Site icon Vistara News

ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ?

harappa drawing

ಯಜ್ಞ ಯಾಗಗಳಿಗೆ ಹಸು, ಹೋರಿ, ಮೇಕೆ, ಕುದುರೆಗಳನ್ನು ಬಲಿ ಕೊಡುವುದೇ ಪ್ರಮುಖವಾಗಿತ್ತೇ?

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2023/11/WhatsApp-Audio-2023-11-17-at-11.04.57-AM.mp3

ವೇದಕಾಲದಲ್ಲಿ (vedic period) ಬ್ರಾಹ್ಮಣರು (ಈ ಪದ ಇಲ್ಲಿ ವರ್ಣವನ್ನು ಪ್ರತಿನಿಧಿಸುತ್ತದೆ, ಜಾತಿಯನ್ನಲ್ಲ) ಗೋ ಮಾಂಸ (Eating cow meat) ತಿನ್ನುತ್ತಿದ್ದರು, ಯಜ್ಞ ಯಾಗಗಳಲ್ಲಿ ಗೋವುಗಳನ್ನು ಬಲಿ ಕೊಡುತ್ತಿದ್ದರು, ಇತ್ಯಾದಿ ನೂರೆಂಟು ಅಬದ್ಧಗಳನ್ನು ಓದುತ್ತಲೇ ಇರುತ್ತೇವೆ, ಕೇಳುತ್ತಲೇ ಇರುತ್ತೇವೆ. ಕೆಲ ಪ್ರಭೃತಿಗಳು “ಉಲ್ಲೇಖಗಳನ್ನೂ ನೀಡಿ” ಹಿಂದೂ ಸಮಾಜವನ್ನು ಹಂಗಿಸಲು ಅವಮಾನಿಸಲು ಪ್ರಯತ್ನ ಪಡುತ್ತಿರುತ್ತಾರೆ. ಅವರಿಗೆ ಕುತೂಹಲವಿಲ್ಲ, ಆಸಕ್ತಿ ಮೊದಲೇ ಇಲ್ಲ. ಅಂತಹವರ ಉದ್ದೇಶವೇ ಲೇವಡಿ, ಅಪಹಾಸ್ಯ.

ನಿಜವೇ? ನಿಜವೇ ಆಗಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳೋಣ. ತಿದ್ದಿಕೊಳ್ಳೋಣ, ಸರಿಪಡಿಸಿಕೊಳ್ಳೋಣ.

ಈ ಕುರಿತಂತೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಮೊದಲನೆಯದಾಗಿ ನಮ್ಮ ಪರಂಪರೆಯ ಮಹತ್ತ್ವದ ತತ್ತ್ವ, ವಿಚಾರ, ಸಿದ್ಧಾಂತಗಳನ್ನು ನಾವು ಸರಿಯಾಗಿ ಗ್ರಹಿಸುವಲ್ಲಿ ಸೋತಿದ್ದೇವೆ. ಅಷ್ಟೇ ಅಲ್ಲ, ಸರಿಯಾಗಿ ಅನುವಾದಿಸಲೂ ವಿಫಲರಾಗಿದ್ದೇವೆ. ಕಳೆದ ಎರಡು – ಮೂರು ಶತಮಾನಗಳಲ್ಲಿ ನಮ್ಮ ಅನುವಾದ, ಅರ್ಥೈಸುವಿಕೆಗಳ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳು ಪ್ರಧಾನ ಪಾತ್ರ ವಹಿಸಿವೆ ಮತ್ತು ಎಲ್ಲ ಅಧ್ವಾನಗಳಿಗೂ ಮೂಲಕಾರಣಗಳಾಗಿವೆ. ಇಂಗ್ಲಿಷ್ ಭಾಷೆಯ ಮಿತಿ ಮತ್ತು ರೋಮನ್ ಲಿಪಿಯ ಕೊರತೆಗಳು ನಮ್ಮ ಗ್ರಹಿಕೆಗಳನ್ನೇ ಬಹುಪಾಲು ವಿಕೃತಗೊಳಿಸಿವೆ. ತಕಾರ – ಟಕಾರ, ಡಕಾರ – ದಕಾರ , ಅಲ್ಪಪ್ರಾಣ – ಮಹಾಪ್ರಾಣ; ಅಷ್ಟೇಕೆ, ಹ್ರಸ್ವ – ದೀರ್ಘಗಳ ಸ್ಪಷ್ಟಾಭಿವ್ಯಕ್ತಿಗೆ ಇವು ತುಂಬಾ ಕಿರಿಕಿರಿ ಮಾಡುತ್ತಿವೆ.

ಕಳೆದೆರಡು ಸಾವಿರ ವರ್ಷಗಳ ನಮ್ಮ ಇತಿಹಾಸದಲ್ಲಿ ನಾವು ನಮ್ಮ ಶತ್ರುಗಳನ್ನು, ಮುಖ್ಯವಾಗಿ ನಮ್ಮ ಮೇಲೆ ದಾಳಿ ಮಾಡಲು ಬಂದ ಅಬ್ರಹಾಮಿಕ್ ರಿಲಿಜನ್ನುಗಳನ್ನು, ಅರ್ಥವೇ ಮಾಡಿಕೊಳ್ಳಲಿಲ್ಲ. ಆಸುರೀ ಆಕ್ರಮಣಕಾರಿಗಳನ್ನೂ ಅನಗತ್ಯವಾದ ಔದಾರ್ಯದಿಂದ ಕಂಡು ನಾವೇ ಬಹುಪಾಲು ನಾಶವಾಗಿಬಿಟ್ಟೆವು. ನಮ್ಮ ಶಿಲ್ಪಕಲೆ, ಉದ್ಯಮ, ಕೃಷಿಗಳಷ್ಟೇ ಅಲ್ಲ; ನಮ್ಮ ಸಾಹಿತ್ಯ ಮತ್ತು ಗ್ರಂಥಾಲಯಗಳೇ ನಾಶವಾಗಿಬಿಟ್ಟವು. ನಾವು ಉಳಿಸಿಕೊಳ್ಳಲು ಸಾಧ್ಯವಾದುದು ಬಹಳ ಕಡಿಮೆ.

ತದನಂತರ ಮುದ್ರಣೋದ್ಯಮದ ಆವಿಷ್ಕಾರವು ಒಂದು ರೀತಿಯಲ್ಲಿ ನಮ್ಮ ಅನೇಕ ಗ್ರಂಥಗಳನ್ನು ಉಳಿಸಿಕೊಳ್ಳಲು ನೆರವಾದರೂ, ಭಾಷಾಂತರದ ಆಯಾಮದ ಅಸಮರ್ಪಕತೆಯಿಂದಾಗಿ, ಈ ಸಂಸ್ಕೃತಿಗೆ ಸೇರಿದ ಸ್ವತಃ ನಾವೇ ತಪ್ಪುತಪ್ಪಾಗಿ ಪರಿಭಾವಿಸುವಂತಾಯಿತು. ಕಳೆದ ನಾಲ್ಕೈದು ಶತಮಾನಗಳಲ್ಲಿ ನಮ್ಮ ಅನೇಕ ಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಲಾಗಿದೆ. ಅನುವಾದಿಸಿದವರು ಯೂರೋಪ್ ಮೂಲದ ಕ್ರೈಸ್ತಮತೀಯ ಮಾನಸಿಕತೆಯವರು. ಅವರು ಅವರ ದೃಷ್ಟಿಕೋನದಿಂದಲೇ ಅನುವಾದಿಸಿದರು. ಕೆಲವು ವರ್ಷಗಳ ಹಿಂದೆ, ಅಪರೂಪದ ಚಿಂತಕರಾದ ಪ್ರೊ|| ಎಸ್.ಎನ್.ಬಾಲಗಂಗಾಧರ ಅವರು ಭಗವದ್ಗೀತೆಯ ಪೂರ್ವಗ್ರಹಪೀಡಿತ ಮತ್ತು ಅಸಮರ್ಪಕ ಅನುವಾದದ ಬಗೆಗೆ ಹೇಳಿದಾಗ, ನನಗಂತೂ ಜೀವಮಾನದ ಆಘಾತವೇ ಆಗಿಬಿಟ್ಟಿತು. ಅಜ್ಜಂಪುರದಲ್ಲಿ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡೇ ಹುಟ್ಟಿದ ನಮಗೆ – ನಮ್ಮಂತಹವರಿಗೆ ಇದು ಅನಿರೀಕ್ಷಿತ ಶಾಕ್. ದುಷ್ಟ ಬೇರೆ, ವ್ಯಭಿಚಾರಿ ಬೇರೆ. ವರ್ಣಸಂಕರ ಅಥವಾ ಬದಲಾವಣೆ / ಮಿಶ್ರಣ ಬೇರೆ. ಹಾದರದ ಸಂತಾನ ಬೇರೆ.

“ಸ್ತ್ರೀಷು ದುಷ್ಟಾಸು ವಾರ್ಷ್ಣೇಯ, ಜಾಯತೇ ವರ್ಣಸಂಕರಃ” (ಭಗವದ್ಗೀತೆಯ 1ನೆಯ ಅಧ್ಯಾಯ, 41ನೆಯ ಶ್ಲೋಕ)

ಬಾಲಗಂಗಾಧರರ ವಿವರಣೆ, ವಿಶ್ಲೇಷಣೆಗಳು ತುಂಬಾ ತುಂಬಾ ಮಹತ್ತ್ವಪೂರ್ಣವಾಗಿದ್ದವು. ವಿಷಾದದ ಸಂಗತಿಯೆಂದರೆ, ಈ ಅನುವಾದದ ಅಧ್ವಾನಕ್ಕೆ ಕಾರಣನಾದವನು ಚಾರ್ಲ್ಸ್ ವಿಲ್ಕಿನ್ಸ್. 1785ರಲ್ಲಿ ಈ ವಿಲ್ಕಿನ್ಸ್ ಭಗವದ್ಗೀತೆಯ ಇಂಗ್ಲಿಷ್ ಅನುವಾದವನ್ನು ಪ್ರಕಟಿಸಿದ. ವಿಚಿತ್ರ ನೋಡಿ. ಈತ ಭಾರತಶಾಸ್ತ್ರಕ್ಕೆ (Indology) ಸಂಬಂಧಿಸಿದಂತೆ ವಿದ್ವಾಂಸನೂ ಅಲ್ಲ. ಅನಿರೀಕ್ಷಿತವಾಗಿ ಅನುವಾದ ಮಾಡಿ “ವಿಶ್ವಖ್ಯಾತಿ” ಗಳಿಸಿಬಿಟ್ಟ. ಯೂರೋಪ್ ಮೂಲದ ಕ್ರೈಸ್ತ ಮಾನಸಿಕತೆಯ ಈತ, “ದುಷ್ಟ” ಎಂಬುದನ್ನು “ವ್ಯಭಿಚಾರಿ” ಎಂದೂ, “ವರ್ಣ ಸಂಕರ”ವನ್ನು “ಹಾದರದ ಸಂತಾನ”ವೆಂದೂ ಅನುವಾದಿಸಿಬಿಟ್ಟ. ವಿಚಿತ್ರವೆಂದರೆ, ಕಳೆದೆರಡು ಶತಮಾನಗಳಲ್ಲಿ ಈ ಹಿನ್ನೆಲೆಯಲ್ಲಿಯೇ ಈ ಮಾನಸಿಕತೆ ಇಟ್ಟುಕೊಂಡೇ, ಭಾರತೀಯ ವಿದ್ವಜ್ಜನರೂ ಈ ಹಾದಿಯಲ್ಲಿಯೇ ಹೀಗೆಯೇ ವಿಶ್ಲೇಷಿಸಿದರು, ವ್ಯಾಖ್ಯಾನ ಮಾಡಿದರು (ಬೇರೆ ಬೇರೆ ಭಾರತೀಯ ಭಾಷೆಗಳಿಗೂ ತಪ್ಪುತಪ್ಪಾಗಿ ಅನುವಾದಿಸಿದರು). ಸಾಲದೆಂಬಂತೆ, ವರ್ಣ ಮತ್ತು ಜಾತಿ ಕುರಿತು ದುರದೃಷ್ಟವಶಾತ್ ನಮ್ಮ ಭಾರತೀಯ ವಿದ್ವಜ್ಜನರಿಗೇ ಗೊಂದಲವಿದೆ, ಅಸ್ಪಷ್ಟತೆಯಿದೆ. ಏಳು ಸಾವಿರ ವರ್ಷಗಳ ಹಿಂದಿನ ಭಗವದ್ಗೀತೆಯ ಪರಿಕಲ್ಪನೆಗಳನ್ನೇ ಸರಿಯಾಗಿ ಗ್ರಹಿಸಲು ಸೋತ ನಾವು, ಇಪ್ಪತ್ತೊಂದು ಸಾವಿರ ವರ್ಷಗಳ ಹಿಂದಿನ ವಿಶಿಷ್ಟ ವೇದವಾಙ್ಮಯವನ್ನು ಖಚಿತವಾಗಿ – ಸಮರ್ಪಕವಾಗಿ ಅರ್ಥೈಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಂಡಿದ್ದೇವೆಯೇ?

ಅನೇಕ ಭಾರತೀಯ ವಿದ್ವಾಂಸರ ವ್ಯಾಖ್ಯಾನ, ವಿಶ್ಲೇಷಣೆಗಳನ್ನು ತಾಳೆ ನೋಡಿದರೆ, ಎಲ್ಲರೂ ಎಲ್ಲರೂ ಈ ವಿಲ್ಕಿನ್ಸನ ಅಸಮರ್ಪಕ ಅನುವಾದದ ಆಧಾರಿತವಾದ ತಪ್ಪು ಗ್ರಹಿಕೆಯ ಮೇಲೆಯೇ ತಮ್ಮ ವಿದ್ವದ್ಸೌಧಗಳನ್ನು ನಿರ್ಮಿಸಿಬಿಟ್ಟಿದ್ದರು. ತಮಿಳುನಾಡು ಮೂಲದ ಸ್ವಾಮಿ ದಯಾನಂದ ಸರಸ್ವತಿಗಳಂತಹ ಅಪರೂಪದ ಕೆಲವರನ್ನು ಬಿಟ್ಟರೆ, ಉಳಿದ ಎಲ್ಲರದ್ದೂ ಇದೇ ಕಥೆ, ಇದೇ ವ್ಯಥೆ. ನಮ್ಮ ಭಾರತೀಯ ಪರಂಪರೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರದ ಅನುವಾದಕನೊಬ್ಬನ ತಪ್ಪಿನಿಂದಾಗಿ ಭಯಾನಕ ಎಡವಟ್ಟು ಆಗಿಹೋಯಿತು.

ಇನ್ನೊಂದು ಇಷ್ಟೇ ಆಘಾತಕಾರಿಯಾದುದೆಂದರೆ, 19ನೆಯ ಶತಮಾನದಲ್ಲಿ ಮ್ಯಾಕ್ಸ್ ಮುಲ್ಲರ್ ಹುಟ್ಟುಹಾಕಿದ ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತ. ಈ ಸಿದ್ಧಾಂತದಿಂದ ಕನಿಷ್ಠ ಒಂದು ಶತಮಾನದ ಕಾಲ, ಭಾರತೀಯ ವಿದ್ವಲ್ಲೋಕಕ್ಕೆ ಅಂಧಕಾರವು ಕವಿಯಿತು. ದೊಡ್ಡ ದೊಡ್ಡ ವಿದ್ವಾಂಸರೂ ಇದನ್ನೇ ನಂಬಿ – ಒಪ್ಪಿ, ತಪ್ಪು ಗ್ರಹಿಕೆಗಳನ್ನೇ ಅನುಸರಿಸಿ ರಾಶಿ ರಾಶಿ ಗ್ರಂಥಗಳನ್ನು ಬರೆದುಬಿಟ್ಟರು. ಇನ್ನೂ ಭಯಾನಕವಾದುದೆಂದರೆ ಈ ಅವೈಜ್ಞಾನಿಕ ಸಿದ್ಧಾಂತವನ್ನೇ ಆಧರಿಸಿ ತಮಿಳುನಾಡಿನ ರಾಜಕೀಯವು ಇಂದಿಗೂ ವಿಚಿತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಕಳೆದ ಐದಾರು ದಶಕಗಳಿಂದ ಈ ಕುರಿತಾದ ವೈಜ್ಞಾನಿಕ ಸಂಶೋಧನೆ – ವಿಶ್ಲೇಷಣೆಗಳು, ಆರ್ಯ ಎನ್ನುವುದು ಜನಾಂಗಸೂಚಕವಲ್ಲ, ಅದು ಗೌರವವಾಚಕ ಎಂದೂ, ದ್ರಾವಿಡ ಎನ್ನುವುದು ಪ್ರದೇಶವಾಚಕವೇ (ದಕ್ಷಿಣ ಭಾರತ) ಹೊರತು ಜನಾಂಗವಾಚಕವಲ್ಲ ಎಂದೂ ಖಚಿತಪಡಿಸಿದ್ದರೂ, ನಮ್ಮ ಬಹುತೇಕ ಪಠ್ಯಪುಸ್ತಕಗಳು ಹಳೆಯ ಅಸಂಬದ್ಧವಾದವನ್ನೇ ಒಸರುತ್ತಿವೆ.

ವಿಜ್ಞಾನ ಮತ್ತು ವೈಜ್ಞಾನಿಕ ಅನುಸಂಧಾನಗಳು ಬಹಳ ಬಹಳ ಮುಖ್ಯ ಹಾಗೂ ಅನಿವಾರ್ಯ ಸಹ. ನಕ್ಷತ್ರಗಳ ಚಲನೆ, ಸಮುದ್ರ ಸಾಗರಗಳ ಉಬ್ಬರವಿಳಿತಗಳು, ಗ್ರಹಣಗಳು ಇತ್ಯಾದಿ ವೈಜ್ಞಾನಿಕ ದತ್ತಾಂಶವನ್ನು ಆಧರಿಸಿ, ಸಂಶೋಧಕರಾದ ನೀಲೇಶ್ ಓಕ್ ಅವರು ಋಗ್ವೇದ, ರಾಮಾಯಣ ಮತ್ತು ಮಹಾಭಾರತಗಳ ಕಾಲನಿರ್ಣಯವನ್ನು ಮಾಡಿದ್ದಾರೆ.

ನಮ್ಮ ವೇದಗಳು, ಮಹಾಕಾವ್ಯಗಳು, ಪುರಾಣಗಳು ಎಂದರೆ ಕೇವಲ ಒಂದು ಆಯಾಮದ ರಚನೆಗಳಲ್ಲ. ಅವು ಇತಿಹಾಸ, ಭೂಗೋಳ, ಕಥೆ, ಕಲ್ಪನೆ, ನೀತಿ, ಸಂಕೇತ, ಸೂತ್ರ ಮತ್ತು ಅಧ್ಯಾತ್ಮಗಳ ಅಪೂರ್ವ ಸಂಯೋಜನೆಗಳು, ರಚನೆಗಳು. ರಾಮಾಯಣದ ಶ್ಲೋಕಗಳಲ್ಲಿ ಅರುಂಧತಿ ನಕ್ಷತ್ರವು ವಸಿಷ್ಠ ನಕ್ಷತ್ರಕ್ಕಿಂತಲೂ ಮುಂದೆ ಹೋಗುವ ಅಪರೂಪದ ಖಗೋಳ ವಿದ್ಯಮಾನದ ಉಲ್ಲೇಖವಿದೆ. ಅಂತೆಯೇ, ಸುಗ್ರೀವನ ಒಂದು ವಾನರಸೇನೆಯ ತಂಡದ ಪಶ್ಚಿಮಾಭಿಮುಖ ಸೀತಾನ್ವೇಷಣೆಯ ವಿವರಗಳಲ್ಲಿ, ಇಂದಿನ ಯೂರೋಪ್ ಖಂಡದ ದೇಶಗಳ ಭೌಗೋಳಿಕ ಚಿತ್ರಣವಿದೆ. ಇಂತಹ ನೂರೆಂಟು ಸಂಗತಿಗಳ – ವಿವರಗಳ ಆಧಾರದ ಮೇಲೆ, ಓಕ್ ಅವರು ಮಹಾಭಾರತವು ಇಂದಿಗೆ ಏಳು ಸಾವಿರ ವರ್ಷಗಳ ಹಿಂದಿನ ವಿದ್ಯಮಾನವೆಂದೂ, ರಾಮಾಯಣದ ಯುದ್ಧವು ಹದಿನಾಲ್ಕು ಸಾವಿರ ವರ್ಷಗಳ ಹಿಂದೆ ಘಟಿಸಿತೆಂದೂ ಕಾಲನಿರ್ಣಯ ಮಾಡಿದ್ದಾರೆ. ಇನ್ನೂ ಅದ್ಭುತವಾದುದೆಂದರೆ, ಋಗ್ವೇದದ ರಚನೆಯಾಗಿ ಇಪ್ಪತ್ತೊಂದು ಸಹಸ್ರ ವರ್ಷಗಳಾಗಿವೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂತಹುದೇ ಅಚ್ಚರಿಯ ವೈಜ್ಞಾನಿಕ ಮಾಹಿತಿಯೆಂದರೆ, ಇತಿಹಾಸಕಾರ – ವಿಜ್ಞಾನಿ ನವರತ್ನ ರಾಜಾರಾಮ್ ಅವರು ವಿದ್ವಾಂಸರ ಭಾಷೆಯಾದ ಸಂಸ್ಕೃತವು ರೂಪುಗೊಂಡಿದ್ದು ಮೂಲತಃ ಮೂವತ್ತು ಸಾವಿರ ವರ್ಷಗಳ ಹಿಂದಿನ ನಮ್ಮ ಕನ್ನಡ, ತೆಲುಗು ಮತ್ತು ತಮಿಳಿನಂತಹ ಅನೇಕ ಜನಭಾಷೆಗಳಿಂದ ಎಂದಿದ್ದಾರೆ. ಈ ಭಾಷೆಗಳು ಸಂಸ್ಕೃತಕ್ಕೆ ತಾಯಿಯೂ ಹೌದು ಮತ್ತು ಸಂಸ್ಕೃತ ಭಾಷೆಯ ಅಪೂರ್ವ ವಾಙ್ಮಯದಿಂದ ಸುಪುಷ್ಟಗೊಂಡ ಸಂತಾನ ಭಾಷೆಗಳೂ ಹೌದು.

ಈ ಎಲ್ಲ ಮಹತ್ತ್ವದ ಅಂಶಗಳ ಬಗೆಗೆ, ನಮ್ಮ ಗ್ರಹಿಕೆ – ಮಾನಸಿಕತೆಗಳನ್ನು ನಾವು ಪರಿವರ್ತಿಸಿಕೊಳ್ಳಬೇಕಾಗಿದೆ, ಸರಿಮಾಡಿಕೊಳ್ಳಬೇಕಾಗಿದೆ.

ಕಳೆದ ನೂರು ವರ್ಷಗಳಲ್ಲಿ ನಮ್ಮ ಕನ್ನಡ ಭಾಷೆಯು ಅದೆಷ್ಟು ಬದಲಾಗಿದೆ, ಎಂಬುದರ ಸಿಂಹಾವಲೋಕನದಿಂದ ಹಾಗೂ ಕನ್ನಡ ಕಾವ್ಯದ, ಕಾದಂಬರಿಗಳ, ನಾಟಕಗಳ, ಮುಖ್ಯವಾಗಿ ಪತ್ರಿಕೆಗಳ ಭಾಷೆಯೂ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಗಮನಿಸಿದರೆ, ಕಾಲಧರ್ಮದ ಆಯಾಮಗಳ ಪರಿಚಯವಾಗುತ್ತದೆ. ಅಂತೆಯೇ, ವೇದಗಳ ಭಾಷೆಯನ್ನೂ ನಾವು ಪೂರ್ವಗ್ರಹ, ದ್ವೇಷ, ಎಲ್ಲವನ್ನೂ ಬಿಟ್ಟು ಓದಬೇಕು, ಅಧ್ಯಯನ ಮಾಡಬೇಕು, ಅರ್ಥೈಸಬೇಕು. ಅವು ಜ್ಞಾನಸಂಪುಟಗಳು. ಅವು ಸೂತ್ರರೂಪದಲ್ಲಿವೆ, ಸಂಕೇತರೂಪದಲ್ಲಿವೆ. ಕಳೆದ ಒಂದು ಸಾವಿರ ವರ್ಷಗಳ ಸಂಸ್ಕೃತ ಭಾಷೆಗೂ ವೇದಗಳ ಸಂಸ್ಕೃತಕ್ಕೂ ವ್ಯತ್ಯಾಸವಿರುವುದನ್ನೂ ಗಮನಿಸಬೇಕಾಗುತ್ತದೆ.

ವೇದಗಳಲ್ಲಿ ಬರೀ ಗೋಮಾಂಸ ಭಕ್ಷಣೆ, ಕುದುರೆ – ಮೇಕೆಗಳನ್ನು ಬಲಿಕೊಡುವುದು, ಅವುಗಳನ್ನು ತಿನ್ನುವುದು, ತಿನ್ನಿಸುವುದು ಇದೆ ಎಂದಾದರೆ ಅವು ಜ್ಞಾನ ಗ್ರಂಥಗಳು ಹೇಗೆ ಆಗುತ್ತವೆ? ಕೆಲವು ಶ್ಲೋಕಗಳ, ಕೆಲವು ಪದಗಳ ಅಪವ್ಯಾಖ್ಯಾನವನ್ನು ಕೈಬಿಟ್ಟು, ಅವುಗಳನ್ನು ವೇದಗಳ ಒಟ್ಟಾರೆ ಆಶಯಗಳ ಹಿನ್ನೆಲೆಯಲ್ಲಿಯೇ ಗಮನಿಸುವಂತೆ, ನಮ್ಮ ಚಿಂತನೆಯು ಸಾಗಬೇಕಲ್ಲವೇ?

ಭಗವದ್ಗೀತೆಯನ್ನು ರಚಿಸಿದ ಮಹಾಕವಿ, ಅದರ 17ನೆಯ ಅಧ್ಯಾಯದಲ್ಲಿ ಸತ್ತ್ವ, ರಜೋ ಹಾಗೂ ತಮೋಗುಣಗಳ ತೌಲನಿಕ ವ್ಯಾಖ್ಯಾನ ನೀಡಿದ್ದಾರೆ. ಯಾವ ಆಹಾರ ಸೇವಿಸಿದರೆ ಎಂತಹ ಸ್ವಭಾವ ನಮ್ಮದಾಗುತ್ತದೆ, ಎಂಬುದರ ಆರೋಗ್ಯಶಾಸ್ತ್ರೀಯ ವರ್ಣನೆ, ವಿವರಗಳನ್ನು ಅಲ್ಲಿ ಕಾಣಬಹುದು. ಗೋಮಾಂಸ ಭಕ್ಷಣೆ, ಕುದುರೆ ಮೇಕೆಗಳನ್ನು ತಿನ್ನುವುದು, ತಿನ್ನಿಸುವುದು, ಇಂತಹ ಪುಣ್ಯಕಾರ್ಯಗಳಿಂದ ವೇದಗಳನ್ನು ರಚಿಸಲು ಸಾಧ್ಯ, ಜ್ಞಾನಸಂಪುಟಗಳನ್ನು ಲೋಕಕ್ಕೆ ಕೊಡುವುದು ಸಾಧ್ಯ ಎನ್ನುವುದನ್ನು ಅಂಗೀಕರಿಸೋಣವೇ? ನಿಜವೇ ಆಗಿದ್ದರೆ ಪಶು, ಪಕ್ಷಿ, ಪ್ರಾಣಿ, ಕೀಟ, ಉರಗ ಹೀಗೆ ಸಕಲ ಜೀವಜಂತುಗಳನ್ನೂ ತಿನ್ನುವ ಚೀನೀಯರೇ ವೇದಗಳನ್ನು ರಚಿಸುತ್ತಿದ್ದರು!

ಎರಡೂವರೆ ಸಾವಿರ ವರ್ಷಗಳ ಹಿಂದಿನ ನಮ್ಮ ತಕ್ಷಶಿಲೆ ವಿಶ್ವವಿದ್ಯಾಲಯವಾಗಲೀ, ಒಂದೂವರೆ ಸಾವಿರ ವರ್ಷಗಳ ಹಿಂದಿನ ನಳಂದ ವಿಶ್ವವಿದ್ಯಾಲಯವಾಗಲೀ ಜಗದ್ವಿಖ್ಯಾತ ಜ್ಞಾನಕೇಂದ್ರಗಳು. ಅನೇಕ ದೇಶಗಳಿಂದ ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಿದ್ದರು. ಇಸ್ಲಾಮೀ ದುರಾಕ್ರಮಣಗಳಿಂದ ನಾಶವಾದ ನಳಂದದ ಗ್ರಂಥಾಲಯದಲ್ಲಿ ತೊಂಬತ್ತು ಲಕ್ಷ ಗ್ರಂಥಗಳಿದ್ದವು ಎಂದು ಸಾಕ್ಷ್ಯಾಧಾರಗಳು ತಿಳಿಸುತ್ತವೆ. ಈ ಗ್ರಂಥಗಳಲ್ಲಿ ಕೇವಲ ಹಸು, ಹೋರಿ, ಕುದುರೆ, ಮೇಕೆಗಳನ್ನು ಕೊಲ್ಲುವುದು ಹೇಗೆ, ಯಾಗಗಳಲ್ಲಿ ಬಲಿ ಕೊಡುವುದು ಹೇಗೆ, ತಿಂದು ತೇಗುವುದು ಹೇಗೆ ಎಂಬಂತಹ ಅನೃತ – ಅಬದ್ಧಗಳೇ ತುಂಬಿದ್ದವು ಎಂದೇ ಆದರೆ, ಸಾವಿರಾರು ವರ್ಷಗಳ ಕಾಲ, ಬೇರೆ ಬೇರೆ ದೇಶಗಳಿಂದ ಇಂತಹ nonsense ಓದಲು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರೇ?

ನಮ್ಮ ಪರಂಪರೆಯನ್ನು ನಮ್ಮ ಶಾಸ್ತ್ರಗ್ರಂಥಗಳನ್ನು ಯುಕ್ತವಾಗಿ ಅಧ್ಯಯನ ಮಾಡಿದವರು ಗೋ ಎಂದರೆ ಬೆಳಕು, ಜ್ಞಾನ ಎಂಬುದಾಗಿ ಅರ್ಥೈಸಬೇಕು ಎನ್ನುತ್ತಾರೆ. ಆದುದರಿಂದ ನಾವು, ನಾವೆಲ್ಲರೂ ಒಂದಿಷ್ಟು ವಿವೇಕದಿಂದ ಸಕಾರಾತ್ಮಕತೆಯಿಂದ ಸೆನ್ಸಿಬಲ್ ಆಗಿ ಯೋಚಿಸಬೇಕು, ವಿಚಾರ ಮಾಡಬೇಕು, ಅಲ್ಲವೇ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನೆಹರೂ ಮನಸ್ಸು ಮಾಡಿದ್ದರೆ, ಗಾಂಧೀ ಹತ್ಯೆಯನ್ನು ತಪ್ಪಿಸಬಹುದಿತ್ತು!

ಸಂಶೋಧನೆ, ವಿಶ್ಲೇಷಣೆಗಳ ಕ್ಷೇತ್ರದಲ್ಲಿ ಆಧುನಿಕ ವಿಜ್ಞಾನವು ನಮಗೆ ಇಂದು ನೂರೆಂಟು ಬಗೆಯ ಅದ್ಭುತವಾದ ಸಾಧನಗಳನ್ನು, ಸಲಕರಣೆಗಳನ್ನು ಒದಗಿಸಿದೆ. ಹೀಗಿದ್ದೂ ಐದು ಸಾವಿರ ವರ್ಷಗಳ ಹಿಂದಿನ ಹರಪ್ಪ – ಮೊಹೆಂಜೋದಾರೋ ಲಿಪಿಯನ್ನು ಇದಮಿತ್ಥಂ ಎನ್ನುವಂತೆ, ಖಚಿತವಾಗಿ, ಸಮರ್ಪಕವಾಗಿ decoding ಮಾಡುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ.

20ನೆಯ ಶತಮಾನದಲ್ಲಿ ಸನಾತನ ಧರ್ಮ, ಹಿಂದೂ ಸಂಸ್ಕೃತಿಗಳನ್ನು ಸಮೂಲವಾಗಿ ನಾಶ ಮಾಡಲು ಬ್ರಿಟಿಷರು, ಮೆಕಾಲೆವಾದಿಗಳು, ಅಲಿಗಢ ಮೂಲದ ಜಿಹಾದೀ ವಿದ್ವಾಂಸರು, ಕಮ್ಯೂನಿಸ್ಟರು ಇನ್ನಿಲ್ಲದಂತೆ ಪ್ರಯತ್ನಿಸಿದರು. ಈಗಲೂ ಈ ದುಷ್ಟರ ಸಂತತಿ ತನ್ನ ವಿನಾಶಕಾರ್ಯವನ್ನು ಮುಂದುವರಿಸುತ್ತಿದೆ. ಇವೆಲ್ಲವೂ ಜಾಗತಿಕ ಷಡ್ಯಂತ್ರದ ಭಾಗ, ಕೇವಲ ಆಕಸ್ಮಿಕ ದುಷ್ಕಾರ್ಯಗಳಲ್ಲ, ಎಂಬುದನ್ನು ನಮ್ಮ ವಿದ್ವದ್ಸಮೂಹ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕಿದೆ.

ಅಲ್ಲದೇ, ಇನ್ನೂ ಒಂದು ಮಾತು ಹೇಳಬಹುದು. ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತು, ಎಂದೇ ಇಟ್ಟುಕೊಳ್ಳೋಣ. ಅವರಿಗೆ ಗೋ ಮಾಂಸ ಭಕ್ಷಣೆಯ ವಿನಃ ಬೇರೆ ಏನೂ ಕೆಲಸವಿರಲಿಲ್ಲ, ನಿಜ. ಅನಂತರದ ಹತ್ತಾರು ಸಾವಿರ ವರ್ಷಗಳಲ್ಲಿ ನಮ್ಮ ಪರಂಪರೆಯಲ್ಲಿ, ನಮ್ಮ ಆಚಾರ – ವಿಚಾರಗಳಲ್ಲಿ, ಆಹಾರ ಪದ್ಧತಿಯಲ್ಲಿ, ನಮ್ಮ ಧಾರ್ಮಿಕ ನಂಬಿಕೆ – ಶ್ರದ್ಧೆಗಳಲ್ಲಿ ಬದಲಾವಣೆ ಆಗಿರಬಾರದು, ಎಂದೇನಿಲ್ಲವಲ್ಲ. ನಮ್ಮ ಹಿಂದೂ ಧರ್ಮವು ಪರಿವರ್ತನಶೀಲ, ಪ್ರಗತಿಶೀಲ, ಸಮಾಜ-ಮುಖಿ. ಯಾವುದೇ ಬದಲಾವಣೆ, ಯಾವುದೇ ತಿದ್ದುಪಡಿ, ಯಾವುದೇ ವ್ಯತ್ಯಾಸಗಳಿಗೆ – ಸೇರ್ಪಡೆಗಳಿಗೆ ಅವಕಾಶವೇ ಇಲ್ಲದ ಅಬ್ರಹಾಮಿಕ್ ರಿಲಿಜನ್ನುಗಳಂತೆ “ಒಂದೇ ಒಂದು ಗ್ರಂಥ” ಎನ್ನುವ ಪರಿಕಲ್ಪನೆಯೇ ನಮ್ಮಲ್ಲಿಲ್ಲ.

ನಮ್ಮ ಪರಂಪರೆಯ ಸಹಸ್ರಾರು ವರ್ಷಗಳ ಸಾಮಾಜಿಕ ಮೌಲ್ಯಗಳಲ್ಲಿ ಗೋವು ಪಾವಿತ್ರ್ಯದ – ಶ್ರದ್ಧೆಯ ಸಂಕೇತ.

ನಮಗೆ ಇಂದು ಈಗ ಗೋವು ಪೂಜ್ಯ ಎನಿಸಿದರೆ ತಪ್ಪೇ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಮಹಾನ್ ಬೌದ್ಧಿಕ ಕ್ಷತ್ರಿಯ ಸೀತಾರಾಮ ಗೋಯಲ್

Exit mobile version