Site icon Vistara News

ಮೊಗಸಾಲೆ ಅಂಕಣ: ಒಣಗಿದ ಜಿಲ್ಲೆಯಲ್ಲಿ ಜೋಗದ ಬದಲು ಕಚ್ಚಾಟದ ರೋಗ

Madhu Bangarappa Beluru Gopalakrishna

ಈ ವರ್ಷ ಮಳೆಗಾಲ ರಾಜ್ಯದಲ್ಲಿ ಸಂಪೂರ್ಣ ಕೈಕೊಟ್ಟಿದೆ. ವಾಡಿಕೆಯ ಒಂದಂಶದಷ್ಟೂ ಮಳೆ ಸುರಿದಿಲ್ಲ, ಒರತೆ ಒತ್ತಸಿಲ್ಲ. ಬಹುತೇಕ ಎಲ್ಲ ನದಿ ಹಳ್ಳ ತೊರೆಗಳೂ ಬತ್ತಿ ಹೋಗುವ ಹಂತದಲ್ಲಿವೆ. ಸರ್ವಋತು ನದಿಗಳೂ ಬಟಾಬಯಲಾಗುತ್ತಿವೆ. ದೊಡ್ಡ ದೊಡ್ಡ ಅಣೆಕಟ್ಟಿನ ಹಿಂಭಾಗದಲ್ಲಿ ನೂರಾರು ಹೆಕ್ಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಜಲಾಶಯಗಳು ದೊಡ್ಡ ದೊಡ್ಡ ಆಟದ ಮೈದಾನದಂತೆ ಭಾಸವಾಗುತ್ತಿವೆ. ಕೆರೆ ಕಟ್ಟೆಗಳಂತೂ ಒಣಗಿ ಹೋಗಿವೆ. ಜಾನುವಾರುಗಳು ಹುಲ್ಲಿಗಾಗಿ ಒಣಗಿ ಬಾಯ್ಬಿರಿದ ನೆಲ ನೆಕ್ಕುವ ಸ್ಥಿತಿ ಸಾಮಾನ್ಯವಾಗಿದೆ. ಕರ್ನಾಟಕಕ್ಕೆ ಹೆಸರು ತಂದ ಜೋಗದ ಜಲಪಾತವೂ ಸೇರಿದಂತೆ ಬಹುತೇಕ ದಭೆದಭೆಗಳಲ್ಲಿ ಧುಮ್ಮಿಕ್ಕುವ ಸುಂದರ ನೋಟ ನೀರೇ ಇಲ್ಲದೆ ನೀರವವಾಗಿದೆ. ಜೋಗ ಎಂದಾಕ್ಷಣ ಶರಾವತಿ ನೆನಪಿಗೆ ಬರುತ್ತದೆ. ಅಂಬುತೀರ್ಥದಲ್ಲಿ ಹುಟ್ಟಿ ಜೋಗದಲ್ಲಿ ಧುಮುಕುವವರೆಗೂ ಅದು ಸರಿಯುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಅದಕ್ಕೆ ವಿಶ್ವ ಖ್ಯಾತಿ ತಂದ ಜೋಗ್ ಫಾಲ್ಸ್ ಎನ್ನುವುದು ಮಳೆ ಇಲ್ಲದೆ ಜೋಕ್ ಫಾಲ್ಸ್ ಆಗಿದೆ.

ರಾಜಕಾರಣಕ್ಕೆ ಹೊರಳಿದರೆ ಜಲಪಾತಕ್ಕಿಂತ ಹೆಚ್ಚಿನ ಸದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಅಡರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ 135 ಶಾಸಕ ಬಲದೊಂದಿಗೆ ಅಧಿಕಾರ ಹಿಡಿದು ಹೊಯ್‍ಕೈ ಒಳ ಜಗಳದಲ್ಲಿ ಮುಳುಗಿರುವುದು ರಾಜಧಾನಿ ಬೆಂಗಳೂರಿನ ಸಮಾಚಾರವಾದರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವೇ ನಡೆದಿದೆ. ಆರು ತಿಂಗಳಿನಿಂದಲೂ ಅನಿಯಂತ್ರಿತವಾಗಿರುವ ಅಲ್ಲೋಲ ಕಲ್ಲೋಲದ ಒಂದು ತುದಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸೊರಬ ಶಾಸಕ ಮಧು ಬಂಗಾರಪ್ಪ ಇದ್ದಾರೆ. ಇನ್ನೊಂದು ತುದಿಯಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇದ್ದಾರೆ. ಇವರಿಬ್ಬರ ಜಗಳ ಮಲೆನಾಡ ಜಿಲ್ಲೆಯ ಪ್ರಶಾಂತ ವಾತಾವರಣದಲ್ಲಿ ಬಗ್ಗಡವೆಬ್ಬಿಸಿದೆ. ಸಮೃದ್ಧ ಮಳೆಗಾಲದ ದಿನಗಳಲ್ಲಿ ಭೋರ್ಗರೆದು ಧುಮ್ಮಿಕ್ಕುವ ಜೋಗ ಜಲಪಾತದ ನೆನಪನ್ನು ಈ ಇಬ್ಬರ ಜಗಳ ನೆನಪಿಸುತ್ತಿದೆ.

ಸಿದ್ದರಾಮಯ್ಯ ಸಂಪುಟ ರಚನೆ ಮಾಡಿದಾಗ ಹೃದಯ ಒಡೆದುಕೊಂಡವರು ಮುಖ್ಯವಾಗಿ ಇಬ್ಬರು. ಅದರಲ್ಲಿ ಮೊದಲಿಗರು ವಿಧಾನ ಪರಿಷತ್‍ನಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಎಂಎಲ್‍ಸಿಯಗಿರುವ ಬಿ.ಕೆ. ಹರಿಪ್ರಸಾದ್. ಎರಡನೆಯವರು ಬೇಳೂರು ಗೋಪಾಲಕೃಷ್ಣ. ಈ ಇಬ್ಬರೂ ಮಧು ಬಂಗಾರಪ್ಪನವರಂತೆ ಪ್ರಬಲ ರಾಜಕೀಯ ಪ್ರಭಾವ ಹೊಂದಿರುವ ಈಡಿಗ ಸಮುದಾಯಕ್ಕೆ ಸೇರಿದ ಮುಖಂಡರು. ಇಬ್ಬರೂ ಸಚಿವರಾಗುವ ಕನಸು ಕಟ್ಟಿಕೊಂಡಿದ್ದವರು. ಹರಿಪ್ರಸಾದ್ ಮೂರು ಅವಧಿ ರಾಜ್ಯಸಭಾ ಸದಸ್ಯರಾಗಿದ್ದು ಕಾಂಗ್ರೆಸ್ ಹೈಕಮಾಂಡ್‍ಗೆ ಬಹಳ ಬಹಳ ಬೇಕಾದವರೆಂದು ಪ್ರತೀತಿ. ಒಂದು ಒಂದೂವರೆ ವರ್ಷ ಹಿಂದಷ್ಟೇ ರಾಜ್ಯ ರಾಜಕಾರಣಕ್ಕೆ ಮರಳಿ ತಾವು ನೆಟ್ಟ ಸಚಿವ ಪಟ್ಟದ ಕನಸಿಗೆ ನೀರು ಗೊಬ್ಬರ ಹಾಕುತ್ತ ಬಂದವರು. ಬಿಜೆಪಿ ಆಡಳಿತ ಹೋಗುತ್ತದೆ; ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆಂಬ ಬಹುತೇಕರ ನಿರೀಕ್ಷೆ ಹರಿಪ್ರಸಾದ್ ಅವರದೂ ಆಗಿತ್ತು. ಮತ್ತು ಸಚಿವರಾಗುವ ಎಲ್ಲ ಅರ್ಹತೆಯೂ ಯೋಗ್ಯತೆಯೂ ಅವರಲ್ಲಿತ್ತು. ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತೆ ಸಿದ್ದರಾಮಯ್ಯ ಅವರನ್ನು ಸಂಪುಟದಿಂದ ಹೊರಗಿಟ್ಟರಷ್ಟೇ ಅಲ್ಲ ದೂರವೂ ಇಟ್ಟರು. ಹರಿಪ್ರಸಾದ್ ಸಚಿವರಾಗುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಕಾಲತ್ತು ವಹಿಸಿದ್ದರು. ಸ್ವತಃ ಸೋನಿಯಾ ಗಾಂಧಿಯವರು ಕೂಡಾ ಸಚಿವ ಪಟ್ಟಕ್ಕೆ ಹರಿಪ್ರಸಾದ್‍ರ ಹೆಸರನ್ನು ಶಿಫಾರಸು ಮಾಡಿದ್ದರು ಎಂಬ ಸುದ್ದಿಯೂ ಇದೆ. ಆದರೆ ಸಿದ್ದರಾಮಯ್ಯ ಅದ್ಯಾವುದನ್ನೂ ಪರಿಗಣಿಸಲಿಲ್ಲ.

ಬೇಳೂರರದು ಇನ್ನೊಂದು ಬಗೆಯ ಕಥೆ. ಸಾಗರದಿಂದ ಮೂರು ಬಾರಿ ಶಾಸಕರಾದವರು ಅವರು. ಬಿಜೆಪಿ ಶಾಸಕರೂ ಆಗಿದ್ದರು. ಆ ಸಮಯದಲ್ಲಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಮೇಲುಗೈ ಪಡೆದಿತ್ತು. ಅವರು ಮುಖ್ಯಮಂತ್ರಿಯಾದರು. ಅವರ ಸಂಪುಟದಲ್ಲಿ ಈಡಿಗ ಕೋಟಾದಲ್ಲಿ ತಾವು ಸಚಿವರಾಗುವ ಹಂಬಲ ಬೇಳೂರು ಅವರದಾಗಿತ್ತು. ಅಲ್ಲೂ ಕೂಡಾ ಅವರಿಗೆ ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಎಂಬಂತಾಯಿತು. ಅದೇ ಚುನಾವಣೆಯಲ್ಲಿ ಹರತಾಳು ಹಾಲಪ್ಪ ಪಕ್ಕದ ಸೊರಬ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈಡಿಗ ಕೋಟಾದ ಲಾಭ ಅವರಿಗೆ ದಕ್ಕಿ ಸಚಿವರಾದರಷ್ಟೇ ಅಲ್ಲ ಜಿಲ್ಲಾ ಉಸ್ತುವರಿ ಸಚಿವರೂ ಆದರು. ಈಗ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸದೇ ಇರುವ ಬೇಳೂರರು ಆಗ ಬಿಜೆಪಿ ವಿರುದ್ಧವೂ ಬಂಡಾಯದ ಬಾವುಟ ಹಾರಿಸಲಿಲ್ಲ. ಆದರೆ ಹರತಾಳರ ನಿದ್ದೆಗೆಡಿಸಲು ಏನೆಲ್ಲ ಬೇಕೋ ಆ ಎಲ್ಲ ರಾಜಕೀಯವನ್ನು ಮಾಡಿದರು ಎನ್ನುವುದು ಹರತಾಳರ ಶಿಬಿರದಿಂದ ಕೇಳಿಬರುವ ಆರೋಪ. ಹಗರಣವೊಂದರಲ್ಲಿ ಸಿಕ್ಕು ಬಿದ್ದ ಹರತಾಳರು ಸಚಿವ ಸ್ಥಾನ ಕಳೆದುಕೊಂಡರು. ಅವರು ಕಳೆದುಕೊಂಡಿದ್ದು ತನಗೇ ಸಿಗುತ್ತದೆಂಬ ಬೇಳೂರರ ಆಸೆ ಹಳಿ ಹತ್ತಲಿಲ್ಲ.

ಯಡಿಯೂರಪ್ಪ ಅಥವಾ ನಂತರದ ಬಿಜೆಪಿ ಸರ್ಕಾರದಲ್ಲಿ ಬೇಳೂರರಿಗೆ ಸಚಿವ ಸ್ಥಾನದ ರಾಜ ಮರ್ಯಾದೆ ಸಿಗಲೇ ಇಲ್ಲ. ಮುನಿಸಿಕೊಂಡ ಅವರು ಶಾಸಕ ಸ್ಥಾನದ ಅವಧಿ ಮುಗಿದ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಾಳಯ ಸೇರಿದರು. ಸಾಗರ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರದು ಬಹಳ ಆಳಕ್ಕೆ ಇಳಿದ ಕಾಡು ಮರದ ಬೇರಿನ ಬಗೆಯ ರಾಜಕೀಯ. ಚುನಾವಣಾ ಸೋಲು ಗೆಲುವು ಮೀರಿದ ರಾಜಕೀಯ ಶಕ್ತಿ ಅವರದು. ಅವರ ಹತ್ತಿರದ ಸೋದರ ಸಂಬಂಧಿ ಬೇಳೂರರು. ಕಾಗೋಡರಿಗೆ ವಯಸ್ಸು ಬಹಳ ಆಗಿರುವುದರಿಂದ ಬೇರೆ ಮುಖದ ಹುಡುಕಾಟ ಕಾಂಗ್ರೆಸ್‍ನಲ್ಲಿ ನಡೆದಿದೆ ಎಂಬ ವಾಸನೆ ಹಿಡಿದ ಬೇಳೂರರು ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರಷ್ಟೇ ಅಲ್ಲ 135 ಶಾಸಕರಲ್ಲಿ ಒಬ್ಬರಾಗಿ ಆಯ್ಕೆಯೂ ಆದರು. 1989ರಲ್ಲಿ ಕಾಂಗ್ರೆಸ್ ಪಕ್ಷ 178 ಶಾಸಕ ಬಲದೊಂದಿಗೆ ಅಧಿಕಾರಕ್ಕೆ ಬಂದಿತ್ತು. 1918ರಲ್ಲಿ 122 ಸದಸ್ಯ ಬಲದೊಂದಿಗೆ ಅಧಿಕಾರ ಹಿಡಿದಿತ್ತು. ಈಗ 2023ರಲ್ಲಿ ಪಕ್ಷ 135 ಶಾಸಕ ಬಲದಲ್ಲಿ ಅಧಿಕಾರ ಹಿಡಿಯಿತು. ಬೇಳೂರರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಅವರು ಅಂದುಕೊಂಡತೆಯೇ ಎಲ್ಲವೂ ನಡೆದಿದ್ದರೆ ಅವರಿಟ್ಟ ಆಸೆ ಈಡೇರುತ್ತಿತ್ತೋ ಏನೋ, ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನೇತೃತ್ವದ ಇಬ್ಬಣದಲ್ಲಿ ನಲುಗಿದ ಕಾಂಗ್ರೆಸ್ ಪಕ್ಷದ ಒಳಸುಳಿ ರಾಜಕೀಯ ಬೇಳೂರರ ಕನಸನ್ನು ಕಮರುವಂತೆ ಮಾಡಿತು.

ಈಗ ಬೇಳೂರರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿಯನ್ನು ತಮಗೆ ಆಗಿರುವ ಅನ್ಯಾಯಕ್ಕೆ ಗುರಿ ಮಾಡಿಲ್ಲ. ಬದಲಿಗೆ ಅವರ ಆಕ್ರೋಶ ಪುಟಿಯುತ್ತಿರುವುದು ಸಚಿವ ಮಧು ಬಂಗಾರಪ್ಪ ವಿರುದ್ಧ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕರಾಗಿರುವ ಮಧು ಅವರನ್ನು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಿರುವ ರೀತಿಯ ಬಗ್ಗೆ. ಶಿವಮೊಗ್ಗ ಜಿಲ್ಲೆ ರಾಜಕೀಯದಲ್ಲಿ ಈಡಿಗರದು ಗಣನೀಯ ಪಾತ್ರ. ಈ ಸಮುದಾಯದಿಂದ ಬೆಳೆದು ರಾಜಕೀಯದಲ್ಲಿ ವರ್ಚಸ್ವೀ ನಾಯಕರಾಗಿ ಬೆಳೆದ ಸಾರೆಕೊಪ್ಪ ಬಂಗಾರಪ್ಪ ರಾಜಕೀಯಕ್ಕೆ ಕರೆತಂದು ಬೆಳೆಸಿದ ಕೆಲವರಲ್ಲಿ ಬೇಳೂರು, ಹರತಾಳು ಕೂಡಾ ಇದ್ದಾರೆ. ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ನಾಯಕರೆನಿಸಿದವರು ಬಂಗಾರಪ್ಪ. ಅವರ ಭೌತಿಕ ನಿರ್ಗಮನದ ಬಳಿಕ ಆ ಮಟ್ಟಕ್ಕೆ ಏರುವುದು ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರಿಗೆ ಈವರೆಗೆ ಸಾಧ್ಯವಾಗಿಲ್ಲ. (ಮುಂದೆ ಅಂಥ ಅವಕಾಶ ಅವರಿಗೆ ಒಲಿದೀತೇ ಈಗಲೇ ಹೇಳಲಾಗದು) ಕಾಗೋಡು ತಿಮ್ಮಪ್ಪ ದಶಕಗಳ ಕಾಲ ರಾಜಕೀಯ ಮಾಡಿದರೂ ಸಿಎಂ ಹೊರತಾಗಿ ವಿವಿಧ ಹುದ್ದೆಗಳಲ್ಲಿ ವಿರಾಜಮಾನರಾದರೂ ಅವರು ಜಿಲ್ಲಾ ನಾಯಕ ಮಟ್ಟದಲ್ಲೇ ಉಳಿದರು, ರಾಜ್ಯದ ನಾಯಕ ಆಘುವ ಅವಕಾಶ ಅವರಿಗೆ ಒದಗಿ ಬರಲಿಲ್ಲ. ರಾಜ್ಯಮಟ್ಟದ ನಾಯಕರಾಗುವುದು ಅಷ್ಟೆಲ್ಲ ಸುಲಭದ ಮಾತಲ್ಲ ಎನ್ನುವುದು ಮಧು ಮತ್ತು ಬೇಳೂರರಿಬ್ಬರಿಗೂ ಗೊತ್ತಿದೆ. ಎಂದೇ ಜಿಲ್ಲೆಯ ನಾಯಕತ್ವ ಪಡೆಯುವುದಕ್ಕೆ ಪೈಪೋಟಿ ಸಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

ಮಧು ಅವರನ್ನು ಈಡಿಗ ಕೋಟಾದಲ್ಲಿ ಸಚಿವರನ್ನಾಗಿ ಮಾಡುವ ಮೂಲಕ ಸಿದ್ದರಾಮಯ್ಯ, ಹರಿಪ್ರಸಾದರನ್ನು ವ್ಯವಸ್ಥಿತವಾಗಿ ದೂರವಿಟ್ಟರು. ಅದೇ ಕಾಲಕ್ಕೆ ಶಿವಮೊಗ್ಗದಿಂದ ಇನ್ನೊಬ್ಬ ಈಡಿಗ ಮಂತ್ರಿ ಸ್ಥಾನಕ್ಕೆ ಏರದಂತೆ ತಡೆಯುವ ಯತ್ನವೂ ಯಶಸ್ವಿಯಾಯಿತು. ತನ್ನ ರಾಜಕೀಯ ಭವಿಷ್ಯಕ್ಕೆ ಮಧು ಬಂಗಾರಪ್ಪ ಕೊಡಲಿ ಕಾವಿನಂತಾಗಿದ್ದಾರೆಂಬ ಸೆಡವು ಸಿಟ್ಡು ಅಸಮಾಧಾನ ಆಕ್ರೋಶ ಬೇಳೂರರಲ್ಲಿ ಮಡುಗಟ್ಟಿದೆ. ಹೋದಲ್ಲಿ ಬಂದಲ್ಲಿ ಅವರು ಕುದಿ ಎಸರಿನಂತಾಗಿರುವ ಸಿಟ್ಟನ್ನು ಕಾರಿಕೊಳ್ಳುತ್ತಿದ್ದಾರೆ. ಮಧು ಬಂಗಾರಪ್ಪ ಈ ವಿಚಾರದಲ್ಲಿ ಮೌನ ವ್ರತಧಾರಿಯೇನೂ ಅಲ್ಲ. ಬೇಳೂರರಿಗೆ ಕಿರಿಕಿರಿ ಮಾಡುವ ತಂತ್ರ ಅವರಿಗೂ ಗೊತ್ತಿದೆ, ಮಾಡುತ್ತಿದ್ದಾರೆ ಕೂಡಾ. ಮಧು ತಾವು ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗಲೆಲ್ಲ ಸ್ಥಳೀಯ ಶಾಸಕರಾದ ತಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ಆರೋಪ ಬೇಳೂರರದು. ತಮ್ಮ ಕ್ಷೇತ್ರದಲ್ಲಿ ಅಧಿಕೃತ ಪ್ರವಾಸ ಮಾಡುವಾಗ ಶಿರಸಿ-ಸಿದ್ದಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೀಮಣ್ಣ ನಾಯ್ಕರನ್ನು ಜೊತೆಗಿಟ್ಟುಕೊಂಡು ಓಡಾಡುತ್ತಾರೆಂಬ ಮಾತನ್ನೂ ಬೇಳೂರರು ಆಡಿದ್ದು ವರದಿಯಾಗಿದೆ; ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅವರು ಸುಮ್ಮನೆ ಹೇಳಿರಲಿಕ್ಕಿಲ್ಲ ಎನ್ನಲು ಸಾಕಷ್ಟು ಪೂರಕ ಪುರಾವೆ ಅವರಲ್ಲಿರಲೇಬೇಕು. ಭೀಮಣ್ಣ ನಾಯ್ಕರು, ಮಧು ಬಂಗಾರಪ್ಪನವರ ಸೋದರ ಮಾವ. ತಾಯಿಯ ತಮ್ಮ. ಇವರಿಬ್ಬರದು ರಕ್ತ ಸಂಬಂಧ ಒಂದೆಡೆಯಾದರೆ ಮಿತ್ರತ್ವ ಇನ್ನೊಂದೆಡೆ. ಮಧು ಅವರಿಗೆ ರಾಜಕೀಯವಾಗಿ ಅನುಕೂಲ ಆಗುತ್ತದೆ ಎಂದಾದರೆ ಪಕ್ಷ ರಾಜಕಾರಣವನ್ನು ಬದಿಗೆ ತಳ್ಳುವ ಸ್ವಭಾವ ಭೀಮಣ್ಣ ನಾಯ್ಕರದು.

ಇವರಿಬ್ಬರನ್ನೂ ಕರೆದು ಚರ್ಚೆ ನಡೆಸಿ ಹೊಂದಿಕೊಂಡು ಹೋಗಿ ಎನ್ನುವ ಅಧಿಕಾರ ಅರ್ಹತೆ ಇರುವ ಕಗೋಡು ತಿಮ್ಮಪ್ಪನವರು ಮೌನ ತಾಳಿದ್ದಾರೆ. ಪಕ್ಷದೊಳಗೆ ನಡೆಯುತ್ತಿರುವ ನಿತ್ಯ ಜಗಳಕ್ಕೆ ಒಂದು ತೆರೆ ಎಳೆಯುವ ಕೆಲಸಕ್ಕೆ ಅವರು ಮುಂದಾಗದೇ ಇರುವುದಕ್ಕೆ ಅವರದೇ ಆದ ರಾಜಕಾರಣದ ಕಾರಣವಿರಬಹುದು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ತಮಗೆ ಟಿಕೆಟ್ ನಿರಾಕರಿಸಿದ್ದರ ಬಗ್ಗೆ ಅವರಲ್ಲಿ ಅಸಮಾಧಾನವಿದೆ; ತಮಗೆ ಕೊಡದಿದ್ದರೆ ಮಗಳು ರಾಜನಂದಿನಿಗಾದರೂ ಕೊಡಿ ಎಂಬ ಅವರ ಅವಹಾಲು ಕೆಲಸ ಮಾಡಲಿಲ್ಲ. ಜೀವನದ ಉದ್ದಕ್ಕೂ ಸಮಾಜವಾದಿ ಸಿದ್ಧಾಂತದ ಬಗ್ಗೆ ಹೇಳುತ್ತ ಬಂದಿರುವ ಕಾಗೋಡರ ಮಗಳು ಇದೀಗ ಬಿಜೆಪಿ ಪಾಳಯದಲ್ಲಿದ್ದಾರೆ. ಇದೆಲ್ಲ ಅವರನ್ನು ರಾಜಕೀಯದಿಂದ ಒಂದಿಷ್ಟು ದೂರ ಇರುವಂತೆ ಮಾಡಿರಬಹುದು. ಇನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸ್ಥಿತಿ. ಒಳಜಗಳದಲ್ಲಿ ಪಕ್ಷದ ಮಾನವನ್ನು ಹಾದಿಬೀದಿ ರಂಪಕ್ಕೆ ಬಳಸಿಕೊಳ್ಳುತ್ತಿರುವ ಇಬ್ಬರು ಶಾಸಕರ ವಿರುದ್ಧ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವರಿಷ್ಟರು ಕೈಚೆಲ್ಲಿರುವುದು ಸದ್ಯದ ನೋಟ. ಹಾಗಂತ ಕೆಪಿಸಿಸಿಗೆ ಇದು ಗೊತ್ತಿಲ್ಲವೆಂದೇನೂ ಅಲ್ಲ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ಧ ಶೀತಲ ಸಮರ ಸಾರಿರುವಾಗ, ನೀವು ಕಚ್ಚಾಡಬಾರದು ಎಂದು ಅವರು ಯಾವ ಬಾಯಲ್ಲಿ ಹೇಳಿಯಾರು. ಮಧು ಮತ್ತು ಬೇಳೂರರ ನಡುವಣ ನಿತ್ಯ ಪ್ರಹಸನ ವರ್ತಮಾನ ಕರ್”ನಾಟಕ”ದ ಮುಂದುವರಿದ ಅಂಕವಾಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂತರಾಜು ವರದಿ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣು

Exit mobile version