ಈ ಅಂಕಣವನ್ನು ಇಲ್ಲಿ ಕೇಳಿ:
ಕೆಲವು ಗ್ರಂಥಗಳೇ ಹಾಗೆ. ಜೀವನಗತಿಯನ್ನೇ ಬದಲಿಸಿಬಿಡುತ್ತವೆ. ಓದುವಾಗ, ಓದಿ ಮುಗಿಸಿದಾಗ ಹೊಟ್ಟೆ ಕಲಕಿದಂತಾಗಿಬಿಡುತ್ತದೆ. ಹೃದಯ ಹಿಂಡಿದಂತಾಗಿಬಿಡುತ್ತದೆ. ನಾನು ನಮ್ಮ ತಂದೆಯವರ ಅಪೂರ್ವ ಗ್ರಂಥಸಂಗ್ರಹದ ನಡುವೆಯೇ ಬೆಳೆದೆ ಎನ್ನಬಹುದು. ಗಾಂಧೀಜಿಯವರ ಬಗೆಗೆ, ಸ್ವಾತಂತ್ರ್ಯ ಹೋರಾಟದ ಬಗೆಗೆ, ಗತ-ಇತಿಹಾಸದ ಬಗೆಗೆ ಅನೇಕ ಪುಸ್ತಕಗಳನ್ನು ಓದಿದೆ. ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ 1969ರಲ್ಲಿ ಗೆಳೆಯರು ಕೊಟ್ಟ “ಇತಿಹಾಸದ ಮೇಲೆ ಹೊಸ ಬೆಳಕು” ಪುಸ್ತಕವು ನಾನು ಶಾಲೆಯಲ್ಲಿ ಓದಿದ ವಿಕೃತ-ಇತಿಹಾಸವನ್ನೇ ಪುಡಿಪುಡಿ ಮಾಡಿಬಿಟ್ಟಿತು. ಅಕ್ಬರ್ “ದಿ ಗ್ರೇಟ್” ಆಗಿಯೇ ಇರಲಿಲ್ಲ, “ಪ್ರೇಮಸೌಧ” ಖ್ಯಾತಿಯ ತಾಜಮಹಲ್ ಷಹಜಹಾನ್ ನಿರ್ಮಿತಿಯೇ ಅಲ್ಲ, ಆರ್ಯರು ಎಂಬವರು ಆಕ್ರಮಣಕಾರಿಗಳಾಗಿ ಬಂದ ಒಂದು ಜನಾಂಗವೇ ಅಲ್ಲ, ಮುಂತಾದ ಸಂಗತಿಗಳು ತುಂಬ ಶಾಕ್ ನೀಡಿಬಿಟ್ಟವು.
ರೊಮಿಲ್ಲಾ ಥಾಪರ್, ಆರ್.ಎಸ್.ಶರ್ಮ, ಡಿ.ಎನ್.ಝಾ ಮೊದಲಾದವರು, ಜಿಹಾದಿಗಳೊಂದಿಗೆ ಸೇರಿ ನಿರ್ಮಿಸಿದ ವಿಕೃತ ಇತಿಹಾಸ-ಸೌಧವು, ನಿಜ-ಇತಿಹಾಸದ ಕೊಡಲಿಯೇಟಿಗೆ ಸಿಕ್ಕಿ ಧ್ವಂಸವಾಗಿಹೋಯಿತು.
ಅನಂತರದಲ್ಲಿ ಬಿರುಗಾಳಿಯೆಬ್ಬಿಸಿದ್ದು ಶಿವರಾಮು ಅವರ “ಆತ್ಮಾಹುತಿ”. ಸಾವರ್ಕರ್ ಅವರ ಬಗೆಗೆ ಆವರೆಗೆ ನಮಗೆಲ್ಲ ಏನೂ ಗೊತ್ತಿರಲಿಲ್ಲ. ಅಂಡಮಾನ್ ಬಗೆಗೂ ಏನೂ ತಿಳಿದಿರಲಿಲ್ಲ. ನಮಗೆಲ್ಲಾ ಆಗ ಸ್ವಾತಂತ್ರ್ಯ ಹೋರಾಟ ಎಂದರೆ ಅಹಿಂಸಾತ್ಮಕ ಹೋರಾಟ. ಸ್ವಾತಂತ್ರ್ಯ ಹೋರಾಟ ಎಂದರೆ ಖಿಲಾಫತ್ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಮಾತ್ರವೇ. ನೆಹರೂ ಸೆರೆಮನೆಯಲ್ಲಿದ್ದೇ ಬರೆದ “ಡಿಸ್ಕವರಿ ಆಫ್ ಇಂಡಿಯಾ”, “ಗ್ಲಿಂಸಸ್ ಆಫ್ ವರ್ಲ್ಡ್ ಹಿಸ್ಟರಿ” ಮತ್ತು ಮುಖ್ಯವಾಗಿ “ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್” ಇವು ನಮಗೆ ಮಹಾಕಾವ್ಯಗಳಾಗಿಬಿಟ್ಟಿದ್ದವು, ಬಾಯಿಪಾಠವಾಗಿಬಿಟ್ಟಿದ್ದವು. “ನನ್ನ ಸತ್ಯಾನ್ವೇಷಣೆ” ಎಂಬ ಗಾಂಧೀಜಿಯವರ ಆತ್ಮಚರಿತ್ರೆಯೊಂದೇ ಪ್ರಮುಖ ಗ್ರಂಥ ಎನ್ನಿಸಿತ್ತು.
1950-60ರ ದಶಕಗಳಲ್ಲಿ (ಅನಂತರವೂ) ಸ್ವಾತಂತ್ರ್ಯಕ್ಕಾಗಿ ರಕ್ತಧಾರೆಯೆರೆದ ಕ್ರಾಂತಿಕಾರಿಗಳ ಹೆಸರೇ ಎಲ್ಲೂ ಪ್ರಸ್ತಾಪವಾಗುತ್ತಿರಲಿಲ್ಲ. ಭಗತ್ ಸಿಂಗ್, ರಾಜಗುರು, ಸುಖದೇವ್ ಬಗೆಗೆ ಇದ್ದುದೂ ಕೆಲವು ಸಾಲುಗಳು ಮಾತ್ರವೇ. ಉಳಿದ ಸಹವರ್ತಿಗಳ ಪಟ್ಟಿಯಿರಲಿ, ಆಜಾದ್ ಚಂದ್ರಶೇಖರ್ ಅವರ ಹೆಸರೇ ಕೇಳಿರಲಿಲ್ಲ. ಅಂತಹ ಅಂಧಕಾರದ ಕಾಲಾವಧಿಯಲ್ಲಿ ಪ್ರಕಟವಾದ “ಅಜೇಯ” ನಿಜಕ್ಕೂ ಒಂದು ಅದ್ಭುತ. ಕನ್ನಡ ಸಾಹಿತ್ಯಕ್ಕೇ ಒಂದು ತಿರುವು ನೀಡಿದ, ನಿಜ-ಇತಿಹಾಸಾಧಾರಿತ ಕಥನಗಳನ್ನು ಕನ್ನಡದ ಓದುಗರಿಗೆ ಪರಿಚಯಿಸಿದ ಮಹಾನ್ ಕೃತಿ, ಬಾಬು ಕೃಷ್ಣಮೂರ್ತಿ ಅವರ ಈ “ಅಜೇಯ”. ಅಂದಿನ ಕಾಲಘಟ್ಟವೇ ವಿಚಿತ್ರ. ರಾಷ್ಟ್ರೀಯ ವಿಚಾರಧಾರೆಯ ಬಗೆಗೆ, ಕ್ರಾಂತಿಕಾರಿಗಳ ಸ್ವಾತಂತ್ರ್ಯ ಹೋರಾಟದ ಬಗೆಗೆ ಮಾಧ್ಯಮಗಳಲ್ಲಿ ಏನೂ ಬರುತ್ತಿರಲಿಲ್ಲ. ಆಕಾಶವಾಣಿ ಮತ್ತು ಪ್ರಮುಖ ಪತ್ರಿಕೆಗಳು ನೆಹರೂ – ಇಂದಿರಾ ಅವರ ಬಗೆಗೆ, ಅವರ ಪಕ್ಷದ ಬಗೆಗೆ ಮಾತ್ರವೇ ಒದರುತ್ತಿದ್ದವು. ನಮಗಾಗ ಕ್ರಾಂತಿಕಾರಿಗಳ ಬಗೆಗೆ ಮಾಹಿತಿ ಸಿಕ್ಕುತ್ತಿದ್ದುದು “ವಿಕ್ರಮ” ವಾರಪತ್ರಿಕೆಯಿಂದ, ಇಲ್ಲವೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಿಂದ. ಬಾಬರ್, ಅಕ್ಬರ್, ಷಹಜಹಾನ್, ಔರಂಗಜೇಬ್ ಮೊದಲಾದವರ ಬಗೆಗೆ ತಿಳಿದಿತ್ತೇ ಹೊರತು, ನಮಗೆ ಮಹಾರಾಣಾ ಪ್ರತಾಪ ಸಿಂಹ, ಶಿವಾಜಿ ಮಹಾರಾಜರ ಬಗೆಗೆ ಹೆಚ್ಚಿನ ಸಂಗತಿಗಳೇ ಗೊತ್ತಿರಲಿಲ್ಲ.
ಕ್ರಾಂತಿಕಾರಿ, ಕ್ರಾಂತಿಯ ಸೂತ್ರಧಾರಿ ಚಂದ್ರಶೇಖರ್ ಆಜಾದ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಈ “ಅಜೇಯ” ಒಂದು ಅನನ್ಯ ಕೃತಿ. ಆ ಕಾಲಕ್ಕೆ ಭಗತ್ ಸಿಂಗ್, ಆಜಾದ್ ಚಂದ್ರಶೇಖರ್, ಭಗವಾನ್ ದಾಸ್ ಮಾಹೋರ್, ಸದಾಶಿವ ರಾವ್ ಮಲಕಾಪುರಕರ್, ಭಕ್ಷಿದಾದಾ ಎಂದೇ ಖ್ಯಾತರಾಗಿದ್ದ ಶಚೀಂದ್ರನಾಥ ಭಕ್ಷಿ, ಮನ್ಮಥನಾಥ ಗುಪ್ತ, ಪಂಡಿತ್ ರಾಮಪ್ರಸಾದ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ರಾಜಗುರು, ಸುಖದೇವ್, ಬಟುಕೇಶ್ವರ ದತ್ ಮೊದಲಾದ ಕ್ರಾಂತಿಕಾರಿಗಳ ಬಗೆಗೆ ಬಾಬು ಅವರು ಬರೆದುದನ್ನು ಓದುವಾಗ ರೋಮಾಂಚನವಾಗುತ್ತಿತ್ತು. ಓದಿದ ನನ್ನ ಬಾಲ್ಯಸ್ನೇಹಿತರಾದ ಅಪೂರ್ವ ಅಜ್ಜಂಪುರ, ಲಕ್ಷ್ಮೀನಾರಾಯಣ ಮೊದಲಾದವರು ಅತೀವ ಭಾವತೀವ್ರತೆಗೆ ಒಳಗಾಗಿಬಿಟ್ಟಿದ್ದರು. ನಾಲ್ಕು ದಶಕಗಳ ಹಿಂದಿನ ಇತಿಹಾಸ ಓದುಗರ ಕಣ್ಮುಂದೆ ಝೇಂಕರಿಸುತ್ತಿತ್ತು. ಪುಟ್ಟ ಹುಡುಗ ಚಂದ್ರಶೇಖರನಿಗೆ ಬಿದ್ದ ಛಡಿ ಏಟುಗಳು ಓದುಗರಿಗೇ ಬಿದ್ದಂತಾಗುತ್ತಿತ್ತು. ಒಂದೊಂದು ಛಡಿ ಏಟು ಬಿದ್ದಾಗಲೂ ಆಜಾದನ ಬಾಯಿಂದ ಹೊರಡುತ್ತಿದ್ದ
ವಂದೇ ಮಾತರಂ,
ಭಾರತಮಾತಾ ಕೀ ಜಯ್,
ಮಹಾತ್ಮಾ ಗಾಂಧೀ ಕೀ ಜಯ್,
ಘೋಷಣೆಗಳು ರಣಘೋಷದಂತೆ ನಮಗೇ ಕೇಳಿಸುತ್ತಿತ್ತು.
ಪಂಡಿತ್ ರಾಮಪ್ರಸಾದ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ಮೊದಲಾದವರ ಕಾಕೋರಿ ದರೋಡೆಯ ಸಾಹಸಗಾಥೆ ನಮ್ಮ ಕಣ್ಣೆದುರಿಗೇ ನಡೆಯಿತು ಎನ್ನಿಸುತ್ತಿತ್ತು. 1928ರಲ್ಲಿ “ಸೈಮನ್ ಗೋ ಬ್ಯಾಕ್” ಚಳವಳಿಯ ವೇಳೆ, ವಯೋವೃದ್ಧ ರಾಷ್ಟ್ರನಾಯಕರಾದ ಲಾಲಾ ಲಜಪತ ರಾಯ್ ಅವರ ಮೇಲೆ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ಬೀಸಿದ ಲಾಠಿ ಏಟು ಮಾರಣಾಂತಿಕವಾಗಿತ್ತು. ಸಂತಪ್ತ ಕ್ರಾಂತಿಕಾರಿಗಳು ಸೇಡು ತೀರಿಸಿಕೊಳ್ಳಲು ಹೊರಟು ಸ್ಯಾಂಡರ್ಸ್‌ನನ್ನು ಹತ್ಯೆ ಮಾಡಿದರು, ತಪ್ಪಿಸಿಕೊಂಡೂ ಹೋದರು. 1929ರಲ್ಲಿ ಕೇಂದ್ರೀಯ ಶಾಸನ ಸಭೆಯಲ್ಲಿ ಭಗತ್ ಸಿಂಗ್, ಬಟುಕೇಶ್ವರ ದತ್ ಅವರು ಬಾಂಬ್ ಹಾಕಿ, ಅಂದಿನ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲು ಹಾಕಿದರು. ಬ್ರಿಟಿಷರು ನಡುಗಿಹೋದರು.
1970ರ ದಶಕದ ಆ ಕಾಲದಲ್ಲಿ ಕ್ರಾಂತಿಕಾರಿಗಳ ಬಗೆಗಿನ ಇಂತಹ ಸತ್ಯಕಥಾನಕಗಳನ್ನೇ ಜನರಿಂದ ಮುಚ್ಚಿಡಲಾಗಿತ್ತು. ಬಾಬು ಕೃಷ್ಣಮೂರ್ತಿ ಅವರು ಅನೇಕ ವರ್ಷಗಳ ಕಾಲ ಸಂಶೋಧನಾತ್ಮಕ ಅಧ್ಯಯನ ನಡೆಸಿದ್ದರು. ಘಟನಾವಳಿ ನಡೆದ ಅನೇಕ ತಾಣಗಳಿಗೇ ಹೋಗಿ ಮಾಹಿತಿಯನ್ನು ಮತ್ತು ಕೆಲವು ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದರು. ಅಪಾರ ಪರಿಶ್ರಮದಿಂದ ಕೃತಿರಚನೆ ಮಾಡಿದ್ದರು. ಅದೊಂದು ಬಗೆಯ ತಪಸ್ಸೇ ಆಗಿತ್ತು. ಆಗ ಕ್ಯಾಮೆರಾಗಳು ದೇವದುರ್ಲಭವಾಗಿದ್ದವು. ಕೆಲವು ತಾಣಗಳ ಛಾಯಾಚಿತ್ರಗಳ ಲಭ್ಯತೆ ಸಾಧ್ಯವಾಗದೆ ರೇಖಾಚಿತ್ರಗಳಿಂದ ಸಮಾಧಾನ ಪಟ್ಟುಕೊಳ್ಳಬೇಕಾಗಿದ್ದ ಕಾಲವದು.
“ಅಜೇಯ” ಕೃತಿಯ ಲೋಕಾರ್ಪಣೆಯಾದುದು 27ನೆಯ ಫೆಬ್ರುವರಿ 1974ರಲ್ಲಿ. ಅದು ಚಂದ್ರಶೇಖರ್ ಆಜಾದ್ ಬಲಿದಾನದ ದಿನ. ಇದೀಗ ಈ ಮಹತ್-ಕೃತಿಯ ಚಿನ್ನದ ವರ್ಷಾಚರಣೆ. ಕೃತಿಯ ಲೋಕಾರ್ಪಣೆಗೆ ಬೆಂಗಳೂರಿಗೆ ಆ ಕಾಲದಲ್ಲಿ ಭಗವಾನ್ ದಾಸ್ ಮಾಹೋರ್, ಸದಾಶಿವ ರಾವ್ ಮಲಕಾಪುರಕರ್, ಶಚೀಂದ್ರನಾಥ ಭಕ್ಷಿ, ಪಿ.ಕೆ.ಘೋಷ್, ಮೊದಲಾದವರನ್ನು ಕರೆಸಲಾಗಿತ್ತು. ಈಗ ನೆನೆದರೂ ವಿಸ್ಮಯವಾಗುತ್ತದೆ. ಕ್ರಾಂತಿಕಾರಿ ಡಾ. ಸುನೀತಿ ಚೌಧುರಿ ಘೋಷ್ ಲೋಕಾರ್ಪಣೆ ಮಾಡಿದರು. ಎಷ್ಟೇ ಪ್ರಯತ್ನಿಸಿದರೂ, ಆರ್ಥಿಕ ದುಃಸ್ಥಿತಿಯಿಂದ ಮುಖ್ಯವಾದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನನಗೆ ಬೆಂಗಳೂರಿಗೆ ಬರಲು ಸಾಧ್ಯವೇ ಆಗಲಿಲ್ಲ. ಅದೊಂದು ದುರ್ಭರ ಕಾಲ. ಕೊನೆಗೆ ಮಾರ್ಚ್ 2ರ ಇನ್ನೊಂದು ಕಾರ್ಯಕ್ರಮಕ್ಕೆ ಬಂದು ಭಗವಾನ್ ದಾಸ್ ಮಾಹೋರ್, ಸದಾಶಿವ ರಾವ್ ಮಲಕಾಪುರಕರ್, ಶಚೀಂದ್ರನಾಥ ಭಕ್ಷಿ, ಪಿ.ಕೆ.ಘೋಷ್, ಡಾ. ಸುನೀತಿ ಚೌಧುರಿಘೋಷ್ ಮೊದಲಾದವರನ್ನು ನೋಡಿ ಕಣ್ತುಂಬಿಕೊಳ್ಳಲು ಮತ್ತು ಅವರೆಲ್ಲರ ಆಟೋಗ್ರಾಫ್ ಸಹ ಪಡೆಯಲು ಸಾಧ್ಯವಾಯಿತು. ಈಗಲೂ ಈ ಕ್ರಾಂತಿಕಾರಿಗಳ ಸಹಿಗಳು ಅದ್ಭುತ ಪ್ರೇರಣೆ ನೀಡುತ್ತವೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ: ಅಮ್ಮಾ, ನ್ಯಾಯದೇವತೆ, ತುರ್ತಾಗಿ ನಮ್ಮನ್ನೆಲ್ಲಾ ಪೊರೆಯಮ್ಮಾ…
ಬ್ರಿಟಿಷರನ್ನು ನಡುಗಿಸಿದ, ಎದುರಿಸಿದ ಎಲ್ಲ ಕ್ರಾಂತಿಕಾರಿಗಳ ನಿಜ-ಇತಿಹಾಸದ ಕಥಾನಕಗಳು ಇನ್ನೂ ನಮ್ಮ ಇತಿಹಾಸದ ಪಠ್ಯಗಳಲ್ಲಿ ಸೂಕ್ತ ಅವಕಾಶವನ್ನು ಪಡೆಯಬೇಕಾಗಿದೆ. ಇಂಗ್ಲಿಷ್ ಭಾಷೆಗೆ “ಅಜೇಯ” ಅನುವಾದವಾಗಿದೆ. ಈ ಗಾತ್ರದಲ್ಲಿ ಬೇರಾವ ಭಾಷೆಯಲ್ಲಿಯೂ ಚಂದ್ರಶೇಖರ್ ಆಜಾದ್ ಕುರಿತಂತೆ ಕೃತಿ ರಚನೆಯಾಗಿಲ್ಲ, ಎನ್ನುವುದು ಆ ಕಾಲದಲ್ಲಿ ಒಂದು ಹೆಗ್ಗಳಿಕೆಯಾಗಿತ್ತು. ಬಾಬು ಕೃಷ್ಣಮೂರ್ತಿ ಅವರು ಕ್ರಾಂತಿಕಾರಿಗಳ ಕೊಡುಗೆ, ಬಲಿದಾನಗಳ ಬಗೆಗೆ ತುಂಬಾ ಕೃತಿರಚನೆ ಮಾಡಿದ್ದಾರೆ. ಕನ್ನಡದಲ್ಲಿ ಅವರಷ್ಟು ಸಾಧನೆ ಮಾಡಿದವರು ಯಾರೂ ಇಲ್ಲ. ಅದೇನೇ ಇರಲಿ, ಕನ್ನಡ ಸಾಹಿತ್ಯದಲ್ಲಿ “ಅಜೇಯ” ಕೃತಿ ನೀಡಿದ ಅಘಟಿತ ಐತಿಹಾಸಿಕ ತಿರುವು “ನ ಭೂತೋ” ಎನ್ನುವಂತಹುದು.
ಐದಾರು ದಶಕಗಳ ಕಾಲ, ಕರ್ನಾಟಕದ ಅಕಾಡೆಮಿಗಳ – ಪ್ರಾಧಿಕಾರಗಳ – ವಿಶ್ವವಿದ್ಯಾಲಯಗಳ (ಅಷ್ಟೇಕೆ, ಚಿತ್ರರಂಗ – ನಾಟಕರಂಗಗಳ) ಎಲ್ಲ ಪ್ರಶಸ್ತಿಗಳು ಮಾಫಿಯಾ ತಂಡದ ಕೆಲವೇ ಕೆಲವರ ಪಾಲಾಗುತ್ತಿದ್ದವು. ರಾಷ್ಟ್ರೀಯ ವಿಚಾರಧಾರೆಯವರ ಎಲ್ಲ ಕೃತಿಗಳು ನೇರವಾಗಿ ಕಸದ ಬುಟ್ಟಿಗೆ ಸೇರುತ್ತಿದ್ದವು. ಯಾವ ಆಯ್ಕೆಯ ಪಟ್ಟಿಗಳಲ್ಲೂ, ರಾಷ್ಟ್ರೀಯ ವಿಚಾರಧಾರೆಯವರ ಹೆಸರುಗಳೇ ಕಾಣುತ್ತಿರಲಿಲ್ಲ. ಹುಚ್ಚ ತುಘಲಕ್ ನನ್ನು ವೈಭವೀಕರಿಸುವ ನಾಟಕಗಳು ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದ್ದವು. ತೆರಿಗೆದಾರರ ಹಣವನ್ನು ಪೋಲು ಮಾಡಿ, ಮತಾಂಧ – ನರಹಂತಕ ಔರಂಗಜೇಬನನ್ನು ಹಾಡಿ ಹೊಗಳುವ ಪುಸ್ತಕಗಳು ಅಚ್ಚಾಗುತ್ತಿದ್ದವು. ಅಂತಹ ಅವಧಿ ಕಳೆದಿದೆ. ಎಸ್.ಆರ್.ರಾಮಸ್ವಾಮಿ, ಬಾಬು ಕೃಷ್ಣಮೂರ್ತಿ ಅಂತಹ ಶತಪ್ರತಿಶತ ಅರ್ಹರಿಗೆ ಪ್ರಶಸ್ತಿಗಳು ಸಲ್ಲುವಂತಾಗಿದೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ