ಕೃಷ್ ಅಂದರೆ ಸಂಸ್ಕೃತ ಭಾಷೆಯಲ್ಲಿ ಆಕರ್ಷಣೆ ಎಂದರ್ಥ. ಹಾಗೆಯೇ ಕೃಷ್ಣ ಎಂದರೆ ಭಾರತೀಯರಿಗೆ ಏನೋ ಅದ್ಭುತ ಆಕರ್ಷಣೆ. ರಾಮನನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ಆದರೆ ಕೃಷ್ಣನನ್ನು, ಅವನ ಬದುಕನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ! ನನ್ನ ಹಾಗೆ ನೀವು ಬದುಕಿ ಎಂದು ರಾಮ ಹೇಳಬಹುದು. ನಾನು ಬದುಕಿದ ಹಾಗೆ ನೀವು ಬದುಕಿ ಎಂದು ಕೃಷ್ಣ ಹೇಳುವುದಿಲ್ಲ! ನಮಗೆ ಬದುಕಲು ಸಾಧ್ಯವೂ ಇಲ್ಲ!
ನಾನಿಂದು ಹೇಳಲು ಹೊರಟಿದ್ದು ಕೃಷ್ಣ ಮತ್ತು ಕೃಷ್ಣಾ ಅವರ ಮಧುರ ಸಂಬಂಧದ ಕತೆಯನ್ನು. ಕೃಷ್ಣಾ ಎಂದರೆ ದ್ರೌಪದಿ. ಅವಳು ಅಗ್ನಿಯಿಂದ ಎದ್ದು ಬಂದ ಕಾರಣ ಅವಳ ಬಣ್ಣ ಕಪ್ಪು. ಕೃಷ್ಣ ಕೂಡ ಕಪ್ಪು. ಆದ್ದರಿಂದ ಅವರಿಬ್ಬರದ್ದೂ ಒಳ್ಳೆಯ ಹೋಲಿಕೆ.
ದ್ರೌಪದಿ ರಕ್ಷೆಯನ್ನು ಕಟ್ಟಿ ಅಣ್ಣನಾಗಿ ಸ್ವೀಕರಿಸಿದ್ದು ಶ್ರೀ ಕೃಷ್ಣನನ್ನು! ಅದೂ ಆಕಸ್ಮಿಕವಾಗಿ. ಒಮ್ಮೆ ಕೃಷ್ಣ ಕತ್ತಿಯಿಂದ ಯಾವುದೋ ಕೆಲಸ ಮಾಡುತ್ತಿದ್ದ ಹೊತ್ತು ಕತ್ತಿ ತಾಗಿ ಆತನ ಬೆರಳಿಗೆ ಗಾಯವಾಗಿ ರಕ್ತ ಸುರಿಯುತ್ತದೆ. ಆಗ ಅಲ್ಲಿಯೇ ಇದ್ದ ದ್ರೌಪದಿಯು ಆತಂಕಗೊಂಡು ತನ್ನ ಸೀರೆಯ ಸೆರಗಿನ ಒಂದು ತುಂಡು ಸೀಳಿ ತೆಗೆದು ಆತನ ಬೆರಳಿಗೆ ಕಟ್ಟಿದಳು. ಅದನ್ನೇ ರಕ್ಷೆಯಾಗಿ ಕೃಷ್ಣ ತೆಗೆದುಕೊಂಡ ಮತ್ತು ಅಣ್ಣನಾಗಿ ಹೊಣೆಯನ್ನು ಹೊತ್ತುಕೊಂಡ.
ಆ ರಕ್ಷಾಬಂಧನದ ಋಣವನ್ನು ಕೃಷ್ಣ ಹಿಂದೆ ಕೊಟ್ಟದ್ದು ಆಕೆಯ ವಸ್ತ್ರಾಪಹರಣ ಸಂದರ್ಭದಲ್ಲಿ. ಹಸ್ತಿನಾವತಿಯ ಅರಮನೆಯಲ್ಲಿ ದ್ಯೂತವನ್ನು ಸೋತ ಧರ್ಮರಾಯ ಪಣವಾಗಿ ಇಟ್ಟದ್ದು ದ್ರೌಪದಿಯನ್ನು. ಅಂತಃಪುರದಲ್ಲಿ ಏಕವಸ್ತ್ರವನ್ನು ಧರಿಸಿ ಮೈಮುದ್ದೆ ಮಾಡಿ ಕುಳಿತಿದ್ದ ದ್ರೌಪದಿಯನ್ನು ದುಶ್ಯಾಸನನು ಆಸ್ಥಾನಕ್ಕೆ ಎಳೆದುಕೊಂಡು ತಂದು ಸೀರೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಪಾಂಡವರು ತಲೆತಗ್ಗಿಸಿ ಕುಳಿತುಕೊಳ್ಳುತ್ತಾರೆ. ಭೀಷ್ಮ, ದ್ರೋಣ ಇವರಿಗೆಲ್ಲ ಅನಿವಾರ್ಯತೆಗಳು ಇದ್ದು ಸುಮ್ಮನೆ ಕೂತರು. ಆಗ ಅದೇ ಕೃಷ್ಣನು ದ್ರೌಪದಿಗೆ ಅಕ್ಷಯ ವಸ್ತ್ರವನ್ನು ಕೊಟ್ಟು ಆಕೆಯ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡುತ್ತಾನೆ. ಆಕೆ ತನಗೆ ಕಟ್ಟಿದ ರಕ್ಷೆಯ ಋಣವನ್ನು ತೀರಿಸುತ್ತಾನೆ.
ಅಲ್ಲಿಯೂ ಒಂದು ಸ್ವಾರಸ್ಯ ಇದೆ. ಆರಂಭದ ಸ್ವಲ್ಪ ಹೊತ್ತು ದ್ರೌಪದಿ ವಸ್ತ್ರಾಪಹರಣ ಆಗುವ ಸಂದರ್ಭ ಆಕೆಯು ರೋದಿಸುತ್ತಾಳೆ, ಬೊಬ್ಬೆ ಹೊಡೆಯುತ್ತಾಳೆ. ಆದರೆ ಕೃಷ್ಣ ಬರುವುದೇ ಇಲ್ಲ. ಕೊನೆಗೆ ಕೃಷ್ಣ ತಡವಾಗಿ ಬರುತ್ತಾನೆ. ಅದನ್ನೂ ದ್ರೌಪದಿ ಕೇಳುತ್ತಾಳೆ – ಅಣ್ಣಾ, ಯಾಕೆ ತಡವಾಗಿ ಬಂದೆ?
ಅದಕ್ಕೆ ಕೃಷ್ಣ ಹೇಳಿದ ಉತ್ತರ ಕೇಳಿ – ದ್ರೌಪದಿ. ಆರಂಭದ ಕೆಲವು ಕ್ಷಣ ನೀನು ಸೀರೆಯ ಸೆರಗನ್ನು ಗಟ್ಟಿಯಾಗಿ ಕೈಯ್ಯಲ್ಲಿ ಹಿಡಿದುಕೊಂಡು ನನ್ನನ್ನು ಕರೆದರೆ ನಾನು ಯಾಕೆ ಬರುತ್ತೇನೆ? ನಿನಗೆ ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಬಲ್ಲೆ ಎಂಬ ಅಹಂ ಇತ್ತು! ಆದರೆ ಯಾವಾಗ ನೀನು ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಕೃಷ್ಣ ಎಂದು ಕರೆದೆಯೋ ಆಗ ನಾನು ಓಡಿ ಬರಲೇಬೇಕಾಯಿತು! ನಾನು ಒಲಿಯುವುದು ಸಂಪೂರ್ಣ ಶರಣಾಗತಿಗೆ, ಹೊರತು ನಾನು ಎಂಬ ಅಹಂಕಾರಕ್ಕೆ ಅಲ್ಲ!
ಎಂತಹ ಅದ್ಭುತ ಉತ್ತರ ನೋಡಿ. ದೇವರು ಒಲಿಯುವುದು ಸಂಪೂರ್ಣ ಶರಣಾಗತಿಗೆ ಹೊರತು ನಮ್ಮ ಅಹಂಕಾರಕ್ಕೆ ಅಲ್ಲ ಎಂದು ಕೃಷ್ಣ ಚಂದವಾಗಿ ಹೇಳಿದ್ದ.
ಮುಂದೆ ಸಂಧಾನಕ್ಕಾಗಿ ಕೃಷ್ಣನು ಹಸ್ತಿನಾವತಿಗೆ ಹೊರಟಾಗ ಎದುರು ಬಂದು ಸಿಟ್ಟು ತೋರಿಸಿದ ದ್ರೌಪದಿಗೆ ಭರವಸೆಯನ್ನು ಕೊಡುತ್ತಾನೆ. ಏನೆಂದರೆ ಈ ಸಂಧಾನವು ಕೇವಲ ನಾಟಕ ಮಾತ್ರ! ನಾನು ಯುದ್ಧವನ್ನೇ ನಿಷ್ಕರ್ಷೆ ಮಾಡಿ ಬರುತ್ತೇನೆ ಎಂದು! ಕೃಷ್ಣ ಈ ಭರವಸೆ ಬೇರೆ ಯಾರಿಗೂ ಕೊಟ್ಟಿರಲಿಲ್ಲ! ಮುಂದೆ ಹಸ್ತಿನಾವತಿಗೆ ಹೋದ ಕೃಷ್ಣನು ಸಂಧಾನವನ್ನು ಮಾಡದೆ ಯುದ್ಧವನ್ನೇ ನಿಶ್ಚಯ ಮಾಡಿ ಬರುತ್ತಾನೆ! ದ್ರೌಪದಿಯ ಭಾವನೆಗಳಿಗೆ ಸ್ಪಂದಿಸುತ್ತಾನೆ.
ಮುಂದೆ ಮಹಾಭಾರತ ಯುದ್ಧ ನಡೆದಾಗ ಎಲ್ಲವನ್ನೂ ತಾನೇ ಸೃಷ್ಟಿ ಮಾಡಿ ಯುದ್ಧವನ್ನು ಗೆಲ್ಲಿಸಿ ದ್ರೌಪದಿಯ ಪ್ರತಿಜ್ಞೆಯನ್ನು ಪೂರ್ತಿ ಮಾಡಿದ್ದು ಇದೇ ಕೃಷ್ಣ! ಕೃಷ್ಣ ತಾನು ಮಾಡುವುದನ್ನು ಮೊದಲು ಹೇಳುವುದಿಲ್ಲ. ಎಲ್ಲವೂ ಅವನು ಯೋಜನೆ ಮಾಡಿದ ಪ್ರಕಾರ ನಡೆಯುತ್ತದೆ. ಕುರುಕ್ಷೇತ್ರ ಯುದ್ಧವೂ ಅದಕ್ಕೆ ಸಾಕ್ಷಿ!
ಕೃಷ್ಣ ಮತ್ತು ಕೃಷ್ಣಾ ಅವರ ಮಧುರ ಸಂಬಂಧವೇ ಮಹಾಭಾರತದ ಪಂಚಾಂಗ ಎಂದು ನನಗೆ ಅನ್ನಿಸುತ್ತದೆ. ಆ ಮಧುರ ಸಂಬಂಧಕ್ಕೆ ಇಂತಹ ನೂರಾರು ಸಾಕ್ಷಿಗಳು ದೊರೆಯುತ್ತವೆ.
ಇದನ್ನೂ ಓದಿ| ರಾಜ ಮಾರ್ಗ | ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!