Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

sufi

ಸೂಫಿಗಳನ್ನು ಹಲವೆಡೆ ಸೂಫಿ ಸಂತರು, Sufi Saints ಎಂದು ಸಂಬೋಧಿಸಿರುವುದನ್ನು ಗಮನಿಸಬಹುದು. ವಿಶೇಷವಾಗಿ ಕನ್ನಡ ಸಾಹಿತ್ಯದಲ್ಲಿ ಸೂಫಿಗಳನ್ನು “ಮತಧರ್ಮಗಳ ನಡುವಿನ ಸೇತುವೆಯಾಗಿದ್ದರು” ಎಂಬಂತಹ ಸುಳ್ಳುಗಳನ್ನು ಹೆಣೆದು ನಮ್ಮನ್ನೆಲ್ಲಾ ಅನೃತದ ಅಂಧಕಾರದಲ್ಲಿ ಮುಳುಗಿಸಿದ್ದಾರೆ. ಅವರು ಸಂತರೂ ಅಲ್ಲ, Saints ಸಹ ಅಲ್ಲ. ಅವರು ಇಸ್ಲಾಮಿನ ಯೋಧರು, ಜಿಹಾದಿಗಳು, ಮುಜಾಹಿದ್‌ಗಳು. ಡಂಭಾಚಾರದ ದೊಡ್ಡ ದೊಡ್ಡ ವಾಕ್ಯಗಳನ್ನು ಬರೆದ ಮಾತ್ರಕ್ಕೆ ಅವರು ಸಂತರಾಗಲಾರರು. ಸ್ವತಃ ಅನುಸರಿಸದ, ಜೀರ್ಣಿಸಿಕೊಳ್ಳದ ಮಾತುಗಳು ಅಧ್ಯಾತ್ಮವೆನಿಸುವುದಿಲ್ಲ. ಲೋಕೋನ್ನತಿಯ, ಲೋಕಹಿತದ ಅನುಭಾವವಿರದ ವ್ಯಕ್ತಿಗಳ ಕಾವ್ಯವು ಅದೆಷ್ಟೇ “ಆಕರ್ಷಕ” ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದು ಸಂತವಾಣಿಯೂ ಅಲ್ಲ, ಅವರು ಸಂತರೂ ಅಲ್ಲ. ಈ ಪರಿಪ್ರೇಕ್ಷ್ಯದಲ್ಲಿ ಸೂಫಿಗಳನ್ನು ಸಂತರೆಂದು ಸಂಬೋಧಿಸಿಲ್ಲ.

ಮುಸ್ಲಿಂ ಇತಿಹಾಸಕಾರ ಸಯ್ಯದ್ ಅತ್ತರ್ ಅಬ್ಬಾಸ್ ರಿಜ್ವಿ ರಚಿಸಿರುವ “ಎ ಹಿಸ್ಟರಿ ಆಫ್ ಸೂಫಿಸಂ ಇನ್ ಇಂಡಿಯಾ” (A history of Sufism in India – ಸಂಪುಟ 1, ನವದೆಹಲಿ, 1978) ಒಂದು ಮಹತ್ತ್ವದ ಗ್ರಂಥ. ಹಾಗೆಂದು ರಿಜ್ವಿ ರಾಷ್ಟ್ರೀಯ ಇತಿಹಾಸದ ಪರ ಎಂದು ನಾವು ತಪ್ಪು ತಿಳಿಯುವ ಅಗತ್ಯವಿಲ್ಲ.

ಇಸ್ಲಾಮಿನ ಮತಸಿದ್ಧಾಂತಕ್ಕೆ ಅನುಗುಣವಾಗಿಯೇ, ಈವರೆಗೆ ಕಾಫಿರರ ದೇಶಗಳ ಮೇಲೆ ಇಸ್ಲಾಮೀ ಆಕ್ರಮಣಕಾರರ ದಾಳಿ ನಡೆದಿರುವುದು ಮತ್ತು ಈಗಲೂ ನಡೆಯುತ್ತಿರುವುದು. ಸಾವಿರ ವರ್ಷಗಳ ಕಾಲ ಸ್ವತಃ ಇಸ್ಲಾಮೀ ಆಸ್ಥಾನ ಇತಿಹಾಸಕಾರರೇ, ಇಸ್ಲಾಮಿನ ಬಗೆಗೆ ಸ್ಪಷ್ಟವಾಗಿ ಹೇಳಿದ್ದಾರೆ, ದಾಖಲಿಸಿದ್ದಾರೆ. ಅವೆಲ್ಲವೂ ಬಹಳ ಮಹತ್ತ್ವದ ದಾಖಲೆಗಳೇ. ಅದೇ ರೀತಿಯಲ್ಲಿಯೇ ರಿಜ್ವಿ ಸಹ ಬರೆದಿದ್ದಾನೆ. ಇಲ್ಲಿ ರಿಜ್ವಿ ಪ್ರಸ್ತುತಪಡಿಸಿರುವ ದಾಖಲೆಗಳು ಏನು ಹೇಳುತ್ತವೆ, ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಕಾಫಿರರಿಗೆ ಸೇರಿದ ಎಲ್ಲ ಆರಾಧನಾ ಕೇಂದ್ರಗಳನ್ನೂ ಧ್ವಂಸ ಮಾಡಬೇಕು, ಅಷ್ಟೇ ಅಲ್ಲ, ಅಲ್ಲಿ ಅದೇ ತಾಣಗಳಲ್ಲಿ ಇಸ್ಲಾಮೀ ಮತಕ್ಕೆ ಸಂಬಂಧಿಸಿದ ಕಟ್ಟಡಗಳನ್ನೇ ಕಟ್ಟಬೇಕು, ಆ ಕಟ್ಟಡಗಳಲ್ಲಿ ಕಾಫಿರರ ದೇವಾಲಯಗಳ ಧ್ವಂಸಾವಶೇಷಗಳನ್ನು ಸ್ಪಷ್ಟವಾಗಿ ಕಾಣುವಂತೆಯೇ ಅಳವಡಿಸಬೇಕು, ಎಂಬುದನ್ನೇ ಇಸ್ಲಾಂ ಹೇಳಿಕೊಂಡು ಬಂದಿದೆ ಮತ್ತು ಮಾಡಿಕೊಂಡೂ ಬಂದಿದೆ. ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿಯೇ ಕಟ್ಟಿದ್ದ ಬಾಬರಿ ಮಸೀದಿಯಲ್ಲಿ ದೊರೆತಿರುವ ಹಿಂದೂ ಶೈಲಿಯ ಸ್ಥಂಭಗಳು ಕೆತ್ತನೆಗಳು ವಿಗ್ರಹಗಳು ಅಕಸ್ಮಾತ್ ಉಳಿದುಕೊಂಡು ಬಂದಿಲ್ಲ. ನಿರ್ಮಾಣದಲ್ಲಿ ಅಳವಡಿಸಲ್ಪಟ್ಟಿರುವುದು ಉದ್ದೇಶಪೂರ್ವಕವಾಗಿಯೇ. ಇಂದಿಗೂ ಭಾರತದಲ್ಲಿ ಹತ್ತಾರು ಸಾವಿರ ಮಸೀದಿಗಳಲ್ಲಿ, ಮಜಾರುಗಳಲ್ಲಿ (ಮಜಾರುಗಳೆಂದರೆ ಇಸ್ಲಾಮೀ ಮತಪ್ರಮುಖರ ಭವ್ಯವಾದ ಗೋರಿಗಳು) ಮಖಬರಾಗಳಲ್ಲಿ ಹಿಂದೂ – ಜೈನ- ಬೌದ್ಧ ಶಿಲ್ಪಗಳನ್ನು ಮತ್ತು ಕೆತ್ತನೆಗಳಿರುವ ಕಂಬಗಳನ್ನು ನೋಡಬಹುದು. ಇವೆಲ್ಲವೂ ಉದ್ದೇಶಪೂರ್ವಕವಾಗಿಯೇ ಉಳಿಸಿಕೊಂಡು ಬಂದಿರುವಂತಹವು. ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು, ಅಲಿಗಢದ ಜಿಹಾದೀ ವಿದ್ವಾಂಸರು ಮತ್ತು ಮಿಷನರಿಗಳು ಬರೆದಿಟ್ಟಿರುವ ವಿಕೃತ ಇತಿಹಾಸವನ್ನು ಶಾಲಾ ಕಾಲೇಜುಗಳಲ್ಲಿ ಓದಿದ ನಮಗೆಲ್ಲಾ ನಿಜ-ಇತಿಹಾಸದ ಇಂತಹ ದಾಖಲೆಗಳನ್ನು ನಂಬುವುದೇ ಕಷ್ಟವಾಗಿದೆ.

ಕಳೆದ ಒಂದು ಸಾವಿರ ವರ್ಷಗಳ ಇತಿಹಾಸದಲ್ಲಿ, ಜಿಹಾದೀ ಆಕ್ರಮಣಕಾರೀ ಸೇನೆಯೊಂದಿಗೆ ಮಾರುವೇಷದ ಮತಪ್ರಚಾರಕರೂ (ಸೂಫಿಗಳು) ಒಳನಾಡಿಗೆ ಹೋಗುತ್ತಿದ್ದರು. ಅನೇಕ (ಮೋಸದ) ವೇಷಗಳಲ್ಲಿ ಆಡಂಬರದ ಡಾಂಭಿಕ ಹೆಸರುಗಳಲ್ಲಿ ಇಸ್ಲಾಮಿನ ಕೆಲಸ ಮಾಡುತ್ತಿದ್ದರು. ದೇವಾಲಯಗಳ ಮೇಲೆ ದಾಳಿ ಮಾಡುವುದರಲ್ಲಿ ಇಂತಹವರದ್ದು ಪ್ರಧಾನವಾದ ಪಾತ್ರ, ಎಂಬುದಕ್ಕೆ ಇಸ್ಲಾಮೀ ದಾಖಲೆಗಳೇ ಇವೆ. ನಾಶವಾದ ದೇವಾಲಯಗಳ ತಾಣಗಳಲ್ಲಿ, ಅವುಗಳ ಧ್ವಂಸಾವಶೇಷಗಳನ್ನೇ ಬಳಸಿಕೊಂಡು ಇವರೆಲ್ಲಾ ತಮಗೆ ಬೇಕಾದಂತೆ ಕಟ್ಟಡಗಳನ್ನೂ ನಿರ್ಮಿಸಿಕೊಂಡು ವಿಹರಿಸುತ್ತಿದ್ದರು. ಆ ನಿರ್ಮಾಣಗಳಿಗೋ ದೊಡ್ಡ ದೊಡ್ಡ ಹೆಸರುಗಳು ಬೇರೆ! ಹಿಂದೂ ದೇವಾಲಯಗಳ ಲೂಟಿಗೆ ನೆರವಾದ ಇಂತಹ ಕೆಲವು ಮತಪ್ರಚಾರಕರು ಆ ಆಕ್ರಮಣಗಳಲ್ಲಿ ಸತ್ತುಹೋಗುತ್ತಿದ್ದ ಘಟನೆಗಳೂ ಜರುಗುತ್ತಿದ್ದವು. ಅಂತಹ ಎಲ್ಲ ತಾಣಗಳಲ್ಲಿ ಶೀಘ್ರವಾಗಿಯೇ ಸ್ಮಾರಕಗಳು ನಿರ್ಮಾಣವಾಗಿ, ಅಂತಹವರನ್ನು ಷಹೀದ್ (ಹುತಾತ್ಮ) ಎಂದು ಘೋಷಿಸಲಾಗುತ್ತಿತ್ತು. ಹೀಗೆ ಹಿಂದೂ ಸಂಸ್ಕೃತಿಯ ಉಗಮಸ್ಥಾನದಾದ್ಯಂತ ಬಹಳ ದೊಡ್ಡ ಸಂಖ್ಯೆಯ ಗುಂಬಜ್‌ಗಳು, ಗಂಜ್‌ಗಳು ಹುಟ್ಟಿಕೊಂಡವು ಮತ್ತು ಅವುಗಳ ಬಗೆಗೆ ಸುಳ್ಳುಕಥೆಗಳೂ ಅಷ್ಟೇ ಬೇಗ ಪ್ರಚಲಿತವಾದವು. ಬಹರಾಯಿಚ್‌ನಲ್ಲಿದ್ದ (ಉತ್ತರ ಪ್ರದೇಶ) ಸೂರ್ಯ ದೇವಾಲಯದ ಮೇಲೆ ದಾಳಿ ಮಾಡಿದಾಗ ಇಂತಹ ಓರ್ವ ಮತಪ್ರಚಾರಕ ಸಯ್ಯಿದ್ ಸಾಲಾರ್ ಮಸೂದ್ ಸತ್ತ. ಅನಂತರದ ದಾಳಿಗಳಲ್ಲಿ ಬಹರಾಯಿಚ್‌ನ ಆ ಸೂರ್ಯ ದೇವಾಲಯವು ಧ್ವಂಸವಾಯಿತು ಮತ್ತು ಅದೇ ತಾಣದಲ್ಲಿ ಅವನ ಹೆಸರಿನ ಮಜಾರ್ ತಲೆಯೆತ್ತಿ ನಿಂತಿದೆ. ಅವನು ಈಗ “ಬಹರಾಯಿಚ್‌ನ ಹೆಮ್ಮೆ” ಎನಿಸಿದ್ದಾನೆ ಮತ್ತು ಅವನ ಬಗೆಗೆ ತುಂಬ ತುಂಬ ಸಾಹಿತ್ಯ ಸಿಕ್ಕುತ್ತದೆ. ಇತಿಹಾಸದಲ್ಲಿ ಇಂತಹ ಜಿಹಾದೀ ದಾಳಿಗಳಲ್ಲಿ ಬದುಕುಳಿದ ಅನೇಕ ಮತಪ್ರಚಾರಕರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ ತಾಣಗಳಲ್ಲಿಯೇ ನೆಲೆನಿಂತರು. ಒಳನಾಡಿನ ತುಂಬ ಇರುವ ದೊಡ್ಡ ಸಂಖ್ಯೆಯ ಮಸೀದಿಗಳು, ಮಜಾರುಗಳು ಇಂತಹುವೇ ಮತ್ತು ಇವೆಲ್ಲವೂ ದೇವಾಲಯಗಳ ತಾಣಗಳ ಮೇಲೆಯೇ ನಿರ್ಮಾಣವಾಗಿವೆ.

ಮೊದಮೊದಲ ಕಾಲಾವಧಿಯ ಸೂಫಿಗಳಿಗಾಗಲೀ, ಪಾಪಾಸುಕಳ್ಳಿಯಂತೆ ಹುಟ್ಟಿ ಬೆಳೆದ ಅನಂತರದ ಸಾಲುಸಾಲು ಸೂಫಿ ಸಂತತಿಗಾಗಲೀ ಒಂದೇ ಮಾರ್ಗ, ಒಂದೇ ಗುರಿ. ಗೊಂದಲವೇ ಇಲ್ಲ, ಎಲ್ಲರೂ ಇಸ್ಲಾಮೀ ಸಾಮ್ರಾಜ್ಯಶಾಹಿ ಸ್ಥಾಪನೆಯ ಹಾದಿಯ ಮುಜಾಹಿದ್‌ಗಳೇ. ವಿಶಾಲ ಭಾರತವನ್ನು ಮತ್ತು ಈ ಭಾಗದ ಇತಿಹಾಸವನ್ನು ಗಮನಿಸಿ ಹೇಳುವುದಾದರೆ, ಈ ಯಾವ ಸೂಫಿಯ ಪ್ರಜ್ಞೆಯಲ್ಲೂ ಅಧ್ಯಾತ್ಮದ ಒಂದು ಎಳೆಯೂ ಕಾಣುವುದಿಲ್ಲ. ಅನಂತರದ ಕಾಲಘಟ್ಟದಲ್ಲಿ ಸಾ|| ಯುಗದ 15, 16, 17, 18ನೆಯ ಶತಮಾನಗಳಲ್ಲಿ ಸ್ಪೇನ್ ಮತ್ತು ಪೋರ್ತುಗಲ್ ದೇಶಗಳ ಸಾಮ್ರಾಜ್ಯಶಾಹಿ, ವಸಾಹತುಶಾಹಿ ದುಃಶಕ್ತಿಗಳೊಂದಿಗೆ ಷಾಮೀಲಾಗಿ ಕೆಲಸ ಮಾಡಿದ ಕ್ರೈಸ್ತ ಮತಾಂತರಿ ಮಿಷನರಿಗಳಂತೆಯೇ ಈ ದೇಶದಲ್ಲಿ ಕಾರ್ಯನಿರ್ವಹಿಸಿದ ಬಹುತೇಕ ಎಲ್ಲ ಸೂಫಿಗಳೂ ಮತಾಂಧರಾಗಿದ್ದರು ಮತ್ತು ಇಸ್ಲಾಮೀ ಪ್ರಭುತ್ವದ ಸ್ಥಾಪನೆಗಾಗಿ ಪಣತೊಟ್ಟ ಉಗ್ರಗಾಮಿಗಳಾಗಿದ್ದರು.

ಈ ಸೂಫಿಗಳ ಹಿಂಡು, ಇಸ್ಲಾಮೀ ಆಕ್ರಮಣಕಾರಿ ಸೇನೆಯೊಂದಿಗೆ, ಇಲ್ಲವೇ ಮೊದಲೇ, ಗುರಿಯತ್ತ ಸಾಗಿಬಿಡುತ್ತಿತ್ತು. ಇಸ್ಲಾಮೀ ಸಾಮ್ರಾಜ್ಯ ಸ್ಥಾಪನೆಗಾಗಿ ಸೇನೆಯ ಕಣ್ಣುಕಿವಿಗಳಂತೆ (ಬೇಹುಗಾರರಂತೆ) ಕೆಲಸ ಮಾಡಿ ಯುದ್ಧ ಗೆಲ್ಲಲು ಮೊದಲೇ ಹೋಗಿ ತಮ್ಮ ಸೇನೆಗೆ ಮಾಹಿತಿ ನೀಡುವ ಕೆಲಸದಲ್ಲಿ ಅತಿಹೆಚ್ಚು ಸಫಲರಾದವರು ಈ ‘ಚಿಶ್ತೀಯಾ ಸಿಲ್‌ಸಿಲಾ’ ಸೂಫಿಗಳು. ಅದರಲ್ಲೂ ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಈ ಸೂಫಿಗಳು ಹೋಗಿ ಪ್ರಮುಖ ಸ್ಥಳಗಳಲ್ಲಿ ನೆಲೆಸಿದರೋ, ಅಲ್ಲಿಯ ಹಿಂದೂಗಳು ಇವರ ನಿಜಸ್ವರೂಪವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ. ಅರ್ಥ ಮಾಡಿಕೊಳ್ಳುವುದರಲ್ಲಿ ಕಾಲ ಮಿಂಚಿಹೋಗಿತ್ತು. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮೊಹಮ್ಮದ್ ಬಿನ್ ತುಘಲಕ್ ಅವರ ಸೇನಾ ಕಾರ್ಯಾಚರಣೆಗಳನ್ನು, ಆಕ್ರಮಣಗಳನ್ನು ಸರಿಯಾಗಿ ತಿಳಿದುಕೊಳ್ಳಲು, ದಕ್ಷಿಣ ಭಾರತದಾದ್ಯಂತ ಹರಡಿದ್ದ ಸೂಫಿಗಳ ಬೇಹುಗಾರಿಕೆಯ ಜಾಲದ ಸರ್ವೇಕ್ಷಣೆಯನ್ನು ಮೊದಲು ಮಾಡಬೇಕಾಗುತ್ತದೆ. ದೆಹಲಿಯ ಖ್ಯಾತ ಚಿಶ್ತೀಯಾ ಸೂಫಿ ತರೀಕಾದ (ಸಿಲ್‌ಸಿಲಾ) ನಿಜಾಮುದ್ದೀನ್ ಔಲಿಯಾ ಎಂಬವನು ಸೂಫಿಗಳನ್ನು ತಂಡತಂಡವಾಗಿ ಎಲ್ಲ ದಿಕ್ಕುಗಳಿಗೆ – ಎಲ್ಲ ಪ್ರಾಂತಗಳಿಗೆ ಕಳುಹಿಸಿದನು. ಸ್ಥಳೀಯ ಹಿಂದೂ ಸಮುದಾಯದ ವಿರುದ್ಧ ನಡೆದ ಜಿಹಾದ್ ಕಾರ್ಯಾಚರಣೆಯಲ್ಲಿ ಈ ಎಲ್ಲ ಸೂಫಿಗಳೂ ತೀವ್ರತೆಯಿಂದ ಕೆಲಸ ಮಾಡಿದರು. ಇಸ್ಲಾಮೀ ಪ್ರಭುತ್ವದ ಸೇವೆ ಸಲ್ಲಿಸಲು, ನಿಜಾಮುದ್ದೀನನ ಪ್ರಧಾನ ಶಿಷ್ಯನಾದ ನಸೀರುದ್ದೀನ್ ಚಿರಾಗ್-ಈ-ದಿಹ್ಲೀ, ಈ ಸೂಫಿಗಳಿಗೆ ಪ್ರೇರಣೆ ನೀಡಿದನು. ಅವನು ಈ ಸೂಫಿಗಳಿಗೆ ಕಾವ್ಯಾತ್ಮಕವಾಗಿ,

The essence of Sufism is not an external garment,
Gird up your loins to serve the Sultan and be a Sufi

“ಸೂಫೀವಾದದ ಜೀವಾಳವು ಮನುಷ್ಯ ಧರಿಸುವ ಹೊರಗಿನ ಬಟ್ಟೆಯಲ್ಲಿಲ್ಲ. ಸುಲ್ತಾನನಿಗೆ ಸೇವೆ ಸಲ್ಲಿಸಲು ಸವಾಲು ಸ್ವೀಕರಿಸಬೇಕು, ಟೊಂಕ ಕಟ್ಟಿ ನಿಭಾಯಿಸಬೇಕು. ಆಗ ನೀವು ನಿಜವಾದ ಸೂಫಿ ಎನಿಸಿಕೊಳ್ಳುವಿರಿ” ಎಂದು ಹೇಳಿದನಂತೆ (ಲೇಖಕ ಎಸ್.ಎ.ಎ.ರಿಜ್ವಿ. ಗ್ರಂಥ: “ಎ ಹಿಸ್ಟರಿ ಆಫ್ ಸೂಫಿಸ್ಮ್ ಇನ್ ಇಂಡಿಯಾ” ಸಂಪುಟ 1. ನವದೆಹಲಿ. 1978ರ ಪ್ರಕಟಣೆ. ಪುಟ 189).

ಸಾಮಾನ್ಯ ಯುಗದ 1823ರಲ್ಲಿ ಇಸ್ಲಾಂ ಮತನಿಷ್ಠ ನವಾಬನೊಬ್ಬನು ತಮಿಳುನಾಡಿನ ಚೆಂಗಲಪಟ್ಟು, ದಕ್ಷಿಣ ಆರ್ಕಾಟ್, ತಂಜಾವೂರು, ತಿರುಚಿರಾಪಲ್ಲಿ ಮತ್ತು ಉತ್ತರ ಆರ್ಕಾಟ್ ಜಿಲ್ಲೆಗಳಲ್ಲಿರುವ ಇಸ್ಲಾಮೀ ಪವಿತ್ರ ಸ್ಥಳಗಳಿಗೆ ಪ್ರವಾಸ ಮಾಡಿದನು ಮತ್ತು ಅವನ ಈ ಪ್ರವಾಸದ ಕಥನವೂ ಲಭ್ಯವಿದೆ. ಆ ನವಾಬನ ಆಸ್ಥಾನ ಲಿಪಿಕಾರನೇ ಈ ವಿವರಗಳನ್ನು ದಾಖಲಿಸಿದ್ದಾನೆ. ಈ ಸೂಫಿಗಳು ಎಲ್ಲೆಲ್ಲಿಗೆ ಹೋದರು ಮತ್ತು ಏನೇನು ಮಾಡಿದರು ಎಂಬ ವಿವರಗಳು ಇದರಿಂದ ದೊರೆಯುತ್ತವೆ. ಸಾ|| ಯುಗದ 1565ರಲ್ಲಿ ವಿಜಯನಗರ ಸಾಮ್ರಾಜ್ಯವು ನಾಶವಾದ ಮೇಲೆ ತಮಿಳುನಾಡಿನ ಈ ಭಾಗಗಳು ಮತ್ತೆ ಇಸ್ಲಾಮೀ ಆಕ್ರಮಣಗಳಿಗೆ ತುತ್ತಾದವು. ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಲು ಮತ್ತು ಹಿಂದೂಗಳನ್ನು ಮತಾಂತರಿಸಲು ಸೂಫಿಗಳು ಹಿಂಡುಗಳಲ್ಲಿ ವಕ್ಕರಿಸಿದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ?

“ಈ ಪ್ರದೇಶದಲ್ಲಿ ಇಸ್ಲಾಮನ್ನು ಈ ಸೂಫಿಗಳು ಭದ್ರವಾಗಿ ನೆಲೆಗೊಳಿಸಿದರು” ಎಂದು ಈ ಲಿಪಿಕಾರನು ತುಂಬು ಹೃದಯದಿಂದ ಶ್ಲಾಘಿಸಿದ್ದಾನೆ. ಈ “ಕಾಂಚೀಪುರಂನ ಹೆಮ್ಮೆ” ಎಂದರೆ ಹಜರತ್ ನತ್ತರ್ ವಲೀ; ಅವನೇ ಈ ಕಾಂಚೀಪುರಂನ ಮುಖ್ಯ ದೇವಾಲಯವನ್ನು ಬಲಾತ್ಕಾರದಿಂದ ವಶಕ್ಕೆ ಪಡೆದ ಮತ್ತು ಅದನ್ನು ತನ್ನ ಖಾನ್‌ಕಾ (ಸೂಫಿಗಳ ತಂಗುದಾಣ)ವನ್ನಾಗಿ ಪರಿವರ್ತಿಸಿದ. ದೇವಾಲಯದ ಶಿವಲಿಂಗ ಕುರಿತು ಈ ಲಿಪಿಕಾರನು “ಸೈತಾನನನ್ನು (ಶಿವಲಿಂಗ) ತುಂಡುತುಂಡು ಮಾಡಿ ಶಾಶ್ವತ ನರಕಕ್ಕೆ ಕಳುಹಿಸಲಾಯಿತು. ಬುತ್-ಲಿಂಗ್ (ಭೂತಲಿಂಗ) ಹೆಸರಿನ ಈ ವಿಗ್ರಹವನ್ನು ಕಾಫಿರರು ಪೂಜಿಸುತ್ತಿದ್ದರು; ಅದನ್ನು ಕತ್ತರಿಸಿ ರುಂಡವನ್ನು ಬೇರ್ಪಡಿಸಲಾಯಿತು. ದೇಹದ (ವಿಗ್ರಹದ) ಒಂದು ಭಾಗವು ನೆಲಕ್ಕುರುಳಿತು. ಅದೇ ಜಾಗದಲ್ಲಿ ಈಗ ವಲೀ ಅವರ ಗೋರಿ ನಿರ್ಮಿತವಾಗಿದೆ ಮತ್ತು ಇಂದಿಗೂ (ಸಾಮಾನ್ಯ ಯುಗದ 1823) ತನ್ನ ಪ್ರಭಾವವನ್ನು ಬೀರುತ್ತಿದೆ” ಎಂದು ದಾಖಲಿಸಿದ್ದಾನೆ (ಗುಲಾಮ್ ಅಬ್ದುಲ್ ಖಾದಿರ್ ನಜೀರ್ ಬರೆದ “ಬಾಬ್ರಿ ಆಜಮ್ ಅಥವಾ ಆಜಮ್ ಶಾ ನವಾಬ್ ವಲಾಜಾ ಅವರ ಯಾತ್ರೆಗಳು”. ಮದ್ರಾಸ್. 1960. ಪುಟ 128).

ಇಸ್ಲಾಮೀ ಆಕ್ರಮಣದ ಮೊದಲ ಹಂತದ ಆಕ್ರಮಿತ ಸ್ಥಳಗಳನ್ನು ಗಮನಿಸಿದಾಗ, ಹಿಂದೂ ದೇವಾಲಯಗಳು ಧ್ವಂಸವಾದ ತಾಣಗಳಲ್ಲಿರುವ ಮಸೀದಿಗಳು ಮತ್ತು ಖಾನ್‌ಕಾಗಳು, ಸೂಫಿಗಳಿಂದ ಇಲ್ಲವೇ ಸೂಫಿಗಳಿಗಾಗಿ ನಿರ್ಮಾಣವಾಗಿರುವುದು ಆಕಸ್ಮಿಕವೇನಲ್ಲ, ಎಂಬುದು ರುಜುವಾತಾಗುತ್ತದೆ. ಅಂತೆಯೇ, ಧ್ವಂಸವಾದ ಹಿಂದೂ ದೇವಾಲಯಗಳ ಅವಶೇಷಗಳಿಂದಲೇ ಬಹುಪಾಲು ಈ ಮಸೀದಿಗಳನ್ನು – ಖಾನ್‌ಕಾಗಳನ್ನು ನಿರ್ಮಿಸಲಾಗಿದೆ, ಎಂಬುದೂ ಖಚಿತವಾಗುತ್ತದೆ. ಲಾಹೋರ್, ಮುಲ್ತಾನ್ (ಮೂಲಸ್ಥಾನ), ಉಚ್ (ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿದೆ), ಅಜ್ಮೀರ್, ದೆಹಲಿ, ಬದಾಯ್ಞೂ (ಉತ್ತರ ಪ್ರದೇಶ), ಕನೌಜ್ (ಕನ್ಯಾಕುಬ್ಜ), ಕಲ್ಪಿ, ಬಿಹಾರ್ ಷರೀಫ್, ಮಾನೇರ್, ಲಖನೌತಿ (ಲಕ್ಷ್ಮಣಾವತಿ), ಪಾಟಣ, ಪಾಟ್ನಾ, ಬುರ್ಹಾನ್‌ಪುರ, ದೌಲತಾಬಾದ್, ಗುಲಬರ್ಗಾ, ಬೀದರ್, ಬಿಜಾಪುರ (ಇಂದಿನ ವಿಜಯಪುರ), ಗೋಲ್ಕೊಂಡ, ಆರ್ಕಾಟ್, ವೆಲ್ಲೋರ್, ತಿರುಚಿರಾಪಲ್ಲಿ, ಇತ್ಯಾದಿ ಸ್ಥಳಗಳು ಪ್ರಮುಖ ಸೂಫಿ ಕೇಂದ್ರಗಳಾಗಿದ್ದವು. ಇಲ್ಲೆಲ್ಲಾ ಅನೇಕ ದರ್ಗಾಗಳಿವೆ ಮತ್ತು ಇವೆಲ್ಲವೂ ಇಸ್ಲಾಮೀ ವಿಗ್ರಹ ಭಂಜನೆಯ ಪುರಾವೆಗಳಾಗಿವೆ. ಈ ಲಕ್ಷಣವನ್ನೇ ಒಳನಾಡಿನ ಅನೇಕ ಕಡೆಗಳಲ್ಲಿರುವ ಮಸೀದಿಗಳಲ್ಲಿ, ದರ್ಗಾಗಳಲ್ಲಿ ಕಾಣುತ್ತೇವೆ. ಅಲ್ಲಾಹುವು ಬೇರಾವ ದೈವವನ್ನೂ ಸಹಿಸುವುದಿಲ್ಲ ಮತ್ತು ಅವನು ಪ್ರವಾದಿಯವರಿಗೆ ಹೇಳಿರುವ ರೀತಿಯ ಆರಾಧನಾ ಪದ್ಧತಿಯನ್ನು ಬಿಟ್ಟು, ಬೇರಾವ ಪದ್ಧತಿಯನ್ನೂ ಒಪ್ಪುವುದಿಲ್ಲ. ಬಹುಮುಖ್ಯವಾಗಿ ಈ ಸೂಫಿಗಳು ಅಂತಹ ಅಲ್ಲಾಹುವಿನ ಸಮರ್ಪಿತ ಯೋಧರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನೆಹರೂ ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!

Exit mobile version