Site icon Vistara News

ಮೊಗಸಾಲೆ ಅಂಕಣ: ಭದ್ರಾ ಮೇಲ್ದಂಡೆ: ರಾಜ್ಯದ ಮೊದಲ ಕೇಂದ್ರ ಯೋಜನೆ

bhadra river project

ದಶಕಗಳ ಕನಸೊಂದು ಇದೀಗ ನನಸಾಗುವ ಹಂತಕ್ಕೆ ಬಂದು ನಿಂತಿದೆ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯನ್ನು ಕೇಂದ್ರ ಸರ್ಕಾರದ ಯೋಜನೆಯಾಗಿ ಅನುಷ್ಠಾನಕ್ಕೆ ತರುವುದಕ್ಕೆ ಮೊನ್ನೆ ಬುಧವಾರ ಲೋಕಸಭೆಯಲ್ಲಿ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023-24ರ ಬಜೆಟ್‍ನಲ್ಲಿ ಪ್ರಸ್ತಾವ ಮಂಡಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಇದೇನೂ ಅಂಥ ಮಹತ್ವದ ಸುದ್ದಿ ಆಗಿರಲಾರದು. ಆದರೆ ಕರ್ನಾಟಕದ ಮಟ್ಟಿಗೆ ಈ ಮಾಹಿತಿ ಒಂದು ಮೈಲಿಗಲ್ಲು. ರಾಜ್ಯದಲ್ಲಿ ಕೇಂದ್ರ ಸರ್ಕಾರ ತನ್ನ ವೆಚ್ಚದಲ್ಲಿ ಜಾರಿಗೆ ತರಲಿರುವ ಮೊದಲ ಯೋಜನೆ ಇದಾಗಿದೆ ಎನ್ನುವುದು ವಿಶೇಷ. ಈ ಬಾರಿಯ ಬಜೆಟ್‍ನಲ್ಲಿ ಯೋಜನೆ ಅನುಷ್ಠಾನಕ್ಕೆ ಬೃಹತ್ ಎಂದು ಪರಿಗಣಿಸಬಹುದಾದ 5300 ಕೋಟಿ ಹಣವನ್ನು ಮೀಸಲಿಡಲಾಗಿದೆ.

ದಶಕಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತ ತೆವಳುತ್ತ ಸಾಗಿರುವುದು ನಾವೆಲ್ಲ ಬಲ್ಲ ಸಂಗತಿ. ದಾವಣಗೆರೆ ಇನ್ನೂ ಪ್ರತ್ಯೇಕ ಜಿಲ್ಲೆಯಾಗಿರದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ಕಾಲದಿಂದಲೂ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿದ್ದ ಅರವತ್ತರ ದಶಕದಿಂದಲೂ, ಇನ್ನೇನು ಜಾರಿಗೆ ಬಂದೇ ಬಿಟ್ಟಿತು ಎಂಬಂತೆ ಚುನಾವಣಾ ಪೂರ್ವದಲ್ಲಿ ಪ್ರಚಾರ ಪಡೆದ, ಚುನಾವಣೆ ಮುಗಿದ ಬಳಿಕ ಮರೆತುಹೋದ ನತದೃಷ್ಟ ಯೋಜನೆ ಇದು. ಇಂದಲ್ಲ ನಾಳೆ ತಮ್ಮ ಹೊಲಗದ್ದೆಗಳಿಗೆ ನೀರು ಹರಿದೀತೆಂದು ಯೋಜನೆಯ ಅಚ್ಚುಕಟ್ಟು ಪ್ರದೇಶದ ಜನ ಸಮುದಾಯ ಕನವರಿಸುತ್ತ ತಾವು ಕಾಣುತ್ತಿರುವ ಕನಸು ಮೊಮ್ಮಕ್ಕಳ ಕಾಲಕ್ಕಾದರೂ ನನಸಾದೀತೆಂಬ ಆಸೆಯನ್ನು ಇಟ್ಟುಕೊಂಡಿದ್ದಕ್ಕೆ ಕಾರಣ ರಾಜಕಾರಣ ನೀಡುತ್ತ ಬಂದ ಭರವಸೆ.

ಯೋಜನೆಯನ್ನು ಕೈಗೆತ್ತಿಕೊಳ್ಳುವ ಸುದ್ದಿ ಮೊದಲಿಗೆ ಬಂದಾಗ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಮುಳುಗಡೆ ಪುನರ್ವಸತಿ ಸಮಸ್ಯೆ ದೊಡ್ಡ ಆತಂಕ ಸೃಷ್ಟಿಸಿತ್ತು. ತುಂಗಾ ಮತ್ತು ಭದ್ರಾದಿಂದ ನೀರನ್ನು ಎತ್ತಿ ಹರಿಸುವ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ವಾದವೂ ಇತ್ತು. ತುಂಗಾ ಮತ್ತು ಭದ್ರಾ ನೀರಿನ ಪಾರಂಪರಿಕ ಫಲಾನುಭವಿಗಳು ಯೋಜನೆಯಿಂದ ತಮಗೆ ನೀರಿನ ಕೊರತೆ ಕಾಡೀತೆಂಬ ಆತಂಕದಲ್ಲಿ ವಿರೋಧ ಸೂಚಿಸಿದ್ದೂ ಆಯಿತು. ಈ ಎರಡು ನದಿಗಳಲ್ಲಿ ಲಭ್ಯವಿರುವ ವಾರ್ಷಿಕ ನೀರು ಎಷ್ಟು, ಅದರಲ್ಲಿ ಬಳಕೆಯಾಗದೆ ಹರಿದು ಹೋಗಿ ರಾಜ್ಯದ ಪಾಲಿಗೆ ನಷ್ಟವಾಗುವ ನೀರೆಷ್ಟು ಎಂಬಿತ್ಯಾದಿ ದಾಖಲೆಯನ್ನು ಸರ್ಕಾರ ಒದಗಿಸಿ ಪ್ರತಿರೋಧ ಶಮನ ಮಾಡಬೇಕಾಯಿತು. ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಹರಿಹರ ಇರುವುದು ತುಂಗಭದ್ರಾ ನದಿ ದಂಡೆಯ ಮೇಲೆ. ಆದರೆ ಚಿತ್ರದುರ್ಗ/ದಾವಣಗೆರೆ ಜಿಲ್ಲೆಯ ಬರಗಾಲ ತಣಿಸುವ ಯೋಜನೆಯೇ ಇಲ್ಲದೆ ಜನ ಪರದಾಡಿದ್ದಕ್ಕೆ ಇತಿಹಾಸ ಸಾಕ್ಷಿ.

ಎಂದೋ ಜನರಲ್ಲಿ ಹುಟ್ಟಿಕೊಂಡ ಭರವಸೆ ಇದೀಗ ಸಾಕಾರವಾಗುವ ಘಟ್ಟಕ್ಕೆ ಬಂದು ನಿಂತಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಒಟ್ಟಾರೆ ಎರಡು ಲಕ್ಷ 25 ಸಾವಿರ ಹೆಕ್ಟೇರಿಗೂ ಹೆಚ್ಚು ಭೂಮಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಎಂಬ ಈ ಯೋಜನೆಯ ಅಂದಾಜು ವೆಚ್ಚ 16,125 ಕೋಟಿ ರೂಪಾಯಿ. ಪೂರೈಸುವ ಹೊತ್ತಿಗೆ ಯೋಜನಾ ವೆಚ್ಚದಲ್ಲಿ ಇನ್ನೆಷ್ಟು ಏರಿಕೆಯಾಗಲಿದೆಯೋ ಆ ಹರಿಹರನಿಗೂ ಗೊತ್ತಿರಲಿಕ್ಕಿಲ್ಲ. ಈವರೆಗೆ ರಾಜ್ಯ ಸರ್ಕಾರ ಯೋಜನೆ ಕಾಮಗಾರಿಗೆ 4800 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಯೋಜನೆಯ ಅಚ್ಚುಕಟ್ಟು ಪ್ರದೇಶವನ್ನು ಅದು ಅನುಭವಿಸುತ್ತಿರುವ ನೀರಿನ ಕೊರತೆಯಿಂದ ಪಾರು ಮಾಡುವ ಸದಾಶಯಕ್ಕೆ ಕೇಂದ್ರ ಸರ್ಕಾರ ಕೊನೆಗೂ ಅನುಮತಿ ನೀಡಿರುವುದು ಶುಭ ಸಮಾಚಾರ.

ಕರ್ನಾಟಕ ವಿಧಾನ ಸಭೆಯಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಸಚಿವೆ ನಿರ್ಮಲಾ ಸೀತಾರಾಮನ್‍ರವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಪದೇ ಪದೇ ಎಂಬಂತೆ ಮಾಡಿಕೊಂಡ ಮನವಿಗೆ ಪರಿಹಾರವಾಗಿ ಬಜೆಟ್‍ನಲ್ಲಿ ಇದು ಘೋಷಣೆಯಾಗಿರುವುದು ನಿಜವೇ ಹೌದಾದರೂ ಇನ್ನು ಕೆಲವೇ ತಿಂಗಳಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ಅರ್ಥ ಸಚಿವರ ಪ್ರಕಟಣೆಯ ಹಿಂದೆ ಈ ಅಂಶ ಕೂಡಾ ಪ್ರಭಾವ ಬೀರಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅದೇನೇ ಇದ್ದರೂ ರಾಜ್ಯದ ಜನತೆ ಸ್ವಾಗತಿಸಬೇಕಿರುವ ವಿದ್ಯಮಾನ ಇದು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸುಪ್ರೀಂ ತೀರ್ಪು ನಮ್ಮ ಮನದಂಗಳಕೆ

ಯೋಜನಾ ವೆಚ್ಚದ ಪ್ರತಿಶತ ತೊಂಬತ್ತರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೇಂದ್ರದ ಆರ್ಥಿಕ ನೆರವಿನ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಅದರದೇ ಆದ ಸೂತ್ರ, ಮಾನದಂಡವಿದ್ದು ಅದನ್ನು ಫಲಾನುಭವಿ ರಾಜ್ಯ ಕಟ್ಟುನಿಟ್ಟಿನಿಂದ ಪರಿಪಾಲಿಸಬೇಕಾಗುತ್ತದೆ. ರಾಜ್ಯ ಸರ್ಕಾರದ ಅಧೀನ ಸಂಸ್ಥೆ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಟಾನದ ಹೊಣೆಯನ್ನು ವಹಿಸಲಾಗಿದೆ. ಮಳೆ ನೀರನ್ನು ಆಶ್ರಯಿಸಿರುವ ಚಿತ್ರದುರ್ಗ, ದಾವಣಗೆರೆ, ತುಮಕೂರು ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯ (ಬಹುತೇಕ) ಬೆಂಗಾಡು ಪ್ರದೇಶದಲ್ಲಿರುವ 367 ಕೆರೆಗಳಿಗೆ ಒಟ್ಟಾರೆ ಆರು ಟಿಎಂಸಿ ನೀರನ್ನು ಪ್ರತಿವರ್ಷವೂ ತುಂಬುವುದು ಒಂದು ಗುರಿ. ಈ ಮೂಲಕ ಜನ ಜನುವಾರುಗಳ ಕುಡಿಯುವ ಅಗತ್ಯವೂ ಸೇರಿದಂತೆ ನೀರಿಗೆ ಇರುವ ಹಾಹಾಕಾರವನ್ನು ತಗ್ಗಿಸುವುದರ ಜೊತೆಜೊತೆಗೇ ಅಚ್ಚುಕಟ್ಟು ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೆ ಪೂರಕ ಕಾರ್ಯಕ್ರಮ ರೂಪಿಸುವುದು ಗುರಿಯ ಮುಖ್ಯಾಂಶ.

ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರನ್ನು ಹರಿಸುವುದು ಮತ್ತು ವರ್ಷದಲ್ಲಿ ಬರೋಬ್ಬರಿ 29.90 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಉಲ್ಲೇಖಿತ ಜಿಲ್ಲೆಗಳಿಗೆ ಹರಿಸಿ ಕೃಷಿಗೆ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವುದು ಯೋಜನೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಏತ ನೀರಾವರಿ ಯೋಜನೆ ಮೂಲಕ 79 ಕೆರೆ ಭರ್ತಿ; ಚಿತ್ರದುರ್ಗ ಶಾಖಾ ಕಾಲುವೆ ಮೂಲಕ 157 ಕೆರೆ; ತುಮಕೂರು ಶಾಖಾ ಕಾಲುವೆ ಮೂಲಕ 131 ಕೆರೆ ಭರ್ತಿ ಮಾಡುವುದು. ಇದಲ್ಲದೆ ಹೊಳಲ್ಕೆರೆ, ಪಾವಗಡ, ಚಳ್ಳಕೆರೆ, ಮೊಳಕಾಲ್ಮುರು, ಹಿರಿಯೂರು, ಸಿರಾ, ಚಿಕ್ಕನಾಯ್ಕನಹಳ್ಳಿ ಕೆರೆಗಳನ್ನು ಭರ್ತಿ ಮಾಡುವ ಮೂಲಕ ಆ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಕನಸು ಇದರಲ್ಲಿದೆ.

ಕೇಂದ್ರ ಸರ್ಕಾರ ಈ ಯೋಜನೆಗೆ ಈಗ ಕೊಡಲು ಮುಂದಾಗಿರುವ 5300 ಕೋಟಿ ರೂಪಾಯಿ ಮೊದಲ ಹಂತದ್ದು. ಯೋಜನೆಯನ್ನು ಕೇಂದ್ರ ವಹಿಸಿಕೊಂಡ ಬಳಿಕ ವರ್ಷ ವರ್ಷವೂ ಬಜೆಟ್‍ನಲ್ಲಿ ಹಣ ನಿಗದಿ ಮಾಡುವುದು ನಂತರ ಬರುವ ಯಾವುದೇ ಸರ್ಕಾರಕ್ಕೆ ಕಡ್ಡಾಯ. ಇಷ್ಟಕ್ಕೂ ಇದರಲ್ಲಿ ರಾಜಕೀಯ ಒಳಸುಳಿಯೂ ಇರುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದನ್ನು ಕೇಂದ್ರದ ಯೋಜನೆಯನ್ನಾಗಿಸಿದೆ, ನಾವು ಆ ನಿರ್ಣಯವನ್ನು ರದ್ದು ಮಾಡುತ್ತೇವೆ ಎಂದು ಹೇಳುವ ದಾಷ್ಟ್ರ್ಯ ಯಾವ ಪಕ್ಷದ ಸರ್ಕಾರಕ್ಕೂ ಇರುವುದಿಲ್ಲ. ಏಕೆಂದರೆ ಯೋಜನೆಯ ಫಲಾನುಭವಿಗಳ ಸಂಖ್ಯೆ ಈಗಿನ ಲೆಕ್ಕಾಚಾರದ ಪ್ರಕಾರ 74 ಲಕ್ಷಕ್ಕೂ ಅಧಿಕ. ಅಂದರೆ 74 ಲಕ್ಷ ಓಟು ಎಂದೂ ಇದನ್ನು ಅರ್ಥ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಮೊಗಸಾಲೆ ಅಂಕಣ | ಒಂಬತ್ತು ರಾಜ್ಯದಲ್ಲಿ ಚುನಾವಣೆ: ಸಿಕ್ಕೀತೆ ಮೋದಿ ಮಾತಿಗೆ ಮನ್ನಣೆ?

ಬೇರೆ ಬೇರೆ ರಾಜ್ಯಗಳು ತಮ್ಮಲ್ಲಿನ ಒಂದಾದರೂ ಯೋಜನೆಯನ್ನು ಕೇಂದ್ರದ ಯೋಜನೆಯಾಗಿ ಪರಿಗಣಿಸಬೇಕೆಂಬ ಒತ್ತಾಯ ಹಾಕುತ್ತಲೇ ಇವೆ. ಈಗ ಕರ್ನಾಟಕದ ಯೋಜನೆಗೆ ಸಿಕ್ಕಿರುವ ಆದ್ಯತೆಯನ್ನು ಇತರ ರಾಜ್ಯಗಳು ಪ್ರಶ್ನೆ ಮಾಡದಿರಬಹುದು. ಆದರೆ ತಮ್ಮ ಯೋಜನೆಯನ್ನೂ ಪರಿಗಣಿಸಿ ಎಂಬ ಒತ್ತಾಯ ಮಂಡಿಸುವ ಸಾಧ್ಯತೆ ಇದ್ದೇ ಇದೆ. ಬಿಜೆಪಿ/ ಎನ್‍ಡಿಎ ಆಡಳಿತವಿರುವ ರಾಜ್ಯಗಳು ಕ್ಯಾತೆ ತೆಗೆಯಲಾರವು. ಆದರೆ ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳಾ, ರಾಜಸ್ತಾನ, ಹಿಮಾಚಲ ಪ್ರದೇಶ ಸರ್ಕಾರಗಳು ಪ್ರಶ್ನೆ ಮಾಡಬಹುದು. ಹಾಲಿ ಕೇಂದ್ರ ಯೋಜನೆ ಇರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಇರುವ ಕಾರಣ ಆ ಎರಡು ರಾಜ್ಯಗಳು ಕಿರಿಕಿರಿ ಮಾಡುವ ಸಾಧ್ಯತೆ ಕಡಿಮೆ. ಇತರ ರಾಜ್ಯಗಳ ಬಗ್ಗೆ ಭರವಸೆ ಇಲ್ಲ.

ಬರ್ಸಾರ್, ರಾವಿ ವ್ಯಾಸ ಎರಡನೆ ಹಂತ, ರೇಣುಕಾ (ಜಮ್ಮು ಮತ್ತು ಕಾಶ್ಮೀರ); ತೀಸ್ತಾ ಬ್ಯರೇಜ್ (ಪಶ್ಚಿಮ ಬಂಗಾಳ); ಶಹಾಪುರ ಕಂಡಿ (ಪಂಜಾಬ್); ಗಿಸ್ಪಾ ಯೋಜನೆ, ಕಿಷಾವು, ಲಖವರ್ ವ್ಯಾಸಿ (ಹಿಮಾಚಲ ಪ್ರದೇಶ/ಉತ್ತರಾಂಚಲ); ನೋವಾ ದೇವಾಂಗ್, ಸಿಯಾಂಗ್ ಮೇಲ್ದಂಡೆ ಯೋಜನೆ (ಆರುಣಾಚಲ ಪ್ರದೇಶ); ಕುಲಸಿ ಅಣೆಕಟ್ಟೆ (ಅಸ್ಸಾಂ); ಕೆನ್ ಬೇತ್ವಾ ಯೋಜನೆ (ಮಧ್ಯಪ್ರದೇಶ) ಹಾಗೂ ಗೋಸಿ ಖುರ್ದ್ ಯೋಜನೆ (ಮಹಾರಾಷ್ಟ್ರ). ಇವು ಇದುವರೆಗೆ ಬೇರೆಬೇರೆ ರಜ್ಯಗಳಲ್ಲಿ ತನ್ನ ಯೋಜನೆಯಾಗಿ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿರುವ ನೀರಾವರಿ ಮತ್ತು ಜಲವಿದ್ಯುತ್ ಯೋಜನೆಗಳಾಗಿವೆ. ಈ ಸಾಲಿಗೆ ಈಗ ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆ ಹೊಸ ಸೇರ್ಪಡೆ. ಜನರ ಆಸೆಗಣ್ಣು ಮತ್ತೆ ಹೊಳೆಯಲು ಇದು ಸಾಲದೆ…?

ಇದನ್ನೂ ಓದಿ: ಮೊಗಸಾಲೆ ಅಂಕಣ | ಹದಗೆಡುತ್ತಿರುವ ಕೇಂದ್ರ-ರಾಜ್ಯ ಸಂಬಂಧ

Exit mobile version