Site icon Vistara News

ಮನಿ ಕಹಾನಿ ಅಂಕಣ | ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?

salary hike @ India

ಬರುವ ಸಂಬಳದಲ್ಲಿ ಬಿಡಿಗಾಸು ಉಳಿಯುತ್ತಿಲ್ಲ, ಈ ಕಾಲಕ್ಕೆ ಬೆಂಗಳೂರಲ್ಲಿ ಬದುಕೋದು ಕಷ್ಟ ಸಾರ್ ಅಂತ ಹಲವರು ಗೊಣಗುತ್ತಲೇ ಇರುತ್ತಾರೆ. ಆ ಕ್ಷಣಕ್ಕೆ ಹಾಗೆ ಕೊರಗುವ ಮೂಲಕ ಅವರಿಗೆ ಸಮಾಧಾನವಾಗಬಹುದು. ಆದರೆ ಸಿಕ್ಕ ಸಿಕ್ಕವರ ಬಳಿ ಇದನ್ನೇ ಹೇಳಿಕೊಳ್ಳುತ್ತಾ ಕುಳಿತರೆ ಸಮಸ್ಯೆ ಬಗೆಹರಿಯುತ್ತದೆಯಾ ಅಂತ ಕೇಳಿದರೆ ಅವರ ಬಳಿ ಉತ್ತರವಿರುವುದಿಲ್ಲ.

ಅವರೇ ಇಷ್ಟಪಟ್ಟು ಬೆಂಗಳೂರಿಗೆ ಬಂದಿರುತ್ತಾರೆ, ಈ ಕೆಲಸ ಸಿಕ್ಕರೆ ಸಾಕಪ್ಪಾ ಅಂತ ಇಂಟರ್‌ವ್ಯೂ ಅಟೆಂಡ್ ಮಾಡಿರುತ್ತಾರೆ, ಸಂಬಳ ಎಷ್ಟಾದರೂ ಕೊಡಿ ಒಟ್ಟಿನಲ್ಲಿ ಕೆಲಸ ಕೊಟ್ಟರೆ ಸಾಕು ಅಂತ ಅಂಗಲಾಚಿರುತ್ತಾರೆ. ಕೊನೆಗೆ ಕೆಲಸ ಸಿಕ್ಕ ಮೂರು ತಿಂಗಳಿಗೆ ಈ ಸಂಬಳ ಯಾರಿಗೆ ಸಾಕಾಗುತ್ತದೆ ಅಂತ ಕೊರಗಲಾರಂಭಿಸುತ್ತಾರೆ. ಕೆಲವರ ಸಮಸ್ಯೆಯೇ ಅದು. ಅವರಿಗೆ ನಿರ್ಧಿಷ್ಟವಾಗಿ ಇಂಥದೇ ಸಮಸ್ಯೆ ಬೇಕು ಅಂತೇನಿಲ್ಲ ಒಟ್ಟಾರೆ ಕೊರಗುತ್ತಲೇ ಇರಬೇಕು. ಪೆಟ್ರೋಲ್ ದರ ಐವತ್ತಿದ್ದಾಗಲೂ ಕೊರಗುತ್ತಾರೆ, ನೂರೈವತ್ತಾದರೂ ಕೊರಗುತ್ತಾರೆ. ಮಳೆ ಹೆಚ್ಚಾದರೆ ಯಾಕಾದ್ರೂ ಮಳೆ ಬರುತ್ತೋ ಅಂತ ಶಾಪ ಹಾಕುವ ಇವರು ಮಳೆ ಇಲ್ಲದ ಸಮಯದಲ್ಲಿ ಛೇ ಮಳೆನೇ ಹೋಗಿಬಿಡ್ತಲ್ರೀ ಅಂತ ಕೊರಗುತ್ತಾರೆ. ಇಂಥವರಿಗೆ ಬದುಕಿನಲ್ಲಿ ಯಾವ ಸಮಸ್ಯೆಗೂ ಪರಿಹಾರ ಬೇಕಿರುವುದಿಲ್ಲ, ಅವರಂತೂ ತಾನಾಗಿಯೇ ಪರಿಹಾರ ಹುಡುಕುವ ಪ್ರಯತ್ನವನ್ನೂ ಮಾಡುವುದಿಲ್ಲ.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನೂರು ಸೋಲಿನಿಂದ ನೂರಾ ಒಂದರೆಡೆಗೆ ಪಯಣವೆ ಜೀವನ !

ಈಗ ಅವರ ಸಂಬಳದ ವಿಷಯಕ್ಕೆ ಬರೋಣ. ಬರುವ ಇಪ್ಪತ್ತು ಸಾವಿರ ಸಂಬಳದಲ್ಲಿ ಕನಿಷ್ಠ ಎರಡು ಸಾವಿರವನ್ನು ಉಳಿತಾಯ ಮಾಡದಿದ್ದರೆ ಹೇಗೆ? ಅವರು ಮಾಡುವುದಿಲ್ಲ, ಕೇಳಿದರೆ ಬೆಂಗಳೂರಿನ ಜೀವನಕ್ಕೆ ಇಷ್ಟು ಸಂಬಳ ಸಾಕಾಗಲ್ಲ ಎನ್ನುತ್ತಾರೆ. ಹೌದು ಬೆಂಗಳೂರಿನ ಜೀವನಕ್ಕೆ ತಿಂಗಳಿಗೆ ಒಂದು ಲಕ್ಷ ಕೊಟ್ಟರೂ ಸಾಕಾಗಲ್ಲ. ನಾವು ಯಾವ ಮಟ್ಟದ ಜೀವನ ಶೈಲಿ ಅಳವಡಿಸಿಕೊಳ್ತೇವೆ ಅನ್ನೋದರ ಮೇಲೆ ನಮ್ಮ ಉಳಿತಾಯ ಮಾಡುವ ಕೆಪಾಸಿಟಿ ನಿರ್ಧಾರವಾಗುತ್ತದೆ. ಬರುವ ಸಂಬಳದಲ್ಲಿ ಒಂದಷ್ಟನ್ನು ಉಳಿಸಲು ನಮ್ಮಿಂದ ಸಾಧ್ಯವಾಗ್ತಿಲ್ಲ ಎಂದಾದರೆ ನಾವು ಇನ್ನೂ ಹೆಚ್ಚು ಕೆಲಸ ಮಾಡಿಯೋ, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡೋ ಒಟ್ಟಾರೆ ಸಂಬಳ ಹೆಚ್ಚಿಸಿಕೊಳ್ಳಬೇಕು. ಇಲ್ಲ ನಾನು ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ, ಆದರೂ ನನಗೆ ಎಲ್ಲಿಯೂ ಇದಕ್ಕಿಂತ ಹೆಚ್ಚು ಸಂಬಳ ಸಿಗಲ್ಲ ಎಂದಾದರೆ ನಮ್ಮ ಈಗಿನ ಸಂಬಳದಲ್ಲೇ ಕೈಗೆಟಕುವ ಜೀವನ ಶೈಲಿ ರೂಪಿಸಿಕೊಳ್ಳಬೇಕು.

ಈ ಮಾತು ಯಾಕೆ ಹೇಳಿದೆನೆಂದರೆ ಜೀವನದಲ್ಲಿ ಮಹತ್ವಾಕಾಂಕ್ಷೆಗಳು ಬಹಳ ಮುಖ್ಯ. ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ಮರುಕ್ಷಣವೇ ಮನಸಿನ ಯಾವುದೋ ಮೂಲೆಯಲ್ಲಿ ನಾನೂ ಒಂದಲ್ಲಾ ಒಂದು ದಿನ ಇಂಥಾ ಕಂಪನಿ ಕಟ್ಟಿ ಇದೇ ಥರ ಕ್ಯಾಬಿನ್‌ನಲ್ಲಿ ಕೂರಬೇಕು ಅನ್ನಿಸಿರುತ್ತದೆ. ಅದನ್ನು ಅಷ್ಟಕ್ಕೆ ಹೊಸಕಿ ಹಾಕಿ ಹೀಗೆ ಕೊರಗುತ್ತಾ ಕೂರುವ ಬದಲು ಒಂದೊಂದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ನಿಧಾನವಾಗಿ ನಿಮ್ಮ ಟೀಮ್ ಲೀಡರ್, ಮ್ಯಾನೇಜರ್ ನಿಮ್ಮನ್ನು ಗುರುತಿಸುವಂತೆ ಮಾಡಿ. ನಿಮ್ಮ ಕೆಲಸದ ತೀವ್ರತೆ ಎಷ್ಟಿರಬೇಕೆಂದರೆ ಇವರು ಕಂಪನಿಗೆ ಅನಿವಾರ್ಯ ಎನ್ನುವಂತಾದಾಗ ತಾನಾಗಿಯೇ ಸಂಬಳವೂ ಹೆಚ್ಚುತ್ತದೆ. ತಾವೂ ಹತ್ತರಲ್ಲಿ ಹನ್ನೊಂದನೆಯವನಾಗಿ ಉಳಿದವರನ್ನೂ ಹಾಗೆಯೇ ಇರಿ ಅಂತ ಒತ್ತಾಯಿಸುವವರು ಎಂದಿಗೂ ಮೇಲೆ ಬರಲಾರರು. ಅವರ ಬಹುದೊಡ್ಡ ಸಮಸ್ಯೆ ಎಂದರೆ ಇತರರನ್ನೂ ಮೇಲೆ ಬರಲು ಬಿಡಲಾರರು.

ಇದನ್ನೂ ಓದಿ | ಮನಿ ಕಹಾನಿ ಅಂಕಣ | ನವರಾತ್ರಿಗೆ ಹೀಗೊಂದು ಸಂಕಲ್ಪ ಮಾಡೋಣ

ಅದರ ಬದಲು ಕಷ್ಟವಾದರೂ ಸರಿ, ನಾನು ಆಫೀಸಿನ ಕೋರ್ ಟೀಮ್ ಮಾಡುವಷ್ಟೇ ಕೆಲಸ ಮಾಡ್ತೇನೆ. ಬಾಸ್ ನನ್ನನ್ನ ಅದ್ಯಾಕೆ ಗುರುತಿಸಲ್ಲ ನೋಡೋಣ ಅಂತ ಟೊಂಕಕಟ್ಟಿ ನಿಂತವರು ಇವತ್ತು ಎಷ್ಟೋ ಕಂಪನಿಗಳ ಸಿಇಓಗಳಾಗಿದ್ದಾರೆ. ಹೀಗೆ ಇರುವ ಕಂಪನಿಗಳಲ್ಲೇ ಟಾಪ್ ಪೊಸಿಷನ್ನಿಗೆ ಬೆಳೆದವರು ಮಾತ್ರ ಹೊಸ ಕಂಪನಿ ಕಟ್ಟಿದರೂ ಸಮರ್ಥವಾಗಿ ನಿಭಾಯಿಸಬಲ್ಲರು. ಸಂಬಳ ಸಾಲುತ್ತಿಲ್ಲ ಅಂತ ಕೊರಗುತ್ತಾ ಕುಳಿತರೆ ಕಂಪನಿ ಕಟ್ಟುವ ಕನಸೂ ಸೊರಗುತ್ತದೆ. ನಮ್ಮಲ್ಲಿ ನಾವು ಮಾಡಿಕೊಳ್ಳುವ ಒಂದು ಸಣ್ಣ ಬದಲಾವಣೆ ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಹುದು. ಈಗ ಯೋಚಿಸಿ ನಿಮ್ಮ ಸಂಬಳದಲ್ಲಿ ನೀವು ಎಷ್ಟು ಉಳಿಸುತ್ತಿದ್ದೀರಿ?

(ಲೇಖಕರು ಫಿನ್‌ಪ್ಲಸ್.ಕಾಮ್ ಮುಖ್ಯಸ್ಥರು)

Exit mobile version