Site icon Vistara News

ರಾಜ ಮಾರ್ಗ ಅಂಕಣ: ಉಸಿರಿರುವವರೆಗೂ ಭುಜದ ಮೇಲೆ ಐದು ನಕ್ಷತ್ರ ಹೊಂದಿದ್ದ ಕನ್ನಡಿಗ ಕಾರಿಯಪ್ಪ

KM Kariyappa

#image_title

ಕೊಡವರು ತಮ್ಮ ರಾಷ್ಟ್ರಪ್ರೇಮಕ್ಕೆ ಪ್ರಸಿದ್ಧರು. ಪ್ರತೀ ಕೊಡವರ ಮನೆಯಲ್ಲಿ ಕನಿಷ್ಠ ಒಬ್ಬ ಸೈನಿಕ ಇದ್ದೇ ಇರುತ್ತಾನೆ. ಅದೇ ರೀತಿ ನಮ್ಮ ಫೀಲ್ಡ್‌ ಮಾರ್ಷಲ್‌ ಕೆ.ಮಾದಪ್ಪ ಕಾರಿಯಪ್ಪ (Field Marshal KM Kariyappa) ಅವರು ಹುಟ್ಟಿದ್ದು ಕೊಡಗಿನ ಶನಿವಾರಸಂತೆ ಸಮೀಪದ ಸಣ್ಣ ಹಳ್ಳಿಯಲ್ಲಿ. ಅವರದ್ದು ದೇಶಭಕ್ತ ಕುಟುಂಬ. ದೇಶಪ್ರೇಮದ ಬಿಸಿರಕ್ತವನ್ನು ಹೃದಯಕ್ಕೆ ಮೆತ್ತಿಕೊಂಡು ಬಂದವರು ಅವರು. ಆಗಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿಯನ್ನು ಪಡೆದು ಅವರು ನೇರ ಪ್ರವೇಶಿಸಿದ್ದು ಸೈನ್ಯಕ್ಕೆ. ಮುಂದೆ ಮೂರು ದಶಕಗಳ ಕಾಲ ಅವರು ಭಾರತದ ಹೆಮ್ಮೆಯ ಸೈನಿಕರಾಗಿ ದೇಶಸೇವೆ ಮಾಡಿದರು.

ಎರಡನೇ ವಿಶ್ವ ಯುದ್ಧದಲ್ಲಿ ಭಾಗಿ

1914-18ರ ಮೊದಲ ವಿಶ್ವ ಸಮರದ ಹೊತ್ತಿಗೆ ಅವರು ಮಿಲಿಟರಿಯ ತರಬೇತಿಯಲ್ಲಿ ಇದ್ದರು. ಎರಡನೇ ವಿಶ್ವಯುದ್ಧ ನಡೆದಾಗ ಅವರು ಬ್ರಿಟಿಷ್ ಇಂಡಿಯಾ ಸೈನ್ಯದಲ್ಲಿ ಒಂದು ಬೆಟಾಲಿಯನ್‌ನ ನಾಯಕತ್ವವನ್ನು ವಹಿಸಿದ್ದರು. ಇರಾನ್, ಇರಾಕ್, ಸಿರಿಯಾ ಮತ್ತು ಬರ್ಮಾದಲ್ಲಿ ಅವರು ಸೇನೆಯ ತುಕಡಿಗಳನ್ನು ಮುನ್ನಡೆಸಿದರು. ಅವರ ನಾಯಕತ್ವದ ಗುಣವನ್ನು ಗುರುತಿಸಿದ ಬ್ರಿಟಿಷ್ ಸರಕಾರ ಅವರನ್ನು ಲಂಡನ್ನಿನ ಬಹಳ ಪ್ರಸಿದ್ಧವಾದ ‘ಇಂಪೀರಿಯಲ್ ಡಿಫೆನ್ಸ್ ಕಾಲೇಜಿಗೆ’ ತರಬೇತಿಗೆ ಕಳಿಸಿತು. ಈ ಸಾಧನೆ ಮಾಡಿದ ಕೇವಲ ಎರಡನೆಯ ಭಾರತೀಯ ಕಾರಿಯಪ್ಪ ಅವರು. ಆದರೆ ಅವರ ನಿಜವಾದ ಹೋರಾಟದ ವಿರಾಟ್ ಪರಿಚಯವನ್ನು ಭಾರತವು ಕಂಡದ್ದು ಸ್ವಾತಂತ್ರ್ಯವನ್ನು ಪಡೆದ ನಂತರವೇ!

ಭಾರತದ ಕೇವಲ ಎರಡನೆಯ ಕಮಾಂಡರ್ ಇನ್ ಚೀಫ್

ಕ್ಯಾಪ್ಟನ್, ಮೇಜರ್, ಲೆಫ್ಟಿನೆಂಟ್, ಕರ್ನಲ್ ಮತ್ತು ಬ್ರಿಗೇಡಿಯರ್ ಈ ಎಲ್ಲಾ ಸೇನೆಯ ಅಧಿಕಾರಿ
ಹುದ್ದೆಗಳನ್ನು ಅವರು ದೇಶವು ಸ್ವಾತಂತ್ರ್ಯ ಪಡೆಯುವ ಮೊದಲೇ ಪಡೆದಿದ್ದರು ಜನರಲ್‌ ಕಾರ್ಯಪ್ಪ ಅವರು. 1947ರ ಮೊದಲ ಭಾರತ ಪಾಕ್ ಯುದ್ಧದಲ್ಲಿ ಅವರದ್ದು ದಿಟ್ಟ ಹೋರಾಟ. ಆ ಯುದ್ಧವನ್ನು ಭಾರತವು ಗೆದ್ದಿತ್ತು. ಕಾರ್ಗಿಲ್, ಝೋಜೀಲ ಮತ್ತು ದ್ರಾಸ್ ಪ್ರಾಂತ್ಯಗಳನ್ನು ಭಾರತದ ಗಡಿ ಒಳಗೆ ತರುವಲ್ಲಿ ನಿರ್ಣಾಯಕ ಹೋರಾಟ ಮಾಡಿದ್ದು ಕಾರಿಯಪ್ಪ. ಇದನ್ನು ಪರಿಗಣಿಸಿ ಭಾರತ ಸರಕಾರ ಅವರನ್ನು ಸ್ವತಂತ್ರ ಭಾರತದ ಮೊದಲ ‘ಕಮಾಂಡರ್ ಇನ್ ಚೀಫ್’ ಆಗಿ ನೇಮಕ ಮಾಡಿತು.

ಭಾರತೀಯ ಸೇನೆಯಲ್ಲಿ ಇತ್ತು ರಾಷ್ಟ್ರ ಪ್ರೇಮದ ಕೊರತೆ!

ಆಗ ಭಾರತ ಸೇನಾಪಡೆಯ ಮನಸ್ಥಿತಿಯು ಎಷ್ಟು ಹಾಳಾಗಿತ್ತು ಅಂದರೆ ಹೆಚ್ಚಿನ ಯೋಧರು ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ದೀರ್ಘ ಕಾಲ ಇದ್ದವರು. ರಾಷ್ಟ್ರಪ್ರೇಮದ ಒರತೆಯು ಅವರಲ್ಲಿ ಬತ್ತಿ ಹೋಗಲು ಆರಂಭವಾಗಿತ್ತು. ಹೋರಾಟದ ಕೆಚ್ಚು ನಿಧಾನಕ್ಕೆ ಕಡಿಮೆ ಆಗುತ್ತಿತ್ತು. ಬ್ರಿಟಿಷ್ ಸೇನೆಯನ್ನು ದಾಸ್ಯದ ಮನಸ್ಥಿತಿಯಿಂದ ಭಾರತದ ಕ್ಷಾತ್ರದ ಮನಸ್ಥಿತಿಗೆ ತರಲು ಕಾರಿಯಪ್ಪ ತುಂಬಾ ಶ್ರಮವನ್ನು ಹಾಕಿದರು. ಜಾತಿ, ಮತ, ಧರ್ಮಗಳ ಆಧಾರದಲ್ಲಿ ಆಗುತ್ತಿದ್ದ ಸೇನೆಯ ನೇಮಕಾತಿಯನ್ನು ಬದಲಾಯಿಸಿ ಎಲ್ಲರಿಗೂ ‘ತೆರೆದ ಬಾಗಿಲ’ ನೇಮಕಾತಿಯನ್ನು ಆರಂಭ ಮಾಡಿದವರು ಅವರು. ಮುಂದಿನ ಹಲವು ದಶಕಗಳ ಕಾಲ ಭಾರತ ಸೇನೆಯನ್ನು ಗಟ್ಟಿ ಗೊಳಿಸುವ ವಿಷನ್ ಅವರಲ್ಲಿ ಇತ್ತು. ಸ್ವತಂತ್ರ ಭಾರತದ ಮೊದಲ ಸೇನೆಯನ್ನು ಮುಂದಿನ ಹತ್ತಾರು ಯುದ್ಧ ಮತ್ತು ಹೋರಾಟಗಳಿಗೆ ಸಿದ್ಧ ಪಡಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ.

1953ರಲ್ಲಿ ಅವರು ಭಾರತೀಯ ಸೇನೆಯಿಂದ ನಿವೃತ್ತರಾದರು. ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಿಗೆ ಹೈ ಕಮೀಷನರ್ ಆಗಿ ಅವರು ಸೇವೆ ಮಾಡಿದರು. ಮುಂದೆ 1965 ಮತ್ತು 1971ರ ಯುದ್ಧಗಳ ಸಂದರ್ಭದಲ್ಲಿ ಭಾರತೀಯ ಸೇನೆಯ ಆತ್ಮವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಅವರನ್ನು ಸೇನೆ ಕರೆಸುತ್ತಿತ್ತು. ಆಗ ಅವರ ಭಾಷಣ ‘ರಾಷ್ಟ್ರ ಮೊದಲು’ ಎಂಬ ಘೋಷಣೆಯಿಂದ ಶ್ರೀಮಂತ ಆಗಿರುತ್ತಿತ್ತು! 1986ರಲ್ಲಿ ಅವರು ಸೇನೆಯ ಪರಮೋಚ್ಚ ಪದವಿ ಆಗಿರುವ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿದರು. ಮಾಣೆಕ್ ಷಾ ಅವರು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಆದರೆ ಕಾರಿಯಪ್ಪ ಎರಡನೆಯವರು. ಅವರಿಬ್ಬರ ಧೀರತೆ, ರಾಷ್ಟ್ರ ಪ್ರೇಮವನ್ನು ಎಷ್ಟು ಹೊಗಳಿದರೂ ಅದು ಅತಿಶಯೋಕ್ತಿ ಆಗುವುದಿಲ್ಲ.

ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರಿಯಪ್ಪ

ಉಜ್ವಲ ರಾಷ್ಟ್ರಪ್ರೇಮ ಮತ್ತು ಅಸೀಮ ಕರ್ತವ್ಯ ಪ್ರಜ್ಞೆ

ಕಾರಿಯಪ್ಪ ಅವರ ಕರ್ತವ್ಯಪ್ರಜ್ಞೆಯ ಹಾಗೂ ಸ್ವಾಭಿಮಾನದ ಬಗ್ಗೆ ನೂರಾರು ನಿದರ್ಶನಗಳು ಸಿಗುತ್ತವೆ. ಅವುಗಳಲ್ಲಿ ಒಂದನ್ನು ನಾನು ನಿಮಗೆ ಹೇಳಲೇಬೇಕು.

ಮುಂದೆ ಕಾರಿಯಪ್ಪ ಅವರ ಪುತ್ರ ನಂದಾ ಕಾರಿಯಪ್ಪ ಅವರು ಕೂಡ ಭಾರತ ಸೇನೆಗೆ ಸೇರುತ್ತಾರೆ. ಸ್ಕ್ವಾಡ್ರನ್ ಲೀಡರ್ ಹುದ್ದೆಗೆ ಏರುತ್ತಾರೆ. 35 ವರ್ಷದ ನಂದಾ ಕಾರಿಯಪ್ಪ 1965ರ ಭಾರತ ಪಾಕಿಸ್ಥಾನ ಯುದ್ಧದಲ್ಲಿ ಹೋರಾಡುತ್ತಾರೆ. ಅವರಿದ್ದ ಯುದ್ಧ ವಿಮಾನವನ್ನು ಪಾಕ್ ಗಡಿಯಲ್ಲಿ ಪಾಕಿಸ್ಥಾನದ ಸೇನೆಯು ಹೊಡೆದು ಉರುಳಿಸಿತು. ಗಾಯಗೊಂಡ ನಂದಾ ಮತ್ತು ಇತರ ನಾಲ್ಕು ಸೈನಿಕರನ್ನು ಪಾಕ್ ಸೇನೆಯು ಯುದ್ಧ ಕೈದಿಗಳಾಗಿ ಬಂಧಿಸಿತು. ವಿಚಾರಣೆಯ ಹಂತದಲ್ಲಿ ನಂದಾ ತಪ್ಪಿಯೂ ತಾನು ಕಾರಿಯಪ್ಪ ಅವರ ಮಗ ಎಂದು ಹೇಳುವುದಿಲ್ಲ. ಆದರೆ ಪಾಕ್ ಸೇನೆಗೆ ಅವರು ಕಾರಿಯಪ್ಪನವರ ಮಗ ಎಂದು ಗೊತ್ತಾಗುತ್ತದೆ.

ಅವನು ನನ್ನ ಮಗ ಅಲ್ಲ, ಭಾರತದ ಮಗ ಎಂದು ಬಿಟ್ಟರು ಕಾರ್ಯಪ್ಪ

ಆಗ ಪಾಕ್ ಸೇನಾಪಡೆಯ ಮುಖ್ಯಸ್ಥ ಆಗಿದ್ದವರು ಆಯೂಬ್ ಖಾನ್ ಅವರು. ಅವರು ಎರಡನೇ ವಿಶ್ವ ಯುದ್ಧದ ಹೊತ್ತಲ್ಲಿ ಕಾರಿಯಪ್ಪ ಅವರ ದಳದಲ್ಲಿ ಸೈನಿಕರಾಗಿ ಇದ್ದವರು ಮತ್ತು ಕಾರಿಯಪ್ಪ ಅವರ ಬಗ್ಗೆ ತುಂಬಾ ಗೌರವ ಹೊಂದಿದ್ದವರು. ಅವರು ನೇರವಾಗಿ ಕಾರಿಯಪ್ಪ ಅವರಿಗೆ ಕರೆ ಮಾಡಿ “ನಿಮ್ಮ ಮಗನನ್ನು ನಮ್ಮ ಸೇನೆ ಯುದ್ಧ ಕೈದಿಯಾಗಿ ಬಂಧಿಸಿದೆ. ಅವರು ನಿಮ್ಮ ಮಗ ಎಂದು ಗೊತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿ. ಅವರನ್ನು ತಕ್ಷಣ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುತ್ತೇವೆ” ಎಂದರು.

That’s the Spirit of Field Marshal KARIYAPPA

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಜ್ಯೋತಿ ರೆಡ್ಡಿ ಎಂಬ ಅನಾಥ ಹುಡುಗಿ ಅಮೆರಿಕನ್‌ ಕಂಪನಿಯ ಸಿಇಒ ಆದ ಕಥೆ!

ಆಗ ಕಾರಿಯಪ್ಪ ಅವರು ಕೊಡಗಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಅವರ ಸಿಡಿಲಿನ ಉತ್ತರವು ಹೀಗಿತ್ತು. “ಮಿಸ್ಟರ್ ಖಾನ್, ನೀವು ತಪ್ಪುತಿಳಿದಿದ್ದೀರಿ. ನಂದಾ ನನ್ನ ಮಗನಲ್ಲ! ಅವನು ಸೇನೆಗೆ ಸೇರಿದ ತಕ್ಷಣ ಭಾರತ ಮಾತೆಯ ಮಗನಾಗಿದ್ದಾನೆ. ಬಿಡುಗಡೆ ಮಾಡುವುದಾದರೆ ಎಲ್ಲಾ ಐದು ಸೈನಿಕರನ್ನು ಮಾಡಿ. ಇಲ್ಲವಾದರೆ ಯಾರನ್ನೂ ಬೇಡ! ನನ್ನ ಮಗ ಎಂಬ ವಿಶೇಷ ಪರಿಗಣನೆ ಬೇಡ!” ಎಂದು ಫೋನ್ ಇಟ್ಟಿದ್ದರು. ಮುಂದೆ ಪಾಕಿಸ್ಥಾನದ ಸೇನೆಯು ಐದು ಭಾರತೀಯ ಸೈನಿಕರನ್ನು ಕೂಡ ಬಿಡುಗಡೆ ಮಾಡಿತು.

ಅವರು 1993 ಮೇ 15ರಂದು ತಮ್ಮ ಐದು ನಕ್ಷತ್ರಗಳ ಯೂನಿಫಾರ್ಮ್ ಕಳಚಿ ಭೂಮಿಯಿಂದ ನಿರ್ಗಮಿಸಿದರು. ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂಬ ಆಗ್ರಹ ಪೂರ್ವಕ ಹೋರಾಟ ಈಗ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದ್ದು ಆ ಪ್ರಶಸ್ತಿಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅತ್ಯಂತ ಅರ್ಹರು ಎಂದು ನನ್ನ ಭಾವನೆ. ಜೈ ಹಿಂದ್!

Exit mobile version