Site icon Vistara News

Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್‌ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!

Pak Afghan Conflict

Pak Afghan Conflict

ಚೈತನ್ಯ ಹೆಗಡೆ, ಪತ್ರಕರ್ತ

ಆಗಸ್ಟ್ 2021ರ ಮಧ್ಯಭಾಗ: ಭಾರತದ ಮುಖಭಾವ ಗಂಭೀರವಾಗಿತ್ತು. ಪಾಕಿಸ್ತಾನ ಗಹಗಹಿಸಿತ್ತು. ಕಾರಣ, ಅವತ್ತು ಅಫಘಾನಿಸ್ತಾನದಲ್ಲಿ (Pak Afghan Conflict) ತೆರೆದುಕೊಳ್ಳುತ್ತಿದ್ದ ವಿದ್ಯಮಾನಗಳು. ಯಾವಾಗ ಅಮೆರಿಕವು ತನ್ನ ಪಡೆಯನ್ನು ಅಫ್ಘನ್ ನೆಲದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತ ಹೋಯಿತೋ ಅದರ ಬೆನ್ನಲ್ಲೇ ಜಗತ್ತಿನ ಟಿವಿ ಪರದೆಗಳನ್ನೆಲ್ಲ ಆಕ್ರಮಿಸಿದ್ದು ಬಂದೂಕುಧಾರಿ ವಿಕ್ಷಿಪ್ತ ತಾಲಿಬಾನಿಗಳು ಅಫಘಾನಿಸ್ತಾನದ ಅಧಿಕಾರ ಕೇಂದ್ರಗಳನ್ನೆಲ್ಲ ಹೊಕ್ಕು ಅನಾಗರಿಕ ಭಂಗಿಗಳಲ್ಲಿ ಅಬ್ಬರಿಸಿದ ದೃಶ್ಯಗಳು. ಇತ್ತ, ನಭಕ್ಕೆ ನೆಗೆಯುತ್ತಿದ್ದ ಅಮೆರಿಕದ ವಿಮಾನದ ಟಯರು, ರೆಕ್ಕೆಗಳನ್ನೆಲ್ಲ ಹಿಡಿದುಕೊಂಡು ಆ ನೆಲದಿಂದ ಪಾರಾಗಲು ಹೊರಟಿದ್ದ ಸಾಮಾನ್ಯ ಅಫಘನ್ನರ ದೃಶ್ಯಗಳು ಜಗತ್ತನ್ನು ಕಲಕಿದ್ದವು. 

ರಾಜತಾಂತ್ರಿಕ ದೃಷ್ಟಿಯಿಂದ ಭಾರತ ಬಿಕ್ಕಟ್ಟಿಗೆ ಸಿಲುಕಿ ತನ್ನೆಲ್ಲ ರಾಯಭಾರ ಉಪಸ್ಥಿತಿಯನ್ನು ಹಿಂದಕ್ಕೆ ಕರೆಸಿಕೊಂಡಿತು. ಇದೇ ಸಮಯಕ್ಕೆ ಪಾಕಿಸ್ತಾನ ಗಹಗಹಿಸುತ್ತಿದ್ದದ್ದು ಏಕೆಂದರೆ, ಯಾವ ತಾಲಿಬಾನ್ ಪಂಗಡಕ್ಕೆ ಪಾಕಿಸ್ತಾನದ ಬೆಂಬಲವಿತ್ತೋ ಅವರಲ್ಲಿ ಮೇಲುಗೈ ಪಡೆದಿದ್ದರು. ಅಮೆರಿಕ ಸೃಷ್ಟಿಸಿದ ಆಫ್ಘನ್ ನಿರ್ವಾತವನ್ನು ತುಂಬುವುದಕ್ಕೆ ಪಾಕಿಸ್ತಾನದ ಇನ್ನೊಬ್ಬ ಮಿತ್ರ ಚೀನಾ ಅದಾಗಲೇ ಕಾರ್ಯಪ್ರವೃತ್ತವಾಗಿದ್ದು ಸಹ ಭಾರತದ ಹಿನ್ನಡೆಯನ್ನು ಮತ್ತಷ್ಟು ದೊಡ್ಡದಾಗಿಸಿತು.

ಪ್ರಕ್ಷುಬ್ಧ ಅಫಘಾನಿಸ್ತಾನದ ಭೂಮಿಯಿಂದ ಭಾರತ ತನ್ನೆಲ್ಲ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯಿತು ಎಂಬುದಕ್ಕೆ ಮಾತ್ರವೇ ಆ ಹಿನ್ನಡೆ ಸೀಮಿತವಾಗಿರಲಿಲ್ಲ. ಅಮೆರಿಕದ ಅಭಯ ಛತ್ರದಡಿ ಅಲ್ಲಿನ ಸರ್ಕಾರದ ಚುಕ್ಕಾಣಿ ಹಿಡಿದಿದ್ದವರೆಲ್ಲರೂ ಭಾರತದ ಸ್ನೇಹಿತರೇ ಆಗಿದ್ದರು. ಅಶರಫ್ ಘನಿ, ಅಮರುಲ್ಲಾ ಸಲೇಹ್ ಇವರೆಲ್ಲ ಬೇರೆ ಬೇರೆ ದೇಶಗಳಿಗೆ ಹೋಗಬೇಕಾಯಿತು. 

ಅಫಘಾನಿಸ್ತಾನದಲ್ಲಿ ಭಾರತವು ದೊಡ್ಡಮಟ್ಟದಲ್ಲಿ ದಶಕಗಳಿಂದ ಅಭಿವೃದ್ಧಿ ಪಾಲುದಾರನಾಗಿತ್ತು. ಅಲ್ಲಿನ ಸಂಸತ್ತು ಕಟ್ಟಿಸಿಕೊಟ್ಟಿದ್ದು ಭಾರತ. 42 ಮೆಗಾವ್ಯಾಟ್ ವಿದ್ಯುತ್ ಹಾಗೂ ನೀರಾವರಿಗಳೆರಡನ್ನೂ ಪೂರೈಸುವ ಸಲ್ಮಾ ಆಣೆಕಟ್ಟು ಭಾರತ-ಅಫಘಾನಿಸ್ತಾನಗಳ ಪ್ರೆಂಡ್ಶಿಪ್ ಡ್ಯಾಮ್ ಅಂತಲೇ ಕರೆಸಿಕೊಂಡಿತ್ತು. 218 ಕಿಲೊಮೀಟರುಗಳ ಹೆದ್ದಾರಿ ನಿರ್ಮಾಣ ಸೇರಿದಂತೆ ಅಫಘಾನಿಸ್ತಾನದ ಎಲ್ಲ ನಿರ್ಮಾಣ ಕೆಲಸಗಳಲ್ಲಿದ್ದದ್ದು ಭಾರತದ ದುಡ್ಡು, ಸಹಯೋಗ. ಇಂಥ ಅಫಘಾನಿಸ್ತಾನವನ್ನು ತಾಲಿಬಾನಿಗಳ ಕೈಗೆ ಕೊಟ್ಟು ಅಲ್ಲಿ ಜಾಗವಿಲ್ಲದೇ ನಿರ್ಗಮಿಸಬೇಕಾಯಿತಲ್ಲ ಎಂಬ ನೋವು ಸಣ್ಣದೇನಾಗಿರಲಿಲ್ಲ. 

ಆದರೆ…ರಾಜತಾಂತ್ರಿಕತೆ ಎನ್ನುವುದು ಸಹನೆಯನ್ನೂ ಹಾಗೂ ದೀರ್ಘಾವಧಿ ಆಟವನ್ನೂ ಬೇಡುತ್ತದೆ ಮತ್ತು ಆಗೀಗಿನ ಆಘಾತಗಳನ್ನು ನುಂಗಿಕೊಂಡು ಈ ಆಟವನ್ನು ಮುಂದುವರಿಸುವ ಕ್ಷಮತೆಯನ್ನು ಭಾರತ ರೂಢಿಸಿಕೊಂಡಿದೆ ಎಂಬ ಸಂದೇಶವನ್ನು ಅಫಘಾನಿಸ್ತಾನದ ಈಗಿನ ವಿದ್ಯಮಾನಗಳು ನಿರೂಪಿಸುತ್ತಿವೆ. ಈ ಎರಡು ವರ್ಷಗಳಲ್ಲಿ ಪರಿಸ್ಥಿತಿ ಹೇಗೆ ಬದಲಾಯಿಸಿದೆ ಎಂಬುದು ಸ್ವಾರಸ್ಯಕರ. 

ಹದತಪ್ಪಿದ ಪಾಕ್-ಆಫ್ಘನ್ ಬಾಂಧವ್ಯ

2021ರ ಆಗಸ್ಟ್-ಸೆಪ್ಟೆಂಬರ್ ಕಾಲಕ್ಕೆ ಹೋಗಿ ನೋಡಿದರೆ ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಪ್ರತಿಷ್ಠಾಪಿಸುತ್ತಿರುವುದೇ ಪಾಕಿಸ್ತಾನ ಎಂಬಂತಹ ಚಿತ್ರಣವಿತ್ತು. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ಕಾಬೂಲಿಗೆ ಹೋಗಿ ತಾಲಿಬಾನ್ ನೇತಾರರ ಜತೆ ಚಹಾ ಕುಡಿದು ಬಂದಿದ್ದರು. ಅಫಘಾನಿಸ್ತಾನದ ಪಂಜಶೀರ್ ಕಣಿವೆಯಲ್ಲಿ ಅಳಿದುಳಿದ ತಾಲಿಬಾನ್ ವಿರೋಧಿಗಳು ಪ್ರತಿರೋಧ ತೋರುತ್ತಿದ್ದಾಗ ಪಾಕಿಸ್ತಾನವೇ ಅವರನ್ನು ಸಂಪೂರ್ಣ ಹಿಮ್ಮೆಟ್ಟಿಸುವುದಕ್ಕೆ ತಾಲಿಬಾನಿಗಳಿಗೆ ಮಿಲಿಟರಿ ಸಹಾಯವನ್ನೂ ಕೊಟ್ಟಿತು. ಮೇಲ್ನೋಟಕ್ಕೆ ಅಮೆರಿಕದ ಮಿತ್ರನಾಗಿದ್ದರೂ, ಯಾವಾಗೆಲ್ಲ ಅಫಘಾನಿಸ್ತಾನದಲ್ಲಿ ಪ್ರಮುಖ ತಾಲಿಬಾನ್ ನಾಯಕರು ಅಮೆರಿಕದ ಕಾರ್ಯಾಚರಣೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡರೋ ಆಗೆಲ್ಲ ಅವರನ್ನು ತನ್ನ ನೆಲಕ್ಕೆ ಕರೆಸಿಕೊಂಡು ಬಚಾವಾಗಿಸಿದೆ ಪಾಕಿಸ್ತಾನ. ವಾಜಪೇಯಿ ಕಾಲದಲ್ಲಿ ಕಂದಹಾರಿಗೆ ವಿಮಾನ ಅಪಹರಣವಾದಾಗ ಆಗಲ್ಲಿ ಆಳುತ್ತಿದ್ದ ತಾಲಿಬಾನಿಗಳು ಐಎಸ್ಐ ತಾಳಕ್ಕೆ ತಕ್ಕಂತೆ ಕುಣಿದಿದ್ದರು. ಅಷ್ಟೇಕೆ, ಅಮೆರಿಕವು ಹುಡುಕುತ್ತಿದ್ದ ಒಸಾಮಾ ಬಿನ್ ಲಾಡೆನ್ ಅಂತಿಮವಾಗಿ ಶಿಕಾರಿಯಾಗಿದ್ದು ಪಾಕಿಸ್ತಾನದ ನೆಲದಲ್ಲೇ ಎಂಬುದು ತಾಲಿಬಾನ್ ಜತೆ ಆ ದೇಶದ ಸಖ್ಯವನ್ನು ಜಗತ್ತಿಗೆ ಸ್ಪಷ್ಟವಾಗಿಯೇ ವಿವರಿಸುತ್ತದೆ. 

ಆದರೀಗ ಎರಡು ಪ್ರಮುಖ ಘಟನೆಗಳು ನಡೆದಿವೆ. ವಾರಗಳ ಹಿಂದೆ ಇದೇ ಅಫಘಾನಿಸ್ತಾನದ ಮೇಲೆ ಪಾಕಿಸ್ತಾನವು ವಾಯುದಾಳಿ ನಡೆಸಿದೆ. ಅದು ಅಧಿಕಾರದಲ್ಲಿರುವ ತಾಲಿಬಾನಿಗಳನ್ನು ಕ್ರುದ್ಧವಾಗಿಸಿದೆ. ನಮ್ಮ ನಾಗರಿಕರು ಮತ್ತು ಮಕ್ಕಳನ್ನು ಪಾಕಿಸ್ತಾನವು ಕೊಂದಿದೆ ಎಂದು ತಾಲಿಬಾನ್ ಪ್ರತಿಕ್ರಿಯಿಸಿತ್ತು. ಇದಕ್ಕೂ ಪೂರ್ವಭಾವಿ ಘಟನೆ ಎಂದರೆ ಕಳೆದ ಅಕ್ಟೋಬರಿನ ಚಳಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅಫ್ಘನ್ ನಿರಾಶ್ರಿತರನ್ನು ಪಾಕಿಸ್ತಾನ ನಿರ್ದಯೆಯಿಂದ ಅಫಘಾನಿಸ್ತಾನಕ್ಕೆ ಅಟ್ಟಿತು. ತೆಹ್ರಿಕ್ ತಾಲಿಬಾನ್ ಪಾಕಿಸ್ತಾನ ಎಂಬ ಉಗ್ರರ ಗುಂಪು ತಾಲಿಬಾನಿನ ಸಿದ್ಧಾಂತಗಳಿಂದಲೇ ಸ್ಫೂರ್ತಿ ಪಡೆದು ಪಾಕಿಸ್ತಾನದ ನೆಲದಲ್ಲಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿರುವುದರಿಂದ ದಾಖಲೆ-ಪತ್ರಗಳಿಲ್ಲದ ಅಫಘಾನಿ ಮಂದಿ ತನ್ನ ನೆಲದಲ್ಲಿರುವುದು ತನಗೆ ಅಪಾಯ ಎಂಬ ನಿಲವು ಪಾಕಿಸ್ತಾನದ್ದು. 

ಡುರಾಂಡ್ ಲೈನ್ ಮತ್ತು ಪಶ್ತೂನ್ ರಾಷ್ಟ್ರವಾದದ ಸವಾಲು!

ಉಗ್ರವಾದವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ನಿಟ್ಟಿನಲ್ಲಿ ತಾಲಿಬಾನಿಗಳಿಗೆ ಪಾಕಿಸ್ತಾನವು ಆಗಾಗ ಆತುಕೊಂಡುಬಂದಿದ್ದರೂ, ಪಾಶ್ಚಾತ್ಯರ ಎದುರಿಗೆ ಅದೇನೇ ಮುಸ್ಲಿಂ ಕಾರ್ಡ್ ಅಡಿಯಲ್ಲಿ ಒಂದಾದರೂ, ಪಾಕಿಸ್ತಾನ ಹಾಗೂ ಅಫಘಾನಿಸ್ತಾನಗಳ ನಡುವೆ ಐತಿಹಾಸಿಕವಾಗಿಯೇ ಒಂದು ವಿಭಜಕ ಗೆರೆ ಇದೆ. ಉಳಿದೆಲ್ಲ ಸವಾಲುಗಳು ಹಿನ್ನೆಲೆಗೆ ಹೋದಾಗ ಆ ವಿಭಜನಾತ್ಮಕ ಅಂಶವೇ ಮುನ್ನೆಲೆಗೆ ಬರುತ್ತದೆ ಹಾಗೂ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳನ್ನು ಹೊಡೆದಾಟಕ್ಕೆ ಹಚ್ಚುತ್ತದೆ. 

ಆ ಅಂಶವೇ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳ ಗಡಿ ನಿರ್ಧರಿಸುವ 2,600 ಕಿಲೊಮೀಟರುಗಳ ಉದ್ದದ ಡುರಾಂಡ್ ಲೈನ್. 1893ರ ವೇಳೆಗೆ ತಮ್ಮ ಅಂದಿನ ರಾಜನನ್ನು ಒತ್ತಡಕ್ಕೆ ಒಳಪಡಿಸಿ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರವು ನಿರ್ಧರಿಸಿರುವ ಈ ಗಡಿರೇಖೆ ತಮಗೆ ಸುತರಾಂ ಇಷ್ಚವಿಲ್ಲ ಅನ್ನೋದು ಅಫಘಾನಿಸ್ತಾನವು ಯಾವತ್ತೂ ಹೇಳಿಕೊಂಡುಬಂದಿರುವ ಮಾತು. 

ಈ ಚೌಕಾಶಿಯಲ್ಲೇ ಪಾಕಿಸ್ತಾನಕ್ಕಿರುವ ಬಹುದೊಡ್ಡ ಆತಂಕವೂ ಸ್ಪಷ್ಟವಾಗುತ್ತದೆ. ಅದೆಂದರೆ ಪಶ್ತೂನ್ ರಾಷ್ಟ್ರವಾದ!

ಪಾಕಿಸ್ತಾನದ ಮಿಲಿಟರಿ ಮತ್ತು ಆಡಳಿತ ಸೂತ್ರಗಳಲ್ಲಿ ಹೆಚ್ಚಿನ ಹಿಡಿತವಿರುವುದು ಪಂಜಾಬ್ ಪ್ರಾಂತ್ಯದ ಮುಸ್ಲಿಮರಿಗೆ. ಈ ಡುರಾಂಡ್ ಗಡಿರೇಖೆಯ ಅತ್ತಕಡೆ ಮತ್ತು ಇತ್ತ ಕಡೆ ಬಹಳದೊಡ್ಡ ಸಂಖ್ಯೆಯಲ್ಲಿರುವುದು ಪಶ್ತೂನ್ ಬುಡಕಟ್ಟು ಜನಾಂಗ. ಎಲ್ಲರೂ ಮುಸ್ಲಿಮರೇ ಆದರೂ ಆಚಾರ-ವಿಚಾರಗಳಲ್ಲಿ ಅಂತರ ಇದ್ದೇ ಇದೆ. ಅಫಘಾನಿಸ್ತಾನದಲ್ಲಿ ಪಶ್ತೂನಿಗಳು ಮಾತನಾಡುವ ಪಶ್ತೊ ಭಾಷೆ ಅಧಿಕೃತ ಭಾಷೆಗಳಲ್ಲೊಂದು. ಪಾಕಿಸ್ತಾನದ ವಿಚಾರಕ್ಕೆ ಬಂದರೆ ಉರ್ದು ರಾಷ್ಟ್ರಭಾಷೆ. ಅಮೆರಿಕದೊಂದಿಗೆ ಕೈಜೋಡಿಸಿದ್ದಕ್ಕಾಗಿ ಜಾಗತಿಕ ರಾಜಕಾರಣದಲ್ಲಿ ನಿರ್ಲಕ್ಷ್ಯಿಸಲಾಗದ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನವು ಅದೇ ಕಾರಣಕ್ಕೆ ಅಫಘಾನಿಸ್ತಾನದ ತಾಲಿಬಾನ್ ಮೇಲೂ ಪ್ರಭಾವ ಹೊಂದಿತ್ತು. ಇಸ್ಲಾಂ ಅನ್ನು ರಕ್ಷಿಸಬೇಕು ಎಂಬ ಗಲಾಟೆ ಎಬ್ಬಿಸಿ ಅದು ಪಶ್ತೂನಿ ಐಡೆಂಟಿಟಿಯನ್ನು ಮುಚ್ಚಿ ಹಾಕುತ್ತಿತ್ತು. ಪಶ್ತೂನಿಗಳ ರಕ್ತ ಪಾಕಿಸ್ತಾನದ ಪಾಲಿಗೆ ಅಗ್ಗ ಎಂಬ ಮಾತಿದೆ. ಅಂತೆಯೇ 90ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರವಾದಕ್ಕೆ ಸಹ ಇವರನ್ನು ಪಾಕಿಸ್ತಾನ ಬಳಸಿಕೊಂಡಿತ್ತು. 

ಆದರೆ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮೊದಲಿದ್ದ ಮಹತ್ವವೀಗ ಪಾಕಿಸ್ತಾನಕ್ಕಿಲ್ಲ. ತಾಲಿಬಾನಿಗೆ ಸಹ ತನ್ನ ನೆಲದಲ್ಲಿ ಹೋರಾಡಿಕೊಂಡಿರುವುದಕ್ಕೆ ಅಮೆರಿಕ ಎಂಬ ಗುಮ್ಮ ಇಲ್ಲ. ತಾಲಿಬಾನಿಗಳಿಗೆ ಅಧಿಕಾರ ಸೂತ್ರ ಸಿಕ್ಕಿದ ಮೇಲೆ ಅವರ ಸವಾಲುಗಳು ಮಾಮೂಲಿನ ಉಗ್ರವಾದಿ ಸಂಘಟನೆಗೆ ಇರುವಂಥದ್ದಲ್ಲ. ಅದು ಸರ್ವಾಧಿಕಾರಿ ಇಸ್ಲಾಂ ಪ್ರಭುತ್ವವೇ ಆಗಿದ್ದರೂ ಒಂದುಮಟ್ಟಿಗೆ ಸರ್ಕಾರವನ್ನು ನಡೆಸಬೇಕಲ್ಲ… ಅದಕ್ಕೆ ಜಗತ್ತಿನ ಸಹಕಾರ ಬೇಕು. ಚೀನಾ ಸಹಕರಿಸುತ್ತಿದೆಯಾದರೂ ಅದು ಗಣಿಗಾರಿಕೆಯಂಥ ಸಹಭಾಗಿತ್ವಗಳನ್ನು ಬಯಸುತ್ತಿದೆಯೇ ಹೊರತು ಒಟ್ಟಾರೆ ಆಫ್ಘನ್ ಉದ್ಧಾರವನ್ನಲ್ಲ. ಅಮೆರಿಕವು ಆಫ್ಘನ್ ನಲ್ಲಿದ್ದಷ್ಟು ಕಾಲವೂ ಅವರಿವರ ಕೈಗೆ ಶಸ್ತ್ರ ಕೊಟ್ಟು ಆಟವಾಡಿತೇ ಹೊರತು ಬೇರೆ ಅನುಕೂಲಗಳನ್ನು ಮಾಡಲಿಲ್ಲ. ಶಾಲೆ, ಆಣೆಕಟ್ಟು, ನೀರಾವರಿ, ಮಾನವ ಸಂಪನ್ಮೂಲ ತರಬೇತಿ ಅಂತೆಲ್ಲ ಅಫಘಾನಿಸ್ತಾನದ ಜತೆ ಈ ಹಿಂದೆ ಬಾಂಧವ್ಯ ಬೆಸೆದಿರುವ ಏಕಮಾತ್ರ ಉದಾಹರಣೆ ಎಂದರೆ ಭಾರತ ದೇಶದ್ದು ಮಾತ್ರ! ತಾಲಿಬಾನಿಗರಿಗೂ ಗೊತ್ತು ಈ ವಾಸ್ತವ. ಹಾಗೆಂದೇ ಅದು 2022ರಿಂದೀಚೆಗೆ ಭಾರತವನ್ನು ರಮಿಸುತ್ತ ಬಂತು. ಆ ಸೂಚನೆಗಳನ್ನು ಸಂಪೂರ್ಣ ತಿರಸ್ಕರಿಸದೇ ಭಾರತವೂ ನಾಜೂಕಿನ ಹೆಜ್ಜೆ ಇಟ್ಟಿತು. 

ಪಾಕ್ ಪ್ರಭಾವ ಕುಗ್ಗಿದೆಡೆ ಭಾರತದ ನಾಜೂಕು ನಡೆ

1996ರಲ್ಲಿ ಅಫಘಾನಿಸ್ತಾನವು ತಾಲಿಬಾನಿಗಳ ವಶಕ್ಕೆ ಬಂದಾಗ ಭಾರತವು ತಕ್ಷಣಕ್ಕೆ ಅಲ್ಲಿನ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಿತ್ತು. ನಂತರ 2001ರಲ್ಲಿ ಅಮೆರಿಕ ನೇತೃತ್ವದ ಮಿಲಿಟರಿ ಶಕ್ತಿ ಆ ನೆಲಕ್ಕೆ ಹೋಗಿ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಿ ಸ್ಥಳೀಯರಿಗೆ ಸರ್ಕಾರ ಸ್ಥಾಪಿಸುವ ಅವಕಾಶ ಮಾಡಿದಾಗ ಭಾರತವೇ ಮೊದಲಿಗನಾಗಿ ಅಲ್ಲಿ ರಾಯಭಾರ ವ್ಯವಸ್ಥೆಗಳನ್ನು ತೆರೆದಿತ್ತು. 

ಇವತ್ತಿನ ಜಾಗತಿಕ ರಾಜಕಾರಣ ಹೇಗಿದೆ ಎಂದರೆ ನೈತಿಕ ಪ್ರಶ್ನೆಗಳನ್ನು ಒಡ್ಡಿ ಯಾವ ಜಾಗವನ್ನೂ ಖಾಲಿ ಬಿಡುವಂತಿಲ್ಲ. ಉದಾಹರಣೆಗೆ, ತಾಲಿಬಾನಿಗಳು ಮಹಿಳೆಯರಿಗೆ ಶಿಕ್ಷಣ ಕೊಡುತ್ತಿಲ್ಲವಾದ್ದರಿಂದ ನಾವು ಅವರ ಜತೆ ವ್ಯವಹರಿಸುವುದೇ ಇಲ್ಲ ಎಂಬೆಲ್ಲ ನಿಲುವಿಗೆ ಅಂಟಿಕೊಳ್ಳುವುದು ವ್ಯಾವಹಾರಿಕ ನೆಲೆಯಲ್ಲಿ ಸಾಧ್ಯವಿಲ್ಲ. ಏಕೆಂದರೆ ಚೀನಾವೋ ಇನ್ಯಾವುದೋ ಶಕ್ತಿಯೋ ಆ ನಿರ್ವಾತವನ್ನು ತುಂಬುತ್ತದಲ್ಲದೇ ಅದನ್ನು ಭಾರತದ ವಿರುದ್ಧವೂ ಬಳಸಿಕೊಂಡೀತು. ಹಾಗೆಂದೇ, ತಾಲಿಬಾನಿಗೆ ಅಧಿಕೃತ ಜಾಗತಿಕ ಮನ್ನಣೆಯನ್ನೇನೂ ಕೊಡದೆಯೂ ಅದರ ಜತೆಗೆ ಒಂದು ಸಂವಹನವನ್ನು ಕಾಯ್ದುಕೊಳ್ಳುವ ಮಾದರಿಯನ್ನು ಭಾರತ ಅಳವಡಿಸಿಕೊಂಡಿದೆ.

ಜೂನ್ 2022ರಲ್ಲಿ ಭಾರತದ ರಾಯಭಾರಿಗಳು ಕಾಬೂಲಿನಲ್ಲಿ ತಾಲಿಬಾನಿ ಪ್ರತಿನಿಧಿಗಳನ್ನು ಭೇಟಿಯಾದರು. ಅಫಘಾನಿಸ್ತಾನದಲ್ಲಿ ಭಾರತದ ಉಪಸ್ಥಿತಿ ಬೇಕೆಂಬ ಒತ್ತಾಸೆ ಅವರಿಂದಲೇ ಬಂತು. ಹಾಗೆಂದೇ, ಭಾರತವೀಗ ಕಾಬೂಲಿನಲ್ಲಿ ಅಧಿಕೃತವಾಗಿ ರಾಯಭಾರ ಕಚೇರಿಯನ್ನು ಮರುಚಾಲನೆ ಮಾಡದೇ ಇದ್ದರೂ ಅಲ್ಲಿಗೆ “ತಾಂತ್ರಿಕ ಸಿಬ್ಬಂದಿ”ಯನ್ನು ಕಳುಹಿಸಿದೆ. ಹಸಿವಿನಿಂದ ಕಂಗೆಟ್ಟಿರುವ ಅಫಘಾನಿಸ್ತಾನಕ್ಕೆ ಗೋದಿ ಮತ್ತು ವೈದ್ಯಕೀಯ ವಸ್ತುಗಳ ನೆರವಿತ್ತ ಭಾರತದ ಕಾರ್ಯವನ್ನು ತಾಲಿಬಾನಿಗಳು ಭರಪೂರ ಹೊಗಳುತ್ತಿದ್ದಾರೆ. 

ಇವೆಲ್ಲವಕ್ಕೆ ಪ್ರತಿಯಾಗಿ ಅಫಘಾನಿಸ್ತಾನದ ನೆಲದಲ್ಲಿ ಭಾರತ ವಿರೋಧಿ ಸಂಚುಗಳು ತಲೆಎತ್ತದಂತೆ ನೋಡಿಕೊಳ್ಳುವುದು ಹಾಗೂ ಪಾಕಿಸ್ತಾನವನ್ನು ಆಫ್ಘನ್ ಸಖ್ಯದಿಂದ ದೂರವಾಗಿಸಿ, ಚೀನಾದ ಉಪಸ್ಥಿತಿಗೂ ಒಂದು ಸಮತೋಲನ ಕಂಡುಕೊಳ್ಳುವುದು ಭಾರತದ ಪ್ರಯತ್ನವಾಗಲಿದೆ.

ಜಾಗತಿಕ ರಾಜಕಾರಣದಲ್ಲಿ ಶಾಶ್ವತ ವೈರಿಗಳು ಇಲ್ಲವೇ ಸ್ನೇಹಿತರಿರುವುದಿಲ್ಲ, ಹಿತಾಸಕ್ತಿಗಳಷ್ಟೇ ಶಾಶ್ವತ ಎಂಬ ಮಾತಿದೆ. ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ ಇವೆಲ್ಲ ಕಾಲಕಾಲಕ್ಕೆ ಭಾರತದ ಪ್ರಭಾವಳಿಯಿಂದ ಹೊರಗೆ ಹೋಗಿಬಿಟ್ಟವೇನೋ ಎಂಬ ಸ್ಥಿತಿ ಆಗೀಗ ಬರುತ್ತಿರುತ್ತದೆ. ಆದರೆ ಆ ಸ್ಥಿತಿಯೇ ಅಂತಿಮವಲ್ಲ. ತನ್ನ ಹಿತಾಸಕ್ತಿ ರಕ್ಷಿಸಿಕೊಳ್ಳುವುದಕ್ಕೆ ಭಾರತವು ನಾಜೂಕಿನ ಆಟಗಳನ್ನೂ ಆಡಬಲ್ಲದು ಹಾಗೂ ಕೈತಪ್ಪಿ ಹೋದಂತೆನಿಸಿದ್ದನ್ನು ಮತ್ತೆ ಹತೋಟಿಗೆ ತೆಗೆದುಕೊಳ್ಳಬಲ್ಲದು ಎಂಬುದನ್ನು ಅಫಘಾನಿಸ್ತಾನದ ವಿದ್ಯಮಾನವು ನಿರೂಪಿಸುತ್ತಿದೆ.

ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!

Exit mobile version