Site icon Vistara News

Prerane | ನಿಮ್ಮೊಳಗಿನ ಬೀಜ ಬೆಳೆದು ಮರವಾಗಬೇಕು ಎಂದಾದರೆ ಆ ಬೀಜ ನಾಶವಾಗಲೇಬೇಕು, ಒಳಗೆ ಅವಿತಿಟ್ಟರೆ ಬೆಳೆಯಲ್ಲ!

seed and plant prerane

ಸದ್ಗುರು ಜಗ್ಗಿ ವಾಸುದೇವ್‌
ಕೆಲ ಸಮಯದ ಹಿಂದೆ ಒಂದು ಸತ್ಸಂಗದಲ್ಲಿ ಯಾರೋ ಕೇಳಿದರು: ʻʻನಾನು ಅನೇಕ ಅಧ್ಯಾತ್ಮ ಗುರುಗಳನ್ನು ಕಂಡಿದ್ದೇನೆ. ನೀವು ನನ್ನನ್ನು ಸೆಳೆದ ಹಾಗೆ ಬೇರ‍್ಯಾರಿಂದಲೂ ಆಗಿಲ್ಲ. ನಿಮ್ಮಲ್ಲಿ ಅಂತಹುದು ಏನಿದೆ?ʼʼ

ಸದ್ಗುರು ಜಗ್ಗಿ ವಾಸುದೇವ್‌

ಅದಕ್ಕೆ ನಾನು ಕೊಟ್ಟ ಉತ್ತರ ಹೀಗಿತ್ತು..
ʻʻನಿಮ್ಮಲ್ಲಿ ಇಲ್ಲದೆ ಇರುವುದು ನನ್ನಲ್ಲೇನೂ ಇಲ್ಲ. ನಮಗೆಲ್ಲರಿಗೂ ಅಪರಿಮಿತ ಶಕ್ತಿ ಇರುವ ಒಂದು ಬೀಜವನ್ನು ನೀಡಲಾಗಿದೆ. ನೀವು ಬಹಳ ಜಾಗರೂಕ ಸ್ವಭಾವದವರು ಹಾಗೂ ಒಳ್ಳೆಯವರು. ಹಾಗಾಗಿ ಅದನ್ನು ಏನೂ ಆಗದಂತೆ ಜಾಗೃತೆಯಿಂದ ರಕ್ಷಣೆ ಮಾಡ್ತಾ ಇದ್ದೀರಿ. ಆದರೆ, ನಾನು ಬೀಜವನ್ನು ನಾಶಪಡಿಸಿ ಒಂದು ಮರ ಮಾಡಿದ್ದೇನೆ! ನೀವು ಬೀಜವನ್ನು ಮರ ಮಾಡಬೇಕಾದರೆ, ಬೀಜ ನಾಶವಾಗಬೇಕು. ಬೀಜವನ್ನು ಬೀಜವಾಗಿಯೇ ಉಳಿಸುವುದು ಮೂರ್ಖತನ. ಆದರೆ ದುರದೃಷ್ಟಕ್ಕೆ ಅದನ್ನೇ ನಮ್ಮ ಸಮಾಜದಲ್ಲಿ ಬುದ್ಧಿವಂತಿಕೆ ಎಂದು ಪರಿಗಣಿಸಲಾಗಿದೆ!

ನಿಮ್ಮನ್ನು ನೀವು ಧ್ವಂಸ ಮಾಡಿಕೊಳ್ಳಲು ಅವಕಾಶ ಮಾಡುವುದು, ವ್ಯಕ್ತಿಯ ಮಿತಿಗಳ ಸಾಧ್ಯತೆಗಳನ್ನು ನಾಶಪಡಿಸುವುದನ್ನು ಯಾರೂ ಬುದ್ಧಿವಂತಿಕೆ ಎಂದು ಹೇಳುವುದಿಲ್ಲ. ನೀವು ಎಷ್ಟು ಬುದ್ಧಿವಂತರಾಗಿದ್ದೀರಿ ಎಂದರೆ ನೀವು ಕೂಡಾ ಜೀವನಕ್ಕೆ ವಂಚನೆ ಮಾಡ್ತಾ ಇದ್ದೀರಿ.

ನಾವೆಲ್ಲರೂ ಒಂದೇ ರೀತಿಯ ಬೀಜ(ಸಾಧ್ಯತೆ)ದೊಂದಿದೆ ಬಂದಿದ್ದೇವೆ. ಪ್ರತಿಯೊಂದು ಬೀಜವು ಒಂದೇ ಸಾಧ್ಯತೆಯಿಂದ ಬಂದಿರುವುದಾದರೂ, ಬೀಜ ಮತ್ತು ಮರದ ಮಧ್ಯೆ ಒಂದು ಪ್ರಯಾಣ ಮಾಡಲೇಬೇಕು. ಒಂದು ಬೀಜವು ಮರವಾಗಬೇಕಾದರೆ, ಅದನ್ನು ಪೋಷಿಸಬೇಕು, ಅದಕ್ಕೆ ರಕ್ಷಣೆ ನೀಡಬೇಕು. ಮಾತ್ರವಲ್ಲ ಬಹಳಷ್ಟು ಕಳೆಗಳು ಬೆಳೆಯುತ್ತವೆ. ಈ ತಿಳೀಗೇಡಿ ಕಳೆಗಳು ಮಾನವ ಜನಾಂಗವನ್ನು ಲಕ್ಷಾಂತರ ವರ್ಷಗಳಿಂದ ಗೋಳಾಡಿಸುತ್ತಿವೆ. ಅವುಗಳ ಹೇಗೆ ನಿರ್ವಹಣೆ ಮಾಡುವುದು ಎಂದು ಇನ್ನೂ ಅರ್ಥ ಮಾಡಿಕೊಂಡಿಲ್ಲ ನಾವು.

ಸರಳವಾದ ವಿಷಯಗಳಾದ ಕ್ರೋಧ, ದ್ವೇಷ, ಮತ್ಸರ, ಭಯ, ಸಂಶಯ ಇವೆಲ್ಲ ತಿಳಿಗೇಡಿ ಕಳೆಗಳು. ಅವೆಲ್ಲ ಬಹುಕಾಲದಿಂದ ನಮ್ಮ ಜತೆಗಿವೆ. ಏಕೆಂದರೆ, ಅವುಗಳು ಯಾವುದೇ ಪೋಷಣೆ ಅಥವಾ ರಕ್ಷಣೆಯ ಅಗತ್ಯವಿಲ್ಲದೆಯೇ ಬೆಳೆಯುತ್ತವೆ!

ಆದರೆ ನಿಮಗೆ ಒಂದು ಪವಿತ್ರವಾದ ಬೀಜವು ಮೊಳಕೆಯೊಡೆದು, ಚಿಗುರಿ ಬೆಳೆಯಬೇಕೆಂಬ ಅಪೇಕ್ಷೆಯಿದ್ದರೆ ನೀವು ಕಳೆಗಳನ್ನು ನಿರ್ಮೂಲಗೊಳಿಸಬೇಕು. ಭೂಮಿಯನ್ನು ಉಳಬೇಕು, ಗೊಬ್ಬರವನ್ನು ಹಾಕಬೇಕು ಹಾಗೂ ಅದಕ್ಕೆ ಸಾಕಷ್ಟು ನೀರು ಮತ್ತು ಸೂರ್ಯನ ಪ್ರಕಾಶ ದೊರಕುವಂತೆ ನೋಡಿಕೊಳ್ಳಬೇಕು. ನೀವು ಸೂರ್ಯನ ಝಳಕ್ಕೆ ಹೆದರಿ ಅದರಿಂದ ದೂರವಾಗಿಸಿಕೊಂಡರೆ ನೀವು ಅದರ ಚೇತನವನ್ನು ಪೋಷಿಸುವ ಮಮತೆಯ ಬಿಸಿಯಿಂದಲೂ ದೂರಾಗುವಿರಿ ಅನ್ನೋದು ನೆನಪಿರಲಿ.

ಯಾವುದು ಜೀವದ ಮೂಲವೋ ಅದೇ ಜೀವವನ್ನು ಕೊನೆಗಾಣಿಸುತ್ತದೆ. ಯಾವುದು ಬೇಯಿಸುವುದೋ ಅದು ಸುಡಲೂಬಹುದು. ನೀವು ನುರಿತ ಅಡುಗೆಯವರಾದರೆ ಬೇಯಿಸುವಿರಿ. ಕೆಟ್ಟ ಅಡುಗೆಯವರಾದರೆ ಅಡುಗೆ ಪದಾರ್ಥವನ್ನು ಸೀಯಿಸುವಿರಿ. ನೀವು ಸೂರ್ಯ ಪ್ರಕಾಶದಿಂದ ದೂರವಿದ್ದು ನೆರಳಲ್ಲಿ ನಿಂತರೆ ನೀವು ಜೀವವನ್ನು ಪೋಷಿಸುವ ಪ್ರಕಾಶದಿಂದ ದೂರವಿದ್ದು ನೆರಳಲ್ಲಿ ನಿಂತರೆ ನೀವು ಜೀವವನ್ನು ಪೋಷಿಸುವ ಪ್ರಕಾಶದ ಉಷ್ಣದ ಬೆಳಕನ್ನು ಕಳೆದುಕೊಳ್ಳುವಿರಿ.

ನೋಡಿ, ಬ್ರೆಡ್ ತಯಾರಿಸುವುದು ಬಹಳ ಸರಳ. ಆದರೆ ಅದನ್ನು ತುಂಬ ಸೂಕ್ಷ್ಮವಾಗಿ ಮಾಡಬೇಕು. ಅದನ್ನು ತಿಳಿದ ವ್ಯಕ್ತಿಯು ಯಾವುದೇ ಕಷ್ಟವಿಲ್ಲದೆ ತಯಾರಿಸುತ್ತಾನೆ. ತಿಳಿಯದೇ ಇರುವವನು ಎಲ್ಲವನ್ನೂ ಕರಗಲಾಗಿಸಿ ಇದ್ದಿಲನ್ನಾಗಿ ಮಾಡುತ್ತಾನೆ. ನೀವು ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಆಧ್ಯಾತ್ಮಿಕ ಕ್ರಿಯೆಯನ್ನು ನಿರ್ವಹಿಸುವುದು ಬಹಳ ಸರಳ. ನೀವು ಆ ಸರಳ ಕ್ರಿಯೆಗೆ ನಿರೋಧಿಸಿ ಪ್ರಯಾಸಪಟ್ಟರೆ ಅದು ಬಹಳ ಕಷ್ಟವಾಗುವುದು.

ಮೂರು ʻಐʼಗಳ ಪ್ರಾಮುಖ್ಯತೆ
ಅಮೆರಿಕದ ಈಶ ಕೇಂದ್ರವನ್ನು “ಈಶ ಇನ್‌ಸ್ಟಿಟ್ಯೂಟ್ ಆಫ್ ಇನ್ನರ್ ಸೈನ್ಸ್” ಎನ್ನುತ್ತೇವೆ. ಅಂದರೆ ಮೂರು ‘ಐ’ ಗಳು. ಈ ಮೂರು ‘ಐ’ ಗಳ ಅರ್ಥವೇನು? ಒಂದು ಸೂಚನೆ(ಇನ್‌ಸ್ಟ್ರಕ್ಟನ್‌ ), ಮುಂದಿನದು ನಿಷ್ಠೆ(ಇಂಟೆಗ್ರಿಟಿ), ಮೂರನೆಯದು ಉದ್ದೇಶದ ತೀವ್ರತೆ(ಇಂಟೆನ್ಸಿಟಿ).

ಎಚ್ಚರಿಕೆಯಿಂದ ಸೂಚನೆಯನ್ನು ಗಮನಿಸಿ ಅದನ್ನು ಶ್ರದ್ಧಾಸಕ್ತಿಯಿಂದ ಪಾಲಿಸಬೇಕು. ಎರಡನೆಯದು ನಿಷ್ಠೆಯೆಂದರೆ ನಿಮಗೆ ನೀಡಿರುವ ಒಳಗೊಳ್ಳುವಿಕೆಯ ಆಧ್ಯಾತ್ಮಿಕ ಪ್ರಕ್ರಿಯೆ. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿದರೆ ನಿಷ್ಠೆಯ ಕೊರತೆ. ಪ್ರಸ್ತುತದಲ್ಲಿ, ಪ್ರತಿಯೊಬ್ಬರೂ ಬಿಡುತ್ತಿರುವ ಉಸಿರನ್ನು ನೀವು ತೆಗೆದುಕೊಳ್ಳುತ್ತಿರುವಿರಿ. ಆದರೆ ನೀವು, “ಇದು ನನಗೆ ಹಿಡಿಸುವುದಿಲ್ಲ, ಭೂಮಿಯ ಮೇಲೆ ಯಾವುದೇ ಜೀವಿಯು ಹೊರಹಾಕುತ್ತಿರುವ ಒಂದಿಷ್ಟು ಉಸಿರನ್ನು ನಾನು ಒಳ ತೆಗೆದುಕೊಳ್ಳಲಾರೆ” ಎಂದರೆ ನೀವು ಸಾಯುವಿರಿ. ಆದ್ದರಿಂದ ಉಳಿವಿಗಾಗಿ ನೀವು ಒಳಗೊಳ್ಳುವಿಕೆಯ ಕ್ರಿಯೆಯನ್ನು ನಡೆಸುತ್ತಿರುವಿರಿ. ದೇಹದಲ್ಲಿ ಅಂತರ್ಗತರಾಗಿರುವಿರಿ, ಆದರೆ ಮನಸ್ಸಿನಿಂದ ನೀವು ಎಲ್ಲರಿಂದ ಪ್ರತ್ಯೇಕವಾಗಿರುವಿರಿ. ಇದೇ ನಿಷ್ಠೆಯ ಕೊರತೆ.

ಮೂರನೆಯದು ಉದ್ದೇಶದ ತೀವ್ರತೆ, ಇಡೀ ಪ್ರಕ್ರಿಯೆಯು ನಿಮ್ಮನ್ನು ದೊಡ್ಡವರನ್ನಾಗಿಸುವುದಕ್ಕಲ್ಲ, ಆದರೆ ನಿಮ್ಮನ್ನು ಶೂನ್ಯದಲ್ಲಿ ವಿಲೀನಗೊಳಿಸುವುದಾಗಿದೆ, ಏಕೆಂದರೆ, ನೀವು ಅರಸುತ್ತಿರುವುದು ಅಮಿತತೆಯನ್ನು, ಬೃಹತ್ವವನ್ನಲ್ಲ. ನೀವು ಹಿರಿದಾಗುವುದರಿಂದ ಅಮಿತತೆಯನ್ನು ಹೊಂದುವುದಿಲ್ಲ. ಬೃಹತ್ವ ಎನ್ನುವುದಕ್ಕೂ ಎಲ್ಲೆಯಿದೆ. ನೀವು ಶೂನ್ಯರಾದಾಗ ಮಾತ್ರ ನೀವು ಅಮಿತತೆಯನ್ನು ಪಡೆಯುವಿರಿ. ಆದ್ದರಿಂದ ನೀವು ಶ್ರೇಷ್ಠರಾಗಲು ಇದನ್ನು ಬಳಬೇಡಿ. ಇದನ್ನು ವಿಲೀನದ ಪ್ರಕ್ರಿಯೆಯಾಗಿ ಬಳಸಿಕೊಳ್ಳಿ.

ಈ ಮೂರು ಅಂಶಗಳಿಗೆ ನೀವು ಗಮನ ನೀಡಿದಾಗ, ಸಂಪೂರ್ಣ ಪ್ರಕ್ರಿಯೆಯು ನಿಮ್ಮನ್ನು ಎಲ್ಲವನ್ನೂ ಒಳಗೊಂಡಿರುವ ಸ್ಥಿತಿಗೆ ಕೊಂಡೊಯ್ಯುತ್ತದೆ. ಇದು ನಿಮಗಾಗಿ ನನ್ನ ಭಾವನೆ ಅಥವಾ ನನ್ನ ಅಪೇಕ್ಷೆಯಲ್ಲ. ಆದರೆ ಇದು ಸೃಷ್ಟಿಕರ್ತನ ಸಹಜ ಸ್ವಭಾವವೇ ಆಗಿದೆ.
ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

Exit mobile version