Raja Marga Column : ವಿಜ್ಞಾನ ಮತ್ತು ತಂತ್ರಜ್ಞಾನ (Science and Technology) ಇಷ್ಟೊಂದು ವೇಗವಾಗಿ ಮುಂದುವರಿಯುತ್ತದೆ ಎಂಬ ಕಲ್ಪನೆಯೇ ಯಾರಿಗೂ ಇರಲು ಸಾಧ್ಯವಿಲ್ಲ. ಮನುಷ್ಯನ ಮೆದುಳಿನ ಒಳಗೆ ಒಂದು ಕಂಪ್ಯೂಟರ್ ಚಿಪ್ (Computer Chip to Brain) ಅಳವಡಿಸುವ ಮೂಲಕ ಅದನ್ನು ಒಂದು ಪ್ರಬಲ ಸಂವಹನ ಮಾಧ್ಯಮ ಮಾಡುವ ಒಂದು ಪ್ರಯೋಗವು ಈಗ ಯಶಸ್ವೀ ಆಗಿದೆ ಎಂಬ ಸುದ್ದಿಯು ಜಗತ್ತಿನ ಗಮನವನ್ನು ಸೆಳೆದಿದೆ. ವಿಶ್ವದ ಎರಡನೇ ಅತೀ ದೊಡ್ಡ ಶ್ರೀಮಂತ ಎಲಾನ್ ಮಸ್ಕ್ (Elon Musk) ಅವರ ಒಡೆತನದ ನ್ಯೂರಾಲಿಂಕ್ ಕಂಪೆನಿಯು (Neura Link Company) ಈ ಪ್ರಯೋಗವನ್ನು ಮಾಡಿ ಯಶಸ್ವೀ ಆಗಿದ್ದೇವೆ ಎಂದು ಘೋಷಣೆ ಮಾಡಿದೆ. ಪಾರ್ಶ್ವವಾಯು ಸೇರಿದಂತೆ ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವ ಮಂದಿಗೆ ಇದು ಅತ್ಯಂತ ಯಶಸ್ವೀ ಆದ ಸಂವಹನ ಮಾಧ್ಯಮ ಆಗಬಲ್ಲದು ಎಂದು ಎಲಾನ್ ಮಸ್ಕ್ ಅವರ ಅಭಿಪ್ರಾಯ.
Raja Marga Column : ಏನಿದು ಮೆದುಳಿನ ಚಿಪ್?
ಉದಾಹರಣೆಗೆ ಮೊಬೈಲ್ ಎಷ್ಟೇ ದುಬಾರಿ ಆದರೂ ಅದರ ಒಳಗೆ ಕೆಲಸ ಮಾಡುವುದು ಒಂದು ಸಣ್ಣ ಸಿಮ್ ಮಾತ್ರ. ಅದು ಇಡೀ ಮೊಬೈಲಿನ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ ಎಲ್ಲ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಒಂದು ಸಣ್ಣ ಚಿಪ್ ಆ ಇಡೀ ಉಪಕರಣವನ್ನು ನಿಯಂತ್ರಣ ಮಾಡುತ್ತದೆ. ಹಾಗೆಯೇ ಮನುಷ್ಯನ ಅತ್ಯಂತ ಶಕ್ತಿಶಾಲಿ ಆದ ಮೆದುಳಿನ ಕೆಲವು ಸಂವಹನ ಕ್ರಿಯೆಗಳನ್ನು ಒಂದು ಸಣ್ಣ ಚಿಪ್ಪಿಗೆ ಒಪ್ಪಿಸಿದರೆ ಅದು ವಿಕಲಚೇತನ ವ್ಯಕ್ತಿಗಳಿಗೆ ಒಂದು ವರದಾನ ಆಗಬಲ್ಲದು ಎನ್ನುತ್ತದೆ ಆ ಕಂಪನಿ.
Raja Marga Column : ಮನುಷ್ಯನ ಯೋಚನೆಗಳನ್ನು ಗ್ರಹಿಸುವ ಚಿಪ್
ಉದಾಹರಣೆಗೆ ಒಬ್ಬ ಪ್ಯಾರಾಲಿಸಿಸ್ ಆಗಿರುವ ವ್ಯಕ್ತಿ ಅಥವಾ ವಿಶೇಷ ಚೇತನ ವ್ಯಕ್ತಿ ಇಂತವರಿಗೆ ಒಂದು ಕಾಲ್ ಅಥವಾ ಸಂದೇಶ ಮಾಡಲು ಬಯಸಿದರೆ ಅತನ ಮೆದುಳಿನಲ್ಲಿ ಉಂಟಾಗುವ ನ್ಯೂರಾನ್‌ನ ಅಲೆಗಳನ್ನು ಆ ಚಿಪ್ ಗ್ರಹಿಸುತ್ತದೆ. ಆ ಚಿಪ್ಪಿಗೆ ಹೊರಗಿನಿಂದ ಕನೆಕ್ಟ್ ಆಗಿರುವ ಒಂದು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಆ ಸಂದೇಶವು ರವಾನೆಯಾಗಿ ಆ ವ್ಯಕ್ತಿಗೆ ಕಾಲ್ ಹೋಗುತ್ತದೆ, ಅಥವಾ ಸಂದೇಶವು ರವಾನೆ ಆಗುತ್ತದೆ. ಆಗ ಮೆದುಳು ಯೋಚನೆ ಮಾಡಿದ ಕಾರ್ಯವನ್ನು ಮೊಬೈಲ್ ಅಥವಾ ಲಾಪ್ ಟಾಪ್ ಪೂರ್ತಿ ಮಾಡುತ್ತದೆ. ಈ ಚಿಪ್ಪಿಗೆ
ಟೆಲಿಪತಿ ಎಂಬ ಚಂದದ ಹೆಸರನ್ನು ಕಂಪನಿ ಇಟ್ಟಿದೆ. ಅಂದರೆ ಮೊಬೈಲ್ ಆನ್ ಮಾಡುವುದು, ಯಾರಿಗಾದರೂ ಕರೆ ಮಾಡುವುದು, ಕಂಪ್ಯೂಟರ್‌ನಲ್ಲಿ ಯಾವುದೇ ಆಪರೇಶನ್ ಪೂರ್ತಿ ಮಾಡುವುದು, ಗೂಗಲ್ ರೀಡ್ ಮಾಡುವುದು, ವಿಡಿಯೋ ಡೌನ್ ಲೋಡ್ ಮಾಡಿ ವೀಕ್ಷಣೆ ಮಾಡುವುದು ಮೊದಲಾದ ಎಲ್ಲವನ್ನೂ ಆ ಚಿಪ್ ಸುಲಭವಾಗಿ ಮಾಡಿ ಮುಗಿಸುತ್ತದೆ ಎನ್ನುವಾಗ ಯಾರಿಗೆ ಆಸಕ್ತಿ ಮೂಡುವುದಿಲ್ಲ ಹೇಳಿ?
ಮೊದಲು ಪ್ರಾಣಿಗಳ ಮೇಲೆ ನಡೆದಿತ್ತು ಪ್ರಯೋಗ
ಮೊದಲು ಪ್ರಾಣಿಗಳ ಮೇಲೆ ಈ ಪ್ರಯೋಗವು ನಡೆದ ನಂತರ ಅದನ್ನು ಮನುಷ್ಯರ ಮೆದುಳಿನ ಮೇಲೆ ಮಾಡಲು ಹೊರಟಾಗ ಅಮೆರಿಕನ್ ಸರಕಾರ ಯಾವುದೇ ಷರತ್ತು ಇಲ್ಲದೇ ಅನುಮತಿ ನೀಡಿತ್ತು. ಇದೀಗ ರೋಬೋಟ್ ಮೂಲಕ ದೈಹಿಕ ನ್ಯೂನತೆ ಇರುವ ವ್ಯಕ್ತಿಯ ಮೆದುಳಿಗೆ ಸರ್ಜರಿ ಮಾಡಿ ಈ ಚಿಪ್ ಅಳವಡಿಸಲಾಗಿದೆ ಮತ್ತು ಅದು ಅತ್ಯಂತ ಯಶಸ್ವೀ ಆಗಿದೆ ಎಂದು ಎಲಾನ್ ಮಸ್ಕ್ ಕಂಪೆನಿ ಪ್ರೆಸ್ ಮೀಟ್ ಮಾಡಿ ಹೇಳಿದೆ. ಅದನ್ನು ಜಗತ್ತಿನಾದ್ಯಂತ ಮಾರ್ಕೆಟ್ ಮಾಡದೆ ಎಲಾನ್ ಮಸ್ಕ್ ಬಿಡುವುದಿಲ್ಲ ಎನ್ನುವುದು ಯಾರಿಗಾದರೂ ಅರ್ಥ ಆಗುತ್ತದೆ. ಅಲ್ಲಿಗೆ ವಿಶೇಷ ಚೇತನರು ಮಾತ್ರವಲ್ಲ, ಆರೋಗ್ಯಪೂರ್ಣ ಇದ್ದವರೂ ಮುಗಿಬಿದ್ದು ಈ ಚಿಪ್ ಖರೀದಿ ಮಾಡಿ ತಮ್ಮ ಮೆದುಳಿನ ಒಳಗೆ ಪ್ಲಾಂಟ್ ಮಾಡುವ ರೇಸಿಗೆ ನಿಲ್ಲುತ್ತಾರೆ.
ಎಲಾನ್ ಕಂಪೆನಿಯು ಕೋಟಿ ಕೋಟಿ ಡಾಲರ್ ದುಡ್ಡು ಮಾಡುತ್ತದೆ. ಇದು ಖಂಡಿತ. ಆದರೆ?
ಈ ಚಿಪ್ ದುರುಪಯೋಗ ಆಗುವ ಎಲ್ಲ ಸಾಧ್ಯತೆಗಳು ಹೆಚ್ಚಿವೆ!
ಈ ಚಿಪ್ ಜನ ಸಾಮಾನ್ಯರ ಕೈಗೆ ಬಂದಾಗ (ಬರೋದೇನು? ಬರೋದು ಖಂಡಿತ!) ಮುಂದೆ ಆಗುವ ಅನಾಹುತಗಳನ್ನು ನೆನೆದರೆ ಒಮ್ಮೆ ಮೈ ಬೆವರುತ್ತದೆ. ಎದೆ ನಡುಗುತ್ತದೆ. ಪ್ರಕೃತಿಗೆ ವಿರುದ್ಧವಾದ ಯಾವುದೇ ಆರಾಧನೆ ಅಥವಾ ಸಂಶೋಧನೆಗಳು ಹಿಂದೆ ಕೂಡ ನಡೆದಿದ್ದವು. ಆಗೆಲ್ಲ ಮನುಕುಲದ ಮೇಲೆ ಅವು ಮಾರಕವಾದ ಪರಿಣಾಮಗಳನ್ನು ಬಿಟ್ಟು ಹೋಗಿರುವ ನೂರಾರು ನಿದರ್ಶನಗಳು ಇವೆ.
ಮನುಷ್ಯನ ವೈಜ್ಞಾನಿಕ ಶಕ್ತಿಯಿಂದ ಸೃಷ್ಟಿಯಾದ ಅಣುಬಾಂಬ್ ಮಾಡಿದ ವಿನಾಶವನ್ನು ಗಮನಿಸಿ ಅದಕ್ಕೆ ಕಾರಣವಾದ ಸಮೀಕರಣ ಕಂಡುಹಿಡಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಕಣ್ಣೀರು ಹಾಕಿದ್ದನ್ನು ನಾನು ಓದಿದ್ದೇನೆ. ಅದೇ ರೀತಿ ವಿನಾಶಕಾರಿ ಆದ ಹೈಡ್ರೋಜನ್ ಬಾಂಬ್ ಸಂಶೋಧನೆ ಮಾಡಿದ ರಷ್ಯಾದ ವಿಜ್ಞಾನಿ ಎಡ್ವರ್ಡ್ ಟೆಲ್ಲರ್ ಅದು ಇಡೀ ಜಗತ್ತನ್ನು ಕೆಲವೇ ಕ್ಷಣಗಳ ಒಳಗೆ ಪೂರ್ತಿಯಾಗಿ ಸುಟ್ಟುಹಾಕಬಹುದು ಎಂದು ಹೇಳಿ ಆತಂಕ ವ್ಯಕ್ತಪಡಿಸಿದ್ದರು.
The first human received an implant from @Neuralink yesterday and is recovering well.
— Elon Musk (@elonmusk) January 29, 2024
Initial results show promising neuron spike detection.
ಹಾಗೆಯೇ ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯ ಮಾಡಿದ ರೋಬೋಟ್ ಸಿನಿಮಾದಲ್ಲಿ ರೋಬೋಟ್ ಮೆದುಳಿಗೆ ಭಾವನೆ ತುಂಬಿಸಿದ್ದರಿಂದ ಆದ ಅನಾಹುತಗಳನ್ನು ನಾವು ನೋಡಿ ಬೆಚ್ಚಿ ಬಿದ್ದಿದ್ದೇವೆ. ಇದು ಅದೇ ರೀತಿಯ ಸಂಶೋಧನೆ ಆಗುವ ಸಾಧ್ಯತೆ ಇದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.
ಈ ಚಿಪ್ ಮುಂದೆ ಎಲ್ಲರ ಕೈಗೆ ದೊರೆತರೆ….?
ಮನುಷ್ಯನ ಎರಡು ಸಹಜವಾದ ಪ್ರವೃತ್ತಿಗಳೆಂದರೆ ಕುತೂಹಲ ಮತ್ತು ಪ್ರಭುತ್ವ ಸ್ಥಾಪನೆ. ಅಂತವರ ಕೈಗೆ ಈ ಚಿಪ್ ದೊರೆಯಿತು ಅಂತಾದರೆ ಅದು ಕೊಡಬಹುದಾದ ಆದೇಶಗಳನ್ನು ನೀವು, ನಾವು ಊಹೆ ಮಾಡುವುದು ಕೂಡ ಕಷ್ಟ. ವಿಶೇಷ ಚೇತನ ವ್ಯಕ್ತಿಗಳು ಕೂಡ ಮಾರಕವಾಗಿ ಯೋಚನೆ ಮಾಡಿದರೆ, ಆ ಯೋಚನೆಗಳನ್ನು ಈ ಚಿಪ್ ಒಂದು ಸ್ಟ್ರಾಂಗ್ ಕಮಾಂಡ್ ಆಗಿ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ವರ್ಗಾವಣೆ ಆಗಿ ಆಕ್ಷನ್ ಆರಂಭ ಆಯಿತು ಎಂದಾದರೆ ಆಗಬಹುದಾದ ವಿನಾಶವನ್ನು ಊಹೆ ಮಾಡುತ್ತ ಹೋದಂತೆ ನೀವು ಬೆವರುವುದು ಖಂಡಿತ. ಈ ಚಿಪ್ ಹ್ಯಾಕ್ ಆಗುವ ಸಾಧ್ಯತೆ ಇದೆ ಎಂದು ಸ್ವತಃ ಎಲಾನ್ ಮಸ್ಕ್ ಹೇಳಿದ್ದಾರೆ.
ಇದನ್ನೂ ಓದಿ: Raja Marga Column : ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ ; ಬಿಹಾರದ ರಾಘವೇಂದ್ರ ಕುಮಾರ್
ಈ ಚಿಪ್ಪಿನ ಎರಡನೇ ವರ್ಷನ್ ತಯಾರಾದರೆ?
ಒಬ್ಬ ಮನುಷ್ಯನ ಮೆದುಳಿನಿಂದ ಇನ್ನೊಬ್ಬ ಮನುಷ್ಯನ ಮೆದುಳಿಗೆ ಸಂವಹನ ಮಾಡುವ ಅಥವಾ ಕಮಾಂಡ್ ಕೊಡುವ ಚಿಪ್ ತಯಾರಾಯಿತು ಅಂತಾದರೆ ಪ್ರಪಂಚ ಹೇಗಿರಬಹುದು?
ಅದನ್ನು ಮೊಬೈಲ್ ಇಲ್ಲದ ಸಂವಹನ ಸಾಧನ ಎಂದು ನಾವು ಹೇಳಬಹುದು. ಆಗ ಇಡೀ ಮಾನವ ಜನಾಂಗ ಯಾರ್ಯಾರ ಮೆದುಳಿನ ಒಳಗೆ ಕೈ ಹಾಕಿ ಅಪಾಯಕಾರಿ ಆದೇಶಗಳನ್ನು ನೀಡುತ್ತಾ ಹೋದರೆ ಈ ಜಗತ್ತು ಹೇಗಿರಬಹುದು?
ಸದ್ಯಕ್ಕೆ ಈ ಚಿಪ್ ಅಮೆರಿಕಾದಲ್ಲಿ ಮಾತ್ರ ತಯಾರಾಗಿದೆ ಮತ್ತು ಮಾರ್ಕೆಟ್ ಆಗ್ತಾ ಇದೆ. ನಮ್ಮ ಭಾರತಕ್ಕೆ ಏನಾದರೂ ಈ ಚಿಪ್ ಅಥವಾ ಅದರ ಎರಡನೇ ವರ್ಷನ್ ಬಂದರೆ…… ಬೇಡ್ರಪ್ಪೋ ಬೇಡಾ ಅನ್ನೋದೇ ಇಂದಿನ ಒಂದು ಸಾಲಿನ ಭರತವಾಕ್ಯ!