Site icon Vistara News

Prerane : ಗೆಲುವಿಗೆ ಸೂತ್ರಗಳಿವೆಯೇ? ಸದ್ಗುರು ಹೀಗೆನ್ನುತ್ತಾರೆ!

sadhguru jaggi vasudev Prerane

ಸದ್ಗುರು ಜಗ್ಗಿ ವಾಸುದೇವ್‌
ಅಂಗಡಿ, ಬೀದಿ, ಬಸ್ ನಿಲ್ದಾಣ, ಕಾಲೇಜು, ದೇವಾಲಯ ಹೀಗೆ ಎಲ್ಲಿ ಬೇಕಾದರೂ ಕೆಲವು ನಿಮಿಷಗಳು ನಿಂತುಕೊಂಡು, ಕಣ್ಣಿಗೆ ಕಾಣಿಸುವವರನ್ನು ಗಮನಿಸಿ. ಎಷ್ಟು ಮುಖಗಳು ಸಂತೋಷವಾಗಿರುತ್ತವೆ? ನೂರು ಮುಖಗಳನ್ನು ನೋಡಿದರೆ, ಅವುಗಳಲ್ಲಿ ನಾಲ್ಕೋ, ಐದೋ ಮುಖಗಳು ಮಾತ್ರ ನಗುತ್ತಿರುವುದು ಕಂಡುಬರುತ್ತವೆ.

ಅದೂ ಇಪ್ಪತ್ತೈದು ವಯಸ್ಸಿನ ಒಳಗಿರುವ ಮುಖಗಳು ಮಾತ್ರ!

ಮೂವತ್ತು ವಯಸ್ಸಾಯಿತೆಂದರೆ ಎಲ್ಲವನ್ನೂ ಕಳೆದುಕೊಂಡವರಂತೆ ಕಂಡುಬರುತ್ತಾರೆ. ದೀನವಾಗಿ ನೋಡುತ್ತಾ, ಶವಾಗಾರದಿಂದ ಹಿಂತಿರುಗುತ್ತಿರುವಂತೆ ಗಂಭೀರವಾಗಿರುವ ಮುಖದೊಂದಿಗೆ, ದಯನೀಯವಾಗಿರುತ್ತಾರೆ. ಹೊರಗಡೆ ಏಕೆ ಹೋಗಬೇಕು? ನಿಮ್ಮನ್ನೇ ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮ್ಮ ಐದನೆಯ ವಯಸ್ಸಿನಲ್ಲಿ ಒಂದು ಬಣ್ಣದ ಚಿಟ್ಟೆಯನ್ನು ಅಟ್ಟಿಸಿಕೊಂಡು ಓಡಿದಿರಿ. ಆಗ ನಿಮ್ಮ ಮುಖದಲ್ಲಿದ್ದ ಆನಂದ ಮತ್ತು ಉತ್ಸಾಹ ಈಗ ಇದೆಯೆ?

ಐದನೆಯ ವಯಸ್ಸಿನಲ್ಲಿ ಬಣ್ಣದ ಚಿಟ್ಟೆಯನ್ನು ಮುಟ್ಟಿದಾಗ, ಅದರ ಬಣ್ಣಗಳು ನಿಮ್ಮ ಕೈಯಲ್ಲಿ ಅಂಟಿಕೊಂಡು ಫಳಫಳವೆಂದು ಹೊಳೆದಾಗ ಅದಕ್ಕಿಂತ ಹೆಚ್ಚಿನದು ಪ್ರಪಂಚದಲ್ಲಿ ನಿಮಗೆ ಬೇರಾವುದೂ ತಿಳಿಯಲಿಲ್ಲ. ಆಗ ನೀವು ಅದೆಷ್ಟು ಹಿರಿಹಿರಿ ಹಿಗ್ಗಿ ಆನಂದವಾಗಿದ್ದಿರಿ? ಐದನೆಯ ವಯಸ್ಸಿನಲ್ಲಿ ನಿಮ್ಮಲ್ಲಿದ್ದುದು ಏನು? ಈಗ ಇರುವುದು ಏನು? ಅಗಾಧವಾದ ಓದು, ಕಂಪ್ಯೂಟರ್, ಮನೆ, ಕಾರು, ಒಂದನೆಯ ತಾರೀಖಿಗೆ ’ಠಣ್’ ಎಂದು ಬ್ಯಾಂಕ್ ಅಕೌಂಟಿಗೆ ಬಂದು ಬೀಳುವ ಸಂಬಳ. ನಿದ್ದೆಗೆ ಸಿದ್ಧವಾದಾಗಲೂ ಜತೆಯಲ್ಲಿಯೇ ಕೊಂಡೊಯ್ಯುವ ಸೆಲ್ ಫೋನ್, ಅದೆಷ್ಟನ್ನು ಕೂಡಿಸಿಕೊಂಡಿದ್ದೀರಿ? ಕೆಲವು ಶತಮಾನಗಳ ಹಿಂದೆ ಪ್ರಪಂಚವನ್ನೇ ಗೆದ್ದವೆಂದು ಹೇಳಿಕೊಂಡ ಮಹಾ ಚಕ್ರವರ್ತಿಗಳಿಗೂ ಇಷ್ಟೊಂದು ಸೌಲಭ್ಯಗಳಿರಲಿಲ್ಲ. ಹೀಗಿದ್ದರೂ ನಿಮ್ಮ ಸಂತೋಷ ಅದೇ ಪ್ರಮಾಣದಲ್ಲಿ ಬೆಳೆಯುತ್ತಿದೆಯೆ?

ಒಮ್ಮೆ ಕಂಠಪೂರ್ತಿ ಕುಡಿದಿದ್ದ ಶಂಕರನ್ ಪಿಳ್ಳೆ ಬಸ್‌ಸ್ಟಾಪಿಗೆ ಬಂದರು. ಅವರು ಹೋಗಬೇಕಾಗಿದ್ದ ಬಸ್ ಬಂತು. ಅದರಲ್ಲಿ ತುಂಬ ನೂಕುನುಗ್ಗಲಿತ್ತು. ಅದು ಹೇಗೋ ಕಷ್ಟ ಪಟ್ಟು ಬಸ್ಸಿಗೆ ಹತ್ತಿದರು. ಹತ್ತು ಹದಿನೈದು ಮುಂದಿಯ ಕಾಲುಗಳನ್ನು ತುಳಿದಾಡಿ, ನಾಲ್ಕೈದು ಮಂದಿಯ ಮುಖಗಳನ್ನು ಮೊಳಕೈಯಲ್ಲಿ ತಿವಿದು ದಾರಿ ಮಾಡಿಕೊಂಡು ಒಳಗೆ ನುಗ್ಗಿದರು.

ಒಬ್ಬ ವೃದ್ಧ ಮಹಿಳೆಯ ಪಕ್ಕದಲ್ಲಿ ಕುಳಿತಿದ್ದವರು, ಮೇಲೆ ಏಳುತ್ತಿರುವುದನ್ನು ನೋಡಿದ ಶಂಕರನ್ ಪಿಳ್ಳೆ, ಮತ್ತೆ ಕೆಲವರನ್ನು ಪಕ್ಕಕ್ಕೆ ತಳ್ಳಿ ಮುನ್ನುಗ್ಗಿದರು. ಕುಡುಕನ ಸಮೀಪ ನಿಲ್ಲುವುದು ಬೇಡವೆಂದು ಎಲ್ಲರೂ ದೂರದೂರವೇ ನಿಂತು ದಾರಿಮಾಡಿಕೊಟ್ಟರು.

ಆ ಜಾಗದಲ್ಲಿದ್ದವರು ಎದ್ದೇಳುತ್ತಿದ್ದಂತೆಯೇ ಶಂಕರನ್ ಪಿಳ್ಳೆ ಅಲ್ಲಿ ಕುಳಿತುಕೊಂಡರು. ಕುಳಿತ ರಭಸದಲ್ಲಿ ಅಲ್ಲಿ ಕುಳಿತಿದ್ದ ವೃದ್ಧೆಯ ಮೇಲೆ ಬಿದ್ದರು. ವೃದ್ಧೆಯ ತೊಡೆಯ ಮೇಲಿರಿಸಿಕೊಂಡಿದ್ದ ಎಲ್ಲ ಸಾಮಾನುಗಳೂ ಬಿದ್ದುಹೋದುವು. ಅವುಗಳನ್ನು ಒಟ್ಟುಗೂಡಿಸುತ್ತಾ ಆ ಮಹಿಳೆ ಕೋಪದಿಂದ ಅವರತ್ತ ದುರುಗುಟ್ಟಿ ನೋಡಿದರು.
‘ನೀನು ಸೀದಾ ನರಕಕ್ಕೇ ಹೋಗುತ್ತೀಯ’ ಎಂದು ಕೋಪದಿಂದ ಕೂಗಾಡಿದರು.

ಶಂಕರನ್ ಪಿಳ್ಳೆ ಗಾಬರಿಯಿಂದ ಮೇಲೆದ್ದು ಕೂಗಿಕೊಂಡರು, “ಗಾಡಿಯನ್ನು ನಿಲ್ಲಿಸಿ, ನಾನು ಹೋಗಬೇಕಾಗಿರುವುದು ಮೆಜೆಸ್ಟಿಕ್ ಗೆ, ತಪ್ಪು ಬಸ್ಸಿನಲ್ಲಿ ಹತ್ತಿ ಬಿಟ್ಟಿದ್ದೇನೆ….!!!”

ನಿಮ್ಮಲ್ಲಿ ಹಲವರು ಹೀಗೆಯೇ, ಯಾವ ಬಸ್ಸಿನಲ್ಲಿ ಹತ್ತಿದ್ದೀರಿ ಎಂಬುದನ್ನು ಸಹ ತಿಳಿಯದೆ ಆತಂಕಪಡುತ್ತಿದ್ದೀರಿ. ಹತ್ತುವುದಕ್ಕಾಗಲೀ ಇಳಿಯುವುದಕ್ಕಾಗಲೀ ತೋಚದೆ ಅತಂತ್ರ ಸ್ಥಿತಿಯಲ್ಲಿದ್ದೀರಿ. ಆಸೆ ಪಟ್ಟಿದ್ದು ದೊರಕಲಿಲ್ಲವೆಂದ ಮೇಲೆ, ದುಃಖದಿಂದ ಮುಖವನ್ನು ಬಾಡಿಸಿಕೊಳ್ಳುವುದು ಒಂದು ಮೂರ್ಖತನ. ಆಸೆಪಟ್ಟಿದ್ದು ದೊರೆತಾಗಲೂ ಅದೇಕೆ ಸಂಪೂರ್ಣವಾಗಿ ಸಂತೋಷವನ್ನು ಅನುಭವಿಸಲು ತಿಳಿಯದೆ ಒದ್ದಾಡುತ್ತೀರಿ?

ನಿಮಗೆ ತೆಂಡೂಲ್ಕರ್‌ ತರಹ ಕ್ರಿಕೆಟ್ ಆಡಬೇಕು, ಐಶ್ವರ್ಯ ರೈಯಂತೆ ಸುಂದರವಾಗಿರಬೇಕು, ಬಿಲ್ ಗೇಟ್ಸ್‌ನಂತೆ ಹಣವಂತರಾಗಬೇಕು. ಇಂತಹ ಒಂದು ಮನೆ, ಅಂತಹದೊಂದು ಕಾರ್, ಅವರ ಜೀವನದಂತೆ ಒಂದು ಜೀವನ ದೊರೆತಾಗ ಉಂಟಾಗುವ ಫಲವನ್ನು, ಮೊದಲೇ ತೀರ್ಮಾನಿಸಿದ್ದೀರಿ. ಅದನ್ನು ನಿರೀಕ್ಷಿಸಿ ಒಂದು ಕೆಲಸದಲ್ಲಿ ಇಳಿದಿದ್ದೀರಿ. ಅದು ನಿಮಗೆ ಒಪ್ಪಿಗೆಯಾಗುತ್ತದೆಯೋ ಇಲ್ಲವೋ, ಅಂತೂ ಅದನ್ನು ರೂಢಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಭಾರತದಲ್ಲಿ ಈಗ ಸಾಫ್ಟ್‌ವೇರ್ ಬಿಸಿನೆಸ್ ಮುಗಿಲಲ್ಲಿ ಹಾರಾಡುತ್ತಿದೆ ಎಂದು ಯಾರೋ ತಿಳಿಸಿದರು. ಅದಕ್ಕಾಗಿ ಈಗ ಸಿದ್ಧವಾಗುತ್ತಿದ್ದೀರಿ. ಬೇರೊಬ್ಬರು ನಿಮ್ಮತ್ತ ಕನಿಕರದಿಂದ ನೋಡುತ್ತಾರೆ. ಅಗೋ, ಅಲ್ಲಿ ಮಾಸಲು ಶರ್ಟು ತೊಟ್ಟು ಅಲೆಯುತ್ತಿದ್ದಾರಲ್ಲ, ಅವರು ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ಅವರು ಅಲ್ಲಿಂದ ಮರಳಿದ್ದಾರೆ. ಈಗ ಕೈಗಾಡಿಯಲ್ಲಿ ತಿಂಡಿ ಮಾರಾಟ ಮಾಡೋಣವೇ, ಎಂದು ಯೋಚನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಅದೆಲ್ಲಾ ಬೇಡ, ಷೇರ್ ಬಿಸಿನೆಸ್ ಮಾಡಿ ಎನ್ನುತ್ತಾರೆ.

ಷೇರ್ ಬಿಸಿನೆಸ್‌ನಲ್ಲಿರುವ ಹಾವು-ಚೇಳು ನಿಮ್ಮನ್ನು ಮಾತ್ರ ಬಿಟ್ಟುಬಿಡುತ್ತವೆಯೆ?

ತೆಂಡೂಲ್ಕರ್ ಧರಿಸುವಂತಹ ಶೂಗಳನ್ನು ಹಾಕಿಕೊಂಡು ಅಂತಹುದೇ ಪ್ಯಾಡುಗಳನ್ನು ಕಟ್ಟಿಕೊಂಡು ಮುಂದೆ ಬಂದರೆ ಕ್ರಿಕೆಟ್ ಬಂದು ಬಿಡುತ್ತದೆಯೆ? ತೆಂಡೂಲ್ಕರ್‘ ತನ್ನ ಬ್ಯಾಟನ್ನೇ ನಿಮ್ಮ ಕೈಗೆ ಕೊಟ್ಟರೂ, ಅವರು ಆಡುವಂತಹ ಆಟವನ್ನು ನೀವು ಆಡಲು ಸಾಧ್ಯವಾಗುತ್ತದೆಯೆ?

ಜೀವನ ಗೊಂದಲಮಯವೆನಿಸಿದರೆ ಸದ್ಗುರು ಅವರ ಮಾತುಗಳನ್ನು ಕೇಳಲು ಈ ವಿಡಿಯೋ ನೋಡಿ.

ಬೇರೊಬ್ಬರನ್ನು ನೋಡಿ ಅವರಂತೆಯೇ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿದರೆ, ನಮ್ಮ ಬೆಳವಣಿಗೆಯಲ್ಲಿ ಹಿನ್ನೆಡೆಯಾಗಿ ಮಂಗನಂತೆ ಆಗಿಬಿಡುತ್ತೇವೆ ಎಂಬುದಲ್ಲವೆ ಇದರ ಅರ್ಥ? ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣಯಾಗಿ ಉಪಯೋಗಪಡಿಸಿಕೊಳ್ಳುವುದು ಎಂಬುದಲ್ಲವೆ ನಿಮ್ಮ ಲಕ್ಷ್ಯವಾಗಿರಬೇಕಾದದ್ದು?

ನಿಮ್ಮ ಗುಣ-ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳದೆ, ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೆ ಜೀವನವು ನರಕವಾಗಿ ಪರಿಣಮಿಸುತ್ತದೆ.

ಹೀಗೆಯೇ ಶಂಕರನ್ ಪಿಳ್ಳೆ ಒಮ್ಮೆ ತನ್ನ ಇಬ್ಬರು ಸ್ನೇಹಿತರೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದರು. ಮೂವರಿಗೂ ಸೇರಿಸಿ ಒಂದೇ ಟಿಕೆಟ್ಟನ್ನು ತೆಗೆದುಕೊಂಡರು. ಅವರ ಹಿಂದೆಯೇ ಹಳ್ಳಿಯಿಂದ ಬಂದಿದ್ದ ಮೂವರು ಇದನ್ನು ಗಮನಿಸಿದರು. ಒಂದೇ ಟಿಕೆಟ್ಟಿನಲ್ಲಿ ಅದು ಹೇಗೆ ಮೂರು ಮಂದಿ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ ಎಂಬುದು ಅವರ ಕುತೂಹಲವಾಗಿತ್ತು. ರೈಲಿನಲ್ಲಿ ಆ ಮೂವರೂ ಶಂಕರನ್ ಪಿಳ್ಳೆಯನ್ನೇ ಗಮನಿಸುತ್ತಿದ್ದರು.

ಟಿ.ಸಿ. ಬಂದದ್ದನ್ನು ನೋಡಿದ ಶಂಕರನ್ ಪಿಳ್ಳೆ ಮತ್ತು ಅವನ ಸ್ನೇಹಿತರು ಒಂದೇ ಟಾಯ್ಲೆಟ್‌ನಲ್ಲಿ ಅಡಗಿಕೊಂಡರು. ಬೇರೆಲ್ಲರ ಟಿಕೆಟ್‌ಗಳನ್ನು ನೋಡಿದ ಅನಂತರ ಟಿ.ಸಿ. ಟಾಯ್ಲೆಟ್ ಬಾಗಿಲನ್ನು ತಟ್ಟಿದ. ಒಳಗೆ ಯಾರು? ಟಿಕೆಟ್ ಪ್ಲೀಸ್ ಎಂದ. ಒಂದು ಟಿಕೆಟ್ ಹಿಡಿದ ಕೈಯೊಂದು ಹೊರಗೆ ಬಂತು. ಟಿ.ಸಿ. ಅದನ್ನು ನೋಡಿ ಮುಂದೆ ನಡೆದರು. ಅನಂತರ ಆ ಮೂವರು ಹೊರಗೆ ಬಂದು ಕುಳಿತುಕೊಂಡರು.

spiritual column by sadhguru jaggi vasudev

ಹಳ್ಳಿಗರಿಗೆ ಶಂಕರನ್ ಪಿಳ್ಳೆಯ ಉಪಾಯ ಅರ್ಥವಾಯಿತು. ’ಆಹಾ ಒಳ್ಳೆ ಐಡಿಯಾ ಇದು’ ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡರು. ಊರಿಗೆ ಹಿಂತಿರುಗುವ ದಿನ ಬಂತು. ಆ ಮೂವರೂ ಸೇರಿ ಒಂದು ಟಿಕೆಟ್ ಪಡೆದರು. ಅವರ ಹಿಂದೆಯೇ ಶಂಕರನ್ ಪಿಳ್ಳೆ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದರು. ಆದರೆ ಅಂದು ಅವರಾರೂ ಟಿಕೆಟ್ ಕೊಂಡುಕೊಳ್ಳಲೇ ಇಲ್ಲ. ಹಳ್ಳಿಗರಿಗೆ ಮತ್ತೆ ಗೊಂದಲವುಂಟಾಯಿತು. ಟಿ.ಸಿ. ಬಂದಾಗ ಪಿಳ್ಳೆ ಕಡೆಯವರು ಹೇಗೆ ನಿಭಾಯಿಸುತ್ತಾರೆಂಬುದು ಅವರಿಗೆ ಅರ್ಥವಾಗಲೇ ಇಲ್ಲ.

ಟಿ.ಸಿ. ಬರುವುದನ್ನು ನೋಡಿದ ಅವರು ಮೊದಲಿನಂತೆಯೇ ಒಂದು ಟಾಯ್ಲೆಟ್‌ನಲ್ಲಿ ಅವಿತುಕೊಂಡರು. ಶಂಕರನ್ ಪಿಳ್ಳೆ ತನ್ನ ಸ್ನೇಹಿತರೊಂದಿಗೆ ಎದ್ದರು. ಎದುರಿನಲ್ಲಿದ್ದ ಮತ್ತೊಂದು ಟಾಯ್ಲೆಟ್‌ನಲ್ಲಿ ಸ್ನೇಹಿತರಿಬ್ಬರು ಪ್ರವೇಶಿಸಿದರು. ಹಳ್ಳಿಯವರು ಅಡಗಿಕೊಂಡಿದ್ದ ಟಾಯ್ಲೆಟ್ಟಿನ ಬಾಗಿಲನ್ನು ಶಂಕರನ್ ಪಿಳ್ಳೆ ತಟ್ಟಿ, ಯಾರು ಒಳಗೆ? ಟಿಕೆಟ್ ಪ್ಲೀಸ್ ಎಂದರು. ಟಿ.ಸಿ. ಬಂದಿದ್ದಾರೆಂದು ತಿಳಿದುಕೊಂಡು ಒಳಗಡೆಯಿದ್ದವರಲ್ಲಿ ಒಬ್ಬರು ಟಿಕೆಟ್ಟನ್ನು ಹೊರೆಗೆ ಚಾಚಿದರು. ಹೊರಗಿದ್ದ ಶಂಕರನ್ ಪಿಳ್ಳೆ ಆ ಟಿಕೆಟನ್ನು ತೆಗೆದುಕೊಂಡು ಎದುರಿನ ಟಾಯ್ಲೆಟ್ಟಿನೊಳಗೆ ಹೋಗಿ ಸೇರಿಕೊಂಡರು.
ಬೇರೊಬ್ಬರು ಮಾಡಿದಂತೆ ನಾವು ಮಾಡಲು ಹೊರಟರೆ ಅದರಂತೆಯೇ ಫಲ ನಮಗೆ ದೊರೆಯುತ್ತದೆಯೆ?

ಶಂಕರನ್ ಪಿಳ್ಳೆಯಂತೆ ಮಾಡಲು ಹೊರಟ ಹಳ್ಳಿಗರಂತೆ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಬೇರೊಬ್ಬರಿಗೆ ಹೋಲಿಸಿಕೊಳ್ಳುತ್ತ ಅವರಂತೆಯೇ ಇರಬೇಕು ಎಂದು ಚಿಕ್ಕ ವಯಸ್ಸಿನಿಂದಲೇ ನಮಗೆ ದೊಡ್ಡವರು ಉಪದೇಶ ಮಾಡುತ್ತಾ ಬಂದಿರುವುದರಿಂದಲೇ ಇಂತಹ ವ್ಯಾಧಿ ಎಲ್ಲೆಡೆಯೂ ವ್ಯಾಪಿಸಿದೆ. ಇದು ಹೆಚ್ಚು ಹರಡುವುದಕ್ಕೆ ಮುಂಚೆ ಈ ರೋಗವನ್ನು ಬುಡಸಮೇತ ಕಿತ್ತು ಹಾಕಿ.

ಇದನ್ನೂ ಓದಿ: Prerane : ನೀವು ಆಧ್ಯಾತ್ಮಿಕ ಸಾಧನೆ ಮಾಡಬೇಕೇ? ಹಾಗಾದರೆ ಖಾಲಿ ಹಾಳೆಯಂತಾಗಿ!

ಇಷ್ಟು ಕೋಟಿ ಜನಸಂಖ್ಯೆಯಲ್ಲಿ ಒಬ್ಬ ಮನುಷ್ಯನಲ್ಲಿರುವಂತಹ ಗುಣ ಇನ್ನೊಬ್ಬನಲ್ಲಿರುವುದಿಲ್ಲ. ನಿರ್ದಿಷ್ಟವಾದ ಯಾವುದಾದರೊಂದು ಸನ್ನಿವೇಶವನ್ನು ಬೇರೊಬ್ಬರು ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ, ನೀವು ಅದನ್ನು ತಿಳಿದುಕೊಂಡಿರುವುದೇ ಬೇರೆ. ಗೆಲುವನ್ನು ಕಂಡವರ ಜೀವನ, ನಮಗೆ ಒಂದು ಪ್ರೋತ್ಸಾಹದಾಯಕ ಶಕ್ತಿಯಾಗಿ ಮಾತ್ರ ಇರಲು ಸಾಧ್ಯವೇ ಹೊರತು ಅದನ್ನು ಗೆಲುವಿನ ಸೂತ್ರವನ್ನಾಗಿ ಹಿಡಿಯುವುದು ಅತ್ಯಂತ ಮೂರ್ಖತನವೆನಿಸುತ್ತದೆ.

ಜೀವನದಲ್ಲಿ ನೀವು ಜಯಶಾಲಿಯಾಗಿ ಮೊದಲನೆಯವರಾಗಿ ಬರಬೇಕಾದರೆ ನಿಮ್ಮ ಶಕ್ತಿಗಳಿಗೆ ಉತ್ತೇಜನ ನೀಡಿ ಅವುಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

Exit mobile version