ಅಂಕಣ
ನನ್ನ ದೇಶ ನನ್ನ ದನಿ ಅಂಕಣ: ಬೌದ್ಧ ನಿರ್ಮಾಣಗಳನ್ನು ಹಿಂದೂಗಳು ನಾಶ ಮಾಡಿದರೇ?
ಮುಸ್ಲಿಂ ಆಕ್ರಮಣಕಾರಿಗಳ ಖಡ್ಗಗಳಿಗೆ ಸಿಕ್ಕಿ ಹೇಗೆ ಬೌದ್ಧಸನ್ಯಾಸಿಗಳು ಕಗ್ಗೊಲೆಯಾದರೆಂಬುದನ್ನು, ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದ್ದಾರೆ, ಬರೆದಿಟ್ಟಿದ್ದಾರೆ. ಅಂಬೇಡ್ಕರರೂ ಇದನ್ನು ಕುರಿತು ಬರೆದಿದ್ದಾರೆ.
ಈ ಅಂಕಣವನ್ನು ಇಲ್ಲಿ ಆಲಿಸಿ:
ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯು, ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೇಕ್ಷಣೆ, ಉತ್ಖನನ ಮತ್ತು ಸಂಶೋಧನಾ ವಿಶ್ಲೇಷಣೆಗಳನ್ನು ಮುಂದುವರಿಸಲು ಅಲಹಾಬಾದ್ ಉಚ್ಚ ನ್ಯಾಯಾಲಯವು ಅನುಮತಿ ನೀಡಿತು.
`ಸನ್ಮಾನ್ಯ’ ಸ್ವಾಮಿ ಪ್ರಸಾದ ಮೌರ್ಯ ಅವರು ಇದೇ ರೀತಿ ಬೌದ್ಧವಿಹಾರಗಳನ್ನು ನಾಶ ಮಾಡಿ ನಿರ್ಮಿಸಿರುವ ಹಿಂದೂ ದೇವಾಲಯಗಳ ಬಗೆಗೂ, ಈ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯು ಸರ್ವೇಕ್ಷಣವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಇಂತಹ ಕೆಲವು ಪ್ರಶ್ನೆಗಳನ್ನು ಆಗಾಗ ಎತ್ತಲಾಗುತ್ತದೆ. ಸಮಸ್ಯಾ ಪರಿಹಾರ, ಸಂಶಯ – ಗೊಂದಲಗಳನ್ನು ಬಗೆಹರಿಸಿಕೊಳ್ಳುವುದು, ಇತ್ಯಾದಿಗಳು ಆಸಕ್ತಿಯ ಸಂಗತಿಗಳೇನಲ್ಲ, ಬಿಡಿ. ಗಾಯಗಳು ಮಾಯುವುದಕ್ಕಿಂತ ಅವುಗಳನ್ನು ಕೆರೆದು ಕೆರೆದು ವ್ರಣವನ್ನಾಗಿಸಲು, ಇಂತಹ ಕೆಲವರು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅದದೇ ಮಾತುಗಳನ್ನಾಡಿ ವಿವಾದ ಎಬ್ಬಿಸುತ್ತಾರೆ. ಈ ಸುಳ್ಳುಗಳಿಗೋ ಆಯಸ್ಸು ಜಾಸ್ತಿ. ಶಕ್ತಿಯೂ ಹೆಚ್ಚು. ಅಕಸ್ಮಾತ್ ಜನರು ಈ ಸುಳ್ಳುಗಳನ್ನು ಒದರಿಕೊಂಡುಬಿಟ್ಟಾರು, ಎಂಬ ಭಯದಿಂದ ಕೆಲವರು ಮತ್ತೆ ಮತ್ತೆ ಅವುಗಳಿಗೆ ಜೀವ ತುಂಬುವ ಹೇಳಿಕೆಗಳನ್ನೂ ನೀಡುತ್ತಲೇ ಇರುತ್ತಾರೆ.
ಅದು ಸರಿ, ಕರ್ನಾಟಕದ ರಾಜಕೀಯದಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಮತ್ತು ಇನ್ನೂ ನಡೆಯುತ್ತಿರುವ ಅನೂಹ್ಯ – ಅಕಲ್ಪನೀಯ ಬೆಳವಣಿಗೆಗಳನ್ನೇ ಜೀರ್ಣಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಾಗಿಲ್ಲ, ಹೀಗಿರುವಾಗ, ಯಾರು ಸ್ವಾಮಿ ಈ ಮೌರ್ಯ ಎನ್ನುವಿರೋ? ಅವರು ಉತ್ತರ ಪ್ರದೇಶದವರು. ಮೊದಲು ಮಾಯಾವತಿಯವರ ಬಹುಜನ ಸಮಾಜ ಪಕ್ಷದಲ್ಲಿದ್ದರು. ಅನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ಆಗ ದೇಶದ ಇತಿಹಾಸದ ಬಗೆಗೆ ಅವರಿಗೆ ಅಷ್ಟೊಂದು ಪಾಂಡಿತ್ಯವಿರಲಿಲ್ಲ. ಈಗ ಸಮಾಜವಾದಿ ಪಕ್ಷ ಸೇರಿದ್ದಾರೆ. ಹಾಗೆಂದಮೇಲೆ, ಅಲ್ಪಸಂಖ್ಯಾತರಿಗೆ ಸಂತೋಷವಾಗುವಂತೆ ಮಾತನಾಡಬಾರದೇ? ಲೋಕಸಭೆಗೆ 2024ರಲ್ಲಿ ನಿರ್ಣಾಯಕವೆನಿಸುವ ಮಹಾಚುನಾವಣೆಯಿದೆ, ಎಂದಮೇಲೆ “ಟಿಪ್ಪು” ಎಂಬ ಉಪನಾಮದಿಂದ ಖ್ಯಾತರಾಗಿರುವ ಅಖಿಲೇಶ್ ಯಾದವರನ್ನು ಸಂಪ್ರೀತಿಗೊಳಿಸುವುದು ತುರ್ತು ಅಗತ್ಯ ಅಲ್ಲವೇ?
ಅಷ್ಟೇ ಅಲ್ಲ, ನಮ್ಮಲ್ಲಿ ಎಲ್ಲ ರಾಜಕಾರಣಿಗಳೂ ಆರ್ಥಿಕ ತಜ್ಞರು, ಸಮಾಜಶಾಸ್ತ್ರಜ್ಞರು, ಇತಿಹಾಸತಜ್ಞರು ಎಂಬ ಪ್ರತೀತಿ ಬೇರೆ ಇದೆ!
1930ರಲ್ಲಿ ಲಾಂಗ್ ಹರ್ಸ್ಟ್ ಎಂಬ ಬ್ರಿಟಿಷ್ ಅಧಿಕಾರಿಯು ನಾಗಾರ್ಜುನಕೊಂಡದ ಬೌದ್ಧ ಸ್ಮಾರಕಗಳನ್ನು ಶಂಕರಾಚಾರ್ಯರು ಧ್ವಂಸ ಮಾಡಿದರೆಂದು ಬರೆದ. ಮಹಿಷಾಭಿಮಾನಿ ಕನ್ನಡ ಸಾಹಿತಿಯೊಬ್ಬರು ಇದನ್ನೇ ಉಲ್ಲೇಖಿಸುತ್ತಾರೆ. ಕಳೆದ ಎರಡು ಶತಮಾನಗಳಲ್ಲಿ ಬ್ರಿಟಿಷರು ಬರೆದಿಟ್ಟ ಎಲ್ಲ ಗ್ರಂಥಗಳನ್ನೂ, ಎಲ್ಲ ಅಭಿಪ್ರಾಯಗಳನ್ನೂ ಶತಪ್ರತಿಶತ ಒಪ್ಪಬೇಕು, ವಿಶ್ಲೇಷಣೆ – ವಿಮರ್ಶೆಗಳನ್ನೂ ಮಾಡಬಾರದು ಎಂಬ ಅಲಿಖಿತ ನಿಯಮವಿದೆ. ಅವೈಜ್ಞಾನಿಕವಾದ ಆರ್ಯ-ದ್ರಾವಿಡ ಸಿದ್ಧಾಂತವಾಗಲೀ, ಇಸ್ಲಾಮೀ ವಿಗ್ರಹಭಂಜಕರೇ ಭಾರತದ ಎಲ್ಲ ಅರಮನೆಗಳ – ದೇವಾಲಯಗಳ ಶಿಲ್ಪಕಲೆಗೆ ಕಾರಣೀಭೂತರು ಎನ್ನುವ ಅಬದ್ಧವಾಗಲೀ, ನಂಬಿ ಒಪ್ಪಿ ಮುಂದಿನ ಹೆಜ್ಜೆಯಿಡಬೇಕಂತೆ!
ತಮಾಷೆಯೆಂದರೆ ಇಂದು, ಹಿಂದೂಗಳೇ ಬೌದ್ಧಮತೀಯರಿಗೆ ಕಿರುಕುಳ ಕೊಟ್ಟರು, ಬೌದ್ಧದೇವಾಲಯಗಳನ್ನು ಧ್ವಂಸ ಮಾಡಿದರು, ಎಂದು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ. ಹೀಗೆ ಸುಳ್ಳುಗಳನ್ನು ಹರಡುತ್ತಿರುವ ಕಮ್ಯೂನಿಸ್ಟ್ ಇತಿಹಾಸಕಾರರಿಗೆ, ತಮ್ಮ ಈ ಸುಳ್ಳಿಗೆ ಕಿಂಚಿತ್ ಆಧಾರವನ್ನೂ ಒದಗಿಸಲಾಗಿಲ್ಲ. ಒಂದು ಅಂತಹ ಪ್ರಕರಣದಲ್ಲಿ ರೋಮಿಲ್ಲಾ ಥಾಪರ್ ಅವರು ಮೂರು ಶಾಸನಗಳ ‘ಸಾಕ್ಷ್ಯಾಧಾರ’ ಒದಗಿಸಿದರು. ಆಗ ಲೇಖಕ, ಸಂಶೋಧಕ ಸೀತಾರಾಮ ಗೋಯಲ್ ಅವರು ಈ ಪ್ರಕರಣವನ್ನು ಕೈಗೆತ್ತಿಕೊಂಡರು. ಅವುಗಳಲ್ಲಿ ಎರಡು ಶಾಸನಗಳಿಗೂ ಬೌದ್ಧವಿಹಾರಗಳಿಗೂ, ಅವುಗಳ ಧ್ವಂಸಕ್ಕೂ ಏನೇನೂ ಸಂಬಂಧವಿರಲಿಲ್ಲ. ಇನ್ನೊಂದರಲ್ಲಿ ಹೇಳಲಾದ ವಿನಾಶದ ವಿಷಯವೇ ಕಟ್ಟುಕತೆಯೆಂದು ಸಿದ್ಧವಾಗಿಹೋಯಿತು. ಒಟ್ಟಿನಲ್ಲಿ, ಈ ‘ಮಹಾನ್’ ಇತಿಹಾಸಕಾರರಲ್ಲೊಬ್ಬರಾದ ರೋಮಿಲ್ಲಾ ಥಾಪರ್ ಅವರ ಅಪ್ರಾಮಾಣಿಕ ಕುಟಿಲತೆ ಬಯಲಾಯಿತು.
ರೋಮಿಲ್ಲಾ ಥಾಪರ್, ಆರ್.ಎಸ್.ಶರ್ಮ, ಮೊಹಮ್ಮದ್ ಹಬೀಬ್, ಇರ್ಫಾನ್ ಹಬೀನ್, ಡಿ.ಎನ್.ಝಾ, ಸರ್ವೆಪಲ್ಲಿ ಗೋಪಾಲ್, ಸತೀಶ್ ಚಂದ್ರ ಮೊದಲಾದ ಕಮ್ಯೂನಿಸ್ಟ್ – ಜಿಹಾದಿ ಇತಿಹಾಸಕಾರರ ಷಡ್ಯಂತ್ರಕ್ಕೆ ಅನುಸಾರವಾಗಿ NCERT, ICHR, ICSSR ಮುಂತಾದ ಸಂಸ್ಥೆಗಳು, ಇತಿಹಾಸದ ಹೆಸರಿನಲ್ಲಿ ಸುಳ್ಳುಗಳ ಸರಮಾಲೆಯನ್ನೇ ಪೋಣಿಸಿವೆ. ನಮ್ಮ ಶಾಲಾ ಕಾಲೇಜುಗಳಲ್ಲಿ ಇಂತಹ ವಿಕೃತ ಇತಿಹಾಸವನ್ನು ಬೋಧಿಸಿದರೆ ಆಗುವುದೇ ಹೀಗೆ.
ಶಂಕರಾಚಾರ್ಯರ ಬಳಿ ಸೈನ್ಯವಿತ್ತೇ? ಬೌದ್ಧ ವಿಹಾರಗಳನ್ನು ನಾಶಮಾಡುವ ಶಸ್ತ್ರಧಾರಿ ಶಿಷ್ಯರಿದ್ದರೇ? ಮುಖ್ಯವಾಗಿ ಶಂಕರಾಚಾರ್ಯರ ಸಮಕಾಲೀನ ಐತಿಹಾಸಿಕ ಪುರಾವೆಗಳು ಈ ಧ್ವಂಸವನ್ನು ದಾಖಲಿಸಿವೆಯೇ? ಬೇರೆಲ್ಲಾದರೂ ಆಚಾರ್ಯರು ಇಂತಹುದೇ ಧ್ವಂಸಕಾರ್ಯ ಮಾಡಿದರೇ? ಕೇವಲ ನಾಗಾರ್ಜುನಕೊಂಡದಲ್ಲಿ ಮಾತ್ರ ಈ ವಿನಾಶಕಾರ್ಯ ನಡೆಸಿದರೇ? ನಮ್ಮ ಇತಿಹಾಸಕಾರರು ಈ ಪ್ರಶ್ನೆಗಳನ್ನು ಕೇಳಬೇಕಿತ್ತು. ಬದಲಿಗೆ ಲಾಂಗ್ ಹರ್ಸ್ಟ್ ಬರೆದುದು ತಮ್ಮ “ವಿಕೃತ ಕಥಾನಕಗಳಿಗೆ” ಪೂರಕವಾಗಿದೆಯೆಂದು ಈ ಖೊಟ್ಟಿ ಇತಿಹಾಸಕಾರರು ಸುಮ್ಮನಾಗಿಬಿಟ್ಟರೇ!
ಈ ಪ್ರಶ್ನೆಗಳನ್ನು ಈಗಲಾದರೂ, ನಾವಾದರೂ ಕೇಳಬೇಕಿದೆ.
ಡಾ|| ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ತಜ್ಞರಷ್ಟೇ ಅಲ್ಲ, ಬಹಳ ದೊಡ್ಡ ಆರ್ಥಿಕ ತಜ್ಞರೂ – ಇತಿಹಾಸಜ್ಞರೂ ಆಗಿದ್ದರು. ಅವರ ಬರೆಹಗಳು ಚಿಂತನೆಗಳು ಬಹಳ ಬಹಳ ಅಮೂಲ್ಯ. ಅವರು ಹೀಗೆ ದಾಖಲಿಸಿದ್ದಾರೆ:
“ಭಾರತದಲ್ಲಿ ಬೌದ್ಧಮತದ ಅಳಿವಿಗೆ, ವಿನಾಶಕ್ಕೆ ಮುಸ್ಲಿಮರ ಆಕ್ರಮಣಗಳೇ ಕಾರಣ ಎನ್ನುವುದರಲ್ಲಿ ಯಾವ ಸಂದೇಹವೂ ಬೇಡ. ‘ಬುತ್’ಗೆ ಇಸ್ಲಾಂ ಶತ್ರುವಾಯಿತು. ‘ಬುತ್’ ಎಂದರೆ ಅರೇಬಿಕ್ ಭಾಷೆಯಲ್ಲಿ ‘ವಿಗ್ರಹ’. ಅದು ‘ಬುದ್ಧ’ ಪದದ ಅಪಭ್ರಂಶ. ಈ ಪದದ ಮೂಲವೇ ಹೇಳುವಂತೆ, ಮುಸ್ಲಿಮರಿಗೆ ವಿಗ್ರಹಾರಾಧನೆ ಎಂದರೆ ಬೌದ್ಧಮತವೇ ಕಣ್ಣೆದುರಿಗೆ ಮೂಡುತ್ತದೆ. ಅವರಿಗೆ ಅವೆರಡೂ ಒಂದೇ ಎನ್ನಿಸುತ್ತದೆ. ಇಸ್ಲಾಮಿನ ವಿಗ್ರಹಭಂಜನೆಯ ಸಿದ್ಧಾಂತವು, ಮುಸ್ಲಿಮರಿಗೆ ಬೌದ್ಧಮತವನ್ನು ನಾಶಪಡಿಸುವ ಸಿದ್ಧಾಂತವೇ ಆಗಿಬಿಟ್ಟಿತು. ಬರಿಯ ಭಾರತದಲ್ಲಿ ಮಾತ್ರವಲ್ಲ, ಇಸ್ಲಾಂ ಹೆಜ್ಜೆಯಿಟ್ಟ ಕಡೆಯೆಲ್ಲಾ ಬೌದ್ಧಮತವು ನಾಶವಾಯಿತು. ಬ್ಯಾಕ್ಟ್ರಿಯಾ, ಪಾರ್ಥಿಯಾ, ಆಫಘಾನಿಸ್ಥಾನ, ಗಾಂಧಾರ, ಚೈನಾದ ಟರ್ಕೆಸ್ಥಾನ, ಅಷ್ಟೇಕೆ ಇಡಿಯ ಏಷ್ಯಾ ಖಂಡದ ಮತಧರ್ಮವು ಬೌದ್ಧಮತವೇ ಆಗಿತ್ತು, ಈ ಇಸ್ಲಾಂ ಕಾಲಿಡುವ ಮೊದಲು…”
ಬೌದ್ಧಮತೀಯರ ಕಗ್ಗೊಲೆ, ಮತ್ತು ಅವರ ಬೌದ್ಧವಿಹಾರಗಳ – ವಿಶ್ವವಿದ್ಯಾನಿಲಯಗಳ – ದೇವಾಲಯಗಳ ವಿಧ್ವಂಸ – ವಿನಾಶ ಕುರಿತು, ಬಾಬಾಸಾಹೇಬರು ಹೀಗೆ ಹೇಳುತ್ತಾರೆ:
“ಸುವಿಖ್ಯಾತ ಬೌದ್ಧ ವಿಶ್ವವಿದ್ಯಾನಿಲಯಗಳಾದ ನಳಂದ, ವಿಕ್ರಮಶಿಲಾ, ಜಗದ್ದಾಲ, ಓದಂತಪುರಿ ಮುಂತಾದ ಅನೇಕ ವಿಶ್ವವಿದ್ಯಾನಿಲಯಗಳನ್ನು ಮುಸ್ಲಿಂ ಆಕ್ರಮಣಕಾರಿಗಳು ಧ್ವಂಸ ಮಾಡಿದರು. ದೇಶದಾದ್ಯಂತ ಹರಡಿಕೊಂಡಿದ್ದ ಬೌದ್ಧದೇವಾಲಯಗಳನ್ನು ನೆಲಸಮ ಮಾಡಿದರು. ಜೀವ ಉಳಿಸಿಕೊಳ್ಳಲು ಸಾವಿರಾರು ಜನ ಬೌದ್ಧಸನ್ಯಾಸಿಗಳು ನೇಪಾಳ, ಟಿಬೆಟ್ ಮುಂತಾದ ಕಡೆ ಓಡಿಹೋದರು. ಆದರೂ ಬಹಳ ದೊಡ್ಡ ಸಂಖ್ಯೆಯ ಬೌದ್ಧಸನ್ಯಾಸಿಗಳು ಮುಸ್ಲಿಮರಿಂದ ಕೊಲ್ಲಲ್ಪಟ್ಟರು.ʼʼ
ಮುಸ್ಲಿಂ ಆಕ್ರಮಣಕಾರಿಗಳ ಖಡ್ಗಗಳಿಗೆ ಸಿಕ್ಕಿ ಹೇಗೆ ಬೌದ್ಧಸನ್ಯಾಸಿಗಳು ಕಗ್ಗೊಲೆಯಾದರೆಂಬುದನ್ನು, ಮುಸ್ಲಿಂ ಇತಿಹಾಸಕಾರರೇ ದಾಖಲಿಸಿದ್ದಾರೆ, ಬರೆದಿಟ್ಟಿದ್ದಾರೆ. ಸಾಮಾನ್ಯ ಯುಗದ (Common Era) 1197ರಲ್ಲಿ ಬಿಹಾರದಲ್ಲಿ ನಡೆದ ಆಕ್ರಮಣ, ನರಹತ್ಯೆ, ಲೂಟಿಗಳ ದಾಖಲೆಗಳನ್ನು ಸಂಗ್ರಹಿಸಿದ, ಇತಿಹಾಸಕಾರರಾದ ವಿನ್ಸೆಂಟ್ ಸ್ಮಿತ್ ಹೀಗೆ ಹೇಳಿದ್ದಾರೆ:
“….. ಅಗಾಧ ಪ್ರಮಾಣದ ಐಶ್ವರ್ಯದ ಲೂಟಿ ಸಂಗ್ರಹವಾಗಿತ್ತು. ತಲೆ ಬೋಳಿಸಿದ ಬೌದ್ಧ ಸನ್ಯಾಸಿಗಳ ತಲೆಬುರುಡೆಗಳು ಅದೆಷ್ಟು ರಾಶಿರಾಶಿ ಬಿದ್ದಿದ್ದುವೆಂದರೆ, ವಿಶ್ವವಿದ್ಯಾನಿಲಯಗಳ ಗ್ರಂಥಾಲಯಗಳಲ್ಲಿದ್ದ ಪುಸ್ತಕಗಳಲ್ಲಿ ಏನಿದೆ ಎಂದು ಓದಿ ಹೇಳುವ ಒಬ್ಬನೇ ಒಬ್ಬ ಮನುಷ್ಯನೂ ಸಿಕ್ಕುತ್ತಿರಲಿಲ್ಲ, ಆ ರೀತಿಯಲ್ಲಿ ಬೌದ್ಧ ಸನ್ಯಾಸಿಗಳ ಮೂಲೋತ್ಪಾಟನೆ ಮಾಡಲಾಗಿತ್ತು….”, “…. (ಮುಸ್ಲಿಂ ಇತಿಹಾಸಕಾರರ ನುಡಿಗಳಲ್ಲಿ) ಅಲ್ಲಿ ಏನಿತ್ತು ಎಂದಾಗ ಅದು ಬೌದ್ಧ ವಿಹಾರ ಮತ್ತು ಬೌದ್ಧ ವಿಶ್ವವಿದ್ಯಾಲಯ ಇದ್ದ ದೊಡ್ಡ ನಗರದ ಕೋಟೆಯ ಒಳಭಾಗ ಎಂಬುದು ತಿಳಿಯಿತು….” “… ಹಾಗಿತ್ತು ಮುಸ್ಲಿಂ ಆಕ್ರಮಣಕಾರಿಗಳು ಬೌದ್ಧ ಸನ್ಯಾಸಿಗಳ ಮೇಲೆ ನಡೆಸಿದ ದೌರ್ಜನ್ಯ, ಹಿಂಸೆ, ನರಹತ್ಯೆ. ಕೊಡಲಿಯ ಏಟು ಮೂಲಕ್ಕೇ ಬಿದ್ದಿತ್ತು. ಹೀಗೆ ಬೌದ್ಧ ಸನ್ಯಾಸಿಗಳನ್ನು ಪೂರ್ಣವಾಗಿ ಕೊಂದುಹಾಕುವುದರ ಮೂಲಕ ಇಸ್ಲಾಂ ಮತವು ಬೌದ್ಧಮತವನ್ನೇ ನಾಶಮಾಡಿಬಿಟ್ಟಿತು. ಭಾರತದಲ್ಲಿ ಬೌದ್ಧಮತ ನೆಲಸಮವಾಗಲು, ನಿಶ್ಶೇಷವಾಗಲು ಈ ಮಹಾನ್ ದುರಂತವೇ ಕಾರಣ….”
ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿರುವ “ಡಾ|| ಬಾಬಾಸಾಹೇಬ್ ಅಂಬೇಡ್ಕರ್: ಲೇಖನಗಳು ಮತ್ತು ಭಾಷಣಗಳು – ಸಂಪುಟ 3 – “ಬೌದ್ಧಮತದ ಪತನ ಮತ್ತು ಅವಸಾನ” (ಇಂಗ್ಲಿಷ್ ಆವೃತ್ತಿಯ ಪುಟ 229ರಿಂದ 238) ಲೇಖನದಲ್ಲಿ ಈ ವಿವರ ಓದಬಹುದು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಲೋಹಿಯಾರನ್ನೇ ಮರೆತ ಸಮಾಜವಾದಿಗಳು
ಸೀತಾರಾಮ ಗೋಯಲ್‌ರು, ಈ ಮಾರ್ಕ್ಸ್ ವಾದಿಗಳಿಗೆ ದೊಡ್ಡ ಸವಾಲನ್ನೇ ಹಾಕಿದರು. ಬೇರೆ ಮತಗಳ ಪೂಜಾಸ್ಥಾನಗಳನ್ನು ನಾಶ ಮಾಡಿ ಎಂದು ಹೇಳುವ ಒಂದೇ ಒಂದು ಹಿಂದೂ ಮೂಲಗ್ರಂಥಪಾಠ ತೋರಿಸಿ, ಎಂದರು. ಆದರೆ, ಹಾಗೆ ನಾಶ ಮಾಡಲು ಬೈಬಲ್ ಆಜ್ಞಾಪಿಸುತ್ತದೆ. ಇಸ್ಲಾಮಿಗೆ ಸಂಬಂಧಿಸಿದ ಮತಗ್ರಂಥಗಳಲ್ಲಿ, ಬೇರೆ ಮತಗಳ ಪೂಜಾಮಂದಿರಗಳನ್ನು ನಾಶಪಡಿಸಿ ಎನ್ನುವ ಕಂತೆ ಕಂತೆ ಪಠ್ಯವೇ ಇದೆ.
ಗೋಯಲ್‌ರು ಇನ್ನೂ ಒಂದು ಸವಾಲು ಎಸೆದರು. ಬೇರೆ ಮತಗಳ ಪೂಜಾಸ್ಥಾನಗಳನ್ನು ನಾಶ ಮಾಡಿದ ಒಬ್ಬನೇ ಒಬ್ಬನಿಗೆ, ಹಿಂದೂಗಳು ಗೌರವಿಸಿದ – ಸನ್ಮಾನಿಸಿದ ಉದಾಹರಣೆ ಕೊಡಿ, ಎಂದರು. ಅದೇ ನೋಡಿ, ಹಾಗೆ ನಾಶಮಾಡಿದ ಮುಸ್ಲಿಂ ಆಕ್ರಮಣಕಾರಿಗಳನ್ನು, ಸುಲ್ತಾನರನ್ನು ವೈಭವೀಕರಿಸಿದ ಗೌರವಿಸಿದ ಇಸ್ಲಾಮೀ ಇತಿಹಾಸಕಾರರನ್ನು ಮತ್ತು ಅಂತಹ ವಿಚಾರ-ಸಿದ್ಧಾಂತಗಳನ್ನು ಧಂಡಿಯಾಗಿ ನೋಡಬಹುದು. ಗೋಯಲ್‌ರ ಸವಾಲುಗಳಿಗೆ, ಕಮ್ಯೂನಿಸ್ಟರ ದುರಹಂಕಾರದ – ಬೇಜವಾಬ್ದಾರಿಯ ಮೌನವೇ ಉತ್ತರವಾಗಿತ್ತು.
ನಮ್ಮ ಭಾರತೀಯ ಪರಂಪರೆಯಲ್ಲಿ ಜೈನ, ವೈದಿಕ, ಬೌದ್ಧ, ಚಾರ್ವಾಕ, ಶೈವ ಮುಂತಾದ ವಿಭಿನ್ನ ಶಾಖೆಗಳ ನಡುವೆ ಸಶಸ್ತ್ರ ಸಂಘರ್ಷ ಎಂದೂ ಇರಲಿಲ್ಲ. ಇದ್ದುದು ಚರ್ಚೆ, ಮೀಮಾಂಸೆ, ವಾದ -ವಿವಾದಗಳು ಮಾತ್ರವೇ.
1993ರ ಆವೃತ್ತಿಯ ಸೀತಾರಾಮ ಗೋಯಲ್‌ರ “ಹಿಂದೂ ಟೆಂಪಲ್ಸ್: ವಾಟ್ ಹ್ಯಾಪ್‌ನ್‌ಡ್ ಟು ದೆಮ್: ದಿ ಇಸ್ಲಾಮಿಕ್ ಎವಿಡೆನ್ಸ್” ಗ್ರಂಥದ ಅನುಬಂಧ 4ರಲ್ಲಿ, ಈ ಕುರಿತ ಸಂವಾದದ ವಿವರಗಳನ್ನು ನೀಡಲಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ದುರದೃಷ್ಟವಶಾತ್ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಯಿತು!
ಅಂಕಣ
Raja Marga Column : ನಿಮ್ಮ ಮಕ್ಕಳನ್ನು ಸೂಪರ್ ಹೀರೊ ಮಾಡಲು ಹೋಗ್ಬೇಡಿ; ರಿಯಾಲಿಟಿ ಶೋಗಳಿಗೆ ಬೇಕು ಬ್ರೇಕ್!
Raja Marga Column : ಟಿವಿ ವಾಹಿನಿಗಳ ಮಕ್ಕಳ ರಿಯಾಲಿಟಿ ಶೋಗಳಿಗೆ ಸ್ವಲ್ಪ ಬ್ರೇಕ್ ಬೇಕಿದೆ! ಯಾಕೆಂದರೆ ಅವು ಮಕ್ಕಳ ಬಾಲ್ಯವನ್ನು ಕಸಿಯುತ್ತಿವೆ. ದುಡ್ಡಿನ ದಂಧೆಯಾಗುತ್ತಿವೆ. ಈ ಬಗ್ಗೆ ಎಚ್ಚರವಿರಲಿ.
ಪ್ರಣವ್ ಧನವಾಡೇ : ಈ ಹೆಸರನ್ನು ಎಲ್ಲೋ ಕೇಳಿದ ನೆನಪು ನಿಮಗಿದೆಯಾ?
ಹೌದು! 2016ರಲ್ಲಿ ಮುಂಬೈಯ ಈ 16 ವರ್ಷದ ಹುಡುಗ (Pranav Dhanawade) ಒಂದು ಕ್ಲಾಸ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಬರೋಬ್ಬರಿ 1000+ ರನ್ ಬಾರಿಸಿ ಮಿಂಚಿದ್ದ! ಅವನಿಗೆ ಆ ದಿನಗಳಲ್ಲಿ ಜಾಗತಿಕ ಮಟ್ಟದ ಪ್ರಚಾರ ಸಿಕ್ಕಿತ್ತು. ಸಚಿನ್ ತೆಂಡುಲ್ಕರ್ (Sachin Tendulkar) ಜೊತೆಗೆ ಆತನ ಭರ್ಜರಿ ಹೋಲಿಕೆಯು ಕೂಡ ನಡೆಯಿತು.ನೂರಾರು ಸನ್ಮಾನಗಳು ಮತ್ತು ನಗದು ಬಹುಮಾನಗಳು ಆತನಿಗೆ ದೊರೆತವು!
ಆದರೆ ಅವನು ಅದೇ ವೇಗದಲ್ಲಿ ಮುಂದೆ ಹೋಗಿರುತ್ತಿದ್ದರೆ ಅವನಿಗೆ ಈಗ 23 ವರ್ಷ ಆಗಿರಬೇಕಿತ್ತು! ಅವನು ಕನಿಷ್ಠ ಪಕ್ಷ ರಣಜಿ ಪಂದ್ಯ ಆದರೂ ಆಡಬೇಕಿತ್ತು! ಆದರೆ ಅವನು ಈಗ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎನ್ನುವುದು ನಮಗೆ ಯಾರಿಗೂ ಗೊತ್ತಿಲ್ಲ! (Raja Marga Column)
ನಮ್ಮ ಹೆಚ್ಚಿನ ಟಿವಿ ರಿಯಾಲಿಟಿ ಶೋ (Reality Show) ಹೀರೋಗಳ ಕಥೆ ಕೂಡ ಹೀಗೆಯೇ ಇದೆ!
ಖಾಸಗಿ ಟಿವಿಯ ವಾಹಿನಿಗಳಲ್ಲಿ (Private TV Channels) ಇಂದು ಪ್ರಸಾರ ಆಗುತ್ತಿರುವ ನೂರಾರು ರಿಯಾಲಿಟಿ ಶೋಗಳು ಮತ್ತು ಸ್ಪರ್ಧೆಗಳು ಹೆಚ್ಚು ಪ್ರಚಾರದಲ್ಲಿವೆ. ಅಂತ ಹಲವು ಟಿವಿ ಶೋಗಳು ಹಿಂದೆ ಕೂಡ ನಡೆದಿವೆ. ಅದರ ಎಲ್ಲ ವಿಜೇತರ ಪ್ರತಿಭೆಯ ಮೇಲೆ ಗೌರವ ಇರಿಸಿಕೊಂಡು ನಾನು ಕೇಳುವ ಒಂದೇ ಪ್ರಶ್ನೆ — ಅದರ ಸಾವಿರಾರು ವಿಜೇತರು ಮುಂದೆ ಎಲ್ಲಿಗೆ ಹೋಗುತ್ತಾರೆ? ಅವರ ಅನನ್ಯ ಪ್ರತಿಭೆಗಳನ್ನು ಅವರು ಎಷ್ಟು ಬೆಳೆಸಿದ್ದಾರೆ? ಅದರಿಂದ ನಾಡಿನ ಸಂಸ್ಕೃತಿಗೆ ಎಷ್ಟು ಲಾಭ ಆಗಿದೆ?
ಶಾಲಾ ಮಟ್ಟದಲ್ಲಿ ನೂರಾರು ಸಾಂಸ್ಕೃತಿಕ ಸ್ಪರ್ಧೆಗಳು, ಪ್ರತಿಭಾ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವಿಜೇತರ ಘೋಷಣೆ ಆಗುತ್ತದೆ. ಅದರಲ್ಲಿ ಎಷ್ಟು ಜನರು ಮುಂದೆ ಅವರ ಪ್ರತಿಭೆಯನ್ನು ತಮ್ಮ ಹೊಟ್ಟೆಪಾಡಾಗಿ ಮಾಡಿಕೊಳ್ಳುತ್ತಾರೆ? ಎಷ್ಟು ಮಂದಿ ತಮ್ಮ ಕಲೆಯನ್ನು ಪ್ರೀತಿಸುತ್ತಾರೆ? ತಮ್ಮ ಕಲೆಯಿಂದ ಸಮಾಜವನ್ನು ಬೆಳಗುತ್ತಾರೆ? ಕನಿಷ್ಠ ಪಕ್ಷ ಆತ್ಮ ಸಂತೋಷಕ್ಕಾಗಿ ಆದರೂ ಆ ಕಲೆಯನ್ನು ಮುಂದೆ ಕಲಿಯುತ್ತಾರಾ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ನಮಗೆ ಹಲವು ಕಡೆ ನಿರಾಸೆಯೇ ಆಗುತ್ತದೆ ಮತ್ತು ಕಹಿ ಸತ್ಯಗಳು ಗೋಚರ ಆಗುತ್ತವೆ.
ಹಾಗಾದರೆ ಟಿವಿ ವಾಹಿನಿಗಳಿಂದ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಂದ ಪ್ರತಿಭಾ ಶೋಧ ಆಗ್ತಾ ಇಲ್ಲವೇ ಎನ್ನುವ ಪ್ರಶ್ನೆ ನೀವು ಕೇಳಬಹುದು. ಖಂಡಿತ ಆಗುತ್ತಿದೆ! ಆದರೆ ಅದರ ಅಡ್ಡ ಪರಿಣಾಮಗಳ ಬಗ್ಗೆ ಇದುವರೆಗೆ ಯಾರೂ ಯೋಚನೆ ಮಾಡಿದ ಹಾಗಿಲ್ಲ.
ಉದಾಹರಣೆಗೆ ಇಂದು ಬಾಲಿವುಡನ ಹಿನ್ನೆಲೆ ಗಾಯನ ಲೋಕದ ಸೂಪರ್ ಸ್ಟಾರ್‌ಗಳಾದ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಇವರೆಲ್ಲರೂ ಬೇರೆ ಬೇರೆ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದವರು. ಕನ್ನಡದಲ್ಲಿಯೂ ಅಂತವರು ತುಂಬಾ ಮಂದಿ ಇದ್ದಾರೆ. ಆದರೆ ಅವರಲ್ಲಿ ಹೆಚ್ಚಿನ ಸ್ಟಾರ್‌ಗಳು ಒಳ್ಳೆಯ ನಿರ್ಣಾಯಕರ ಮೂಲಕ ಆಯ್ಕೆ ಆದವರು. ಇನ್ನೂ ವಿವರವಾಗಿ ಹೇಳಬೇಕೆಂದರೆ ಸುನಿಧಿ ಚೌಹಾಣ್, ಶ್ರೇಯಾ ಘೋಷಾಲ್, ಸೋನು ನಿಗಮ್ ಆಯ್ಕೆ ಆಗುವಾಗ ಲತಾ ಮಂಗೇಶ್ಕರ್ ಅಂತವರು ನಿರ್ಣಾಯಕರಾಗಿದ್ದರು!
ಪ್ರತಿಭೆಗಳಿಗೆ ಆಗ ಒಂದಿಷ್ಟೂ ಅನ್ಯಾಯ ಆಗುತ್ತಾ ಇರಲಿಲ್ಲ.
ಅಪಾಯಕಾರಿ ಆದ ಇಂಟರ್ನೆಟ್ ವೋಟಿಂಗ್!
ಆದರೆ ಮುಂದೆ ಯಾವಾಗ ಇಂಟರ್ನೆಟ್ ಮೆಸೇಜ್‌ಗಳ ಮೂಲಕ ವೋಟಿಂಗ್ ಆರಂಭ ಆಯಿತೋ ಅಲ್ಲಿಗೆ ದುಡ್ಡು, ಪ್ರಭಾವ ಇದ್ದವರು ವೋಟುಗಳನ್ನು ಖರೀದಿ ಮಾಡುವುದು ಆರಂಭ ಆಯಿತು. ನಮಗೆ ವೋಟ್ ಮಾಡಿ ಎಂದು ಕೈ ಮುಗಿದು ಭಿಕ್ಷೆ ಬೇಡುವ ದೈನ್ಯತೆಯು ಆ ಪ್ರತಿಭೆಗಳಿಗೆ ಬರಬಾರದಿತ್ತು.
ಕನ್ನಡದಲ್ಲಿ ಕೂಡ ಆರಂಭದ ಎದೆ ತುಂಬಿ ಹಾಡುವೆನು, ಕಾಮಿಡಿ ಕಿಲಾಡಿ, ಮಜಾ ಟಾಕೀಸ್, ಡ್ರಾಮಾ ಜೂನಿಯರ್ ರಿಯಾಲಿಟಿ ಶೋನಲ್ಲಿ ಗೆದ್ದವರು ಮುಂದೆ ನೂರಾರು ಅವಕಾಶಗಳನ್ನು ಪಡೆದರು. ಅವರ ಪ್ರತಿಭೆಯನ್ನು ನಾಡು ಗುರುತಿಸಿ ಬೆಳೆಸಿತು.
ಆದರೆ ಇಲ್ಲಿ ಕೂಡ ಇತ್ತೀಚಿನ ವರ್ಷಗಳಲ್ಲಿ ಯಾವಾಗ ಇಂಟರ್ನೆಟ್ ವೋಟಿಂಗ್ ಆರಂಭ ಆಯಿತೋ ಅಲ್ಲಿಂದ ವೋಟ್ ಖರೀದಿಗಳು, ಪ್ರಭಾವಗಳು ಆರಂಭ ಆದವು. ಆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತು ಕೊಡುವ ಹಲವು ಶಾಲೆಗಳು ಮಹಾನಗರಗಳಲ್ಲಿ ನಾಯಿಕೊಡೆಗಳ ಹಾಗೆ ಆರಂಭ ಆದವು. ಹೆತ್ತವರು ತಮ್ಮ ಮಕ್ಕಳನ್ನು ಸೂಪರ್ ಹೀರೋ ಮಾಡುವ ಜಿದ್ದಿಗೆ ಬಿದ್ದು ಅಂತಹ ಶಾಲೆಗಳಿಗೆ ದುಡ್ಡು ಸುರಿಯಲು ತೊಡಗಿದರು.
ಆದರೆ ಇಲ್ಲಿ ಕೂಡ ಬಡವರ ಮಕ್ಕಳು, ಗ್ರಾಮಾಂತರ ಭಾಗದ ಪ್ರತಿಭೆಗಳು ನಿಜವಾಗಿಯೂ ಅವಕಾಶಗಳಿಂದ ವಂಚಿತರಾದರು!
ಒಂದು ಸಮೀಕ್ಷೆ ಮಾಡಿ ನೋಡಿ. ಇತ್ತೀಚಿನ ರಿಯಾಲಿಟಿ ಶೋಗಳಲ್ಲಿ ಗೆದ್ದವರಲ್ಲಿ ಎಷ್ಟು ಮಂದಿ ಹಳ್ಳಿಯ ಮಕ್ಕಳು ಇದ್ದಾರೆ? ಎಷ್ಟು ಮಂದಿ ಬಡವರ ಮಕ್ಕಳಿದ್ದಾರೆ? ಎಷ್ಟು ಮಂದಿ ಕನ್ನಡ ಮಾಧ್ಯಮದ ಮಕ್ಕಳಿದ್ದಾರೆ?
ಖಂಡಿತ ಇದ್ದಾರೆ. ಆದರೆ ಅವರ ಪ್ರಮಾಣ ತುಂಬಾ ಕಡಿಮೆ ಇದೆ!
ಜಗತ್ತಿನ ಪ್ರತೀ ಮಗುವೂ ಪ್ರತಿಭಾವಂತ ಮಗುವೇ!
ಈ ಜಗತ್ತಿನ ಪ್ರತೀ ಮಕ್ಕಳೂ ಪ್ರತಿಭಾವಂತರೇ ಆಗಿದ್ದಾರೆ. ಅವರಲ್ಲಿ ಒಂದಲ್ಲ ಒಂದು ಪ್ರತಿಭೆಯನ್ನು ಲೋಡ್ ಮಾಡಿ ಭಗವಂತ ಈ ಜಗತ್ತಿಗೆ ಅವರನ್ನು ಕಳುಹಿಸಿರುತ್ತಾನೆ. ನೀವು ಯಾವ ಮಕ್ಕಳನ್ನು ವಿಶೇಷ ಚೇತನ ಮಕ್ಕಳು ಎಂದು ಕರೆಯುತ್ತೀರೋ ಅವರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯ ಪೋಷಣೆಗೆ ವೇದಿಕೆ ಬೇಕು. ತರಬೇತು ಬೇಕು. ಹೆತ್ತವರ, ಶಿಕ್ಷಕರ, ಸಮಾಜದ ಪ್ರೋತ್ಸಾಹ ಬೇಕು.
ಅವರ ಶಾಪ ಆದರೆ ನಮ್ಮ ಮಕ್ಕಳು ಎಷ್ಟು ಪ್ರತಿಭೆ ಹೊಂದಿದ್ದಾರೆ ಎಂದರೆ ಅವರು ಸ್ಪರ್ಧೆಯ ಸೋಂಕಿಲ್ಲದೆ ಕೂಡ ತಮ್ಮ ಅಗಾಧವಾದ ಪ್ರತಿಭೆಯನ್ನು ಬೆಳೆಸುವ ಸಾಮರ್ಥ್ಯವನ್ನು ಖಂಡಿತವಾಗಿ ಹೊಂದಿರುತ್ತಾರೆ! ಅವರನ್ನು ರೇಸಿನ ಕುದುರೆ ಮಾಡಿ ರೇಸಿಗೆ ನಿಲ್ಲಿಸುವ ಅಗತ್ಯ ಖಂಡಿತ ಇಲ್ಲ!
ಸ್ಪರ್ಧೆಗಳ ಬಗ್ಗೆ ಸಾಹಿತಿ ಶಿವರಾಮ ಕಾರಂತರು ಹೇಳಿದ್ದೇನು?
ಖ್ಯಾತ ಸಾಹಿತಿ ಮತ್ತು ಶಿಕ್ಷಣ ತಜ್ಞರಾದ ಕೋಟ ಶಿವರಾಮ ಕಾರಂತರು ಚಿಕ್ಕ ಮಕ್ಕಳನ್ನು ಸ್ಪರ್ಧೆಗೆ ನಿಲ್ಲಿಸಬೇಡಿ ಎಂದು ಹೇಳುತ್ತಿದ್ದರು. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನು ಕೂಡ ಮಾಡಬಾರದು ಎನ್ನುವುದು ಅವರ ಖಚಿತ ಅಭಿಪ್ರಾಯ. ಸ್ಪರ್ಧೆ ಮಾಡಿದರೂ ಎಲ್ಲ ಮಕ್ಕಳಿಗೂ ಸಮಾನ ಬಹುಮಾನ ಕೊಡಿ ಎನ್ನುತ್ತಿದ್ದರು ಕಾರಂತರು.
ಆದರೆ ಇಂದು ಆಗುತ್ತಿರುವುದೆನು?
ಆದರೆ ಸ್ಪರ್ಧೆಯ ಗೆಲುವನ್ನು ತಮ್ಮ ಪ್ರತಿಷ್ಠೆಯನ್ನಾಗಿ ಮಾಡಿಕೊಂಡ ಶಿಕ್ಷಕರು ಮತ್ತು ಹೆತ್ತವರು ಮಕ್ಕಳನ್ನು ರೇಸಿನ ಕುದುರೆ ಮಾಡಿ ಈಗಾಗಲೇ ನಿಲ್ಲಿಸಿ ಆಗಿದೆ! ಈ ಸ್ಪರ್ಧೆಯಲ್ಲಿ ಸೋತವರ ಕಣ್ಣೀರನ್ನು ಮತ್ತು ಗೆದ್ದು ಬೀಗಿದವರ ಆನಂದ ಬಾಷ್ಪವನ್ನು ತಮ್ಮ ಟಿ ಆರ್ ಪಿ ಸರಕನ್ನಾಗಿ ಮಾಡಿಕೊಂಡ ಟಿವಿ ವಾಹಿನಿಗಳಿಗೆ ಈ ಸ್ಪರ್ಧೆಗಳು ಬೇಕೇ ಬೇಕು! ಮಕ್ಕಳ ಗೆಲುವನ್ನು ತಮ್ಮ ಪ್ರತಿಷ್ಠೆ ಎಂದು ಭಾವಿಸುವ ಹೆತ್ತವರು ಇರುವವರೆಗೆ ಈ ಮಕ್ಕಳ ರಿಯಾಲಿಟಿ ಶೋಗಳು ಖಂಡಿತ ನಿಲ್ಲುವುದಿಲ್ಲ. ಈ ಸ್ಪರ್ಧೆಗಳು ಮೆಗಾ ಮನರಂಜನೆಯ ಭಾಗ ಎಂದು ಪರಿಗಣಿಸುವ ವೀಕ್ಷಕರು ಕೂಡ ರಿಯಾಲಿಟಿ ಶೋ ಬೇಕು ಅಂತಾರೆ!
ತಮ್ಮ ಮಕ್ಕಳನ್ನು ಸೂಪರ್ ಹೀರೋ ಅಥವ ಸೂಪರ್ ಹೀರೋಯಿನ್ ಮಾಡಲು ಹೊರಟ ಹೆತ್ತವರು ಮಕ್ಕಳ ಬಾಲ್ಯವನ್ನು ಬರಿದು ಮಾಡುತ್ತಿದ್ದಾರೆ. ತಮ್ಮ ಮಕ್ಕಳು ಒಮ್ಮೆ ಟಿವಿಯಲ್ಲಿ ಕಂಡರೆ ಸಾಕು ಎಂದು ತೆವಲಿಗೆ ಪೋಷಕರು ಬಿದ್ದಿರುವ ಈ ದಿನಗಳಲ್ಲಿ ಅವರು ಬುದ್ಧಿ ಕಲಿಯುವುದು ಯಾವಾಗ?
ಇಲ್ಲೊಬ್ಬರು ತಾಯಿ ತನ್ನ ಎರಡನೇ ಕ್ಲಾಸಿನ ಮುಗ್ಧವಾದ ಮಗಳನ್ನು ದಿನವೂ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಲಘು ಸಂಗೀತ, ಕರಾಟೆ, ಚೆಸ್, ಕ್ರಿಕೆಟ್, ಯಕ್ಷಗಾನ, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್ ಕೋಚಿಂಗ್ ಎಂದೆಲ್ಲ ಉಸಿರು ಬಿಗಿ ಹಿಡಿದು ಓಡುತ್ತಿರುವಾಗ ಆ ಮುಗ್ಧ ಮಗುವಿನ ಮೇಲಾಗುತ್ತಿರುವ ಒತ್ತಡವನ್ನು ನನಗೆ ಊಹೆ ಮಾಡಲು ಕಷ್ಟ ಆಗುತ್ತಾ ಇದೆ! ಯಾವುದೇ ಕಲಿಕೆಯು ಮಕ್ಕಳಿಗೆ ಹೊರೆ ಆಗಬಾರದು ಎಂಬ ಸಾಮಾನ್ಯ ಪ್ರಜ್ಞೆಯು ಅಂತಹ ಹೆತ್ತವರಿಗೆ ಬೇಡವಾ?
ಇದನ್ನೂ ಓದಿ: Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ
ಡ್ಯಾಡಿ ನಂಬರ್ ಒನ್, ಮಮ್ಮಿ ನಂಬರ್ ಒನ್ ಮೊದಲಾದ ನಾನಸೆನ್ಸ್ ಸ್ಪರ್ಧೆಯ ಮೂಲಕ ಅಪ್ಪ, ಅಮ್ಮನ ಪ್ರೀತಿಯು ಅಳೆಯಲ್ಪಡಬೇಕಾ?
ನನ್ನ ಸಲಹೆ ಏನೆಂದರೆ ಮುಂದಿನ ಕೆಲವು ವರ್ಷಗಳ ಕಾಲ ಎಲ್ಲ ಟಿವಿ ವಾಹಿನಿಗಳ ಸ್ಪರ್ಧಾತ್ಮಕವಾದ ರಿಯಾಲಿಟಿ ಶೋಗಳನ್ನು ನಿಲ್ಲಿಸುವುದು ಒಳ್ಳೆಯದು! ಅಥವಾ ಅವುಗಳಿಗೆ ಒಂದು ಸಣ್ಣ ಬ್ರೇಕ್ ಆದರೂ ಬೇಕು. ವರ್ಷಾನುಗಟ್ಟಲೆ ಈ ಸ್ಪರ್ಧೆಗಳು ಮುಂದುವರಿದರೆ ಆ ಮಕ್ಕಳ ಶಿಕ್ಷಣದ ಮೇಲೆ ಆಗುವ ಕರಾಳತೆಯ ಬಗ್ಗೆ ಕೂಡ ನಾವು ಯೋಚನೆ ಮಾಡಬೇಕು ಅಲ್ಲವೇ?
ರಿಯಾಲಿಟಿ ಶೋಗಳ ಹಂಗಿಲ್ಲದೆ ಇಂದು ಸ್ಟಾರ್ ಆಗಿ ಮಿಂಚುತ್ತಿರುವ ನೂರಾರು ಪ್ರತಿಭೆಗಳು ನನ್ನ ಪಟ್ಟಿಯಲ್ಲಿ ಇವೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು.
ಅಂಕಣ
ವಿಧಾನಸೌಧ ರೌಂಡ್ಸ್: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
ವಿಧಾನಸೌಧ ರೌಂಡ್ಸ್: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾತುಕತೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರಿಂದ ಯಾವ ಪಕ್ಷಕ್ಕೆ ಲಾಭ? ಯಾವ ಪಕ್ಷಕ್ಕೆ ನಷ್ಟ ಎಂಬ ಚರ್ಚೆ ಶುರುವಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೂರು ಪಕ್ಷಗಳಲ್ಲೂ ಸಂಘಟನೆ ಚುರುಕಾಗಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಗೆಲ್ಲುವ ಅನಿವಾರ್ಯತೆ ಇದೆ. ಇತ್ತ ಬಿಜೆಪಿಯು ಜೆಡಿಎಸ್ ಜತೆ ಸಖ್ಯ ಬೆಳೆಸಿ ಕಾಂಗ್ರೆಸ್‌ಗೆ ತಿರುಗೇಟು ಕೊಡಲು ದೆಹಲಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಆದರೆ ಈ ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರನ್ನು ದೂರವಿಟ್ಟಿದ್ದು ಸ್ಥಳೀಯ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ. ಇನ್ನು ಈ ಮೈತ್ರಿ ಮೂಲಕ ಸುಮಲತಾ ಅವರನ್ನು ಮಂಡ್ಯದಿಂದ ಎತ್ತಂಗಡಿ ಮಾಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಬಹುದು. ಸುಮಲತಾಗೆ ಕ್ಷೇತ್ರ ಹುಡುಕಿಕೊಡುವ ಜವಾಬ್ದಾರಿ ರಾಜ್ಯ ಬಿಜೆಪಿ ನಾಯಕರ ಹೆಗಲಿಗೇರಲಿದೆ. ಈ ನಡುವೆ, ಬೆಂಗಳೂರು ದಕ್ಷಿಣದಿಂದ ಈ ಬಾರಿ ತೇಜಸ್ವಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಈ ನಡುವೆ, ವಲಸಿಗ ಬಿಜೆಪಿ ಶಾಸಕರ ನಡೆಯನ್ನು ಎಲ್ಲರೂ ಕಾತುರದಿಂದ ನೋಡಲಾರಂಭಿಸಿದ್ದಾರೆ.
ರಾಜಕೀಯ ಮೈತ್ರಿ ಮದುವೆ ಫಿಕ್ಸ್!
ಗ್ಯಾರಂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಯುದ್ಧ ಮಾಡಲು ನಿರ್ಧಾರ ಮಾಡಿವೆ. ಹೀಗಾಗಿ ಕಳೆದ ವಾರ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಸುದೀರ್ಘ ಚರ್ಚೆ ನಡೆಸಿ ಬಿಜೆಪಿ ವರಿಷ್ಠರ ಮುಂದೆ ಮೈತ್ರಿ ಸೂತ್ರ ಇಟ್ಟಿದ್ದಾರೆ. ದೊಡ್ಡ ಗೌಡರ ಕುಟುಂಬ ಇಟ್ಟ ಬಹುದೊಡ್ಡ ಬೇಡಿಕೆ ಈಡೇರಿಕೆ ಕಷ್ಟಸಾಧ್ಯ ಎನ್ನುವುದು ಮನವರಿಕೆ ಆಗಿದೆ. ಬಿಜೆಪಿ ನಾಯಕರುಗಳ ಪ್ರಕಾರ ಜೆಡಿಎಸ್ ಯೋಗ್ಯತೆಗೆ ಎರಡು ಲೋಕಸಭಾ ಕ್ಷೇತ್ರಗಳು ಕೊಟ್ಟರೆ ಅದೇ ಹೆಚ್ಚು. ಒಂದು ಸ್ಥಾನ ಹೆಚ್ಚುವರಿ ಕೊಟ್ಟರೆ ಅದು ಬೋನಸ್. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಬೇಕು ಅನ್ನೋದು ದೊಡ್ಡ ಗೌಡರ ಪ್ಲಾನ್. ಹೀಗಾಗಿ ಗೋವಾ ಸಿಎಂ ಮುಂದೆ ಐದು ಲೋಕಸಭಾ ಕ್ಷೇತ್ರಗಳು, ಎರಡು ಪರಿಷತ್ ಹಾಗೂ ಪರಿಷತ್‌ನಲ್ಲಿ ವಿಪಕ್ಷ ನಾಯಕ ಸ್ಥಾನ, ಒಂದು ರಾಜ್ಯಸಭೆ ಸ್ಥಾನ, ಜತೆಗೆ ಕೇಂದ್ರದಲ್ಲಿ ಮಂತ್ರಿಗಿರಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿದ ಬಿಜೆಪಿ ವರಿಷ್ಠರು ಮೈತ್ರಿ ಓಕೆ, ಆದ್ರೆ ಸೀಟ್ ಹಂಚಿಕೆ ವಿಚಾರವನ್ನ ನಿಧಾನವಾಗಿ ಮಾಡೋಣ ಎಂದು ಹೇಳಿ ಕಳಿಸಿದ್ದಾರೆ.
ಟೀಮ್ ಚೇಂಜ್ ಮಾಡಿದ ವಲಸಿಗ ಬಿಜೆಪಿ ಶಾಸಕರು
ರಾಜ್ಯ ಬಿಜೆಪಿಯಲ್ಲಿ ವಲಸಿಗ ಶಾಸಕರನ್ನು ಇಂದಿಗೂ ಅನುಮಾನದಿಂದಲೇ ನೋಡಲಾಗುತ್ತಿದೆ. ಕಾರಣ ಅವರು ಅಂದು ಸಮ್ಮಿಶ್ರ ಸರ್ಕಾರ ಬೀಳಿಸಿ ಬಂದಿದ್ದು ಸಿದ್ಧಾಂತ್ಕಕ್ಕೋ ಅಭಿವೃದ್ಧಿಗಾಗಿಯೋ ಅಲ್ಲ, ಹಣಕ್ಕಾಗಿ ಅನ್ನೋ ಅಭಿಪ್ರಾಯ ರಾಜ್ಯ ಬಿಜೆಪಿಯಲ್ಲಿ ಇದೆ. ಅದೇ ರೀತಿ ಇವರು ಸಹ ಹಲವು ವಿಚಾರಗಳಲ್ಲಿ ಬಿಜೆಪಿ ನಾಯಕರಿಗೆ ಅನುಮಾನ ಬರುವಂತೆ ನಡೆದುಕೊಂಡಿದ್ದಾರೆ. ಯಡಿಯೂರಪ್ಪ ಇದ್ದಾಗ ಅವರಿಗೆ ಜೈ ಅಂದ್ರು. ಬಳಿಕ ಬೊಮ್ಮಾಯಿ ಸಮಯದಲ್ಲಿ ಬೊಮ್ಮಾಯಿ ಸುತ್ತಲೂ ಇದ್ದಿದ್ದು ಇವರೇ. ಈಗ ಮೈತ್ರಿ ಮಾತುಕತೆ ನಡೆಯುತ್ತಿರುವಾಗ ಕುಮಾರಸ್ವಾಮಿ ಭೇಟಿ ಮಾಡಲು ಸುಧಾಕರ್ ದೆಹಲಿಗೆ ತೆರಳಿದ್ರು. ದೆಹಲಿಯಿಂದ ಎಚ್ಡಿ ಕುಮಾರಸ್ವಾಮಿ ಬೆಂಗಳೂರಿಗೆ ಎಂಟ್ರಿ ಆದ ಕ್ಷಣದಿಂದಲೂ ಮುನಿರತ್ನ ಅವರು ಎಚ್ಡಿಕೆ ಕಾರಿನೊಳಗೆ ಜಿಗಿದಿದ್ದಾರೆ! ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಪಡೆಯಲು ಬಿಜೆಪಿಗಿಂತಲೂ ಮೈತ್ರಿ ನಾಯಕರ ಬೆಂಬಲ ಸಂಪರ್ಕ ಮಾಡ್ತಿರುವುದು ಮೂಲ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಪ್ರಾಣಪಕ್ಷಿ ಹಾರಿ ಹೋಗ್ತಿದ್ದ ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ
ಸದ್ಯ ಮಹಿಳೆ ತಲೆ ಮೇಲೆ ಇರೋ ತೆನೆ ದಿನೇದಿನೇ ಒಣಗಿ ಇನ್ನೇನು ಸುಟ್ಟು ಹೋಗುವ ಹಂತದಲ್ಲಿದ್ದಾಗ ಬಿಜೆಪಿ ಸಂಜೀವಿನಿಯಾಗಿ ಪರಿಣಮಿಸಿದೆ. ಕೇವಲ 19 ಸ್ಥಾನಗಳನ್ನ ಗೆಲ್ಲಲಷ್ಟೇ ಸಾಧ್ಯವಾದ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕು ಸ್ಥಾನ ಬಿಡಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪರಿಷತ್‌ನಲ್ಲೂ ಜೆಡಿಎಸ್ ಗೆ ಅವಕಾಶ ಸಿಗಬಹುದು. ಹೀಗಾಗಿ ಈ ಆರು ವರ್ಷ ಪರಿಷತ್‌ನಲ್ಲಿ ಒಂದು ಸ್ಥಾನ ಗೆಲ್ಲಲು ಆಗದ ಜೆಡಿಎಸ್ ಗೆ ಬಿಜೆಪಿ ಸ್ನೇಹ ಭಾರಿ ಲಾಭ ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ರೆ ಬಿಜೆಪಿಗೆ ಇದರಿಂದ ನಷ್ಟ ಆದ್ರೂ ಅಚ್ಚರಿ ಇಲ್ಲ. ಯಾಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ನಾಯಕರು ಕೈ ಮೇಲೆತ್ತಿದ್ದರೂ, ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ನಡುವೆ ಇದ್ದ ಮನಸ್ತಾಪ ಮರೆತು ವೋಟ್ ಹಾಕಿರಲಿಲ್ಲ. ಹೀಗಾಗಿ ಬಿಜೆಪಿ 25+1 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಾಂಗ್ರೆಸ್‌ಗೆ ಇಷ್ಟು ದೊಡ್ಡ ಮಟ್ಟದ ಲಾಭ ಸಿಗದಿದ್ದರೂ ಕನಿಷ್ಠ 12-15 ಸ್ಥಾನ ಗೆಲ್ಲುವ ವಾತಾವರಣವನ್ನು ಈ ಮೈತ್ರಿ ಸೃಷ್ಟಿ ಮಾಡಬಹುದು.
ಅಂಬರೀಶ್ ಬಳಿಕ ಸಿನಿಮಾದವರಿಗೆ ಮಂಡ್ಯದಲ್ಲಿ ಡಬಲ್ ಚಾನ್ಸ್ ಸಿಕ್ತಿಲ್ಲ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಿನಿಮಾದವರನ್ನ ಜನ ಎರಡನೇ ಬಾರಿ ಆರಿಸಿದ್ದಿಲ್ಲ. 2013ರ ಮಧ್ಯಂತರ ಚುನಾವಣೆಯಲ್ಲಿ ಗೆದ್ದ ನಟಿ ರಮ್ಯ ಅವರನ್ನ ಬಳಿಕ ನಡೆದ ಚುನಾವಣೆಯಲ್ಲಿ ಸೋಲಿಸಿ ಜನ ಮನೆಗೆ ಕಳುಹಿಸಿದ್ರು. ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನ ಗೆಲ್ಲಿಸಿ ಕಳುಹಿಸಿದ್ರು. ಆದ್ರೆ ಈ ಬಾರಿ ಬಿಜೆಪಿಗೆ ಹೋಗಿ ಟಿಕೆಟ್ ಪಡೆಯಬೇಕು ಅನ್ನೋ ಸುಮಲತಾ ಆಸೆ ಈಡೇರುತ್ತಿಲ್ಲ. ಈ ಬಾರಿ ಮಂಡ್ಯ ಮೈತ್ರಿಯಿಂದ ಜೆಡಿಎಸ್ ಪಾಲಾಗುವುದು ಕನ್ಫರ್ಮ್. ಹೀಗಾಗಿ ನಟಿ ಸುಮಲತಾಗೂ ಈ ಬಾರಿ ಮಂಡ್ಯದ ಜನ ಸೆಂಡ್ಆಪ್ ಕೊಡಲು ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ: ವಿಧಾನಸೌಧ ರೌಂಡ್ಸ್: ಬಯಲಾಯ್ತು ಎಲೆಕ್ಷನ್ ಟಿಕೆಟ್ ಒಳ ಆಟ; ಕಾಂಗ್ರೆಸ್‌ಗೆ ಶೀತಲಸಮರದ ಸಂಕಟ
ಬೆಂಗಳೂರು ದಕ್ಷಿಣಕ್ಕೆ ಕೈಗೆ ಅಭ್ಯರ್ಥಿ ಕೊರತೆ, ತೇಜಸ್ವಿ ಅನಂತಕುಮಾರ್‌ರನ್ನು ಆಹ್ವಾನಿಸಿದ ಡಿಕೆಶಿ
ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಸ್ಪರ್ಧೆ ಮಾಡಿದ್ದ ಕ್ಷೇತ್ರ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯಿಂದ ಯಾರನ್ನ ನಿಲ್ಲಿಸಿದರೂ ಗೆಲುವು ಖಚಿತ. ಆದರೆ ಕಳೆದ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ತೇಜಸ್ವಿ ಅನಂತಕುಮಾರ್‌ಗೆ ಅವಕಾಶ ಕೊಡದೆ, ಬಿಜೆಪಿ ವರಿಷ್ಠರು ಸಂಪ್ರದಾಯ ಮುರಿದು ಯುವ ನಾಯಕನಿಗೆ ಮಣೆ ಹಾಕಿದ್ರು. ಆದ್ರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ತೇಜಸ್ವಿ ಅನಂತಕುಮಾರ್ ಪರ ಕೈ ನಾಯಕರು ಮಾತನಾಡುತ್ತಿದ್ದಾರೆ. ಅನಂತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೆ ಶಿವಕುಮಾರ್, ನಿಮ್ಮನ್ನ ನಂಬಿದ ದೊಡ್ಡ ಕಾರ್ಯಕರ್ತರ ಗುಂಪು ಇದೆ. ಅವರನ್ನ ತಬ್ಬಲಿ ಮಾಡಬೇಡಿ. ಚುನಾವಣೆಗೆ ಧುಮುಕಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಟಿಕೆಟ್ ಕೊಡದಿದ್ರೆ ನಾವು ರೆಡಿ ಇದ್ದೇವೆ ಅನ್ನೋ ಸಂದೇಶ ರವಾನೆ ಮಾಡಿದ್ದಾರೆ!
ಅಂಕಣ
Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ
Raja Marga Column: ನೀವು ಜ್ಯೂಲಿ ಸಿನಿಮಾವನ್ನು ನೋಡಿರದಿದ್ದರೆ ಯಾವತ್ತಾದರೂ ಫ್ರೀ ಮಾಡಿಕೊಂಡು ನೋಡಿ. ಇದು ಕೇವಲ ಸಿನಿಮಾ ಅಲ್ಲ. ಆವತ್ತಿನ ಕಾಲದಲ್ಲಿ ಬಾಲಿವುಡ್‌ನ ಅಹಂಕಾರವನ್ನು ಮುರಿದ ಮೊದಲ ದಕ್ಷಿಣ ಭಾರತೀಯ ಚಿತ್ರ. ಸಿದ್ಧ ಸೂತ್ರಗಳನ್ನು ಮೀರಿದ ಸಿನಿಮಾ.
1975ರ ವರ್ಷ ಹಲವು ಕಾರಣಕ್ಕೆ ನಮ್ಮ ನೆನಪಲ್ಲಿ ಗಟ್ಟಿ ಹೆಜ್ಜೆಗುರುತು ಮೂಡಿಸಿತ್ತು. ದೇಶದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತು ಪರಿಸ್ಥಿತಿ ಘೋಷಣೆ (Emergency 1975) ಮಾಡಿದ್ದರು. ಅದೇ ವರ್ಷ ಶತಮಾನದ ಸಿನಿಮಾಗಳಾದ ಶೋಲೆ (Sholay Movie), ದೀವಾರ್ (Deewar Movie), ಧರ್ಮಾತ್ಮಾ (Dharmatma Movie), ಮಿಲಿ (Mili Movie), ಆಂಧಿ (Aandhi Movie) ಮೊದಲಾದವುಗಳು ಬಿಡುಗಡೆ ಆಗಿದ್ದವು. ಶೋಲೆ ಸಿನಿಮಾದ ‘ಮೇರೆ ಪಾಸ್ ಮಾ ಹೈ’ (Mere paas Maa hai) ಸಂಭಾಷಣೆ ಪ್ರತೀ ಒಬ್ಬರ ಬಾಯಲ್ಲಿ ಇತ್ತು. ಅದೇ ವರ್ಷ ಬಿಡುಗಡೆ ಆದ ಒಂದು ಹಿಂದಿ ಸಿನಿಮಾ ದಕ್ಷಿಣ ಭಾರತದ ಪ್ರತಿಭೆಗಳಿಂದ ಕೂಡಿದ್ದು ಆ ಕಾಲಕ್ಕೆ ಭಾರಿ ದೊಡ್ಡ ಕ್ರಾಂತಿ ಮಾಡಿತ್ತು (Raja Marga Column). ಒಂದು ರೀತಿಯಲ್ಲಿ ಉತ್ತರ ಭಾರತದ ಪಾರಮ್ಯಕ್ಕೆ (North Indian Dominance) ಸವಾಲು ಎಸೆದಿತ್ತು. ಆ ಸಿನಿಮಾವೇ ಜ್ಯೂಲಿ (Julie Cinema).
ಜ್ಯೂಲಿಯನ್ನು ಶತಮಾನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂದು ಕರೆಯಲಾಗಿತ್ತು!
1975ರ ಏಪ್ರಿಲ್ 18ರಂದು ಬಾಲಿವುಡನಲ್ಲಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಉಂಟುಮಾಡಿದ ಧಮಾಕಾ ಅದು ಅದ್ಭುತವೇ ಆಗಿತ್ತು. ಆ ಸಿನಿಮಾದ ನಾಯಕ, ನಾಯಕಿ, ಕಥೆಯನ್ನು ಬರೆದವರು, ನಿರ್ದೇಶಕರು, ನಿರ್ಮಾಪಕರು ಮತ್ತು ಹೆಚ್ಚಿನ ಸಹನಟರು ದಕ್ಷಿಣ ಭಾರತದವರೇ ಆಗಿದ್ದರು. ತಾವೇ ಶ್ರೇಷ್ಠ ಎಂಬ ಉತ್ತರ ಭಾರತದ ಧಿಮಾಕಿಗೆ ಉತ್ತರ ಕೊಟ್ಟ ಹಾಗೆ ಈ ಚಿತ್ರ ಬಂದಿತ್ತು. ಆ ಕಾಲಕ್ಕೆ ದಿಟ್ಟ ಎನಿಸುವ ಕಥೆ, ಸರಳವಾದ ನಿರೂಪಣೆ, ಲಕ್ಷ್ಮೀ (Julie Lakshmi) ಅವರ ಬೋಲ್ಡ್ ಆದ ಅಭಿನಯ, ಇವತ್ತಿಗೂ ನೆನಪಲ್ಲಿ ಉಳಿದಿರುವ ಪದ್ಯಗಳು ಆ ಸಿನಿಮಾವನ್ನು ಗೆಲ್ಲಿಸಿದವು.
ಚಟ್ಟಕ್ಕಾರಿ ಮಲಯಾಳಂ ಸಿನಿಮಾದ ರಿಮೇಕ್ ಇದು
ಮಲಯಾಳಂ ಸಾಹಿತಿ ಪರಮೇಶ್ವರ ಮೆನನ್ ಬರೆದ ಕಾದಂಬರಿ ಚಟ್ಟಕ್ಕಾರಿ (Chattakkari Movie). ಅದನ್ನು ಸಿನಿಮಾಕ್ಕೆ ಅಳವಡಿಸಿ ಮಲಯಾಳಂನಲ್ಲಿ ನಿರ್ದೇಶನ ಮಾಡಿದವರು ಕೆ.ಎಸ್ ಸೇತುಮಾಧವನ್ (KS Sethumadhavan). ಅದು ಹಿಟ್ ಆದ ನಂತರ ಅದೇ ಸಿನಿಮಾವನ್ನು ಜ್ಯೂಲಿ ಎಂಬ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಿದವರು ಕೂಡ ಅದೇ ಸೇತುಮಾಧವನ್. ಚಿತ್ರಕತೆ ಬರೆದವರು ಅಲ್ಲೂರಿ ಚಕ್ರಪಾಣಿ ಅವರು. ಚಟ್ಟಕ್ಕಾರಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ಹಿಂದೀ ಸಿನಿಮಾದಲ್ಲಿಯು ಮಿಂಚಿದರು. ಅದು ಆಕೆಯ ಮೊದಲ ಹಿಂದಿ ಸಿನಿಮಾ (Lakshmis Firs Hindi Movie) ಆಗಿತ್ತು.
ಸಿನೆಮಾ ಸೂಪರ್ ಹಿಟ್ ಆಗಲು ಕಾರಣ ಏನು?
ಲಕ್ಷ್ಮಿ ಅವರ ಮುಗ್ಧ ಮತ್ತು ಸ್ನಿಗ್ಧ ಸೌಂದರ್ಯವೇ ಸಿನಿಮಾದ ಟ್ರಂಪ್ ಕಾರ್ಡ್. ಅವರಿಗೆ ಆಗ 23 ವರ್ಷ. ಆಗಲೇ ಅವರಿಗೆ ಮದುವೆ ಆಗಿ ಮೂರು ವರ್ಷದ ಮಗಳು ಐಶ್ವರ್ಯ ಇದ್ದಳು. ಆದರೆ ಆ ಸಿನಿಮಾದಲ್ಲಿ ಲಕ್ಷ್ಮಿ ತೋರಿದ ಗ್ಲಾಮರ್ ಲುಕ್, ಭಾವ ತೀವ್ರತೆಯ ಅಭಿನಯ ವೀಕ್ಷಕರ ಮನಸಿನಲ್ಲಿ ಭಾರೀ ಇಂಪ್ಯಾಕ್ಟ್ ಮಾಡಿದ್ದವು.
ಜೂಲಿ ಸಿನಿಮಾ ಆ ಕಾಲದ ಮಡಿವಂತಿಕೆಯನ್ನು ಧಿಕ್ಕರಿಸಿ ನಿಂತಿತ್ತು!
ಒಂದು ರೀತಿಯ ಮಡಿವಂತಿಕೆಯಲ್ಲಿ ಮುಳುಗಿದ್ದ ಸಿನಿಮಾರಂಗದಲ್ಲಿ ಲಕ್ಷ್ಮಿ ಅವರ ಮಾಡರ್ನ್ ಲುಕ್, ಬೋಲ್ಡ್ ಆದ ಅಭಿನಯ ಹುಚ್ಚು ಹಿಡಿಸಿದ್ದವು. ಮುಂದೆ ಲಕ್ಷ್ಮಿ ಅವರು ‘ಜ್ಯೂಲಿ ಲಕ್ಷ್ಮಿ’ ಎಂದೇ ತನ್ನ ಅಭಿಮಾನಿಗಳಿಂದ ಕರೆಯಲ್ಪಟ್ಟರು.
ಉಕ್ಕಿ ಹರಿಯುವ ಅಮೇಜಾನ್ ಪ್ರೀತಿ
ಒಂದು ಆಂಗ್ಲೋ ಇಂಡಿಯನ್ ಕುಟುಂಬ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದ ನಡುವೆ ಹುಟ್ಟುವ ಅಂತರ್ಜಾತೀಯ ಪ್ರೀತಿ, ಅಮೇಜಾನ್ ನದಿಯ ಹಾಗೆ ಎಗ್ಗಿಲ್ಲದೆ ಹರಿಯುವ ಪ್ರೇಮ, ನಂಬಿದ ಹುಡುಗನಿಗೆ ಮದುವೆಯ ಮೊದಲೇ ಸಮರ್ಪಣೆ ಆಗಿ ಗರ್ಭ ಧರಿಸುವ ಹುಡುಗಿಯ ಮುಗ್ಧತೆ, ಆ ಮಗುವನ್ನು ಗರ್ಭದಲ್ಲಿ ಸಾಯಿಸದೇ ಹೆರುವ ಸಂಕಲ್ಪ, ಮುಂದೆ ಅನಾಥಾಶ್ರಮದಲ್ಲಿ ಆ ಮಗುವನ್ನು ಬಿಟ್ಟು ಬರುವ ಸಂದಿಗ್ಧತೆ ಎಲ್ಲವನ್ನೂ ಲಕ್ಷ್ಮಿ ತುಂಬಾ ಚೆನ್ನಾಗಿ ತೆರೆದು ತೋರಿದ್ದರು.
ಒಂದು ಕಡೆ ತಾಯ್ತನದ ತುಡಿತವನ್ನು ಮೆಟ್ಟಿ ನಿಲ್ಲಲು ಆಗದೆ ಆಕೆ ಪಡುವ ವೇದನೆ, ಮತ್ತೊಂದು ಕಡೆ ಸಮಾಜವನ್ನು ಎದುರಿಸಲು ಆಗದೆ ಆಕೆ ಪಡುವ ಆತಂಕಗಳು, ಕೊನೆಯಲ್ಲಿ ಮನೆಯವರ ಬೆಂಬಲ ಪಡೆದು ಪ್ರೀತಿಯನ್ನು ಗೆಲ್ಲಿಸಲು ಆಕೆ ಮಾಡುವ ಹೋರಾಟ….ಎಲ್ಲವೂ ಆ ಸಿನೆಮಾದಲ್ಲಿ ಅದ್ಭುತವಾಗಿ ಡಿಪಿಕ್ಟ್ ಆಗಿದ್ದವು. ಆ ಸಿನಿಮಾದ ನಾಯಕನಾಗಿ ನಟಿಸಿದ ವಿಕ್ರಂ ಮಕಂದಾರ್ ಮೂಲತಃ ಹುಬ್ಬಳ್ಳಿಯವರು.
ಮುಂದೆ ನಿಜ ಜೀವನದಲ್ಲಿಯೂ ಲಕ್ಷ್ಮಿ ಅವರನ್ನು ಎರಡನೇ ಮದುವೆ ಆಗುತ್ತಾರೆ. ಲಕ್ಷ್ಮಿಯ ತಂಗಿ ಆಗಿ ನಟಿಸಿದ ಶ್ರೀದೇವಿ ಮುಂದೆ ಭಾರತದ ಸೂಪರ್ ಸ್ಟಾರ್ ಆದರು. ಆ ಸಿನಿಮಾ ಆಗುವಾಗ ಶ್ರೀದೇವಿಗೆ ಕೇವಲ ಹನ್ನೊಂದು ವರ್ಷ ಆಗಿತ್ತು.
ಜ್ಯೂಲಿ ಸಿನಿಮಾದ ಹೈಲೈಟ್ ಅದರ ಸಂಗೀತ
ಈಗಲೂ ಚಿರಂಜೀವಿ ಆಗಿರುವ ಈ ಸಿನಿಮಾದ ‘My heart is beeting’ ಹಾಡು ಆಗಿನ ಯುವಜನತೆಯ ಹಾರ್ಟ್ ಥ್ರೋಬ್ ಆಗಿತ್ತು. ಭೂಲ್ ಗಯಾ ಸಬ್ ಕುಚ್, ದಿಲ್ ಕ್ಯಾ ಕರೇ ಜಬ್ ಕಿಸೀಸೆ ಈ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈ ಸಿನಿಮಾಕ್ಕೆ ಸಂಗೀತ ನೀಡಿದವರು ರಾಜೇಶ್ ರೋಷನ್. ಆಗ ಅವರಿಗೆ ಕೇವಲ 19 ವರ್ಷ ಆಗಿತ್ತು! ಆನಂದ್ ಭಕ್ಷಿ ಬರೆದ ಅಷ್ಟೂ ಹಾಡುಗಳನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದರು.
ಲಕ್ಷ್ಮಿ ಆ ಸಿನಿಮಾದ ಮೂಲಕ ಕೀರ್ತಿಯ ಶಿಖರವನ್ನು ಏರಿದರು. ಅವರು ಹಿಂದೀ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆ ಎಂಬ ಕೀರ್ತಿ ಪಡೆದರು. ಆ ಎಲ್ಲ ಭಾಷೆಗಳಲ್ಲಿಯೂ ಆಕೆ ತನ್ನ ಸಂಭಾಷಣೆಯನ್ನು ತಾನೇ ಡಬ್ ಮಾಡಿದ್ದು ವಿಶೇಷ. ಅದೇ ರೀತಿ ಐದೂ ಭಾಷೆಗಳಲ್ಲಿಯೂ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ನಟಿ ಎಂದರೆ ಅದು ಲಕ್ಷ್ಮಿ ಮಾತ್ರ! ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ನಟಿ ಅದು ಲಕ್ಷ್ಮಿ.
ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿಗಳ ರೇಸಲ್ಲಿ ಶೋಲೆ ಮತ್ತು ಜೂಲಿ ಸಿನಿಮಾಗಳು ಭಾರೀ ಸ್ಪರ್ಧೆ ಮಾಡಿದವು. ಶೋಲೆ ಸಿನಿಮಾಕ್ಕೆ ಒಂದೇ ಪ್ರಶಸ್ತಿ ಬಂದರೆ ಜ್ಯೂಲಿಗೆ ಮೂರು ಪ್ರಶಸ್ತಿಗಳು ಬಂದು ಬಾಲಿವುಡ್ ಅಹಂ ಮುರಿದಿತ್ತು. ಲಕ್ಷ್ಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯು ಕೂಡ ದೊರಕಿತ್ತು.
ಇದನ್ನೂ ಓದಿ: Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
ನಾನು ಜನರ ಕಣ್ಣಲ್ಲಿ ಜ್ಯೂಲಿ ಆಗಿಯೇ ಇರಲು ಬಯಸುತ್ತೇನೆ!
2012ರಲ್ಲಿ ಸೇತು ಮಾಧವನ್ ಅವರ ಮಗ ಸಂತೋಷ್ ಅವರು ಜೂಲಿ ಸಿನಿಮಾವನ್ನು ಮರು ಸೃಷ್ಟಿ ಮಾಡಲು ಹೊರಟರು. ಆಗ ಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಜ್ಯೂಲಿಯ ತಾಯಿಯ ಪಾತ್ರವನ್ನು ಅಭಿನಯಿಸಲು ಕೇಳಿಕೊಂಡರು. ಆಗ ಲಕ್ಷ್ಮಿ ಅದನ್ನು ನಿರಾಕರಿಸಿ ಹೇಳಿದ ಮಾತು – ನಾನು ಜನರ ಕಣ್ಣಲ್ಲಿ ಜ್ಯೂಲಿಯಾಗಿಯೇ ಇರಲು ಬಯಸುತ್ತೇನೆ!
ಅಂಕಣ
Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!
Raja Marga Column: ಪ್ರತಿ ದಿನ, ಪ್ರತಿಕ್ಷಣ ಕೆಲಸ ಮಾಡುವ ಹೃದಯಕ್ಕೂ ಒಂದು ದಿನ ಬೇಕು ಅಲ್ವಾ? ಸೆಪ್ಟೆಂಬರ್ 29-ವಿಶ್ವ ಹೃದಯ ದಿನ. ಹೃದಯವನ್ನು ಉಪಯೋಗಿಸಿ, ಹೃದಯವನ್ನು ಅರಿಯಿರಿ ಎನ್ನುವುದು ಈ ವರ್ಷದ ಘೋಷಣೆ. ಜಗತ್ತಿನ ಅತೀ ದೊಡ್ಡ ಕೊಲೆಗಡುಕ ಅಂದರೆ ಅದು ಹೃದಯಾಘಾತ ಅಂತಾರೆ. ಅದನ್ನು ಮೀರುವುದು ಹೇಗೆ ಎಂದರೆ ನಿಮ್ಮ ಹೃದಯವನ್ನು ನೀವೇ ಪ್ರೀತಿಸುವುದರಿಂದ.
ಸೆಪ್ಟೆಂಬರ್ 29 – ವಿಶ್ವ ಹೃದಯ ದಿನ (World Heart day). ಈದಿನ ಜಗತ್ತಿನಾದ್ಯಂತ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು, ರ‍್ಯಾಲಿಗಳು, ಸಭೆಗಳು, ಸಮಾರಂಭಗಳು ನಡೆಯುತ್ತವೆ. ಜಗತ್ತಿನ 90 ರಾಷ್ಟ್ರಗಳು ಸೆ. 29ರಂದು ಹೃದಯ ದಿನ ಆಚರಿಸುತ್ತವೆ
ಪ್ರತೀ ವರ್ಷವೂ ಹೃದಯ ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಒಂದು ಘೋಷಣೆಯನ್ನು ಕೊಡುತ್ತಿದ್ದು ಈ ವರ್ಷದ ಘೋಷಣೆಯು – USE HEART, KNOW HEART ಆಗಿದೆ. ಮಾನವನ ಜೀವನದ ಉದ್ದಕ್ಕೂ ಅವಿಶ್ರಾಂತವಾಗಿ ದುಡಿಯುತ್ತ ರಕ್ತವನ್ನು ಪಂಪ್ ಮಾಡುವ ಕೆಲಸವನ್ನು ನಿರಂತರ ಮಾಡುತ್ತಿರುವ ಪುಟ್ಟ ಹೃದಯದ ಬಗ್ಗೆ ನಾವು ತುಂಬಾ ಮಾಹಿತಿ ತಿಳಿದುಕೊಳ್ಳಬೇಕಾದ ಅಗತ್ಯ (Let us Understand our own heart first) ಇದೆ (Raja marga Column).
ಮಿಡಿಯುವ ಪುಟ್ಟ ಹೃದಯ – 21 ಮಾಹಿತಿಗಳು
1. ಪ್ರತೀ ವರ್ಷವೂ ಸೆಪ್ಟೆಂಬರ್ 29ರಂದು ಹೃದಯದ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಚರಣೆ ಮಾಡುತ್ತಾ ಬಂದಿದೆ. 2000ನೇ ಇಸವಿಯಿಂದ ಇದು ಜಾರಿಯಲ್ಲಿದೆ.
2. ಹೃದಯಾಘಾತವನ್ನು ‘ಜಗತ್ತಿನ ಅತೀ ದೊಡ್ಡ ಕೊಲೆಗಡುಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಹೃದಯದ ಆಘಾತ ಮತ್ತು ಹೃದಯದ ಕಾಯಿಲೆಯಿಂದ ಜಗತ್ತಿನಾದ್ಯಂತ ಪ್ರತೀ ವರ್ಷ ಮೃತರಾಗುವ ವ್ಯಕ್ತಿಗಳ ಸಂಖ್ಯೆ 1.7 ಕೋಟಿ ಆಗಿದೆ! ಅಂದರೆ ಮನುಷ್ಯ ಮರಣದ ಒಟ್ಟು ಪ್ರಮಾಣದ 31% ಭಾಗವು ಕೇವಲ ಹೃದಯದ ಸಮಸ್ಯೆಗಳಿಂದ ಉಂಟಾಗುತ್ತಿದೆ.
3. ಮನುಷ್ಯನ ದೇಹದ ಎಲ್ಲ ಭಾಗಗಳೂ ವಿಶ್ರಾಂತಿ ಪಡೆಯುತ್ತವೆ. ಮೆದುಳು ಕೂಡ ವಿಶ್ರಾಂತಿ ಪಡೆಯುತ್ತದೆ. ಆದರೆ ಹೃದಯವು ಒಂದರ್ಧ ಕ್ಷಣ ಕೂಡ ವಿಶ್ರಾಂತಿ ಪಡೆಯುವುದೇ ಇಲ್ಲ. ಮುಷ್ಕರವನ್ನು ಕೂಡ ಮಾಡುವುದಿಲ್ಲ. ಹೃದಯವು ಹಗಲು ರಾತ್ರಿ ಏಕ ರೀತಿಯಲ್ಲಿ ಕೆಲಸ ಮಾಡುತ್ತದೆ.
4. ಇದುವರೆಗೆ ವಿಜ್ಞಾನಿಗಳಿಗೆ ಹೃದಯಾಘಾತಕ್ಕೆ ಸರಿಯಾದ ಕಾರಣವನ್ನು ಸಂಶೋಧನೆ ಮಾಡಲು ಸಾಧ್ಯವೇ ಆಗಲಿಲ್ಲ. ಆನುವಂಶೀಯ ಕಾರಣಗಳು ಇವೆ. ಆದರೆ ಅದಕ್ಕೂ ಪುರಾವೆ ಇಲ್ಲ.
5. ಹೃದಯದ ಭದ್ರತೆಗೆ ನಾಲ್ಕು ರಕ್ಷಣಾ ಕವಚಗಳು ಇವೆ. ಆದರೂ ಮಾನವ ಹೃದಯವು ಯಾವಾಗ ಬೇಕಾದರೂ ಸ್ತಬ್ಧ ಆಗಬಹುದು.
6. ಪುರುಷರ ಹೃದಯಕ್ಕಿಂತ ಸ್ತ್ರೀಯರ ಹೃದಯವು ಸ್ವಲ್ಪ ಕಡಿಮೆ ತೂಕ ಇರುತ್ತದೆ. ಆರೋಗ್ಯಪೂರ್ಣ ಪುರುಷರ ಹೃದಯದ ತೂಕ ಸರಾಸರಿ 280-340 ಗ್ರಾಂ ಇದ್ದರೆ ಸ್ತ್ರೀಯರ ಹೃದಯದ ತೂಕವು 230- 280 ಗ್ರಾಂ.
7. ಪುರುಷರಲ್ಲಿ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ಕೊಂಚ ಕಡಿಮೆ ಇದೆ.
(ಮಹಿಳೆಯರಲ್ಲಿ ಹೃದಯವೇ ಇರುವುದಿಲ್ಲ ಎಂದು ಹಾಸ್ಯ ಸಾಹಿತಿ ಬೀಚಿ ಒಮ್ಮೆ ಹೇಳಿದ್ದು ತಮಾಷೆಗೆ ಆಯ್ತಾ!)
8. ಮನುಷ್ಯನ ಹೃದಯಾಘಾತಕ್ಕೆ ಯಾವುದೇ ವಯಸ್ಸಿನ ಸಮೀಕರಣ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮಕ್ಕಳಲ್ಲಿ ಕೂಡ ಹೃದಯಾಘಾತಗಳು ಹೆಚ್ಚುತ್ತಿವೆ.
9. ವಾಯು ಮಾಲಿನ್ಯದ ಕಾರಣಕ್ಕೆ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ ಎಂದು ಸಂಶೋಧನೆಗಳು ಹೇಳಿವೆ. ಒಟ್ಟು ಹೃದಯಾಘಾತಗಳಲ್ಲಿ 25% ಆಘಾತಗಳು ವಾಯು ಮಾಲಿನ್ಯದ ಕಾರಣಕ್ಕೆ ಆಗುತ್ತಿವೆ.
10. ಆರೋಗ್ಯವಂತ ಮನುಷ್ಯನ ದೇಹದಲ್ಲಿ ಇರುವ ರಕ್ತದ ಪ್ರಮಾಣ ಐದರಿಂದ ಐದೂವರೆ ಲೀಟರ್. ಆದರೆ ಹೃದಯವು ದಿನಕ್ಕೆ 6000-7500 ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ ಅಂದರೆ ನಂಬಲೇ ಬೇಕು! ಒಮ್ಮೆ ಎದೆಯ ಬಡಿತ ಉಂಟಾದಾಗ ರಕ್ತವು ನಮ್ಮ ಇಡೀ ದೇಹವನ್ನು ತಲುಪುತ್ತದೆ.
11. ಆರೋಗ್ಯಪೂರ್ಣ ವ್ಯಕ್ತಿಯ ಹೃದಯವು ನಿಮಿಷಕ್ಕೆ 60-100 ಬಾರಿ ಲಬ್ ಡಬ್ ಎಂದು ಬಡಿಯುತ್ತದೆ. ನವಜಾತ ಶಿಶುಗಳಲ್ಲಿ ಇದು ಕೊಂಚ ಜಾಸ್ತಿ.
12. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗುವ ಕಾರಣ ಹೆಚ್ಚು ಹೃದಯಾಘಾತಗಳು ನಡೆಯುತ್ತವೆ. ಅದಕ್ಕೆ ಮುಖ್ಯ ಕಾರಣ ಕೊಲೆಸ್ಟರಾಲ್ ಮತ್ತು ಹೆಚ್ಚು ರಕ್ತದ ಒತ್ತಡ (ಬಿಪಿ).
13. ಏರೋಬಿಕ್ಸ್, ಸೈಕ್ಲಿಂಗ್, ವೇಗವಾಗಿ ನಡೆಯುವುದು, ಓಡುವುದು, ಸ್ವಿಮ್ಮಿಂಗ್, ಬ್ಯಾಡ್ಮಿಂಟನ್ ಆಡುವುದು ಮತ್ತು ರೋಪ್ ಜಂಪ್ ಇವುಗಳನ್ನು ದಿನವೂ ಮಾಡುವುದರಿಂದ ಹೃದಯದ ಆಯಸ್ಸನ್ನು ಜಾಸ್ತಿ ಮಾಡಬಹುದು.
14. ಸ್ಮೋಕಿಂಗ್ ಮತ್ತು ಡ್ರಿಂಕ್ಸ್ ಮಾಡುವವರಲ್ಲಿ ಹೃದಯಾಘಾತಗಳ ಸಾಧ್ಯತೆ ಹೆಚ್ಚು. ಹೆಚ್ಚು ಒತ್ತಡದಲ್ಲಿ ಕೆಲಸ ಮಾಡುವವರು ಮತ್ತು ವಿಪರೀತ ಬೊಜ್ಜು ಬೆಳೆಸಿಕೊಂಡವರು ಬೇಗ ಹೃದಯದ ಕಾಯಿಲೆಗಳಿಗೆ ಒಳಗಾಗುತ್ತಾರೆ.
15. ಹೆಚ್ಚು ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಹೃದಯಾಘಾತ ಸಾಧ್ಯತೆ ಹೆಚ್ಚು.
16. ಆಹಾರದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಮಾಡುವುದರಿಂದ ಹೃದಯದ ಜೋಪಾಸನೆ ಮಾಡಬಹುದು. ಉಪ್ಪು ಕಡಿಮೆ ಬಳಕೆ ಮಾಡುವುದು ಅಗತ್ಯ.
17. ಅನಾರೋಗ್ಯಪೂರ್ಣ ಜೀವನ ಕ್ರಮಗಳಿಂದ (Unhealthy life style) ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಜಂಕ್ ಫುಡ್ ಸೇವನೆ ಮತ್ತು ನಿದ್ದೆ ಕಡಿಮೆ ಮಾಡುವುದರಿಂದ ಹೃದಯವು ದುರ್ಬಲ ಆಗುತ್ತದೆ.
18. ನಿರಂತರ ಮೆಡಿಕಲ್ ತಪಾಸಣೆ ಮಾಡುವುದು, ಇಸಿಜಿ (ECG) ಮಾಡುವುದು ಮತ್ತು ಬಾಡಿ ಮಾಸ್ ಇಂಡೆಕ್ಸ್ ಅಳತೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಪರೀಕ್ಷೆ ಮಾಡಬಹುದು ಮತ್ತು ಹೃದಯವನ್ನು ಕಾಪಾಡಬಹುದು.
19. ಹೃದಯಾಘಾತಗಳು ಉಂಟಾಗುವ ಸಾಕಷ್ಟು ಮೊದಲು ಅದರ ಚಿಹ್ನೆಗಳು (Symptoms) ನಮ್ಮ ಗಮನಕ್ಕೆ ಬರುತ್ತವೆ. ಆಗ ತಕ್ಷಣ ಎಚ್ಚರವಾಗಿ ವೈದ್ಯಕೀಯ ನೆರವನ್ನು ಪಡೆದರೆ ಹೃದಯಾಘಾತ ತಡೆಗಟ್ಟಬಹುದು. ಆ ಅವಧಿಯನ್ನು ಗೋಲ್ಡನ್ ಪೀರಿಯಡ್ ಎಂದು ಕರೆಯುತ್ತಾರೆ.
20. ಹೃದಯಕ್ಕೆ ಕನೆಕ್ಟ್ ಆದ ರಕ್ತನಾಳಗಳು ಬ್ಲಾಕ್ ಆಗದ ಹಾಗೆ ನೋಡಿಕೊಳ್ಳುವುದು ತುಂಬಾ ಮುಖ್ಯ. ಅದಕ್ಕೆ ನಿರಂತರ ವೈದ್ಯಕೀಯ ತಪಾಸಣೆ ಅಗತ್ಯ.
21. 1964ರಲ್ಲಿ ಜೇಮ್ಸ್ ಹಾರ್ಡಿ ಎಂಬ ವಿಜ್ಞಾನಿಯು ಮನುಷ್ಯನ ಹೃದಯವನ್ನು ಬದಲಾಯಿಸಿ ಅದರ ಸ್ಥಳದಲ್ಲಿ ಚಿಂಪಾಂಜಿ ಹೃದಯವನ್ನು ಕಸಿ ಮಾಡಿದ್ದ. ಆದರೆ ಆ ರೋಗಿ ಎರಡು ಘಂಟೆಗಳ ಒಳಗೆ ಮೃತ ಪಟ್ಟು ಈ ಪ್ರಯೋಗ ವಿಫಲ ಆಯಿತು.
22. 1967ರಲ್ಲಿ ದಕ್ಷಿಣ ಆಫ್ರಿಕಾದ ಒಂದು ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್ ಕ್ರಿಶ್ಚಿಯನ್ ಬನಾರ್ಡ್ ರೋಗಿಯ ಅನಾರೋಗ್ಯ ಪೂರ್ಣ ಹೃದಯದ ಜಾಗದಲ್ಲಿ ಇನ್ನೊಂದು ಆರೋಗ್ಯಪೂರ್ಣ ಹೃದಯವನ್ನು ಕಸಿ ಮಾಡಿ ಯಶಸ್ವೀ ಅದನು. ಆ ಶಸ್ತ್ರಚಿಕಿತ್ಸೆಯನ್ನು ಇಂದು ಜಗತ್ತಿನಾದ್ಯಂತ ಸಾವಿರಾರು ಮಂದಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Raja Marga Column : ಅಪ್ಪಾ ಪಾ!! ಅಮಿತಾಭ್ ಬಚ್ಚನ್ ಬದ್ಧತೆ, ಪ್ರಯೋಗಶೀಲತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ?
ಭರತ ವಾಕ್ಯ
ಹೃದಯವು ಭಾವನೆಗಳ ಉಗಮ ಸ್ಥಾನ ಎಂದು ನಮ್ಮ ಹಿರಿಯರು ನಂಬಿದ್ದರು. ಪ್ರೀತಿಗಾಗಿ ಮಿಡಿಯುವುದು ಅದೇ ಹೃದಯ ಎಂದರು. ಇವೆಲ್ಲವೂ ವೈಜ್ಞಾನಿಕವಾಗಿ ಇನ್ನೂ ಸಾಬೀತು ಆಗಿಲ್ಲ. ಹೃದಯವು ಅತ್ಯಂತ ಸಕ್ಷಮವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಮಾಂಸ, ರಕ್ತ ಮತ್ತು ಸ್ನಾಯುಗಳ ಒಂದು ಪ್ರಮುಖ ದೇಹದ ಭಾಗ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ಆ ಹೃದಯವನ್ನು ಪ್ರೀತಿ ಮಾಡಿ ಉಳಿಸಿಕೊಳ್ಳುವ ಹೊಣೆ ನಮ್ಮೆಲ್ಲರದು. ಲವ್ ಯುವರ್ ಹಾರ್ಟ್ ಅಂಡ್ ಲಿವ್ ಲಾಂಗ್.
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ11 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ12 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema15 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್‌ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ