Site icon Vistara News

ಮೊಗಸಾಲೆ ಅಂಕಣ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಎಂಬ ಕೌತುಕದ ಗೂಡು

siddaramaiah

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು (siddaramaiah) ಕೋಲಾರ ಮತ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಗೆಲ್ಲಿಸಿ ಮತ್ತೆ ಸಿಎಂ ಹುದ್ದೆಯಲ್ಲಿ ಕುಳ್ಳಿರಿಸುವ ಹರಸಾಹಸದಲ್ಲಿ ತಮ್ಮನ್ನು ತಮ್ಮ ನೇತೃತ್ವದ ಬಣವನ್ನು ತೊಡಗಿಸಿಕೊಂಡಿರುವ ವಿಧಾನ ಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ ಕುಮಾರ್ ಛಲಬಿಡದ ತ್ರಿವಿಕ್ರಮನಂತೆ “ಪ್ರವಾಹದ ವಿರುದ್ಧ ಈಜುವ” ಯತ್ನವನ್ನು ಮುಂದುವರಿಸಿದ್ದಾರೆ. ಈಗಾಗಲೇ ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧಿಸಲು ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ವರಿಷ್ಠ ಮಂಡಳಿ ಎರಡನೇ ಕ್ಷೇತ್ರವಾಗಿ ಕೋಲಾರದಲ್ಲಿ ಕಣಕ್ಕಿಳಿಯಲು ಅವರಿಗೆ ಹಸಿರುನಿಶಾನೆ ತೋರುವುದೋ ಇಲ್ಲವೋ ಎನ್ನುವುದು ಮೂರನೆಯ ಮತ್ತು ಅಂತಿಮ (?) ಪಟ್ಟಿ ಹೊರಕ್ಕೆ ಬರುವವರೆಗೆ ಹೇಳಲಾಗದು. ಸಿದ್ದರಾಮಯ್ಯ ಪರವಾಗಿ ಬಹಿರಂಗವಾಗೇ ಬ್ಯಾಟಿಂಗ್ ನಡೆಸುತ್ತಿರುವ ರಮೇಶ್‌ ಕುಮಾರರ ಆತ್ಮವಿಶ್ವಾಸ ಬತ್ತಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಎಲ್ಲೆಲ್ಲಿ ಯಾವ್ಯಾವ ಸ್ವಿಚ್ಚನ್ನು ಒತ್ತಿದರೆ ಎಲ್ಲೆಲ್ಲಿ ಬೆಳಕು ಮೂಡುತ್ತದೆಂಬುದನ್ನು ಬಲ್ಲವರಂತೆ ಅವರ ಕೆಲಸ ಸಾಗಿದೆ.

ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆತಂದು ಗೆಲ್ಲಿಸಬೇಕು; ಅವರನ್ನು ಸೋಲಿಸುವ ಯತ್ನ ನಡೆದಿದ್ದು ಆ ಶಕ್ತಿಗಳು ಯಶಸ್ಸು ಪಡೆದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗುತ್ತದೆ. ಇಂಥ ಆತ್ಮಹತ್ಯಾಕಾರಿ ನಿಲುವು ಒಳ್ಳೆಯದಲ್ಲ ಎಂದು ಅವರು ಈಗಾಗಲೇ ವ್ಯಕ್ತಪಡಿಸಿರುವ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಒಳಗೆ, ಹೊರಗೆ, ವಿರೋಧೀ ಪಾಳಯದ ಮೊಗಸಾಲೆಯಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಕಾರಣ ಕಲ್ಪಿಸಿದೆ. ರಮೇಶ್ ಕುಮಾರ್ ಅವರ ಈ ಹೇಳಿಕೆಯನ್ನು ವಿಶ್ಲೇಷಿಸುವುದಕ್ಕೆ ಮೊದಲು ಈ ಹಿಂದಿನ ಒಂದಿಷ್ಟು ಘಟನೆಗಳತ್ತ ನೋಟ ಹರಿಸುವುದು ಒಳಿತು.

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕಣದಲ್ಲಿ ಸೋತ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್‌ ಕುಮಾರ್ ಅವರದು ಪಕ್ಷ ಒಂದೇ ಆದರೂ “ಅವರೊಂದು ತೀರಾ, ಇವರೊಂದು ತೀರಾ” ಸ್ವಭಾವದವರು. ಅವರ ಸಂಬಂಧ ಹಾವು ಮುಂಗಸಿ ಗೆಳೆತನದಂತೆ… ಎಣ್ಣೆ ಸೀಗೇಕಾಯಿ ಸಂಬಂಧದಂತೆ. ಏಳೇಳು ಜನ್ಮದ ವೈರಿಗಳಂತೆ ಅವರ ನಿಲುವು. 2019ರ ಚುನಾವಣೆಯಲ್ಲಿ ಏಳನೇ ಬಾರಿಗೆ ಕಣಕ್ಕೆ ಇಳಿದಿದ್ದ ತಮ್ಮ ದಾಖಲೆ ಮಣ್ಣುಗೂಡಲು ಕಾರಣವಾದ ಘನಘೋರ ಪರಾಭವಕ್ಕೆ ರಮೇಶ್‌ ಕುಮಾರ್ ಮತ್ತು ಅವರ ನೇತೃತ್ವದ ಬಣ ಕಾರಣ ಎನ್ನುವುದು ಮುನಿಯಪ್ಪನವರಲ್ಲಿ ಅಳಿಸಲಾಗದಂತೆ ಕೆತ್ತಿ ನಿಂತಿರುವ ಶಂಕಾತೀತ ತೀರ್ಮಾನ. ಪಕ್ಷದ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣರಾದ “ಪಕ್ಷದ್ರೋಹಿಗಳ” ವಿರುದ್ಧ ಕಾಂಗ್ರೆಸ್‍ನ ತಥಾಕಥಿತ ಶಿಸ್ತು ಸಮಿತಿ ಯಾವೊಂದು ಕ್ರಮವನ್ನೂ ಜರುಗಿಸಲಿಲ್ಲ ಎಂದು ದೂರುವ ಮುನಿಯಪ್ಪ ಪ್ರಕಾರ, ಮಾಜಿ ಸಂಸದ ಕೆ.ರಹಮಾನ್‌ ಖಾನ್ ಅಧ್ಯಕ್ಷರಾಗಿರುವ ಶಿಸ್ತು ಸಮಿತಿಯ ಮೃದು ಧೋರಣೆಗೆ ಕಾರಣ ರಮೇಶ್‌ ಕುಮಾರ್ ಜೊತೆ ಅಖಂಡವಾಗಿ ನಿಂತಿರುವ ಸಿದ್ದರಾಮಯ್ಯ. ರಮೇಶ್ ಕುಮಾರ್‌ ಅವರಿಗೆ ಅರ್ಥವಾಗುವ ಪಾಠ ಕಲಿಸುವುದಕ್ಕೆ ಮುನಿಯಪ್ಪ ಬಣ ಕಂಡುಕೊಂಡಿರುವ ಮಾರ್ಗಗಳಲ್ಲಿ ಸಿದ್ದರಾಮಯ್ಯನವರನ್ನು ಕೋಲಾರ ಮತಕ್ಷೇತ್ರದಲ್ಲಿ ಮಣ್ಣು ಮುಕ್ಕುವಂತೆ ಮಾಡುವುದು ಒಂದಾಗಿದೆ.

ಟಿಕೆಟ್ ಹಂಚಿಕೆ ಪ್ರಕ್ರಿಯೆ ಶುರುವಾದ ಬಳಿಕ ಮತ್ತು ಅದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ನಡೆಸಿದ ಸಮೀಕ್ಷೆಗಳು ಸಿದ್ದರಾಮಯ್ಯನವರಿಗೆ ಕೋಲಾರ ವಾಟರ್‌ಲೂ ಆಗುವ ಸಂಗತಿ ಅನಾವರಣಗೊಳಿಸಿದ್ದವು. ಒಂದಲ್ಲ ಎರಡಲ್ಲ ನಾಲ್ಕು ಸಮೀಕ್ಷಾ ವರದಿಗಳೂ ಒಂದೇ ಅಭಿಪ್ರಾಯ ವ್ಯಕ್ತಪಡಿಸಿದ ನಂತರದಲ್ಲಿ ಕೋಲಾರ ಕ್ಷೇತ್ರವನ್ನು ಪೆಂಡಿಂಗ್‍ನಲ್ಲಿಟ್ಟು ವರುಣಾವನ್ನು ಸಿದ್ದರಾಮಯ್ಯಗೆ ಮರಳಿಸಲಾಯಿತು. ವರುಣಾದಲ್ಲಿ ತಾವು ಸ್ಪರ್ಧಿಸುವುದು ಎಂದರೆ ಮಗ ಯತೀಂದ್ರರ ಭವಿಷ್ಯಕ್ಕೆ ಕೊಡಲಿ ಏಟು ಹಾಕಿದಂತೆ ಎನ್ನುವುದು ದಶಕಗಳ ರಾಜಕೀಯ ಅನುಭವಸ್ತ ಸಿದ್ದರಾಮಯ್ಯನವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಆದರೆ ಏನು ಮಾಡೋಣ ಎಂಬ ಅಸಹಾಯಕತೆಯಲ್ಲಿ ಅವರು ನಾಮಪತ್ರ ಸಲ್ಲಿಸುವ ಮುಹೂರ್ತ ಹತ್ತಿರಹತ್ತಿರ ಆಗುತ್ತಿದೆ. ತಮಗೆ ಕೋಲಾರದಲ್ಲೂ ಸ್ಪರ್ಧಿಸುವುದಕ್ಕೆ ಅನುಮತಿ ಕೊಡುವಂತೆ ಅವರು ಹೈಕಮಾಂಡ್‍ಗೆ ಹಗಲೂರಾತ್ರಿ ಎಂಬಂತೆ ದುಂಬಾಲು ಬಿದ್ದಿದ್ದಾರೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದಕ್ಕೆ ಸಿದ್ದರಾಮಯ್ಯನವರಲ್ಲಿರುವ ಕಾರಣ ಬೇರೆ. ಕಾಂಗ್ರೆಸ್ ಹೈಕಮಾಂಡ್ ಯೋಚಿಸುತ್ತಿರುವ ಕಾರಣ ಬೇರೆ. ಎರಡೂ ಕ್ಷೇತ್ರದಲ್ಲಿ ಗೆದ್ದ-ರೆ ಕೋಲಾರ ಉಳಿಸಿಕೊಂಡು ವರುಣಾದಲ್ಲಿ ಉಪ ಚುನಾವಣೆ ನಡೆಯುವಂತೆ ಮಾಡಿ, ತಮಗಾಗಿ ಕ್ಷೇತ್ರ “ತ್ಯಾಗ” ಮಾಡಿರುವ ಮಗ ಯತೀಂದ್ರರಿಗೆ ರಾಜಕೀಯ ಮರುವಸತಿ ಕಲ್ಪಿಸುವುದು ಸಿದ್ದರಾಮಯ್ಯನವರಲ್ಲಿರುವ ಕಾರಣ. ಎರಡು ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದರಾಮಯ್ಯನವರಿಗೆ ಅವಕಾಶ ಕಲ್ಪಿಸಿದರೆ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶ ರವಾನೆಯಾಗಿ ಚುನಾವಣಾ ಭವಿಷ್ಯ ಸ್ವಪಕ್ಷೀಯರಿಂದಲೇ, ಮುಖ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಣದವರ ಮೂಲಕ ಅಸ್ತವ್ಯಸ್ತವಾಗುವ ಅಪಾಯದ ಗ್ರಹಿಕೆ ಕಾಂಗ್ರೆಸ್‍ನ ಆತಂಕದ ಕಾರಣ. ಹೀಗಿದ್ದರೂ ರಮೇಶ್ ಕುಮಾರ್ ಬಣದ ಆಸೆ ಮಾತ್ರ ಬತ್ತಿಹೋಗಿಲ್ಲ.

ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಬಾದಾಮಿ ಕ್ಷೇತ್ರದಲ್ಲಿ ಗೆದ್ದರೇನೋ ನಿಜ, ಆದರೆ ಗೆಲುವಿನ ಅಂತರ ಮೂರು ಸಾವಿರವನ್ನು ದಾಟಲಿಲ್ಲ. ಐದು ವರ್ಷ ಕಾಲ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಎನಿಸಿದ್ದ ಅವರ ಚುನಾವಣಾ ಪಾಡು ನಗೆಪಾಟಲಿಗೆ ಈಡಾಗಿಸಿದ್ದು ಗೆಲುವಿನ ಈ ಅಂತರ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆಂಬ ಸುದ್ದಿ ದಿಢೀರ್ ಆಗಿ ಉದ್ಭವವಾಗಿದ್ದಲ್ಲ. ರಮೇಶ್‌ ಕುಮಾರ್ ನೇತೃತ್ವದಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದ ಪೂರ್ವಾಪರ ಜಾತಕವನ್ನು ಜಾಲಾಡಲಾಯಿತು. ಇಪ್ಪತ್ತು ವರ್ಷದಿಂದ ಅಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಲಿಲ್ಲ. ಜೆಡಿಎಸ್ ಆ ಕ್ಷೇತ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಗಾವುದ ದೂರದಲ್ಲಿ ಕಾಂಗ್ರೆಸ್ಸನ್ನು ನಿಲ್ಲಿಸಿತ್ತು.

ಈ ಅಂಶ ಸಿದ್ದರಾಮಯ್ಯ ಗೆಲುವಿಗೆ ಒಂದು ಹಿನ್ನಡೆ ಆಗಬಹುದೆಂದು ರಮೇಶ್ ಕುಮಾರ್ ಬಣ ಭಾವಿಸಲಿಲ್ಲ. ಆ ಬಣದ ಪ್ರಕಾರ ಸೋಲಿನ ಮುಖ್ಯ ಕಾರಣ ಕ್ಷೇತ್ರದ ಮತ ಬ್ಯಾಂಕನ್ನು ಕಾಂಗ್ರೆಸ್ ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾಗಿದ್ದು. ಸಿದ್ದರಾಮಯ್ಯ ಈ ಸಲ ಸ್ಪರ್ಧಿಸಿದರೆ ಅಲ್ಪಸಂಖ್ಯಾತ ಮುಸ್ಲಿಂ, ಹಿಂದುಳಿದ, ದಲಿತ (ಅಹಿಂದ) ವರ್ಗಗಳ ಓಟು ಸಿದ್ದರಾಮಯ್ಯನವರಿಗೆ ಸುರಿದು ಅವರು ಗೆಲ್ಲುತ್ತಾರೆ, ಅದರೊಂದಿಗೆ ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ನವಚೇತನ ಪಡೆಯುತ್ತದೆ ಎನ್ನುವುದು ರಮೇಶ್‌ ಕುಮಾರ್ ಬಣದ ತರ್ಕ. ವರುಣಾದಲ್ಲಿ ಸಿದ್ದರಾಮಯ್ಯ ಟಿಕೆಟ್ ಪಕ್ಕಾ ಆದ ಮಾತ್ರಕ್ಕೆ ಕೋಲಾರದ ಅಧ್ಯಾಯ ಮುಕ್ತಾಯವಾಗಿಲ್ಲ ಎನ್ನುವುದು ಅವರೆಲ್ಲರ ನಂಬಿಕೆ. ಈ ನಂಬಿಕೆ ಇನ್ನೂ ಜೀವಂತ ಇರುವುದಕ್ಕೆ ಅವರು ಕೊಡುವ ಕಾರಣ, ಕೋಲಾರ ಕ್ಷೇತ್ರದಲ್ಲಿ ಇನ್ನೂ ಯಾರಿಗೂ ಟಿಕೆಟ್ ಘೋಷಿಸದೇ ಇರುವ ಹೈಕಮಾಂಡ್ ತೀರ್ಮಾನ.

ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು ನೂರಕ್ಕೆ ನೂರು ಖಚಿತ ಎಂಬುದು ಹೈಕಮಾಂಡ್ ವಿಶ್ವಾಸ. ನಾಮಪತ್ರ ಸಲ್ಲಿಸಿ ಇಡೀ ರಾಜ್ಯ ಸುತ್ತಿ ಚುನಾವಣಾ ಪ್ರಚಾರ ಮಾಡುವುದಕ್ಕೆ ಸಿದ್ದರಾಮಯ್ಯಗೆ ಸಾಧ್ಯವಾಗುತ್ತದೆ. ಸದ್ಯಕ್ಕೆ ಆ ಪಕ್ಷದ ಸ್ಟಾರ್ ಕ್ಯಾಂಪೇನರ್ ಸಿದ್ದರಾಮಯ್ಯ ಎನ್ನುವುದರಲ್ಲಿ ಉಳಿದವರಿಗೆ ಹಾಗಿರಲಿ ಬಿಜೆಪಿಗೂ ಅನುಮಾನವಿಲ್ಲ. ಕೋಲಾರದಲ್ಲಿ ಅವರು ಕಣಕ್ಕೆ ಇಳಿದುದೇ ಹೌದಾದರೆ ಬೇರೆ ಕ್ಷೇತ್ರ ಸುತ್ತಲಾಗದಂತೆ ಅವರನ್ನು ಅಲ್ಲೇ ಕಟ್ಟಿ ಹಾಕುವ ವಿರೋಧ ಪಕ್ಷಗಳ ತಂತ್ರಗಾರಿಕೆ ಅಪಾಯವನ್ನು ಕಾಂಗ್ರೆಸ್ ವರಿಷ್ಠ ಮಂಡಳಿ ಗ್ರಹಿಸಿದೆ. ಎಂದೇ ಅದು ವರುಣಾದಲ್ಲಿ ಸ್ಪರ್ಧೆಗೆ ಅವಕಾಶ ನೀಡಿದೆ. ಇನ್ನೊಂದು ಕ್ಷೇತ್ರವಾಗಿ ಕೋಲಾರವನ್ನು ಸಿದ್ದರಾಮಯ್ಯನವರಿಗೆ ಕೊಟ್ಟರೆ ತಮಗೆ ಕೊರಟಗೆರೆ ಕ್ಷೇತ್ರದ ಜೊತೆಗೆ ಪುಲಿಕೇಶಿ ನಗರದ ಟಿಕೆಟನ್ನೂ ನೀಡಬೇಕೆಂದು ಜಿ.ಪರಮೇಶ್ವರ ಪಟ್ಟು ಹಿಡಿದಿದ್ದಾರೆ. ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕಿದಂತಾಗಿರುವ ಸ್ಥಿತಿಗೆ ಕಾಂಗ್ರೆಸ್ಸನ್ನು ತಂದು ನಿಲ್ಲಿಸಿರುವ ಬೆಳವಣಿಗೆ ಇದು. ಮೂರನೇ ಮತ್ತು ಕೊನೆ ಪಟ್ಟಿ ಬಿಡುಗಡೆಗೆ ಮೊದಲು ಇನ್ನಷ್ಟು ಮಂದಿ ಕಾಂಗ್ರೆಸ್ಸಿಗರು ಎರಡನೇ ಕ್ಷೇತ್ರಕ್ಕೆ ಬೇಡಿಕೆ ಮಂಡಿಸಿ ಪಕ್ಷದ ವರಿಷ್ಠರ ಮಂಡೆ ಬಿಸಿ ಹೆಚ್ಚಿಸುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮೋದಿ, ಖರ್ಗೆ ಹಣಾಹಣಿಗೆ ವೇದಿಕೆ ಸಜ್ಜು

ಸಿದ್ದರಾಮಯ್ಯ ಸೋತರೆ, ಅವರನ್ನು ಸೋಲಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವ ನಾಶವಾಗುತ್ತದೆಂಬ ರಮೇಶ್ ಕುಮಾರ್ ಹೇಳಿಕೆ. ಇದನ್ನು ಯಾರು ಕೇಳಬೇಕೆಂದು ಅವರು ಹೇಳಿದ್ದಾರೆನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟದ್ದೇನೂ ಅಲ್ಲ. ಅವರ ಮಾತನ್ನು ವಿರೋಧ ಪಕ್ಷಗಳು ಕಿವಿ ಮೇಲೆ ಹಾಕಿಕೊಳ್ಳುವುದು ಅಸಂಭವ. ಅತ್ತ ಜೆಡಿಎಸ್‍ನ ಎಚ್.ಡಿ. ಕುಮಾರಸ್ವಾಮಿ, ಇತ್ತ ಬಿಜೆಪಿಯ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಸೋಲನ್ನು ಆನಂದಿಸಲು ಸಿದ್ಧವಾಗಿ ನಿಂತಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಹೇಗೆ ಗೆಲ್ಲುತ್ತಾರೋ ನೋಡೋಣ ಎಂಬ ಕುಮಾರಸ್ವಾಮಿ ಮಾತಿನಲ್ಲಿ ಸವಾಲು ದೊಡ್ಡ ಪ್ರಮಾಣದಲ್ಲಿದೆ.

ಬೊಮ್ಮಾಯಿಯವರಂತೂ ಪಕ್ಷದ ಸರ್ವಶಕ್ತಿಯನ್ನೂ ಸಿದ್ದರಾಮಯ್ಯ ವಿರುದ್ಧ ವಿನಿಯೋಗ ಮಾಡಲು ಚುನಾವಣಾ ಮುಹೂರ್ತದ ಕ್ಷಣಗಣನೆಯಲ್ಲಿದ್ದಾರೆ. ಕಾಂಗ್ರೆಸ್ ವಿರೋಧಿ ಪಕ್ಷಗಳ ಗುರಿ ಸಿದ್ದರಾಮಯ್ಯ ಸೋಲು. ಇದು ರಮೇಶ್ ಕುಮಾರ್‌ಗೆ ಗೊತ್ತೇ ಇರುವ ರಾಜಕೀಯ. ರಾಜಕೀಯದಲ್ಲಿ ಎದುರಾಳಿ ಗೆಲ್ಲಲಿ ಎನ್ನುವುದು ಇಲ್ಲವೇ ಇಲ್ಲ. ಹಾಗಾಗಿ ಅವರಿಗೆ ಮನವಿ ಮಾಡಿಕೊಳ್ಳುವುದರಲ್ಲಿ ಯಾವುದೇ ಬಗೆಯ ಪುಣ್ಯವೂ ಇಲ್ಲ ಪುರುಷಾರ್ಥವೂ ಇಲ್ಲ.

ರಮೇಶ್ ಕುಮಾರ್ ಮನವಿ ಕಾಂಗ್ರೆಸ್‍ನ ಕೆ.ಎಚ್. ಮುನಿಯಪ್ಪ ಬಣಕ್ಕೆ. ಮುನಿಯಪ್ಪ ಅಭಯಹಸ್ತ ನೀಡುತ್ತಾರೆಯೇ ಅನುಮಾನ, ಅನುಮಾನ. ಸಿದ್ದರಾಮಯ್ಯನವರನ್ನು ಕೈಹಿಡಿದು ಎಳೆದು ತಂದಾದರೂ ಕೋಲಾರದಲ್ಲಿ ನಿಲ್ಲಿಸುವ ಹಟಕ್ಕೆ ಬಿದ್ದಿರುವ ರಮೇಶ್ ಕುಮಾರ್ ಅವರಿಗೆ ಅದೇ ರೀತಿ ಹಟದಲ್ಲಿರುವ ಮುನಿಯಪ್ಪ ಚೆಕ್‍ಮೇಟ್ ಆಗುತ್ತಾರೆಯೇ. ಇದು ಆಗಬಹುದು ಎನ್ನುವುದು ಕಾಂಗ್ರೆಸ್ ವರಿಷ್ಠರ ಅನುಮಾನ. ಅನುಮಾನದ ಹುಳು ಹೊಕ್ಕರೆ ಆ ತಲೆ ಮೊಸರು ಗಡಿಗೆಯಾಗುವ ಅಪಾಯ ಇದ್ದೇ ಇದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ರಾಜ್ಯ ಬಿಜೆಪಿ ಕಲಿಯಲೊಲ್ಲದ ಪಾಠ

Exit mobile version