Site icon Vistara News

ಮೊಗಸಾಲೆ ಅಂಕಣ: AIIMS ಸಂಸ್ಥೆ ಹೆಸರಿನಲ್ಲಿ ರಾಯಚೂರು v/s ಕಲಬುರಗಿ ಶೀತಲ ಸಮರ ಶುರು

war about AIIMS between raichur and kalaburagi mogasale column

ಸುಭದ್ರ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ರಚನೆ ಪ್ರಕ್ರಿಯೆಯಲ್ಲಿ ಮುಳುಗಿದ್ದಾರೆ. ಜುಲೈ ಏಳರಂದು ವಿಧಾನ ಮಂಡಲದಲ್ಲಿ ಅವರ ಹೆಸರಿನಲ್ಲಿ ಹದಿನಾಲ್ಕನೇ ಬಜೆಟ್ ಮಂಡನೆಯಾಗಲಿದೆ. ಸಹಜ ಕುತೂಹಲ ಕೆರಳಿಸಿರುವ ಈ ಮುಹೂರ್ತಕ್ಕೆ ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಹಲವು ಸವಾಲನ್ನು ಮೈಮೇಲೆ ಪಕ್ಷವಾಗಿ ಎಳೆದುಕೊಂಡಿರುವ ಕಾಂಗ್ರೆಸ್ಸು ಅವೆಲ್ಲವನ್ನೂ ಸರ್ಕಾರವಾಗಿ ನಿಭಾಯಿಸಬೇಕಾಗಿದೆ. ಈ ನಿಭಾವಣೆ ಹೇಗೆ ಎನ್ನುವುದಕ್ಕೆ ಒಂದಿಷ್ಟು ಉತ್ತರ ಬಜೆಟ್‍ನಲ್ಲಿ ಸಿಗುವ ಸಾಧ್ಯತೆ ಇದೆಯೆಂದೇ ಕುತೂಹಲ ಗರಿಗೆದರಿದೆ.
ರಾಜಧಾನಿ ಬೆಂಗಳೂರು ಮಟ್ಟದಲ್ಲಿ ನಡೆದಿರುವ ಬೇಕು ಬೇಡಗಳ ಪಟ್ಟಿ ಬಹಳ ಉದ್ದನೆಯದು. ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿ, ಹತ್ತಿರದಲ್ಲಿರುವವರನ್ನು ಇನ್ನಷ್ಟು ಹತ್ತಿರಕ್ಕೆ ಒಳಬಿಟ್ಟುಕೊಂಡು, ದೂರದಲ್ಲಿರುವವರನ್ನು ಮತ್ತಷ್ಟು ದೂರವೇ ಇಡುವ ಜಾಯಮಾನ ಅನೂಚಾನ. ಈ ಮಾತಿಗೆ ಸಿದ್ದರಾಮಯ್ಯ ಸರ್ಕಾರ ಒಂದು ಅಪವಾದವಾಗಿ ನಡೆದುಕೊಂಡೀತೇ ಎಂಬ ಆಶಾಭಾವನೆ ಇದೀಗ ಕಲ್ಯಾಣ ಕರ್ನಾಟಕದಲ್ಲಿ ಗರಿಗೆದರಿದೆ.

ಹೈದರಾಬಾದ್ ಕರ್ನಾಟಕವೆಂದಿದ್ದುದು ಕಲ್ಯಾಣ ಕರ್ನಾಟಕವಾಗಿದ್ದು ಒಂದು ಇತಿಹಾಸವಾದರೆ, ಅಭಿವೃದ್ಧಿ ಮಾನದಂಡದಲ್ಲಿ ತೀವ್ರ ಅಸಮತೋಲನಕ್ಕೆ ಒಳಗಾದ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆಂದೇ ಸಂವಿಧಾನಕ್ಕೆ 371 (ಜೆ) ವಿಶೇಷ ತಿದ್ದುಪಡಿ ತಂದು ಅಭಿವೃದ್ಧಿಗೆ ಚುರುಕು ಗತಿ ತಂದಿದ್ದು ಮತ್ತೊಂದು ಇತಿಹಾಸ.
ಇದಕ್ಕೂ ಪೂರ್ವದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆಯಾಗಿದ್ದರೂ ಆದ ಅಭಿವೃದ್ಧಿ ಶೂನ್ಯಕ್ಕಿಂತ ಅತ್ತತ್ತ. ಪ್ರದೇಶದ ಎಲ್ಲ (ಎಂಎಲ್‍ಸಿ ಒಳಗೊಂಡಂತೆ) ಶಾಸಕರು, ರಾಜ್ಯಸಭೆ, ಲೋಕಸಭೆಯ ಎಲ್ಲ ಸದಸ್ಯರು ಮಂಡಳಿಯ ಸದಸ್ಯರು. ಅವರಲ್ಲೇ ಒಬ್ಬರು (ಸಾಮಾನ್ಯವಾಗಿ ಅವರು ಆಡಳಿತ ಪಕ್ಷದ ಶಾಸಕರೇ ಆಗಿರುತ್ತಾರೆ!) ಅಧ್ಯಕ್ಷರು. ಮಂಡಳಿಗೆ ಒಂದಿಷ್ಟು ಜನರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ, ಅದರಂತೆ ನಾಮಕರಣಗೊಳ್ಳುವವರು ಆಡಳಿತ ಪಕ್ಷಕ್ಕೆ ಸೇರಿದ ಮುಖಂಡರು. ಐಎಎಸ್ ಅಧಿಕಾರಿಯೊಬ್ಬರು ವ್ಯವಸ್ಥಾಪಕ ನಿರ್ದೇಶಕರು. ಯಥಾ ಪ್ರಕಾರ ಸರ್ಕಾರದ ಸಿಬ್ಬಂದಿ. ಸರ್ಕಾರದ ಕೆಲಸವೆಂದರೆ ತಾನು ಘೋಷಿಸಿದ ಹಣವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುವುದು. ತಮ್ಮ ಅಭಿವೃದ್ಧಿಗೆ ಏನೆಲ್ಲ ಅಗತ್ಯವೆಂದು ಮಂಡಳಿ ಮಂಡಿಸುವ ಪ್ರಸ್ತಾವಗಳಿಗೆ ಅನುಮೋದನೆ ಕೊಟ್ಟು ಜಾರಿಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದು.

ಘೋಷಿತ ಮೊತ್ತವನ್ನು ಯಾವ ಸರ್ಕಾರವೂ ಒಮ್ಮೆಯೂ ಬಿಡುಗಡೆ ಮಾಡಲಿಲ್ಲ ಎನ್ನುವುದು ಹೈಕ ಅಭಿವೃದ್ಧಿ ಮಂಡಳಿಯ ಕಹಿ ವೃತ್ತಾಂತ. ಮಂಡಳಿ ಮುಂದಿಟ್ಟ ಎಷ್ಟೋ ಯೋಜನೆ ಕಾರ್ಯಾನುಷ್ಟಾನವಾಗಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಪ್ರಸ್ತಾಪ ಬಂದಾಗ ಈ ನತದೃಷ್ಟ ಪ್ರದೇಶದ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತದೆಂಬ ಒಕ್ಕೊರಲ ಕೂಗು ಮಂಡಳಿಯಲ್ಲಿ ಏಕಧ್ವನಿಯಾಗಿ ಮೊಳಗಲಿಲ್ಲ. ಸರ್ಕಾರದ ನಕಾರಾತ್ಮಕ ನಿಲುವನ್ನು ಖಂಡಿಸುವ ಒಮ್ಮತದ ಠರಾವು ಮೂಡಲಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೀಗೆ ಆಡಳಿತ ಪಕ್ಷದ ಶಾಸಕರು ತಂತಮ್ಮ ಸರ್ಕಾರದ ಇಲ್ಲವೇ ತಂತಮ್ಮ ಪಾಲುದಾರಿಕೆ ಸರ್ಕಾರದ ಪರವಾಗಿ ಬಾಯಿ ಮುಚ್ಚಿ ಕುಳಿತರೇ ಹೊರತೂ ತಮ್ಮನ್ನು ಆಯ್ಕೆ ಮಾಡಿದ ಮತಕ್ಷೇತ್ರದ ಜನರ ಪರವಾಗಿ ನಿಂತಿದ್ದು ಅಪರೂಪ. ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ ಸೋತು ಕೈಚೆಲ್ಲಿದ್ದರ ಹಿಂದೆ ಈ ಮತ್ತು ಇಂಥ ಎಷ್ಟೋ ಕಥಾನಕಗಳಿವೆ. ನೌಟಂಕಿ ಕಾರಣವಾಗಿ ಭ್ರಮನಿರಸನಗೊಂಡ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವಂತಾಗಿದ್ದು; ಸಂವಿಧಾನದ ತಿದ್ದುಪಡಿಗೆ ಒತ್ತಾಯಿಸಿ ಬೀದಿಗೆ ಇಳಿಯುವಂತಾಗಿದ್ದು. ಪ್ರತ್ಯೇಕ ರಾಜ್ಯವೊಂದೇ ಪರಿಹಾರವೆಂಬ ಕೂಗು ತಾತ್ಕಾಲಿಕವಾಗಿಯಾದರೂ ಶಮನವಾಗಿದೆ. ಅದು ಶಾಂತಸ್ಥಿತಿಯಲ್ಲಿರುವ ಅಶಾಂತ ಜ್ವಾಲಾಮುಖಿಯಂತೆ ಎನ್ನುವುದನ್ನು ಆಡಳಿತ ನಡೆಸುವವರು ಉಪೇಕ್ಷಿಸಬಾರದು.

ಬೀದರ್, ಕಲಬುರಗಿ, ಯಾದಗೀರ್, ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ… ಏಳು ಜಿಲ್ಲೆ ಒಳಗೊಂಡ ಕಲ್ಯಾಣ ಕರ್ನಾಟಕ, ಡಾ.ಡಿ.ಎಂ. ನಂಜುಂಡಪ್ಪ ವರದಿ (ಆಗಿನ್ನೂ ವಿಜಯನಗರ, ಯಾದಗೀರ್ ಪ್ರತ್ಯೇಕ ಜಿಲ್ಲೆ ಆಗಿರಲಿಲ್ಲ) ಪ್ರಕಾರ ಅಭಿವೃದ್ಧಿ ಹೀನ ಪ್ರದೇಶ. ಈ ಅಸಮತೋಲನದ ನಿವಾರಣೆಗೆ ಡಿಎಂಎನ್ ವರದಿ ಸೂಚಿಸಿರುವ ಬಹುತೇಕ ಪರಿಹಾರ ಇನ್ನೂ ಕಾಗದದಲ್ಲೇ ಉಳಿದಿರುವುದಕ್ಕೆ ಕಲಬುರಗಿ ಹೊರತಾದ ಜಿಲ್ಲೆಗಳಲ್ಲಿ ಕಣ್ಣಿಗೆ ರಾಚುವಷ್ಟು ನಿದರ್ಶನಗಳಿವೆ. ನ್ಯಾಯದ ಉಡುಗೊರೆ ಕೊಡುವ ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲ ಆಯಾ ಸಂದರ್ಭದಲ್ಲಿದ್ದ ಸರ್ಕಾರ ಅನ್ಯಾಯವನ್ನು ಬಳುವಳಿಯಾಗಿ ನೀಡಿದ್ದಕ್ಕೂ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ಗಮನಿಸುವ ಮುನ್ನ ರಾಯಚೂರಿನಿಂದ ಕೇಳಿಬರುತ್ತಿರುವ ಕೂಗಿನತ್ತ ಕಿವಿಗೊಡುವುದು ಅಗತ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರ ಆಲಿಸಲೇಬೇಕಿರುವ ಕೂಗು ಇದು. ರಾಯಚೂರು ಜಿಲ್ಲೆಯಿಂದ ಕೇಳಿಬಂದು ನಿರರ್ಥಕವಾದ ಮತ್ತೊಂದು ಅರಣ್ಯರೋದನ ಇದಾಗದಂತೆ ನೋಡಿಕೊಳ್ಳುವ ಜಮೇದಾರಿ ಪ್ರಸಕ್ತ ಸರ್ಕಾರದ ಮೇಲಿದೆ ಎನ್ನುವುದನ್ನು ಒತ್ತಿ ಹೇಳುತ್ತಿರುವ ಕೂಗು ಇದು.

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಎಐಐಎಂಎಸ್- AIIMS) ಕರ್ನಾಟಕದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಎಲ್ಲಿ ಅದನ್ನು ಸ್ಥಾಪಿಸಬೇಕೆಂಬ ಸ್ವಾತಂತ್ರ್ಯವನ್ನು ಅದು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟಿದೆ. ಅದನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂಬ ಕೂಗು ಈಗ ಜೋರಾಗಿದೆ. ಅದಕ್ಕಾಗಿ ಬರೋಬ್ಬರಿ 400 ದಿನಗಳ ಹಕ್ಕೊತ್ತಾಯ ಚಳವಳಿಯೂ ನಡೆದಿದೆ. ಇದನ್ನು ಮನಗಂಡಿರುವ ಕಾಂಗ್ರೆಸ್ಸು ವಿಧಾನ ಸಭೆ ಚುನಾವಣೆ ಪ್ರಣಾಳಿಕೆಯಲ್ಲಿ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂಬ ಭರವಸೆಯನ್ನೂ ನೀಡಿದೆ.

ವಿಪರ್ಯಾಸವೆಂದರೆ ಅಧಿಕಾರಕ್ಕೆ ಬಂದ ನಂತರದಲ್ಲಿ ಕಾಂಗ್ರೆಸ್ ಮುಖಂಡರಲ್ಲಿ ಕೆಲವರು ರಾಗದ ಪ್ಲೇಟನ್ನು ಬದಲಾಯಿಸುತ್ತಿರುವ ಲಕ್ಷಣ ಕಾಣುತ್ತಿದೆ. ಶರಣ ಪ್ರಕಾಶ ಪಾಟೀಲರು ಸಿದ್ದರಾಮಯ್ಯ ಸಂಪುಟದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲೂ ಅವರು ಇದೇ ಖಾತೆ ಹೊಂದಿದ್ದರು. ಕಲಬುರ್ಗಿ ಜಿಲ್ಲೆ ಸೇಡಂ ವಿಧಾನ ಸಭೆ ಕ್ಷೇತ್ರದ ಶಾಸಕರಾಗಿರುವ ಅವರು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಖಾಸಾ ಬಳಗದ ಮುಖ್ಯಸ್ಥರಲ್ಲಿ ಒಬ್ಬರು ಮಾತ್ರವೇ ಅಲ್ಲ ಪ್ರಮುಖರು ಕೂಡಾ. ಪಾಟೀಲರು ಸಚಿವರಾದ ಬಳಿಕ ತಮ್ಮದೇ ಪಕ್ಷದ ಪ್ರಣಾಳಿಕೆಯನ್ನು ಮರೆತವರಂತೆ “ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರ್ಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು” ಎಂದಿದ್ದಾರೆ. ಈ ಸಂಸ್ಥೆಯನ್ನು ರಾಯಚೂರಿನಲ್ಲಿ ಸ್ಥಾಪಿಸಲು ಆಗ್ರಹಿಸಲಾಗುವುದು ಎನ್ನುವುದು ಪ್ರಣಾಳಿಕೆ ಭರವಸೆಯಷ್ಟೇ ಆಗಿರದೆ ಚುನಾವಣಾ ಪ್ರಚಾರಕ್ಕೆಂದು ರಾಯಚೂರಿಗೆ ಬಂದಾಗ ಸ್ವತಃ ಸಿದ್ದರಾಮಯ್ಯ ಜನತೆಗೆ ಇತ್ತ ವಚನವೂ ಹೌದು. ಇದ್ಯಾವುದರ ನಜರೇ ಇಲ್ಲದವರಂತೆ ಶರಣಪ್ರಕಾಶ ಪಾಟೀಲರು ರಾಗ ಬದಲಿಸಿ ಹೊಸ ಪ್ಲೇಟು ಹಾಕಿರುವುದಕ್ಕೆ ಏನಾದರೂ ಬಲವತ್ತರ ಕಾರಣ ಇರಬೇಕಲ್ಲವೇ….? ಸಿದ್ದರಾಮಯ್ಯನವರನ್ನು ವಚನಭ್ರಷ್ಟರ ಸಾಲಿಗೆ ಸೇರಿಸುವ ಕರಾಮತ್ತು ಒಳಗಿಂದೊಳಗೇ ಕೆಲಸ ಮಾಡುತ್ತಿರಬಹುದೇ…?

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರದ ಮನವೊಲಿಸುವ ಇರಾದೆ ಮಲ್ಲಿಕಾರ್ಜುನ ಖರ್ಗೆಯವರಲ್ಲಿರುವುದು ಗುಟ್ಟಿನ ಸಂಗತಿಯಲ್ಲ. ಈ ವಿಚಾರವಾಗಿ ಸಂದರ್ಭ ಸಿಕ್ಕಾಗಲೆಲ್ಲ ಅವರು ಇದನ್ನು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ ಮಾತ್ರಕ್ಕೆ ಅದೇ ವೇದವಾಕ್ಯವಲ್ಲ ಎಂದು ಈಗಾಗಲೇ ಸಚಿವ ಚೆಲುವರಾಯಸ್ವಾಮಿಯಂಥವರು ಹೇಳುತ್ತಿರುವುದನ್ನು ಶರಣಪ್ರಕಾಶ ಪಾಟೀಲರು ಕೂಡಾ ಹೇಳಲಾರರು ಎನ್ನುವುದಕ್ಕೆ ಖಾತ್ರಿಯೇನೂ ಇಲ್ಲ. ಇಷ್ಟಕ್ಕೂ ಖರ್ಗೆಯವರು ಸಾರ್ವಜನಿಕವಾಗಿ ಹೇಳಲಾಗದ ಅವರ ಅಂತರಂಗದ ಭಾವನೆಗಳನ್ನು ಒಡೆದು ಹೇಳುವವರ ಸಾಲಿನಲ್ಲಿ ಶರಣಪ್ರಕಾಶ ಪಾಟೀಲರು ಇದ್ದಾರೆ. ಎಂದೇ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕಲಬುರಗಿಯಲ್ಲಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂಬ ಮಾತು ಅವರ ಬಾಯಿಂದ ಹೊರಬಂದಿದೆ ಎಂಬ ಅನುಮಾನ ರಾಯಚೂರು ಜನರಲ್ಲಿ ಹೆಚ್ಚುತ್ತಿದೆ.

ಕಲಬುರಗಿಯಲ್ಲಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಟಾನಕ್ಕೆ ಜಾಗವೇ ಇಲ್ಲ ಎಂಬ ಜನರ ಮಾತಿನಲ್ಲಿ ತುಸು ಉತ್ಪ್ರೇಕ್ಷೆ ಇರುವುದು ನಿಜ; ಆದರೆ ಬಹಳಷ್ಟು ತಥ್ಯವಿರುವುದೂ ನಿಜ. ಅಂಥ ಜಿಲ್ಲೆಗೆ ಮತ್ತೊಂದು ಕೇಂದ್ರದ ಯೋಜನೆಯಾಗಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ತಂದು ಕೂರಿಸುವುದು ಅಸಮತೋಲನ ನಿವಾರಿಸುವ ಕ್ರಮವಂತೂ ಅಲ್ಲವೇ ಅಲ್ಲ. ಸಂಭವನೀಯ ಈ ಅನ್ಯಾಯದತ್ತ ಸ್ವತಃ ಕಾಂಗ್ರೆಸ್ ಮುಖಂಡರೂ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಪಾರಸಮಲ್ ಸುಖಾಣಿ, ಮುಖ್ಯ ಮಂತ್ರಿಯ ಗಮನ ಸೆಳೆದಿದ್ದಾರೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಪಕ್ಷದ ಚುನಾವಣಾ ಪ್ರಣಾಳಿಕೆಗೆ ತದ್ವಿರುದ್ಧವಾಗಿರುವ ನಿಲುವಿನಿಂದ ಕೂಡಿದೆ ಎಂದು ಎಂದು ಪ್ರತಿಪಾದಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಎರಡು ಬಾರಿ ಬಂದಾಗಲೂ ಸಿದ್ದರಾಮಯ್ಯನವರು ರಾಯಚೂರು ಜನತೆಗೆ ನೀಡಿದ್ದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ರಾಯಚೂರಿನಲ್ಲೇ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಜನರಿಗೆ ನೀಡಿದ್ದ ವಚನವನ್ನು ನೆನಪಿಸಿಕೊಟ್ಟಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013-18ರ ಅವಧಿಯಲ್ಲಿ ಆಡಳಿತ ನಡೆಸಿದಾಗ ರಾಯಚೂರಿಗೆ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ ಐಐಟಿ ಸಂಸ್ಥೆಯನ್ನು ಮಂಜೂರು ಮಾಡಿಸುವ ಅವಕಾಶ ಸಿಕ್ಕಿತ್ತು. ನಂಜುಂಡಪ್ಪ ಸಮಿತಿ ರಾಯಚೂರಿನಲ್ಲಿ ಐಐಟಿ ಸ್ಥಾಪಿಸಬೇಕೆಂದು ಶಿಫಾರಸು ಮಾಡದೆ. ಆಗಲೂ ಸ್ಥಳದ ಹೆಸರನ್ನು ಸೂಚಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಳಿತ್ತು. ರಾಜ್ಯ ಸರ್ಕಾರ ಔಚಿತ್ಯ ಜ್ಞಾನ ಮರೆತು ರಾಯಚೂರು ಇಲ್ಲವೇ ಧಾರವಾಡದಲ್ಲಿ ಸ್ಥಾಪಿಸಬಹುದೆಂದು ಡೋಲಾಯಮಾನ ನಿಲುವಿಗೆ ಬಂದ ಕಾರಣ ಸ್ಥಳದ ಆಯ್ಕೆ ಸ್ವಾತಂತ್ರ್ಯ ಕೇಂದ್ರದ್ದಾಗಿ ಐಐಟಿ ಧಾರವಾಡಕ್ಕೆ ಹೋಯಿತು. ಇಂಥದೇ ಎಡವಟ್ಟುತನ ಪುನರಾವರ್ತನೆ ಆಗಬಾರದು; ಆಗಕೂಡದು ಎಂಬುದು ಸುಖಾಣಿ ಪತ್ರದ ಆಶಯ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಏಕೈಕ ಹೆಸರಾಗಿ ರಾಯಚೂರು ಮಾತ್ರವೇ ಕೇಂದ್ರಕ್ಕೆ ಶಿಫಾರಸು ಆದಲ್ಲಿ ಕಿಂಚಿತ್ ನ್ಯಾಯವಾದರೂ ಸಂದಂತೆ ಆಗಬಹುದೆಂಬ ಸದಾಶಯ ರಾಯಚೂರು ಜಿಲ್ಲೆಯ ಹತ್ತೂ ಸಮಸ್ತರದಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸಿಎಂ ಪದವಿ ಹಂಚಿಕೆ: ʼಕೈʼಕಮಾಂಡ್‌ ಮೌನದ ಹಿಂದೆ ಏನು ಸಂದೇಶವಿದೆ?

ರಾಯಚೂರು ಜಿಲ್ಲೆ ಆರು ವಿಧಾನ ಸಭಾ ಕ್ಷೇತ್ರ ಒಳಗೊಂಡಿದೆ. ಆರರಲ್ಲಿ ಮೂವರು ಕಾಂಗ್ರೆಸ್ ಶಾಸಕರು. ರಾಯಚೂರು ಜಿಲ್ಲೆಯವರೇ ಆಗಿರುವ ಏಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರು. ವಿಧಾನ ಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲದ ಅವರು ಇಷ್ಟರಲ್ಲಿಯೇ ಎಂಎಲ್‍ಸಿ ಆಗಲಿದ್ದಾರೆ. ವಿಧಾನ ಪರಿಷತ್‍ನಿಂದ ಏಕೈಕ ಸಚಿವರಾಗಿರುವುದರಿಂದ ಅವರೇ ಸಭಾ ನಾಯಕರೂ ಆಗಲಿದ್ದಾರೆ. ಸಂಪುಟದಲ್ಲಿ ಕೇವಲ ಕಲಬುರಗಿಯದಷ್ಟೇ ಅಲ್ಲದೆ ರಾಯಚೂರಿನ ಗಟ್ಟಿ ಧ್ವನಿಯಾಗಿ ಬೋಸರಾಜು ಕೆಲಸ ಮಾಡಲಿದ್ದಾರೆನ್ನುವುದು ಜಿಲ್ಲೆಯ ಜನರ ಸಮಾಧಾನಕ್ಕೆ ಕಾರಣವಾಗಿರುವ ಬೆಳವಣಿಗೆ. ಶರಣಪ್ರಕಾಶ ಪಾಟೀಲರ ಹೇಳಿಕೆ ಹಿಂದೆ ಯಾರೇ ಇರಲಿ ಅದು ಸಿದ್ದರಾಮಯ್ಯನವರಿಗೆ ಮುಖ್ಯವಾಗುವುದಿಲ್ಲ ಎಂದು ನಂಬಬಹುದು.

ಕಲಬುರಗಿಯಲ್ಲಿ ಮೂರು ವೈದ್ಯಕೀಯ ಕಾಲೇಜು; ವಿಮಾನ ನಿಲ್ದಾಣ; ರೈಲ್ವೆ ವಿಭಾಗೀಯ ಕೇಂದ್ರ; ಇಎಸ್‍ಐ ಆಸ್ಪತ್ರೆ; ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ, ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಮುಂತಾದ ಯೋಜನೆಗಳಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆಂದರೆ ಕಲಬುರಗಿ ಅಭಿವೃದ್ಧಿಯೊಂದೇ ಅಲ್ಲ ಎಂಬ ನಿಲುವಿಗೆ ರಾಜ್ಯ ಸರ್ಕಾರ ಬರಬೇಕಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ : ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಸರ್ಕಾರದಿಂದ ‘ಗ್ಯಾರಂಟಿ’ಗಳ ಚಲಾವಣೆ!

Exit mobile version