Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಭಾರತ- ದ್ವೇಷಿ ಹಿಟ್ಲರನ ಬಗೆಗೂ ಘನಘೋರ ಸುಳ್ಳುಗಳು

adolf hitler

ಪ್ರಚಲಿತ ಇತಿಹಾಸದ ಸುಳ್ಳುಗಳ ವೈವಿಧ್ಯವೇ ವೈವಿಧ್ಯ. ಅನೇಕ ವರ್ಷಗಳಿಂದ ಬರೀ ಹಸೀ-ಸುಳ್ಳುಗಳನ್ನು ಓದಿ ಓದಿ ಸಾಕಾಗಿದೆ. ನನಗಿರಲಿ, ನಿಮಗೂ ಹಾಗೆಯೇ ಅನ್ನಿಸಿರಬಹುದು.

ಚರ್ಚಿಲ್, ಸ್ಟ್ಯಾಲಿನ್, ಮಾವೋ ಮೊದಲಾದ ಪಾಶವೀ ವಿಷಜಂತುಗಳ ಸಾಲಿಗೆ ಸೇರುವ ಈ ಹಿಟ್ಲರ್‌ಗೆ, ಪಶ್ಚಿಮ ಯೂರೋಪಿನ ಶ್ವೇತವರ್ಣೀಯರನ್ನು ಬಿಟ್ಟು ಯಾರನ್ನು ಕಂಡರೂ ಆಗುತ್ತಿರಲಿಲ್ಲ. ಇಸ್ಲಾಮಿನ ಅನುಯಾಯಿಗಳು ವಿನಾಕಾರಣ ಕಾಫಿರರನ್ನು ದ್ವೇಷಿಸುವಂತೆಯೇ, ಈತ ಕಮ್ಯೂನಿಸ್ಟರನ್ನು ಯಹೂದಿಗಳನ್ನು, ಭಾರತೀಯರನ್ನು ಹೌದು ಭಾರತೀಯರನ್ನೂ ವಿಪರೀತ ದ್ವೇಷಿಸುತ್ತಿದ್ದ. ಜರ್ಮನಿಯೂ ಸೇರಿದಂತೆ, ಪಶ್ಚಿಮ ಯೂರೋಪಿನ ಶ್ವೇತವರ್ಣೀಯರನ್ನು ಹೊರತುಪಡಿಸಿ ಬೇರೆ ಯಾರಿಗೂ ಆಳುವ ಹಕ್ಕುಗಳೂ ಇಲ್ಲ, ಬದುಕುವ ಹಕ್ಕುಗಳೂ ಇಲ್ಲ, ಇರಬಾರದು ಎಂದೇ ಅವನ ಖಚಿತ ಅಭಿಮತ. ಭಾರತೀಯರು ಕೊಳಕರು, ಮೂರ್ಖರು, ಸಂಸ್ಕೃತಿವಿಹೀನರು, ಅಶುದ್ಧ ಜನಾಂಗ ಎನ್ನುತ್ತಿದ್ದ. ಹಾಗೆ ಅನೇಕ ಬಾರಿ ಹೇಳಿದ. ಈ ಕುರಿತಂತೆ ತುಂಬ ದಾಖಲೆಗಳೂ ಇವೆ.

ಹಿಟ್ಲರ್ ಅಧಿಕಾರದಲ್ಲಿದ್ದುದು 1933ರಿಂದ 1945ರವರೆಗೆ. ಭಾರತೀಯ ಮೂಲದ ಸ್ವಾತಂತ್ರ್ಯ ಹೋರಾಟಗಾರರು ವಿದೇಶೀ ಬೆಂಬಲಕ್ಕಾಗಿ ಜರ್ಮನಿಗೆ ಬಂದಾಗ, 1920ರ ದಶಕದಲ್ಲಿಯೇ ಹಿಟ್ಲರ್ ಸಿಡಿಮಿಡಿಗೊಳ್ಳುತ್ತಿದ್ದ, ಜನಾಂಗೀಯ ಕಾರಣಕ್ಕೇ ದ್ವೇಷಿಸುತ್ತಿದ್ದ. “ಇತ್ತೀಚೆಗೆ ಬರ್ಲಿನ್‌ನಲ್ಲಿ ತುಂಬಾ ಜನ ಭಾರತೀಯರನ್ನು ನೋಡುತ್ತಿದ್ದೇನೆ. ಜರ್ಮನಿ ದೇಶವು ಅವರಿಗೆ ಯಾವ ನೆರವೂ ನೀಡಬಾರದು. ಬ್ರಿಟನ್ ನಮ್ಮ ಮಿತ್ರದೇಶ” ಎನ್ನುತ್ತಿದ್ದ. ಅವನು ಅಧಿಕಾರಕ್ಕೆ ಬಂದ ಹೊಸದರಲ್ಲಿ ಜರ್ಮನಿಯಲ್ಲಿದ್ದ ಭಾರತೀಯರ ಮೇಲೆ ದಾಳಿ ನಡೆಯಿತು, ಬಹಳ ಜನ ಸೆರೆಮನೆಗೆ ತಳ್ಳಲ್ಪಟ್ಟರು ಮತ್ತು ಶಾರೀರಿಕ ಹಿಂಸೆಯನ್ನು ಅನುಭವಿಸಿದರು. ತುಂಬ ಜನ ಬದುಕುಳಿದುದೇ ಹೆಚ್ಚು. ಬಹಳ ಜನ ಜರ್ಮನಿಯನ್ನೇ ತೊರೆದುಹೋದರು, ತಪ್ಪಿಸಿಕೊಂಡುಹೋದರು, ಹಾಗಾಗಿ ಅವರ ಜೀವ ಉಳಿಯಿತು. ಎರಡನೇ ಮಹಾಯುದ್ಧ ಪ್ರಾರಂಭವಾದ1939ರ ಅನಂತರ ಆಗಿದ್ದರೆ, ಅವನು ಎಲ್ಲ ಭಾರತೀಯರನ್ನೂ (ಯಹೂದಿಗಳಂತೆಯೇ) ವಿಷಾನಿಲ ಕೂಪಗಳಿಗೆ (Gas Chambers) ಹಾಕುತ್ತಿದ್ದುದು ನಿಶ್ಚಿತ.

1925- 26ರಲ್ಲಿಯೇ ಪ್ರಕಟವಾದ ಹಿಟ್ಲರ್‌ನ ಆತ್ಮಕಥೆ “ಮೇಯ್ನ್ ಕ್ಯಾಂಫ್” (Mein Kampf) ಭಾರತದಲ್ಲಿಯೂ “ಜನಪ್ರಿಯ”ವಾಗಿದೆ. ಆದರೂ, ಹಿಟ್ಲರನ ಭಾರತ-ದ್ವೇಷಿ ಮನೋಭಾವದ ಬಗೆಗೆ ನಾವೆಲ್ಲಾ ತಿಳಿದುಕೊಂಡಿರುವುದು ಕಡಿಮೆಯೇ. ಅಂತಹ ಎಲ್ಲ ಕೃತಿಗಳನ್ನೂ ನಾವು ವಿಮರ್ಶಾತ್ಮಕವಾಗಿ ಓದುವ ಆವಶ್ಯಕತೆಯಿದೆ. ಅವನು ಅಧಿಕಾರಕ್ಕೆ ಏರುವ ಮೊದಲೇ ತನ್ನ ಜನಾಂಗೀಯ ದ್ವೇಷದ ಅಭಿಮತವನ್ನು ಸ್ಪಷ್ಟವಾಗಿಯೇ ಸಾರಿದ್ದಾನೆ.

ತಮ್ಮ ಧೈರ್ಯ, ಸಾಹಸ ಮತ್ತು ದೇಶಪ್ರೇಮಗಳಿಗೆ ಸುಭಾಷ್ ಚಂದ್ರ ಬೋಸ್ ಅದ್ವಿತೀಯರು. ಅವರು 1933ರಿಂದ 1936ರವರೆಗೆ ಯೂರೋಪಿನಲ್ಲಿದ್ದರು. ಜರ್ಮನಿಯಲ್ಲಿದ್ದಾಗ, ಹಿಟ್ಲರನ ಆತ್ಮಕಥೆ ಈ “ಮೇಯ್ನ್ ಕ್ಯಾಂಫ್” ಪುಸ್ತಕದಲ್ಲಿನ ಭಾರತ-ವಿರೋಧೀ ಸಾಲುಗಳ ಬಗೆಗೆ ಬೋಸ್ ಅವರು ಪ್ರತಿಭಟಿಸಿದರು, ನಾಜಿ ಪಕ್ಷದ ಪ್ರಮುಖರಿಗೂ ಪತ್ರ ಬರೆದರು, ಪತ್ರಿಕೆಗಳಿಗೂ ಬರೆದರು. ನಿಂದನೆಯ ಆ ಸಾಲುಗಳನ್ನು ಹಿಂಪಡೆಯಬೇಕೆಂದು ಸ್ಪಷ್ಟವಾಗಿ ಆಗ್ರಹಿಸಿದರು. ಅನಂತರವೂ, ಎರಡನೆಯ ಮಹಾಯುದ್ಧದ ನಡುವೆ ಭೇಟಿ ಮಾಡಿದಾಗಲೂ, ಸುಭಾಷರು ನೇರವಾಗಿ ಹಿಟ್ಲರ್ ನಿಗೇ ಈ ಸಾಲುಗಳ ಬಗೆಗೆ ಆಕ್ಷೇಪ ವ್ಯಕ್ತಪಡಿಸಿದರು. ಗುಲಾಮ ದೇಶದವರೊಬ್ಬರು ಮೂರ್ಖ, ಹುಚ್ಚ ಸರ್ವಾಧಿಕಾರಿಯ ಮುಂದೆ ಹಾಗೆ ಹೇಳಲು ನಿಜವಾಗಿಯೂ ಎಂಟೆದೆ ಬೇಕು.

ಅವರು ಭಾರತದಿಂದ ತಪ್ಪಿಸಿಕೊಂಡು ಹೋದುದು 1941ರಲ್ಲಿ. ಜರ್ಮನಿಗೆ ಹೋಗಿ, ಬ್ರಿಟಿಷರ ವಿರುದ್ಧ ಹಿಟ್ಲರ್ ನ ಬೆಂಬಲಕ್ಕಾಗಿ ಪ್ರಯತ್ನಿಸಿದರು. ಸುಭಾಷರಿಗೆ 13 ತಿಂಗಳ ಕಾಲ ಸತಾಯಿಸಿ, ಕಾಯಿಸಿ ಹಿಟ್ಲರ್ ತನ್ನ ಭೇಟಿಗೆ ಅವಕಾಶ ನೀಡಿದ. ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಹಿಟ್ಲರ್ ಇಂಗ್ಲೆಂಡಿನ ಮೇಲೆ ಯುದ್ಧ ಸಾರಿದ, ಇಂಗ್ಲೆಂಡಿನ ಮೇಲೆ ಯುದ್ಧ ಸಾರಿದ ಎಂದು ತುತ್ತೂರಿ ಊದಿದ್ದಾರೆ. ನಿಜ-ದಾಖಲೆಗಳನ್ನು ನೋಡಿದರೆ, ಈ ಹುಚ್ಚ ಹಿಟ್ಲರ್ ನಿಜವಾಗಿಯೂ ಇಂಗ್ಲೆಂಡಿನ ಮೇಲೆ ಯುದ್ಧ ಮಾಡಿದನೇ, ಅವನ ಪ್ರಾಥಮಿಕ ಆದ್ಯತೆ – ಸಾಮರಿಕ ಗುರಿ ನಿಜವಾಗಿಯೂ ಇಂಗ್ಲೆಂಡ್ ಆಗಿತ್ತೇ, ಎಂಬ ಅನುಮಾನ ಮೂಡುತ್ತದೆ. ಅವನು ಮೊದಲು ಪೋಲೆಂಡನ್ನು ಆಕ್ರಮಿಸಿದ. ಆಗ ಬ್ರಿಟನ್ – ಫ್ರಾನ್ಸ್ ದೇಶಗಳು ಒಟ್ಟಾಗಿಯೇ ವಿರೋಧಿಸಿದವು. ಆಗ ದುಷ್ಟ ಸ್ಟ್ಯಾಲಿನ್ “ನಾವೂ ಪೋಲೆಂಡಿನ ಮೇಲೆ ಆಕ್ರಮಣ ಮಾಡುತ್ತೇವೆ, ಇಬ್ಬರೂ ಸೇರಿ ಪೋಲೆಂಡನ್ನು ಹಂಚಿಕೊಳ್ಳೋಣ” ಎಂದ. ಹಂಚಿಕೊಳ್ಳುವ ಪ್ರಸ್ತಾವಕ್ಕೆ ಹಿಟ್ಲರ್ ಒಪ್ಪಿಕೊಂಡ.

೧೯೪೧ರಲ್ಲಿ ಹಿಟ್ಲರ್ ರಷ್ಯಾ ಮೇಲೆಯೇ ಆಕ್ರಮಣ ಮಾಡಿ ಅಟ್ಟಹಾಸ ಮಾಡಿದ. ಪ್ರತಿಕೂಲ ವಾತಾವರಣವೂ ಸೇರಿ ಆತ ಸೋತ, ನಾಶವೂ ಆದ. ಇಲ್ಲಿ ಭಾರತೀಯ ಕಮ್ಯೂನಿಸ್ಟರ ಎಡಬಿಡಂಗಿ ವರ್ತನೆಯೂ ನೆನಪು ಮಾಡಿಕೊಳ್ಳಬೇಕಾದುದೇ. ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿದ್ದಾಗ ಜರ್ಮನಿ ಮತ್ತು ರಷ್ಯಾ ದೇಶಗಳ ಅನೈತಿಕ ಸಾಂಗತ್ಯವಿತ್ತು. ಈ ಕಾರಣದಿಂದ ಇಲ್ಲಿನ ಕಮ್ಯೂನಿಸ್ಟರು ಜರ್ಮನಿಯ ಪರವಾದ ನಿಲುವು ಹೊಂದಿದ್ದು, ಬ್ರಿಟಿಷರನ್ನು ವಿರೋಧಿಸಿದರು. ಅನಂತರ ಹುಚ್ಚ ಹಿಟ್ಲರ್ ರಷ್ಯಾ ಮೇಲೆಯೇ ಆಕ್ರಮಣ ಮಾಡಿದಾಗ “ಯೂ ಟರ್ನ್” ಹೊಡೆದು, ಹಿಟ್ಲರ್ ವಿರುದ್ಧ ಬ್ರಿಟಿಷರನ್ನು ಬೆಂಬಲಿಸಿದರು. ಇಷ್ಟು ಸಾಲದು ಎಂದು ಬ್ರಿಟಿಷರಿಂದ ಹಣ ಪಡೆದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ – ಕ್ರಾಂತಿಕಾರಿಗಳ ಗೋಪ್ಯ ಮಾಹಿತಿಯನ್ನು ಬ್ರಿಟಿಷ್ ಬೇಹುಗಾರರಿಗೆ ನೀಡುತ್ತಿದ್ದರು. ಈ ಕೆಲವು ಸಂಗತಿಗಳನ್ನು ಅರುಣ್ ಶೌರಿ ಅವರು ತಮ್ಮ “ದಿ ಓನ್ಲಿ ಫಾದರ್ ಲ್ಯಾಂಡ್” (“The Only Fatherland”:ಪ್ರಕಟಣೆ 1991) ಕೃತಿಯಲ್ಲಿ ಬಯಲು ಮಾಡಿದ್ದಾರೆ. ಹಾಗೆಂದೇ, ಕಮ್ಯೂನಿಸ್ಟರಿಗೆ ಶೌರಿ ಅವರ ಮೇಲೆ ಇನ್ನಿಲ್ಲದ ಸಿಟ್ಟು.


ಭಾರತ, ಅಷ್ಟೇಕೆ ಜಗತ್ತು, ಕಂಡ ಅತ್ಯುತ್ತಮ ಹಾಕಿ ಆಟಗಾರ ಎಂದರೆ ಧ್ಯಾನ್ ಚಂದ್ ಅವರೇ. 1936ರ ಬರ್ಲಿನ್ ಒಲಂಪಿಕ್ಸ್ ನಲ್ಲಿ ಧ್ಯಾನ್ ಚಂದ್ ರ ಅತ್ಯದ್ಭುತ ಆಟ ನೋಡಿ ಹಿಟ್ಲರ್ ಸಂಭ್ರಮಿಸಿದ, “ಜರ್ಮನಿಯ ನಾಗರಿಕತ್ವ ಮತ್ತು ಸೇನೆಯಲ್ಲಿ ಒಳ್ಳೆಯ ಕೆಲಸ ಕೊಡುತ್ತೇನೆ” ಎಂದ, ಇತ್ಯಾದಿ ಇತ್ಯಾದಿ ಕೇಳಿ ನಾವೆಲ್ಲ ತುಂಬ ಸಂತೋಷಿಸಿದ್ದೆವು. ಹಿಟ್ಲರ್ ಅಂತಹ ರಾಕ್ಷಸನಲ್ಲಿಯೂ ಒಬ್ಬ ಭಾರತೀಯ ಆಟಗಾರನನ್ನು ಮೆಚ್ಚುವ ಸದ್ಗುಣವಿತ್ತೇ ಎಂದು ಆಶ್ಚರ್ಯವೂ ಆಯಿತು. ಇತಿಹಾಸಕಾರ ಮತ್ತು ಲೇಖಕ ವೈಭವ ಪುರಂದರೆ ಅವರು ಬರೆದಿರುವ ಹಿಟ್ಲರ್ ಅಂಡ್ ಇಂಡಿಯಾ (Hitler and India : The untold story of his hatred for the country and its people) ಕೃತಿಯು ದಾಖಲಿಸಿರುವ ಮತ್ತು ಪ್ರಸ್ತುತಪಡಿಸಿರುವ ನಿಜ-ಇತಿಹಾಸದ ದಾಖಲೆಗಳು ನಮ್ಮನ್ನು ನಿಬ್ಬೆರಗಾಗಿಸುತ್ತವೆ, ವಿಷಣ್ಣರನ್ನಾಗಿಯೂ ಮಾಡುತ್ತವೆ.

ಧ್ಯಾನ್ ಚಂದರ ಆಟವನ್ನು ಮೆಚ್ಚುವುದಿರಲಿ, ಹಿಟ್ಲರ್ ಗೆ ಜರ್ಮನಿಯು ಒಲಂಪಿಕ್ಸ್ ಕ್ರೀಡಾಕೂಟವನ್ನು ಪ್ರಾಯೋಜಿಸಿದುದೇ ಇಷ್ಟವಿರಲಿಲ್ಲ. ಆದರೆ, ಅದು ಅವನು ಅಧಿಕಾರಕ್ಕೆ ಬರುವ ಮೊದಲೇ ಅವನ ಪೂರ್ವಾಧಿಕಾರಿಗಳು ತೆಗೆದುಕೊಂಡ ನಿರ್ಧಾರವಾಗಿತ್ತು.

“ಆರ್ಯ” ಎಂಬ ಪದವು ಭಾರತಕ್ಕೇ ವಿಶಿಷ್ಟವಾದ ಮತ್ತು ಗೌರವಪೂರ್ಣವಾದ ಅರ್ಥವನ್ನು ಹೊಂದಿದೆ. ಆದರೆ, ಹಿಟ್ಲರ್ ನ “ಆರ್ಯನ್” ಪದದ ಅರ್ಥ ಮತ್ತು ವ್ಯಾಪ್ತಿಗಳೇ ಬೇರೆ. ಯೂರೋಪಿನ ಶುದ್ಧ ಶ್ವೇತವರ್ಣೀಯರು ಮಾತ್ರವೇ “ಆರ್ಯನ್”ರು. ಉಳಿದವರು, ಕಪ್ಪು ಜನರು, ಭಾರತೀಯರಂತೆ ಕಂದು ಬಣ್ಣದವರು ಅಷ್ಟೇಕೆ, ರಷ್ಯಾ ದೇಶದವರನ್ನು ಕಂಡರೂ ಹಿಟ್ಲರ್ ಗೆ ಆಗುತ್ತಿರಲಿಲ್ಲ. ಅಂತಹ ಭಯಾನಕ ದ್ವೇಷ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಭಾರತೀಯ ಸೈನ್ಯದ ಸ್ವರೂಪ, ಪ್ರಸ್ತುತಿಗಳಲ್ಲಿ ಬದಲಾವಣೆ ಬೇಕಿದೆ

ಧ್ಯಾನ್ ಚಂದ್ ಅಸಾಮಾನ್ಯ ಆಟಗಾರರಾಗಿದ್ದರು. ಗುಲಾಮ ದೇಶದಿಂದ ಹೋದವರ ನೋವು, ಬೇಗುದಿ, ಹೆಜ್ಜೆಹೆಜ್ಜೆಗೆ ಎದುರಿಸಬೇಕಾದ ಅವಮಾನಗಳ ವರಸೆಯೇ ಭಯಾನಕ. ಇಡೀ ಹಾಕಿ ತಂಡ ಪ್ರತಿಕೂಲ ವಾತಾವರಣದಲ್ಲಿ ಬೇಯುತ್ತಿತ್ತು. ಅಂತಿಮ ಪಂದ್ಯದಲ್ಲಿ ಗೋಲು ಹೊಡೆದರೆಂದು ಜರ್ಮನಿಯ ಗೋಲ್ ಕೀಪರ್ ಧ್ಯಾನ್ ಚಂದ್ ಅವರ ಮೇಲೆ ದಾಳಿ ಮಾಡಿದ. ಧ್ಯಾನ್ ಚಂದ್ ಅವರ ಒಂದು ಹಲ್ಲು ಮುರಿಯಿತು. ಹಿಂದಿನ 1928, 1932ರ ವಿಶ್ವ ಹಾಕಿ ಸ್ವರ್ಣಪದಕ ವಿಜೇತರನ್ನು ಅಂದಿನ ಹಿಟ್ಲರ್ ನ ಜರ್ಮನಿ ನಡೆಸಿಕೊಂಡುದು ಹೀಗೆ. ಹೀಗಿದ್ದೂ ಧ್ಯಾನ್ ಚಂದ್ ಅವರ ತಂಡವು ಅಂತಿಮ ಪಂದ್ಯದಲ್ಲಿ, ಜರ್ಮನಿಯ ಮೇಲೆ 8-0 ಗೋಲು ಹೊಡೆದು ಸ್ವರ್ಣ ಪದಕ ಗಳಿಸಿತು.

ಧ್ಯಾನ್ ಚಂದ್ ಅವರ ಆತ್ಮಕಥೆಯಿದೆ. ಅದರಲ್ಲಿ ಎಲ್ಲೂ ಅವರಿಗೆ ಹಿಟ್ಲರ್ “ಜರ್ಮನಿಯ ನಾಗರಿಕತ್ವ ಮತ್ತು ಸೇನೆಯಲ್ಲಿ ಒಳ್ಳೆಯ ಕೆಲಸ ಕೊಡುತ್ತೇನೆ ಇತ್ಯಾದಿ ಹೇಳಿದ” ಎಂಬ ಮಾತುಗಳೇ ಇಲ್ಲ. ಅಂತಹ ಪ್ರಸ್ತಾವ ನಿಜವಾಗಿಯೂ ಇದ್ದಿದ್ದರೆ ಧ್ಯಾನ್ ಚಂದ್ ಉಲ್ಲೇಖಿಸುತ್ತಿದ್ದರು, ಅಲ್ಲವೇ! ಅಂತೆಯೇ, ಈ ಸುಳ್ಳುಕಥೆಗೆ ಬೇರೆಡೆಯೂ ಆಧಾರ ಇಲ್ಲ. ತಮಾಷೆ ನೋಡಿ, ಹಿಟ್ಲರ್ ಒಲಂಪಿಕ್ಸ್ ಹಾಕಿ ಆಟ ನೋಡಲು ಹೋಗಲೇ ಇಲ್ಲ. ಅಲ್ಲಿಗೆ ಹೋದವನು ಅವನ ಬಂಟ ಹರ್ಮನ್ ಗೋರಿಂಗ್. ಅವನನ್ನು ಸಹ ನಮ್ಮ ಆಟಗಾರರು ದೂರದಿಂದಷ್ಟೇ ನೋಡಿದ್ದು. ಹಿಟ್ಲರ್ ಮತ್ತು ಧ್ಯಾನ್ ಚಂದ್ ಎಂದೂ ಭೇಟಿಯಾಗಿಲ್ಲ.

ಸುಳ್ಳು ಕಥೆಗಳನ್ನು ಹರಡುವ – ಹರಡಿರುವ ಪರಮನೀಚರು, in fact, ಹಿಟ್ಲರ್ ಗಿಂತಲೂ ಕ್ರೂರಿಗಳು, ದೇಶದ್ರೋಹಿಗಳು. ಹಾಗೆ ನೋಡಿದರೆ ಹಿಟ್ಲರ್ – ಚರ್ಚಿಲ್ – ಮಾವೋ ಮೊದಲಾದ ಕ್ರೂರಿಗಳಿಗಿಂತ ಹೀಗೆ ಸುಳ್ಳು ಇತಿಹಾಸ ಹರಡುವವರೇ ಪರಮ ನೀಚರು.

ಈಗ ನಾಲ್ಕೈದು ದಶಕಗಳ ಹಿಂದೆ ಸಾರ್ವಜನಿಕ ಸಂವಾದ, ಚಿಂತನೆ, ಇತಿಹಾಸ – ರಾಜಕೀಯ ವಿಶ್ಲೇಷಣೆಗಳ ಕ್ಷೇತ್ರಗಳಲ್ಲಿ ಕಮ್ಯೂನಿಸ್ಟರದ್ದೇ ಪ್ರಧಾನ ಪಾತ್ರ. ಈಗಲೂ ಅವರದ್ದೇ ದುಷ್ಟಕೂಟ ಮೇಲುಗೈ ಸಾಧಿಸಿದೆ ಎನ್ನಬಹುದು. ಹಿಟ್ಲರ್ ಪ್ರತಿಪಾದಿಸಿದ “ಆರ್ಯನ್ ಜನಾಂಗೀಯ ಶ್ರೇಷ್ಠತೆಯ ಸಿದ್ಧಾಂತ” ಮತ್ತು ಭಾರತ-ಮೂಲದ “ಆರ್ಯ ಪದದ ನಿಷ್ಪತ್ತಿ” ಈ ಎರಡಕ್ಕೂ ಏನೇನೂ ಸಂಬಂಧವೇ ಇಲ್ಲದಿದ್ದರೂ, ಕನಿಷ್ಠ ಅಧ್ಯಯನ – ಔಚಿತ್ಯ ಪ್ರಜ್ಞೆಗಳಿಲ್ಲದ (common sense) ನಮ್ಮ ಪ್ರಗತಿಪರರು – “ಕ್ರಾಂತಿಕಾರಿಗಳು”, ಆರೆಸ್ಸೆಸ್ಸಿಗೆ ಹಿಟ್ಲರನೇ ಸ್ಫೂರ್ತಿ ಎಂದು ಷರಾ ಬರೆದುಬಿಟ್ಟರು. ಭಯಾನಕ ಪತ್ರಕರ್ತರೊಬ್ಬರು ಹಿಟ್ಲರ್, ನಾಝಿ, ಫ್ಯಾಸಿಸಮ್ ಮತ್ತು RSS ನಡುವಿನ ತಥಾಕಥಿತ ಸಂಬಂಧದ ಬಗೆಗೆ ಪುಸ್ತಕವನ್ನೇ ಬರೆದರು. ಓದಿದ ನಮ್ಮಂತಹವರು, ಆಗ ಗೊಂದಲದಿಂದ ದಿಕ್ಕೆಟ್ಟುಹೋದೆವು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಲೂಟಿ ಮಾಡಿದವರು, ಬೇಟೆಯಾಡಿದವರು ಉದ್ಧಾರಕರಾಗಿ ಹೋದ ʼನಮ್ಮʼ ಇತಿಹಾಸ

Exit mobile version