ಅದನ್ನು ರೆಸಲ್ಯೂಷನ್ ಎನ್ನುತ್ತಾರೆ, ಸಾಮಾನ್ಯವಾಗಿ ಹೊಸ ವರ್ಷದ ಆರಂಭದಲ್ಲಿ ಇಂಥದೊಂದು ರೆಸಲ್ಯೂಷನ್ ಮಾಡಿಕೊಳ್ಳುತ್ತಾರೆ. ಈ ವರ್ಷ ನಾನು ಸಿಗರೇಟು ಬಿಡ್ತೇನೆ, ಇನ್ನಾದರೂ ನಾನು ನನ್ನ ಭವಿಷ್ಯದ ಬಗ್ಗೆ ಚಿಂತೆ ಮಾಡ್ತೇನೆ, ಈ ವರ್ಷ ಮುಗಿಯುವುದರೊಳಗೆ ಮದುವೆಯಾಗ್ತೇನೆ, ಈ ವರ್ಷವಾದರೂ ಇಂಗ್ಲೀಷ್ ಮಾತನಾಡೋದನ್ನು ಕಲಿತುಕೊಳ್ತೇನೆ ಇತ್ಯಾದಿ ಇತ್ಯಾದಿಗಳಿವೆಯಲ್ಲಾ ಅವೆಲ್ಲಾ ಡಿಸೆಂಬರ್ ೨೯ರಿಂದ ಜನವರಿ ೨ರ ಮಧ್ಯೆ ಬಂದು ಹೋಗುವ ಆಲೋಚನೆಗಳು. ಆದರೆ ಸಂಕಲ್ಪ ಅನ್ನೋದು ಹೀಗಲ್ಲ ಅದು ಈ ಬದುಕಿನಷ್ಟೇ ಗಟ್ಟಿಯಾದ ನಿರ್ಧಾರ. ಮದುವೆಯಲ್ಲಿ ಇಲ್ಲಿಂದ ಮುಂದಕ್ಕೆ ನಾವಿಬ್ಬರೂ ಒಟ್ಟಿಗೇ ಬದುಕ್ತೇವೆ ಅಂತ ಸಂಕಲ್ಪ ಮಾಡ್ತಾರೆ, ಮಗು ಹುಟ್ಟಿದಾಗ ಮನಸಲ್ಲೇ ಇದಕ್ಕೊಂದು ಭವ್ಯ ಭವಿಷ್ಯ ಕಲ್ಪಿಸಿಕೊಡ್ತೇನೆ ಅಂತ ಸಂಕಲ್ಪ ಮಾಡ್ತಾರೆ. ಇಂತಹಾ ಸಂಕಲ್ಪಗಳು ಅದೆಷ್ಟು ಗಟ್ಟಿಯಾಗಿರುತ್ತವೆ ಅಂದ್ರೆ ಅವು ಜನವರಿ ಎರಡನೇ ತಾರೀಖಿಗೇ ಮುಗಿದುಹೋಗುವಂತಹವುಗಳಲ್ಲ. ಇವು ಬದುಕಿಡೀ ನಡೆಸಿಕೊಂಡು ಹೋಗುವ ಸಂಕಲ್ಪಗಳು. ನಾನು ಹೇಳಿದ್ದು ಇದೇ ಸಂಕಲ್ಪದ ಬಗ್ಗೆ.
ಒಂದು ಸಣ್ಣ ಕೆಲಸ ಮಾಡಬೇಕಾದರೂ ಅದರದ್ದೇ ಆದ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಮನೆಯಿಂದ ಹೊರ ಹೋಗಿ ಒಂದೆರಡು ಸ್ಥಳಗಳಿಗೆ ಭೇಟಿ ನೀಡಿ ಮತ್ತೆ ಮನೆಗೆ ವಾಪಾಸ್ ಬರುವ ಒಂದರ್ಧ ದಿನದ ಕಾರ್ಯಕ್ರಮಕ್ಕೆ ಅದರದ್ದೇ ಆದ ಬ್ಲೂಪ್ರಿಂಟ್ ತಯಾರಾಗುತ್ತದೆ. ಇಲ್ಲಿಂದ ಎಷ್ಟು ಗಂಟೆಗೆ ಹೊರಡಬೇಕು, ಯಾವಾಗ ಎಲ್ಲಿಗೆ ತಲುಪಬೇಕು, ಅಲ್ಲಿಂದ ಹೊರಟು ಮತ್ತೆಲ್ಲಿಗೆ ಹೋಗಬೇಕು, ಕೊನೆಗೆ ಎಷ್ಟು ಹೊತ್ತಿಗೆ ಅಲ್ಲಿಂದ ಹೊರಟರೆ ಮನೆಗೆ ಎಷ್ಟು ಹೊತ್ತಿಗೆ ತಲುಪುತ್ತೇನೆ ಎಂಬ ಸಣ್ಣ ಲೆಕ್ಕಾಚಾರ ಮನದಲ್ಲಿರುತ್ತದೆ, ಎರಡು ದಿನದ ಟ್ರಿಪ್ಪಿಗೆ ಐದಾರು ದಿನ ಮನಸಲ್ಲೇ ಲೆಕ್ಕಾಚಾರ ಹಾಕಿ ತಯಾರಿ ನಡೆಸಿರುತ್ತೇವೆ.
ಇದನ್ನೂ ಓದಿ | ಮನಿ ಕಹಾನಿ ಅಂಕಣ | ಅವರಿಗೆ ಹಣದ ಬದಲು ಒಂದಷ್ಟು ಸಮಯ ಕೊಡಿ
ಹೀಗಿರುವಾಗ ಬದುಕಿಗೇಕೆ ಇಂಥದ್ದೊಂದು ಲೆಕ್ಕಾಚಾರವಿರಬಾರದು. ಅಯ್ಯೋ ಬಂದಂತೆ ಬದುಕಿದರಾಯ್ತು ಬಿಡು ಅನ್ನೋದು ಕಟ್ಟಕಡೆಯದಾಗಿ ನನ್ನಿಂದ ಯೋಜಿಸಲು ಸಾಧ್ಯವಿಲ್ಲ ಅಥವಾ ಯೋಜಿಸಿದಂತೆ ನಾನು ಬದುಕುವುದಿಲ್ಲ ಅನ್ನೋ ಗ್ಯಾರೆಂಟಿ ಅಷ್ಟೇ. ಬಹುತೇಕರು ಅಯ್ಯೋ ನಾನು ಏನೇ ಲೆಕ್ಕ ಹಾಕಿಕೊಂಡಿದ್ರೂ ಅದು ಏನ್ ನಡೀಬೇಕೋ ಅದೇ ನಡೆಯುತ್ತೆ ಬಿಡು ಎನ್ನುವವರಿದ್ದಾರೆ. ಇಂಥವರಿಗಾಗಿಯೇ ತಾನೊಂದು ಬಗೆದರೆ ದೈವವೊಂದು ಬಗೆವುದು ಎಂಬ ಗಾದೆಯೂ ಹೇಳಿ ಮಾಡಿಸಿದಂತಿದೆ. ಹಾಗಂತ ಈ ಗಾದೆ ಸುಳ್ಳು ಅಂತೇನೂ ಅಲ್ಲ. ತಾನು ಏನು ಬಯಸುತ್ತೇನೆಯೋ ಅದನ್ನು ಪಡೆಯಲು ನಮ್ಮಿಂದ ಪ್ರಾಮಾಣಿಕ ಪ್ರಯತ್ನವಿಲ್ಲದಿದ್ದಾಗ ಇಂಥಾ ಗಾದೆಗಳನ್ನು ಬಳಸುವುದು ತಪ್ಪು.
ಐಎಎಸ್ ಅಧಿಕಾರಿಗಳು ಒಂದು ಇಲಾಖೆಯನ್ನೇ ಸಮರ್ಥವಾಗಿ ನಿರ್ವಹಿಸುತ್ತಾರೆ. ಇನ್ನೂ ಹಿರಿಯ ಐಎಎಸ್ ಅಧಿಕಾರಿಗಳು ಇಡೀ ಸರ್ಕಾರವನ್ನೇ ನಡೆಸುತ್ತಾರೆ. ಈ ದೇಶ, ರಾಜ್ಯ ಮುಂದಿನ ಒಂದು ವರ್ಷದಲ್ಲಿ ಎಷ್ಟು ಪ್ರಗತಿ ಸಾಧಿಸಬೇಕು, ಮುಂದಿನ ಐದು ವರ್ಷಗಳಲ್ಲಿ ಈ ದೇಶ ಏನಾಗಿರಬೇಕು ಎಂದೆಲ್ಲ ಲೆಕ್ಕ ಹಾಕುವ ತಜ್ಞರೂ ನಮ್ಮಲ್ಲಿದ್ದಾರೆ. ಇಲ್ಲಿ ಕೆಲಸಕ್ಕೆ ಬರೋದು ಅವರಿಗಿರುವ ಅಧಿಕಾರವಲ್ಲ ಬದಲಿಗೆ ಸಮರ್ಥ ಯೋಜನೆ ಹಾಗೂ ಅದನ್ನು ಸಾಧಿಸಲು ಬೇಕಾದ ಪ್ರಾಮಾಣಿಕ ಪ್ರಯತ್ನ. ಅಂತೆಯೇ ನಮ್ಮ ನಮ್ಮ ಬದುಕುಗಳಲ್ಲಿಯೂ ನಾವು ಒಂದು ವರ್ಷಕ್ಕೆ ನಾನು ಬದುಕಿನಲ್ಲಿ ಏನೇನು ಸಾಧಿಸಬೇಕು? ಐದು ವರ್ಷಕ್ಕೆ ನಾನು ಯಾವ ಪೊಸಿಷನ್‌ನಲ್ಲಿರಬೇಕು, ಹತ್ತು ವರ್ಷಕ್ಕೆ ನನ್ನ ಬದುಕು ಏನಾಗಿರಬೇಕು ಎಂಬುದರ ಸಣ್ಣದೊಂದು ಲೆಕ್ಕಾಚಾರವನ್ನಾದರೂ ಇಟ್ಟುಕೊಂಡಿರಬೇಕು. ೨೦೨೫ಕ್ಕೆ ಕಾರು ಕೊಂಡುಕೊಂಡಿರಬೇಕು ಎಂದಾದರೆ ಈಗಿನಿಂದಲೇ ಪ್ರತೀ ತಿಂಗಳೂ ಒಂದೈದು ಸಾವಿರ ಹೆಚ್ಚು ದುಡಿಯಲು ಯೋಜನೆ ರೂಪಿಸಿಕೊಳ್ಳಬೇಕು. ಆರ್ಥಿಕವಾಗಿ ನಾನು ಇಲ್ಲಿಂದ ಒಂದು ವರ್ಷದಲ್ಲಿ ಏನೇನು ಮಾಡಬಹುದು, ಅಂದುಕೊಂಡದ್ದು ಸಾಧಿಸಲು ನನಗಿರುವ ದಾರಿಗಳೇನು ಎಂಬುದರ ಪಕ್ಕಾ ಲೆಕ್ಕಾಚಾರವಿದ್ದರೆ ಸೋಲುವ ಸಂಭವ ಕಡಿಮೆ. ಯಾವುದ್ಯಾವುದೋ ವಿಚಾರಕ್ಕೆ ಲೆಕ್ಕ ಹಾಕುವ ನಾವು ಬದುಕಿಗಾಗಿ ಇಂಥದೊಂದು ಲೆಕ್ಕಾಚಾರ ಮಾಡದೇ ಇರಲಾದೀತೇ? ಅದಕ್ಕೇ ಹೇಳಿದೆ, ಈ ನವರಾತ್ರಿಗೆ ಅಂಥದೊಂದು ಸಂಕಲ್ಪ ಮಾಡಿ.
ಇದನ್ನೂ ಓದಿ | ಮನಿ ಕಹಾನಿ ಅಂಕಣ | ಕೋವಿಡ್ ಕಲಿಸಿದ ಸಣ್ಣದೊಂದು ಪಾಠ
ಮುಂದಿನ ನವರಾತ್ರಿಯ ಸಮಯಕ್ಕೆ ನಾನು ಯಾವ ಪೊಸಿಷನ್‌ನಲ್ಲಿರಬೇಕು, ನಾನು ಓಡಾಡುವ ಗಾಡಿ ಯಾವುದಾಗಿರಬೇಕು, ಮುಂದಿನ ನವರಾತ್ರಿಗೆ ನಾನು ಯಾವ ಮನೆಯಲ್ಲಿರಬೇಕು, ಈಗಿರುವ ಬದುಕು ಇನ್ನೊಂದು ವರ್ಷಕ್ಕೆ ಎಷ್ಟು ಅಭಿವೃದ್ಧಿಯಾಗಿರಬೇಕು ಅಂತ ಒಂದು ಬ್ಲೂಪ್ರಿಂಟ್ ರೆಡಿ ಮಾಡಿಕೊಳ್ಳಿ. ಈ ಯೋಜನೆಯನ್ನು ಸಾಕಾರಗೊಳಿಸಲು ಯಾವ ಯಾವ ಮೂಲಗಳಿಂದ ಹಣ ಹೊಂದಿಸಬೇಕು, ಸಾಕಷ್ಟು ದುಡಿಯಲು ನನಗಿರುವ ಸಾಧ್ಯತೆಗಳೇನು ಎಂಬುದನ್ನೂ ಗುರುತಿಸಿಕೊಳ್ಳಿ. ಅಂದುಕೊಂಡದ್ದನ್ನು ನಿಧಾನವಾಗಿ ಆರಂಭಿಸಿಬಿಡಿ. ಉಳಿದವರು ನೋಡಿ ಆಶ್ಚರ್ಯ ಪಡುವುದರೊಳಗಾಗಿ ಒಂದೆರಡು ಹೆಜ್ಜೆ ಅವರಿಗಿಂತ ಮುಂದಿರುತ್ತೀರಿ. ಹೀಗೆಯೇ ಐದು ವರ್ಷಕ್ಕೊಂದಷ್ಟು ಯೋಜನೆಗಳು, ಹತ್ತು ವರ್ಷಕ್ಕೊಂದಷ್ಟು ಯೋಜನೆಗಳು. ಸಂಕಲ್ಪ ಬದುಕಿನಲ್ಲಿ ಬಹುತೇಕ ಬಾರಿ ಕೆಲಸಕ್ಕೆ ಬರುತ್ತದೆ. ಅಂತೆಯೇ ಹೇಳುತ್ತಾರೆ, ‘ನೀವು ಏನು ಆಲೋಚಿಸುತ್ತೀರೋ ಅದೇ ಆಗುತ್ತೀರಿ’ ಎಂದು. ಹಾಗಿದ್ರೆ ಯಾಕೆ ತಡ, ಈ ನವರಾತ್ರಿಗೊಂದು ಒಳ್ಳೆಯ ಸಂಕಲ್ಪ ಮಾಡಿಬಿಡೋಣವಾ?
(ಲೇಖಕರು ಫಿನ್‌ಪ್ಲಸ್.ಕಾಮ್ ಮುಖ್ಯಸ್ಥರು)