Site icon Vistara News

ಮೊಗಸಾಲೆ ಅಂಕಣ: ಕಾಂಗ್ರೆಸ್‌ ಭರವಸೆಗಳ ಮುಂದೆ ಬಿಜೆಪಿ ಹತಾಶೆ

bjp karnataka

ಉತ್ತರ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿಯ ನೆಲಮಟ್ಟದ ವಾಸ್ತವ, ಪರಿಸ್ಥಿತಿ ಹೇಗಿದೆಯೋ ನಿಖರವಾಗಿ ಗೊತ್ತಿಲ್ಲ. ಇಲ್ಲಿ ಕುಳಿತು ಆ ಬಗ್ಗೆ ಮಾತಾಡುವುದು ಮಾಹಿತಿ ಕೊರತೆಯಲ್ಲಿ ಮಾಡಿದ ವ್ಯಾಖ್ಯಾನವೂ ಆಗಬಹುದು. ಆದರೆ ಇಲ್ಲಿ ಕರ್ನಾಟಕದಲ್ಲಿ ಮಖಾಡೆಯಾಗಿ ಮಲಗಿರುವ ಬಿಜೆಪಿ ಸ್ಥಿತಿ ನೋಡಿದರೆ ಸನಿಹ ಭವಿಷ್ಯದಲ್ಲಿ ಅದು ಚೇತರಿಕೆ ಕಾಣುವುದು ಕಷ್ಟ ಎನಿಸುತ್ತದೆ. 2018ರ ಚುನಾವಣೆಯಲ್ಲಿ 104 ಸೀಟು ಗೆದ್ದು ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಅಧಿಕಾರ ಹಿಡಿದ ಆ ಪಕ್ಷ ವಿಧಾನ ಸೌಧದ ಮೂರನೇ ಮಹಡಿಗೆ ಪ್ರವೇಶ ಪಡೆದಷ್ಟು ಸುಲಭದಲ್ಲಿ ರಾಜ್ಯದ ಜನತೆಯ ಹೃದಯದೊಳಗೆ ಸ್ಥಾನ ಪಡೆಯವುದು ಸಾಧ್ಯವಾಗಿಲ್ಲ. 2023ರ ಚುನಾವಣೆಯಲ್ಲಿ 66 ಸ್ಥಾನ ಬಲಕ್ಕೆ ಕುಸಿದ ಆ ಪಕ್ಷ ಈಗ ನಡುಗುತ್ತ ಬೆವರುತ್ತ ನೋಡುತ್ತಿರುವುದು ಇನ್ನು ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆಯ (Loksabha election) ಕಡೆಗೆ.

2019ರ ಲೋಕಸಭಾ ಚುನಾವಣೆ ಕರ್ನಾಟಕದ ಬಿಜೆಪಿ ಪಾಲಿಗೆ ಸುಗ್ಗಿ ತಂದಿದ್ದು ನಿಜ. 28 ಲೋಕಸಭಾ ಕ್ಷೇತ್ರದ ಪೈಕಿ 25 ಸೀಟನ್ನು ಗೆದ್ದು ಬೀಗಿದ ಪಕ್ಷಕ್ಕೆ ಇದು ಸುಗ್ಗಿ ಅಲ್ಲದೆ ಮತ್ತಿನ್ನೇನು. ಇದಲ್ಲದೆ ಮಂಡ್ಯ ಸೀಟಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಸುಮಲತಾ ಇದೀಗ ಬಿಜೆಪಿ ಜೊತೆಗೇ ಇರುವುದರಿಂದ ಆ ಪಕ್ಷದ ಬಲ 26 ಸ್ಥಾನಕ್ಕೇರಿದೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣಾದಿಂದ ಒಟ್ಟು ಲೋಕಸಭಾ ಸ್ಥಾನ 130. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಗೆದ್ದಿದ್ದು 30 ಸ್ಥಾನ ಮಾತ್ರ. ಕನಾಟಕದಲ್ಲಿ ಮಾತ್ರವೇ ಕಾಂಗ್ರೆಸ್‍ನ ನಿದ್ರೆಗೆಡಿಸಿದ ಬಿಜೆಪಿ, 2023ರ ವಿಧಾನ ಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‍ನ ನಾಗಾಲೋಟಕ್ಕೆ ಬೆದರಿದೆ.

2018ರ ವಿಧಾನ ಸಭಾ ಚುನಾವಣೆಯಲ್ಲಿ 104 ಸ್ಥಾನ ಪಡೆದ ಬಿಜೆಪಿ, ಕೆಲವೇ ತಿಂಗಳ ನಂತರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 173 ವಿಧಾನ ಸಭಾ ಕ್ಷೇತ್ರಗಳಲ್ಲಿ ಲೀಡ್ ಪಡೆದುದು ಮತ್ತು ಪಕ್ಷದ ಅಭ್ಯರ್ಥಿಗಳು 25 ಸೀಟು ಗೆದ್ದುದು ಪರಮಾಶ್ಚರ್ಯ ತಂದ ರಾಜಕೀಯ ಬೆಳವಣಿಗೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಶೇಕಡಾವಾರು ಮತ ಪ್ರಮಾಣವೂ ಬಿಜೆಪಿಯೇತರ ಪಕ್ಷಗಳಲ್ಲಿ ಕಂಗಾಲು ಮೂಡಿಸಿದ್ದು ಸುಳ್ಳಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದುದು ಶೇಕಡಾ 43.37 ಮತ. ಐದು ವರ್ಷ ಬಳಿಕದ 2019ರ ಚುನಾವಣೆಯಲ್ಲಿ ಪಕ್ಷ ಪಡೆದುದು ಪ್ರತಿಶತ 51.4 ಮತ. ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಅದರೊಂದಿಗೆ ಕೈಜೋಡಿಸಿ ನಾವು ಕೆಟ್ಟೆವು ಎಂದು ಉಭಯ ಪಕ್ಷಗಳ ನಾಯಕರು ಅಲವತ್ತುಕೊಂಡಿದ್ದು ಚುನಾವಣಾ ಫಲಿತಾಂಶೋತ್ತರ ಬೆಳವಣಿಗೆ.

ರಾಜ್ಯದ ಎರಡೂ ಪ್ರಮುಖ ವಿರೋಧ ಪಕ್ಷಗಳನ್ನು ಸದೆ ಬಡಿದ ಬಿಜೆಪಿಗೆ ಎದುರಿಲ್ಲ ಎಂಬ ಭಾವನೆ ಆ ಸಮಯದಲ್ಲಿ ಮೂಡಿತ್ತು. ಆದರೆ ಮೊನ್ನೆಮೊನ್ನೆ ನಡೆದ ವಿಧಾನ ಸಭಾ ಚುನಾವಣೆ ಆ ಭಾವನೆಯನ್ನು ಹೊಸಕಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕರ್ನಾಟಕಕ್ಕೆ ಬಂದು ಒಂದಿಷ್ಟು ಭಾಷಣ, ರ್ಯಾಲಿ ಬಳಿಕ ರ್ಯಾಲಿ, ರೋಡ್ ಶೋ ನಡೆಸಿದ ಮಾತ್ರಕ್ಕೇ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಮರಳಿ ತರಬಹುದೆಂಬ ಸ್ಥಳೀಯ ನಾಯಕರ ಹುಸಿ ನಂಬಿಕೆ ಹಳ್ಳ ಹಿಡಿದಿದೆ. ನಾಳೆ ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಹಿಂದಕ್ಕೆ ಸರಿದು ಕಾಂಗ್ರೆಸ್ ವಿಜೃಂಭಿಸಬಹುದೆಂಬ ಸೂಚನೆ ಈಗ ಇಣುಕಲಾರಂಭವಾಗಿದೆ. ಇದು ಅವರು ಇವರು ಹೇಳುವ ಮಾತಲ್ಲ, ಬಿಜೆಪಿಯಲ್ಲಿ ಜನಸಂಘ ಕಾಲದಿಂದಲೂ ಇರುವ ಅನೇಕರ ಒಡಲಾಳದ ಅನಿಸಿಕೆ.

ಚುನಾವಣೆ ಪರಾಭವಕ್ಕೆ ಕಾರಣಗಳೇನು ಎನ್ನುವುದರ ಆತ್ಮಾವಲೋಕನ ಬಿಜೆಪಿಯಲ್ಲಿ ಇದೀಗ ನಡೆದಿದೆ. ಕಾಂಗ್ರೆಸ್ ಗೆದ್ದಿರುವುದೇ ಬಿಜೆಪಿ ಸೋಲಿಗೆ ಕಾರಣವೆಂದು ಒಂದೇ ವಾಕ್ಯದಲ್ಲಿ ವ್ಯಂಗ್ಯವಾಡುವವರೂ ಆ ಪಕ್ಷದಲ್ಲಿದ್ದಾರೆ. ಅದೇನೇ ಇರಲಿ, ಜಿಲ್ಲಾವಾರು ಆತ್ಮಾವಲೋಕನಕ್ಕೆ ಬಿಜೆಪಿ ಮುಂದಾಗಿದೆ. ಕೆಲವು ಜಿಲ್ಲೆಗಳಲ್ಲಿ ನಡೆದ ಇಂಥ ಸಭೆಗಳಲ್ಲಿ ಸೋಲಿಗೆ ಕಾರಣವಾಗಿ ಆ ಪಕ್ಷದ ಮುಖಂಡರನ್ನೇ ದೂಷಿಸುವ ಮತ್ತು ಆ ಮೂಲಕ ಸತ್ಯವನ್ನು ಬಯಲಿಗೆಳೆಯುವ ಕೆಲಸ ಸಾಗಿರುವುದು ವಿಶೇಷ. ತಮ್ಮ ಸೋಲಿಗೆ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಕಾರಣರೆಂದು ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರದಲ್ಲಿ ಕಣಕ್ಕಿಳಿದು ಸೋತಿರುವ ವಿ.ಸೋಮಣ್ಣ ಆರೋಪಿಸಿದ್ದಾರೆ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಬಸವನಗೌಡ ಪಾಟೀಲ್ ಯತ್ನಾಳರು ಕಾರಣವೆಂದು ಸೋತಿರುವ ಮುರುಗೇಶ ನಿರಾಣಿ ನೇರ ಆರೋಪ ಮಾಡಿದ್ದಾರೆ. ನಿರಾಣಿ ಮತ್ತು ಯತ್ನಾಳರಿಬ್ಬರೂ ಒಂದೇ ಪಕ್ಷದಲ್ಲಿದ್ದುಕೊಂಡು ನಿರಂತರ ರಾಜಕೀಯ ದ್ವೇಷವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವವರು. ಎಂ.ಪಿ. ರೇಣುಕಾಚಾರ್ಯ ತಮ್ಮ ಸೋಲಿಗಷ್ಟೇ ಅಲ್ಲದೆ ಪಕ್ಷದ ಒಟ್ಟಾರೆ ಸೋಲಿನ ವಿಮರ್ಶೆ ಮಾಡುತ್ತ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ ಕಟೀಲರತ್ತ ಬೆರಳು ತೋರಿ ಶೋಕಾಸ್ ನೋಟೀಸಿನ ಬಹುಮಾನ ಪಡೆದಿದ್ದಾರೆ. ಏತನ್ಮಧ್ಯೆ ಕಾಂಗ್ರೆಸ್-ಜೆಡಿಎಸ್ ಶಾಸಕರಾಗಿದ್ದವರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿಯನ್ನು ವಲಸಿಗರ ಕೈಗೊಪ್ಪಿಸಿದ್ದೇ ಪಕ್ಷದ ಸೋಲಿಗೆ ಕಾರಣವೆಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಪಕ್ಷ ಸಿದ್ಧಾಂತಕ್ಕೆ ನಿಷ್ಟರಲ್ಲದ ಆದರೆ ಕೇವಲ ಅಧಿಕಾರಕ್ಕಾಗಿ ಒಳನುಸುಳುವ ಇಂಥವರನ್ನು ಹೊರಕ್ಕೆ ಹಾಕಿ ಪಕ್ಷವನ್ನು ಶುದ್ಧಗೊಳಿಸಬೇಕಾಗಿದೆ ಎಂಬ ಅವರ ಅಪೇಕ್ಷೆಗೆ ಆ ಪಕ್ಷದಲ್ಲಿ ದೊಡ್ಡ ರೀತಿಯ ಸಮರ್ಥನೆ ಇದೆ. ಈಶ್ವರಪ್ಪ ಮಾತಿಗೆ ಕಾಂಗ್ರೆಸ್‍ನಿಂದ ಬಂದು ಬಿಜೆಪಿ ಸೇರಿರುವ ಬೈರತಿ ಬಸವರಾಜ್ ಅಕ್ಷೇಪಿಸಿದ್ದಾರೆ.

shakti scheme karnataka

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಲಸೆ ಬಿಜೆಪಿಗ ಕೆ. ಸುಧಾಕರ್ ಮಾಡಿದ ಗೊಂದಲಕಾರಿ ಗೋಲ್‍ಮಾಲ್ ಚಿತಾವಣೆ ಕಾರಣವಾಗಿಯೇ ತಾವು ಸೋಲನುಭವಿಸಬೇಕಾಗಿ ಬಂತೆಂದು ಮತ್ತೊಬ್ಬ ವಲಸಿಗ ಹೊಸಕೋಟೆ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ದೂರಿದ್ದಾರೆ. ಬೆಂಗಳೂರು ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಅಂತೂ ಇಂತೂ ಎಂಬಂತೆ ತಮ್ಮ ಕೈಲೇ ಉಳಿಸಿಕೊಂಡಿರುವ ಮತ್ತೊಬ್ಬ ವಲಸಿಗ ಮುನಿರತ್ನ ನಾಯ್ಡು, ಪಕ್ಷದ ಸೋಲಿಗೆ ಸಂಘಟನಾತ್ಮಕ ಚಾತುರ್ಯದ ಕೊರತೆ ಕಾರಣ ಎಂದಿದ್ದಾರೆ. ವಲಸೆ ಬಂದ ನಂತರ ನಡೆದ ಉಪ ಚುನಾವಣೆಯಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದ ಯಲ್ಲಾಪುರದ ಅಭ್ಯರ್ಥಿ ಶಿವರಾಮ ಹೆಬ್ಬಾರರು ಈ ಬಾರಿ ಗೆಲ್ಲಲು ಸಾಧ್ಯವಾಗಿದ್ದು ಮೂರು ಸಾವಿರ ಮತಗಳ ಅಂತರದಿಂದ. ತಮ್ಮ ವಿರುದ್ಧ ಪಕ್ಷದವರೇ ಮಾಡಿದ ಘನಂಧಾರಿ ಕೆಲಸ ಗೆಲುವಿನ ಅಂತರ ತಗ್ಗಿಸಿತೆನ್ನುವುದು ಅವರ ತರ್ಕ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಸತತ ಗೆಲ್ಲುತ್ತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೋಲಿಗೆ ಕಾರಣವಾಗಿದ್ದು ಸ್ವಪಕ್ಷೀಯರೇ. ಈ ಮತ್ತು ಇಂಥ ಉದಾಹರಣೆಗಳು ಬೇಕಷ್ಟಿವೆ.

ಇಂಥವರನೇಕರ ಪ್ರಕಾರ ಬಿಜೆಪಿ ಸೋಲಿಗೆ ಪಕ್ಷದೊಳಗಿರುವ ದ್ರೋಹಿಗಳು ಕಾರಣವೇ ಹೊರತೂ ಮತ್ತೇನೂ ಅಲ್ಲ. ಚುನಾವಣೆ ಎಂದರೆ ಸೋಲು ಗೆಲುವು ಸ್ವಾಭಾವಿಕ. 1989ರಲ್ಲಿ ಕಾಂಗ್ರೆಸ್ಸು 179 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಿತ್ತು. ಐದು ವರ್ಷದ ತರುವಾಯ ನಡೆದ ಚುನಾವಣೆ ಬಳಿಕ ವಿಧಾನ ಸಭೆಯಲ್ಲಿ ಅದು ಮೂರನೇ ಸ್ಥಾನಕ್ಕೆ ಕುಸಿದಿತ್ತು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗುವ ಮೊದಲು ಭಾರೀ ಬಹುಮತ ಕಾಂಗ್ರೆಸ್‍ಗೆ ಬಂದಿತ್ತು. ನಂತರ ನಡೆದ ಚುನಾವಣೆಯಲ್ಲಿ ಪಕ್ಷ ಸೋಲುಂಡಿದ್ದಷ್ಟೇ ಅಲ್ಲ, ಇಪ್ಪತ್ತಕ್ಕೂ ಹೆಚ್ಚು ಸಚಿವರು ಪರಾಭವಗೊಂಡರು. ಇದನ್ನು ಗಮನಿಸಿದರೆ ಬಿಜೆಪಿಯದು ಅಂಥ ಸೋಲೇನೂ ಅಲ್ಲ. ಆದರೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎದುರಾಗಬಹುದಾದ ಸಂಕಷ್ಟ ಯೋಚಿಸಿದರೆ ಮಾತ್ರ ಬಿಜೆಪಿಗೆ ಬಹಳ ಬಹಳ ಕಷ್ಟವಿದೆ.

ಸೋಲಿನ ಆಘಾತದಲ್ಲಿ ಹೆಳವನಂತಾಗಿರುವ ಪಕ್ಷಕ್ಕೆ ನಾವು ಸತ್ತಿಲ್ಲ, ಸೋತಿದ್ದೇವೆ ಮಾತ್ರ ಎಂದು ಹೇಳಿ ಧೈರ್ಯ ತುಂಬುವ ನಾಯಕ ಕಾಣಿಸುತ್ತಿಲ್ಲ. ಚುನಾವಣಾ ಚಾಣಕ್ಯ ಎಂದು ಪಕ್ಷದವರಿಂದ, ಮಾಧ್ಯಮದವರಿಂದ ಕರೆಸಿಕೊಳ್ಳುತ್ತಿರುವ ಅಮಿತ್ ಶಾರ ಚಾಕಣ್ಯಗಿರಿ ಕರ್ನಾಟಕದಲ್ಲಿ ಕೆಲಸಕ್ಕೆ ಬರಲಿಲ್ಲ. ನಡ್ಡಾ ಸವಾರಿ ಬಂತು ಹೋಯಿತು ಎನ್ನುವುದರ ಆಚೆಗೆ ಇನ್ಯಾವುದೇ ಪರಿಣಾಮ ಬೀರಲಿಲ್ಲ. ಇವರ ಮಾತು ಒತ್ತಟ್ಟಿಗಿರಲಿ, ಮೋದಿ ಅಲೆ ಎನ್ನುವುದು ಇಲ್ಲಿ ಕಾಣಿಸಲಿಲ್ಲ. ಇತ್ತು ಎನ್ನುವ ಅಲೆ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕೆಲಸಕ್ಕೆ ಬರಲಿಲ್ಲ. ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಥಾಕಥಿತ ಮೋದಿ ಅಲೆ ಕೆಲಸ ಮಾಡೀತೇ…. ದೊಡ್ಡ ಅನುಮಾನವಿದೆ. ಈ ಸಲದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಶೇಕಡಾವಾರು ಮತ ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. ಐದು ವರ್ಷದ ಹಿಂದೆ ಅದಕ್ಕೆ ಬಿದ್ದುದು ಶೇಕಡಾ 36. ಈ ಸಲವೂ ಅದು ಪಡೆದುದು ಅಷ್ಟೇ ಮತ. ಆದರೆ ಆ ಸಲ 104 ಸೀಟು ಬಂದಿತ್ತು. ಈ ಸಲ 66ಕ್ಕೇ ಅದು ನಿಂತಿತು. ಮೋದಿ ಅಲೆ ಇದ್ದಿದ್ದರೆ ಬಿಜೆಪಿ ಗೆಲ್ಲುತ್ತಿತ್ತೋ ಏನೋ. ಆದರೆ ಜನರಿಗೆ ಕಂಡಿದ್ದು ಬಿಜೆಪಿ ಆಡಳಿತ ವಿರೋಧಿ ಅಲೆ. ಮತ್ತೊಮ್ಮೆ ಅಧಿಕಾರ ಹಿಡಿಯುವ ಅದರ ಆಕಾಂಕ್ಷೆಯನ್ನು ಆಡಳಿತ ವಿರೋಧಿ ಅಲೆ ಮತ್ತು ಕಾಂಗ್ರೆಸ್‍ನ ಐದು ಭರವಸೆಗಳು ಹೊಸಕಿ ಹಾಕಿದವು.

ಇದನ್ನೂ ಓದಿ: ಮೊಗಸಾಲೆ ಅಂಕಣ: ಆ ಕರಾಳ ದಿನಗಳ ಮರೆತೇನೆಂದರೆ ಮರೆಯಲಿ ಹ್ಯಾಂಗ?

ಲೋಕಸಭಾ ಚುನಾವಣೆಯೇ ಬೇರೆ, ವಿಧಾನ ಸಭಾ ಚುನಾವಣೆಯೇ ಬೇರೆ ಎಂಬ ವಾದವನ್ನು ಸೋತ ರಾಜಕೀಯ ಪಕ್ಷಗಳು ಯಾವಾಗಲೂ ಮುಂದಿಡುತ್ತಿವೆ. ಆದರೆ ಈ ಸಲ ಕರ್ನಾಟಕದ ಮಟ್ಟಿಗೆ ಇದು ಹುಸಿಯಾಗುವ ಸೂಚನೆ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ವಿಧಾನ ಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಜನತೆಗೆ ನೀಡಿದ್ದ ಐದು ಭರವಸೆ. ಈ ಭರವಸೆಗಳ ಜಾರಿ ಹೇಳಿದಷ್ಟು ಸುಲಭವಲ್ಲ ಎನ್ನುವುದು ಆಡಳಿತ ಪಕ್ಷಕ್ಕೂ ಗೊತ್ತಿದೆ. ಆದರೆ ಲೋಕಸಭಾ ಚುನಾವಣೆವರೆಗೂ ಜನರನ್ನು ಹಿಡಿದಿಡುವ ಕಾರ್ಯಕ್ರಮವಾಗಿ ಈ ಐದೂ ಭರವಸೆಗಳನ್ನು ಅಮಲಿಗೆ ತರುವ ಯತ್ನ ನಡೆಯುತ್ತದೆ.

shakti scheme karnataka

ಮಹಿಳೆಯರ ಮನಸ್ಸು ಗೆದ್ದ ಯವುದೇ ಪಕ್ಷಕ್ಕೆ ಅವರ ಮತ ಫಿಕ್ಸ್‍ಡ್ ಡಿಪಾಸಿಟ್‍ನಂತೆ ಬಡ್ಡಿ ತರುತ್ತಿರುತ್ತದೆ. ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವ ಭರವಸೆಯೊಂದೇ ಇಲ್ಲಿ ಕಾಂಗ್ರೆಸ್‍ನ ಭವಿಷ್ಯವನ್ನು ನಿರ್ಧರಿಸಲಿದೆ. ಹೆಣ್ಣು ಮಕ್ಕಳು ಯಾತ್ರೆಗೋ ಪ್ರವಾಸಕ್ಕೋ ಹೋಗಿಬಂದರೆ ವರ್ಷವಿಡೀ ಅದರ ಬಗ್ಗೆ ಪರಸ್ಪರ ಮಾತಾಡುತ್ತಿರುತ್ತಾರೆ, ಆ ಸಂಭ್ರಮ ಅವರಲ್ಲಿ ಜೀವವಾಹಿನಿಯಂತೆ ಚಲಿಸುತ್ತಿರುತ್ತದೆ. ಪ್ರತಿ ಕ್ಷಣದಲ್ಲೂ ಸಹಸ್ರ ಸಹಸ್ರ ಮಹಿಳೆಯರು ಉಚಿತ ಸಾರಿಗೆ ಸುಖ ಅನುಭವಿಸುತ್ತಿರುವ ಪರಿ ನೋಡಿದರೆ ಅಚ್ಚರಿಯೆನಿಸುತ್ತದೆ. ತಮ್ಮ ಇಷ್ಟದ ಯಾತ್ರಾ ಸ್ಥಳಕ್ಕೋ, ಪ್ರವಾಸೀ ಧಾಮಕ್ಕೋ, ಬಂಧು ಬಾಂಧವರ ಮನೆಗಳಿಗೋ ಪುಕ್ಕಟೆ ಹೋಗಿ ಬಂದು ಆ ನೆನಪಿನಲ್ಲಿ ಸರ್ಕಾರ ನೀಡಿರುವ ಸವಲತ್ತನ್ನು ಜತನವಾಗಿಟ್ಟು ನಾಳೆಯತ್ತ ದೃಷ್ಟಿ ಹರಿಸುತ್ತಾರೆ. ಇಂಥ ಮತದಾರರು ವರ್ಷಗಟ್ಟಳೆ ರಾಜಕೀಯ ಪಕ್ಷವೊಂದಕ್ಕೆ ಗಟ್ಟಿ ಮತವಾಗುವ ಸಾಧ್ಯತೆ ಇದ್ದೇ ಇದೆ. ಕಾಂಗ್ರೆಸ್‍ನ ಈ ವರಸೆ ಬಿಜೆಪಿಯ ಧೈರ್ಯವನ್ನು ಉಡುಗಿಸಿದೆ. ಲೋಕಸಭಾ ಚುನಾವಣೆಯನ್ನು ಗೆಲ್ಲುವ ವಿಚಾರದಲ್ಲಿ ಆ ಪಕ್ಷದೊಳಗೇ ಒಂದು ಬಗೆಯ ಆತಂಕ, ಅನಿಶ್ಚತತೆ, ಭಯಮಿಶ್ರಿತ ಗೊಂದಲಗಳು ಮನೆ ಮಾಡಿವೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕರ್ನಾಟಕದ ಸೋಲಿನ ಬಗ್ಗೆ ಮೋದಿ ಮೌನವೇಕೆ?

Exit mobile version