ದೇವರಾಜ ಅರಸು ಕಾಲದ ಹಳಬ ರಾಜಕಾರಣಿ ಅಡಗೂರು ಎಚ್. ವಿಶ್ವನಾಥ್ ಇದೀಗ ಹೊಸ ಗೂಡು ಅರಸುತ್ತ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲವೂ ವಿಶ್ವನಾಥ್ ಅಂದುಕೊಂಡಂತೆಯೇ ನಡೆದಲ್ಲಿ ಒಂದಾನೊಂದು ಕಾಲದಲ್ಲಿ ತಾವು ಇದ್ದ ಕಾಂಗ್ರೆಸ್‍ಗೆ ಮರಳಲಿದ್ದಾರೆ. ತೌರು ಮನೆಯನ್ನು ಸೇರಿಕೊಳ್ಳಬೇಕೆಂಬ ಅವರ ತವಕ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬೇಕು-ಬೇಡವನ್ನು ಅವಲಂಬಿಸಿದೆ. ಏಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ದೆಹಲಿಗೇ ಹೋಗಿ ಭೇಟಿ ಮಾಡಿ ತಮಗೆ ಕಾಂಗ್ರೆಸ್ ಸೇರುವುದಕ್ಕೆ ನೆರವಾಗಬೇಕು ಎಂದು ಕೋರಿರುವ ವಿಶ್ವನಾಥ್, ಅಲ್ಲಿಂದ ಮರಳಿದವರು ಸೀದಾ ಹೋಗಿ ಭೇಟಿಯಾಗಿದ್ದು ಸಿದ್ದರಾಮಯ್ಯನವರನ್ನು. ನಿನ್ನೆ ಮೊನ್ನೆವರೆಗೂ ಸಿದ್ದರಾಮಯ್ಯ ಮತ್ತು ವಿಶ್ವನಾಥ್ ಅವರ ಗೆಳೆತನ ಹಾವು ಮುಂಗಸಿಯಂತಿದ್ದುದು ಮುಂದಿನ ದಿನಗಳಲ್ಲಿ ಯಾವ ರೂಪು ತಾಳುತ್ತದೋ ಹೇಳಲಾಗದು.
ಬಣ್ಣಬಣ್ಣದ ಹೂಗುಚ್ಚ ಸಹಿತ ಸಿದ್ದರಾಮಯ್ಯನವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾದಾಗ ಇಬ್ಬರ ಮುಖವೂ ಕ್ಯಾಮೆರಾ ಮುಂದೆ ಹೂಗಳಿಗಿಂತ ಹೆಚ್ಚು ಅರಳಿದ್ದು ಸತ್ಯ. ದೆಹಲಿಯಲ್ಲಿ ಖರ್ಗೆಯವರನ್ನು ಅವರು ಏಐಸಿಸಿಗೆ ಅಧ್ಯಕ್ಷರಾಗಿದ್ದಕ್ಕೆ ಅಭಿನಂದಿಸಲು ಭೇಟಿಯಾಗಿದ್ದೆ ಎಂದಿದ್ದಾಗಲೀ ಅಥವಾ ಸಿದ್ದರಾಮಯ್ಯನವರನ್ನು ಅವರ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೆ ಎಂಬುದಾಗಲೀ ವಿಶ್ವನಾಥ್ ಹೇಳುತ್ತಿರುವ “ಕಾಗಕ್ಕ ಗುಬ್ಬಕ್ಕ ಕಥೆ” ಎನ್ನುವುದು ಎಲ್ಲ ಬಲ್ಲ ಸಂಗತಿ. ಸ್ವತಃ ವಿಶ್ವನಾಥ್ ತಾವಾಡಿರುವ ಈ ಮಾತಿಗೆ ಒಳಗೊಳಗೇ ನಗುತ್ತಿರುತ್ತಾರೆ. ಅವರ ಭೇಟಿಯ ಉದ್ದೇಶ ಕಾಂಗ್ರೆಸ್‍ಗೆ ಸೇರುವುದು; ಅಲ್ಲೀವರೆಗೆ ಎಷ್ಟು ಸಾಧ್ಯವೋ ಅಷ್ಟೂ ಭಾರತೀಯ ಜನತಾ ಪಕ್ಷಕ್ಕೆ ಡ್ಯಾಮೇಜ್ ಮಾಡುವುದು.
ಸುಲಭವಾಗಿ ಊಹಿಸಬಹುದಾದ ಈ ಮುಲಾಖಾತ್ ವಿದ್ಯಮಾನದ ವಿವರ ಈ ರೀತಿ ಇದೆ: ದೆಹಲಿಯಲ್ಲಿ ವಿಶ್ವನಾಥ್ ಭೇಟಿಗೆ ಖರ್ಗೆ ಕಚೇರಿ ಒಕೆ ಎನ್ನುತ್ತದೆ. ವಿಶ್ವನಾಥ್ ಅಲ್ಲೂ ಕೂಡಾ ಹೂಗುಚ್ಚದೊಂದಿಗೆ ಅವರನ್ನು ಭೇಟಿ ಮಾಡುತ್ತಾರೆ. ಫೋಟೋ ಸೆಷನ್ ಮುಗಿದ ನಂತರ ಮಾತುಕತೆಗೆ ಕೂರುತ್ತಾರೆ. ಹೆಚ್ಚು ಸಮಯವಿರದ ಕಾರಣ ವಿಶ್ವನಾಥ್ ನೇರ ವಿಷಯಕ್ಕೆ ಬರುತ್ತಾರೆ. ಕಾಂಗ್ರೆಸ್‍ಗೆ ತಾವು ಮರಳಲು ತುದಿಗಾಲಲ್ಲಿ ನಿಂತಿದ್ದು ಪ್ರವೇಶ ಕಲ್ಪಿಸಿ ಉಪಕಾರ ಮಾಡಬೇಕೆಂದು ಮನವಿ ಮಾಡುತ್ತಾರೆ. ವಿಶ್ವನಾಥ್ ಹೇಳಿದ್ದಷ್ಟನ್ನೂ ಕಮಕ್ ಕಿಮಕ್ ಎನ್ನದೆ ಕೇಳಿಸಿಕೊಂಡ ಖರ್ಗೆ ಸಾಹೇಬರು, “ನಿಮ್ಮ ಕಾಂಗ್ರೆಸ್ ಪ್ರವೇಶ ಸಿದ್ದರಾಮಯ್ಯನವರ ಬೇಕು ಬೇಡ ಅವಲಂಬಿಸಿದೆ. ಅವರನ್ನು ಭೇಟಿ ಮಾಡಿ ಕ್ಲಿಯರೆನ್ಸ್ ಸರ್ಟಿಫಿಕೆಟ್ (ಸಿಸಿ) ಪಡೆದುಕೊಳ್ಳಿ” ಎಂದು ಸಾಗ ಹಾಕುತ್ತಾರೆ. ವಿಮಾನವೇರಿ ಬೆಂಗಳೂರಿಗೆ ಬಂದಿಳಿದ ವಿಶ್ವನಾಥ್ ಮತ್ತೊಂದು ಹೂಗುಚ್ಚದೊಂದಿಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಫೋಟೋಕ್ಕೆ ಪೋಸು ಕೊಡುತ್ತಾರೆ.
ಸಿದ್ದರಾಮಯ್ಯ ಸಮ್ಮುಖದಲ್ಲಿ ನೇರವಾಗಿ ವಿಷಯಕ್ಕೆ ಬರುವ ವಿಶ್ವನಾಥ್ ಖರ್ಗೆಯವರನ್ನು ದೆಹಲಿಯಲ್ಲಿ ತಾವು ಭೇಟಿ ಮಾಡಿದ್ದನ್ನೂ, ಅವರಿಗೆ ತಾವು ಮಾಡಿಕೊಂಡ ಮನವಿಯನ್ನೂ, ನಂತರದಲ್ಲಿ ಖರ್ಗೆಯವರೇ ಸೂಚಿಸಿದಂತೆ ಮಾಡುತ್ತಿರುವ ಈ ಭೇಟಿಯನ್ನೂ ಕಾರ್ಯಕಾರಣ ಸಮೇತ ವಿವರಿಸಿ, ಕಾಂಗ್ರೆಸ್‍ನೊಳಕ್ಕೆ ತಾವು ಬರುವುದಕ್ಕೆ ಅಡ್ಡಿ ಮಾಡದೆ ನೆರವಾಗಬೇಕೆಂದು ಮೌಖಿಕ ಅರ್ಜಿ ಸಲ್ಲಸುತ್ತಾರೆ. “ಏಯ್ ವಿಶ್ವನಾಥ, ಆಯ್ತಪ್ಪಾ ನೋಡೋಣ, ಶಿವಕುಮಾರ್ ಏನು ಹೇಳ್ತಾರೋ ಕೇಳೋಣ” ಎಂದು ಸಾಗ ಹಾಕುತ್ತಾರೆ. ಕಾದು ನಿಂತು ಭೇಟಿ ಮಾಡಿದ ಮಾಧ್ಯಮದವರಿಗೆ ವಿಶ್ವನಾಥ್ ಮತ್ತದೇ ಕಾಗಕ್ಕ ಗುಬ್ಬಕ್ಕ ಕಥೆ ಹೇಳುತ್ತಾರೆ.
ಹದಿನೇಳು ವರ್ಷದ ಹಿಂದೆ 2005ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ಸಂಬಂಧ ಕಡಿದುಕೊಂಡು ಹೊರಬಿದ್ದ ಸಮಯದಲ್ಲಿ ಅವರ ಮುಂದೆ ಇದ್ದುದು ಎರಡು ಮೂರು ಯೋಚನೆ. ವೇಗವಾಗಿ ಬೆಳೆಯುತ್ತಿದ್ದ ಬಿಜೆಪಿಗೆ ಸೇರುವುದು ಅಥವಾ ಪ್ರಾದೇಶಿಕ ಪಕ್ಷ ಕಟ್ಟುವುದು ಅಥವಾ ಉತ್ತರ ಭಾರತದ ಯಾವುದಾದರೊಂದು ಪ್ರಾದೇಶಿಕ ಪಕ್ಷವನ್ನು ಈ ರಾಜ್ಯದಲ್ಲಿ ಬೆಳೆಸುವುದು. ಜಾತ್ಯತೀತ ಜನತಾ ದಳವನ್ನು ತನ್ನ ಮೊದಲ ರಾಜಕೀಯ ವೈರಿ ಎಂದು ಕಾಂಗ್ರೆಸ್ ಭಾವಿಸಿದ್ದ ದಿನಗಳವು. ಏನು ಮಾಡಿದರೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಲ ಕುಗ್ಗಿಸಬಹುದೆಂಬ ಲೆಕ್ಕಾಚಾರದಲ್ಲಿದ್ದ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪರಿವಾರ ಈ ಕೆಲಸಕ್ಕೆ ಬಳಸಿಕೊಳ್ಳಲು ಯೋಚಿಸಿದ್ದು ಸಿದ್ದರಾಮಯ್ಯನವರನ್ನು. ಕಾಂಗ್ರೆಸ್‍ನೊಳಕ್ಕೆ ಅವರನ್ನು ಕರೆದುಕೊಂಡರೆ ಜೆಡಿಎಸ್‍ನ ಕುರುಬ ಓಟ್ ಬ್ಯಾಂಕ್‍ಗೆ ಸುಲಭವಾಗಿ ಕನ್ನ ಕೊರೆಯಬಹುದೆಂಬ ಲೆಕ್ಕಾಚಾರ ಅದಾಗಿತ್ತು. ಅದಲ್ಲದೆ “ಅಹಿಂದ” (ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು) ಸಂಘಟನೆ ಮೂಲಕ ಸಿದ್ದರಾಮಯ್ಯ ಬಹಳ ಪ್ರಚಾರದಲ್ಲಿದ್ದರು. ಸಿದ್ದರಾಮಯ್ಯನವರಿಗೆ “ಕಾಂಗ್ರೆಸ್‍ನಲ್ಲಿ ಉತ್ತಮ ಅವಕಾಶದ ಭರವಸೆ” ನೀಡಿ ಗಾಳ ಹಾಕಲು ಪಕ್ಷ ನಿಯೋಜಿಸಿದ್ದು ಎಚ್.ವಿಶ್ವನಾಥ್, ಎಚ್.ಎಂ. ರೇವಣ್ಣ ಮತ್ತು ಎಚ್.ವೈ. ಮೇಟಿ ಎಂಬ ಕುರುಬ ಸಮುದಾಯದ ಮೂವರು ಮುಖಂಡರನ್ನು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ
ಕಾಂಗ್ರೆಸ್‍ನೊಳಕ್ಕೆ ಸಿದ್ದರಾಮಯ್ಯನವರನ್ನು ಕರೆತಂದ ನಂತರದಲ್ಲಿ ವಿಶ್ವನಾಥ್ ಹೇಳಿದ ಮಾತುಗಳನ್ನೇ ಉದ್ಧರಿಸುವುದಾದರೆ “ಒಂಟೆಯನ್ನು ಡೇರೆಯೊಳಗೆ ಬಿಟ್ಟುಕೊಂಡಂತೆ” ಆಯಿತು. ಕುರುಬ ಸಮುದಾಯದ ಪ್ರಶ್ನಾತೀತ ನಾಯಕರಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುವುದಕ್ಕೆ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ಸು ನೀರು ಗೊಬ್ಬರ ಎರೆಯಿತು. ಕ್ರಮೇಣ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಬೇರೆಬೇರೆಯವರು ಸೇರಿ ಪಕ್ಷಕ್ಕೆ ಕೈ ಹಿಡಿದು ಕರೆತಂದ ಮೂವರೂ ಬಾಗಿಲು ಕಾಯಬೇಕಾಯಿತು. ತಮ್ಮನ್ನು ಕಾಂಗ್ರೆಸ್‍ಗೆ ಕರೆತಂದಿದ್ದು ಬೀದರ್‌ನ ಒಬ್ಬ ಗುತ್ತಿಗೆದಾರರೆಂದೂ, ಸೋನಿಯಾ ಗಾಂದಿಯವರ ವಿಶೇಷ ಕಾರ್ಯದರ್ಶಿ ಅಹಮದ್ ಪಟೇಲರನ್ನು ಆ ಗುತ್ತಿಗೆದಾರ ತಮಗೆ ಪರಿಚಯಿಸಿದರೆಂದೂ ಆ ಮೂಲಕ ತಾವು ಕಾಂಗ್ರೆಸ್ ಸೇರಿದ್ದಾಗಿಯೂ, ವಿಶ್ವನಾಥ್ ಹೇಳುತ್ತಿರುವುದು ಬುರುಡೆ ಪುರಾಣವೆಂದೂ ಸಿದ್ದರಾಮಯ್ಯ ಹೇಳುವುದರೊಂದಿಗೆ ಸಂಬಂಧ ಹಳಸುತ್ತ ಹೋಗಿ ಹಾವು ಮುಂಗಸಿಯಂತೆ ಕಚ್ಚಾಡುತ್ತ ಹಾದಿರಂಪ ಬೀದಿರಂಪ ಮಾಡಿದ್ದು ದಶಕದ ಇತಿಹಾಸ. ಅಕ್ಕಪಕ್ಕ ಇದ್ದವರು ಹಳಸಲು ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದರು. ಇಬ್ಬರ ಸಂಬಂಧ ಎಣ್ಣೆ ಶೀಗೆ ಆಯಿತು. ಮಾತಿರಲಿ, ಮುಖ ನೋಡುವುದಕ್ಕೂ ಹೇಸುವ ಹಂತಕ್ಕೆ ಇಬ್ಬರೂ ಹೋದರು. ಅಲ್ಲಿಂದ ಮುಂದಕ್ಕೆ ಪರಸ್ಪರ ಬೈಗುಳ, ಟೀಕೆ, ಮೂದಲಿಕೆ ಮಾತ್ರ.
ಸಿದ್ದರಾಮಯ್ಯನವರನ್ನು ಇಷ್ಟು ಚೆನ್ನಾಗಿ ಟೀಕಿಸುವವರು ತಮ್ಮ ಪಕ್ಷ ಸೇರಲು ಅರ್ಹರೆಂದು ಜೆಡಿಎಸ್ ವರಿಷ್ಠರು ತೀರ್ಮಾನಿಸಿ ವಿಶ್ವನಾಥರನ್ನು ಒಳಕ್ಕೆ ಕರೆದುಕೊಂಡರು. 2018ರ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದರು. ಮಾತ್ರವಲ್ಲ ಜೆಡಿಎಸ್‍ನ ರಾಜ್ಯಾಧ್ಯಕ್ಷ ಸ್ಥಾನದಲ್ಲೂ ಕುಳ್ಳಿರಿಸಿದರು. ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲದೊಂದಿಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಸಮ್ಮಿಶ್ರ ಸರ್ಕಾರದಲ್ಲಿ ತಾವೂ ಒಬ್ಬ ಸಚಿವರಾಗುವ ಭರವಸೆ ವಿಶ್ವನಾಥರಲ್ಲಿತ್ತು. ಎಷ್ಟೆಂದರೂ ಜೆಡಿಎಸ್ ಪಕ್ಷದ ಅಧ್ಯಕ್ಷ ತಾವು. ತಮಗೆ ಅವಕಾಶ ಖಂಡಿತ ಎಂದು ಭಾವಿಸಿದ್ದರು. ಆಗ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ವಿಶ್ವನಾಥ್ ಕನಸಿಗೆ ಕೊಳ್ಳಿ ಇಟ್ಟರು. ಟಿಕೆಟ್ ಖರೀದಿಸಿ ರೈಲನ್ನೇರಲು ಕಾದಿದ್ದರೂ ರೈಲೊಳಗೆ ವಿಶ್ವನಾಥ್‍ಗೆ ಪ್ರವೇಶ ಸಿಗಲೇ ಇಲ್ಲ.
ಆ ವೇಳೆಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಸರತ್ತು ತೆರೆಮರೆಯಲ್ಲಿ ನಡೆದಿತ್ತು. ಅದಕ್ಕೆ ಬೆಂಬಲ ಸೂಚಿಸಿ 17 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಕ್ಷಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು “ತ್ಯಾಗ ಪುರುಷರು” ತಾವೆಂದು ಹೇಳಿಕೊಂಡು ಮತ್ತೆ ಚುನಾವಣೆಗೆ ಹೋದರು. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಹೊರತಾಗಿಸಿ ಉಳಿದ ಹದಿನೈದೂ ಜನ ಉಪ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ತಾವು ಮಾಡಿದ “ತ್ಯಾಗ”ಕ್ಕೆ ಪ್ರತಿಫಲ ಪಡೆದರು. ಸೋತ ನಾಗರಾಜ್ ಹಾಗೂ ವಿಶ್ವನಾಥ್ ಇಬ್ಬರನ್ನೂ ಎಂಎಲ್‍ಸಿ ಮಾಡಿದ ಬಿಜೆಪಿ ನಾಗರಾಜ್‍ಗೆ ಮಂತ್ರಿ ಸ್ಥಾನ ಕೊಟ್ಟು ಗೌರವಿಸಿತು. ತಾಂತ್ರಿಕ ನೆಪ ಕಾರಣ ಮುಂದಿಟ್ಟು ವಿಶ್ವನಾಥ್ ಹೊರಗೆ ಉಳಿಯುವಂತೆ ಮಾಡಿತು. ಅನ್ಯಾಯ ಮಾಡಿತೆಂದು ಬಿಜೆಪಿ ವಿರುದ್ಧ ಆಕ್ರೋಶದಲ್ಲಿ ಕೊತಕೊತ ಕುದ್ದ ವಿಶ್ವನಾಥ್ ಆ ಮುಹೂರ್ತದಿಂದಲೇ ಆಡಳಿತ ಪಕ್ಷದ ಕಟು ಟೀಕಾಕಾರರಾದರು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಪದಾಧಿಕಾರಿಗಳಿಲ್ಲದ ಪದವಿಯಲ್ಲಿ ಖರ್ಗೆ ಏಕಾಂಗಿ
ವಿಧಾನ ಪರಿಷತ್‍ನ ಒಳಗೂ ಸೈ ಹೊರಗೂ ಸೈ ವಿಶ್ವನಾಥ್ ಟೀಕೆಯ ಸುರಿಮಳೆ ಗರೆಯುತ್ತಿರುವುದು ಅವರದೇ ಪಕ್ಷದ ಸರ್ಕಾರದ ಮೇಲೆ. ಅವರ ನಾಲಗೆಯ ಮೇಲೆ ನಿಯಂತ್ರಣ ಹೇರುವ ಆಡಳಿತ ಪಕ್ಷದ ಎಲ್ಲ ತಂತ್ರಗಳೂ ತಲೆಕೆಳಗಾಗಿವೆ. ಹಾಗಾಗಿ ಬಿಜೆಪಿಗೆ ವಿಶ್ವನಾಥ್ ಸಾಕಾಗಿ ಹೋಗಿದ್ದಾರೆ. ಪಕ್ಷಕ್ಕೆ ಅವರಿಂದ ಏನೇನೂ ಲಾಭವಿಲ್ಲ ಎಂಬ ತೀರ್ಮಾನಕ್ಕೆ ಅದು ಬಂದಿದೆ. ಇಲ್ಲೇ ಇದ್ದರೆ ಭವಿಷ್ಯವಿಲ್ಲ ಎಂದು ನಂಬಿರುವ ವಿಶ್ವನಾಥ್‍ಗೂ “ಅಧಿಕಾರ ಸ್ಥಾನದಲ್ಲಿ ಕುಳ್ಳಿರಿಸದ ಬಿಜೆಪಿ” ಸಾಕಾಗಿದೆ. ಹಾಗಂತ ವಿಶ್ವನಾಥ್, ಸಿದ್ದರಾಮಯ್ಯ ಅಲ್ಲ. ಜೆಡಿಎಸ್ ಸಾಕುಸಾಕೆನಿಸಿದಾಗ ಸಿದ್ದರಾಮಯ್ಯ ಪಕ್ಷಕ್ಕೂ ಶಾಸಕ ಸ್ಥಾನಕ್ಕೂ ರಾಜೀನಾಮೆ ಬಿಸುಟು ತಮ್ಮ ವಿರೋಧ ದಾಖಲಿಸಿದರು. ಅಂಥ ಧೈರ್ಯ ವಿಶ್ವನಾಥರಲ್ಲಿಲ್ಲ. ಪಕ್ಷವೇ ತಮ್ಮನ್ನು ಸಸ್ಪೆಂಡ್ ಮಾಡಲಿ ಎಂದು ವಿಶ್ವನಾಥ್ ಕಾಯುತ್ತಿದ್ದಾರೆ. ಸಸ್ಪೆಂಡ್ ಅಥವಾ ಉಚ್ಛಾಟನೆ ಮಾಡಿದರೆ ಅವರ ಎಂಎಲ್‍ಸಿಗಿರಿ ಹಾಗೇ ಉಳಿಯುತ್ತದೆ. ಇವರಾಗಿ ಪಕ್ಷ ತೊರೆದರೆ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಸದಸ್ಯತ್ವ ಹೋಗಿಬಿಡುತ್ತದೆ. ಎಂದೇ ಅವರು ನಿತ್ಯವೂ ನಾಲಗೆಯನ್ನು ಬಿಜೆಪಿ ವಿರುದ್ಧ ಬಳಸುತ್ತ ಶಾಸಕ ಸ್ಥಾನದ ಸಕಲ ಸವಲತ್ತನ್ನೂ “ಎಂಜಾಯ್” ಮಾಡುತ್ತಿದ್ದಾರೆ.
ಹುಣಸೂರಿನಲ್ಲಿ ವಿಶ್ವನಾಥರನ್ನು 2019ರ ಉಪ ಚುನಾವಣೆಯಲ್ಲಿ ಸೋಲಿಸಿರುವ ಕಾಂಗ್ರೆಸ್ ಶಾಸಕ ಎಚ್.ಪಿ.ಮಂಜುನಾಥ್ ಸಿದ್ದರಾಮಯ್ಯನವರ ಬಲಗೈ ಬಂಟ ಶಾಸಕರಲ್ಲಿ ಒಬ್ಬರು. 2019ರ ಚುನಾವಣೆಯಲ್ಲಿ ಗೆದ್ದ ಮಂಜುನಾಥ್ ಮತ್ತು ಸೋತ ವಿಶ್ವನಾಥ್ ನಡುವಣ ಅಂತರ 52,998 ಮತಗಳು. ಕಾಂಗ್ರೆಸ್ ಸೇರಿ ಪುನಃ ಹುಣಸೂರಿನಲ್ಲಿ ಕಣಕ್ಕೆ ಇಳಿಯುವ ಆಸೆಯನ್ನು ವಿಶ್ವನಾಥ್ ಗುಪ್ತವಾಗಿ ಪೋಷಿಸಿಕೊಂಡು ಸಾಗಿದ್ದಾರೆ. ಏತನ್ಮಧ್ಯೆ ಮಗನಿಗೂ ಒಂದು ಟಿಕೆಟ್ ಕೇಳುವ ಉತ್ಸುಕತೆಯೂ ಅವರಲ್ಲಿದೆ. ಸಿದ್ದರಾಮಯ್ಯನವರು ಅಷ್ಟೆಲ್ಲ ಸರಳವಾಗಿ ಸುಲಭದಲ್ಲಿ ಯಾರನ್ನೂ ಹತ್ತಿರ ಬಿಟ್ಟುಕೊಳ್ಳುವ ಜಾಯಮಾನದವರಲ್ಲ. ವಿಶ್ವನಾಥ್ ಅವರನ್ನು ಮತ್ತೆ ಕರೆದುಕೊಂಡರೆ ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಂಡಂತೆ ಆಗದೇ ಎಂದು ಅವರನ್ನು ಎಚ್ಚರಿಸುವ ಜನ ಅವರ ಸುತ್ತಮುತ್ತ ಇದ್ದಾರೆ.
ಬಹಳ ವರ್ಷಗಳ ಹಿಂದಿನ ಮಾತು. ಭಾರತೀಯ ಜನತಾ ಪಕ್ಷವನ್ನು ಜನಸಂಘ ಕಾಲದಿಂದ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾಗಿದ್ದ ಎ.ಕೆ.ಸುಬ್ಬಯ್ಯ ರಾಜಕೀಯ ಸ್ಥಿತ್ಯಂತರದಲ್ಲಿ ಕಾಂಗ್ರೆಸ್ ಸೇರಿದರು. ಆಗ ವಿಧಾನ ಪರಿಷತ್ ಸದಸ್ಯರಾಗಿದ್ದ ಕಾಂಗ್ರೆಸ್‍ನ ಕೆ.ಎನ್. ನಾಗೇಗೌಡರು “ಸೆರಗಿನಲ್ಲಿ ಬೆಂಕಿ ಕೆಂಡ ಕಟ್ಟಿಕೊಂಡಂತಾಯಿತು” ಎಂದು ಪ್ರತಿಕ್ರಿಯಿಸಿದ್ದರು. ಈ ರೀತಿಯ ಪ್ರತಿಕ್ರಿಯೆ ವಿಶ್ವನಾಥ್ ವಿಚಾರದಲ್ಲಿ ಬರುವುದಿಲ್ಲ ಎನ್ನುವ ಖಾತ್ರಿ ಎಲ್ಲಿದೆ?
ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?