Site icon Vistara News

ರಾಜ ಮಾರ್ಗ ಅಂಕಣ : ಡಾ. ಪ್ರೇಮಾ ಧನರಾಜ್: ಪೂರ್ತಿ ಸುಟ್ಟೇ ಹೋಗಿದ್ದ ಆಕೆ ನಿಜಕ್ಕೂ ಬೆಂಕಿಯಲ್ಲಿ ಅರಳಿದ ಹೂವು!

Dr Prema Dhanraj with Vidya Balan

ಡಾ. ಪ್ರೇಮಾ ಧನರಾಜ್ (Dr. Prema Dhanraj) ಮೂಲತಃ ತಮಿಳುನಾಡಿನ ವೆಲ್ಲೋರಿನವರು (Vellore in Tamilnadu). ಹೆತ್ತವರ ಅತ್ಯಂತ ಮುದ್ದಿನ ಮಗಳು. ಆಕೆ ಎಂಟು ವರ್ಷಗಳವರೆಗೆ ಬೇರೆ ಎಲ್ಲ ಹುಡುಗಿಯರ ಹಾಗೆ ಚೂಟಿ ಆಗಿದ್ದವರು. ಆದರೆ ಅದೊಂದು ದಿನ ಭಯಾನಕ ಘಟನೆ ನಡೆದು ಆಕೆಯ ಅರ್ಧ ದೇಹ ಬೆಂಕಿಯಲ್ಲಿ (Half Body burnt in Fire Tragedy) ಸುಟ್ಟು ಹೋಯಿತು. ಮುಂದೆ ಆಕೆ ಮಾಡಿದ ಹೋರಾಟ ಕಲ್ಲನ್ನೂ ಕರಗಿಸುತ್ತದೆ! ಡಾಕ್ಟರ್‌ ಆಗಿ ಆಕೆ ತನ್ನಂತೆ ಸುಟ್ಟು ಹೋದವರಿಗೆ ಮಾಡಿದ ಸೇವೆ, ಬದುಕು ಸಾವಿರಾರು ಮಂದಿಗೆ ಸ್ಫೂರ್ತಿ (ರಾಜ ಮಾರ್ಗ ಅಂಕಣ) ಆಗಬಲ್ಲದು!

1965ರ ಒಂದು ಮುಂಜಾನೆ….

ಏನಾಯಿತು ಅಂದರೆ ಆ ಮಗು ಮನೆಯ ಕಿಚನ್ ರೂಮಿನಲ್ಲಿ ಆಟ ಆಡಿಕೊಂಡು ಇದ್ದಾಗ ಸ್ಟವ್ ಸಿಡಿದು ಮಗುವಿನ ದೇಹದಲ್ಲಿ ಆಳವಾದ ಗಾಯಗಳ ಆದವು. ಅರ್ಧ ದೇಹಕ್ಕಿಂತ ಹೆಚ್ಚು ಸುಟ್ಟ ಗಾಯಗಳನ್ನು ಹೊತ್ತುಕೊಂಡು ಬದುಕುವುದು ಕಷ್ಟ ಎಂದರು ವೈದ್ಯರು. ಪ್ರೇಮಾ ಅವರ ಇಡೀ ಮುಖ, ಭುಜಗಳು, ತಲೆಕೂದಲು ಎಲ್ಲವೂ ಸುಟ್ಟು ಹೋಗಿದ್ದವು. ಅವರ ಗುರುತು ಹಿಡಿಯುವುದು ಎಲ್ಲರಿಗೂ ಕಷ್ಟ ಆಯಿತು.

ಆಕೆಯನ್ನು ವೆಲ್ಲೋರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ (Vellore Cristian Medical College) ಚಿಕಿತ್ಸೆಗೆ ಸೇರಿಸಲಾಯಿತು. ಅಲ್ಲಿ ಸುದೀರ್ಘ ಅವಧಿಯ ಚಿಕಿತ್ಸೆ, ಸರ್ಜರಿಗಳು ನಡೆದವು. ಜೀವನ್ಮರಣದ ಹೋರಾಟದಲ್ಲಿ ಒಂದು ಹಂತಕ್ಕೆ ಪ್ರೇಮಾ ಗೆದ್ದರು. ಡಾಕ್ಟರ್ ಜೋಸೆಫ್ ಅವರು ಚಿಕಿತ್ಸೆ ಕೊಟ್ಟದ್ದು ಮಾತ್ರವಲ್ಲ, ಆಕೆಯಲ್ಲಿ ಮತ್ತೆ ಧೈರ್ಯ, ಆತ್ಮವಿಶ್ವಾಸ ಎಲ್ಲವನ್ನೂ ತುಂಬಿದರು. ಆಕೆಯ ದೇಹದ ಮೇಲೆ ಮುಂದಿನ ಆರು ವರ್ಷಗಳ ಅವಧಿಯಲ್ಲಿ ಒಂದರ ಮೇಲೆ ಒಂದರ ಹಾಗೆ 14 ಸರ್ಜರಿಗಳು ನಡೆದವು! ಚರ್ಮವನ್ನು ಮತ್ತೆ ಜೋಡಿಸುವ ಕೆಲಸ ತುಂಬಾ ನೋವು ಕೊಟ್ಟಿತು. ಪ್ರೇಮಾ ಎಲ್ಲವನ್ನೂ ಅವುಡು ಕಚ್ಚಿ ಸಹಿಸಿಕೊಂಡರು. ಗುಣಮುಖರಾಗಿ ಬೆಂಗಳೂರಿನ ಮನೆಗೆ ಬಂದರು.

ಅವರಮ್ಮ ಮನೆಯಲ್ಲಿ ಇದ್ದ ಎಲ್ಲ ಕನ್ನಡಿಗಳನ್ನು ಅಡಗಿಸಿ ಇಟ್ಟರು!

ಅವಳ ಮುಖವು ವಿಕಾರ ಆಗಿ ಆಕೆಯ ಗುರುತು ಯಾರಿಗೂ ದೊರೆಯಲಿಲ್ಲ. ಅಮ್ಮ ಮನೆಯಲ್ಲಿ ಇದ್ದ ಎಲ್ಲ ಕನ್ನಡಿಗಳನ್ನು ಅಡಗಿಸಿ ಇಟ್ಟರು. ಆದರೂ ಮುಂದೆ ಒಂದು ದಿನ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿದ ಪ್ರೇಮಾ ಕಿಟಾರ್ ಎಂದು ಕಿರುಚಿದಳು. ಆಗ ಅಮ್ಮನೇ ಮತ್ತೆ ನೆರವಿಗೆ ಬಂದರು.

‘ಇನ್ನು ಮುಂದೆ ಇದೇ ನಿನ್ನ ಮುಖ ಮಗಳೇ. ನೀನು ಇದರೊಂದಿಗೆ ಬದುಕಬೇಕು. ನೀನು ಆಂತರಿಕ ಸೌಂದರ್ಯ ಬೆಳೆಸಿಕೊಂಡರೆ ಜಗತ್ತಿನ ಮೋಸ್ಟ್ ಬ್ಯೂಟಿಫುಲ್‌ ಸೋಲ್ ಆಗುತ್ತೀ!’: ಮಗಳಿಗೆ ಅಮ್ಮನ ಮಾತು ತುಂಬಾ ನಾಟಿತು. ಆಕೆ ಮತ್ತೆ ಶಾಲೆಗೆ ಹೋಗಿ ಬಹಳ ಗಂಭೀರವಾಗಿ ಓದಲು ಆರಂಭ ಮಾಡಿದರು.

ಆಕೆಗೆ ವೈದ್ಯೆ ಆಗುವ ಕನಸು ಚಿಗುರಿದ್ದೇ ಆಸ್ಪತ್ರೆಯಲ್ಲಿ

ಆಸ್ಪತ್ರೆಯಿಂದ ಬಿಡುಗಡೆ ಆದ ನಂತರವೂ ಆಕೆಗೆ ಶಾಲೆಗೆ ತಕ್ಷಣ ಹೋಗಲು ಆಗಿರಲಿಲ್ಲ. ತುಂಬಾ ಕ್ಲಾಸ್ ಕಳೆದುಕೊಂಡಾಗ ಹೆತ್ತವರು ಮತ್ತು ಸಹಪಾಠಿಗಳು ಆಕೆಯ ನೆರವಿಗೆ ಬಂದರು. ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಸ್ವಾರ್ಥವಿಲ್ಲದ ಸೇವೆ ಅವರ ಗುರಿಯನ್ನು ಗಟ್ಟಿ ಮಾಡಿತು. ಅವರು ವೈದ್ಯೆಯಾಗಿ ಸೇವೆ ಸಲ್ಲಿಸಬೇಕು ಎಂಬ ಹಠಕ್ಕೆ ಬಿದ್ದರು. ಗಂಭೀರವಾಗಿ ಓದಿದರು. ಅವರಿಗೆ ಅವರ ಆಸೆಯಂತೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospital in Hubballi) ಮೆಡಿಕಲ್ ಶಿಕ್ಷಣಕ್ಕೆ ಸೀಟು ದೊರೆಯಿತು.

ಅವರ ದೇಹವನ್ನು ಅರ್ಧ ಸುಟ್ಟ ಬೆಂಕಿ ಅವರ ಒಳಗಿನ ಅಂತಃಸತ್ವವನ್ನು ಸ್ಟ್ರಾಂಗ್ ಮಾಡಿತ್ತು. ವೆಲ್ಲೋರ್ ಆಸ್ಪತ್ರೆಯಲ್ಲಿ ಅವರ ಪ್ರಾಣ ಉಳಿಸಿದ್ದ ಡಾಕ್ಟರ್ ಜೋಸೆಫ್ ಇಲ್ಲಿ ಕೂಡ ಅವರ ಮಾರ್ಗದರ್ಶಕರಾಗಿ ನಿಂತರು. ಪ್ರೇಮಾ ತನ್ನ ಕನಸನ್ನು ಸಾಯಲು ಬಿಡದೆ ಹಗಲು ಇರುಳು ಒಂದು ಮಾಡಿ ಓದಿ ವೈದ್ಯರಾದರು. ಮುಂದೆ ಅವರ ಆಸಕ್ತಿಯ ಸರ್ಜರಿ ವಿಭಾಗವನ್ನು ಅಧ್ಯಯನ ಮಾಡಿ ಅವರು ಪ್ಲಾಸ್ಟಿಕ್ ಸರ್ಜನ್ (Plastic Surgeon) ಆಗಿ ಹೊರಗೆ ಬಂದರು. ಅಮೆರಿಕಾದಲ್ಲಿ, ಗ್ಲಾಸ್ಗೋದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರ ಕನಸಿನಂತೆ ನಾಡಿನ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಆಗಿ ಹೊರಬಂದರು.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ದೇಶದ ಅತಿಪುರಾತನ ಫಿಲಂ ಸ್ಟುಡಿಯೋ AVM ರೂಪುಗೊಂಡ ಕಥೆ

ನಾಡು ಕಂಡ ಶ್ರೇಷ್ಠ ಪ್ಲಾಸ್ಟಿಕ್ ಸರ್ಜನ್ ಡಾಕ್ಟರ್ ಪ್ರೇಮಾ

ಅವರ ಸುಟ್ಟುಹೋದ ದೇಹಕ್ಕೆ ಚಿಕಿತ್ಸೆ ನೀಡಿದ್ದ ವೆಲ್ಲೋರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಸೇವೆ ಆರಂಭ ಮಾಡಿದ ಪ್ರೇಮಾ ಮುಂದೆ ಅದೇ ಕಾಲೇಜಿನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಆಯ್ಕೆ ಆದರು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ (Rajarajeshwari Medical college in Bangalore) ಕೂಡ ಸೇವೆ ನೀಡಿದರು. ಅಮೆರಿಕಾದ ಟೆಕ್ಸಾಸ್ ಕಾಲೇಜಿನಲ್ಲಿ ವಿಸಿಟಿಂಗ್ ಪ್ರೊಫೆಸರ್ ಆದರು. ಸುಮಾರು ಮೂವತ್ತು ವರ್ಷಗಳ ಕಾಲ ಬೆಂಕಿಯಲ್ಲಿ ಸುಟ್ಟುಹೋದ ದೇಹಗಳನ್ನು ಸರ್ಜರಿ ಮೂಲಕ ಸರಿಪಡಿಸುವುದು, ಅವರಲ್ಲಿ ಮತ್ತೆ ಜೀವನೋತ್ಸಾಹ ತುಂಬಿಸುವುದು ಇವುಗಳನ್ನು ಆಕೆ ತುಂಬಾ ಪ್ರೀತಿಯಿಂದ ಮಾಡಿದರು. ಮದುವೆಯನ್ನು ಮರೆತರು. ಬೆಂಕಿಗೆ ಬಿದ್ದ ಬೆಂದ ಜೀವಗಳನ್ನು ಮತ್ತೆ ಬದುಕಿನ ಹಳಿಗೆ ತರುವುದು ಸುಲಭ ಅಲ್ಲ. ಅದನ್ನವರು ಚಂದವಾಗಿ ಮಾಡಿದ್ದಾರೆ. ಅವರ PLASTIC SURGERY MADE EASY ಪುಸ್ತಕ ತುಂಬ ಜನಪ್ರಿಯ ಆಗಿದೆ.

‘ಅಗ್ನಿ ರಕ್ಷಾ’ ಎಂಬ NGO ಸ್ಥಾಪನೆ

ಡಾಕ್ಟರ್ ಪ್ರೇಮಾ ಅವರು ಅಗ್ನಿ ರಕ್ಷಾ ಎಂಬ ಹೆಸರಿನ ಸರಕಾರೇತರ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಸುಟ್ಟ ಗಾಯಾಳುಗಳ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ಆರ್ಥಿಕ ನೆರವು ನೀಡುವ ಆ ಸಂಸ್ಥೆಯನ್ನು ಅವರು ತುಂಬಾ ಪ್ರೀತಿಯಿಂದ ಈಗ ಮುನ್ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ಸ್ಟಾರ್‌ ಪಟ್ಟ ಶಾಪ ಅನ್ನೋ ರಜನಿಗೆ ಜನರ ಮಧ್ಯೆ ಬದುಕೋದು ಇಷ್ಟವಂತೆ; ಇನ್ನೂ ಏನೇನೋ ಆಸೆ!

ಭರತ ವಾಕ್ಯ

ಡಾಕ್ಟರ್ ಪ್ರೇಮಾ ಧನರಾಜ್ ಅವರ ಬದುಕು ತುಂಬಾ ಸ್ಫೂರ್ತಿದಾಯಕ ಆಗಿದ್ದು ಅವರು ಸಾವಿರಾರು ನೊಂದವರ ಬದುಕಿನಲ್ಲಿ ಬೆಳಕು ತುಂಬಿದ್ದಾರೆ. ಸ್ವತಃ ಅಗ್ನಿ ಅಪಘಾತದ ವಿಕ್ಟಿಮ್ ಆಗಿರುವ ಆಕೆಯು ಈಗ ಅಗ್ನಿ ಅಪಘಾತದ ಸಂತ್ರಸ್ತರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ನಿಜಕ್ಕೂ ಅದ್ಭುತವೇ ಆಗಿದೆ.

Exit mobile version