ಚುನಾವಣೆ ಸಮೀಪಿಸಿದಂತೆಲ್ಲ ರಾಜಕಾರಣದ ಹಲವು ಆಕರ್ಷಕ, ಅನಾಕರ್ಷಕ ಮುಖಗಳು ಮುನ್ನೆಲೆಗೆ ಬರುತ್ತವೆ. ತಮ್ಮ ಪಕ್ಷವೇ ಅಧಿಕಾರಕ್ಕೆ ಬರಬೇಕು ಎನ್ನುವುದು ಒಂದು ಪೈಪೋಟಿ; ಕೈಲಿರುವ ಅಧಿಕಾರವನ್ನು ಶತಾಯಗತಾಯ ಉಳಿಸಿಕೊಳ್ಳಬೇಕು ಎನ್ನುವುದು ಮತ್ತೊಂದು ಹರಸಾಹಸದ ಪೈಪೋಟಿ. ಅಧಿಕಾರದಲ್ಲಿ ಇರುವ ಪಕ್ಷವನ್ನು ಹೇಗಾದರೂ ಹಣಿದು ಮೂಲೆಗೆ ತಳ್ಳಬೇಕು ಎನ್ನುವುದು ಮಗದೊಂದು ಬಗೆಯ ಪೈಪೋಟಿ. ಈ ಪೈಪೋಟಿಯ ಅಡರುಬಡರು ನೋಡಲು ಕೇಳಲು ರೋಚಕ.
ಕರ್ನಾಟಕದಲ್ಲಿ ಎದುರಾಗಿರುವ, ಭವಿಷ್ಯದಲ್ಲಿ ಎದುರಿಸಬೇಕಾಗಿರುವ ಚುನಾವಣೆಗಳನ್ನು ಮತ್ತು ಅದಕ್ಕಾಗಿ ನಡೆದಿರುವ ರಾಜಕೀಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತದಾರರನ್ನು ಹೇಗಾದರೂ ಸೈ ಒಲಿಸಿಕೊಳ್ಳುವ ತಂತ್ರಗಾರಿಕೆಗೆ ಮುಂದಾಗಿದೆ. ತಾನು ಗೆಲ್ಲಬೇಕು, ಅಧಿಕಾರ ಉಳಿಸಿಕೊಳ್ಳಬೇಕೆಂಬುದಕ್ಕೆ ಜನಪ್ರಿಯ ಸಿನಿಮಾ ತಾರೆಯರ ಪ್ರಭಾವವನ್ನೂ ಬಳಸಿಕೊಳ್ಳುವ ತಂತ್ರಕ್ಕೆ ಆಡಳಿತ ಪಕ್ಷ ಮುಂದಾಗಿದೆ ಎಂಬ ಚರ್ಚೆ ಇದೀಗ ಕಾವು ಪಡೆಯುತ್ತಿದೆ.
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿ ಹೃದಯಾಘಾತಕ್ಕೆ ಒಳಗಾಗಿ ಅಸು ನೀಗಿದ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ದಿನ ನವೆಂಬರ್ ಒಂದರಂದು “ಕರ್ನಾಟಕ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ನಡೆದ ಆಕರ್ಷಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ತಮಿಳು ನಟ ರಜನೀಕಾಂತ್, ತೆಲುಗು ನಟ ಜ್ಯೂನಿಯರ್ ಎನ್‍ಟಿಆರ್ ಅವರನ್ನು ಕರೆಸಿ ಭಾಷಣ ಮಾಡಿಸಲಾಯಿತು. ಅವರು ಬಂದರು, ತಮಗೆ ಒಪ್ಪಿಸಿದ ಕೆಲಸವನ್ನು ಮಾಡಿದರು, ಹಿಂತಿರುಗಿ ಹೋದರು. ಅವರಿಬ್ಬರಲ್ಲಿ ಯಾರೂ ರಾಜಕೀಯ ಭಾಷಣ ಮಾಡಲಿಲ್ಲ. ಅದು ವೇದಿಕೆಯೂ ಆಗಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ಗಣನೀಯ ಸಂಖ್ಯೆಯಲ್ಲಿರುವ ತಮಿಳರು ಮತ್ತು ತೆಲುಗು ಭಾಷಿಕರ ಮೇಲೆ ಒಂದು ಬಗೆಯ ಸಮ್ಮೋಹನಾಸ್ತ್ರ ಬಳಕೆಯಾಗಿದ್ದು, ಅದರ ರಾಜಕೀಯ ಲಾಭ ಆಡಳಿತ ಪಕ್ಷಕ್ಕೆ ಸಿಕ್ಕರೂ ಸಿಗಬಹುದು ಎಂಬುದು ಸುಳ್ಳೇನೂ ಅಲ್ಲ ಎನ್ನುವುದು ನಡೆದಿರುವ ಚರ್ಚೆಯ ಹೂರಣ.
ಬೆಂಗಳೂರಿನಲ್ಲಿ ಕನ್ನಡ ಮಾತಾಡುವವರ ಸಂಖ್ಯೆ ಪ್ರತಿಶತ ಮೂವತ್ತು ಮಾತ್ರ ಎನ್ನುವುದು ಒಂದು ಅಂದಾಜು. ನಾವು ಹುಬ್ಬೇರಿಸಿ ಯೋಚಿಸಬಹುದಾದರೆ 70 ಪರ್ಸೆಂಟ್‍ನಷ್ಟು ಇತರ ಭಾಷಿಕರಿದ್ದಾರೆ. ಅದರಲ್ಲಿ ತಮಿಳರೇ ಅಧಿಕ. ಎರಡನೆ ಸ್ಥಾನದಲ್ಲಿ ತೆಲುಗು ಭಾಷಿಕರು. ಮಲಯಾಳಂ, ಮರಾಠಿ, ಹಿಂದಿ, ಗುಜರಾತಿ, ಬಂಗಾಲಿ…ಬೇರೆ ಬೇರೆ ಭಾಷಿಕರ ಪಟ್ಟಿ ಹೀಗೇ ಬೆಳೆಯುತ್ತದೆ. ಬೆಂಗಳೂರು ಎಲ್ಲಾ ಅರ್ಥದಲ್ಲೂ ಮಿನಿ ಇಂಡಿಯಾ. ಗಣನೀಯ ಸಂಖ್ಯೆಯಲ್ಲಿರುವ ತಮಿಳು, ತೆಲುಗರು ವಿಧಾನ ಸಭೆ, ಬಿಬಿಎಂಪಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಇಂದು ನಿನ್ನೆಯ ಬೆಳವಣಿಗೆಯಲ್ಲ. ಬೆಂಗಳೂರಿನ ಕೆಲವು ವಿಧಾನ ಸಭಾ ಕ್ಷೇತ್ರಗಳಲ್ಲಿ ತಮಿಳರ ಮತಗಳೇ ನಿರ್ಣಾಯಕ ಎನ್ನುವುದು ಎಲ್ಲ ಬಲ್ಲ ಸಂಗತಿ.
70-80ರ ದಶಕದಲ್ಲಿ ಡಿಎಂಕೆ, ಅಣ್ಣಾ ಡಿಎಂಕೆ ಕಾರ್ಪೋರೇಟರುಗಳು ಬೆಂಗಳೂರು ಮಹಾ ನಗರ ಪಾಲಿಕೆಗೆ (ಬಿಎಂಪಿ) ಅನಾಯಾಸವಾಗಿ ಆಯ್ಕೆ ಆಗುತ್ತಿದ್ದರು. ಅವರ ವಿರುದ್ಧ ಯವ ಪಕ್ಷವೂ ಗೆಲ್ಲಲಾಗದಷ್ಟು ಅವರು ಪ್ರಬಲರಗಿದ್ದರು. “ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ”ವನ್ನಾಗಿ ಘೋಷಿಸಬೇಕೆಂಬ ಮನವಿಯನ್ನು ತಮಿಳು ಸಂಘಟನೆಯೊಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಷ್ಟು ಧಿಮಾಕನ್ನೂ ಧೈರ್ಯವನ್ನೂ ಆ ದಿನಗಳಲ್ಲಿ ಪ್ರದರ್ಶಿಸಿತ್ತು. ಹೆಚ್ಚೂ ಕಡಿಮೆ ಅದೇ ಸಮಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಶಾಸಕರೂ ವಿಧಾನ ಸಭೆಗೆ ಆಯ್ಕೆಯಾಗುತ್ತಿದ್ದರು. ಡಿಎಂಕೆ, ಅಣ್ಣಾಡಿಎಂಕೆ ಕಾರ್ಪೋರೇಟರುಗಳು ಬಿಬಿಎಂಪಿಗೆ ಆಯ್ಕೆಯಾಗುವ ಪರಂಪರೆಗೆ ಸದ್ಯಕ್ಕೇನೋ ಕಡಿವಾಣ ಬಿದ್ದಿದೆ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುವುದಿಲ್ಲ, ಸ್ಪರ್ಧಿಸಿದರೂ ಗೆದ್ದು ಬರುವುದಿಲ್ಲ ಎನ್ನುವುದಕ್ಕೆ ಯಾವ ಭರವಸೆಯೂ ಇಲ್ಲ.
ಕೆಲವು ವರ್ಷಗಳಿಂದ ಶಾಸಕರನ್ನು ಆಯ್ಕೆ ಮಾಡಿ ಕಳಿಸಲಾಗದ ಎಂಇಎಸ್ ದುರ್ಬಲವಾಗಿದೆ ಎನ್ನುವ ತೂಕಡಿಕೆ ಭಾವನೆ ನಮ್ಮಲ್ಲಿದೆ. ಪ್ರತಿ ಚುನಾವಣೆಯಲ್ಲೂ ಎಂಇಎಸ್ ಸ್ಪರ್ಧಿಸುವುದು ನಿಂತಿಲ್ಲ. ತಾನು ಇನ್ನೂ ಜೀವಂತ ಇರುವುದಾಗಿಯೂ ಅಗತ್ಯ ಬಿದ್ದಾಗ ಹೆಡೆ ಎತ್ತುವ ಶೌರ್ಯ ತನ್ನಲ್ಲಿನ್ನೂ ಉಳಿದಿದೆಯೆಂದೂ ತೋರಿಸಿಕೊಳ್ಳುವ ಆಟವನ್ನು ಅದು ಈಗಲೂ ಆಡುತ್ತಿದೆ. ಇಡೀ ರಾಜ್ಯ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಲ್ಲಿ ಆಚರಿಸಿದರೆ ಬೆಳಗಾವಿಯಲ್ಲಿ ಎಂಇಎಸ್‍ನ ಕೆಲವು ಮುಖಂಡರು, ಕಾರ್ಯಕರ್ತರು “ಕರಾಳ ದಿನʼವನ್ನಾಗಿ ಆಚರಿಸಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲೇಬೇಕೆನ್ನುವುದು ಅವರ ಆಗ್ರಹವಾಗಿತ್ತೆಂದು ವರದಿಯಾಗಿದೆ. ಚುನಾವಣೆಯಿಂದ ಚುನಾವಣೆಗೆ ತಮಿಳರ, ಮಹಾರಾಷ್ಟ್ರೀಯರ ಪ್ರಭಾವ ತಗ್ಗುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಪರದೆ ಹಿಂದಿರುವ ಮಿಥ್ಯ. ಪರದೆ ಹಿಂದೆ ಇರುವುದು ಕಾಣದ ಸತ್ಯ.
ಬಿಬಿಎಂಪಿ ಚುನಾವಣೆ ನಡೆದಲ್ಲಿ ರಜನಿ, ಎನ್‍ಟಿಆರ್ ಹೆಸರು ಚುನವಣಾ ಪ್ರಚಾರದಲ್ಲಿ ಪ್ರಸ್ತಾಪಕ್ಕೆ ಬರುವುದಿಲ್ಲ ಎಂದು ಹೇಳಲು ಆಧಾರವೂ ಇಲ್ಲ. ರಜನಿ, ಎನ್‍ಟಿಆರ್ ಬಿಜೆಪಿ ಜೊತೆಗೆ ಇದ್ದಾರೆಂಬಂಥ ಪಿಸು ಮಾತಿನ ಪ್ರಚಾರದಲ್ಲಿ (ವಿಸ್ಪರಿಂಗ್ ಕ್ಯಾಂಪೈನ್) ಇವೆಲ್ಲ ಸಾಮಾನ್ಯ. ಬಿಬಿಎಂಪಿಗೆ ಆರೇಳು ವರ್ಷದ ಹಿಂದೆ ಚುನಾವಣೆ ನಡೆದಾಗ ವಾರ್ಡ್‍ಗಳ ಸಂಖ್ಯೆ 190. ಈಗ ಹಾಗಲ್ಲ, 240+ ವಾರ್ಡ್‍ಗಳನ್ನು ರಚಿಸಲಾಗಿದೆ. ಕರ್ನಾಟಕ ವಿಧಾನ ಸಭೆಯಲ್ಲಿ 224+1=225 ಶಾಸಕರಿದ್ದರೆ ಬಿಬಿಎಂಪಿ ಸದಸ್ಯ ಬಲ 240+. ಯಾವುದೇ ರಾಜಕೀಯ ಪಕ್ಷದ ಕೈಗೆ ಬಿಬಿಎಂಪಿ ಆಡಳಿತ ಸಿಗಬೇಕಾದರೆ ಅದು 121 ಸೀಟನ್ನಷ್ಟೇ ಗೆದ್ದರೆ ಸಾಕಾಗದು. ಬೆಂಗಳೂರು ವ್ಯಾಪ್ತಿಯಿಂದ ಆಯ್ಕೆಯಾಗಿರುವ ಶಾಸಕರು, ಸಂಸದರು, ವಿಧಾನಪರಿಷತ್, ರಾಜ್ಯಸಭೆ ಸದಸ್ಯರು ಇಲ್ಲಿ ಮತದಾರರು. ಮೇಯರ್/ ಉಪ ಮೇಯರ್ ಆಯ್ಕೆಯಲ್ಲಿ ಅವರ ತಕ್ಕಡಿ ಮೇಲೆ ಕೆಳಗು ಮಾಡುವ ಶಕ್ತಿ ಇವರಲ್ಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 190 ಸೀಟಿನ ಪೈಕಿ ನೂರು ಸೀಟನ್ನು ಬಿಜೆಪಿ ಗೆದ್ದಿತ್ತು. ಆದರೆ ಆಡಳಿತ ಸೂತ್ರ ಹಿಡಿದಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್. ಇದಕ್ಕೆ ಕಾರಣ ಶಾಸಕರು, ಸಂಸದರು. ಬೆಂಗಳೂರಿನ ಸುಳ್ಳು ವಿಳಾಸ ನೀಡಿ ಕೆಲವು ಶಾಸಕರು ಮತ ಚಲಾಯಿಸಿದರೆಂಬ ದೂರೂ ದಾಖಲಾಯಿತು. ಎಲ್ಲ ದಾಖಲೆಗಳಿದ್ದರೂ ಅವನ್ನೆಲ್ಲ ಮುಚ್ಚಿ ಹಾಕಲಾಯಿತು.
ಆ ಸೋಲು ಬಿಜೆಪಿಯನ್ನು ಎಚ್ಚರಿಕೆಯಿಂದ ಹೆಜ್ಜೆ ಹಾಕುವಂತೆ ಮಾಡಿರುವ ಅಂಶ. ಬೆಂಗಳೂರು ನಗರ ಮತ್ತು ಗ್ರಾಮಾಂತರವನ್ನು “ಗುತ್ತಿಗೆ” ಹಿಡಿದಿರುವ ಸಚಿವರಾದ ಅಶ್ವತ್ಥನಾರಾಯಣ, ಅಶೋಕ, ಸೋಮಣ್ಣ, ಎಸ್.ಟಿ. ಸೋಮಶೇಖರ್, ಎಂ.ಟಿ.ಬಿ. ನಾಗರಾಜ, ಮುನಿರತ್ನ ಮುಂತಾದವರ ದಂಡು ಈ ನಿಟ್ಟಿನಲ್ಲಿ ಬಹಳ ದೊಡ್ಡ ಕಸರತ್ತು ಮಾಡುತ್ತಿದೆ. ಬಿಬಿಎಂಪಿಯನ್ನು ವಶಕ್ಕೆ ತೆಗೆದುಕೊಂಡರೆ 28 ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಲು ಸಾಧ್ಯ ಎಂಬ ನಂಬಿಕೆ ಇದೆ. ಕರ್ನಾಟಕದಲ್ಲಿ ವಿಧಾನ ಸಭಾ ಚುನಾವಣೆಯೂ ಬಹಳ ದೂರದಲ್ಲಿಲ್ಲ, ಅದಕ್ಕೂ ಮೊದಲೇ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬಿಬಿಎಂಪಿಗೆ ಎರಡು ವರ್ಷದ ಹಿಂದೆಯೇ ಚುನಾವಣೆ ನಡೆಯಬೇಕಿತ್ತು. ಪ್ರಜಾಪ್ರಭುತ್ವ ಕಾಪಾಡುವ ಮಾತನ್ನಾಡುವ ಬಿಜೆಪಿಗೆ ಒಳಗೊಳಗೇ ಸೋಲಿನ ಭಯ ಕಾಡಿರುವುದೇ ಮುಖ್ಯವಾಗಿ ಚುನಾವಣೆ ಪ್ರಕ್ರಿಯೆ ಒಂದಲ್ಲ ಒಂದು ನೆಪದಲ್ಲಿ ಮುಂದೆಮುಂದಕ್ಕೆ ಹೋಗಲು ಕಾರಣ ಎನ್ನುವುದು ರಹಸ್ಯವೇನಲ್ಲ. ಕೋರ್ಟ್ ಆದೇಶವೇನಾದರೂ ಚುನಾವಣೆಯನ್ನು ನಡೆಸುವ ಅನಿವಾರ್ಯ ಸೃಷ್ಟಿಸಿದರೆ ಸರ್ಕಾರ ಅದನ್ನು ತಡೆಯಲಾಗದು. ಆದೇಶಕ್ಕೆ ಮೇಲಿನ ಕೋರ್ಟ್‍ನಿಂದ ತಡೆಯಾಜ್ಞೆ ತರುವ ಕೆಲಸವನ್ನು ಅದು ಮಾಡಬಹುದಾದರೂ ಬಹಳ ಕಾಲ ನಿಲ್ಲದು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಚರ್ಚಿಲ್ ಕುಳಿತಿದ್ದ ಆಸನದಲ್ಲಿ ರಿಷಿ
ಒಳ ವರ್ತಮಾನದ ಪ್ರಕಾರ ಬಿಬಿಎಂಪಿಗೆ ಚುನಾವಣೆ ನಡೆಸುವುದು ಬೆಂಗಳೂರು ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನ 28 ಶಾಸಕರಿಗೂ ಬೇಕಾಗಿಯೇ ಇಲ್ಲ. ಇದಕ್ಕೆ ಶಾಸಕರದೇ ಆದ ಕಾರಣವೆಂದರೆ ಬಂಡಾಯದ ಭೀತಿ. ಒಂದೊಂದೂ ವಿಧಾನ ಸಭೆ ಕ್ಷೇತ್ರ ಆರರಿಂದ ಎಂಟು ವಾರ್ಡ್‍ಗಳನ್ನು ಹೊಂದಿರುತ್ತದೆ. ಒಂದೊಂದು ವಾರ್ಡ್‍ನಲ್ಲೂ ಹತ್ತಾರು ಜನ ಟಿಕೆಟ್ ಆಕಾಂಕ್ಷಿಗಳು. ಹಾಲಿ/ಮಾಜಿ ಕಾರ್ಪೋರೇಟರುಗಳ ಆದಾಯ, ಐಷಾರಾಮಿ ಜೀವನ ಶೈಲಿ, ನಗರಪಾಲಿಕೆ ಕಾಮಗಾರಿಗಳ ಗುತ್ತಿಗೆ ಹಂಚುವುದರಲ್ಲಿ ಕಾರ್ಪೋರೇಟರುಗಳಿಗೆ ಇರುವ ಕಮಾಯಿ ಮುಂತಾದವು ಪಕ್ಷದ ಟಿಕೆಟ್‍ಗೆ ದುಂಬಾಲು ಬಿದ್ದಿರುವ ಇತರರ ಕಣ್ಣು ಕುಕ್ಕುತ್ತಿವೆ. ಮೀಸಲಾತಿ ಪದೇ ಪದೇ ಬದಲಾವಣೆಗೊಂಡು, ಹೊಸ ಕಾರ್ಪೋರೇಟರುಗಳು ಆಯ್ಕೆಯಾದರೂ ಮಾಜಿಗಳ ಪ್ರಭಾವ ತಗ್ಗದಂತೆ ನೋಡಿಕೊಳ್ಳುವ ಒಳ ರಾಜಕೀಯವೊಂದು ಸದ್ದುಗದ್ದಲವಿಲ್ಲದೆ ನಡೆದು ಬಂದಿದೆ. ಒಂದು ವಾರ್ಡ್‍ನಲ್ಲಿ ಯಾರೇ ಒಬ್ಬರಿಗೆ ಟಿಕೆಟ್ ನೀಡಿದರೂ ಉಳಿದವರು ವ್ಯತಿರಿಕ್ತವಾಗಿ ಕೆಲಸ ಮಾಡುವ ಅಪಾಯ ಶಾಸಕರನ್ನು ಅಟ್ಟಾಡಿಸುತ್ತಿದೆ. ಸದ್ಯಕ್ಕೆ ಅಂದರೆ ವಿಧಾನ ಸಭಾ ಚುನಾವಣೆ ಮುಗಿಯುವರೆಗೂ ಬಿಬಿಎಂಪಿ ಚುನಾವಣೆಯೇ ಬೇಡ ಎನ್ನುವುದು ಅವರೆಲ್ಲರ ಸಾಮೂಹಿಕ ವರಾತ.
ಬಿಬಿಎಂಪಿ ಇನ್ನೂ ಬಿಎಂಪಿ (ಬೆಂಗಳೂರು ಮಹಾ ನಗರ ಪಾಲಿಕೆ) ಆಗಿದ್ದ 70-80ರ ದಶಕದಲ್ಲಿ ಹತ್ತು ವರ್ಷ ಕಾಲ ಚುನಾವಣೆ ನಡೆಯದೆ ಜನಪ್ರತಿನಿಧಿಗಳೇ ಇರಲಿಲ್ಲ. ಆಡಳಿತಾಧಿಕಾರಿಯ ಮೂಲಕ ವಿಧಾನ ಸೌಧದ ಮೂರನೇ ಮಹಡಿಯಲ್ಲಿ ಕುಳಿತಿದ್ದವರು ಅಧಿಕಾರ ಚಲಾಯಿಸಿದ್ದರು. ಕಾಂಗ್ರೆಸ್ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ಅವರನ್ನು ಕದಲಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ಆರ್. ಗುಂಡೂರಾವ್ ಆಡಳಿತಾವಧಿಯಲ್ಲಿ ಬಿಎಂಪಿಗೆ ಚುನಾವಣೆ ನಡೆಸುವುದು ಸರ್ಕಾರಕ್ಕೇ ಬೇಕಾಗಿರಲಿಲ್ಲ. ಯಾವ ಸೋಲಿನ ಭಯ ಇಬ್ಬರೂ ಮುಖ್ಯಮಂತ್ರಿಗಳನ್ನು ಕಾಡಿತ್ತೋ. 1983ರಲ್ಲಿ ಅದೇ ಮೊದಲ ಬಾರಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇತರ ಜನತಾ ಪಾರ್ಟಿ ನೇತೃತ್ವದ ಸರ್ಕಾರ ಬಂತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು. ಅವರ ಸಚಿವ ಸಂಪುಟ ಆರಂಭದ ದಿನಗಳಲ್ಲಿಯೇ ತೆಗೆದುಕೊಂಡ ಮಹತ್ವದ ನಿರ್ಣಯಗಳಲ್ಲಿ ಬಿಎಂಪಿಗೆ ಚುನಾವಣೆ ನಡೆಸುವುದೂ ಒಂದಾಗಿತ್ತು. ಕಾಂಗ್ರೆಸ್ಸು ವಿಧಾನ ಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ರೀತಿಯಲ್ಲೇ ಬಿಎಂಪಿ ಚುನಾವಣೆಯಲ್ಲೂ ಸೋತಿತು. ಜನತಂತ್ರಕ್ಕೆ ಸಿಕ್ಕ ಜಯ ಅದು ಎಂದು ಆಗ ಬಣ್ಣಿಸಲಾಗಿತ್ತು.
ಹೆಗಡೆ ಪ್ರತಿನಿಧಿಸಿದ್ದ ಜನತಾ ಪಾರ್ಟಿಗೆ ವಿಧಾನ ಸಭೆಯಲ್ಲಿ ಸರಳ ಬಹುಮತ ಇರಲಿಲ್ಲ. ಬಿಜೆಪಿಯ 18 ಶಾಸಕರು, ಉಭಯ ಕಮ್ಯೂನಿಸ್ಟ್ ಪಕ್ಷಗಳಾದ ಸಿಪಿಎಂ ಮೂರು, ಸಿಪಿಐ ಮೂರು ಮತ್ತು 22 ಪಕ್ಷೇತರರಲ್ಲಿ ಬಹುತೇಕರು ಜನತಾ ಪಕ್ಷಕ್ಕೆ ಬೆಂಬಲವಾಗಿ ನಿಂತರು. ಬಿಜೆಪಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಬಾಹ್ಯ ಬೆಂಬಲ ನೀಡಿದರೆ ಕೆಲವು ಪಕ್ಷೇತರ ಶಾಸಕರು ಸಚಿವರಾದರು. ಹತ್ತು ವರ್ಷ ಚುನಾವಣೆ ನಡೆಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಕ್‍ಸಮರ ನಡೆಸಿದ್ದ ಬಿಜೆಪಿ ಮತ್ತು ಉಭಯ ಕಮ್ಯೂನಿಸ್ಟ್ ಪಕ್ಷಗಳು ಸದನದ ಒಳಗೆ ಹೊರಗೆ ನಿರಂತರ ಒತ್ತಡ ಹೇರಿದ್ದೂ ಬಿಎಂಪಿಗೆ ಚುನಾವಣೆ ನಡೆಸುವ ತೀರ್ಮಾನಕ್ಕೆ ಕಾರಣವಾಯಿತು. ನಿರೀಕ್ಷಿಸಿದಂತೆಯೇ ಕಾಂಗ್ರೆಸ್ ಸೋತು ಜನತಾ ಪಕ್ಷ ಬಿಎಂಪಿ ಆಡಳಿತ ಸೂತ್ರ ಹಿಡಿಯಿತು. ಆಗ ಅನೇಕ ಬಿಜೆಪಿ ಕಾರ್ಯಕರ್ತರು ಕಾರ್ಪೊರೇಟರುಗಳಾಗಿ ಆಯ್ಕೆಯಾದರಷ್ಟೆ ಅಲ್ಲ ಜನತಂತ್ರವನ್ನು ಮರು ಸ್ಥಾಪಿಸಿದ ಹಮ್ಮಿನಲ್ಲಿ ಬೀಗಿದರು. ಇಂದು ಅದೇ ಬಿಜೆಪಿ ಕೈಯಲ್ಲಿ ರಾಜ್ಯದ ಆಡಳಿತ ಸೂತ್ರವಿದೆ. ಮನಸ್ಸು ಮಾಡಿದರೆ ನಾಳೆಯೇ ಚುನಾವಣೆ ಘೋಷಣೆ ಮಾಡಿಸುವ ಅಧಿಕಾರವೂ ಅದರ ಕೈಯಲ್ಲಿದೆ. ಆದರೆ ಅದಕ್ಕೆ ಚುನಾವಣೆ ಬೇಕಾಗಿಲ್ಲ, ಇದಕ್ಕೆ ಕಾರಣ ಸೋಲಿನ ಭಯ ಎಂದು ಸುಲಭದಲ್ಲಿ ಅರ್ಥಮಾಡಿಕೊಳ್ಳಬಹುದು.
ಇದನ್ನೂ ಓದಿ | ಮೊಗಸಾಲೆ ಅಂಕಣ | ಏಳು ಸುತ್ತಿನ ಕೋಟೆಯೊಳಗೆ ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರಿನ ರಾಜಾಕಾಲುವೆಗಳು ಮುಚ್ಚಿಹೋಗಿರುವಂತೆ ನಗರದ ಮತದಾರರನ್ನು ಒಲಿಸಿಕೊಳ್ಳುವ ಮಾರ್ಗವೆಲ್ಲವೂ ಬಿಜೆಪಿ ಪಾಲಿಗೆ ಬಂದ್ ಆಗಿವೆ. ಮಳೆ, ಅದರಿಂದ ಪದೇ ಪದೆ ಉಂಟಾಗುತ್ತಿರುವ ಹಲವು ಬಗೆಯ ಸಮಸ್ಯೆ, ಕಿತ್ತೆದ್ದು ಹೋಗಿರುವ ದುರಸ್ತಿ ಮಾಡಲು ಸಾಧ್ಯವೇ ಇಲ್ಲವೆಂಬಂಥ ರಸ್ತೆ, ಹೊಂಡಗುಂಡಿಯೇ ಆಡಳಿತ ಎಂಬಂತಾಗಿರುವ ತಮಾಶೆ, ಬಹುಬಗೆಯ ಪೂರಕ ಸವಲತ್ತಿನ ಕೊರತೆ, ಸಂಚಾರ ಅವ್ಯವಸ್ಥೆ…ಒಂದೇ ಎರಡೇ. ಮತದಾರರ ಮುಂದೆ ಮುಖ ಎತ್ತಿಕೊಂಡು ಹೋಗಲಾಗದ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದಕ್ಕೆ ಮುಖವಿಲ್ಲ ಹಾಗಾಗಿ ಮುಖವಾಡ ಬೇಕಾಗಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಚುನಾವಣೆ ಬಂದೇ ಬಿಟ್ಟರೆ…? ಮತದಾರರ ಮನ ಒಲಿಸಿಕೊಳ್ಳುವುದಕ್ಕೆ ಬೇರೆ ತಂತ್ರ ಅನಿವಾರ್ಯ. ಅವರ ಮೇಲೆ ಅದರಲ್ಲೂ ಮುಖ್ಯವಾಗಿ ತಮಿಳು, ತೆಲುಗು ಮತದಾರರ ಮೇಲೆ ತಾರಾಬಲದ ವಶೀಕರಣ ತಂತ್ರ ಪ್ರಯೋಗಿಸಿದರೆ ಚುನಾವಣಾ ಫಲಿತಾಂಶದಲ್ಲಿ ಒಂದಿಷ್ಟು ಸಮಾಧಾನಕರ ಬಹುಮಾನ ತನಗೆ ಸಿಕ್ಕೀತೆಂಬ ಲೆಕ್ಕಾಚಾರ ಬಿಜೆಪಿಯಲ್ಲಿರುವಂತಿದೆ.
(ಲೇಖಕರು ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು)