ಶಾಲೆಯ ದಿನಗಳಲ್ಲಿ ನಾನು ಓದಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ “ನಿನ್ನನ್ನು ದನ ನೋಡಲು ಅಜ್ಜಿಮನೆಯಾದ ಚೆಟ್ಟಿಮಾನಿಯಲ್ಲಿ ಬಿಟ್ಟುಬಿಡುತ್ತೇನೆ” ಎಂಬ ಧಮ್ಕಿ ಅಮ್ಮನಿಂದ ನಿರಂತರವಾಗಿ ಬರುತ್ತಿತ್ತು. ಬೇಸಿಗೆಯ ರಜಾದಿನಗಳಲ್ಲಿ ನನ್ನ ಅಜ್ಜಿಯ ಮನೆಯಾದ ಚಟ್ಟಿಮಾನಿಯ ಕೆದಂಬಾಡಿಯಲ್ಲಿ ದನ ನೋಡುವ ಕೆಲಸವನ್ನು ಅಲ್ಲಿಯ ಕೆಲಸದವರ ಜೊತೆ ಸೇರಿ ಅತ್ಯಂತ ನಿಯತ್ತಿನಿಂದ ಮಾಡುತ್ತಿದ್ದ ನಾನು ಈ ದನ ನೋಡಲು ಕಳುಹಿಸಿಬಿಡುವೆ ಎಂಬ ಬೆದರಿಕೆಗೆ ಒಳಗೊಳಗೇ ಸಂತೋಷ ಪಡುತ್ತಿದ್ದೆ.
ಅಸಲಿಗೆ ಹಳ್ಳಿಯ ಕೃಷಿ ಕುಟುಂಬದ ಮನೆಗಳಿಗೆ ಲಕ್ಷಣ ಬರುವುದೇ ಈ ದನಗಳು ತುಂಬಿರುವ ಹಟ್ಟಿಗಳಿಂದ. ಹಟ್ಟಿ ತುಂಬಾ ಇರುತ್ತಿದ್ದ ಮಲೆನಾಡು ಗಿಡ್ಡ ತಳಿಯ ಹಸು ಮತ್ತು ಎತ್ತುಗಳಿಗೆ ನಾವು ಹೆಸರುಗಳನ್ನು ಇಡುತ್ತಿದ್ದ ಕಾರಣ ಬೆಳೆಯುವ ಮಕ್ಕಳಾದ ನಮಗೆ ಅವರ ಜೊತೆಗೆ ಮಾನಸಿಕವಾದ ಬೆಸುಗೆಯೊಂದು ಹುಟ್ಟಿಕೊಂಡುಬಿಡುತ್ತಿತ್ತು. ಹಟ್ಟಿಯಲ್ಲಿ ಎತ್ತು ಮತ್ತು ಹೋರಿಗಳಿಗೆ ಬೇರೆ ಕೊಠಡಿಗಳಿದ್ದರೆ ಹಾಲು ಕರೆಯುವ ಹಸುಗಳಿಗೆ ಬೇರೆಯೆ ಕೊಠಡಿಯಿರುತ್ತಿತ್ತು. ಪುಟ್ಟ ಕರುಗಳನ್ನು ಮಾತ್ರವೆ ಕಟ್ಟುತ್ತಿದ್ದ ಮತ್ತೊಂದು ಕೋಣೆಯೊಳಗೆ ನಾವುಗಳು ನಿರ್ಭಯವಾಗಿ ಓಡಾಡುತ್ತಾ ಆ ಕರುಗಳನ್ನು ಮುದ್ದು ಮಾಡುತ್ತಿದ್ದೆವು. ಅತ್ತೆ ಮತ್ತು ಅಜ್ಜಿ ಹೋಗಿ ಹಾಲು ಕರೆದುಕೊಂಡು ಬಂದರಷ್ಟೆ ಮುಂಜಾನೆ ಕಾಫಿ ತಯಾರಾಗುತ್ತಿದ್ದ ಕಾರಣದಿಂದ ಹಾಲು ಕರೆಯುವ ಕೆಲಸ ಮುಂಜಾನೆ ಆರು ಗಂಟೆಗೆ ಶುರುವಾಗುತ್ತಿತ್ತು. ಲಕ್ಷ್ಮಿ, ಕೊಕ್ಕರ್ಚಿ, ಕಲ್ಯಾಣಿ, ಸಿಂಧು ಹೀಗೆ ಆಯಾ ಹಸುಗಳು ಕೊಡುವ ಹಾಲಿನ ಪ್ರಮಾಣದ ಮೇಲೆ ಅವುಗಳಿಗಾಗಿಯೆ ವಿವಿಧ ಗಾತ್ರದ ಚೆಂಬುಗಳಿದ್ದವು. ಹಾಲು ಕರೆಯುವ ಹಸುಗಳಿಗೆ ತರಕಾರಿ, ಬಾಳೆಹಣ್ಣಿನ ಸಿಪ್ಪೆ ಮತ್ತು ಹಲಸಿನ ಹಣ್ಣಿನ ಸಾರೆಯನ್ನು ಹಾಕಿದ ಗಮಗಮಿಸುವ ಮಡ್ಡಿಯ ಬಕೇಟುಗಳನ್ನು ಹಿಡಿದು ಅಜ್ಜಿ ಮತ್ತು ಅತ್ತೆ ಹೊರಟರೆಂದರೆ ನಾವು ಅವರ ಸೆರಗು ಹಿಡಿದುಕೊಂಡು ಹೆಜ್ಜೆ ಹಾಕುತ್ತಿದ್ದೆವು. ಈ ರುಚಿಕರವಾದ ಮಡ್ಡಿಯುನ್ನು ಸವಿಯುವ ನಸೀಬು ಗದ್ದೆ ಹೂಡುವ ಎತ್ತುಗಳಾದ ಕೆಂಪ ಮತ್ತು ಮೋರನಿಗೆ ಮಳೆಗಾಲದಲ್ಲಿ ಮಾತ್ರ ದೊರಕುತ್ತಿತ್ತು.
ಸಾಧು ಹಸುಗಳಿಂದ ಅಜ್ಜಿ ಹಾಲು ಕರೆಯುತ್ತಿದ್ದರೆ ಒದೆಯುವ ಹಸುಗಳ ಕಾಲನ್ನು ಕಟ್ಟಿ ಅತ್ತೆ ಹಾಲನ್ನು ಕರೆಯುತ್ತಿದ್ದರು. ಕರುಗಳಿಗೆ ಸ್ವಲ್ಪ ಕ್ಷಣಗಳ ಕಾಲ ಚೀಪಲು ಬಿಡುವ ನಾಟಕವಾಡಿ ಅವರನ್ನು ಪಕ್ಕದಲ್ಲಿ ಕಟ್ಟಿದ ನಂತರ ಅತ್ತೆ ಮತ್ತು ಅಜ್ಜಿ ಚೆಂಬು ತುಂಬಿಸಿಕೊಳ್ಳುವುದನ್ನು ನಾವು ಬೆರಗು ಕಂಗಳಿಂದ ನೋಡುತ್ತಿದ್ದೆವು. ಕಾಲುಗಳನ್ನು ಕಟ್ಟಿರುವ ಹಸುಗಳ ಕೆಚ್ಚಲಿಗೆ ಕೈ ಹಾಕುವ ಧೈರ್ಯವನ್ನು ನಾವೂ ಒಮ್ಮೊಮ್ಮೆ ಮಾಡುತ್ತಿದ್ದೆವು.
ಹಾಲನ್ನು ಸ್ವಲ್ಪ ಕರುಗಳಿಗೆ ಉಳಿಸಿ ಕೊನೆಗೆ ಅವುಗಳಿಗೆ ಕುಡಿಯಲು ಬಿಟ್ಟಾಗ ನಾವು ಉಲ್ಲಸಿತರಾಗುತ್ತಿದ್ದೆವು. ನಾವು ಕಾಫಿ ಮುಗಿಸಿ ಬಂದ ನಂತರ ಹಟ್ಟಿಯ ಬಾಗಿಲು ತೆಗೆದಾಗ ದನಗಳು ದೂಳೆಬ್ಬಿಸುತ್ತಾ ಹೋಗುವ ಚಂದವನ್ನು ನೋಡಲು ನಮಗೆ ಎರಡು ಕಣ್ಣುಗಳು ಸಾಲದಾಗುತ್ತಿತ್ತು.
ಕುಂದಚೇರಿ ಗ್ರಾಮದಲ್ಲಿ ನಾನು ಬಾಲ್ಯದಲ್ಲಿ ದನ ಮೇಯಿಸುತ್ತಿದ್ದ ಹೆಚ್ಚಿನ ಬಾಣೆಗಳಲ್ಲಿ ಈಗ ಕಾಫಿ ತೋಟಗಳು ಎದ್ದಿದೆ. ನೇರಳೆ ಹಣ್ಣು ಮತ್ತು ಕಾಡು ಮಾವಿನ ಹಣ್ಣು ಹೆಕ್ಕಲು ಹೋಗುತ್ತಿದ್ದ ಕಾಲುದಾರಿಗಳು ಈಗ ತೋಟದ ಬೇಲಿಗಳಿಂದ ದಿಗ್ಬಧನದಲ್ಲಿದೆ. ದಿನವಿಡೀ ಕಾಡು ಹಣ್ಣುಗಳ ಬೇಟೆಯಾಡಲು ತೆರಳುತ್ತಿದ್ದ ನಮಗೆ ಈ ದನಗಳು ಬಾಣೆಯಲ್ಲೊ ಅಥವಾ ಗದ್ದೆಯ ಏರಿ ಮೇಲೆ ಮೇಯುತ್ತಿರುವಾಗ ಮತ್ತೆ ಕಣ್ಣಿಗೆ ಬೀಳುತ್ತಿದ್ದವು. ಒಣ ಹುಲ್ಲನ್ನು ಜೋಡಿಸಿಟ್ಟ ಅಟ್ಟಿಯ ಮೇಲೆ ನಾವು ಜಾರು ಬಂಡಿಯಾಡುತ್ತಾ ಸಂಜೆಯ ವೇಳೆ ಅತ್ತೆ ಮತ್ತು ಅಜ್ಜಿ ಹಾಲು ಕರೆಯುವುದನ್ನು ಮತ್ತೆ ನೋಡುತ್ತಿದ್ದೆವು. ಗೋಧೂಳಿ ಸಮಯದಲ್ಲಿ ನಮ್ಮ ದನಗಳು ಹಟ್ಟಿಗೆ ಮರಳಿದ ನಂತರ ಎಲ್ಲಾ ದನಗಳು ವಾಪಾಸು ಬಂದಿರುವುದನ್ನು ಖಾತರಿ ಪಡಿಸಿಕೊಂಡು ಮಾವನಿಗೆ ರಿಪೋರ್ಟ್ ನೀಡಿದರೆ ನನ್ನ ಅಂದಿನ ದನ ನೋಡುವ ಕೆಲಸ ಮುಕ್ತಾಯವಾಗುತ್ತಿತ್ತು. ಕೆಲವು ತುಂಟ ದನಗಳು ಹಟ್ಟಿಗೆ ಮರಳದಿದ್ದಾಗ ಅವರನ್ನು ಹುಡುಕುವ ಜವಾಬ್ದಾರಿ ನನ್ನ ಮತ್ತು ಕೆಲಸದವನಾದ ಕೃಷ್ಣನ ಹೆಗಲ ಮೇಲಿರುತ್ತಿತ್ತು.
ಅಜ್ಜಿಯ ಮನೆಯಲ್ಲಿದ್ದ ಗೋವಿನ ಹಿಂಡಿನ ಮೇಲಿದ್ದ ಆಕರ್ಷಣೆ ನನ್ನನ್ನು ರಜೆ ಶುರುವಾದ ತಕ್ಷಣ ಅಜ್ಜಿನ ಮನೆಯ ಕಡೆಗೆ ಸೆಳೆಯುತ್ತಿತ್ತು. ವಾಯುಪಡೆಯಿಂದ ನಿವೃತ್ತಿ ಪಡೆದು ಪೂರ್ಣಾವಧಿ ಕೃಷಿಕನಾಗಿದ್ದ ಅಪ್ಪ ದನ ಸಾಕಲು ಒಪ್ಪದಿದ್ದದ್ದು ಕೂಡ ನನ್ನಲ್ಲಿ ದೊಡ್ಡ ನಿರಾಸೆಯನ್ನು ಮೂಡಿಸಿತ್ತು. ಕನಸ್ಸಿನಲ್ಲಿಯೂ ಹಸುಗಳ ಹೆಸರುಗಳನ್ನು ಕನವರಿಸುತ್ತಿದ್ದ ನನಗೆ ಅಪ್ಪ ದನ ಸಾಕಲು ನಿರಾಕರಿಸಿದ್ದು ನುಂಗಲಾರದ ತುತ್ತಾಗಿತ್ತು. ಸುಳ್ಯದ ನನ್ನ ಶಾಲಾ ದಿನಗಳಲ್ಲಿ ನನ್ನ ತಾಯಿಯ ಚಿಕ್ಕಮ್ಮನ ಮನೆಯಾದ ಕುರುಂಜಿ ವಿಶ್ವನಾಥ ಗೌಡರ ಮನೆಯಲ್ಲಿಯೂ ಸಾಕಷ್ಟು ದನಗಳಿದ್ದವು. ಅಲ್ಲಿ ತುಂಬು ಕುಟುಂಬದವರೆಲ್ಲರೂ ಕುಳಿತು ಭಾನುವಾರ ಟಿವಿಯಲ್ಲಿ ರಾಮಾಯಣ ನೋಡುವಾಗ ನಾನು ಮಾತ್ರ ಹಟ್ಟಿಗೆ ನನ್ನನ್ನು ಈಗಲೇ ಕರೆದುಕೊಂಡು ಹೋಗಿ ಎಂದು ರಚ್ಚೆ ಹಿಡಿದು ಅಳುತ್ತಿದ್ದೆ. ನನ್ನ ಅಮ್ಮನ ಚಿಕ್ಕಮ್ಮಳಾದ ಕುರುಂಜಿ ಸಾವಿತ್ರಿಯವರು ನನ್ನ ಈ ದನದ ಮೇಲಿನ ವ್ಯಾಮೋಹವನ್ನು ಗಮನಿಸಿ ನನಗೆ ಹೆಣ್ಣು ಕರುವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಸಿಂಧು ಎಂದು ನಾನು ನಾಮಕರಣ ಮಾಡಿದ ಆ ಮುದ್ದಾದ ಕರು ಸ್ವಲ್ಪ ಸಮಯ ನನ್ನ ಅಪ್ಪನ ಬಳಿಯಿದ್ದು ನಂತರ ಕೆದಂಬಾಡಿಯ ಅಜ್ಜಿಯ ಮನೆಯ ಹಟ್ಟಿ ಸೇರಿಕೊಂಡಿತು.
ಈ ಅಜ್ಜಿಯ ಮನೆಯ ದನಗಳ ಕರುಗಳು ದೊಡ್ಡವರಾಗುವಂತೆ ನಾವು ಕೂಡ ಅವರ ಜೊತೆಗೆ ದೊಡ್ಡವರಾಗಿಬಿಟ್ಟೆವು! ನಾನು ಪಿಯುಸಿಗೆ ಬರುವಷ್ಟರಲ್ಲಿ ಸಿಂಧು ಹಸು ಬಿಟ್ಟರೆ ಇತರ ಹಸುಗಳು ಕಾಲವಾಗಿದ್ದರೆ ಕೆಂಪ ಎಂಬ ಎತ್ತು ಬರೆಯಿಂದ ಬಿದ್ದು ಅಸುನೀಗಿತ್ತು. ಮಾವನಿಗೆ ತಡವಾಗಿ ಮಕ್ಕಳಾದ ಕಾರಣ ಪುಟಾಣಿಗಳಾಗಿದ್ದ ಅವರನ್ನು ರಂಜಿಸಲು ಹೊಸಾ ಬ್ಯಾಚಿನ ಹೊಸಾ ಹೆಸರುಗಳ ಅಪರಿಚಿತ ಹಸುಗಳು ಹಟ್ಟಿ ತುಂಬಾ ಇದ್ದೆವು. ನಾನು ಹಾಲು ಕುಡಿದು ಬೆಳೆದ ಹಸುಗಳು ಅಜ್ಜಿ ಮನೆಯ ಹಟ್ಟಿಯಲ್ಲಿ ಇಲ್ಲದ್ದು ನನ್ನ ಬಾಲ್ಯವು ಕೊನೆಯಾಗಿದ್ದನ್ನು ನನಗೆ ಮನಸ್ಸಿಗೆ ನಾಟುವಂತೆ ಸೂಚಿಸುತ್ತಿತ್ತು. ನಾನು ಆಡಿ ಬೆಳೆದ ಪೇರಳೆ ಮತ್ತು ಚಿಕ್ಕು ಮರಗಳತ್ತ ನಾನು ಚಿಗುರು ಮೀಸೆ ತಿರುವುತ್ತಾ ಕಣ್ಣು ಹಾಯಿಸಿದಾಗ ಅವೆಲ್ಲವೂ ಚಿಕ್ಕದಾಗಿ ಕಂಡವು. ಆ ಸಂಜೆಯ ಗೋಧೂಳಿ ಸಮಯದಲ್ಲಿ ಹಟ್ಟಿಗೆ ಮರಳಿದ ದನಗಳ ಲೆಕ್ಕವನ್ನು ಮಾವನ ಮಕ್ಕಳು ಒಪ್ಪಿಸಿದರು! Life had come a full circle.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ಒಂದು ಬೊಗಸೆ ಏಲಕ್ಕಿ
ನಾನು ಸೇನೆ ಸೇರಿದ ನಂತರ ಅಜ್ಜಿ ಮನೆಗೆ ವರ್ಷಕ್ಕೆ ಒಂದೆರಡು ಬಾರಿ ರಜೆಯಲ್ಲಿ ಬಂದಾಗ ಹೋಗಿ ಮುಖ ತೋರಿಸುತ್ತಿದ್ದೆ. ಕಾಲಘಟ್ಟದ ಸ್ಥಿತ್ಯಂತರಗಳು ಹೆಚ್ಚಿನ ಮಲೆನಾಡಿನ ರೈತಾಪಿ ಕುಟುಂಬಗಳನ್ನು ಪ್ರಭಾವಿಸಿದ್ದಂತೆ ನನ್ನ ಅಜ್ಜಿಯ ಮನೆಯೂ ಬದಲಾಗಿತ್ತು. ಅಜ್ಜಿ ಮನೆಯ ದನಗಳ ಸಂಖ್ಯೆಯು ಕ್ಷೀಣಿಸುತ್ತಿರುವುದರ ಜೊತೆಗೆ ಅಜ್ಜಿಯ ಮನೆಗೆ ಹೋಗುವ ದಾರಿಯಲ್ಲಿ ಬರುವ ಗದ್ದೆಗಳು ಬೇಸಾಯವಿಲ್ಲದೆ ಹಡ್ಲು ಬಿದ್ದಿರುವುದನ್ನು ನಾನು ಸಣ್ಣ ನಿಟ್ಟುಸಿರಿನೊಂದಿಗೆ ನೋಡುತ್ತಿದ್ದೆ!
ನಂತರದ ವರ್ಷಗಳಲ್ಲಿ ಗೋವಿನ ರಕ್ಷಕರು ಮತ್ತು ಭಕ್ಷಕರ ನಡುವಿನ ಗುದ್ದಾಟ ಹೆಚ್ಚಾದಂತೆ ಮಲೆನಾಡಿನ ಹಟ್ಟಿಗಳಲ್ಲಿ ಗೋವುಗಳು ಕಡಿಮೆಯಾಗಿದ್ದರೂ ಗೋವುಗಳ ವಿಚಾರಗಳು ಮಾತ್ರ ಪತ್ರಿಕೆಗಳ ಮುಖಪುಟಗಳಲ್ಲಿ ಇರುತ್ತಿದ್ದವು. ನಾನು ಗೋವನ್ನು ಪೂಜಿಸುವುದಿಲ್ಲ, ಗೋಮೂತ್ರ ಕುಡಿಯುವುದಿಲ್ಲ ಆದರೆ ಗೋವುಗಳನ್ನು ಬಹಳ ಪ್ರೀತಿಸುತ್ತೇನೆ ಎಂಬುದು ನನಗೆ ಕಾಲೇಜಿನ ದಿನಗಳಲ್ಲೆ ಅರಿವಿಗೆ ಬಂತು. ಬಾಡಿ ಬೆಳೆಸಲು ಒಂದಷ್ಟು ಹುಡುಗರು ಬೀಫ್ ತಿನ್ನಲು ಆರಂಭಿಸಿದಾಗ ನನ್ನ ಕಣ್ಣ ಮುಂದೆ ಲಕ್ಷ್ಮಿ, ಕೊಕ್ಕರ್ಚಿ, ಸಿಂಧು ಮತ್ತು ಕಲ್ಯಾಣಿಯ ಮುಖಗಳು ಬಂದ ಕಾರಣದಿಂದ ನಾನು ಬಾಡಿ ಬೆಳೆಸುವುದನ್ನು ಮರೆತು ದಾಡಿ ಬೆಳೆಸುವುದರತ್ತ ಗಮನಹರಿಸಿದೆ.
ಅಮ್ಮ ನಿವೃತ್ತಿಯಾದ ನಂತರ ಅಪ್ಪ ಮತ್ತು ಅಮ್ಮನನ್ನು ಒಟ್ಟಿಗೆ ಕೂರಿಸಿ ನಮ್ಮ ತೋಟದ ಮನೆಯಲ್ಲಿ ಒಂದು ಹಟ್ಟಿಯನ್ನು ಕಟ್ಟಿ ದನವೊಂದನ್ನು ಸಾಕೋಣವೆಂಬ ಪ್ರಸ್ತಾಪವನ್ನು ಮುಂದಿಟ್ಟು ಸೋತೆ. ನಮ್ಮ ಕಾಯಂ ಕೆಲಸದವನಾದ ಜವನನಿಗೆ ಕ್ವಾಟರ್ ಎಣ್ಣೆಯ ಆಮಿಷವನ್ನು ನಾನು ಕೊಟ್ಟರೂ ಅವನು ದನ ಸಾಕಲು ಒಪ್ಪದ ಕಾರಣದಿಂದ ಈಗ ನಾನು ಇತರ ಕೃಷಿಕರ ಹಟ್ಟಿಗಳಲ್ಲಿ ಅವರ ಹಸುಗಳ ಕತ್ತು ಸವರಿ ಸಂತೃಪ್ತನಾಗುತ್ತೇನೆ.
ನನ್ನ ಎರಡುವರೆ ವರ್ಷದ ಮಗ ಆದಿತ್ಯಹೃದಯ ಈಗೀಗ ಅವಕಾಶ ಸಿಕ್ಕಿದಾಗಲೆಲ್ಲ ಅವನ ಅಜ್ಜಿಮನೆಯಾದ ಕರಡಿಗೋಡು ಗ್ರಾಮದ ಕುಕ್ಕನೂರಿಗೆ ಹೋಗಲು ರಚ್ಚೆ ಹಿಡಿಯುತ್ತಾನೆ. ಅಲ್ಲಿನ ಮೇಘ, ಸುಮ ಮತ್ತು ಗೌರಿಯನ್ನು ವಿಪರೀತ ಹಚ್ಚಿಕೊಂಡಿದ್ದಾನೆ. ನನ್ನ ಬಳಿ ಬಂದು “ಅಪ್ಪ ನೀನು ಅಂಬೆಯಾಗು” ಎಂದು ಹೇಳಿ ಬೆನ್ನ ಮೇಲೆ ಹತ್ತುತ್ತಾನೆ. ಪುಣ್ಯಕೋಟಿ ಅಂಬೆಯನ್ನು “ಮಾಮ್ ಮಾಡಲು” ಹೋದ ಹುಲಿರಾಯನ ಬೊಂಬೆ ಕಣ್ಣಿಗೆ ಬಿದ್ದರೆ ಅದರ ಬಾಲ ಹಿಡಿದು ನೆಲಕ್ಕೆ ಹೊಡೆಯುತ್ತಾನೆ. ಕಳೆದ ವಾರ ಗೌರಿಯು ಕರು ಹಾಕಿದ ವಿಷಯ ತಿಳಿದು ಮತ್ತೆ ಅಜ್ಜಿ ಮನೆಗೆ ಓಡಿದ್ದಾನೆ. ಅವನು ಮೇಘ..ಸುಮ..ಗೌರಿಯೆಂದು ಈಗೀಗ ಸ್ವಲ್ಪ ಜಾಸ್ತಿಯೆ ತೊದಲುತ್ತಾನೆ. ನನಗೆ ಮತ್ತೆ ನನ್ನ ಕಲ್ಯಾಣಿ, ಲಕ್ಷ್ಮೀ ಮತ್ತು ಸಿಂಧುವಿನ ನೆನಪುಗಳನ್ನು ತರಿಸುತ್ತಾನೆ. ನಾನು ಅವನಿಗಾಗಿ ಮಡಿಕೇರಿಯಲ್ಲಿ ಕಾಯುತ್ತಿದ್ದರೆ ಆದಿತ್ಯಹೃದಯ ಅಜ್ಜಿ ಮನೆಯಲ್ಲಿ ಸಡಗರದಿಂದ ದನ ಕಾಯುತ್ತಾನೆ!
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ನೆನಪುಗಳು ಮಾಸುವ ಮುನ್ನ