Site icon Vistara News

ಪವರ್‌ ಪಾಯಿಂಟ್‌ with HPK | ಎಚ್‌ಡಿಕೆ- ಡಿಕೆ ಪ್ರೀತಿ ಪ್ರೇಮದ ಒಳಗುಟ್ಟು ಇದು!

hdk dks

ರಾಜ್ಯ ರಾಜಕಾರಣದಲ್ಲಿ‌ ಹಲವು ಲೆಕ್ಕಾಚಾರಗಳು ಹುಟ್ಟಿಕೊಳ್ಳುತ್ತಿವೆ. ಹೊಸ ಹೊಸ ಬೆಳವಣಿಗೆಗಳು ಆಗುತ್ತಿವೆ. ನೀವು ಅವನ್ನು ಗಮನಿಸುತ್ತಿರುತ್ತೀರ. ಅವುಗಳ ಪೈಕಿ ಒಂದು ಬೆಳವಣಿಗೆಯ ಮೇಲೆ ಗಮನ ಹರಿಸೋಣ.

ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಡಿ.ಕೆ ಶಿವಕುಮಾರ್ ಅವರು ಮಾತನಾಡುತ್ತ ಎಚ್. ಡಿ ಕುಮಾರ‌ಸ್ವಾಮಿ ನನ್ನ ಅಣ್ಣ ಅಂತ ಹೇಳಿದ್ದನ್ನು ನೋಡಿದ್ದಿರಬಹುದು. ಹಾಗಾದರೆ ಅದೊಂದು ಅನುದ್ದೇಶಿತ ಹೇಳಿಕೆಯಾ?

ಅದೊಂದೇ‌‌ ಅಲ್ಲ ಇತ್ತೀಚಿನ ಕೆಲ ತಿಂಗಳಲ್ಲಿ ಈ ಇಬ್ಬರೂ ನಾಯಕರು ಪರಸ್ಪರ‌ ಬೆನ್ನು ತಟ್ಟಿಕೊಂಡಿರುವ‌ ಹಲವು ಪ್ರಸಂಗಗಳನ್ನು ಉದಾಹರಿಸಬಹುದು. ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ನಂತರ ಈ ಇಬ್ಬರ ಸಂಬಂಧ ಮತ್ತಷ್ಟು ಇನ್ನಷ್ಟು ಹರಳುಗಟ್ಟುತ್ತಿರುವುದು ನಿಚ್ಚಳವಾಗುತ್ತಿದೆ.

ನಿನ್ನೆಯಷ್ಟೇ ಚಿತ್ರದುರ್ಗದಲ್ಲಿ ನಡೆದ ಒಕ್ಕಲಿಗ ಸಮಾಜದ ಸಭೆಯೊಂದರಲ್ಲಿ ಡಿಕೆಶಿ ಕುರಿತು ಎಚ್ ಡಿಕೆ ಆಡಿದ ಮಾತು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ‌. ಅದೇ ಸಭೆಯಲ್ಲಿ ಭಾಗವಹಿಸಿದ್ದ ನಂಜಾವಧೂತ ಸ್ವಾಮೀಜಿ ‘ಡಿಕೆಶಿ, ಎಚ್ ಡಿಕೆ ಈ ಇಬ್ಬರಲ್ಲಿ ಯಾರಾದರೊಬ್ಬರು ಮುಂದಿನ ಸಿಎಂ‌ ಆಗುವುದು ಪಕ್ಕಾ’ ಎಂದು ಹೇಳಿದರೆ, ‘ಡಿಕೆಶಿ ಸಿಎಂ ಆದರೆ ಆಗಲಿ, ನಾನು ಹೊಟ್ಟೆ ಉರಿಪಟ್ಟುಕೊಳ್ಳುವುದಿಲ್ಲ, ನನಗೂ ಖುಷಿ ಬಿಡಿ’ ಎನ್ನುತ್ತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ʻಡಿಕೆಶಿ ಸಿಎಂ ಆಗುವುದಕ್ಕೆ ನನ್ನ ಸಹಕಾರ ಇರಲಿದೆʼ ಎಂದು ಎಚ್ ಡಿಕೆ ಘೋಷಿಸಿರುವುದರ ಹಿಂದೆ ಪಕ್ಕಾ ರಾಜಕೀಯ ಪಟ್ಟು ಇರುವುದು ನೂರಕ್ಕೆ ನೂರು ಗ್ಯಾರಂಟಿ.

ಹಾಗೆ ನೋಡುವುದಾದರೆ ರಾಜ್ಯ ರಾಜಕೀಯದ ಮಟ್ಟಿಗೆ ರಾಜಕೀಯದ ಸಾಮು, ಪಟ್ಟುಗಳನ್ನು ಹಾಕುವುದರಲ್ಲಿ ದೇವೇಗೌಡರು ಹಾಗು ಎಚ್‌ಡಿಕೆ ಅವರನ್ನು ಮೀರಿಸುವ ಮತ್ತೊಬ್ಬ ಸದ್ಯಕ್ಕಿಲ್ಲ ಎಂದರೆ ಅತಿಶಯೋಕ್ತಿ ಅಲ್ಲ.

ಈಗ ಡಿಕೆಶಿ ಅವರ ಕುರಿತು ಎಚ್ ಡಿಕೆ ಆಡಿರುವ‌ ಮಾತಿನ ಹಿಂದಿನ ಲೆಕ್ಕಾಚಾರಗಳೇನು ಹಾಗಾದರೆ?
ಅವನ್ನು ಒಂದೊಂದಾಗಿ ಗಮನಿಸೋಣ.

ಒಕ್ಕಲಿಗರ ಕೋಟೆ ರಕ್ಷಣೆ ಗುರಿ

ಇಲ್ಲಿಯವರೆಗೆ ದೇವೇಗೌಡರು ಒಕ್ಕಲಿಗರ ಸಾಮ್ರಾಜ್ಯದ ಅನಭಿಷಿಕ್ತ ದೊರೆಯಾಗಿದ್ದರು. ಅದರಲ್ಲಿ ಯಾವ ಅನುಮಾನವೂ ಇಲ್ಲ. ಆ ಪಟ್ಟ ಸ್ವತಃ ಎಸ್.ಎಂ.ಕೃಷ್ಣ ಅವರಿಗೂ ದಕ್ಕಿರಲಿಲ್ಲ. ಅದರ ನೇರವಾದ ಲಾಭ ಆಗಿದ್ದು ಎಚ್ ಡಿಕೆ ಅವರಿಗೆ. ಮೇಲಿಂದ ಮೇಲೆ‌‌ ಸಿಎಂ ಆಗಲು ದೊಡ್ಡ‌ಗೌಡರ ಆ ನೆರಳೇ ಕಾರಣ ಎಂಬುದರಲ್ಲೂ ಅನುಮಾನ ಬೇಡವೇ ಬೇಡ. ಆದರೆ ಒಕ್ಕಲಿಗ ಸಮಾಜದ ಮೇಲಿನ ಗೌಡರ ಕುಟುಂಬದ ಹಿಡಿತ ಮುಂದೆಯೂ ಉಳಿದೀತೇ? ಹೇಳುವುದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಕೆಪಿಸಿಸಿ ಅಧ್ಯಕ್ಷರಾದ ನಂತರ ಕನಕಪುರಕ್ಕೆ, ಹೆಚ್ಚೆಂದರೆ ಬೆಂಗಳೂರು ಗ್ರಾಮಾಂತರಕ್ಕೆ ಸೀಮಿತ ಆಗಿದ್ದ ಡಿಕೆಶಿ ಈಗ ತಮ್ಮ ಪ್ರಭಾವವನ್ನು ಇಡೀ ಒಕ್ಕಲಿಗ ಸಮುದಾಯದ ಬಾಹುಳ್ಯ ಇರುವ ಪ್ರದೇಶಗಳಿಗೆ ಸದ್ದಿಲ್ಲದೆ ವಿಸ್ತರಿಸಿಕೊಳ್ಳುತ್ತಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಒಂದು ದೊಡ್ಡ ವರ್ಗ ಬಾಕಿ ಎಲ್ಲಾ ಆಯಿತಲ್ಲ, ಡಿಕೆಗೆ ಅವಕಾಶ ಸಿಕ್ಕಿ ಒಮ್ಮೆ ಸಿಎಮ್ ಆದರೆ ಆಗಲಿ‌ ಎಂಬ ಗಟ್ಟಿ ಸ್ವರ ಹೊರಡುತ್ತಿದೆ. ಮುಖ್ಯವಾಗಿ ಒಕ್ಕಲಿಗ ಸಮುದಾಯದ ಯುವಕರು ಡಿಕೆಶಿ ಪರ‌ ವಾಲುತ್ತಿರುವುದು ವಿಶೇಷವಾದ ಬೆಳವಣಿಗೆ. ಅದನ್ನು‌ ಸೂಕ್ಷ್ಮವಾಗಿ ಗ್ರಹಿಸಿರುವ ಎಚ್ ಡಿಕೆ ಇದೀಗ‌ ಎಚ್ಚರಿಕೆಯ‌ ಹೆಜ್ಜೆ ಇಡಲು ಮುಂದಾದಂತೆ ತೋರುತ್ತಿದೆ.

ಜೆಡಿಎಸ್/ ಬಿಜೆಪಿ‌ ಕಾಂಬಿನೇಶನ್ ಏನಾಗತ್ತೆ?

ಯಾರು ಏನೇ‌ ಹೇಳಲಿ, ಬಿಜೆಪಿ ಜೆಡಿಎಸ್ ನಡುವಿನ ಹೊಂದಾಣಿಕೆ ವಿಚಾರ ಇದೀಗ ಗುಟ್ಟಿನ ಸಂಗತಿ ಏನಲ್ಲ. ಆದರೆ ಆ ಸಖ್ಯ ಚುನಾವಣಾ ರಾಜಕಾರಣದಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಆಗಲಿ, ಅಥವಾ ಬಿಜೆಪಿಯಿಂದ‌ ಜೆಡಿಎಸ್‌ಗೆ ಆಗಲಿ ಲಾಭ ಆಗುವುದು ಅಷ್ಟರಲ್ಲೇ ಇದೆ ಎಂಬುದೂ ಆ ಎರಡೂ ಪಕ್ಷಗಳ ನಾಯಕರಿಗೆ ಗೊತ್ತಿದೆ. ಈ ಪಕ್ಷಗಳ ದೋಸ್ತಿ‌‌ ಏನಿದ್ದರೂ ಕೇವಲ‌ ಅನುಕೂಲ ಸಿಂಧು ಮಾತ್ರ. ಅದೊಂಥರ ಪಾಲಕರು ಮತ್ತು ಸಂಬಂಧಿಕರು ಒಪ್ಪದ ಲವ್ ಮ್ಯಾರೇಜ್ ಇದ್ದ ಹಾಗೆ.

ಚುನಾವಣಾ ಲಾಭ ಮಾಡಿಕೊಳ್ಳಬೇಕಿದ್ದರೆ ಜೆಡಿಎಸ್, ಕಾಂಗ್ರೆಸ್ ವಿಚಾರದಲ್ಲೇ ಸಾಫ್ಟ್ ಕಾರ್ನರ್ ತೋರಿಸಬೇಕು. ಅದು ಸಿದ್ದರಾಮಯ್ಯ ಹೊರತುಪಡಿಸಿದ ಕಾಂಗ್ರೆಸ್ ಆಗಬೇಕು. ಅದು ಎಚ್ ಡಿಕೆ ಅವರ ಲೆಕ್ಕಾಚಾರ ಇದ್ದಿರಬಹುದು.

ಜೆಡಿಎಸ್‌ಗೆ ಹೇಗೆ ಅನುಕೂಲ?

ಜೆಡಿಎಸ್ ತನ್ನ ಸೆಕ್ಯುಲರ್ ಐಡೆಂಟಿಟಿ ಉಳಿಸಿಕೊಂಡರಷ್ಟೇ ಆ ಪಕ್ಷಕ್ಕೆ ರಾಜಕೀಯ ನೆಲೆ. ಈಗಿನ‌ ಸನ್ನಿವೇಶದಲ್ಲಿ ಆ ಪಕ್ಷ ಒಕ್ಕಲಿಗರ ವಿಶ್ವಾಸವನ್ನೂ ಉಳಿಸಿಕೊಂಡು ಕಳೆದುಹೋಗಿರುವ ಸೆಕ್ಯುಲರ್ ವೋಟ್ ಬೇಸನ್ನೂ ಮರುಗಳಿಕೆ‌ ಮಾಡಿಕೊಳ್ಳುವ ಚಾಲೆಂಜ್ ಜೆಡಿಎಸ್‌ಗೆ ಇದೆ. ಈ ದೃಷ್ಟಿಯಿಂದ ನೋಡಿದರೆ ಎಚ್ ಡಿಕೆ‌ ಅವರ ಡಿಕೆಶಿ ಮೇಲಿನ ಪ್ರೀತಿ ಎಂಥವರಿಗೂ ಅರ್ಥವಾಗುತ್ತದೆ.

ಅದಕ್ಕಿಂತಲೂ ದೊಡ್ಡ ಗುರಿ ಇದೆ!

ಅದು ಬೇರೇನೂ ಅಲ್ಲ, ಟಾರ್ಗೆಟ್ ಸಿದ್ದರಾಮಯ್ಯ. ದಳಪತಿಗಳಿಗೆ ತಾವು ಅಧಿಕಾರಕ್ಕೆ ಬರುವುದಕ್ಕಿಂತಲೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗದಂತೆ ತಡೆಯುವುದೇ ದೊಡ್ಡ‌ ಟಾಸ್ಕ್. ಅದಕ್ಕೆ ಡಿಕೆಶಿಯೇ ಸರಿಯಾದ ಗುರಾಣಿ ಆಗಬಲ್ಲರು. ಹೀಗಾಗಿ ಚುನಾವಣಾ ಪೂರ್ವದಲ್ಲಿ ಅಗೋಚರವಾಗಿ, ಚುನಾವಣಾ ನಂತರ ನೇರವಾಗಿ ಡಿಕೆ ಮತ್ತು ಎಚ್ ಡಿಕೆ‌ ದೋಸ್ತಿ‌ ಬೆಸೆದುಕೊಳ್ಳುವ ಸಂಭವವೇ ಹೆಚ್ಚು.

ದಳಕ್ಕೇ ಈಗ ನೆಲೆ ಉಳಿಸಿಕೊಂಡು ಮುಂದೆ ಬೆಳೆಯುವ ಪ್ರಶ್ನೆ ಇದೆ. ಚುನಾವಣಾ ಪೂರ್ವದಲ್ಲಿ ಈಗಿರುವ ನೆಲೆ‌ ಕಾಯ್ದುಕೊಂಡು ಅಧಿಕಾರದ ಸಾಮೀಪ್ಯಕ್ಕೆ ಬರಬೇಕು. ಹಾಗಾದರೆ‌ ಅದಕ್ಕೂ 2028ರ ವಿಧಾನಸಭಾ ಚುನಾವಣೆ ಹೊತ್ತಿಗೆ ಜೆಡಿಎಸ್ ರಿಬೌಂಡ್ ಆಗಬಹುದು.

ಎಚ್‌ಡಿಕೆ- ಡಿಕೆ ಪ್ರೀತಿ ಪ್ರೇಮ ಅಷ್ಟು ದೂರದ್ದಾ ಹಾಗಾದರೆ !

ಇದನ್ನೂ ಓದಿ: ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ

Exit mobile version