Site icon Vistara News

ಮೊಗಸಾಲೆ ಅಂಕಣ: ನಿನ್ನೆವರೆಗೂ ಮತದಾರರೇ ಗತಿ, ಇಂದು ದೇವರೇ ಗತಿ

temple run

ಕರ್ನಾಟಕ ವಿಧಾನ ಸಭಾ ಚುನಾವಣೆ (Karnataka Election 2023) ಮತದಾನ ಶಾಂತಿಯುತ ರೀತಿಯಲ್ಲಿ ಮುಕ್ತಾಯ ಕಂಡಿದೆ. ಎಣಿಕೆಯಷ್ಟೇ ಬಾಕಿ. ಮೂರು ಪಕ್ಷದೊಳಗೆ ಯಾವುದು ಹಿತ ಅಥವಾ ಹಿತ ಅಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಮತದಾರರ ಐತೀರ್ಪು ಮತಪೆಟ್ಟಿಗೆಯಲ್ಲಿ (ಇವಿಎಂ) ಭದ್ರವಾಗಿ ಕುಳಿತಿದೆ. ಆಫ್ರಿಕಾದ ದಟ್ಟಡವಿಯ ಕಾಲ್ಪನಿಕ ಹೀರೋ ಟಾರ್ಜಾನನಂತೆ ನಿನ್ನೆಮೊನ್ನೆವರೆಗೂ ಲಬೋ ಲಬೋ ಎಂದು ಎದೆಎದೆ ಬಡಿದುಕೊಂಡು ಅರಚುತ್ತಿದ್ದ, ಕಿರುಚುತ್ತಿದ್ದ ರಾಜಕೀಯ ಮುಖಂಡರು ಈಗ ತಮ್ಮ ತಮ್ಮ ಆರಾಧ್ಯ ದೇವರ, ದೈವದ ಮೊರೆ ಹೊಕ್ಕಿದ್ದಾರೆ. ಜನತಾ ಜನಾರ್ದನರ ಕೋರ್ಟ್‍ನಿಂದ ಈ ಬಾರಿ ಪಾರು ಮಾಡು ದೇವರೇ ಎಂದು ನಡುಬಾಗಿ ನೆಲಬಾಗಿ ಅಲವತ್ತುಕೊಳ್ಳುತ್ತಿದ್ದಾರೆ. ಒಂದೇ ದೈವ ನಾಮ ಹಲವು ಎನ್ನುವುದು ಮಾತಿಗೆ ಸೀಮಿತವಾಗಿರುವ ಎಲ್ಲರೂ ಹೇಳುವ ಯಾರೊಬ್ಬರೂ ಒಪ್ಪದ ಸಿದ್ಧಾಂತ. ಅವರವರಿಗೆ ಅವರವರದೇ ಆದ ಪ್ರತ್ಯೇಕ ದೇವರುಂಟು. ತಾನು ನಂಬಿದ ದೇವರು ತನ್ನನ್ನು ಕಾಯುತ್ತಾನೆ ಎಂಬ ನಂಬಿಕೆಯಲ್ಲಿ ವ್ರತ ಉಪವಾಸ ಪೂಜೆ ಹೋಮ ಹವನ ಮುಂತಾದವು ನಡೆಯುತ್ತಿರುತ್ತವೆ. ಕಣದಲ್ಲಿರುವ ಪ್ರತಿಯೊಂದು ಧರ್ಮದವರಿಗೂ ಪ್ರತ್ಯೇಕ ದೇವರು ಇರುವ ಕಾರಣ ಆ ದೇವರುಗಳೆಲ್ಲ ಒಂದಾಗಿ ಯಾವ ಬಗೆಯ ತೀರ್ಮಾನ ತೆಗೆದು ಕೊಳ್ಳುತ್ತಾರೋ ಗೊತ್ತಿಲ್ಲ.

ರಾಜಕಾರಣದಲ್ಲಿ ಮುಳುಗಿರುವವರಿಗೆ, ಮುಳುಗಲಿರುವವರಿಗೆ, ಮುಳುಗುವ ಭಯದಲ್ಲಿ ನಲುಗುತ್ತಿರುವವರಿಗೆ ಏಕೈಕ ಆಸರೆ ಎಂದರೆ ದೇವರು. ದೇವರ ಹೆಸರನ್ನು ರಾಜಕಾರಣದಲ್ಲಿ ಒಮ್ಮೆಯೂ ಹಾದಿಬೀದಿಗೆ ತಾರದ ರಾಜಕಾರಣಿಗಳು ಇಲ್ಲವೆಂದಲ್ಲ. ಆದರೆ ಅವರ ಸಂಖ್ಯೆ ಅಪರೂಪದಲ್ಲಿ ಅಪರೂಪ. ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರದಿಂದ ಮೂರು ಬಾರಿ ನಿಚ್ಚಳ ಬಹುಮತದೊಂದಿಗೆ ಗೆದ್ದು ಶಾಸಕರಾಗಿರುವ ಸತೀಶ ಜಾರಕಿಹೊಳಿ ತಮ್ಮ ರಾಜಕೀಯಕ್ಕೆ ದೇವರನ್ನು ಎಳೆದು ತಾರದ ಅಪರೂಪದ ರಾಜಕಾರಣಿ. ಅವರು ನಾಮಪತ್ರ ಸಲ್ಲಿಸುವುದಕ್ಕೆ ಅಮಾವಾಸ್ಯೆ ದಿನವನ್ನೂ ರಾಹುಕಾಲವನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮ ಹುಟ್ಟು ಹಬ್ಬವನ್ನು ಪಂಚತಾರಾ ಹೋಟೆಲ್‍ಗೆ ಬದಲಾಗಿ ಸ್ಮಶಾನದಲ್ಲಿ ಆಚರಿಸಿಕೊಳ್ಳುತ್ತಾರೆ. ನಾಮಪತ್ರ ಸಲ್ಲಿಕೆಗೆ ಮೊದಲು ಬಹುತೇಕರು ಮಾಡುವಂತೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವ; ದರ್ಗಾಕ್ಕೆ ಹೋಗಿ ಪ್ರಾರ್ಥಿಸುವ, ಚರ್ಚು ಇಗರ್ಜಿಗೆ ತೆರಳಿ “ಪ್ರೇಯರ್” ಮಾಡುವ ಜಾಯಮಾನ ಸತೀಶರಲ್ಲಿ ಇಲ್ಲವೇ ಇಲ್ಲ. ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿರುವ ಸತೀಶರು ನಿರೀಶ್ವರವಾದಿಯೇನೂ ಅಲ್ಲ. ತನ್ನನ್ನು ಬೇಡಲಿಲ್ಲ ಎಂಬ ಕಾರಣಕ್ಕೆ ದೇವರು ಸತೀಶರ ವಿರುದ್ಧ ಮುನಿದಿಲ್ಲ, ಪೂಜೆ ಮಾಡಿಲ್ಲವೆಂದು ಪ್ರತೀಕಾರಕ್ಕೆ ಮುಂದಾಗಿಲ್ಲ. ದೇವರ ಪಾಡಿಗೆ ದೇವರು, ಸತೀಶರ ಪಾಲಿಗೆ ಸತೀಶರು ನೆಮ್ಮದಿಯಲ್ಲಿದ್ದಾರೆ.

ಭಾರತದಲ್ಲಿರುವ ಎಲ್ಲ ಕಮ್ಯೂನಿಸ್ಟ್ ಪಕ್ಷಗಳು ದೇವರ ಅಸ್ತಿತ್ವದ ಸಿದ್ಧಾಂತವನ್ನು ನಿರಾಕರಿಸಿಕೊಂಡೇ ಬಂದಿರುವ ರಾಜಕೀಯ ಮಾಡುತ್ತಿವೆ. ವ್ಯಕ್ತಿಗತ ನಂಬಿಕೆಗೆ ಅಲ್ಲಿ ಅವಕಾಶ ಇಲ್ಲವೇ ಇಲ್ಲ. ಇಎಂಎಸ್ ನಂಬೂದರಿಪಾಡ್, ದೇಶ ಕಂಡ ಅಪ್ರತಿಮ ಕಮ್ಯೂನಿಸ್ಟ್ ನಾಯಕ, ಪ್ರಖರ ಮಾ‌ರ್ಕ್ಸ್‌ವಾದಿ. ಅವರ ನೆಚ್ಚಿನ ಕಾರ್ಲ್‍ಮಾರ್ಕ್ಸ್‌ ಪ್ರಕಾರ ಧರ್ಮ ಎನ್ನುವುದು ಸದಾ ಅಮಲಿನಲ್ಲಿ ತೇಲಿಸುವ ಅಫೀಮು. ಒಮ್ಮೆ ಅಫೀಮಿಗೆ ದಾಸರಾದವರು ಅದರಿಂದ ಬಿಡುಗಡೆ ಪಡೆಯುವುದು ಕಷ್ಟದ ಮಾತು. ಧರ್ಮ ದೇವರು ವಿಚಾರದಲ್ಲಿ ಮಾರ್ಕ್ಸ್‌ ಮಾತು ನೂರಕ್ಕೆ ನೂರು ನಿಜ. ಆ ಸಿದ್ಧಾಂತದ ಪ್ರತಿಪಾದಕರಾಗಿದ್ದ ಇಎಂಎಸ್, ತಮ್ಮ ಪತ್ನಿಯ ಆಸೆಯನ್ನು ಈಡೇರಿಸುವ ಸಲುವಾಗಿ ಕೇರಳದ ಪ್ರಸಿದ್ಧ ಗುರುವಾಯೂರಪ್ಪನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಸ್ವತಃ ಇಎಂಎಸ್‍ರವರೇ ಅಧಿನಾಯಕರಾಗಿದ್ದ ಸಿಪಿಎಂನ ಒಳಗೆ, ಹತ್ತಾರು ಕವಲಾಗಿ ಟಿಸಿಲೊಡೆದಿರುವ ಬೇರೆ ಬೇರೆ ಕಮ್ಯೂನಿಸ್ಟ್ ಸಂಘಟನೆಗಳೊಳಗೆ ಇಎಂಎಸ್‍ರ ದೇವಸ್ಥಾನ ಭೇಟಿ ಸುದ್ದಿ ಕೋಲಾಹಲ ಸೃಷ್ಟಿಸಿದ್ದು ಕೆಲವರಾದರೂ ಹಳಬರ ನೆನಪಿನಲ್ಲಿರಬಹುದು. ಮಾರ್ಕ್ಸ್‌ವಾದಕ್ಕೆ ಇಎಂಎಸ್ ಎಳ್ಳನೀರು ಬಿಟ್ಟರೆಂಬ ಆಕ್ರೋಶವೂ ಆಗ ಕಟ್ಟೆಯೊಡೆದು ಉಕ್ಕಿ ಹರಿದಿತ್ತು. ಇಎಂಎಸ್ ನೀಡಿದ ವಿವರಣೆ ಅದನ್ನು ಶಮನಗೊಳಿಸಿತ್ತು. ಪತ್ನಿ ಎಂಬ ಕಾರಣಕ್ಕೆ ಗಂಡನಾದವನು ತನ್ನ ನಂಬಿಕೆಯೇ ಆಕೆಯ ನಂಬಿಕೆಯೂ ಆಗಿರಬೇಕೆಂದು ಭಾವಿಸುವುದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಬೆಳವಣಿಗೆ ಎಂದು ಅವರು ಹೇಳಿದ್ದರು. ಗಂಡನಾಗಿ ತಾನು ಗುರುವಾಯೂರಪ್ಪನ್ ದೇವಸ್ಥಾನಕ್ಕೆ ಹೆಂಡತಿಯೊಂದಿಗೆ ಹೋಗಿದ್ದರಲ್ಲಿ ತಪ್ಪೇನಿದೆ ಎಂದು ಅವರು ಹಾಕಿದ ಪ್ರಶ್ನೆ ಮುಖ್ಯವಾಗಿ ಎಡಪಂಥೀಯರೆಲ್ಲರ ಬಾಯನ್ನು ಮುಚ್ಚಿಸಿತ್ತು.

ಕರ್ನಾಟಕದ ಸಂದರ್ಭದಲ್ಲಿ ಇಂಥದೊಂದು ಪ್ರಸಂಗಕ್ಕೆ ನಾಡು ಸಾಕ್ಷಿಯಾಗಿದ್ದು ಜೆ.ಎಚ್. ಪಟೇಲರ ಕಾರಣವಾಗಿ. ಅವರು ಮುಖ್ಯಮಂತ್ರಿಯಾಗಿದ್ದಾಗಿನ ಪ್ರಸಂಗ ಇದು. ಅವರ ಪತ್ನಿ ಸರ್ವಮಂಗಳಾ ಪಟೇಲರಿಗೆ ಕಾಶ್ಮೀರದ ತುತ್ತತುದಿಯಲ್ಲಿರುವ ವೈಷ್ಣೋದೇವಿಗೆ ತೆರಳಿ ವೈಷ್ಣವಿ ದೇವಿ ದರ್ಶನ ಮಾಡುವ ಹಂಬಲ. ಸಮಾಜವಾದಿ ಪಟೇಲರು ಇದಕ್ಕೆಲ್ಲ ಒಪ್ಪಲಾರರು ಎಂದು ಅವರ ಗೆಳೆಯ ಬಳಗದ ಕೆಲವು ಸ್ನೇಹಿತರು ಭಾವಿಸಿದ್ದರು. ಆದರೆ ದೇವಿ ದರ್ಶನಕ್ಕೆ ಅಗತ್ಯವಾಗಿದ್ದ ಸಕಲ ವ್ಯವಸ್ಥೆಯನ್ನೂ ಪಟೇಲರು ಮಾಡಿಕೊಟ್ಟು ಪತ್ನಿಯ ಇಷ್ಟಾರ್ಥ ಪೂರೈಸಿದ್ದರು. ಆಕ್ಷೇಪದ ಧ್ವನಿಯಲ್ಲಿ ತಮ್ಮನ್ನು ಪ್ರಶ್ನಿಸಿದವರಿಗೆ “ಇನ್ನೊಬ್ಬರ ನಂಬಿಕೆ ಭಾವನೆಗಳನ್ನು ಗೌರವಿಸದೇ ಇರುವುದು ಜನತಂತ್ರವೇ ಅಲ್ಲ” ಎಂಬ ಅವರ ಉತ್ತರ ಟೀಕಾಕಾರರ ಬಾಯಿ ಮುಚ್ಚಿಸಿತ್ತು.

ದೇವರನ್ನು ಅಪಾರ ನಂಬುವ ಮೊದಲ ಶ್ರೇಣಿಯ ರಾಜಕಾರಣಿಗಳಲ್ಲಿ ಮುಂಚೂಣಿ ಸ್ಥಾನ ಎಚ್.ಡಿ. ದೇವೇಗೌಡರಿಗೆ ಸಲ್ಲುತ್ತದೆ. ದೇವರನ್ನಷ್ಟೇ ಅಲ್ಲ ಜ್ಯೋತಿಷವನ್ನೂ ಅವರು ನಂಬುತ್ತಾರೆ. ಅವರು ಕೊಡುವ ಮುಹೂರ್ತದಂತೆ ಅವರ ರಾಜಕೀಯ ಹೆಜ್ಜೆ ಮುಂದಕ್ಕೆ ಹೋಗುತ್ತದೆ. ಪ್ರಧಾನಿ ಪಟ್ಟದಲ್ಲಿ 1996ರ ಜೂನ್ ಒಂದರಂದು ಕೂರುವ ಅವಕಾಶ ಸಿಕ್ಕಾಗ “ದೇವರ ಕೃಪೆಯಿಂದಾಗಿ ಪ್ರಧಾನಿಯಾದೆ” ಎಂದು ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಹೇಳಿದ್ದರು. ಹಾಸನ ಜಿಲ್ಲೆಯ ಪಡುವಲಹಿಪ್ಪೆಯಲ್ಲಿ ಈಶ್ವರ ದೇವಸ್ಥಾನವಿದೆ. ಸಣ್ಣ ಗುಡಿ ಅದು. ಗೌಡರು ಅಲ್ಲಿಗೆ ನಡೆದುಕೊಳ್ಳುವಷ್ಟು ಇನ್ನೆಲ್ಲಿಗೂ ನಡೆದುಕೊಳ್ಳುವುದಿಲ್ಲ. ಚುನಾವಣಾ ನಾಮಪತ್ರ ಸಲ್ಲಿಸುವುದಿರಲಿ, ಕುಟುಂಬದಲ್ಲಿ ಯಾವುದೇ ಧಾರ್ಮಿಕ ಕಾರ್ಯ ನಡೆಯುವುದಿರಲಿ, ಪಡುವಲಹಿಪ್ಪೆ ಈಶ್ವರನಿಗೆ ಮೊದಲ ಪೂಜೆ ಸಲ್ಲಿಸಿದ ಬಳಿಕವೇ ಮುಂದುವರಿಯುವ ಶ್ರದ್ಧಾಭಕ್ತಿ ಅವರದು. ಗೌಡರ ಕುಟುಂಬ ವರ್ಷಗಳಿಂದ ಚಾಚೂತಪ್ಪದೆ ಅನುಸರಿಸಿ ಆಚರಿಸಿಕೊಂಡು ಬಂದಿರುವ ಪರಂಪರೆ ಅದು. ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೆಂದು ದೆಹಲಿಗೆ ತೆರಳುವ ಮೊದಲು ಗೌಡರು ಅರ್ಚಿಸಿ ಆಶೀರ್ವಾದ ಬೇಡಿದ್ದು ಇದೇ ಈಶ್ವರನಲ್ಲಿ. ಇದೆಲ್ಲ ನೆನಪಾಗಿ ಗೌಡರು ಹೇಳಿದ್ದು “ದೇವರ ಕೃಪೆಯಿಂದಾಗಿ ಪ್ರಧಾನಿಯಾದೆ” ಎಂದು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮೊಗಸಾಲೆ ಅಂಕಣ: ಕವಲು ದಾರಿಯಲ್ಲಿ ಮತದಾರ, ಎತ್ತ ಅವನ ಒಲವು?

ರಾಷ್ಟ್ರೀಯ ರಂಗದ (ನ್ಯಾಷನಲ್ ಫ್ರಂಟ್) ಪ್ರತಿನಿಧಿಯಾಗಿ ಗೌಡರು ಪ್ರಧಾನಿಯಾಗಿದ್ದು ಹೌದಾದರೂ ಅದನ್ನು ಆಗುಮಾಡಿಸಿದ್ದು ಕಾಂಗ್ರೆಸ್ ಪಕ್ಷ ನೀಡಿದ “ಬೇಷರತ್ ಹೆಸರಿನ” ಹಲವು ಒಳ ಕರಾರುಗಳಿದ್ದ ಹೊರ ಬೆಂಬಲ. ಮುಂದೆ ಹನ್ನೊಂದೇ ತಿಂಗಳಲ್ಲಿ ಗೌಡರು ಮಾಜಿ ಪ್ರಧಾನಿಯಾದರು. ಏಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಮ ಕೇಸರಿ ಕೋಪಕ್ಕೆ ಈಡಾದ ಗೌಡರು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಮಾಜಿ ಪ್ರಧಾನಿಯಾದರು. “ಬೇಷರತ್ ಬೆಂಬಲ” ಎಂದು ನಂಬಿಸಿದ್ದ ಕಾಂಗ್ರೆಸ್ ಭರವಸೆ ಗಾಳಿಯಲ್ಲಿ ತೂರಿ ಹೋಯಿತು. ಅಧಿಕಾರಕ್ಕೆ ಎರವಾದ ಗೌಡರು ಸಂಸತ್‍ನಲ್ಲಿ ಪ್ರಧಾನಿಯಾಗಿ ಮಾಡಿದ ಕೊನೆ ಭಾಷಣದಲ್ಲಿ “ಫೀನಿಕ್ಸ್ ಪಕ್ಷಿಯಂತೆ ಮತ್ತೆ ಪುಟಿದೆದ್ದು ಬರುತ್ತೇನೆ” ಎಂದಿದ್ದರು. ಗ್ರೀಕ್ ಪುರಾಣದಲ್ಲಿ ಫೀನಿಕ್ಸ್ ಪಕ್ಷಿಯ ಪ್ರಸ್ತಾಪವಿದೆ. ಇದೊಂದು ರೀತಿಯಲ್ಲಿ ಮೈಸೂರು ಅರಮನೆಯ ಲಾಂಛನದಲ್ಲಿರುವ ಎರಡು ತಲೆಯ ಗಂಡಭೇರುಂಡ ಪಕ್ಷಿಯಂತೆ. ಗಂಡಭೇರುಂಡ ನಿಜವಾದರೆ ಫೀನಿಕ್ಸ್ ಕೂಡಾ ನಿಜವೇ. ಅದು ಕಲ್ಪನೆಯಾದರೆ ಇದೂ ಕಲ್ಪನೆಯೇ. ಫೀನಿಕ್ಸ್ ಸುಟ್ಟರೂ ಅದೇ ಬೂದಿಯಿಂದ ಪುಟಿದೆದ್ದು ಹಾರುತ್ತದಂತೆ. ಮತ್ತೆ ಲೋಕಸಭೆಯ ನಂಬರ್ ಒನ್ ಸೀಟಿಗೆ ಮತ್ತೆ ಮರಳುವ ಗೌಡರ ಆಸೆ ಈಡೇರಲಿಲ್ಲ. ಕಾಂಗ್ರೆಸ್‍ನ ಕೆಲವು ಮುಖಂಡರ ಕಾರಣವಾಗಿ ತಾವು ಪ್ರಧಾನಿ ಪಟ್ಟ ಕಳೆದುಕೊಳ್ಳಬೇಕಾಯಿತೆಂದು ಗೌಡರು ಆ ಸಮಯದಲ್ಲಿ ದೂರಿದ್ದರು. ಗೌಡರು ನಂಬಿದ, ಪ್ರಧಾನಿಯನ್ನಾಗಿ ಮಾಡಿದ ದೇವರು, ಯಕಃಶ್ಚಿತ್ ಹುಲು ಮಾನವ ಸೀತಾರಾಮ ಕೇಸರಿ ತೀರ್ಮಾನದ ಮುಂದೆ ಅಸಹಾಯಕನಾದನೆ…? ಪ್ರಶ್ನೆ ಎರಡೂವರೆ ದಶಕದ ಬಳಿಕವೂ ಜೀವಂತವಿದೆ.

ಕರ್ನಾಟಕ ವಿಧಾನ ಸಭಾ ಚುನಾವಣೆ ಹಲವರಿಗೆ ಹಲವಾರು ರೀತಿಯಲ್ಲಿ ದೇವರನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ. ಬಗೆಬಗೆಯ ಭ್ರಷ್ಟಾಚಾರದ ಆರೋಪ ಹೊತ್ತವರು, ಯಾರ್ಯಾರದೋ ತಲೆ ಒಡೆದು ದರೋಡೆ ಮಾಡಿದ ಆರೋಪಿಗಳು, ಇನ್ನೊಬ್ಬರ ಅನ್ನಕ್ಕೆ ಬುದ್ಧ್ಯಾಪೂರ್ವಕವಾಗಿ ಕುತ್ತು ತಂದು ಛೀ…ಥೂ ಎಂದು ಉಗಿಸಿಕೊಂಡವರು, ಪರರ ಆಸ್ತಿಪಾಸ್ತಿಯನ್ನು ತೋಳ್ಬಲದಲ್ಲಿ ವಶಕ್ಕೆ ಪಡೆದು ಟನ್‍ಗಟ್ಟಳೆ ಅನ್ಯಾಯವನ್ನು ನುಂಗಿ ನೊಣೆದವರು, ರಾಜಕಾರಣಕ್ಕೆ ಬಂದ ಕೆಲವೇ ವರ್ಷದಲ್ಲಿ ಆದಾಯ ಮೂಲ ಯಾವುದು ಎಂದು ಹೇಳಲಾಗದಷ್ಟು ತೋರಿಸಲಾಗದಷ್ಟು ಸಂಪತ್ತನ್ನು ಕ್ರೋಢೀಕರಿಸಿಕೊಂಡವರು, ಹತ್ತು ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರು. ರಾದ್ಧಾಂತ ಒಂದೇ ಎರಡೇ…. ಚುನಾವಣೆ ಕಣಕ್ಕಿಳಿದು ಜನಪ್ರತಿನಿಧಿಗಳಾಗುವ ಆಸಕ್ತಿ ತೋರಿದವರಲ್ಲಿ ಇಂಥ ಘಾತುಕರೇ ಅತ್ಯಧಿಕ ಸಂಖ್ಯೆಯಲ್ಲಿರುವುದಕ್ಕೆ ಚುನಾವಣಾ ಆಯೋಗದಲ್ಲಿ ಸಾಕ್ಷ್ಯಗಳಿವೆ. ಇಂಥವರೇ ಈ ಹೊತ್ತು ದೇವರ ಮುಂದೆ ನಿಂತು ಮತಪೆಟ್ಟಿಗೆಯಲ್ಲಿರುವ ಜನಮನವನ್ನು ತಮ್ಮತ್ತ ಒಲಿಸುವಂತೆ ಮಾಡಪ್ಪಾ ಎಂದು ಗೋಗರೆಯುತ್ತಿದ್ದಾರೆ. ಬಗೆಬಗೆಯ ಹರಕೆ ಹೊತ್ತು ಗೆದ್ದರೆ ಪೂರೈಸುವುದಾಗಿ ದೇವರ ಮುಂದೆಯೂ ಷರತ್ತಿನ ಮಾತಾಡುತ್ತಿದ್ದಾರೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಚುನಾವಣಾ ಭ್ರಷ್ಟಾಚಾರ; ಮತದಾರನಿಗೆ ಆಯ್ಕೆಯಿಲ್ಲ, ಆಯೋಗಕ್ಕೆ ಪರಮಾಧಿಕಾರವಿಲ್ಲ

ಇನ್ನು ಭವಿಷ್ಯ ನುಡಿಯುವ ಜಾತಕ ನೋಡಿ ಪೂರ್ವಾಪರಗಳನ್ನು ಜಾಲಾಡುವ, ಬ್ರಹ್ಮ ಬರೆದಿದ್ದು ಎಂದು ನಂಬುವ ಬಹುತೇಕರ ಹಣೆ ಬರಹವನ್ನು ಓದುವ ಸಾಮರ್ಥ್ಯ ತಮ್ಮದೆಂದು ಜನರನ್ನು ನಂಬಿಸಿ ಪುಂಗಿ ಊದುವವರ, ಕಣಿ ಶಾಸ್ತ್ರ ಹೇಳುವವರ ಜೋಳಿಗೆ ಸಾಕಷ್ಟು ಭರ್ತಿಯಾಗಿದೆ. ಅಭ್ಯರ್ಥಿಯ ಭವಿಷ್ಯ ಹೇಗೋ ಏನೋ ಇಂಥವರ ಭವಿಷ್ಯ ಸಾಕಷ್ಟು ಚೆನ್ನಾಗಿರುವಂತೆ ಚುನಾವಣೆ ಭೂತ ನೋಡಿಕೊಂಡಿದೆ. ಅವರು ಸೋತರೆ ಇವರು ಗೆಲ್ಲುತ್ತಾರೆ; ಇವರು ಗೆದ್ದರೆ ಅವರೆಲ್ಲರೂ ಸೋಲುತ್ತಾರೆಂದು ಜೋತಿಷಿಗಳು ಹೇಳುವುದನ್ನು ನಂಬುವ ರಾಜಕಾರಣಿಗಳಿಗೆ ಈ ರಾಜ್ಯದಲ್ಲಂತೂ ಕೊರತೆ ಇಲ್ಲ.

ಇದರ ನಡುವೆ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆ ಹೊರಬಿದ್ದಿದೆ. ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಅದರ ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇರಲಿದೆ ಎಂದು ವಿಸ್ತಾರ ಅಖಾಡ ಸಮೀಕ್ಷೆ ಹೇಳಿದೆ. ಅದರ ಪ್ರಕಾರ ಯಾವ ಪಕ್ಷಕ್ಕೂ ಸರಳ ಬಹುಮತ (113 ಸ್ಥಾನ) ಕಷ್ಟ ಕಷ್ಟ. ದೇಶದ ಬಹುತೇಕ ಸಮೀಕ್ಷೆಗಳು ಅತಂತ್ರ ವಿಧಾನ ಸಭೆಯನ್ನೇ ನಿರೀಕ್ಷಿಸಿವೆ. ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್‍ಗೆ ನಿಚ್ಚಳ ಬಹುಮತ ಕೊಟ್ಟಿದ್ದರೆ ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್‍ಗೆ 122ರಿಂದ 140 ಸ್ಥಾನ ಖಚಿತ. ಕೆಪಿಸಿಸಿ ಅಧ್ಯಕ್ಷರೂ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಯೂ ಆಗಿರುವ ಡಿ.ಕೆ. ಶಿವಕುಮಾರ್ ಕಳೆದ ಆರೆಂಟು ದಿನದಲ್ಲಿ 141 ಸೀಟನ್ನು ಕಾಂಗ್ರೆಸ್ ಗೆಲ್ಲುತ್ತದೆಂದು ಹೇಳಿಕೊಂಡು ತಿರುಗಿದ್ದಾರೆ. ಅವರಿಗೆ ನಿಕಟವಾಗಿರುವ ಮೂಲಗಳ ಪ್ರಕಾರ ಡಿಕೆಶಿ ನಂಬುವ ಜ್ಯೋತಿಷಿ ಕಾಂಗ್ರೆಸ್ ಈ ಬಾರಿ 141 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರಂತೆ. ಇದು ಖರೆಯೋ ಸುಳ್ಳೋ ಗೊತ್ತಿಲ್ಲ. ಸತ್ಯ ಇರುವುದು ಮತ ಪೆಟ್ಟಿಗೆಯ ಗರ್ಭದಲ್ಲಿ. ಪ್ರಸವ ಬಹಳ ದೂರದಲ್ಲಿಲ್ಲ.

ಇದನ್ನೂ ಓದಿ: ಮೊಗಸಾಲೆ ಅಂಕಣ: ನಿಚ್ಚಳ ಬಹುಮತ ಮರೀಚಿಕೆ; ನಡೆದಿದೆ ಹೊಸ ಹೊಸ ಹಂಚಿಕೆ

Exit mobile version