ಈ ಅಂಕಣವನ್ನು ಇಲ್ಲಿ ಕೇಳಿ:
ಅನೇಕ ದಶಕಗಳಿಂದ ಜನವರಿ 26ಕ್ಕೆ (Republic Day), ಆಗಸ್ಟ್ 15ಕ್ಕೆ (Independence Day), ಅಕ್ಟೋಬರ್ 2ಕ್ಕೆ (Gandhi Jayanthi), ಅಷ್ಟೇಕೆ, ಇನ್ನೂ ಹಲವಾರು ಪ್ರಮುಖ ರಾಷ್ಟ್ರೀಯ ದಿನಗಳಲ್ಲಿ ದೂರದರ್ಶನದ ವಾಹಿನಿಗಳಲ್ಲಿ ಒಂದನ್ನಂತೂ ನಾವು ತಪ್ಪದೇ ನೋಡುತ್ತೇವೆ. ಅದೆಂದರೆ, ಮಹಾತ್ಮಾ ಗಾಂಧೀ (Mahatma gandhi) ಹಾಗೂ ಸರೋಜಿನಿ ನಾಯಿಡು ಅವರು ಉಪ್ಪಿನ ಸತ್ಯಾಗ್ರಹಕ್ಕೆ (Salt satyagraha) ಜೊತೆಯಾಗಿ ಹೆಜ್ಜೆ ಹಾಕುತ್ತಿರುವ (Dandi March) ವೀಡಿಯೋ ತುಣುಕು. ಚಿತ್ರಮಂದಿರಗಳಲ್ಲಿ, ಕಿರುತೆರೆಯಲ್ಲಿ ನಾನೇ ಕಳೆದ ಅರ್ಧ ಶತಮಾನದಲ್ಲಿ ಕನಿಷ್ಠ ಒಂದು ಸಾವಿರ ಬಾರಿಯಾದರೂ ಇದನ್ನು ನೋಡಿರಬಹುದು. ಕೈಮುಗಿದು ಗಾಂಧೀಜಿಯವರನ್ನು ನೋಡುತ್ತಿದ್ದ ನಮಗೆಲ್ಲಾ (ನಿಮಗೂ ಸಹ) ಇದು ಚಿರಪರಿಚಿತ ದೃಶ್ಯಾವಳಿ.
In fact, ದೆಹಲಿಯ “ಗಾಂಧೀ ಮ್ಯೂಸಿಯಮ್”ನಲ್ಲಿರುವ ಅಪೂರ್ವ ಪೇಪರ್ ಕಟ್ಟಿಂಗ್ಸ್ ಮತ್ತು ಛಾಯಾಚಿತ್ರಗಳನ್ನು ಹಲವು ಹತ್ತು ಬಾರಿ ನೋಡಿದ್ದೇನೆ. 1980ರಲ್ಲಿ ನಾನು ದೆಹಲಿಯಲ್ಲಿದ್ದಾಗ ಈ ಮ್ಯೂಸಿಯಮ್ ಅಧ್ಯಯನ ಮಾಡುವುದರಲ್ಲಿ, ಪ್ರಮುಖ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವುದರಲ್ಲಿ ಒಂದು ಇಡೀ ದಿನ ಮಗ್ನನಾಗಿದ್ದೆ. ಆದರೆ, ಅನಂತರದ ಸ್ವಾತಂತ್ರ್ಯ ಹೋರಾಟ ಕುರಿತ ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಪರಾಮರ್ಶೆಗಳು ನೋವು ದುಃಖಗಳನ್ನೇ ತಂದವು. ಏಕೆಂದರೆ, ಈ ಮ್ಯೂಸಿಯಮ್ ನಲ್ಲಿರುವ ಬಹುಪಾಲು ಪೇಪರ್ ಕಟ್ಟಿಂಗ್ಸ್ “ಬಾಂಬೆ ಕ್ರಾನಿಕಲ್” ಎಂಬ ಪತ್ರಿಕೆಯಲ್ಲಿ ಪ್ರಕಟವಾದಂತಹವು. ಈ ಪತ್ರಿಕೆಯನ್ನು ಪ್ರಾರಂಭಿಸಿದವರು ಸರ್ ಫಿರೋಜ್ ಶಾ ಮೆಹ್ತಾ. ಮೆಹ್ತಾ ಅವರು ಬ್ರಿಟಿಷರ ಪರಮಾಪ್ತರು. ಬ್ರಿಟಿಷರೇ ಪ್ರಾರಂಭಿಸಿದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸ್ಥಾಪಕ ಸದಸ್ಯರು ಮತ್ತು 1890ರಲ್ಲಿ ಕಾಂಗ್ರೆಸ್ ಅಧ್ಯಕ್ಷರೂ (ಕೋಲ್ಕತಾ ಅಧಿವೇಶನ) ಆಗಿದ್ದರು. ಅಂದಿನ ಕಾಲವೇ ಹಾಗಿತ್ತು. ಪತ್ರಿಕೆಗಳನ್ನು ಹುಟ್ಟು ಹಾಕುವುದಿರಲಿ, ಮೂವೀ ಕ್ಯಾಮೆರಾಗಳನ್ನು ಕೊಳ್ಳುವುದಿರಲಿ, ಸಾಧಾರಣವಾದ ಸ್ಟಿಲ್ ಕ್ಯಾಮೆರಾವನ್ನೂ ಸಾಮಾನ್ಯ ಜನರು ಯಾರೂ ಕೊಳ್ಳಲು ಸಾಧ್ಯವಿರಲಿಲ್ಲ. ಬ್ರಿಟಿಷ್ ಆಳ್ವಿಕೆಯ ಭಾರತವೆಂದರೆ ದೀನ ದರಿದ್ರರ, ತಿನ್ನಲು ಏನೂ ಇರದ ನತದೃಷ್ಟರ ದೇಶ. “ಬಾಂಬೆ ಕ್ರಾನಿಕಲ್” ಮತ್ತು ಇತರ ಅನೇಕ ಪತ್ರಿಕೆಗಳು ಬ್ರಿಟಿಷರ ಆಶ್ರಯದಲ್ಲಿದ್ದವು. ಪ್ರತ್ಯಕ್ಷವಾಗಿ ಮಾತ್ರವಲ್ಲ ಪರೋಕ್ಷವಾಗಿಯೂ ಅಲ್ಲಿ ಬ್ರಿಟಿಷರ ಪಾತ್ರವಿರುತ್ತಿತ್ತು, ಕಾರ್ಯತಂತ್ರವಿರುತ್ತಿತ್ತು, ಷಡ್ಯಂತ್ರವಿರುತ್ತಿತ್ತು, ಅಭಿಪ್ರಾಯಗಳಿರುತ್ತಿದ್ದವು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರಲ್ಲಿ ಹಿಂದಿರುಗಿದರು. ಸುಮಾರು 32 ವರ್ಷಗಳ ಕಾಲ ಭಾರತದ ರಾಜಕಾರಣವನ್ನು, ಕಾಂಗ್ರೆಸ್ಸನ್ನು ನಿಯಂತ್ರಿಸಿದರು. ರಾಮಕೃಷ್ಣ ಪರಮಹಂಸರಂತೆ, ರಮಣ ಮಹರ್ಷಿಗಳಂತೆ, ಭಾರತೀಯ ಸಂತರಂತೆ ಅವರು ಸರಳ ಶ್ವೇತವಸ್ತ್ರಧಾರಿಯಾದರು. ಭಾರತೀಯರ ಕಣ್ಮಣಿಯಾದರು. ಅವರ ಮಾತಿಗೆ, ಅವರ ಒಂದು ಕರೆಗೆ ಓಗೊಟ್ಟು ಲಕ್ಷ ಲಕ್ಷ ಜನ ಸತ್ಯಾಗ್ರಹ ಮಾಡುತ್ತಿದ್ದರು, ಹೋರಾಟ ಮಾಡುತ್ತಿದ್ದರು, ಸೆರೆವಾಸಕ್ಕೆ ಅಣಿಯಾಗುತ್ತಿದ್ದರು. ಆ ಕಾಲಘಟ್ಟದಲ್ಲಿ ಬ್ರಿಟಿಷ್ ಪ್ರಣೀತ ಪತ್ರಿಕೆ ಮತ್ತು ರೇಡಿಯೋಗಳು ಜನರ ಮೇಲೆ ದಟ್ಟವಾದ ಪ್ರಭಾವ ಬೀರುತ್ತಿದ್ದವು ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಭಾರತೀಯರ ಅಭಿಮತ, ಅಭಿಪ್ರಾಯ ಮತ್ತು ಮನೋಧರ್ಮಗಳನ್ನು ರೂಪಿಸುತ್ತಿದ್ದವು.
1882ರ ಬ್ರಿಟಿಷರ ಕರಾಳ ಕಾಯಿದೆಯ ಅನುಸಾರವಾಗಿ, ಭಾರತೀಯರು ಉಪ್ಪನ್ನು ತಯಾರಿಸುವಂತೆಯೇ ಇರಲಿಲ್ಲ. ತೆರಿಗೆಯೂ ಅತ್ಯಧಿಕ. ಮಹಾತ್ಮಾ ಗಾಂಧೀ ಹಾಗೂ ಸರೋಜಿನಿ ನಾಯಿಡು ಅವರು ದಾಂಡೀ ಯಾತ್ರೆಯಲ್ಲಿ ಜೊತೆಯಾಗಿ ಪಾಲ್ಗೊಂಡು ಮಾಡಿದ ಉಪ್ಪಿನ ಸತ್ಯಾಗ್ರಹದ ವೀಡಿಯೋ ತುಣುಕುಗಳು ಸಹಜವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದು ಎನ್ನುವ ತೀರ್ಮಾನಕ್ಕೆ ಭಾರತೀಯರು ಇಂದಿಗೂ ಬರುವಂತೆ ಮಾಡುತ್ತವೆ. ನಮಗೆಲ್ಲಾ 1965ರಲ್ಲಿ ಪ್ರೌಢಶಾಲೆಯಲ್ಲಿ ಸರೋಜಿನಿ ನಾಯಿಡು ಅವರ ಬಗೆಗಿನ “ಸರೋಜಿನಿ ದೇವಿ” ಎಂಬ ಪುಸ್ತಕವು ಉಪಪಠ್ಯವಾಗಿತ್ತು (Non-detailed Text). ನಾನು ಚೆನ್ನೈ ಮೂಲದ “ದಕ್ಷಿಣ ಭಾರತ ಹಿಂದೀ ಪ್ರಚಾರ ಸಭಾ”ದ ಪರೀಕ್ಷೆಯೊಂದನ್ನೂ ಕಟ್ಟಿದ್ದೆ. ಅಲ್ಲಿಯೂ ಅದೇ ಹೆಸರಿನ ಹಿಂದೀ ಭಾಷೆಯ ಪಠ್ಯಪುಸ್ತಕವಿತ್ತು. ಇದರಿಂದ ನಾವೆಲ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಸರೋಜಿನಿ ನಾಯಿಡು ಅವರದ್ದು ಬಹಳ ಪ್ರಮುಖವಾದ ಪಾತ್ರ ಎಂದೇ ಪರಿಭಾವಿಸಿಬಿಟ್ಟಿದ್ದೆವು. ಆದರೆ, ಅನಂತರದ ವರ್ಷಗಳಲ್ಲಿ ಅವರದ್ದು ತೀರಾ ಅಲ್ಪಮಾತ್ರದ ಕೊಡುಗೆ ಎಂಬುದು ತಿಳಿದು ವಿಷಾದವೆನಿಸಿತು. ಹೈದರಾಬಾದ್ ನಿಜಾಮ ಮತ್ತು ಅವನ ರಜಾಕಾರರ ಪಡೆಯು, ನಮ್ಮ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳೂ ಸೇರಿದಂತೆ ಅನೇಕ ಕಡೆ, ಹಿಂದೂಗಳ ನರಮೇಧ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿಗಳಿಗೆ ಕಾರಣವಾಯಿತು. ಸರದಾರ್ ಪಟೇಲರ ಸೈನಿಕಕ್ರಮದಿಂದ ನಿಜಾಮನು ಶರಣಾಗುವವರೆಗೆ ಈ ಹತ್ಯಾಕಾಂಡ ನಡೆಯಿತು. ಈ ಕುರಿತ ವಿವರಗಳು ಬರೆಯಲಾಗದಷ್ಟು ಭಯಾನಕ. ಆದರೆ, ಸರೋಜಿನಿ ನಾಯಿಡು ಅವರು ನಿಜಾಮನ ಪರವಾಗಿದ್ದರು ಮತ್ತು ಅವನ ಸ್ತುತಿಯಲ್ಲಿ ತಮ್ಮ ಕವಿತಾ ರಚನಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು. ಇಂತಹ ವಿವರಗಳು ಮತ್ತು ಸಾಕ್ಷ್ಯಾಧಾರಗಳು ನಮ್ಮಂತಹವರ ನೋವಿಗೆ ಕಾರಣವಾಗುತ್ತವೆ.
ಉಪ್ಪಿನ ಸತ್ಯಾಗ್ರಹದ ಬಗೆಗೆ ನಮ್ಮ ಕಾಂಗ್ರೆಸ್ ಪ್ರಣೀತ ಇತಿಹಾಸದ ಪಠ್ಯಪುಸ್ತಕಗಳಲ್ಲಿ ನಾವೆಲ್ಲ ತುಂಬ ತುಂಬ ಓದಿದೆವು. ಸುಮಾರು ಅರುವತ್ತು ಸಾವಿರ ಜನ ಸತ್ಯಾಗ್ರಹಿಗಳು ಸೆರೆಮನೆ ಸೇರಬೇಕಾಯಿತು. ಕರ್ನಾಟಕದ ಪಾತ್ರವೂ ಈ ಸತ್ಯಾಗ್ರಹದಲ್ಲಿ ಬಹಳ ದೊಡ್ಡದು. ಕರ್ನಾಟಕದಲ್ಲಿ ಸದಾಶಿವರಾವ್, ಗಂಗಾಧರ ರಾವ್ ದೇಶಪಾಂಡೆ, ಆರ್.ಆರ್. ದಿವಾಕರ್, ಬಿ.ಎಸ್.ನಾಯಕ್, ಎನ್.ಎಸ್.ಹರ್ಡೀಕರ್, ಕಡಪ ರಾಘವೇಂದ್ರ ರಾವ್, ಹನುಮಂತರಾವ್ ಕೌಜಲಗಿ, ಎಂ.ಪಿ.ನಾಡಕರ್ಣಿ ಮೊದಲಾದವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು. ಅಂಕೋಲ, ಮಂಗಳೂರು, ಉಡುಪಿ, ಕುಂದಾಪುರ ಮತ್ತು ಬಸನಾಳ ಮುಂತಾದ 30 ಕೇಂದ್ರಗಳಲ್ಲಿ ಸತ್ಯಾಗ್ರಹ ನಡೆಯಿತು. 1931ರ ಮಾರ್ಚ್ ತಿಂಗಳಲ್ಲಿ ನಡೆದ ಗಾಂಧೀ – ಅರ್ವಿನ್ ಒಪ್ಪಂದದಂತೆ ಸತ್ಯಾಗ್ರಹಿಗಳ ಬಿಡುಗಡೆಯಾಯಿತು ಮತ್ತು ಸತ್ಯಾಗ್ರಹವನ್ನು ಹಿಂದೆಗೆದುಕೊಳ್ಳಲು ಗಾಂಧೀಜಿಯವರು ಒಪ್ಪಂದಕ್ಕೆ ಸಹಿ ಹಾಕಿದರು.
ನಾವು ಭಾರತೀಯರು ತುಂಬಾ ತುಂಬಾ ಮುಗ್ಧರು, ಅಮಾಯಕರು. ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ? ಎನ್ನುವುದನ್ನು ಕೇಳುವುದನ್ನೂ ಮರೆತೆವು, ತಿಳಿದುಕೊಳ್ಳಲೂ ಹೋಗಲಿಲ್ಲ. ನೋವಿನ ಸಂಗತಿಯೆಂದರೆ, 1947ರವರೆಗೆ ಉಪ್ಪಿನ ಮೇಲಿನ ತೆರಿಗೆಯು ಕಡಿಮೆಯಾಗಲೂ ಇಲ್ಲ. ಉಪ್ಪಿನ ಸತ್ಯಾಗ್ರಹದ ಪ್ರಮುಖ ಗುರಿ ಈಡೇರಿತೇ, ಎಂಬುದನ್ನು ನಾವು ಸಹ ತಿಳಿದುಕೊಳ್ಳಲು ಪ್ರಯತ್ನಪಡಲೇ ಇಲ್ಲ. ಇಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಇಂತಹ ನೂರಾರು ಸತ್ಯಸಂಗತಿಗಳ ಬಗೆಗೆ ನಮ್ಮನ್ನು ಇನ್ನೂ ಅಂಧಕಾರವೇ ಕವಿದಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬೌದ್ಧ ನಿರ್ಮಾಣಗಳನ್ನು ಹಿಂದೂಗಳು ನಾಶ ಮಾಡಿದರೇ?
ಅತ್ಯಂತ ಕ್ರೂರಿ, ಭಾರತ-ದ್ವೇಷಿ ಚರ್ಚಿಲ್ ಬ್ರಿಟಿಷ್ ಪ್ರಧಾನಮಂತ್ರಿಯಾಗಿದ್ದ. 1943ರಲ್ಲಿ ತನ್ನ ಸೈನಿಕರಿಗಾಗಿ ಇಡೀ ಬಂಗಾಳದ ದವಸ ಧಾನ್ಯಗಳನ್ನು ಒಂದು ಕಾಳೂ ಬಿಡದಂತೆ ಬಲವಂತವಾಗಿ ಲೂಟಿ ಮಾಡಿದ. ಬಿತ್ತನೆಯ ಬೀಜಗಳಿಗೂ ಧಾನ್ಯಗಳನ್ನು ಉಳಿಸಲಿಲ್ಲ. ಮೂವತ್ತು ಲಕ್ಷ ಜನ ಭಾರತೀಯರು ಹಸಿವಿನಿಂದಾಗಿ ಸತ್ತುಹೋದರು. ಕೋಲ್ಕತ್ತಾದ ಬೀದಿಬೀದಿಗಳಲ್ಲಿ ಹಸಿವಿನಿಂದ ಸತ್ತವರ ಹೆಣಗಳು ರಾಶಿ ರಾಶಿ ಬಿದ್ದಿದ್ದವು. ತಮ್ಮ ಉಪವಾಸವನ್ನು ಬ್ರಹ್ಮಾಸ್ತ್ರದಂತೆ ಬಳಸುತ್ತಿದ್ದ ಮಹಾತ್ಮಾ ಗಾಂಧೀಜಿಯವರು ಈ ಕುರಿತಂತೆ ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇನೂ ಹಮ್ಮಿಕೊಳ್ಳಲಿಲ್ಲ. 1946ರಲ್ಲಿ ಕೋಲ್ಕತ್ತಾದಲ್ಲಿ ಜಿನ್ನಾ – ಸುಹ್ರವರ್ದಿ ಪ್ರಾಯೋಜಿಸಿದ ಹಿಂದೂ ಹತ್ಯಾಕಾಂಡ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಸುಲಿಗೆ, ಲೂಟಿ, ಬೆಂಕಿ ಹಚ್ಚುವುದು ಇತ್ಯಾದಿ ನಡೆಯಿತು. ಗಾಂಧೀಜಿಯವರು ಈ ಕುರಿತಂತೆಯೂ ಉಪವಾಸ ಸತ್ಯಾಗ್ರಹ ಮಾಡಲಿಲ್ಲ.
ತಥಾಕಥಿತ ಸ್ವಾತಂತ್ರ್ಯ ಬಂದ ಮೇಲೆ, ಹೊಸ ಇಸ್ಲಾಮೀ ದೇಶ ಪಾಕಿಸ್ತಾನವು ತಕ್ಷಣವೇ ಕಾಶ್ಮೀರವನ್ನು ಕಬಳಿಸುವ ಕುತಂತ್ರವನ್ನು ಮಾಡಿತು. ಕಾಶ್ಮೀರದ ಮೇಲೆ ಸೈನಿಕ ಆಕ್ರಮಣವೇ ಪ್ರಾರಂಭವಾಗಿಬಿಟ್ಟಿತು. ಗಾಂಧೀಜಿಯವರ ಮಾನಸಪುತ್ರ, ರಾಜಕೀಯ ಉತ್ತರಾಧಿಕಾರಿ ಎನಿಸಿದ್ದ ಜವಾಹರ ಲಾಲ್ ನೆಹರೂ ಅವರೇ, ಸೂಕ್ತ ಕ್ರಮ ಕೈಗೊಂಡು ಪಾಕಿಸ್ತಾನಕ್ಕೆ ಕೊಡಬೇಕಿದ್ದ ೫೫ ಕೋಟಿ ರೂಪಾಯಿಗಳನ್ನು ತಡೆಹಿಡಿದರು. ಏಕೆಂದರೆ, ಆ ಹಣದಿಂದ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತದೆ, ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ, ಜನವರಿ 1948ರಲ್ಲಿ, ಗಾಂಧೀಜಿಯವರು ಹಣ ಬಿಡುಗಡೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡರು. ಆಗ ಅನಿರ್ವಾಹವಾಗಿ ನೆಹರೂ ಅವರು ಆ ಹಣವನ್ನು ಬಿಡುಗಡೆ ಮಾಡಲು ಒಪ್ಪಬೇಕಾಯಿತು. ಅಂದಿನ ಕೇಂದ್ರ ಸರ್ಕಾರದ ಮಂತ್ರಿಮಂಡಲದ ಸಭೆ ಎಲ್ಲಿ ನಡೆಯಿತು ಊಹಿಸುವಿರಾ? ಗಾಂಧೀಜಿಯವರು ಆಗ ವಾಸಿಸುತ್ತಿದ್ದ “ಬಿರ್ಲಾ ಭವನ”ದಲ್ಲಿಯೇ (ಈಗ ಅದೇ ಕಟ್ಟಡ “ಗಾಂಧೀ ಸ್ಮೃತಿ” ಎಂಬ ಹೆಸರಿನಲ್ಲಿ ಸ್ಮಾರಕವಾಗಿದೆ) ಸಭೆ ನಡೆಯಿತು ಮತ್ತು 1948ರ ಜನವರಿ 16ರ ಪ್ರಾರ್ಥನಾ ಸಭೆಯಲ್ಲಿ, ಪಾಕಿಸ್ತಾನಕ್ಕೆ ಹಣ ಬಿಡುಗಡೆ ಮಾಡಿದ ಈ ನಿರ್ಧಾರವನ್ನು ಗಾಂಧೀಜಿಯವರು ಮುಕ್ತಕಂಠದಿಂದ ಶ್ಲಾಘಿಸಿದರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ನಿಜ-ಚಿತ್ರಗಳೇ ಹೀಗೆ. ವಿಷಾದ, ದುಃಖ, ನೋವುಗಳನ್ನೇ ತರುತ್ತವೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ