ಈ ಅಂಕಣವನ್ನು ಇಲ್ಲಿ ಆಲಿಸಿ:
ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯು, ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇಕ್ಷಣೆ, ಉತ್ಖನನ ಮತ್ತು ಸಂಶೋಧನಾ ವಿಶ್ಲೇಷಣೆಗಳನ್ನು ಮುಂದುವರಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿತು.
`ಸನ್ಮಾನ್ಯ’ ಸ್ವಾಮಿ ಪ್ರಸಾದ ಮೌರ್ಯ ಅವರು ಇದೇ ರೀತಿ ಬೌದ್ಧವಿಹಾರಗಳನ್ನು ನಾಶ ಮಾಡಿ ನಿರ್ಮಿಸಿರುವ ಹಿಂದೂ ದೇವಾಲಯಗಳ ಬಗೆಗೂ, ಈ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯು ಸರ್ವೇಕ್ಷಣವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಇಂತಹ ಕೆಲವು ಪ್ರಶ್ನೆಗಳನ್ನು ಆಗಾಗ ಎತ್ತಲಾಗುತ್ತದೆ. ಸಮಸ್ಯಾ ಪರಿಹಾರ, ಸಂಶಯ – ಗೊಂದಲಗಳನ್ನು ಬಗೆಹರಿಸಿಕೊಳ್ಳುವುದು, ಇತ್ಯಾದಿಗಳು ಆಸಕ್ತಿಯ ಸಂಗತಿಗಳೇನಲ್ಲ, ಬಿಡಿ. ಗಾಯಗಳು ಮಾಯುವುದಕ್ಕಿಂತ ಅವುಗಳನ್ನು ಕೆರೆದು ಕೆರೆದು ವ್ರಣವನ್ನಾಗಿಸಲು, ಇಂತಹ ಕೆಲವರು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅದದೇ ಮಾತುಗಳನ್ನಾಡಿ ವಿವಾದ ಎಬ್ಬಿಸುತ್ತಾರೆ. ಈ ಸುಳ್ಳುಗಳಿಗೋ ಆಯಸ್ಸು ಜಾಸ್ತಿ. ಶಕ್ತಿಯೂ ಹೆಚ್ಚು. ಅಕಸ್ಮಾತ್ ಜನರು ಈ ಸುಳ್ಳುಗಳನ್ನು ಒದರಿಕೊಂಡುಬಿಟ್ಟಾರು, ಎಂಬ ಭಯದಿಂದ ಕೆಲವರು ಮತ್ತೆ ಮತ್ತೆ ಅವುಗಳಿಗೆ ಜೀವ ತುಂಬುವ ಹೇಳಿಕೆಗಳನ್ನೂ ನೀಡುತ್ತಲೇ ಇರುತ್ತಾರೆ.
ಅದು ಸರಿ, ಕರ್ನಾಟಕದ ರಾಜಕೀಯದಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಮತ್ತು ಇನ್ನೂ ನಡೆಯುತ್ತಿರುವ ಅನೂಹ್ಯ – ಅಕಲ್ಪನೀಯ ಬೆಳವಣಿಗೆಗಳನ್ನೇ ಜೀರ್ಣಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಾಗಿಲ್ಲ, ಹೀಗಿರುವಾಗ, ಯಾರು ಸ್ವಾಮಿ ಈ ಮೌರ್ಯ ಎನ್ನುವಿರೋ? ಅವರು ಉತ್ತರ ಪ್ರದೇಶದವರು. ಮೊದಲು ಮಾಯಾವತಿಯವರ ಬಹುಜನ ಸಮಾಜ ಪಕ್ಷದಲ್ಲಿದ್ದರು. ಅನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಆಗ ದೇಶದ ಇತಿಹಾಸದ ಬಗೆಗೆ ಅವರಿಗೆ ಅಷ್ಟೊಂದು ಪಾಂಡಿತ್ಯವಿರಲಿಲ್ಲ. ಈಗ ಸಮಾಜವಾದಿ ಪಕ್ಷ ಸೇರಿದ್ದಾರೆ. ಹಾಗೆಂದಮೇಲೆ, ಅಲ್ಪಸಂಖ್ಯಾತರಿಗೆ ಸಂತೋಷವಾಗುವಂತೆ ಮಾತನಾಡಬಾರದೇ? ಲೋಕಸಭೆಗೆ 2024ರಲ್ಲಿ ನಿರ್ಣಾಯಕವೆನಿಸುವ ಮಹಾಚುನಾವಣೆಯಿದೆ, ಎಂದಮೇಲೆ “ಟಿಪ್ಪು” ಎಂಬ ಉಪನಾಮದಿಂದ ಖ್ಯಾತರಾಗಿರುವ ಅಖಿಲೇಶ್ ಯಾದವರನ್ನು ಸಂಪ್ರೀತಿಗೊಳಿಸುವುದು ತುರ್ತು ಅಗತ್ಯ ಅಲ್ಲವೇ?
ಅಷ್ಟೇ ಅಲ್ಲ, ನಮ್ಮಲ್ಲಿ ಎಲ್ಲ ರಾಜಕಾರಣಿಗಳೂ ಆರ್ಥಿಕ ತಜ್ಞರು, ಸಮಾಜಶಾಸ್ತ್ರಜ್ಞರು, ಇತಿಹಾಸತಜ್ಞರು ಎಂಬ ಪ್ರತೀತಿ ಬೇರೆ ಇದೆ!
1930ರಲ್ಲಿ ಲಾಂಗ್ ಹರ್ಸ್ಟ್ ಎಂಬ ಬ್ರಿಟಿಷ್ ಅಧಿಕಾರಿಯು ನಾಗಾರ್ಜುನಕೊಂಡದ ಬೌದ್ಧ ಸ್ಮಾರಕಗಳನ್ನು ಶಂಕರಾಚಾರ್ಯರು ಧ್ವಂಸ ಮಾಡಿದರೆಂದು ಬರೆದ. ಮಹಿಷಾಭಿಮಾನಿ ಕನ್ನಡ ಸಾಹಿತಿಯೊಬ್ಬರು ಇದನ್ನೇ ಉಲ್ಲೇಖಿಸುತ್ತಾರೆ. ಕಳೆದ ಎರಡು ಶತಮಾನಗಳಲ್ಲಿ ಬ್ರಿಟಿಷರು ಬರೆದಿಟ್ಟ ಎಲ್ಲ ಗ್ರಂಥಗಳನ್ನೂ, ಎಲ್ಲ ಅಭಿಪ್ರಾಯಗಳನ್ನೂ ಶತಪ್ರತಿಶತ ಒಪ್ಪಬೇಕು, ವಿಶ್ಲೇಷಣೆ – ವಿಮರ್ಶೆಗಳನ್ನೂ ಮಾಡಬಾರದು ಎಂಬ ಅಲಿಖಿತ ನಿಯಮವಿದೆ. ಅವೈಜ್ಞಾನಿಕವಾದ ಆರ್ಯ-ದ್ರಾವಿಡ ಸಿದ್ಧಾಂತವಾಗಲೀ, ಇಸ್ಲಾಮೀ ವಿಗ್ರಹಭಂಜಕರೇ ಭಾರತದ ಎಲ್ಲ ಅರಮನೆಗಳ – ದೇವಾಲಯಗಳ ಶಿಲ್ಪಕಲೆಗೆ ಕಾರಣೀಭೂತರು ಎನ್ನುವ ಅಬದ್ಧವಾಗಲೀ, ನಂಬಿ ಒಪ್ಪಿ ಮುಂದಿನ ಹೆಜ್ಜೆಯಿಡಬೇಕಂತೆ!
ತಮಾಷೆಯೆಂದರೆ ಇಂದು, ಹಿಂದೂಗಳೇ ಬೌದ್ಧಮತೀಯರಿಗೆ ಕಿರುಕುಳ ಕೊಟ್ಟರು, ಬೌದ್ಧದೇವಾಲಯಗಳನ್ನು ಧ್ವಂಸ ಮಾಡಿದರು, ಎಂದು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ. ಹೀಗೆ ಸುಳ್ಳುಗಳನ್ನು ಹರಡುತ್ತಿರುವ ಕಮ್ಯೂನಿಸ್ಟ್ ಇತಿಹಾಸಕಾರರಿಗೆ, ತಮ್ಮ ಈ ಸುಳ್ಳಿಗೆ ಕಿಂಚಿತ್ ಆಧಾರವನ್ನೂ ಒದಗಿಸಲಾಗಿಲ್ಲ. ಒಂದು ಅಂತಹ ಪ್ರಕರಣದಲ್ಲಿ ರೋಮಿಲ್ಲಾ ಥಾಪರ್ ಅವರು ಮೂರು ಶಾಸನಗಳ ‘ಸಾಕ್ಷ್ಯಾಧಾರ’ ಒದಗಿಸಿದರು. ಆಗ ಲೇಖಕ, ಸಂಶೋಧಕ ಸೀತಾರಾಮ ಗೋಯಲ್ ಅವರು ಈ ಪ್ರಕರಣವನ್ನು ಕೈಗೆತ್ತಿಕೊಂಡರು. ಅವುಗಳಲ್ಲಿ ಎರಡು ಶಾಸನಗಳಿಗೂ ಬೌದ್ಧವಿಹಾರಗಳಿಗೂ, ಅವುಗಳ ಧ್ವಂಸಕ್ಕೂ ಏನೇನೂ ಸಂಬಂಧವಿರಲಿಲ್ಲ. ಇನ್ನೊಂದರಲ್ಲಿ ಹೇಳಲಾದ ವಿನಾಶದ ವಿಷಯವೇ ಕಟ್ಟುಕತೆಯೆಂದು ಸಿದ್ಧವಾಗಿಹೋಯಿತು. ಒಟ್ಟಿನಲ್ಲಿ, ಈ ‘ಮಹಾನ್’ ಇತಿಹಾಸಕಾರರಲ್ಲೊಬ್ಬರಾದ ರೋಮಿಲ್ಲಾ ಥಾಪರ್ ಅವರ ಅಪ್ರಾಮಾಣಿಕ ಕುಟಿಲತೆ ಬಯಲಾಯಿತು.
ರೋಮಿಲ್ಲಾ ಥಾಪರ್, ಆರ್.ಎಸ್.ಶರ್ಮ, ಮೊಹಮ್ಮದ್ ಹಬೀಬ್, ಇರ್ಫಾನ್ ಹಬೀನ್, ಡಿ.ಎನ್.ಝಾ, ಸರ್ವೆಪಲ್ಲಿ ಗೋಪಾಲ್, ಸತೀಶ್ ಚಂದ್ರ ಮೊದಲಾದ ಕಮ್ಯೂನಿಸ್ಟ್ – ಜಿಹಾದಿ ಇತಿಹಾಸಕಾರರ ಷಡ್ಯಂತ್ರಕ್ಕೆ ಅನುಸಾರವಾಗಿ NCERT, ICHR, ICSSR ಮುಂತಾದ ಸಂಸ್ಥೆಗಳು, ಇತಿಹಾಸದ ಹೆಸರಿನಲ್ಲಿ ಸುಳ್ಳುಗಳ ಸರಮಾಲೆಯನ್ನೇ ಪೋಣಿಸಿವೆ. ನಮ್ಮ ಶಾಲಾ ಕಾಲೇಜುಗಳಲ್ಲಿ ಇಂತಹ ವಿಕೃತ ಇತಿಹಾಸವನ್ನು ಬೋಧಿಸಿದರೆ ಆಗುವುದೇ ಹೀಗೆ.
ಶಂಕರಾಚಾರ್ಯರ ಬಳಿ ಸೈನ್ಯವಿತ್ತೇ? ಬೌದ್ಧ ವಿಹಾರಗಳನ್ನು ನಾಶಮಾಡುವ ಶಸ್ತ್ರಧಾರಿ ಶಿಷ್ಯರಿದ್ದರೇ? ಮುಖ್ಯವಾಗಿ ಶಂಕರಾಚಾರ್ಯರ ಸಮಕಾಲೀನ ಐತಿಹಾಸಿಕ ಪುರಾವೆಗಳು ಈ ಧ್ವಂಸವನ್ನು ದಾಖಲಿಸಿವೆಯೇ? ಬೇರೆಲ್ಲಾದರೂ ಆಚಾರ್ಯರು ಇಂತಹುದೇ ಧ್ವಂಸಕಾರ್ಯ ಮಾಡಿದರೇ? ಕೇವಲ ನಾಗಾರ್ಜುನಕೊಂಡದಲ್ಲಿ ಮಾತ್ರ ಈ ವಿನಾಶಕಾರ್ಯ ನಡೆಸಿದರೇ? ನಮ್ಮ ಇತಿಹಾಸಕಾರರು ಈ ಪ್ರಶ್ನೆಗಳನ್ನು ಕೇಳಬೇಕಿತ್ತು. ಬದಲಿಗೆ ಲಾಂಗ್ ಹರ್ಸ್ಟ್ ಬರೆದುದು ತಮ್ಮ “ವಿಕೃತ ಕಥಾನಕಗಳಿಗೆ” ಪೂರಕವಾಗಿದೆಯೆಂದು ಈ ಖೊಟ್ಟಿ ಇತಿಹಾಸಕಾರರು ಸುಮ್ಮನಾಗಿಬಿಟ್ಟರೇ!
ಈ ಪ್ರಶ್ನೆಗಳನ್ನು ಈಗಲಾದರೂ, ನಾವಾದರೂ ಕೇಳಬೇಕಿದೆ.
ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ತಜ್ಞರಷ್ಟೇ ಅಲ್ಲ, ಬಹಳ ದೊಡ್ಡ ಆರ್ಥಿಕ ತಜ್ಞರೂ – ಇತಿಹಾಸಜ್ಞರೂ ಆಗಿದ್ದರು. ಅವರ ಬರೆಹಗಳು ಚಿಂತನೆಗಳು ಬಹಳ ಬಹಳ ಅಮೂಲ್ಯ. ಅವರು ಹೀಗೆ ದಾಖಲಿಸಿದ್ದಾರೆ:
“ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಮರ ಆಕ್ರಮಣಗಳೇ ಕಾರಣ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ‘ಬುತ್’ಗೆ ಇಸ್ಲಾಂ ಶತ್ರುವಾಯಿತು. ‘ಬುತ್’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ವಿಗ್ರಹ’. ಅದು ‘ಬುದ್ಧ’ ಪದದ ಅಪಭ್ರಂಶ. ಈ ಪದದ ಮೂಲವೇ ಹೇಳುವಂತೆ, ಮುಸ್ಲಿಮರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧಮತವೇ ಕಣ್ಣೆದುರಿಗೆ ಮೂಡುತ್ತದೆ. ಅವರಿಗೆ ಅವೆರಡೂ ಒಂದೇ ಎನ್ನಿಸುತ್ತದೆ. ಇಸ್ಲಾಮಿನ ವಿಗ್ರಹಭಂಜನೆಯ ಸಿದ್ಧಾಂತವು, ಮುಸ್ಲಿಮರಿಗೆ ಬೌದ್ಧಮತವನ್ನು ನಾಶಪಡಿಸುವ ಸಿದ್ಧಾಂತವೇ ಆಗಿಬಿಟ್ಟಿತು. ಬರಿಯ ಭಾರತದಲ್ಲಿ ಮಾತ್ರವಲ್ಲ, ಇಸ್ಲಾಂ ಹೆಜ್ಜೆಯಿಟ್ಟ ಕಡೆಯೆಲ್ಲಾ ಬೌದ್ಧಮತವು ನಾಶವಾಯಿತು. ಬ್ಯಾಕ್ಟ್ರಿಯಾ, ಪಾರ್ಥಿಯಾ, ಆಫಘಾನಿಸ್ಥಾನ, ಗಾಂಧಾರ, ಚೈನಾದ ಟರ್ಕೆಸ್ಥಾನ, ಅಷ್ಟೇಕೆ ಇಡಿಯ ಏಷ್ಯಾ ಖಂಡದ ಮತಧರ್ಮವು ಬೌದ್ಧಮತವೇ ಆಗಿತ್ತು, ಈ ಇಸ್ಲಾಂ ಕಾಲಿಡುವ ಮೊದಲು…”
ಬೌದ್ಧಮತೀಯರ ಕಗ್ಗೊಲೆ, ಮತ್ತು ಅವರ ಬೌದ್ಧವಿಹಾರಗಳ – ವಿಶ್ವವಿದ್ಯಾನಿಲಯಗಳ – ದೇವಾಲಯಗಳ ವಿಧ್ವಂಸ – ವಿನಾಶ ಕುರಿತು, ಬಾಬಾಸಾಹೇಬರು ಹೀಗೆ ಹೇಳುತ್ತಾರೆ:
“ಸುವಿಖ್ಯಾತ ಬೌದ್ಧ ವಿಶ್ವವಿದ್ಯಾನಿಲಯಗಳಾದ ನಳಂದ, ವಿಕ್ರಮಶಿಲಾ, ಜಗದ್ದಾಲ, ಓದಂತಪುರಿ ಮುಂತಾದ ಅನೇಕ ವಿಶ್ವವಿದ್ಯಾನಿಲಯಗಳನ್ನು ಮುಸ್ಲಿಂ ಆಕ್ರಮಣಕಾರಿಗಳು ಧ್ವಂಸ ಮಾಡಿದರು. ದೇಶದಾದ್ಯಂತ ಹರಡಿಕೊಂಡಿದ್ದ ಬೌದ್ಧದೇವಾಲಯಗಳನ್ನು ನೆಲಸಮ ಮಾಡಿದರು. ಜೀವ ಉಳಿಸಿಕೊಳ್ಳಲು ಸಾವಿರಾರು ಜನ ಬೌದ್ಧಸನ್ಯಾಸಿಗಳು ನೇಪಾಳ, ಟಿಬೆಟ್ ಮುಂತಾದ ಕಡೆ ಓಡಿಹೋದರು. ಆದರೂ ಬಹಳ ದೊಡ್ಡ ಸಂಖ್ಯೆಯ ಬೌದ್ಧಸನ್ಯಾಸಿಗಳು ಮುಸ್ಲಿಮರಿಂದ ಕೊಲ್ಲಲ್ಪಟ್ಟರು.ʼʼ
ಮುಸ್ಲಿಂ ಆಕ್ರಮಣಕಾರಿಗಳ ಖಡ್ಗಗಳಿಗೆ ಸಿಕ್ಕಿ ಹೇಗೆ ಬೌದ್ಧಸನ್ಯಾಸಿಗಳು ಕಗ್ಗೊಲೆಯಾದರೆಂಬುದನ್ನು, ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದ್ದಾರೆ, ಬರೆದಿಟ್ಟಿದ್ದಾರೆ. ಸಾಮಾನ್ಯ ಯುಗದ (Common Era) 1197ರಲ್ಲಿ ಬಿಹಾರದಲ್ಲಿ ನಡೆದ ಆಕ್ರಮಣ, ನರಹತ್ಯೆ, ಲೂಟಿಗಳ ದಾಖಲೆಗಳನ್ನು ಸಂಗ್ರಹಿಸಿದ, ಇತಿಹಾಸಕಾರರಾದ ವಿನ್ಸೆಂಟ್ ಸ್ಮಿತ್ ಹೀಗೆ ಹೇಳಿದ್ದಾರೆ:
“….. ಅಗಾಧ ಪ್ರಮಾಣದ ಐಶ್ವರ್ಯದ ಲೂಟಿ ಸಂಗ್ರಹವಾಗಿತ್ತು. ತಲೆ ಬೋಳಿಸಿದ ಬೌದ್ಧ ಸನ್ಯಾಸಿಗಳ ತಲೆಬುರುಡೆಗಳು ಅದೆಷ್ಟು ರಾಶಿರಾಶಿ ಬಿದ್ದಿದ್ದುವೆಂದರೆ, ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳಲ್ಲಿದ್ದ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳುವ ಒಬ್ಬನೇ ಒಬ್ಬ ಮನುಷ್ಯನೂ ಸಿಕ್ಕುತ್ತಿರಲಿಲ್ಲ, ಆ ರೀತಿಯಲ್ಲಿ ಬೌದ್ಧ ಸನ್ಯಾಸಿಗಳ ಮೂಲೋತ್ಪಾಟನೆ ಮಾಡಲಾಗಿತ್ತು….”, “…. (ಮುಸ್ಲಿಂ ಇತಿಹಾಸಕಾರರ ನುಡಿಗಳಲ್ಲಿ) ಅಲ್ಲಿ ಏನಿತ್ತು ಎಂದಾಗ ಅದು ಬೌದ್ಧ ವಿಹಾರ ಮತ್ತು ಬೌದ್ಧ ವಿಶ್ವವಿದ್ಯಾಲಯ ಇದ್ದ ದೊಡ್ಡ ನಗರದ ಕೋಟೆಯ ಒಳಭಾಗ ಎಂಬುದು ತಿಳಿಯಿತು….” “… ಹಾಗಿತ್ತು ಮುಸ್ಲಿಂ ಆಕ್ರಮಣಕಾರಿಗಳು ಬೌದ್ಧ ಸನ್ಯಾಸಿಗಳ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆ, ನರಹತ್ಯೆ. ಕೊಡಲಿಯ ಏಟು ಮೂಲಕ್ಕೇ ಬಿದ್ದಿತ್ತು. ಹೀಗೆ ಬೌದ್ಧ ಸನ್ಯಾಸಿಗಳನ್ನು ಪೂರ್ಣವಾಗಿ ಕೊಂದುಹಾಕುವುದರ ಮೂಲಕ ಇಸ್ಲಾಂ ಮತವು ಬೌದ್ಧಮತವನ್ನೇ ನಾಶಮಾಡಿಬಿಟ್ಟಿತು. ಭಾರತದಲ್ಲಿ ಬೌದ್ಧಮತ ನೆಲಸಮವಾಗಲು, ನಿಶ್ಶೇಷವಾಗಲು ಈ ಮಹಾನ್ ದುರಂತವೇ ಕಾರಣ….”
ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿರುವ “ಡಾ|| ಬಾಬಾಸಾಹೇಬ್ ಅಂಬೇಡ್ಕರ್: ಲೇಖನಗಳು ಮತ್ತು ಭಾಷಣಗಳು – ಸಂಪುಟ 3 – “ಬೌದ್ಧಮತದ ಪತನ ಮತ್ತು ಅವಸಾನ” (ಇಂಗ್ಲಿಷ್ ಆವೃತ್ತಿಯ ಪುಟ 229ರಿಂದ 238) ಲೇಖನದಲ್ಲಿ ಈ ವಿವರ ಓದಬಹುದು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಲೋಹಿಯಾರನ್ನೇ ಮರೆತ ಸಮಾಜವಾದಿಗಳು
ಸೀತಾರಾಮ ಗೋಯಲ್‌ರು, ಈ ಮಾರ್ಕ್ಸ್ ವಾದಿಗಳಿಗೆ ದೊಡ್ಡ ಸವಾಲನ್ನೇ ಹಾಕಿದರು. ಬೇರೆ ಮತಗಳ ಪೂಜಾಸ್ಥಾನಗಳನ್ನು ನಾಶ ಮಾಡಿ ಎಂದು ಹೇಳುವ ಒಂದೇ ಒಂದು ಹಿಂದೂ ಮೂಲಗ್ರಂಥಪಾಠ ತೋರಿಸಿ, ಎಂದರು. ಆದರೆ, ಹಾಗೆ ನಾಶ ಮಾಡಲು ಬೈಬಲ್ ಆಜ್ಞಾಪಿಸುತ್ತದೆ. ಇಸ್ಲಾಮಿಗೆ ಸಂಬಂಧಿಸಿದ ಮತಗ್ರಂಥಗಳಲ್ಲಿ, ಬೇರೆ ಮತಗಳ ಪೂಜಾಮಂದಿರಗಳನ್ನು ನಾಶಪಡಿಸಿ ಎನ್ನುವ ಕಂತೆ ಕಂತೆ ಪಠ್ಯವೇ ಇದೆ.
ಗೋಯಲ್‌ರು ಇನ್ನೂ ಒಂದು ಸವಾಲು ಎಸೆದರು. ಬೇರೆ ಮತಗಳ ಪೂಜಾಸ್ಥಾನಗಳನ್ನು ನಾಶ ಮಾಡಿದ ಒಬ್ಬನೇ ಒಬ್ಬನಿಗೆ, ಹಿಂದೂಗಳು ಗೌರವಿಸಿದ – ಸನ್ಮಾನಿಸಿದ ಉದಾಹರಣೆ ಕೊಡಿ, ಎಂದರು. ಅದೇ ನೋಡಿ, ಹಾಗೆ ನಾಶಮಾಡಿದ ಮುಸ್ಲಿಂ ಆಕ್ರಮಣಕಾರಿಗಳನ್ನು, ಸುಲ್ತಾನರನ್ನು ವೈಭವೀಕರಿಸಿದ ಗೌರವಿಸಿದ ಇಸ್ಲಾಮೀ ಇತಿಹಾಸಕಾರರನ್ನು ಮತ್ತು ಅಂತಹ ವಿಚಾರ-ಸಿದ್ಧಾಂತಗಳನ್ನು ಧಂಡಿಯಾಗಿ ನೋಡಬಹುದು. ಗೋಯಲ್‌ರ ಸವಾಲುಗಳಿಗೆ, ಕಮ್ಯೂನಿಸ್ಟರ ದುರಹಂಕಾರದ – ಬೇಜವಾಬ್ದಾರಿಯ ಮೌನವೇ ಉತ್ತರವಾಗಿತ್ತು.
ನಮ್ಮ ಭಾರತೀಯ ಪರಂಪರೆಯಲ್ಲಿ ಜೈನ, ವೈದಿಕ, ಬೌದ್ಧ, ಚಾರ್ವಾಕ, ಶೈವ ಮುಂತಾದ ವಿಭಿನ್ನ ಶಾಖೆಗಳ ನಡುವೆ ಸಶಸ್ತ್ರ ಸಂಘರ್ಷ ಎಂದೂ ಇರಲಿಲ್ಲ. ಇದ್ದುದು ಚರ್ಚೆ, ಮೀಮಾಂಸೆ, ವಾದ -ವಿವಾದಗಳು ಮಾತ್ರವೇ.
1993ರ ಆವೃತ್ತಿಯ ಸೀತಾರಾಮ ಗೋಯಲ್‌ರ “ಹಿಂದೂ ಟೆಂಪಲ್ಸ್: ವಾಟ್ ಹ್ಯಾಪ್‌ನ್‌ಡ್ ಟು ದೆಮ್: ದಿ ಇಸ್ಲಾಮಿಕ್ ಎವಿಡೆನ್ಸ್” ಗ್ರಂಥದ ಅನುಬಂಧ 4ರಲ್ಲಿ, ಈ ಕುರಿತ ಸಂವಾದದ ವಿವರಗಳನ್ನು ನೀಡಲಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ದುರದೃಷ್ಟವಶಾತ್ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಯಿತು!