Site icon Vistara News

ಮೊಗಸಾಲೆ ಅಂಕಣ: ಲೋಕಸಭೆ ಚುನಾವಣೆಗೆ ತಯಾರಿ ಮತ್ತು ರಾಜ್ಯ ಬಿಜೆಪಿಯ ತಳಮಳ

bjp council opposition leader

ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಮತದಾನೋತ್ತರ ಸಮೀಕ್ಷಾ ವರದಿಗಳ ರೀತ್ಯ ಭಾರತೀಯ ಜನತಾ ಪಾರ್ಟಿ ತನ್ನ ಕೈಯಲ್ಲಿರುವ ಒಂದು ರಾಜ್ಯ ಉಳಿಸಿಕೊಂಡು ಮತ್ತೊಂದನ್ನು ಗೆಲ್ಲಲಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೈಯಲ್ಲಿರುವ ಎರಡರಲ್ಲಿ ಒಂದು ರಾಜ್ಯ ಉಳಿಸಿಕೊಂಡು ಇನ್ನೊಂದನ್ನು ವಶಕ್ಕೆ ಪಡೆಯಲಿದೆ. ಸಮೀಕ್ಷಾ ವರದಿಗಳು ಹೇಳುವಂತೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಪ್ರಬಲ ಸೆಣೆಸಾಟ ಪೈಪೋಟಿ ನಡೆದಿದೆ. ವರದಿಗಳು ನುಡಿದಿರುವ ಭವಿಷ್ಯದ ಚಿಪ್ಪು ಬರುವ ಭಾನುವಾರ ಬೆಳಗ್ಗೆ ಒಡೆಯಲಿದೆ. ಅಲ್ಲೀವರೆಗೂ “ಆದರೆ ಹೋದರೆ” ಎಂಬ ರೆ ಸಾಮ್ರಾಜ್ಯದಲ್ಲಿ ನಾವಿರುವುದು ಅನಿವಾರ್ಯವಾಗಿದೆ.

ರಾಜಕೀಯ ಪಕ್ಷಗಳ ವಿಚಾರದಲ್ಲಿ ಮತದಾರರು ತೆಗೆದುಕೊಂಡ ನಿರ್ಣಯ ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎನ್ನುವುದು ಸುಳ್ಳಲ್ಲ. ವಿಧಾನ ಸಭಾ ಚುನಾವಣೆಗಳಲ್ಲಿ ಜನ ಯೋಚಿಸುವ ಕ್ರಮವೇ ಬೇರೆ, ಲೋಕಸಭಾ ಚುನಾವಣೆಯಲ್ಲಿ ಚರ್ಚಿಸುವ ವಿಚಾರಗಳೇ ಬೇರೆ ಎಂಬ ಮಾತು ನಿಜವೇ ಹೌದಾದರೂ ಮತದಾರರ ಮನಸ್ಸು ಯಾವತ್ತ ತುಡಿಯುತ್ತಿದೆ ಎನ್ನುವುದರ ಸೂಕ್ಷ್ಮ ಅವಲೋಕನಕ್ಕೆ ಈ ಫಲಿತಾಂಶ ಒಂದು ಬಗೆಯ ಆಕರ ಸಾಮಗ್ರಿಯನ್ನು ಒದಗಿಸಲಿದೆ. ಎಂದೇ ಈ ಪಂಚರಾಜ್ಯ ಚುನಾವಣೆಯನ್ನು ಸೆಮಿಫೈನಲ್ಸ್ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬಣ್ಣಿಸಿದ್ದು. ಕಾಂಗ್ರೆಸ್ ಇಲ್ಲವೇ ಬಿಜಪಿಯಲ್ಲಿ ಯಾವ ಪಕ್ಷ ಸೆಮಿ ಫೈನಲ್ಸ್‍ಗೆ ಹೋಗುತ್ತಾರೆ ಎನ್ನುವುದರ ಒಂದು ನೋಟ ಡಿಸೆಂಬರ್ ಮೂರರಂದು ರಾಜಕೀಯ ಪಕ್ಷಗಳು ಗಳಿಸುವ ವಿಧಾನ ಸಭಾ ಸೀಟುಗಳ ಸಂಖ್ಯೆಯನ್ನು ಆಧರಿಸಿ ನಿರ್ಧಾರವಾಗಲಿದೆ.

ಈ ಚುನಾವಣಾ ಫಲಿತಾಂಶ ಯಾವ ಪಕ್ಷವನ್ನು ಆಶೀರ್ವದಿಸಲಿದೆ, ಇಲ್ಲವೇ ತಿರಸ್ಕರಿಸಲಿದೆ ಎನ್ನುವುದರ ಯೋಚನೆಯನ್ನು ಪಕ್ಕಕ್ಕಿಟ್ಟಿರುವ ರಾಜಕೀಯ ಪಕ್ಷಗಳು ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ನರೇಂದ್ರ ಮೋದಿಯವರು ಮತ್ತೊಮ್ಮೆ ತಾವೇ ಪ್ರಧಾನಿಯಾಗುವ ಮಾತನ್ನು ಬಹಿರಂಗದಲ್ಲೇ ಆಡಿದ್ದಾರೆ. ಅದಕ್ಕೆ ಪೂರಕವಾಗಿ ಎನ್‍ಡಿಎ/ಬಿಜೆಪಿಯನ್ನು ನಿಚ್ಚಳ ಬಹುಮತದಿಂದ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯೂ ಅವರದೇ ಆಗಿದೆ. ಮೋದಿ ಬರುತ್ತಾರೆ, ರ್ಯಾಲಿಯ ನಂತರ ರ್ಯಾಲಿ ನಡೆಸಿ ಓಟಿನ ಚೀಲವನ್ನು ತುಂಬಿಸಿ ಕೊಡುತ್ತಾರೆ, ಗೆಲ್ಲಿಸಿ ಆಶೀರ್ವದಿಸುತ್ತಾರೆಂದು ನಂಬುವ ಸ್ಥಿತಿ ಈಗ ಇಲ್ಲ. ಈ ಮಾತಿಗೆ ಕಳೆದ ಮೇ ಮಾಹೆಯಲ್ಲಿ ಕರ್ನಾಟಕ ವಿಧಾನ ಸಭೆಗೆ ನಡೆದ ಚುನಾವಣೆಯೇ ಸಾಕ್ಷಿ. ಪಕ್ಷದೊಳಗೆ ಇದ್ದವರೇ ಅಭ್ಯರ್ಥಿಗಳ ಸೋಲಿಗೆ ಶರಾ ಬರೆದ ರೀತಿ ಮೋದಿ, ನಡ್ಡಾ, ಅಮಿತ್ ಶಾರನ್ನು ಕಂಗಾಲು ಮಾಡಿರುವ ಬೆಳವಣಿಗೆ. ಇಂಥದೇ ಒಳಸುಳಿ ರಾಜಕೀಯ ಇದೀಗ ನಡೆದ ಪಂಚರಾಜ್ಯ ಚುನಾವಣೆಯಲ್ಲೂ ಪುನರಾವರ್ತನೆಯಾಗಿಲ್ಲ ಎಂದು ಹೇಳುವುದಕ್ಕೆ ಸದ್ಯಕ್ಕಂತೂ ಭರವಸೆ ಇಲ್ಲ. ಫಲಿತಾಂಶ ಬರಬೇಕು; ಗೊತ್ತಾಗಬೇಕು.

ರಾಜಕೀಯ ಎನ್ನುವುದು ನಿತ್ಯವೂ ನಿರಂತರವೂ ಆದ ಕ್ರಿಯೆಗಳಲ್ಲಿ ಒಂದು. ಒಂದು ಚುನಾವಣೆ ಮುಗಿಯಿತೆಂದ ಮಾತ್ರಕ್ಕೆ ವಿರಾಮಕ್ಕೆ ವಿಶ್ರಾಂತಿಗೆ ಅವಕಾಶವೇ ಇಲ್ಲದ ಚಟುವಟಿಕೆ ಅದು. ಹಾಗೆಂದೇ ಬರಲಿರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುವ ಹುಮ್ಮಸ್ಸು ಬಿಜೆಪಿ/ಎನ್‍ಡಿಎಯಲ್ಲಿ ಇರುವಂತೆ ಡಾಟೆಡ್ ಇಂಡಿಯಾ ಒಕ್ಕೂಟದಲ್ಲೂ ಇದೆ. ವಿಧಾನ ಸಭಾ ಚುನಾವಣೆಯಲ್ಲಿ ಡಾಟೆಡ್ ಇಂಡಿಯಾ ಅಂಥ ಮಹತ್ವದ ಪಾತ್ರ ವಹಿಸಿಲ್ಲ. ಆದರೆ ಲೋಕಸಭಾ ಚುನಾವಣೆ ಹೊತ್ತಿಗೆ ಡಾಟೆಡ್ ಇಂಡಿಯಾ ಒಕ್ಕೂಟದ ರಾಜಕೀಯ ಹರಳುಗಟ್ಟುವುದು ಬಹುತೇಕ ಖಚಿತ. ಪ್ರತಿಯೊಂದು ರಾಜ್ಯದಲ್ಲೂ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವ ಚಾಣಾಕ್ಷ ನಡೆ ಎಲ್ಲ ಪಕ್ಷಗಳಲ್ಲೂ ಇದೆ. ಬಿಜೆಪಿಯನ್ನು ಬಗ್ಗು ಬಡಿಯುವ, ಮೂರನೇ ಬಾರಿಗೂ ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುವ ಮೋದಿಯವರ ಆಸೆಗೆ ಕೊಳ್ಳಿ ಇಡುವ ಕಾರ್ಯತಂತ್ರದ ವಿಚಾರದಲ್ಲಿ ಡಾಟೆಡ್ ಇಂಡಿಯಾ ಒಕ್ಕೂಟ ಸತತ ಸಮಾಲೋಚನೆಯಲ್ಲಿದೆ. ಇದು ಕೆಲವೊಮ್ಮೆ ಬಹಿರಂಗವಾಗುತ್ತದೆ, ಹಲವು ಸಲ ಸಮಾಲೋಚನೆ ನಡೆದಿದ್ದೇ ಗೊತ್ತಾಗದಂತಿರುತ್ತದೆ. ಬಾಣ ಪ್ರತಿಬಾಣಗಳ ಮುಖಾಮುಖಿ ನಡೆಯುವುದು ಮುಂದಿನ ನಾಲ್ಕೈದು ತಿಂಗಳ ಕಾಲ ಸತತ ಎನಿಸಲಿದೆ.

ಇತ್ತ ಕರ್ನಾಟಕದತ್ತ ಹೊರಳು ನೋಟ ಹರಿಸಿದರೆ ಕಾಂಗ್ರೆಸ್ ಕೈಯಲ್ಲಿ ಅಧಿಕಾರವಿದೆ ಎಂದಷ್ಟೇ ಹೇಳಬಹುದು. ಆ ಪಕ್ಷದ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಒಳಗೆ ನಡೆದಿರುವ ಮಾರಾಮಾರಿ ಪಕ್ಷದ ವರ್ಚಸ್ಸನ್ನು ಗಣನೀಯ ಮಟ್ಟದಲ್ಲಿ ಕುಗ್ಗಿಸಿದೆ. ಹರಿದ ಪಂಚೆಗೆ ಒಂದು ಕಡೆ ತೇಪೆ ಹಾಕಿದರೆ ಮತ್ತೊಂದು ಕಡೆ ಅದೇ ಪಂಚೆ ಹರಿಯುವಂತೆ ಕಾಂಗ್ರೆಸ್ ವಿದ್ಯಮಾನ ಸಾಗಿದೆ. ಏತನ್ಮಧ್ಯೆ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ವಿಚಾರದಲ್ಲಿ ರಾಮಾ ರಾದ್ಧಾಂತ ನಡೆದಿರುವುದು ಆಡಳಿತ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಸೋತು ಅಡ್ಡಡ್ಡ ಮಲಗಿರುವ ಬಿಜೆಪಿಗೆ ಪುಟಿದೇಳುವ ಅವಕಾಶವನ್ನು ಆಡಳಿತ ಪಕ್ಷವೇ ಕರುಣಿಸಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸುವ ಮನೋಬಲ ಮುಖ್ಯ ವಿರೋಧ ಪಕ್ಷವಾಗಿರುವ ಬಿಜೆಪಿಯಲ್ಲಿ ಇನ್ನೂ ಕಾಣಿಸಿಲ್ಲ. ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ತೀರಾ ತೀರಾ ವಿಳಂಬವಾಗಿ ಭರ್ತಿ ಮಾಡಲಾಗಿದೆ. ಆದರೆ ಅದೂ ಕೂಡಾ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದ್ದು ಅದನ್ನು ಹೈಕಮಾಂಡ್ ಹೇಗೆ ಬಗೆಹರಿಸಲಿದೆಯೋ ಗೊತ್ತಿಲ್ಲ. ಈ ನಡುವೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಯಾರನ್ನು ಹೆಸರಿಸಬೇಕೆಂಬ ಸಂದಿಗ್ಧದಲ್ಲಿ ಬಿಜೆಪಿ ವರಿಷ್ಟ ಮಂಡಳಿ ತಲೆ ಬಿಸಿ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

sunil kumar karkala and ashwathnarayan

ಪಕ್ಷದ ಅಧ್ಯಕ್ಷ ಮತ್ತು ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಕ್ರಮವಾಗಿ ಲಿಂಗಾಯತ, ಒಕ್ಕಲಿಗರನ್ನು ನೇಮಿಸುವ ಮೂಲಕ ಎರಡು ಪ್ರಬಲ ಜಾತಿಗಳನ್ನು ಒಲಿಸಿಕೊಳ್ಳುವ ಯತ್ನದಲ್ಲಿ ತಾನು ಯಶಸ್ವಿಯಾಗಿದ್ದೇನೆಂಬ ಭ್ರಮಾಲೋಕದಲ್ಲಿ ಬಿಜೆಪಿ ವರಿಷ್ಟ ಮಂಡಳಿ ಇರುವಂತಿದೆ. ಅದೇ ಭ್ರಮೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಕಗ್ಗಂಟು ಮಾಡಿದೆ. 75 ಸ್ಥಾನ ಬಲದ ವಿಧಾನ ಪರಿಷತ್‍ನಲ್ಲಿ ಪ್ರಸ್ತುತ ಬಿಜೆಪಿ-34; ಕಾಂಗ್ರೆಸ್ಸು-29; ಜೆಡಿಎಸ್-8; ಪಕ್ಷೇತರ-1 ಸ್ಥಾನದಲ್ಲಿವೆ. ಎರಡು ಸ್ಥಾನ ತೆರವಾಗಿದ್ದು ಸಭಾಪತಿಯ ಒಂದು ಸ್ಥಾನ ಈ ಲೆಕ್ಕದಲ್ಲಿದೆ. ವಿಧಾನ ಸಭೆಯಲ್ಲಿ 135ಕ್ಕಿಂತ ಹೆಚ್ಚಿನ ಬಲ ಹೊಂದಿರುವ ಸರ್ಕಾರದ ಮಸೂದೆಗಳ ಮಂಜೂರಾತಿಗೆ ಪ್ರಬಲ ಸವಾಲು ಪರಿಷತ್‍ನಲ್ಲಿ ಎದುರಾಗಲಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರಣವಾಗಿ ವಿರೋಧ ಪಕ್ಷದ ಬಲ 42ಕ್ಕೆ ಏರಿದೆ. ಅಂದರೆ ಸದನ ಸಾಮರ್ಥ್ಯದ ಶೇಕಡಾ ಐವತ್ತಕ್ಕಿಂತ ಹೆಚ್ಚಿನ ಶಾಸಕರು ವಿರೋಧ ಪಕ್ಷದಲ್ಲಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪಾಲಿಗೆ ಬಿಸಿತುಪ್ಪವಾಗಿದೆ. ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತು, ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಇತ್ಯಾದಿಯನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಹುಮತ ಪಡೆಯುವರೆಗೂ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ವಿರೋಧ ಪಕ್ಷವಾಗಿ ಬಿಜೆಪಿ-ಜೆಡಿಎಸ್ ಕೆಲಸ ಮಾಡಬೇಕಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಾಂತರಾಜು ವರದಿ ಹೆಸರಿನಲ್ಲಿ ಜನತೆಯ ಕಣ್ಣಿಗೆ ಮಣ್ಣು

ಈ ಸವಾಲನ್ನು ಮೈಮೇಲೆ ಎಳೆದುಕೊಂಡು ಸರ್ಕಾರಕ್ಕೆ ಛಳಿ ಬಿಡಿಸುವ ಕೆಲಸ ಮಾಡಬೇಕಿರುವ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಈ ಕ್ಷಣದವರೆಗೂ ಬಿಜೆಪಿ ಹೈಕಮಾಂಡ್ ಭರ್ತಿ ಮಾಡಿಲ್ಲ. ಸೋಮವಾರ ಶಾಸನ ಸಭೆ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಪ್ರತಿಷ್ಟಿತ ಹುದ್ದೆ ಯಾರದಾಗಬಹುದು ಎಂಬ ಚರ್ಚೆ ಜೋರಾಗಿದೆ. 2018ರ ಚುನಾವಣೆ ಬಳಿಕ ಕೋಟ ಶ್ರೀನಿವಾಸ ಪೂಜಾರಿಯವರು ವಿರೋಧ ಪಕ್ಷದ ನಾಯಕರಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಅದಿಕಾರಕ್ಕೆ ಬಂದಾಗ ಪೂಜಾರಿ ಸಚಿವರಾಗಿ ಸಭಾ ನಾಯಕರೂ ಆದರು. ಅವರ ಕಾರ್ಯತತ್ಪರತೆಯಲ್ಲಿ ಯಾವುದೇ ಊನ ಕಂಡಿಲ್ಲ. ಆದರೆ ಅವರೂ ಕೂಡಾ ದಕ್ಷಿಣ ಕರ್ನಾಟಕದವರೇ ಆಗಿರುವ ಕಾರಣ ಕಗ್ಗಂಟು ಉದ್ಭವಿಸಿದೆ. ಚಲವಾದಿ ನಾರಾಯಣ ಸ್ವಾಮಿ ಪ್ರಸ್ತುತದ ಬಿಜೆಪಿಯಲ್ಲಿ ಎದ್ದು ಕಾಣಿಸುತ್ತಿರುವ ದಲಿತ ಮುಖ. ಆದರೆ ಅವರು ಶಾಸಕರಾಗಿ ಒಂದೆರಡು ವರ್ಷವೂ ಕಳೆದಿಲ್ಲ ಎನ್ನುವುದರ ಜೊತೆಗೆ ಅವರೂ ಕೂಡಾ ದಕ್ಷಿಣ ಕರ್ನಾಟಕದವರೇ ಆಗಿದ್ದಾರೆ. ಇದು ಮತ್ತೊಂದು ಕಗ್ಗಂಟು. ರವಿಕುಮಾರ್ ಸಂಘ ಪರಿವಾರಕ್ಕೆ ಬಹಳ ಹತ್ತಿರವಾಗಿರುವವರು. ಅವರ ಅರ್ಹತೆಯನ್ನು ಕುಗ್ಗಿಸಿರುವುದು ಅವರು ಕೂಡಾ ದಕ್ಷಿಣ ಕರ್ನಾಟಕ ಭಾಗದವರೆಂಬುದು. ಇದು ಮತ್ತೊಂದು ಕಗ್ಗಂಟು. ಪೂರ್ವಾಶ್ರಮದ ಪಕ್ಷ ಕಾಂಗ್ರೆಸ್‍ನಲ್ಲಿದ್ದು ಎಚ್.ಡಿ. ದೇವೇಗೌಡರನ್ನು ಸೋಲಿಸಿ ಲೋಕಸಭೆಗೂ ಆಯ್ಕೆಯಾಗಿದ್ದ ತೇಜಸ್ವಿನಿ ಗೌಡರಿಗೆ ಅನುಭವದ ಕೊರತೆ ಇಲ್ಲ. ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ನಿಂತು ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುವ ಛಾತಿ ಛಲ ಸಾಮರ್ಥ್ಯ ಅವರಲ್ಲಿದೆ. ಆದರೆ ದಕ್ಷಿಣ ಕರ್ನಾಟಕದವರಾಗುತ್ತಾರೆ. ವಿಧಾನ ಸಭೆಯಲ್ಲಿ ಒಕ್ಕಲಿಗ ಅಶೋಕರನ್ನು ವಿರೋಧ ಪಕ್ಷದ ನಾಯಕರನ್ನಾಗಿಸಿರುವ ಪಕ್ಷ ಪರಿಷತ್‍ನಲ್ಲಿ ಅದೇ ಸ್ಥಾನವನ್ನು ಮತ್ತೊಬ್ಬ ಒಕ್ಕಲಿಗ ನಾಯಕಿಗೆ ಕೊಡುವುದು ಕಷ್ಟದ ಬಾಬತು. ಇದು ಮತ್ತೊಂದು ಕಗ್ಗಂಟು. ವಿಧಾನ ಪರಿಷತ್ ಇತಿಹಾಸದಲ್ಲಿ ಮಹಿಳಾ ಶಾಸಕರೊಬ್ಬರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಏರಿದ್ದಿಲ್ಲ. ಆ ಗೌರವದ ಅಗ್ಗಳಿಕೆಯನ್ನು ಅವಕಾಶವಿದ್ದರೂ ಬಳಸಿಕೊಳ್ಳಲಾಗದ ಅಸಹಾಯಕತೆ ಪಕ್ಷದ ವರಿಷ್ಟರದು.

sunil kumar karkala and ashwathnarayan

ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗದ ಶಾಸಕರೊಬ್ಬರನ್ನು ಆಯ್ಕೆ ಮಾಡದಿದ್ದರೆ ಆ ಭಾಗದ ಬಿಜೆಪಿ ಕಾರ್ಯಕರ್ತ ಮುಖಂಡರ ಕೋಪವನ್ನು ತಣಿಸುವುದು ಕಷ್ಟ. ಅರವಿಂದ ಬೆಲ್ಲದ್, ಬಸವನಗೌಡ ಯತ್ನಾಳ್ ಮುಂತಾದ ಉತ್ತರ ಕರ್ನಾಟಕದ ನಾಯಕರು ಬಂಡಾಯದ ಬಾವುಟ ಹಿಡಿದು ನಿಂತಿರುವಾಗ ಮತ್ತೊಂದು ಚಪ್ಪಡಿ ಎಳೆದುಕೊಳ್ಳುವ ಕೆಲಸವನ್ನು ವರಿಷ್ಟ ಮಂಡಳಿ ಮಾಡಲಿಕ್ಕಿಲ್ಲ ಎಂಬ ಆಸೆ ಆ ಪಕ್ಷದ ಒಳಗಿದೆ. ಕಲಬುರ್ಗಿಯ ಶಶೀಲ್ ನಮೋಶಿಯವರ ಹೆಸರು ಒಂದು ವಲಯದಲ್ಲಿ ಓಡುತ್ತಿದೆ. ಆದರೆ ಅವರು ಲಿಂಗಾಯತ ಸಮುದಾಯದ ನಾಯಕರು. ಪಕ್ಷ ಅಳೆದೂ ತೂಗಿ ಬೀದರ್‌ನ ರಘುನಾಥ ರಾವ್ ಮಲ್ಕಾಪುರೆಯವರಿಗೆ ಕಿರೀಟ ತೊಡಿಸಬಹುದೇ…? ಗೊತ್ತಿಲ್ಲ. ಮಲ್ಕಾಪುರೆಯವರು ಲಿಂಗಾಯತರೂ ಅಲ್ಲದ ಒಕ್ಕಲಿಗರೂ ಅಲ್ಲದ ಕುರುಬ ಸಮುದಾಯದ ಮುಖಂಡರು. ಅವರನ್ನು ಆಯ್ಕೆ ಮಾಡಿದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಎದುರು ಹಾಕಿಕೊಳ್ಳುವ ಸಂದರ್ಭ ಅವರಿಗೆ ಬರುತ್ತದೆ. ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವುದು ಅಷ್ಟೆಲ್ಲ ಸುಲಭವಲ್ಲ ಎನ್ನುವುದು ಬಿಜೆಪಿ ವರಿಷ್ಟರು ಅರ್ಥ ಮಾಡಿಕೊಂಡಿದ್ದಾರೆನ್ನಲು ಸಾಂದರ್ಭಿಕ ಸಾಕ್ಷ್ಯಗಳಿವೆ. ಏನೇ ಮಾಡಿದರೂ ಅದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಕಾಣಿಸಿಕೊಳ್ಳಲಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಸ್ಥಳೀಯ ಕಮಾಂಡ್‌ಗೆ ಬಾಗಿದ ಬಿಜೆಪಿ ಹೈಕಮಾಂಡ್‌

Exit mobile version