ಬಹುಮತದ ಭಾರದಲ್ಲಿ ಜಗ್ಗುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಹಳಿ ತಪ್ಪುವುದನ್ನು ನಿಯಂತ್ರಿಸುವ ಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಅಧಿಕಾರ ಸ್ವೀಕರಿಸಿದ ಎಂಟು ತಿಂಗಳ ಬಳಿಕವಾದರೂ ಕೈಗೆತ್ತಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷ ಅಪರೂಪಕ್ಕೆ ಬಲಿಷ್ಟವಾಗಿದೆ ಅದೇ ಕಾಲಕ್ಕೆ ಹಿರಿಯ ಶಾಸಕರ ವಜನ್ ಸರ್ಕಾರ ನಡೆಸುವ ದಾರಿಯಲ್ಲಿ ಗೊಂದಲ ಗೋಜಲುಗಳನ್ನು ಸೃಷ್ಟಿಸುತ್ತಿದೆ. ಇದಕ್ಕೆ ಕಾರಣವಾಗಿರುವ ಕೆಲವರ ಬಾಯನ್ನಾದರೂ ಮುಚ್ಚಿಸುವ ಆಶಯದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ; ಕೊಪ್ಪಳ ಜಿಲ್ಲೆಯ ಯಲಬುರ್ಗ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರರನ್ನಾಗಿ; ಕಲಬುರ್ಗಿ ಜಿಲ್ಲೆ ಆಳಂದ ಶಾಸಕ ಬಿ.ಆರ್. ಪಾಟೀಲರನ್ನು ಮುಖ್ಯಮಂತ್ರಿಯ ಸಲಹೆಗಾರರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಮೂವರೂ ನೇರವಾಗಿ ಮುಖ್ಯಮಂತ್ರಿಗೆ ಉತ್ತರದಾಯಿತ್ವ ಹೊಂದಿರುವ ಸರ್ವತಂತ್ರ ಸ್ವತಂತ್ರ ಕ್ಯಾಬಿನೆಟ್ ದರ್ಜೆ ಫಲಾನುಭವಿಗಳಾಗಿದ್ದಾರೆ. ಸಿದ್ದರಾಮಯ್ಯನವರ ಸಲಹಾ ಮಂಡಳಿ ಈ ನೇಮಕದೊಂದಿಗೆ ಎಂಟರ ಸಂಖ್ಯೆ ಮುಟ್ಟಿದೆ. ಈ ಮೊದಲು ಕಾನೂನು ಸಲಹೆಗಾರರಾಗಿ ಎ.ಎಸ್. ಪೊನ್ನಣ್ಣ, ಮುಖ್ಯ ಸಲಹೆಗಾರರಾಗಿ ಸುನೀಲ್ ಕನುಗೋಲು, ಮಾಧ್ಯಮ ಸಲಹೆಗಾರರಾಗಿ ಕೆ.ವಿ.ಪ್ರಭಾಕರ ಅಲ್ಲದೆ ಇಬ್ಬರು ರಾಜಕೀಯ ಕಾರ್ಯದರ್ಶಿಗಳಾಗಿ ಕೆ.ಗೋವಿಂದರಾಜು ಮತ್ತು ನಾಸೀರ್ ಅಹಮದ್‍ರ ನೇಮಕವಾಗಿದೆ. ಈ ಎಲ್ಲರಿಗೂ ಪೊಗದಸ್ತ್ ಕ್ಯಾಬಿನೆಟ್ ದರ್ಜೆ ಸ್ಥಾನಮಾನವನ್ನು ಮುಖ್ಯಮಂತ್ರಿ ಕರುಣಿಸಿದ್ದಾರೆ.
ದೇಶಪಾಂಡೆ, ರಾಯರೆಡ್ಡಿ, ಬಿ.ಆರ್.ಪಾಟೀಲರು ಸಿದ್ದರಾಮಯ್ಯನವರೊಂದಿಗೆ ತಾವು ಹೊಂದಿರುವ ಸ್ನೇಹ, ಒಡನಾಟ, ರಾಜಕೀಯ ಸಮಾನ ಮನಃಸ್ಥಿತಿಯೇ ಮುಂತಾದ ಕಾರಣದಲ್ಲಿ ಸಂಪುಟದಲ್ಲಿ ಮಹತ್ವದ ಖಾತೆಯೊಂದಿಗೆ ಸಚಿವರಾಗುವ ಕನಸು ಕಂಡಿದ್ದರು. ಯಾವಾಗ ಸಿದ್ದರಾಮಯ್ಯ ಒಂದೇ ಏಟು ಎರಡು ತುಂಡು ಎಂಬಂತೆ ಎಲ್ಲ 34 ಸಚಿವ ಸ್ಥಾನವನ್ನೂ ಭರ್ತಿ ಮಾಡಿ ನಿರುಮ್ಮಳ ಭಾವದಲ್ಲಿ ಕುಳಿತರೋ ಆ ಕ್ಷಣವೇ ಅನೇಕ ಸಚಿವ ಸ್ಥಾನಾಕಾಂಕ್ಷಿ ಶಾಸಕರ ಕರುಳಲ್ಲಿ ಕೊಳ್ಳಿ ಆಡಲಾರಂಭಿಸಿತು. ವಿಧಾನ ಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯರಾಗಿರುವ ದೇಶಪಾಂಡೆ, ಇಂಥ ವಿಚಾರಗಳನ್ನು ಹಾದಿಬೀದಿಯಲ್ಲಿ ಇತ್ಯರ್ಥಪಡಿಸಿಕೊಳ್ಳುವ ಜಾಯಮಾನದ ರಾಜಕಾರಣಿಯಲ್ಲ. ಅವರ ಕಾರ್ಯತಂತ್ರ ಅಷ್ಟೆಲ್ಲ ಸುಲಭದಲ್ಲಿ ಹೊರ ಪ್ರಪಂಚಕ್ಕೆ ಗೊತ್ತಾಗದಂತೆ ಅವರದು ನಯ ನಾಜೂಕಿನ ನಡೆ.
ಚುನಾವಣೋತ್ತರ ವಿಧಾನ ಸಭೆ ರಚನೆಯಾದಾಗ ಸ್ಪೀಕರ್ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಹಂಗಾಮಿ ಸ್ಪೀಕರ್ ಆಗಿ ಚುನಾಯಿತ ಶಾಸಕರಿಗೆಲ್ಲ ಪ್ರಮಾಣ ವಚನ ಬೋಧಿಸಿದ್ದ “ಹಿರಿ ಮನುಷ್ಯ” ದೇಶಪಾಂಡೆಯವರನ್ನೇ ಆ ಸ್ಥಾನದಲ್ಲಿ ಕಾಯಂ ಸ್ಪೀಕರ್ ಆಗಿ ಕುಳ್ಳಿರಿಸುವ ಯೋಚನೆಯೂ ಸಿದ್ದರಾಮಯ್ಯ ಅವರಲ್ಲಿತ್ತಾದರೂ ಆ ಸಲಹೆಯನ್ನು ದೇಶಪಾಂಡೆ ಖಂಡತುಂಡವಾಗಿ ನಿರಾಕರಿಸಿದರು. ಸಚಿವರನ್ನಾಗಿ ಮಾಡದಿದ್ದರೆ ಶಾಸಕನಾಗಿ ಕೆಲಸ ಮಾಡಿಕೊಂಡು ಹೋಗುವೆ ಎಂಬ ಕೂದಲಿನಲ್ಲೇ ಕುಕ್ಕುವ ಅವರ ಸಾತ್ವಿಕ ರೋಷ, ಸಿದ್ದರಾಮಯ್ಯ ಪಾಲಿಗೆ ಬಿಸಿತುಪ್ಪವಾಗಿದ್ದ ವಿದ್ಯಮಾನ ಸರ್ವವೇದ್ಯ. ಬಹಿರಂಗದಲ್ಲಿ ಸಕ್ರಿಯ ರಾಜಕಾರಣಕ್ಕೆ ಅವಕಾಶವಿಲ್ಲದ ರಾಜ್ಯಪಾಲ, ಸ್ಪೀಕರ್ ಮುಂತಾದ ಹುದ್ದೆಗಳನ್ನು ಬಹುತೇಕ ರಾಜಕಾರಣಿಗಳು ಒಪ್ಪಿಕೊಳ್ಳುವುದಿಲ್ಲ. ದೇಶಪಾಂಡೆಯವರೊಳಗೆ ದಶಕಗಳಿಂದ ಕ್ರಿಯಾಶೀಲವಾಗಿರುವ ರಾಜಕಾರಣಿ ಅಷ್ಟೆಲ್ಲ ಸುಲಭಕ್ಕೆ ಮಣಿಯಲಿಲ್ಲ. ಅದರ ಫಲವೋ ಎಂಬಂತೆ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಸ್ಥಾನ ಅವರಿಗೆ ಒಲಿದಿದೆ.
ವಿಧಾನ ಸೌಧದಲ್ಲೊ ವಿಕಾಸ ಸೌಧದಲ್ಲೊ ಕಚೇರಿ, ಗೂಟದ ಕಾರು, ಸಚಿವ ಸ್ಥಾನಮಾನದ ಹೊರತಾಗಿ ಈ ಹುದ್ದೆಯಲ್ಲಿ ವಿರಾಜಮಾನರಾಗಲಿರುವ ದೇಶಪಾಂಡೆ ಅವರಿಂದ ರಾಜ್ಯದ ಜನತೆ ಏನನ್ನು ನಿರೀಕ್ಷಿಸಬಹುದು…? ಈಗಲೇ ಹೇಳಲಾಗದು. ರಾಜ್ಯದಲ್ಲಿ ರಚನೆಯಾದ ಮೊದಲ ಆಡಳಿತ ಸುಧಾರಣಾ ಆಯೋಗಕ್ಕೆ ಹಾರನಹಳ್ಳಿ ರಾಮಸ್ವಾಮಿಯವರು ಅಧ್ಯಕ್ಷರಾಗಿದ್ದರು. ನಂತರದಲ್ಲಿ ವೃತ್ತಿಪರ ರಾಜಕಾರಣಿಯನ್ನು ಈ ಹುದ್ದೆಗೆ ತಂದಿರಲಿಲ್ಲ. ಹಾರನಹಳ್ಳಿಯವರ ಬಳಿಕ ಎಷ್ಟೋ ವರ್ಷ ತರುವಾಯ ನಿವೃತ್ತ ಐಎಎಸ್ ಅಧಿಕಾರಿ ಟಿ. ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಿತ್ತು. ಈ ಎರಡೂ ಆಯೋಗಗಳು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಮಾಡಿರುವ ಸಲಹೆ, ನೀಡಿರುವ ಶಿಫಾರಸುಗಳು ಸರ್ಕಾರದ ಕಪಾಟುಗಳಲ್ಲಿ ಮಣ್ಣು ತಿನ್ನುತ್ತ ಬಿದ್ದಿವೆ. ಆ ಸಾಲಿಗೆ ದೇಶಪಾಂಡೆ ಆಯೋಗದ ಶಿಫಾರಸುಗಳೂ ಸೇರಲಿವೆಯೇ..ಈಗಲೇ ಏನೆಂದು ಹೇಳೋಣ.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಮೊದಲ ಆಡಳಿತ ಸುಧಾರಣಾ ಆಯೋಗ ರಚನೆಯಾದುದು ಕೆಂಗಲ್ ಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ. ಆ ಹುದ್ದೆಗೆ ಅವರ ನೇಮಕವಾದಾಗ ಅವರು ಮತ್ತು ಅಂದಿನ ಪ್ರಧಾನಿ ಇಂದಿರಾಗಾಂಧಿ ನಡುವಣ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬಿರುಕು ಮುಚ್ಚುವ ತೇಪೆ ಕಾರ್ಯಕ್ರಮವಾಗಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಪಟ್ಟ ಕಟ್ಟಲಾಯಿತೆಂದು ಆ ಸಮಯದಲ್ಲಿ ಸುದ್ದಿಯಾಗಿತ್ತು. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಪ್ರಮುಖ ಸಚಿವರಾಗಿದ್ದ ವೀರಪ್ಪ ಮೊಯಿಲಿಯವರು ಸಚಿವ ಸ್ಥಾನದಿಂದ ಹೊರಕ್ಕೆ ಹಾಕಿಸಿಕೊಂಡ ಸಂದರ್ಭದಲ್ಲಿ ಅವರನ್ನು ಆಡಳಿತ ಸುಧಾರಣಾ ಆಯೋಗ ರಚಿಸಿ ಅದಕ್ಕೆ ಅಧ್ಯಕ್ಷ ಎಂದು ಕೂರಿಸಲಾಗಿತ್ತು. ದೇಶಪಾಂಡೆಯವರ ಹೊಸ ಹುದ್ದೆ ವಿಚಾರದಲ್ಲಿ ಇದಕ್ಕಿಂತ ಹೆಚ್ಚಿನದನ್ನು ಬರೆಯುವ ಅಗತ್ಯವಿಲ್ಲ ಎನಿಸುತ್ತದೆ.
ಬಸವರಾಜ ರಾಯರೆಡ್ಡಿ ಸಿಎಂ ಅವರಿಗೆ ಆರ್ಥಿಕ ಸಲಹೆಗಾರರಾಗಿದ್ದಾರೆ. ದೇಶಪಾಂಡೆಯವರಂತೆಯೇ ಸಚಿವಾರಾಗುವ ಕನಸು ಕಟ್ಟಿಕೊಂಡಿದ್ದ ರೆಡ್ಡಿಯವರು ಈಗ ಈ ಹುದ್ದೆಯ ರಿವಾಲ್ವಿಂಗ್ ಕುರ್ಚಿಯಲ್ಲಿ ಕುಳಿತು ಚಡಪಡಿಸುವ ಬಗೆಯನ್ನು ಊಹಿಸಿಕೊಂಡರೆ ಸಂಕಟಾನಂದವಾಗುತ್ತದೆ. ಇದು ವ್ಯಂಗ್ಯದ ಮಾತಲ್ಲ ಬದಲಿಗೆ ಬಲವತ್ತರವಾದ ಕಾರಣವಿದೆ. ಸಿದ್ದರಾಮಯ್ಯ ಇಷ್ಟರಲ್ಲಿಯೇ ತಮ್ಮ ಹದಿನೈದನೆಯ ಬಜೆಟ್ ಮಂಡಿಸುವ ತಯಾರಿಯಲ್ಲಿದ್ದಾರೆ. ರಾಯರೆಡ್ಡಿಯವರು ಯಾವ ಸ್ವರೂಪದ ಆರ್ಥಿಕ ಸಲಹೆಯನ್ನು ಅನುಭವಸ್ಥ ಸಿಎಂಗೆ ನೀಡಿಯಾರು…? ಆರು ಹೆತ್ತವಳಿಗೆ ಎರಡು ಹೆತ್ತವಳು ಹೆರಿಗೆ ನೋವಿನ ಕಥೆ ಹೇಳಿದಂತಾಗದೇ…? ಹೀಗೆ ಯೋಚಿಸಿದಾಗ ರಾಯರೆಡ್ಡಿ ಚಡಪಡಿಕೆ ಕಣ್ಪರದೆಯ ಮುಂದೆ ಸಾಲು ಗಟ್ಟುತ್ತದೆ. ತಮಗೆ ಹೋಲಿಸಿದರೆ ಜ್ಯೂನಿಯರ್‌ಗಳು ಸಚಿವರಾಗಿರುವ ಸಂಪುಟದಲ್ಲಿ ಮಂಡಳಿ, ನಿಗಮದ ಅಧ್ಯಕ್ಷರಾಗಬೇಕೇ ಎಂಬ ದೇಶಪಾಂಡೆ, ಬಿಆರ್ ಪಾಟೀಲರ ಪ್ರಶ್ನೆ ರೆಡ್ಡಿಯವರದೂ. ಈಗ ಅವರಿಗೆ ಬೇಕಾದ ಹುದ್ದೆ ಸಿಕ್ಕಿದೆ, ಆದರೆ ಅಲ್ಲಿದ್ದು ಅವರು ಮಾಡುತ್ತಾರಾದರೂ ಏನನ್ನು..? ಪ್ರಶ್ನೆ ಉಳಿದಿದೆ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಖರ್ಗೆ ಹೆಸರು ಪ್ರಸ್ತಾಪ, ಹಲವರಿಗೆ ಪರಿತಾಪ
ರಾಜಕೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿರುವ ಕೆ.ಗೋವಿಂದರಾಜು ಅವರಿಗೆ ಇರುವ ಏಕೈಕ ಕೆಲಸವೆಂದರೆ ಸಿಎಂ ಹೋದಲ್ಲಿ ಬಂದಲ್ಲಿ ಅವರನ್ನು ಹಿಂಬಾಲಿಸುವುದು; ಸಾಧ್ಯವಾದಷ್ಟೂ ಸಿಎಂ ಅಕ್ಕಪಕ್ಕದಲ್ಲೇ ತಾವು ಇರುವುದನ್ನು ಕೂತಿರುವುದನ್ನು ಖಚಿತಪಡಿಸಿಕೊಂಡು ಟಿವಿ, ಮತ್ತಿತರ ಮಾಧ್ಯಮಗಳಲ್ಲಿ ಮುಖ ಕಾಣಿಸುವಂತೆ ನೋಡಿಕೊಳ್ಳುವುದು ಮಾತ್ರ. ದೇಶಪಾಂಡೆ, ರಾಯರೆಡ್ಡಿ ಇಲ್ಲವೇ ಬಿ.ಆರ್.ಪಾಟೀಲರು ಇದನ್ನು ಮಾಡುವ ಜಾಯಮಾನದವರಲ್ಲ. ಒಂದೆಡೆ ಕುರ್ಚಿ ಹಿಡಿದರೆ ಅಷ್ಟೇ ಸಾಕು ಎನ್ನುವ ಮನಃಸ್ಥಿತಿಗೆ ಈ ಮೂವರೂ ಬಂದಿದ್ದರೆ ಅದಕ್ಕೆ ಯಾರೂ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ.
ಬಿ.ಆರ್.ಪಾಟೀಲರು ವಿದ್ಯಾರ್ಥಿ ದಿನದಿಂದಲೂ ಬೆಂಕಿಯುಗುಳುವ ಪ್ರವೃತ್ತಿಗೆ ಹೆಸರಾದವರು. ಹಳೇ ಸಮಾಜವಾದಿಗಳ ಹತ್ತು ಹಲವು ಬಗೆಯ ಚಾಳಿಗಳಲ್ಲಿ ಬೆಂಕಿಯುಗುಳುವುದೂ ಒಂದು. ಈಗ ಅವರು ಸಿಎಂಗೆ ಸಲಹೆಗಾರ. ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದಿರುವ ಅವರಲ್ಲಿ ಕಲ್ಯಾಣ ಕರ್ನಾಟಕದ ಉದ್ಧಾರಕ್ಕೆ ಬೇಕಾಗುವ ಸಲಹೆ ಸೂಚನೆ ಇವೆ. ಯಾವ ವಿಚಾರದಲ್ಲಾದರೂ ಸಲಹೆ ನೀಡುವ ಅವಕಾಶ ಅವರ ಹುದ್ದೆಯೊಂದಿಗೆ ಪಾಟೀಲರಿಗೆ ಒಲಿದಿದೆ. ಆದರೆ ಅವರ ಸಲಹೆಯನ್ನು ಯಾರು ಕೇಳುತ್ತಾರೆ. ಅಂತಿಮವಾಗಿ ಸಿಎಂ ಕಿವಿ ಕೊಡುವುದು ಅಧಿಕಾರಶಾಹಿ ನೀಡುವ ಸಲಹೆಗೇ ಹೊರತೂ ರಾಜಕಾರಣದ ಮೂಸೆಯಿಂದ ಬರುವ ಸಲಹೆ ಸೂಚನೆಗಳಿಗಲ್ಲ. ಪಾಟೀಲರೂ ರಾಯರೆಡ್ಡಿ, ದೇಶಪಾಂಡಯವರಂತೆ ರಾಜಿ ಮಾಡಿಕೊಂಡು ಮುಂದುವರಿಯುವುದರಲ್ಲಿ ಯಾರಿಗೂ ಯಾವ ಸಂದೇಹವೂ ಬೇಡ. ಬೆಂಕಿ ಬಿದ್ದ ಮನೆಯಿಂದ ಹಿರಿದುಕೊಂಡ ಗಳವಷ್ಟೇ ಲಾಭ ಎನ್ನುವುದು ನಿಜವೇ ಆಗಿದ್ದರೆ ಈ ಮೂವರು ಮಾಡಿಕೊಳ್ಳಲಿರುವ ರಾಜಿಯೂ ಅಷ್ಟೆ ನಿಜ.
ಇದನ್ನೂ ಓದಿ: ಮೊಗಸಾಲೆ ಅಂಕಣ: ಉತ್ತರ ಕರ್ನಾಟಕಕ್ಕೆ ಉತ್ತರ ನೀಡದ ಬೆಳಗಾವಿ ಅಧಿವೇಶನ