Site icon Vistara News

ಮೊಗಸಾಲೆ ಅಂಕಣ: ಅಂದು ಡಿಸಿಎಂ ಬೇಡ; ಇಂದು ಮೂವರು ಡಿಸಿಎಂ ಬೇಕೆಂಬ ಕೂಗು!

siddaramaiah parameshwara dk shivakumar

ಧರ್ಮಸಿಂಗ್ (Dharm singh) ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದವರು ಸಿದ್ದರಾಮಯ್ಯ. (Siddaramaiah) ಆಗ ಸಿಎಂ (Chief minister) ಆಗಿದ್ದ ಸಿಂಗ್‍ರ ಪಾಲಿಗೆ ಸಿದ್ದರಾಮಯ್ಯನವರು ಯಾವ ಪ್ರಮಾಣ ಸ್ವರೂಪದ ಸಂಕಟ ತಂದಿಟ್ಟಿದ್ದ ಡಿಸಿಎಂ (DCM) ಆಗಿದ್ದರೋ ಇಲ್ಲವೊ ಅವರೇ ಸ್ಪಷ್ಟಪಡಿಸಬೇಕು. ಒಂದು ವೇಳೆ ಧರ್ಮ ಸಂಕಟ ಅನುಭವಿಸಿದ್ದಿರಬಹುದಾದ ಧರ್ಮಸಿಂಗ್ ಅದನ್ನು ಹೇಳಲು ಈಗ ನಮ್ಮ ನಡುವೆ ಇಲ್ಲ. ಮುಂದೆ 2013ರಿಂದ 2018ರವರೆಗೆ ಸಿದ್ದರಾಮಯ್ಯ ಐದು ವರ್ಷ “ಅರಸನ ಅಂಕೆಯಾಗಲೀ ದೆವ್ವದ ಕಾಟವಾಗಲೀ” ಇಲ್ಲದ ರೀತಿಯಲ್ಲಿ ಸರ್ವತಂತ್ರ ಸ್ವತಂತ್ರ ಆಡಳಿತ ನಡೆಸಿದರು. ಡಿಸಿಎಂ (Deputy chief minister) ಕಾಟ ಕಿರಿಕಿರಿ ತಮಗೆ ಯಾವತ್ತೂ ಸವಾಲಾಗದಂತೆ ನೋಡಿಕೊಂಡರು.

2018ರ ಚುನಾವಣೆ ಘೋಷಣೆಯಾಗಿ ಪ್ರಚಾರ ನಡೆಯುತ್ತಿದ್ದ ದಿನಮಾನದಲ್ಲಿ ಡಾ.ಜಿ.ಪರಮೇಶ್ವರ (Dr. G. Parameshwara) ಕೆಪಿಸಿಸಿ ಅಧ್ಯಕ್ಷರು. ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು. ಆಗ ಕಾಂಗ್ರೆಸ್‍ನ ಒಂದು ಬಣ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುತ್ತಿದ್ದರೆ ಮತ್ತೊಂದು ಬಣ ಮುಖ್ಯವಾಗಿ ದಲಿತ ಸಮುದಾಯ ಪರಮೇಶ್ವರ ಮುಂದಿನ ಸಿಎಂ ಎಂಬ ಪ್ರಚಾರ ನಡೆಸಿತ್ತು. ಇಬ್ಬಣಗಳ ಪ್ರಚಾರದ ದಿಬ್ಬಣ ಇಬ್ಬರೂ ನಾಯಕರಲ್ಲಿ ಒಂದು ಬಗೆಯ ಪರಸ್ಪರ ಅವಿಶ್ವಾಸಕ್ಕೆ ತಿದಿ ಒತ್ತಿತ್ತು.

ಈ ಮಾತಿಗೆ ಒಂದು ಉದಾಹರಣೆ ಇಲ್ಲಿದೆ: ಪ್ರಚಾರ ಜೋರಾಗಿ ನಡೆದಿರುವಾಗಲೇ ಪರಮೇಶ್ವರರ ಮತ ಕ್ಷೇತ್ರ ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡರೊಬ್ಬರ ಮನೆಯಲ್ಲಿ ಮದುವೆ ಕಾರ್ಯಕ್ರಮ. ಈ ಇಬ್ಬರೂ ನಾಯಕರು ಆ ಮದುವೆಗೆ ಹಾಜರಿ ಹಾಕುವುದಕ್ಕೆ ಮತ್ತು ಸುತ್ತಮುತ್ತ ಪ್ರಚಾರಕ್ಕೆ ಎಂದು ಹೆಲಿಕಾಪ್ಟರಿನಲ್ಲಿ ಆಗಮಿಸಿದ್ದರು. ಬಂದ ಉದ್ದೇಶ ಈಡೇರಿದ ಬಳಿಕ ಇಬ್ಬರೂ ಬೆಂಗಳೂರಿಗೆ ಮರಳಲು ಹೆಲಿಪ್ಯಾಡ್‍ಗೆ ಬಂದರು. ಅಲ್ಲಿ ಜಮಾಯಿಸಿದ್ದ ಸಿದ್ದರಾಮಯ್ಯ ಬೆಂಬಲಿಗರು “ಮುಂದಿನ ಸಿಎಂ ಸಿದ್ದರಾಮಯ್ಯ ಜಿಂದಾಬಾದ್” ಎಂದು ಇದು ಹೇಳಿ ಮಾಡಿಸಿದ ಪೂರ್ವಯೋಜಿತ ಕಾರ್ಯಕ್ರಮವೇನೋ ಎಂಬ ಭಾವನೆ ಬರುವಂತೆ ಘೋಷಣೆಯ ಸುರಿಮಳೆಗರೆದರು.

ತಮ್ಮದೇ ಸ್ವಕ್ಷೇತ್ರದಲ್ಲಿ ತಮ್ಮ ಮತ್ತು ತಮ್ಮ ಬೆಂಬಲಿಗರ ಸಮ್ಮುಖದಲ್ಲಿಯೇ ನಡೆದ ಈ ಘಟನೆಯಿಂದ ವಿಚಲಿತರಾದಂತೆ ಕಂಡುಬಂದ ಕೆಪಿಸಿಸಿ ಅಧ್ಯಕ್ಷರು ಹೆಲಿಕಾಪ್ಟರ್ ಹತ್ತದೆ ಬೇರೆ ಕಾರ್ಯಕ್ರಮದ ನೆಪ ಒಡ್ಡಿ ರಸ್ತೆ ಮಾರ್ಗವಾಗಿ ಬರುವುದಾಗಿ ಹೇಳಿ ಭಾರವಾದ ಹೃದಯದೊಂದಿಗೆ ನಿರ್ಗಮಿಸಿದರು. ಈ ಘಟನೆ ಮುಂದೆ; ಉರುಳುತ್ತ ಉರುಳುತ್ತ ಹೋದಂತೆ ದೊಡ್ಡದಾಗುವ ಹಿಮದುಂಡೆಯಂತೆ ತೀವ್ರ ರಾಜಕೀಯ ಸ್ವರೂಪ ತಳೆಯಿತು. ಕೊರಟಗೆರೆ ಕ್ಷೇತ್ರದಲ್ಲಿ ಗೆದ್ದರೆ ತಾನೆ ಸಿಎಂ ಹುದ್ದೆಗೆ ಪರಮೇಶ್ವರ್ ಸಿಎಂ ಗಾದಿ ಮೇಲೆ ಟವೆಲ್ ಹಾಕಲು ಸಾಧ್ಯ ಎಂಬ ಹಿನ್ನೆಲೆಯಲ್ಲಿ ಅವರು ಗೆಲ್ಲದಂತೆ ತಡೆಯುವ ವ್ಯವಸ್ಥಿತ ಹುನ್ನಾರವೊಂದು ಪಕ್ಷದೊಳಗೇ ನಡೆದು ಅಂತಿಮವಾಗಿ ಅದು ಯಶಸ್ವಿಯೂ ಆಯಿತು.

ಸೋತ ಪರಮೇಶ್ವರ್ ಅವರನ್ನು ಪಕ್ಷವೇನೋ ಎಂಎಲ್‍ಸಿ ಮಾಡಿತು. ಎಂಎಲ್‍ಸಿ ಆದ ಅವರು ಅಷ್ಟಕ್ಕೆ ಸುಮ್ಮನೆ ಕೂರಲಿಲ್ಲ. ಸಿಎಂ ಹುದ್ದೆ ಸಿಗಲಿಲ್ಲವಾದರೇನಂತೆ, ಉಪ ಮುಖ್ಯ ಮಂತ್ರಿ ಆಗಬಾರದು ಎಂದೇನೂ ಇಲ್ಲವಲ್ಲ. ಇದಕ್ಕಾಗಿ ಅವರು ಮರಳಿ ಮರಳಿ ಮರಳಿ ಯತ್ನ ಮಾಡಿದರು. ಸುದೀರ್ಘ ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಹೈಕಮಾಂಡ್ ಹಂತದಲ್ಲಿ ತಾವು ಹೊಂದಿದ್ದ ಸಂಬಂಧ ಸಂಪರ್ಕವನ್ನೆಲ್ಲ ಬಳಸಿದರೂ ಸಿದ್ದರಾಮಯ್ಯ ಮಿಸುಕಾಡಲಿಲ್ಲ. ಸಂಪುಟದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಸುವುದೆಂದರೆ ಮುಖ್ಯಮಂತ್ರಿಗೆ ವಿರುದ್ಧವಾಗಿ ಪರ್ಯಾಯ ಶಕ್ತಿ ಕೇಂದ್ರವನ್ನು ಹುಟ್ಟು ಹಾಕಿದಂತಲ್ಲದೆ ಇನ್ನೇನೂ ಅಲ್ಲವೆಂಬ ವಾದವನ್ನು ಹೈಕಮಾಂಡ್ ಮುಂದಿಟ್ಟು ಅದನ್ನು ನಂಬಿಸುವಲ್ಲಿ ಯಶಸ್ವಿಯೂ ಆದರು. 2023ರಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಬಹುಮತ ಕಳೆದುಕೊಂಡಿತು. ಆಗ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವವರೆಗೆ, ಸಮಾಧಾನಕರ ಬಹುಮಾನವಾಗಿ ತಾವು ಬಯಸಿದ ಡಿಸಿಎಂ ಹುದ್ದೆಗೆ ಏರಲು ಪರಮೇಶ್ವರ ಕಾಯಬೇಕಾಯಿತು.

ಐದು ವರ್ಷದ ತರುವಾಯ ಪುನಃ ಸಿಎಂ ಆಗಿರುವ ಸಿದ್ದರಾಮಯ್ಯನವರಿಗೆ ಡಿ.ಕೆ.ಶಿವಕುಮಾರ್ (DK Shivakumar) ಸವಾಲು ಒಡ್ಡಿದರು. ಸಿಎಂ ಪಟ್ಟವನ್ನು ಕೈವಶ ಮಾಡಿಕೊಂಡು ಬಂದೇ ಸಿದ್ಧ ಎಂಬ ಯೋಜನೆಯೊಂದಿಗೆ ದೆಹಲಿಗೆ ತೆರಳಿ ಹೈಕಮಾಂಡ್‍ಗೆ ದುಂಬಾಲು ಬಿದ್ದ ಡಿಕೆಶಿ, ಏಕೈಕ ಡಿಸಿಎಂ ತಾವಾಗಿ ಬೆಂಗಳೂರಿಗೆ ಮರಳಿದರು. ಪರಮೇಶ್ವರ ಅವರನ್ನು ನಿವಾರಿಸಿಕೊಂಡಷ್ಟು ಸುಲಭದಲ್ಲಿ ಡಿಕೆಶಿಯವರನ್ನು ದೂರ ಇಡುವುದು ಸಾಧ್ಯವಲ್ಲದ ಕೆಲಸ ಎನ್ನುವುದು ಸಿದ್ದರಾಮಯ್ಯನವರಿಗೆ ಈ ಹೊತ್ತಿಗೆ ಮನವರಿಕೆ ಆಗಿದೆ. ಈ ಮಾತನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೆ ಕಾರಣ ಡಿಕೆಶಿಯವರು ದಶಕಗಳಿಂದ ಅನುಸರಿಸಿಕೊಂಡು ಬಂದಿರುವ ಯಾರನ್ನೂ ಯಾವುದನ್ನೂ ಲೆಕ್ಕಿಸದ ಬುಲ್‍ಡೋಜರ್ ಸ್ವರೂಪದ ರಾಜಕಾರಣ.

ಜನ ಸಂಪರ್ಕ ಸಭೆ ಕರ್ನಾಟದಲ್ಲಿ ಶುರುವಾಗಿದ್ದು ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಎಂಭತ್ತರ ದಶಕದಲ್ಲಿ. ಆ ನಂತರ ಆ ಸ್ಥಾನಕ್ಕೆ ಬಂದ ಕೆಲವರು ಸಿದ್ಧ ಮಾದರಿಯನ್ನು ಅನುಸರಿಸಿದರು; ಕೆಲವರು ಬೇಡ ಎಂದು ಸುಮ್ಮನಾದರು. ಕುಮಾರಸ್ವಾಮಿಯವರು ಸಿಎಂ ಆಗಿದ್ದ ಕಾಲದಲ್ಲಿ ಗ್ರಾಮ ವಾಸ್ತವ್ಯವೆಂಬ ಕಾರ್ಯಕ್ರಮ ಜಾರಿಗೊಂಡು ಅವರಿಗೆ ಒಳ್ಳೆಯ ಹೆಸರು ಬರುವಂತೆ ಮಾಡಿತು. ಆ ನಂತರದ ಸರ್ಕಾರಗಳಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಮಂತ್ರಿಗಳು ಗ್ರಾಮ ವಾಸ್ತವ್ಯ, ನಿರ್ಗತಿಕರ ಮನೆಯಲ್ಲಿ ಊಟ ಮಾಡುವುದು ತಿಂಡಿ ತಿನ್ನುವುದು ಶುರುವಾಗಿ ಕ್ರಮೇಣ ಅದೆಲ್ಲವೂ ಪ್ರಹಸನದ ಮಟ್ಟಕ್ಕೆ ಹೋಯಿತು. ಈಗ ಸಿದ್ದರಾಮಯ್ಯ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅದೇ ಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಗಳಲ್ಲಿ ಜನ ಸಂಪರ್ಕ ಸಭೆ ನಡೆಸಿ ಜನರ ಅಹವಾಲು ಆಲಿಸಲು ಸೂಚಿಸಿದ್ದಾರೆ. ಅದರಂತೆ ಕೆಲವು ಸಚಿವರು ಮಾಡುತ್ತಿದ್ದಾರೆ ಕೂಡಾ.

ಡಿಸಿಎಂ ಆಗಿರುವ ಡಿಕೆಶಿ, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎ, ಬಿಎಂಟಿಸಿ, ಬಿಡಬ್ಲುಎಸ್‍ಎಸ್, ಬಿಎಂಆರ್‌ಸಿಎಲ್ ಮತ್ತು ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಐದು ಭರವಸೆ ಅನುಷ್ಟಾನದ ಹೊಣೆಯನ್ನೂ ಹೊಂದಿದ್ದಾರೆ. ಇದಲ್ಲದೆ ಅವರ ಕೈಯಲ್ಲಿ ಭಾರೀ ಜಲಸಂಪನ್ಮೂಲ ಖಾತೆಯೂ ಇದೆ. ಈ ಸಂಬಂಧದಲ್ಲಿ ಜನರ ಕುಂದುಕೊರತೆಗಳನ್ನು ಅವರು ಕನಕಪುರದಲ್ಲೋ ರಾಮನಗರದಲ್ಲೋ ಕುಳಿತು ಕೇಳಲಾಗದು. ತಥಾಕಥಿತ ಈ ಜನ ಸಂಪರ್ಕ ಸಭೆಗಳು ಜನವರಿ ಮೊದಲ ವಾರದ ಮೂರು ದಿವಸ ಬೆಂಗಳೂರು ನಗರದ ದೂರವಾಣಿ ನಗರ; ಯಲಹಂಕ ನ್ಯೂ ಟೌನ್ ಮತ್ತು ಶಿವನಚೆಟ್ಟಿ ಗಾರ್ಡನ್‍ನಲ್ಲಿ ನಡೆಯಿತು. ಜನರ ಅಹವಾಲು ಡಿಸಿಎಂ ಅವರಿಗೆ ಸಾಕಷ್ಟು ಮುಜುಗರವನ್ನೂ ತಂದಿತೆನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆಳವಣಿಗೆ. ಸಿಎಂ ಜನ ಸಂಪರ್ಕ ಸಭೆಯಲ್ಲಿ ನ್ಯಾಯ ಸಿಗಲಿಲ್ಲ ಎಂದು ಭಾವಿಸುವ ಜನ ಡಿಸಿಎಂ ನಡೆಸುವ ಜನ ಸಂಪರ್ಕ ಸಭೆಯನ್ನು ತಪ್ಪಿಸಿಕೊಳ್ಳಲಾರರು. ಡಿಸಿಎಂ ಸಭೆಯ ನಡಾವಳಿಯಿಂದ ತೃಪ್ತರಾಗದವರು ಸಿಎಂ ನಡೆಸುವ ಜನ ಸಂಪರ್ಕ ಸಭೆಯತ್ತ ಹೆಜ್ಜೆ ಹಾಕುತ್ತಾರೆ. ಇದನ್ನು ತಪ್ಪಿಸುವ ಸೂತ್ರ ಎರಡೂ ಕಡೆಯಲ್ಲಿಲ್ಲ ಎನ್ನುವುದು ಇಷ್ಟರಲ್ಲೇ ಇಬ್ಬರೂ ನಾಯಕರ ಗಮನಕ್ಕೆ ಬರಲಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಮಗ್ಗುಲ ಮುಳ್ಳಾದ ಯತ್ನಾಳ್, ಹರಿಪ್ರಸಾದ್; ಪರಿಹಾರ ಕಾಣದ ಬಿಜೆಪಿ, ಕಾಂಗ್ರೆಸ್!

ಏತನ್ಮಧ್ಯೆ ಡಿಕೆಶಿಯವರ ಜನ ಸಂಪರ್ಕ ಸಭೆ ಕುರಿತಂತೆ ಪ್ರಕಟವಾಗಿರುವ ಜಾಹೀರಾತೊಂದು ಸಿದ್ದರಾಮಯ್ಯನವರನ್ನೂ ಅವರ ಬೆಂಬಲಿಗರನ್ನೂ ಆತಂಕದ ಮಡುವಿಗೆ ತಳ್ಳಿರುವ ಎಲ್ಲ ಸಾಧ್ಯತೆಗಳೂ ಇದೆ. ಇಂಗ್ಲಿಷ್‍ನಲ್ಲಿ (ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್/ ಜನವರಿ 03-2024) ಪ್ರಕಟವಾದ ಅರ್ಧ ಪುಟದ ಜಾಹೀರಾತಿನಲ್ಲಿ ಸಿದ್ದರಾಮಯ್ಯನವರ ಚಿತ್ರ ಪುಟದ ಬಲ ಭಾಗದ ಮೂಲೆಯಲ್ಲಿದೆ. ಅದು ವಿಶೇಷವೇನಲ್ಲ. ಡಿ.ಕೆ. ಶಿವಕುಮಾರ್ ಚಿತ್ರ ಅದೇ ಪುಟದ ಕೆಳಭಾಗದಲ್ಲಿ ಎಡಕ್ಕೆ ಅಚ್ಚಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಜಾಹೀರಾತಿನಲ್ಲಿ ಸಿಎಂ ಚಿತ್ರ ದೊಡ್ಡದಾಗಿಯೂ ಉಳಿದ ಸಚಿವರ ಚಿತ್ರ ಚಿಕ್ಕದಾಗಿಯೂ ಇರುವುದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಡ್ಡಾಯ. ಆದರೆ ಇಲ್ಲಿ ಅಚ್ಚಾಗಿರುವ ಡಿಕೆಶಿ ಚಿತ್ರ ಸಿಎಂ ಚಿತ್ರಕ್ಕಿಂತ ಮೂರು ಪಟ್ಟು ದೊಡ್ಡದಾಗಿದೆ. ಇದು ಸಿದ್ದರಾಮಯ್ಯ ಬಣದಲ್ಲಿ ಆತಂಕ ಸೃಷ್ಟಿಸಿರುವ ಡಿಕೆಶಿಯವರ ಬುಲ್‍ಡೋಜರ್ ರಾಜಕಾರಣ. ಡಿಸಿಎಂ ಹುದ್ದೆ ಪರ್ಯಾಯ ಶಕ್ತಿ ಕೇಂದ್ರದ ಅಸ್ತಿತ್ವಕ್ಕೆ ಕಾರಣವಾಗಬಹುದೆಂಬ ಸಿದ್ದರಾಮಯ್ಯ ಆತಂಕ ನಿಜವಾಗುತ್ತಿರುವ ಸೂಚನೆಯೂ ಇದಾಗಿರಬಹುದು ಎನ್ನುವುದು ಸಿದ್ದರಾಮಯ್ಯ ಬಣದ ಒಳ ಬೇಗುದಿ.

ಇದು ಮತ್ತು ಹೊರ ಜಗತ್ತಿನ ಗಮನಕ್ಕೆ ಬಾರದೇ ಇರುವ ಈ ಬಗೆಯ ಎಷ್ಟೋ ವಿಚಾರಗಳು ಸಿಎಂ ಗಮನಕ್ಕೆ ಬಂದಿರುತ್ತವೆ. ಡಿಕೆಶಿಯವರನ್ನು ಹೀಗೇ ಬಿಟ್ಟರೆ ಮುಂದಿನ ದಿನಗಳಲ್ಲಿ ಅವರನ್ನು ನಿಯಂತ್ರಿಸುವುದು ಬಹಳ ಬಹಳ ಕಷ್ಟವಾಗಬಹುದೆಂಬ ಲೆಕ್ಕಾಚಾರದಲ್ಲಿ ಇನ್ನೂ ಮೂವರು ಡಿಸಿಎಂಗಳ ಬೇಡಿಕೆ ಮತ್ತೆ ಕೇಳಿಬಂದಿದೆ. ರಾಜ್ಯ ಉಸ್ತುವಾರಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾರು ಎಷ್ಟೇ ಬಡಕೊಂಡರು ಒಡಕಲು ಧ್ವನಿ ತಡೆಯುವುದು ಅವರಿಗೆ ಸಾಧ್ಯವಾಗಿಲ್ಲ. ಸ್ವತಃ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಇನ್ನಷ್ಟು ಡಿಸಿಎಂ ವಿಚಾರ ಚರ್ಚೆಯಲ್ಲಿಲ್ಲ, ಸುಮ್ಮನಿರುವುದು ಲೇಸು ಎಂದರೂ ಅವರ ಪಕ್ಷದವರೇ ಕೇಳಿಸಿಕೊಂಡಿಲ್ಲ. ಪ್ರಸ್ತುತ ಹೇಗೂ ಒಕ್ಕಲಿಗ ಸಮುದಾಯದಿಂದ ಡಿಕೆಶಿ ಡಿಸಿಎಂ ಆಗಿದ್ದಾರೆ. ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಿಂದ ತಲಾ ಒಬ್ಬರನ್ನು ಡಿಸಿಎಂ ಪಟ್ಟದಲ್ಲಿ ಕುಳ್ಳಿರಿಸಿದರೆ ಬರಲಿರುವ ಲೋಕಸಭಾ ಚುನಾವಣೆಯನ್ನು ಗೆಲ್ಲುವುದು ಸುಲಭವಾಗುತ್ತದೆ ಎಂಬ ನೆಪವನ್ನು ಮುಂದಿಡಲಾಗಿದೆಯಾದರೂ ಅದರ ಒಳ ಉದ್ದೇಶ ಡಿಕೆಶಿಯವರ ಕಾಲಿಗೆ ಬಿರಿ ಬಿಗಿಯುವುದೇ ಆಗಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಲು ಡಿಕೆಶಿ ನಿರಾಕರಿಸಿದ್ದಾರೆ. ತಮ್ಮನ್ನು ಸಮರ್ಥಿಸಲು ಹೈಕಮಾಂಡ್ ಹಂತದಲ್ಲಿ ವಕೀಲಿ ಮಾಡುವವರ ತಂಡವೇ ಇದೆ ಎನ್ನುವ ಅವರ ವಿಶ್ವಾಸ ಅವರ ಮೌನದ ಹಿಂದಿರುವ ಮತ್ತೊಂದು ಬಗೆಯ ರಾಜಕಾರಣವೇ ಆಗಿದೆ.

ಇದನ್ನೂ ಓದಿ: ಮೊಗಸಾಲೆ ಅಂಕಣ: ಕಿರಿಯರ ಸಚಿವಗಿರಿ, ಸೀನಿಯರ್‌ಗಳ ಕಿರಿಕಿರಿ

Exit mobile version