ಕರ್ನಾಟಕ ವಿಧಾನ ಸಭೆ ಚುನಾವಣಾ (karnataka assembly election) ಪೂರ್ವ ಆರೋಪದ ಸುರಿಮಳೆಯೊಂದಿಗೆ ತಣ್ಣಗಾಗುವುದೆಂದು ನಿರೀಕ್ಷಿಸಲಾಗಿದ್ದ ಲಂಚ ಋಷುವತ್ ಹಾವಳಿ (corruption) ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ತಿಂಗಳಲ್ಲಿ ಮತ್ತೆ ತನ್ನ ಕರಾಳ ಹೆಡೆ ಅಗಲಿಸಿ ಭುಸುಗುಡಲಾರಂಭಿಸಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಮೇ ತಿಂಗಳ 13ರವರೆಗೂ ಇದ್ದ ಬಿಜೆಪಿ ಸರ್ಕಾರ ಪ್ರತಿಶತ 40 ಕಮೀಷನ್ ಹೊಡೆಯುವ ಆರೋಪಕ್ಕೆ ಒಳಗಾಗಿತ್ತಾದರೆ ಈಗಿನ ಸರ್ಕಾರದಲ್ಲಿ (karnataka government) ಅದು ಬೇರೆ ಬೇರೆ ರೂಪ ಸ್ವರೂಪದಲ್ಲಿ ಪ್ರಕಟವಾಗತೊಡಗಿದೆ.
ಹೊಸ ಸರ್ಕಾರವೊಂದು ಬಂದ ಕೂಡಲೇ ಮೊದಲಿಗೆ ಕೈಗೆತ್ತಿಕೊಳ್ಳುವ ಕಾರ್ಯಕ್ರಮಗಳಲ್ಲಿ ವರ್ಗಾವಣೆ ಪ್ರಕ್ರಿಯೆಯೇ ಬಹಳ ಬಹಳ ಮುಖ್ಯವಾದುದು. ಮಂತ್ರಿ ಮಂಡಲದಲ್ಲಿ ಸ್ಥಾನಾವಕಾಶ ಸಿಕ್ಕ ಶಾಸಕರಿಗೆ ತಮ್ಮ ಇಲಾಖೆ ಅಧಿಕಾರಿ ಸಿಬ್ಬಂದಿಯ ವರ್ಗಾವಣೆ (tranfer) ಅಧಿಕಾರ ವರಲಕ್ಷ್ಮಿಯ ಕೃಪಾಶೀರ್ವಾದವೋ ಎಂಬಂತೆ ಬರುತ್ತದೆ. ಐಎಎಸ್, ಐಪಿಎಸ್, ಐಎಫ್‍ಎಸ್ ಅಧಿಕಾರಿಗಳು, ಚೀಫ್ ಎಂಜಿನಿಯರುಗಳೇ ಮೊದಲಾದ ಉನ್ನತ ದರ್ಜೆ ಅಧಿಕಾರಿಗಳನ್ನು ವರ್ಗ ಮಾಡುವ ಅಧಿಕಾರ ಮುಖ್ಯಮಂತ್ರಿಯ ಪರಮಾಧಿಕಾರವಾಗಿರುತ್ತದೆ. ಈ ಅಧಿಕಾರಿಗಳು ಸಿಎಂ ಮೇಲೆ ಯಾರು ಪ್ರಭಾವ ಬೀರುವ ಸಾಮರ್ಥ್ಯದವರು ಎಂಬ ಗುಟ್ಟನ್ನು ಪ್ರಮಾಣ ವಚನ ಸ್ವೀಕಾರವಾದ ಒಂದೆರಡು ದಿನಗಳಲ್ಲೇ ಪತ್ತೆ ಹಚ್ಚಿ ಕಾರ್ಯೋನ್ಮುಖರಾಗುತ್ತಾರೆ. ಅದು ಯಾವ ಮಟ್ಟದಲ್ಲೂ ನಡೆಯಬಹುದು. ಈ ಮಾತಿಗೆ ಇಲ್ಲಿ ಒಂದೆರಡು ಪ್ಯಾರಾದ ನಿದರ್ಶನವಿದೆ. ಓದಿ:
ಇದು 80-90 ರ ದಶಕದ ಮಾತು. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ. ವರ್ಗಾವಣೆಯೂ ಒಳಗೊಂಡು ಸಂಪೂರ್ಣ ಆಡಳಿತ ರಾಜ್ಯಪಾಲರ ಕೈಯಲ್ಲಿ. ಅವರಿಗೆ ಬೇಕಾದವರನ್ನು ಹಿಡಿದರೆ ವರ್ಗ ತಮ್ಮಿಚ್ಚೆಯಂತೆ ಇರುತ್ತೆದೆಂಬುದು ಆ ಉನ್ನತ ಶ್ರೇಣಿ ಅಧಿಕಾರಿಗಳ ನಂಬಿಕೆಯಾಗಿತ್ತು. ಆ ರಾಜ್ಯಪಾಲರಿಗೆ ಬಹಳ ಬೇಕಾಗಿದ್ದ ರಾಜಭವನದ ಸಿಬ್ಬಂದಿ ಎಂದರೆ ಅವರ ಪರಮಾಯಿಶಿ ಊಟ ತಿಂಡಿ ಮಾಡಿ ಅಕ್ಕರೆಯಿಂದಲೂ ಕಕ್ಕುಲಾತಿಯಿಂದಲೂ ಬಡಿಸುತ್ತಿದ್ದ ಅಡುಗೆ ಭಟ್ಟ. ಬಾಣಸಿಗನ ನಳಪಾಕಕ್ಕೆ ಬೇಹೋಷ್ ಆಗಿದ್ದ ರಾಜ್ಯಪಾಲರು ಆತ ಯಾವುದೇ ವರ್ಗದ ಪ್ರಸ್ತಾಪ ಮುಂದಿಟ್ಟರೂ ದೂಸರಾ ಮಾತಾಡದೆ ರುಜು ಹಾಕುತ್ತಿದ್ದರು. ಆ ಭಟ್ಟನ ಮನೆ ರಾಜಭವನಕ್ಕೆ ಅನತಿ ದೂರದಲ್ಲಿದ್ದ ಕ್ವಾರ್ಟರ್ಸ್. ಅದೇನೂ ಬಂಗಲೆಯಲ್ಲ. ಆದರೆ ಆ ಮನೆಯ ಮುಂದೆ ಬೆಳಗಿನ ಝಾವ 4-5ಕ್ಕೆಲ್ಲ ಉನ್ನತ ಅಧಿಕಾರಿಗಳು ತಮ್ಮ ಖಾಸಗಿ ಕಾರಿನಲ್ಲಿ ಬಂದು ತಮ್ಮ ಕೋರಿಕೆ ಮುಂದಿಟ್ಟು ಅಡುಗೆ ಭಟ್ಟನನ್ನು ಖುಷಿಪಡಿಸಿ ತಾವೂ ಖುಷಿ ಆಗುತ್ತಿದ್ದರು. ಇದು ಒಂದು ಉದಾಹರಣೆ. ರಾಜ್ಯಪಾಲರ ಆಡಳಿತಾವಧಿಯಲ್ಲಿ ಅಡುಗೆ ಭಟ್ಟನಿಗೆ ಎಂಥೆಂಥ ಅಧಿಕಾರಿಗಳು ಕೈಮುಗಿದು ಅಹವಾಲು ಹೇಳಿಕೊಳ್ಳುತ್ತಿದ್ದರೆನ್ನುವುದು ಆ ದೃಶ್ಯವನ್ನು ಕಣ್ಣು ತುಂಬಿಕೊಂಡವರ ಅಂಬೋಣ.
ವರ್ಗಾವಣೆ ದಂಧೆಯ ಇನ್ನೊಂದು ನಿದರ್ಶನವನ್ನೂ ಗಮನಿಸಿ. ಇದು 90ರ ದಶಕದ ಮಾತು. ಆಗಿನ ನೀರಾವರಿ ಸಚಿವರ ಆಪ್ತ ಸಹಾಯಕ ಬಿಡುವಿಲ್ಲದೆ ವರ್ಗಾವಣೆ ಪಟ್ಟಿ ಸಿದ್ದ ಪಡಿಸಿದ್ದರು. ನಂತರ ಬಹಳ ಗುಟ್ಟಿನ ಸಂಗತಿ ಎಂಬಂತೆ ಸೂಪರಿಂಟೆಂಡೆಂಟ್, ಎಕ್ಸಿಕ್ಯುಟಿವ್, ಸಹಾಯಕ ಎಕ್ಸಿಕ್ಯುಟಿವ್, ಜ್ಯೂನಿಯರ್ ಎಂಜಿನಿಯರುಗಳಿಗೆ ನಿಮ್ಮನ್ನು ಇಂಥ ಸ್ಥಳಕ್ಕೆ ಹಾಕಲು ಪಟ್ಟಿ ತಯಾರಾಗಿದೆ ಎಂಬ ಮಾಹಿತಿಯನ್ನು ನಾನು ಹೇಳಿದೇಂತ ಯಾರಿಗೂ ಹೇಳಬೇಡಿರೆಂದು ರವಾನಿಸುತ್ತಿದ್ದರು. ಈ ಅಧಿಕಾರಿಗೆ ಸೂಚಿಸಿದ ಸ್ಥಳದಲ್ಲಿ ಆಗಲೇ ಇದ್ದ ಅಧಿಕಾರಿಗೂ ಯಾರಿಗೂ ಹೇಳಬೇಡಿರೆಂಬ ರಹಸ್ಯ ಮಾಹಿತಿ ರವಾನೆ ಆಗುತ್ತಿತ್ತು. ಆ ಅಧಿಕಾರಿಗಳು ಪರಸ್ಪರ ಮಾತಾಡಿಕೊಂಡು ಸಚಿವರನ್ನು ತಾವಿರುವ ಸ್ಥಳದಲ್ಲೇ ಮುಂದುವರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು. ಸಚಿವರು ಕರುಣಾಳು, ವೃಥಾ ತೊಂದರೆಯನ್ನು ಯಾರಿಗೂ ಕೊಡುವವರಲ್ಲ ಎಂಬ ಹೆಸರು ಸಂಪಾದಿಸಿದರು. ಅದಕ್ಕೆ ಫಲಾನುಭವಿ ಅಧಿಕಾರಿಗಳು ಕಾರಣರಾದರು.
ಈಗ ಹೊಸ ಸರ್ಕಾರ ಬಂದಿದೆ. ಹೊಸದರಲ್ಲಿ ಎತ್ತೆತ್ತಿ ಒಗೆದರು ಎಂಬಂತೆ ಮುುುಖ್ಯಮಂತ್ರಿ ಮತ್ತಿತರ ಸಚಿವರ ಕಾರ್ಯಾಲಯಗಳಲ್ಲಿ ಜೇನುಗೂಡಿನ ಚಟುವಟಿಕೆ ಸಾಗಿದೆ. ಸಿಎಂ ಮತ್ತು ಸಚಿವರ ಸಹಾಯಕರಿಗೆ ತಮ್ಮೊಡೆಯನ ಇಚ್ಛೆ ಪ್ರಕಾರ ವರ್ಗಾವಣೆ ಪಟ್ಟಿ ಸಿದ್ಧಪಡಿಸುವುದೇ ದಿನದ ಮುಖ್ಯ ಕೆಲಸ. ತಮ್ಮ ವರ್ಗ ಖಚಿತ ಎಂಬ ಮಾಹಿತಿ ಪಡೆಯುವ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ವಶೀಲಿ ಪ್ರಭಾವ ಬಳಸಿ ಇರುವ ಸ್ಥಳದಲ್ಲೇ ಮುಂದುವರಿಯುವ, ವರ್ಗ ಆಗುವುದೇ ಹೌದಾದರೆ ತಮ್ಮಿಚ್ಚೆಯ ಸ್ಥಳಕ್ಕೆ ಹಾಕಿಸಿಕೊಳ್ಳುವ ಕೆಲಸ ಮಾಡುತ್ತಾರೆ. ವಿಧಾನ ಸೌಧದಲ್ಲಿ ನಡೆಯುವ ಇದು ಪುಕ್ಕಟೆ ಆಗುವ ಕೆಲಸವಲ್ಲ. ಸಿದ್ದರಾಮಯ್ಯ (Siddaramaih) ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ತರುವಾಯದಲ್ಲಿ ವರ್ಗಾವಣೆ ಎನ್ನುವುದು ದಂಧೆಯಾಗಿದೆ ಎಂಬ ಆರೋಪ ಆರಂಭದ ದಿನಗಳಲ್ಲೇ ಮಾರ್ದನಿಸಿರುವುದು ಉತ್ತಮ ಬೆಳವಣಿಗೆಯಂತೂ ಅಲ್ಲವೇ ಅಲ್ಲ. ಆ ಸರ್ಕಾರವೆಂಬ ಬಾಣಲೆಯಲ್ಲಿ ಬೇಯುತ್ತಿದ್ದ ಮತದಾರರು ಈ ಸರ್ಕಾರವೆಂಬ ಬೆಂಕಿಗೇ ಬಿದ್ದಂತಾಗಿರುವುದು ವರ್ತಮಾನ ಕರ್ನಾಟಕದ ವಿಪರ್ಯಾಸಗಳಲ್ಲಿ ಬಹಳ ಮುಖ್ಯವಾದುದು.
ಬೆಂಗಳೂರು ಅಭಿವೃದ್ಧಿಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ಕಾಮಗಾರಿಗಳ ಗುತ್ತಿಗೆದಾರರು ಸಚಿವರು ಶೇ.15 ಕಮೀಷನ್ ಕೇಳುತ್ತಿದ್ದಾರೆಂದು ನೇರಾ ನೇರ ಆರೋಪ ಮಾಡಿದ್ದಾರೆ. ರಾಜ್ಯಪಾಲರಿಗೂ ಈ ಸಂಬಂಧ ಮನವಿ ಮಾಡಿರುವ ಸಂಘದ ಪದಾಧಿಕಾರಿಗಳು ತಾವು ಮಾಡಿರುವ ಕೆಲಸಕ್ಕೆ ಹಣ ಮಂಜೂರು ಮಾಡಿಸಿಕೊಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಗೋಗರೆದಿದ್ದಾರೆ. ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲೂ ಈ ಸಂಘ ಇದೇ ಮನವಿ ಮಾಡಿ ನೆರವಿಗೆ ಬರುವಂತೆ ಕೋರಿಕೊಂಡಿದೆ.
ಅಖಿಲ ಕರ್ನಾಟಕ ಗುತ್ತಿಗೆದಾರರ ಸಂಘ ಚುನಾವಣೆಗೆ ಮುನ್ನವಿದ್ದ ಸರ್ಕಾರದ ವಿರುದ್ಧ ಶೇ.40 ಕಮೀಷನ್‍ಗೆ ಆಗ್ರಹಿಸಿರುವ ಆರೋಪ ಮಾಡಿತ್ತು. ಸಂಘದ ಅಧ್ಯಕ್ಷ ಕೆಂಪಣ್ಣ, ಯಾವುದೇ ದಾಖಲೆ ಇಲ್ಲದೆ ಅಂದಿನ ಸಚಿವ ಮುನಿರತ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ, ಮುನಿರತ್ನ ಹೂಡಿದ ಮಾನನಷ್ಟ ಮೊಕದ್ದಮೆ ಕಾರಣವಾಗಿ ಜೈಲಿಗೂ ಹೋಗಿ ಬಂದರು. ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿಯವರಿಗೂ ದೂರು ಸಲ್ಲಿಸಿದರೇ ಶಿವಾಯಿ ಯಾವುದೇ ದಾಖಲೆಗಳನ್ನು ಪಿಎಂ ಕಚೇರಿಗೆ ಸಲ್ಲಿಸಲಿಲ್ಲ. ಕರ್ನಾಟಕ ಲೋಕಾಯುಕ್ತ (karnataka lokayukta) ಇಂಥ ಆರೋಪಗಳ ತನಿಖೆಗೆ ಹೇಳಿಮಾಡಿಸಿದ ಸಂಸ್ಥೆ. ಅಷ್ಟೆಲ್ಲ ಆರೋಪ ಮಾಡಿರುವ ಕೆಂಪಣ್ಣ, ಲೋಕಾಯುಕ್ತದ ಕದ ತಟ್ಟಲಿಲ್ಲ. ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಕೆಂಪಣ್ಣನವರನ್ನು ಛೂ ಬಿಟ್ಟ ಆರೋಪ ಆಗಿನ ವಿರೋಧ ಪಕ್ಷದ ಕೆಲವು ನಾಯಕರ ವಿರುದ್ಧ ಕೇಳಿಬಂದಿತ್ತು. ಇದೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಕಮೀಷನ್ ಹೊಡೆಯೋ ಆರೋಪದ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದು ತಮಗೆ ಗೊತ್ತು ಎಂದು ಡಿಕೆಶಿ ಹೇಳುತ್ತಿದ್ದಾರೆ.
ಡಿಕೆಶಿಯವರು ಬಹುವಾಗಿ ನಡೆದುಕೊಳ್ಳುವ ನೊಣವಿನಕೆರೆ ಗಂಗಾಧರ ಅಜ್ಜ ಅವರ ಮಠ ಧಾರ್ಮಿಕವಲ್ಲದ ಕಾರಣಕ್ಕೆ ಮುಂಚೂಣಿಗೆ ಬಂದಿದೆ. ಸಚಿವರಾಗಿ ಡಿಕೆಶಿಯವರು ಇದೇ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದೀಗ ಬಿಬಿಎಂಪಿ ಗುತ್ತಿಗೆದಾರರ ಸಂಘ ಅಜ್ಜನ ಸಮ್ಮುಖ ಡಿಕೆಶಿ ಕಮೀಷನ್ ಕೇಳಿದ್ದು ಹೌದೆಂದು ಪ್ರಮಾಣ ಮಾಡಲು ಸಿದ್ಧವಾಗಿದ್ದು ತಾವು ಶೇ.15 ಕಮೀಷನ್‍ಗೆ ಒತ್ತಾಯಿಸಿಲ್ಲ ಎಂದು ಡಿಸಿಎಂ ಪ್ರಮಾಣ ಮಾಡಲಿ ಎಂದಿದೆ. ಈ ಮಾತಿಗೆ ಪ್ರತಿಕ್ರಿಯಿಸಿರುವ ಡಿಕೆಶಿ (DK Shivakumar) ಆಣೆಪ್ರಮಾಣಕ್ಕೆ ತಾವು ತಯಾರಿಲ್ಲ ಎನ್ನುವ ಮೂಲಕ ಇಂಥದ್ದರಲ್ಲಿ ನಂಬಿಕೆ ಇಟ್ಟಿರುವ ಜನರ ಅನುಮಾನಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ತಾವು ಕಮೀಷನ್ ಕೇಳಿಲ್ಲ ಎಂದಾದರೆ ಅಜ್ಜಯ್ಯನ ಮುಂದೆ ಪ್ರಮಾಣ ಮಾಡಲು ಡಿಕೆಶಿಯವರಿಗೆ ಇರುವ ಸಮಸ್ಯೆಯಾದರೂ ಏನೆಂಬ ಅವರ ಪ್ರಶ್ನೆ ಉತ್ತರ ಹುಡುಕುತ್ತ ಅಂಡಲೆಯುತ್ತಿದೆ. ಡಿಕೆಶಿ ರಾಜಕೀಯ ನಡವಳಿಕೆ, ನಡೆ-ನುಡಿ ವಿಚಾರದಲ್ಲಿ ವಿಶ್ವಾಸಾರ್ಹತೆಯನ್ನು ಗಣನೀಯವಾಗಿ ಕುಗ್ಗಿಸಿರುವ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಗೊಳಗೇ ಸಂತೋಷಪಡುತ್ತಿರುವ ಬೆಳವಣಿಗೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಇರುವೆ ಬಿಟ್ಟುಕೊಂಡ್ರಾ… ಆರಗ ಜ್ಞಾನೇಂದ್ರ?
ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಅಧಿಕಾರಿಗಳಿಂದ ವರ್ಗಾವಣೆ ಕುರಿತಂತೆ ಲಂಚದ ಆರೋಪ ಮೊದಲಿಗೆ ಕೇಳಿಬಂದಿದ್ದು ಆ ಖಾತೆ ಸಚಿವ ಚೆಲುವರಾಯ ಸ್ವಾಮಿ ವಿರುದ್ಧ. ಹಿಂದೆ ಬೊಮ್ಮಾಯಿ (basavaraja bommai) ಸರ್ಕಾರದ ವಿರುದ್ಧ ಶೇ.40 ಕಮೀಷನ್ ಆರೋಪ ವ್ಯಾಪಕವಾಗಿದ್ದ ಸಮಯದಲ್ಲಿ “ಪೇಸಿಎಂ” ಎಂಬ ಪೋಸ್ಟರುಗಳನ್ನು ಕಾಂಗ್ರೆಸ್ ಕರ್ಯಕರ್ತರು ಗೋಡೆಗೋಡೆಗಳ ಮೇಲೆ ಅಂಟಿಸಿ ಸರ್ಕಾರದ ಮರ್ಯಾದೆಯನ್ನು ಗಣನೀಯವಾಗಿ ಕುಸಿಯುವಂತೆ ಮಾಡಿದ್ದರು. ಇದೀಗ ಬಿಜೆಪಿ ಅದೇ ರಾಗದಲ್ಲಿ ಉತ್ತರ ಕೊಡುವ ತಂತ್ರವಾಗಿ ಪೇಸಿಎಸ್ (ಪೇ ಚೆಲುವರಾಯಸ್ವಾಮಿ) ಎಂಬ ಪೋಸ್ಟರುಗಳನ್ನು ಅಂಟಿಸಿದೆ. ಇದರಿಂದ ಗೋಡೆ ಅಂದ ಹಾಳಾಗುತ್ತದೋ ಇಲ್ಲವೋ ಗೊತ್ತಿಲ್ಲ, ಸಿದ್ದರಾಮಯ್ಯ ಸರ್ಕಾರಕ್ಕೆ ಕರಿ ಬಣ್ಣ ಮೆತ್ತಿಕೊಳ್ಳುವುದು ದಿಟವೆನಿಸುತ್ತಿದೆ.
ಸ್ವಾತಂತ್ರ್ಯ ಬಂದ ಹೊಸದರಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದರಷ್ಟೇ ಅಲ್ಲ, ಭ್ರಷ್ಟಾಚಾರಿಗಳನ್ನು ರಸ್ತೆ ಬದಿಯ ದೀಪದ ಕಂಭಗಳಿಗೆ ನೇಣು ಹಾಕಬೇಕೆಂದು ಆಕ್ರೋಶದಲ್ಲಿ ಹೇಳಿದ್ದರು. ಅವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರಿಗಳು ಇದ್ದರಾದರೂ ಯಾರೊಬ್ಬರೂ ನೇಣು ಶಿಕ್ಷೆಗೆ ಒಳಗಾಗಲಿಲ್ಲ. ತಾವೇ ಘೋಷಿಸಿದ ಅತ್ಯುಗ್ರ ಕ್ರಮಕ್ಕೆ ನೆಹರೂಜಿ ಮುಂದಾಗಿದ್ದರೆ ತಮ್ಮದೇ ಪಕ್ಷದ ಎಷ್ಟು ಜನರಿಗೆ ಆ ಶಿಕ್ಷೆಯನ್ನು ವಿಧಿಸಬೇಕಾಗುತ್ತಿತ್ತೋ. ಮುಂದೆ ಇಂದಿರಾ ಗಾಂಧಿಯವರು ಪ್ರಧಾನಿಯಾಗುವ ಹೊತ್ತಿಗೆ ಭ್ರಷ್ಟಾಚಾರದ ನಿಯಂತ್ರಣ ಅರ್ಥಹೀನ ಕಸರತ್ತು ಎನಿಸಿತ್ತು. ಭ್ರಷ್ಟಾಚಾರ ಜಾಗತಿಕ ಸಮಸ್ಯೆ ಎಂದು ಹೇಳುವ ಮೂಲಕ ಭಾರತದಲ್ಲಿ ಅದರ ನಿವಾರಣೆ ಹಾಗಿರಲಿ ನಿಯಂತ್ರಣವೂ ಆಗದ ಮಾತೆಂಬ ನಿಲುವಿಗೆ ಇಂದಿರಾಜಿ ಬಂದ ತರುವಾಯದಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗುವುದು ಸಾಮಾಜಿಕವಾಗಿ ಅಸಹ್ಯದ ಬೆಳವಣಿಗೆಯಾಗಿ ಉಳಿಯಲಿಲ್ಲ. ಎಲ್ಲ ರಾಜಕಾರಣಿಗಳೂ ಭ್ರಷ್ಟಾಚಾರದ ವಿರುದ್ಧ ಮಾತಾಡುತ್ತಾರೆ; ಮಾತಾಡುವವವರೆಲ್ಲರೂ ಭ್ರಷ್ಟಾಚಾರಿಗಳೇ ಆಗಿರುತ್ತಾರೆಂಬ ತೀರ್ಮಾನಕ್ಕೆ ಜನ ಸಾಮಾನ್ಯರು ಬಂದಿದ್ದಾರೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಹೆಡೆ ತುಳಿದ ಹಾವಿನಂತಾಗಿರುವ ಬಿ.ಕೆ ಹರಿಪ್ರಸಾದ್ ರವಾನಿಸುತ್ತಿರುವ ಸಂದೇಶವೇನು?