Site icon Vistara News

Prerane Column : ನೀವು ಆಧುನಿಕ ಸೌಲಭ್ಯಗಳ ದೂರುದಾರ ಆಗಬೇಡಿ, ಹೊಸ ತಂತ್ರಜ್ಞಾನಗಳ ಬಳಕೆದಾರ ಆಗಿಬಿಡಿ!

Man Machine

#image_title

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್

ಸದ್ಗುರು ಜಗ್ಗಿ ವಾಸುದೇವ್

ಪ್ರತಿ ತಲೆಮಾರಿನಲ್ಲೂ, ಯಾವುದರ ಬಗ್ಗೆಯಾದರೂ ಯಾವಾಗಲೂ ದೂರುತ್ತಿರುವ ಜನರ ಒಂದು ಗುಂಪು ಇರುತ್ತದೆ. ಹಾಗೆಯೇ ತಮ್ಮ ಕಾಲದ ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಜನರು ಕೂಡ ಖಂಡಿತವಾಗಿಯೂ ಇರುತ್ತಾರೆ.‌

ನಮ್ಮ ತಲೆಮಾರಿಗೆ ಹೆಚ್ಚು ಅನುಕೂಲತೆಗಳು, ಸೌಕರ್ಯಗಳಿವೆ; ಮತ್ತೆ ನಮಗೆ ಏನು ಬೇಕೋ ಅದನ್ನು ತಿಳಿದುಕೊಳ್ಳುವ ಸಾಮರ್ಥ್ಯವೂ ಇದೆ. ಅಧಿಕವಾದ ಮಾಹಿತಿಯ ಬಗ್ಗೆ ದೂರುತ್ತಿರುವ ಜನರು, ಸಾವಿರಾರು ವರ್ಷಗಳ ಹಿಂದೆ ಏನಾಗುತ್ತಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬೇಕು – ಒಂದು ನೂರು ಕಿಲೋಮಿಟರ್ ದೂರದಲ್ಲೂ ಏನು ನಡೆಯುತ್ತಿದೆ ಎಂದು ನಮಗೆ ತಿಳಿಯುತ್ತಿರಲಿಲ್ಲ, ಅಲ್ಲವೇ? ಒಂದು ದೊಡ್ಡ ಅನಾಹುತವೋ ಅಥವಾ ಏನೋ ಒಂದು ಅದ್ಭುತವೋ ನೂರು ಕಿಲೋಮಿಟರ್ ದೂರದಲ್ಲಿ ನಡೆದರೆ, ಆ ಸುದ್ದಿ ನಿಮಗೆ ಸಿಗುವುದಕ್ಕೆ ಒಂದೋ ಎರಡೋ ತಿಂಗಳು ಬೇಕಾಗುತ್ತಿತ್ತು.

ಆದರೆ ಇಂದು ಪ್ರಪಂಚದಲ್ಲಿ ಎಲ್ಲಾದರೂ, ಏನೇ ನಡೆದರೂ ಅದು ನಿಮಗೆ ತಕ್ಷಣ ಗೊತ್ತಾಗುತ್ತದೆ. ನಮ್ಮ ತಲೆಮಾರಿಗೆ ದೊರಕಿರುವ ಅತ್ಯುಪಯಕ್ತವಾದ ಸವಲತ್ತು ಇದು. ತಂತ್ರಜ್ಞಾನದಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಸಶಕ್ತರಾಗಿದ್ದೇವೆ. ಹಿಂದೆಂದೂ, ಇನ್ಯಾವ ಪೀಳಿಗೆಗೂ, ನಮಗಿರುವ ಸಾಮರ್ಥ್ಯ ಇರಲಿಲ್ಲ. ವ್ಯತ್ಯಾಸ ಇರುವುದು ಕೇವಲ ತಾಂತ್ರಿಕ ಸವಲತ್ತಿನದು ಅಷ್ಟೆ.

ಈಗ ಕೆಲವರು ತಮ್ಮ ಬದುಕನ್ನು ಸುಲಭ ಮತ್ತು ಆರಾಮವಾಗಿರುವ ತಂತ್ರಜ್ಞಾನವನ್ನು ದೂರುತ್ತಿದ್ದಾರೆ. ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು ಎಂದೆಲ್ಲ ಹೇಳುವ ಈ ಮಂದಿ ತಾವು ನಡೆಸಬೇಕಾಗಿರುವ ಜೀವನಕ್ಕೆ ತಮ್ಮನ್ನು ತಾವು ಸರಿಯಾಗಿ ಸಜ್ಜುಗೊಳಿಸಿಕೊಂಡಿಲ್ಲ ಎಂದೇ ಅರ್ಥ. ಒಂದು ಸಾವಿರ ವರ್ಷದ ಹಿಂದೆ ಬದುಕು ಹೇಗಿತ್ತು ಅನ್ನುವುದನ್ನು ಊಹಿಸಿಕೊಳ್ಳಿ. ಬೆಳಿಗ್ಗೆ ಎದ್ದ ಮೇಲೆ, ಉಪಯೋಗಿಸೋದಿಕ್ಕೆ ನೀರು ಬೇಕೆಂದರೆ, ನದಿಯವರೆಗೂ ನಡೆದುಕೊಂಡು ಹೋಗಿ, ಎರಡು ಬಕೆಟ್ ತುಂಬಾ ನೀರನ್ನು ತರಬೇಕಿತ್ತು. ನನ್ನನ್ನು ನಂಬಿ, ಈಗಿನ ಯುವಕರಲ್ಲಿ ಹೆಚ್ಚಿನವರು, ಎರಡು ಬಕೆಟ್ ನೀರನ್ನು ಒಂದು ಮೈಲಿ ಎತ್ತಿಕೊಂಡು ಹೋಗುವಷ್ಟು ಗಟ್ಟಿಮುಟ್ಟಾಗಿಲ್ಲ. ದೈಹಿಕವಾಗಿ ಅಂತಹ ಕೆಲಸ ಮಾಡುವ ಸಾಮರ್ಥ್ಯವೇ ಅವರಲ್ಲಿಲ್ಲ.

ಒಂದುವೇಳೆ, ಸಾವಿರಾರು ವರ್ಷಗಳ ಹಿಂದೆ, ತಂತ್ರಜ್ಞಾನವಿಲ್ಲದೇ ಇದ್ದಾಗ ನೀವು ಇದ್ದಿದ್ದರೆ, ಆ ನೀರಿನ್ ಬಕೆಟ್‌ ಅನ್ನು ತುಟಿ-ಪಿಟಿಕ್ ಎನ್ನದೆ ಎತ್ತಿ ತೆಗೆದುಕೊಂಡು ಹೋಗುತ್ತಿದ್ದರೆ.. ಇಲ್ಲ, ನೀವು ದೈಹಿಕವಾಗಿ ಸಮರ್ಥರಾಗಿಲ್ಲದ ಕಾರಣ, ಅದಕ್ಕೂ ಗೊಣಗಾಡುತ್ತಿದ್ದಿರಿ. ಅದೇ ರೀತಿ, ಈಗಿನ ಕಾಲದ ಸಂಗತಿಗಳನ್ನು ನಿಭಾಯಿಸುವುದಕ್ಕೆ, ನಿಮ್ಮನ್ನು ನೀವು ಮಾನಸಿಕವಾಗಿ ಸಮರ್ಥರನ್ನಾಗಿಸಿಕೊಂಡಿಲ್ಲ ಎಂದರೆ, ಖಂಡಿತವಾಗಿಯೂ ಗೊಣಗಾಡುತ್ತೀರಿ.

ಆದ್ದರಿಂದ, ಯುವಜನರು ಏನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ. ನಿಮ್ಮ ಬದುಕಿನ ಈ ಮೊದಲ ಭಾಗದಲ್ಲಿ, ಅತ್ಯಂತ ಮುಖ್ಯವಾದ ವಿಷಯ – ನಿಮ್ಮ ಮಹತ್ವಾಕಾಂಕ್ಷೆಗಳಲ್ಲ, ನೀವು ಈಡೇರಿಸಬೇಕಾದ ಆಸೆಗಳಲ್ಲ, ನೀವು ಹಂಬಲಿಸೋ ಜೀವನಶೈಲಿಗಳಲ್ಲ. ನೀವು ಗಮನ ಹರಿಸಬೇಕಾದ ಒಂದೇ ಒಂದು ವಿಷಯವೆಂದರೆ -’ಈ ಜೀವನವನ್ನು ಹೇಗೆ ಹೆಚ್ಚಿನ ಮಟ್ಟದ ಸಾಧ್ಯತೆಗೆ ಬೆಳೆಸುವುದು’ ಎಂದು. ನೀವು ಏನಾಗಿದ್ದೀರೋ ಅದರ ಆಂತರಿಕ ಬೆಳವಣಿಗೆಗೆ ನೀವು ಸಾಕಷ್ಟು ಗಮನ ಹರಿಸಿದರೆ, ಈಗಿನ ಪರಿಸ್ಥಿಯನ್ನು ನಿಭಾಯಿಸುವುದು ನಿರಾಯಾಸವಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ, ಈ ಪೀಳಿಗೆಯಲ್ಲಿ ನಿಮಗೆ ನೀಡಲಾಗಿರುವ ಈ ಅಮೋಘವಾದ ಕೊಡುಗೆಗಳನ್ನು ನೀವು ದೂರುವುದಿಲ್ಲ.

ಹಿಂದೆಂದೂ, ಭಾರತದಿಂದ ಅಮೇರಿಕಾಗೆ ಹದಿನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಹಿಂದೆಂದೂ, ಸುಮ್ಮನೆ ಫೋನ್ ಎತ್ತಿ ಪ್ರಪಂಚದ ಯಾವುದೇ ಭಾಗದಲ್ಲಿರುವವರ ಜೊತೆ ಮಾತಾನಾಡುವುದು ಸಾಧ್ಯವಿರಲಿಲ್ಲ. ಹಿಂದೆಂದೂ, ಪ್ರಪಂಚದಾದ್ಯಂತ ನಡೆಯುತ್ತಿರುವ ಸಂಗತಿಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ, ಬಾಹ್ಯಾಕಾಶದಲ್ಲಿ ಏನಾಗುತ್ತಿದೆ ಎಂದು ಕೂಡಾ ನೀವು ನೋಡಬಹುದು.

ನಮಗೆ ದೊರಕಿರುವ ಈ ಅಪೂರ್ವವಾದ ಕೊಡುಗೆಗಳ ಬಗ್ಗೆ ದೂರುವುದನ್ನು ಬಿಟ್ಟು, ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ. ನಿಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ಎಂದರೆ, ನಿಮ್ಮ ಆಂತರಿಕ ಯೋಗಕ್ಷೇಮಕ್ಕಾಗಿ ತಂತ್ರಜ್ಞಾನಗಳಿವೆ. ನಾವು ಇನ್ನರ್ ಎಂಜಿನಿಯರಿಂಗ್‌ನಲ್ಲಿ ಹೇಳಿಕೊಡುವುದು ಇದನ್ನೇ.. ನಿಮ್ಮನ್ನು ನೀವು ಹೇಗೆ ಎಂಜಿನಿಯರಿಂಗ್ ಮಾಡಿಕೊಳ್ಳಬೇಕು ಅಥವಾ ನಿಭಾಯಿಸಿಕೊಳ್ಳಬೇಕು ಎಂದರೆ ನೀವು ಜೀವನದಲ್ಲಿ ಸಮರ್ಥರಾಗಿರಬೇಕು.

ಜೀವನದಲ್ಲಿ ನಿಮ್ಮನ್ನು ನೀವು ಸಮರ್ಥರನ್ನಾಗಿಸಿಕೊಳ್ಳುವ ಬದಲು, ನಿಮ್ಮ ಸುತ್ತಲಿರುವ ಜಗತ್ತು, ನಿಮ್ಮ ಅಸಮರ್ಥತೆಗೆ ತಕ್ಕಂತೆ ಬದಲಾಗುವಂತೆ ಕೇಳುತ್ತಿದ್ದೀರಿ. ದಯವಿಟ್ಟು ಈ ರೀತಿ ಮಾಡಬೇಡಿ. ಭೂಮಿ, ಕೆಲವು ಸಾವಿರ ವರ್ಷಗಳ ಹಿಂದಿಗಿಂತ ಈಗ ವೇಗವಾಗೇನೂ ಚಲಿಸುತ್ತಿಲ್ಲ. ಭೂಮಿ ಮೊದಲಿನಷ್ಟೇ ವೇಗದಲ್ಲಿ ತಿರುಗುತ್ತಿದೆ. ಆದರೆ ವಿಷಯ ಏನೆಂದರೆ, ನಮ್ಮ ಬಳಿಯಿರುವ ತಾಂತ್ರಿಕ ಪರಿಣಿತಿಯಿಂದಾಗಿ, ನಮಗೆ ನಮ್ಮ ನಡುವಿನ ಅಂತರ ಕಡಿಮೆಯಾಗುತ್ತಿರುವ ರೀತಿ ಎನ್ನಿಸುತ್ತಿದೆ.., ಅಷ್ಟೆ. ಮನುಷ್ಯರಿಗೆ ಸಿಕ್ಕಿರುವ ಅತ್ಯದ್ಭುತ ವಿಷಯಗಳಿವು – ತಾಂತ್ರಿಕವಾಗಿ ನಾವೆಷ್ಟು ಸಶಕ್ತರಾಗಿದ್ದೀವಿ ಎಂದರೆ, ನಮ್ಮ ಸಹಜ ದೃಷ್ಟಿಯನ್ನು ಮೀರಿ ನಾವು ನೋಡಬಹುದು. ನಮಗೆ ಸಹಜವಾಗಿ ಕೇಳಿಸುವುದನ್ನು ಮೀರಿ ಕೇಳಬಹುದು. ನಮ್ಮ ಸಹಜ ಅನುಭೂತಿಗೂ ಮೀರಿ, ನಾವು ಅನುಭವಿಸಬಹುದು. ನಿಮ್ಮನ್ನು ನೀವು ಅಭಿವೃದ್ಧಿಗೊಳಿಸಿಕೊಳ್ಳಬೇಕಷ್ಟೆ..!

ಈ ಜೀವವನ್ನು ವರ್ಧಿಸಿಕೊಳ್ಳದೇ, ನೀವು ನಿಮ್ಮ ಚಟುವಟಿಕೆಯನ್ನು ಹೆಚ್ಚು ಮಾಡಿದರೆ, ಸಹಜವಾಗಿ, ಆ ಚಟುವಟಿಕೆ ನಿಮಗೆ ಕಷ್ಟ ಕೊಡುತ್ತದೆ. ಇದು ಹೇಗೆಂದರೆ, ಒಂದು ಅತ್ಯಂತ ಕೆಟ್ಟದಾಗಿ ಓಡುವ ಹಳೇ ಕಾರನ್ನು ’ಫ಼ಾರ್ಮುಲಾ 1 ರೇಸ್’ನಲ್ಲಿ ಓಡಿಸಿದ ಹಾಗೆ. ಅದು ಚೆಲ್ಲಾಪಿಲ್ಲಿಯಾಗುತ್ತದೆ ಅಷ್ಟೆ. ಅದೇ ಈಗ, ಜನರಿಗೆ ಆಗುತ್ತಾ ಇರುವುದು.

ಸಮಯ ಬಂದಿದೆ. ನಮ್ಮ ಮಕ್ಕಳಿಗೆ ಕೇವಲ ಹೊಟ್ಟೆಪಾಡು, ಒಂದು ಕೆಲಸಕ್ಕಾಗಿ ತಯಾರಿ ಮಾಡಿಕೊಳ್ಳುವಂತಹ ಶಿಕ್ಷಣ ನೀಡುವ ಬದಲು ಮಕ್ಕಳಿಗೆ ಯಾವ ರೀತಿ ಶಿಕ್ಷಣ ಒದಗಿಸಬೇಕು ಎಂದರೆ, ಮೊದಲನೆಯದಾಗಿ ಅವರು ತಮ್ಮನ್ನು ತಾವು ವರ್ಧಿಸಿಕೊಳ್ಳಬೇಕು. ಸ್ವಯಂ ಪರಿವರ್ತನೆಯ ಸಾಧನಗಳು, ಈ ಯುಗಕ್ಕೆ ಬಹಳ ಮುಖ್ಯವಾದ ಅವಶ್ಯಕತೆಗಳಾಗಿವೆ. ಏಕೆಂದರೆ, ಈಗ ಹೊರಗಿನ ಪರಿಸ್ಥಿತಿಗಳನ್ನು ಹೆಚ್ಚಾಗಿ ಯಂತ್ರಗಳೇ ನಿಭಾಯಿಸುತ್ತಿವೆ. ನೀವು ತಯಾರಿಸಿ ಮ್ಯಾನೇಜ್ ಮಾಡುವ ಯಂತ್ರಗಳಿಗಿಂತ ನೀವು ಹೆಚ್ಚು ಜಾಣರಾಗಿರುವುದು ಬಹಳ ಮುಖ್ಯ, ಅಲ್ಲವೇ..?

(ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org)

ಇದನ್ನೂ ಓದಿ : Prerane : ಯಶಸ್ಸಿಗಾಗಿ ನಿರಂತರ ಪ್ರಯತ್ನ; ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ

Exit mobile version