Site icon Vistara News

ರಾಜ ಮಾರ್ಗ ಅಂಕಣ | ವ್ಯಕ್ತಿತ್ವ ವಿಕಸನದ ಮಹಾಗುರು ಗಣಪತಿ, ಒಂದೇ ಬದುಕಲ್ಲಿ ನೂರಾರು ಸಂದೇಶಗಳು!

Ganesha idol

ಇಡೀ ಜಗತ್ತಿನಲ್ಲಿ ಗಣೇಶನ ಹಾಗೆ ಬೇರೆ ಯಾವ ದೇವರೂ ಇಲ್ಲ. ಆದ್ದರಿಂದ ಅವನು ಅನನ್ಯ, ಅನುಪಮ ಮತ್ತು ಅನೂಹ್ಯ! ಅದರಿಂದಾಗಿ ಅವನು ಜನಪ್ರಿಯ ದೇವರು. ಜಗತ್ತಿನ 132 ದೇಶಗಳಲ್ಲಿ ಗಣಪತಿಯ ಮಂದಿರಗಳು ಇವೆ! ಭಾರತದಲ್ಲಿ ಅವನ ಅಪ್ಪ ಈಶ್ವರನ ದೇವಾಲಯ ಬಿಟ್ಟರೆ ಅತೀ ಹೆಚ್ಚು ದೇವಸ್ಥಾನ ಇರುವುದು ಗಣೇಶನದ್ದೇ! ಮುಸ್ಲಿಂ ರಾಷ್ಟ್ರವಾದ ಇಂಡೋನೇಷಿಯಾದ ಕರೆನ್ಸಿ ನೋಟಿನಲ್ಲಿ ಗಣಪತಿಯ ಚಿತ್ರ ಇದೆ! ಅಮೆರಿಕಾದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಗಣಪತಿಯ ಮೂರ್ತಿ ಇದೆ. ಇದರಿಂದಾಗಿ ಗಣೇಶ ವಿಶ್ವವ್ಯಾಪಿ ಎಂದು ಖಂಡಿತವಾಗಿ ಹೇಳಬಹುದು.

ಪೆಪ್ಸಿ ಕಂಪನಿಯ ಸಿಇಒ ಆಗಿದ್ದ ಇಂದಿರಾ ನೂಯಿ ಅವರು ಸ್ವತಃ ಗಣೇಶನ ಬಹುದೊಡ್ಡ ಭಕ್ತೆಯು ಆದ್ದರಿಂದ ಇಡೀ ಜಗತ್ತಿನ ಎಲ್ಲ ಪೆಪ್ಸಿ ಕಂಪೆನಿಯ ಕಾರ್ಪೊರೇಟ್ ಕಚೇರಿಗಳಲ್ಲಿ ಗಣಪತಿಯ ಮೂರ್ತಿ ಇರಿಸಿದ್ದರು ಮತ್ತು ಅವರನ್ನು ಭೇಟಿ ಮಾಡಲು ಯಾರೇ ಬಂದರೂ ಗಣಪತಿಯ ಮೂರ್ತಿ ನೀಡಿ ಕಳುಹಿಸುತ್ತಿದ್ದರು!

ಜನಪ್ರಿಯತೆಯ ಜೊತೆಗೆ ಆತನ ವ್ಯಕ್ತಿತ್ವ ಕೂಡ ತುಂಬಾ ಆಕರ್ಷಣೀಯ ಆಗಿದ್ದು ಗಣಪತಿಯು ನಮಗೆಲ್ಲ ಬುದ್ಧಿ ಬೋಧಕವಾಗಿ ಗೋಚರಿಸುತ್ತಾನೆ.

ಗಣಪತಿಯ ದೊಡ್ಡ ಆನೆಯ ತಲೆಯು ಜ್ಞಾನದ ಭಂಡಾರವಾಗಿ ಕಾಣುತ್ತದೆ. ಸಣ್ಣ ಸಣ್ಣ ಕಣ್ಣುಗಳು ಸೂಕ್ಷ್ಮತೆಯ ಪ್ರತೀಕ. ದೊಡ್ಡದಾದ ಮತ್ತು ಅಗಲವಾದ ಕಿವಿಗಳು ಹೆಚ್ಚು ಆಲಿಸಬೇಕು ಎಂಬ ಸಂದೇಶವನ್ನು ರವಾನೆ ಮಾಡುತ್ತವೆ. ಉದ್ದವಾದ ಸೊಂಡಿಲು ಚಲನ ಶೀಲತೆಯನ್ನು ತೋರಿಸುತ್ತದೆ. ಮುರಿದು ಹೋದ ದಾಡೆಯು ಮುರಿದ ಅಹಂಕಾರದ ಪ್ರತೀಕವೇ ಆಗಿದೆ. ದೊಡ್ಡ ಹೊಟ್ಟೆಯು ಆಹಾರದ ಖಜಾನೆ. ಕೈಯಲ್ಲಿ ಇರುವ ಪಾಶಗಳು ಕಾಮನೆಯ ನಿಯಂತ್ರಣದ ಸಂಕೇತ. ಮೋದಕವು ಇಷ್ಟಾರ್ಥಗಳ ಪ್ರಾಪ್ತಿಯ ಸಂಕೇತ. ಆತನ ಹೊಟ್ಟೆಗೆ ಬಿಗಿದ ಸರ್ಪವು ಸ್ವಯಂ ನಿಯಂತ್ರಣದ ಸಂಕೇತ ಆಗಿದೆ. ಅಭಯ ಮುದ್ರೆಯು ಧೈರ್ಯ ತುಂಬುವ ಪ್ರೇರಣೆಯ ಸಂಕೇತ. ಆತನ ವಾಹನವಾದ ಇಲಿಯು ಮುಗ್ಧತೆಯ ಸಂದೇಶವನ್ನು ನೀಡುತ್ತದೆ. ಹೀಗೆ ಗಣಪತಿಯ ದೇಹದ ಮೇಲೆ ಇರುವ ಪ್ರತೀಯೊಂದು ವಸ್ತುವೂ ಒಂದಲ್ಲ ಒಂದು ಸಂದೇಶವನ್ನು ನೀಡುತ್ತದೆ.

ಇನ್ನು ಸೂಕ್ಷ್ಮವಾಗಿ ಗಮನಿಸಿದರೆ ಆತನ ಮೂರ್ತಿಯಲ್ಲಿ ಹಿಂದೂ ಧರ್ಮದ ಸಂಕೇತಗಳು ಭರಪೂರ ದೊರೆಯುತ್ತವೆ. ಇಸ್ಲಾಂ, ಸಿಖ್, ಕ್ರಿಶ್ಚಿಯನ್, ಬೌದ್ಧ ಹಾಗೂ ಜೈನ ಧರ್ಮದ ಸಂಕೇತಗಳು ನಿಶ್ಚಿತವಾಗಿ ದೊರೆಯುತ್ತವೆ ಎನ್ನುತ್ತಾರೆ ವಿದ್ವಾಂಸರು. ಅದರಿಂದಾಗಿ ಗಣಪತಿಯು ಧರ್ಮಾತೀತ ಎಂದೇ ಹೇಳಬಹುದು.

ಅದೇ ರೀತಿ ಗಣಪತಿಯ ಮೂರ್ತಿಯಲ್ಲಿ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಇದೆ. ಕಾಂಗ್ರೆಸ್‌ನ ಕೈಯ ಚಿಹ್ನೆ ಇದೆ. ಬಹುಜನ ಪಕ್ಷದ ಆನೆ ಇದೆ. ಜನತಾದಳದ ಚಕ್ರವೂ ಇದೆ! ಅಂದರೆ ಗಣಪತಿಯು ಪಕ್ಷಾತೀತ ಕೂಡ ಆಗಿದ್ದಾನೆ!

ಗಣಪತಿಯು ನಿಜವಾದ ಅರ್ಥದಲ್ಲಿ ಮಣ್ಣಿನ ಮಗನೇ ಆಗಿದ್ದಾನೆ. ಜೊತೆಗೆ ಮಾನವ ದೇಹಕ್ಕೆ ಆನೆಯ ತಲೆಯನ್ನು ಜೋಡಿಸಿ ಮಾಡಿದ ಸರ್ಜರಿಯ ಮೊದಲ ಉತ್ಪನ್ನ ಕೂಡ ಗಣೇಶನೇ ಆಗಿದ್ದಾನೆ.

ಎಲ್ಲ ಪೂಜೆಗಳಲ್ಲಿ ಮೊದಲ ಪೂಜೆ ಸಲ್ಲುವುದು ಗಣೇಶನಿಗೆ. ಆದ್ದರಿಂದ ಅವನು ಆದಿಪೂಜಿತ!
ಆದಿವಂದಿತ! ಅಗ್ರಪೂಜೆಯ ಮೊದಲ ಹಕ್ಕುದಾರ ಗಣಪನೆ ಆಗಿದ್ದಾನೆ!

ವೇದವ್ಯಾಸರು ಮಹಾಭಾರತವನ್ನು ಹೇಳುತ್ತಾ ಹೋದಂತೆ ಅಷ್ಟೇ ವೇಗವಾಗಿ ಅದನ್ನು ಲಿಪಿಕಾರ ಅಥವ ಸ್ಟೆನೋ ಆಗಿ ಬರೆದು ಮುಗಿಸಿದ್ದು ಇದೇ ಗಣಪತಿ. ಅವನ ವೇಗಕ್ಕೆ ಸ್ವತಃ ಮಾರುಹೋದವರು ವೇದವ್ಯಾಸರು. ಅಂದರೆ ಆತ ಜ್ಞಾನದ ಅಧಿದೇವತೆ ಆಗಿದ್ದಾನೆ. ತನ್ನನ್ನು ಅಣಕಿಸಿದ ಚಂದ್ರನಿಗೆ ಶಾಪ ಕೊಟ್ಟ ಮಹಾ ಸ್ವಾಭಿಮಾನಿ ಗಣಪತಿಯೇ ಆಗಿದ್ದಾನೆ.

ಇಂತಹ ಗಣಪತಿಯ ಪೂಜೆಯನ್ನು ಸಾರ್ವಜನಿಕ ಮಾಡಿ ಸ್ವಾತಂತ್ರ್ಯ ಹೋರಾಟಕ್ಕೆ ವೇಗವನ್ನು ಕೊಟ್ಟವರು ಬಾಲಗಂಗಾಧರ ತಿಲಕರು. ಅದುವರೆಗೆ ಮರಾಠರ ವಾಡೆಗಳಲ್ಲಿ ಮಾತ್ರ ಪೂಜಿಸಲ್ಪಡುತ್ತಿದ್ದ ಗಣೇಶನನ್ನು ಸಾರ್ವಜನಿಕ ವೇದಿಕೆಗೆ ತಂದದ್ದು ತಿಲಕರು. 1893ರ ಸೆಪ್ಟೆಂಬರ್ ತಿಂಗಳಿನಲ್ಲಿ ಪೂನಾದ ತಿಲಕ ವಾಡಿಯಲ್ಲಿ ಈ ಮೊದಲ ಗಣೇಶೋತ್ಸವ ಸಂಪನ್ನ ಆಯಿತು. ಆದರೆ ಅದಕ್ಕೆ ಒಂದು ವರ್ಷ ಮೊದಲೇ ಅಂದರೆ 1892ರಲ್ಲಿ ವೈದ್ಯರಾದ ಭಾವೂ ಸಾಹೇಬ್ ರಂಗರಿ ಅನ್ನುವುವವರು ಮೊದಲ ಸಾರ್ವಜನಿಕ ಗಣೇಶೋತ್ಸವ ನಡೆಸಿದ್ದನ್ನು ತಿಲಕರೇ ಉಲ್ಲೇಖ ಮಾಡಿದ್ದಾರೆ! ಏನಿದ್ದರೂ ಅದರ ಶ್ರೇಯಸ್ಸು ದೊರೆಯುವುದು ತಿಲಕರಿಗೆ! ಇಂದು ಮಹಾರಾಷ್ಟ್ರದಲ್ಲಿ ಸಾವಿರಾರು ಸಾರ್ವಜನಿಕ ಗಣೇಶೋತ್ಸವ ಮಂಡಲಗಳು ಇವೆ. ನಮ್ಮ ಗಣಪನಿಗೆ ಒಂದು ತಾರಾ ಮೌಲ್ಯ ನೀಡಿದವರು ಮರಾಠಿಗರೇ ಆಗಿದ್ದಾರೆ! ಕಾಕತಾಳೀಯ ಅಂದಂತೆ ಅದೇ ವರ್ಷ, ಅದೇ ತಿಂಗಳು ಸ್ವಾಮಿ ವಿವೇಕಾನಂದರು ಚಿಕಾಗೋ ಧರ್ಮ ಸಮ್ಮೇಳನದಲ್ಲಿ ಐತಿಹಾಸಿಕ ಭಾಷಣ ಮಾಡಿ ವಿಶ್ವದ ಗಮನ ಸೆಳೆದಿದ್ದರು!

ಅಂತಹ ವಿದ್ಯಾಧಿರಾಜನಾದ ಗಣಪತಿಯು ನಮಗೆಲ್ಲ ಒಳ್ಳೇದನ್ನು ಮಾಡಲಿ ಎನ್ನುವ ಪ್ರಾರ್ಥನೆ ನಮ್ಮದು.

ಇದನ್ನೂ ಓದಿ|ಬ ರಾಜ ಮಾರ್ಗ ಅಂಕಣ| ಮಕ್ಕಳ ಮೇಲೆ ವಿಪರೀತ ನಂಬಿಕೆ ಇಡ್ಬೇಡಿ, ಎಲ್ಲವನ್ನೂ ಸಮರ್ಥಿಸಬೇಡಿ!

Exit mobile version