ಕಾರಣವಾಗಿರುವ ನೆಹರೂ- ಗಾಂಧಿ ಕುಟುಂಬ ರಾಜಕೀಯ ಲೆಗಸಿಗೆ ಪಕ್ಷದೊಳಗೇ ಎದ್ದಿರುವ ವಿರೋಧ ತಣ್ಣಗಾಗುತ್ತದೆ; ವಿವಿಧ ರಾಜ್ಯ ವಿಧಾನಸಭೆ ಮತ್ತು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರುವ ಯತ್ನಕ್ಕೆ ಸಂಘಟಿತ ಪರಿಹಾರ ಸಿಗುತ್ತದೆ ಎಂಬೆಲ್ಲ ಯೋಚನೆಗಳಿಗೆ ಇನ್ನೂ ಕಾಲು ಕೈ ಮೂಡಿಲ್ಲ.

“ಜನತಂತ್ರಾತ್ಮಕವಾಗಿ” ನಡೆದ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿರುವ ಖರ್ಗೆಯವರು ಸಂಘಟನೆಯ ಜವಾಬ್ದಾರಿಯನ್ನೇನೋ ವಹಿಸಿಕೊಂಡಿದ್ದಾರೆ. ಆದರೆ ಅಧ್ಯಕ್ಷರಿಗೆ ಅವರ ಜವಾಬ್ದಾರಿ ನಿರ್ವಹಣೆಯಲ್ಲಿ ಕೈಜೋಡಿಸಬೇಕಿರುವ ಪದಾಧಿಕಾರಿಗಳೆಂಬ ಅವರ “ಸೇನೆ” ಮಾತ್ರ ಇನ್ನೂ ರಚನೆಯಾಗಿಲ್ಲ. ಕಾರ್ಯಕಾರಿ ಸಮಿತಿಗೆ ಒಂದಿಷ್ಟು ಸದಸ್ಯರ ಆಯ್ಕೆಯಾಗಬೇಕು; ಕೆಲವರ ನಾಮಕರಣವಾಗಬೇಕು; ಸಂಘಟನಾ ಪ್ರಧಾನ ಕಾರ್ಯದರ್ಶಿಯಲ್ಲದೆ ಹಲವು ಪ್ರಧಾನ ಕಾರ್ಯದರ್ಶಿಗಳ ನೇಮಕ ಆಗಬೇಕು. ಇದ್ಯಾವುದೂ ಇನ್ನೂ ಆಗಿಲ್ಲ. ಬದಲಾಗಿ ಹಳಬರನ್ನೇ ಕಟ್ಟಿಕೊಂಡು ಏಗಬೇಕಿರುವ ಹೊಸ ಅಧ್ಯಕ್ಷ ಅವರಾಗಿದ್ದಾರೆ.

ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನ ಬೇಡವೆಂದು ಹೊರಬಂದು ಮೂರು ವರ್ಷವಯಿತು. ಅಷ್ಟೂ ಅವಧಿಗೆ ಹಂಗಾಮಿ ಅಧ್ಯಕ್ಷರದೇ ಸೂತ್ರ. ಈ ಮೊದಲು ಎರಡು ದಶಕಾವಧಿಗೆ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ, ಮಗ “ಕೈಕೊಟ್ಟ” ಕಾರಣ ಹಂಗಾಮಿಯಾಗಿ ಮುಂದುವರಿದರು. ಈಗ ಅವರು ನಿರಾಳವಾಗಿದ್ದಾರೆ ಎನ್ನಲಾಗುತ್ತಿದೆ. ತಮ್ಮದೂ ಸೇರಿದಂತೆ ಪಕ್ಷದ ತಲೆ ನೋವನ್ನು ಖರ್ಗೆಯವರಿಗೆ ವರ್ಗಾಯಿಸಿರುವ ಸೋನಿಯಾ “ನಿರುಮ್ಮಳ” ಸ್ಥಿತಿಯಲ್ಲಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‍ನಲ್ಲಿ ಖರ್ಗೆಯವರ ಆಸಕ್ತಿ ಮತ್ತು ನಿರ್ವಹಿಸಬೇಕಿರುವ ಪಾತ್ರದತ್ತ ಗಮನ ಹರಿಸುವ ಮೊದಲು ದೇಶದ ಅಲ್ಲಲ್ಲಿ ಪಕ್ಷ ಎದರಿಸುತ್ತಿರುವ ಒಳ ಬಂಡಾಯದ ಸ್ಥಿತಿಗತಿಯನ್ನೊಮ್ಮೆ ಅವಲೋಕಿಸಿ ಕರ್ನಾಟಕಕ್ಕೆ ಬರುವುದು ವಿಹಿತ. ಖರ್ಗೆಯವರ ಮುಂದೆ ಈಗ ಇರುವ ದೊಡ್ಡ ಸವಾಲು ಎಂದರೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ. ಈಗಾಗಲೇ ಚುನಾವಣೆ ಘೋಷಣೆಯಾಗಿರುವುದು ಈ ಎರಡು ರಾಜ್ಯಗಳಲ್ಲಾದರೆ ಬರಲಿರುವ ವರ್ಷದ ಮೊದಲರ್ಧದಲ್ಲಿ ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ. ಸಧ್ಯ ಖರ್ಗೆ ಗಮನ ಉತ್ತರ ಭಾರತದ ಎರಡು ರಾಜ್ಯಗಳಲ್ಲಿ; ಅವುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ಗುರಿಯಲ್ಲಿ.

ಗುರಿ ಸಾಧಿಸುವುದು ಅಥವಾ ಸಾಧಿಸಲಾಗದೇ ಹಿಂದಕ್ಕೆ ಉಳಿಯುವುದು ಜನರ ಕೈಲಿರುವ ಮಂತ್ರದಂಡ ಆಧರಿಸಿರುವ ಭವಿಷ್ಯ. ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ ಎಂಬಂತೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಕೆಲಸವನ್ನು ಮಾಡಬೇಕು, ಫಲಾಫಲಕ್ಕೆ ಜನತಾ ಪರಮೇಶ್ವರನ ಆಶೀರ್ವಾದ ಬೇಡಬೇಕು. ಇದಕ್ಕೆಂದೇ ಅವರೆಲ್ಲರೂ “ಅಮ್ಮಾ-ತಾಯಿ, ಅಪ್ಪಾ- ಅಣ್ಣಾ” ಎಂದು ಮತ ಭಿಕ್ಷೆ ಕೋರಿ ಬೀದಿಗೆ ಇಳಿದಿದ್ದಾರೆ. ಖರ್ಗೆಯವರೂ ಆ ಸಾಲಿನಲ್ಲಿ ಭಿಕ್ಷಾಪಾತ್ರೆ ಹಿಡಿದು ಸಾಗಿದ್ದಾರೆ. “ಭಿಕ್ಷುಕರ” ಆ ಸಾಲನ್ನು ಒಮ್ಮೆ ಕಣ್ಮುಚ್ಚಿ ಧ್ಯಾನಿಸಿ ಕಲ್ಪಿಸಿಕೊಳ್ಳಿ, ಪ್ರಧಾನಿ ನರೇಂದ್ರ ಮೋದಿ, ಅವರ ಆಪ್ತ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್‍ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಖರ್ಗೆ, ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್… ಎಷ್ಟೊಂದು ಜನ, ಎಷ್ಟೊಂದು ಸೊಬಗು. ಏನು ಚಂದ, ಏನು ಅಂದ ಎನ್ನಬಹುದಾದ ಮೆರವಣಿಗೆ. ಗುಜರಾತ್, ಹಿಮಚಲ ಪ್ರದೇಶದ ಬೀದಿಬೀದಿಗಳಲ್ಲಿ ನಿಂತು ನೋಡುವ ಜನರಿಗೆ ಪುಕಟ್ ಮತ್ತು ಸಖತ್ ಮನರಂಜನೆ.

ಎಐಸಿಸಿ ಕಚೇರಿಯಲ್ಲಿ ಕುರ್ಚಿ ಹಿಡಿದಿರುವ ಖರ್ಗೆಯವರ ಕೈಗೆ ಇನ್ನೂ ಪಕ್ಷದ ಸರ್ವತಂತ್ರ ಸ್ವಾತಂತ್ರ್ಯ ಎನ್ನಬಹುದಾದ ಯಾವುದೂ ಕೈಗೆ ಎಟುಕಿಲ್ಲ. ಏಐಸಿಸಿ ಅಧ್ಯಕ್ಷ ಸ್ಥಾನಕ್ಕೆ (ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ತ್ರಯರ ಪ್ರತಿನಿಧಿ ಎಂದು ಓದಿಕೊಳ್ಳಿ) ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ಖರ್ಗೆ ವಿರುದ್ಧ ಕಣಕ್ಕೆ ಇಳಿಯುವ ದಾಷ್ಟ್ರ್ಯ ತೋರಿ ಸೋತ ತಿರುವನಂತಪುರ ಲೋಕಸಭಾ ಸದಸ್ಯ ಶಶಿ ತರೂರನ್ನು ಮೂಲೆಗುಂಪು ಮಾಡುವ ವ್ಯವಸ್ಥಿತ ಯತ್ನವೊಂದು ಇದೀಗ ಕೇರಳ ಪ್ರದೇಶ ಕಾಂಗ್ರೆಸ್‍ನಲ್ಲಿ ಶುರುವಾಗಿದ್ದು ಖರ್ಗೆಯವರು ಈ ಬೆಳವಣಿಗೆಗೆ ಪ್ರತಿಕ್ರಿಯಿಸದೆ ಮೌನ ಪ್ರೇಕ್ಷಕರಾಗಿದ್ದಾರೆಂಬ ಸುದ್ದಿ ದಕ್ಷಿಣ ತುದಿಯ ಕೇರಳದಿಂದ ಬರುತ್ತಿದೆ.

“ಸಂಘ ಪರಿವಾರ: ಜಾತ್ಯತೀತ ತತ್ವಕ್ಕೆ ಎದುರಾಗಿರುವ ಸವಾಲುಗಳು” ಕುರಿತ ವಿಚಾರ ಸಂಕಿರಣವೊಂದು ಕೋಯಿಕೋಡ್‍ನಲ್ಲಿ ಏರ್ಪಾಡಾಗಿತ್ತು. ಇದನ್ನು ಸಂಘಟಿಸಿದ್ದು ಕೇರಳ ಯುವ ಕಾಂಗ್ರೆಸ್. ಮುಖ್ಯ ಭಾಷಣಕಾರ ಶಶಿ ತರೂರ್. ಸ್ಪಷ್ಟವಾಗದ ಕಾರಣಕ್ಕೆ ಕಾರ್ಯಕ್ರಮ ಏಕಾಏಕಿ ರದ್ದಾಯಿತು. ಅತ್ತ ಭಾರತ ಜೋಡೋ ಯಾತ್ರೆಯಲ್ಲಿ ಸಂಘ ಪರಿವಾರದ ವಿಭಜಕ ರಾಜಕೀಯವನ್ನೇ ಗುರಿಯಾಗಿಸಿಕೊಂಡು ರಾಹುಲ್ ಗಾಂಧಿ ಟೀಕಾ ಪ್ರಹಾರ ನಡೆಸುತ್ತಿದ್ದರೆ ಇತ್ತ ಕೇರಳದಲ್ಲಿ ಅದೇ ವಿಚಾರದಲ್ಲಿ ಮಾತಾಡಬೇಕಿದ್ದ ಶಶಿ ತರೂರರ ಬಾಯಿನ್ನು ಮುಚ್ಚಿಸುವ ಯತ್ನ ಯಶಸ್ವಿಯಾಯಿತು. “ನನ್ನನ್ನು ಮೂಲೆಗುಂಪು ಮಾಡುವ ಇಚ್ಛೆ ಕೆಲವರಲ್ಲಿ ಇರುವಂತಿದೆ” ಎಂದಿರುವ ತರೂರ್ ತಮ್ಮ ಕಾರ್ಯಕ್ರಮಕ್ಕೆ ತಡೆಯೊಡ್ಡಿರುವ ಶಕ್ತಿಗಳನ್ನು ವೈಚಾರಿಕ ನೆಲೆಯಲ್ಲಿ ಎದುರಿಸುವುದಾಗಿ ಹೇಳಿದ್ದಾರೆ.

ಪಕ್ಷದ ಹಿರಿತಲೆಗಳ ಅಪೇಕ್ಷೆಗೆ ವಿರುದ್ಧವಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರೂರ್ ಸ್ಪರ್ಧಿಸಿದಾಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಣಯವೊಂದನ್ನು ಅಂಗೀಕರಿಸಿ ತರೂರ್ ವಿರುದ್ಧ ಖರ್ಗೆಯವರಿಗೆ ಬೆಂಬಲ ಸೂಚಿಸಿತ್ತು. ತನ್ನದೇ ರಾಜ್ಯದ ತನ್ನದೇ ಪಕ್ಷದ ಎಂಪಿ ಜೊತೆ ಕೆಪಿಸಿಸಿ ನಿಲ್ಲಲಿಲ್ಲ. ಅಂದು ತೆಗೆದುಕೊಂಡ ಆ ನಿರ್ಣಯ ಒಂದು ಆಕಸ್ಮಿಕವಲ್ಲ ಎನ್ನುವುದಕ್ಕೆ ಸಂಘ ಪರಿವಾರದ ಒಳ ರಾಜಕೀಯವನ್ನು ಅನಾವರಣಗೊಳಿಸುವ ವಿಚಾರ ಸಂಕಿರಣ ರದ್ದಾಗುವಂತೆ ಮಾಡಿರುವ ಕಾಂಗ್ರೆಸ್‍ನ ಒಳ ರಾಜಕೀಯ ಒಂದು ನಿದರ್ಶನ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

ಕೇರಳದಲ್ಲಿ ಒಮ್ಮೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಸಿಪಿಎಂ ನೇತೃತ್ವದ ಎಲ್‍ಡಿಎಫ್ ಅಧಿಕಾರಕ್ಕೆ. ಈ ಪರಂಪರೆಯ ಕೊಂಡಿ ಕಳೆದ ಚುನಾವಣೆಯಲ್ಲಿ ಕಳಚಿಹೋಯಿತು. ಸತತ ಎರಡನೇ ಬಾರಿಗೆ ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್ ಸರ್ಕಾರ ಬಂದು ಕಾಂಗ್ರೆಸ್ ಕಂಗಾಲಾಗುವಂತಾಯಿತು. ರಾಹುಲ್ ಗಾಂಧಿ ಅದೇ ಕೇರಳದ ವೈನಾಡ್ ಲೋಕಸಭಾ ಸದಸ್ಯ. ಅತ್ಯಂತ ಪ್ರಭಾವಶಾಲಿಯಾದ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆ ಇರುವುದು ಕೇರಳದ ರಾಜ್ಯಸಭಾ ಸದಸ್ಯ ಕೆ.ಸಿ. ವೇಣುಗೋಪಾಲ್ ಕೈಯಲ್ಲಿ. ಇದ್ಯಾವುದೂ ವಿಧಾನ ಸಭಾ ಚುನಾವಣೆಯಲ್ಲಿ ಕೆಲಸಕ್ಕೆ ಬರಲಿಲ್ಲ. ಹಾಗಂತ ಆಟ ಮುಗಿದಿಲ್ಲ.

ಇನ್ನು ಎರಡು ವರ್ಷದಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆ ಗೆದ್ದು ಮುಖ್ಯಮಂತ್ರಿಯಾಗುವ ಕನಸನ್ನು ಹೆಣೆಯುತ್ತಿರುವ “ಆರೋಪ” ಶಶಿ ತರೂರರ ಮೇಲಿದೆ. ಅವರು ಕೇರಳ ರಾಜ್ಯದ ಅಲ್ಲಲ್ಲಿ ಪ್ರವಾಸ ಮಾಡಿ ಜನರ ನಾಡಿಮಿಡಿತ ಅರಿಯುವ ಕೆಲಸ ಮಾಡುತ್ತಿರುವುದು ಸಿಎಂ ತಾನಾಗಬೇಕೆಂಬ ಉದ್ದೇಶದಿಂದ ಮಾತ್ರ ಎನ್ನುವುದು ಅಂಬೋಣ. “ಭವಿಷ್ಯದ ಪ್ರಧಾನಿ” ಎಂದು ಪಕ್ಷದ ಅನೇಕರು ಭಾವಿಸಿರುವ ರಾಹುಲ್ ಗಾಂಧಿಯವರ ಬುದ್ಧಿಭಾವವನ್ನೆಲ್ಲ ತಮ್ಮಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡಿರುವ ಕೆ.ಸಿ.ವೇಣುಗೋಪಾಲರೂ ಕೇರಳ ಸಿಎಂ ಕುರ್ಚಿಯ ಮೇಲೆ ಕಣ್ಣಿರಿಸಿದ್ದಾರೆ. ಈ ಇಬ್ಬರ ನಡುವೆ ನಡೆದಿರುವ ಪೈಪೋಟಿ ಖರ್ಗೆಯವರ ತಲೆನೋವಿಗೆ ಸಾಕುಸಾಕೆನಿಸುವಷ್ಟು ಕಿರಿಕಿರಿ ತಂದಿದೆ.

ಇದಕ್ಕೆ ಸಮಸಮವಾದ ಕಿರಿಕಿರಿಗೆ ಇನ್ನೊಂದು ಉದಾಹರಣೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣ ಗುದಮುರಗಿ. ಅದೇ ರೀತಿ ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಹಾಗೂ ಕಾಂಗ್ರೆಸ್ ಭಿನ್ನಮತೀಯ ಬಣದ ನಾಯಕ ಸಚಿನ್ ಪೈಲಟ್ ನಡುವಣ ಶೀತಲ ಸಮರ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಆದರೆ ಅದರೊಳಗೆ ಬಗೆಹರಿಯದೆ ಮುಂದುವರಿಸಿರುವ ಗುಂಪುಗಾರಿಕೆ ಖರ್ಗೆಯವರಿಗೆ ತಲೆ ಬೇನೆ ತಂದಿದೆ. ಸಿಎಂ ಗೆಹ್ಲೋಟ್ ಮತ್ತು ಭಿನ್ನಮತೀಯ ಶಾಸಕ ಗುಂಪಿನ ನಾಯಕ ಸಚಿನ್ ನಡುವಣ ನಿರಂತರ “ಸಮರ” ಯಾರೆಲ್ಲ ತಿಪ್ಪರಲಾಗ ಹಾಕಿದರೂ ನಿಲ್ಲುತ್ತಿಲ್ಲ. ರಾಜಸ್ಥಾನದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್, ಎಐಸಿಸಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಜೊತೆ ಸೇರಿಕೊಂಡು ಹೈಕಮಾಂಡ್ ಆದೇಶ ಉಲ್ಲಂಘಿಸಿ ಅಶಿಸ್ತಿನ ಪ್ರತೀಕವಾಗಿರುವ ಕೆಲವು ಶಾಸಕರ ವಿರುದ್ಧ ಶಿಸ್ತಿನ ಕ್ರಮಕ್ಕೆ ತಾವು ಮಾಡಿರುವ ಶಿಫಾರಸನ್ನು ಪಕ್ಷದ ನಾಯಕತ್ವ ಅಲಕ್ಷಿಸಿದೆ ಎಂಬುದು ಅವರ ಕೊರಗು. ತಮ್ಮ ಹಿರಿತನಕ್ಕೆ, ಪಕ್ಷ ನೀಡಿದ ಜವಾಬ್ದಾರಿಗೆ ಏನು ಬೆಲೆ ಎನ್ನುವುದು ಅವರ ಪ್ರಶ್ನೆ. ಅವರಿತ್ತ ರಾಜೀನಾಮೆಯ ಕಾರಣ ಖರ್ಗೆಯವರಿಗೆ ಗೊತ್ತಿದೆ. ಮುಂದ?

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಡಿಲವಾಗುತ್ತಿರುವ ರಾಜ್ಯ-ಕೇಂದ್ರ ಸಂಬಂಧ: ಜ್ವಾಲಾಮುಖಿ ಸ್ಫೋಟ?

ಅಶೋಕ್ ಗೆಹ್ಲೋಟರನ್ನು ಸಿಎಂ ಪಟ್ಟದಿಂದ ಕೆಳಕ್ಕಿಳಿಸಿ ತಾನು ಕುರ್ಚಿ ಏರಲು ಬಯಸಿರುವ ಸಚಿನ್ ಪೈಲಟ್‍ಗೆ “ಬಾಯಿ ಮುಚ್ಚಿಕೊಂಡು ಬಿದ್ದಿರಿ” ಎನ್ನುವ ಅಧಿಕಾರ ಖರ್ಗೆ ಅವರಲ್ಲಿದೆ. ಆದರೆ ಅದಕ್ಕೆ ಬೇಕಾದ ಧೈರ್ಯ ಇದ್ದಂತಿಲ್ಲ. ಏಕೆಂದರೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಆಪ್ತಮಿತ್ರ ಸಚಿನ್ ಪೈಲಟ್. ಅಶೋಕ್ ಗೆಹ್ಲೋಟ್ ಹೈಕಮಾಂಡ್ ಆದೇಶದಂತೆ ಸಿಎಂ ಪದವಿಗೆ ರಾಜೀನಾಮೆ ಕೊಟ್ಟು ಎಐಸಿಸಿ ಅಧ್ಯಕ್ಷರಾಗುವುದಕ್ಕೆ ಒಪ್ಪಲಿಲ್ಲ. ಅವರು ಅತ್ತ ಹೋಗಿದ್ದರೆ ಇತ್ತ ಸಚಿನ್ ಕನಸು ಅನಾಯಾಸವಾಗಿ ನನಸಾಗುತ್ತಿತ್ತು. ಅಶಿಸ್ತಿನ ಮಾತನ್ನು ಗಂಭೀರವಾಗಿ ತೆಗೆದುಕೊಂಡರೆ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಹೀಗೆ ಹಲವರ ತಲೆದಂಡ ಪಡೆಯಲು ಅವರು ಮುಂದಾಗಬೇಕು. ಖರ್ಗೆಯವರ ಕಷ್ಟ ಅದು. ಶಿಸ್ತಿನ ಕ್ರಮವನ್ನು ಯಾರ್ಯಾರ ವಿರುದ್ಧ ಎಂದು ಅವರು ಜರುಗಿಸುತ್ತಾರೆ?

ಕರ್ನಾಟಕ ಕಾಂಗ್ರೆಸ್‍ನದು ಚಿತ್ರಾನ್ನದ ಸ್ಥಿತಿ. ಇಲ್ಲಿ ಜನ ಓಟು ಹಾಕಲು ತಯಾರಾಗಿದ್ದಾರೆ. ಅದನ್ನು ಪಡೆಯುವ ಸತ್ಪಾತ್ರರು ಯಾರೆಂಬ ಗೊಂದಲ ಮಾತ್ರ ಬಗೆಹರಿಯುತ್ತಿಲ್ಲ. ಶತಾಯಗತಾಯ ಚುನಾವಣೆ ಗೆಲ್ಲುವ ಛಲದಲ್ಲಿ ಪಕ್ಷವಿದೆ. ಆದರೆ…? ಒಂದಿಷ್ಟು ಅನುಮಾನ, ಗೊಂದಲ ಮೂಡಿದ್ದು ಅದನ್ನೆಲ್ಲ ಖರ್ಗೆಯವರು ಬಗೆಹರಿಸಬೇಕಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಒಂದಿಷ್ಟು ಕಸರತ್ತು ನಡೆಸಿದ್ದಾರೆ. ಚುನಾವಣೆಗೆ ಅಭ್ಯರ್ಥಿಗಳಾಗ ಬಯಸುವ ಯಾರೇ ಆಗಿರಲಿ ಅವರು ಅರ್ಜಿ ಸಲ್ಲಿಸಬೇಕು, ಅದರೊಂದಿಗೆ ಐದು ಸಾವಿರ ರೂಪಾಯಿ ಕಟ್ಟಡ ಶುಲ್ಕ (ಕ್ಯಾಪಿಟೇಷನ್ ಫೀ!) ತೆರಬೇಕೆಂಬ ಡಿಕೆಶಿ ನಿರ್ಧಾರಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪೂರಕ ಪ್ರತಿಕ್ರಿಯೆ ಬಂದಿದೆ. ಈ ಬಾಬಿನಿಂದ ಇಪ್ಪತ್ತು ಕೋಟಿ ಸಂಗ್ರಹವಾಗಿದೆ ಎನ್ನುವುದು ಕೆಪಿಸಿಸಿ ಮೂಲಗಳ ವಿವರಣೆ. ಅಧ್ಯಕ್ಷರಾಗಿ ಶಿವಕುಮಾರ್ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ಕೆಪಿಸಿಸಿ 25-26 ಕೋಟಿ ಸಾಲದ ಭಾರದಲ್ಲಿತ್ತು ಎನ್ನಲಾಗಿದೆ. ಆ ಸಮಯದಲ್ಲಿ “ಆಪತ್ಬಾಂಧವ” ರೂಪವಾಗಿ ವಿಧಾನ ಪರಿಷತ್ ಚುನಾವಣೆ ಬಂದಿತ್ತು. ಸಾಲದ ಹೊರೆ ತಗ್ಗಿಸಲು “ಸಹಕರಿಸಿದವರಿಗೆ” ಟಿಕೆಟ್ ಕೊಡಲಾಯಿತೆಂಬ ಸುದ್ದಿ ಇದ್ದು ಅದನ್ನು ಕೆಪಿಸಿಸಿ ಅಲ್ಲಗಳೆದಿಲ್ಲ. ಆ ಸಾಲ ತೀರಿಸಿದ್ದು ಮತ್ತು ಈಗ ಕಟ್ಟಡ ಶುಲ್ಕವಾಗಿ ಇಪ್ಪತ್ತು ಕೋಟಿ ಸಂಗ್ರಹವಾಗಿರುವುದು ಪಕ್ಷದ ಸಂಪತ್ತಿನ ಚೇತರಿಕೆಯ ಒಂದು ಮುಖ. ಈ ಬಗೆಯ ಅರ್ಥ ಶಾಸ್ತ್ರವನ್ನು ಡಿಕೆಶಿಯವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಮರ್ಥರು ಆ ಪಕ್ಷದಲ್ಲಿ ಇನ್ನೊಬ್ಬರಿಲ್ಲ ಎನ್ನಬಹುದು. ಇದೆಲ್ಲ ಕಿರೀಟ ಡಿಕೆಶಿ ತಲೆ ಮೇಲಿದ್ದರೂ ಅವರ ಸಿಎಂ ಕನಸಿಗೆ ಕೊಳ್ಳಿ ಇಡುವ ಕೆಲಸವನ್ನು ಸಿದ್ದರಾಮಯ್ಯ ಪಾಳಯ ಮಾಡುತ್ತಿರುವುದು ಅವರ ನಿದ್ರೆಯನ್ನು ಹಾಳು ಮಾಡಿದೆ. ನಿದ್ರೆ ಬರದವರಿಗೆ ಕನಸೂ ದುರ್ಲಭ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಬಿಜೆಪಿ ಚುನಾವಣಾ ಜಯಕ್ಕೆ ʻತಾರಾಬಲʼ

ಸಿಎಂ ಸ್ಥಾನದ ಬಗ್ಗೆ ಮಾತಾಡಕೂಡದು ಎನ್ನುವುದು ಹೈಕಮಾಂಡ್ ಫತ್ವಾ. ಅದನ್ನು ಸಿದ್ದರಾಮಯ್ಯ ಪದೇ ಪದೇ ಉಲ್ಲಂಘಿಸುತ್ತ ತಮ್ಮ ಮನದಾಸೆಯನ್ನು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ಕೊಪ್ಪಳದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಜಿಲ್ಲೆಯ ಇಂತಿಂಥ ಕ್ಷೇತ್ರಗಳಿಂದ ಇಂತಿಂಥವರು ಸ್ಪರ್ಧಿಗಳಾಗಲಿದ್ದು ಅವರನ್ನು ಗೆಲ್ಲಿಸಿ ಕಳುಹಿಸಿಕೊಡಬೇಕು ಎಂಬ ಮನವಿ ಮಾಡಿದ್ದು ಡಿಕೆಶಿಯವರ ಹೊಸ ತಲೆನೋವು. ಸಿದ್ದರಾಮಯ್ಯ ಪ್ರಕಟಿಸಿದ ಹೆಸರುಗಳಲ್ಲಿ ಹಾಲಿ ಶಾಸಕರದು ಸಹಜವಾಗಿಯೇ ಇದೆ. ಆದರೆ ಐದು ವರ್ಷದ ಹಿಂದಿನ ಚುನಾವಣೆಯಲ್ಲಿ ಜನರಿಂದ ತಿರಸ್ಕೃತರಾದ ಅಭ್ಯರ್ಥಿಗಳೇ ಮತ್ತೆ ಕಣಕ್ಕೆ ಇಳಿಯಲಿದ್ದಾರೆಂಬ ಅವರ ಹೇಳಿಕೆ ಪಕ್ಷ ಹಾಕಿರುವ ಲಕ್ಷ್ಮಣ ರೇಖೆಯನ್ನು ಉಲ್ಲಂಘಿಸಿದಂತೆ ಎನ್ನುವುದು ಡಿಕೆಶಿ ಒಳಗುದಿಯನ್ನು ದುಪ್ಪಟ್ಟುಗೊಳಿಸಿರುವ ಬೆಳವಣಿಗೆ. ಸೋತವರಿಗೇ ಮತ್ತೆ ಟಿಕೆಟ್ ನೀಡುವ ಸಿದ್ದರಾಮಯ್ಯ ಹೇಳಿಕೆ ಇತರ ಕ್ಷೇತ್ರಗಳಲ್ಲೂ ಸೋತ ಕಾಂಗ್ರೆಸ್ಸಿಗರ ಬಳಿಗೆ ಕಾಳ್ಗಿಚ್ಚಿನಂತೆ ಹರಡಿದೆ. ಕೊಪ್ಪಳದ ಸೂತ್ರವನ್ನು ತಮ್ಮ ಕ್ಷೇತ್ರಕ್ಕೂ ಅನ್ವಯಿಸಬೇಕೆಂಬ ವರಾತ ಅವರಿಂದ ಹೆಚ್ಚುವುದಿಲ್ಲ ಎನ್ನಲು ಯಾವ ಭರವಸೆಯೂ ಇಲ್ಲ. ರಾಹುಲ್ ಗಾಂಧಿ ಸೇರಿದಂತೆ ಯಾರು ಏನೇ ಮಾಡಿದರೂ ಹೇಳಿದರೂ ಸಿದ್ದರಾಮಯ್ಯ ಮಾತ್ರ ಜಪ್ಪಯ್ಯ ಎನ್ನುತ್ತಿಲ್ಲ; ಅವರ ಬಾಯನ್ನು ಬಂದ್ ಮಾಡಲು ಆಗುತ್ತಿಲ್ಲ. ಖರ್ಗೆಯವರು ಈ ವಿಚಾರದಲ್ಲೂ ಮೌನ ತಾಳಿರುವುದು ಡಿಕೆಶಿ ಪಾಳಯದ ಸಂಕಟ ಹೆಚ್ಚಿಸಿರುವ ಬೆಳವಣಿಗೆ.

ಖರ್ಗೆಯವರದು ಈ ಐವತ್ತು ವರ್ಷದ್ದು ಒಂದು ಬಗೆಯ ಆರಾಮ ಖುರ್ಚಿ ರಾಜಕಾರಣ. ಕಲಬುರ್ಗಿಯಲ್ಲಿ ಅವರದೇ ದರ್ಬಾರು. ಕಲಬುರ್ಗಿ, ಹೈದರಾಬಾದ್, ಆ ಮೂಲಕ ಬೆಂಗಳೂರು ಇಲ್ಲವೇ ದೆಹಲಿಗೆ ಸೀಮಿತವಾಗಿದ್ದ ಅವರ ಓಡಾಟವೂ ಬದಲಾಗಬೇಕಿದೆ. ಮಾಡುತ್ತಿದ್ದ ರಾಜಕೀಯದ ಸ್ವರೂಪವೂ ಬದಲಾಗಬೇಕಿದೆ. ಎಐಸಿಸಿ ಅಧ್ಯಕ್ಷ ಸ್ಥಾನ ಹೊನ್ನ ಮುಳ್ಳಿನ ಸಿಂಹಾಸನ ಎನ್ನುವುದು ಖರ್ಗೆಯವರಿಗೆ ಈ ಎಲ್ಲ ಬೆಳವಣಿಗೆಗಳ ಕಾರಣವಾಗಿ ಗೊತ್ತಾಗುತ್ತಿದೆ. ಹಿಸಿದು ತಿನ್ನುವವರ ಮುಂದೆ ಹಸಿದು ನಿಂತವರನ್ನು ಕೇಳುವ ವ್ಯವಧಾನ ಯಾರಲ್ಲೂ ಇರೋಲ್ಲ ಎನ್ನುತ್ತಾರೆ ಬಲ್ಲವರು. ಪ್ರಸ್ತುತದ ರಾಜಕೀಯ ಹೇಳುತ್ತಿರುವುದು ಇದನ್ನೇ ಅಲ್ಲವೆ?

Exit mobile version