Site icon Vistara News

ರಾಜ ಮಾರ್ಗ ಅಂಕಣ | ನೇತಾಜಿ ಬಗ್ಗೆ ಒಂದೊಂದು ಮಾತು ಆಡುವಾಗಲೂ ಚರ್ಚಿಲ್‌ ಧ್ವನಿ ನಡುಗ್ತಿತ್ತು! ಅವ್ರು ಹೆದರಿದ್ದೇಕೆ?

Netaji bose

1943ರ ಇಸವಿ ಆಗಸ್ಟ್ ತಿಂಗಳ ಒಂದು ದಿನ. ಆಗ ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಸೇರಿದ್ದರು!
ಒಬ್ಬರು ಸೂರ್ಯ ಮುಳುಗದ ಸಾಮ್ರಾಜ್ಯ ಇಂಗ್ಲೆಂಡ್‌ನ ಪ್ರಧಾನಿ ವಿನಸ್ಟನ್ ಚರ್ಚಿಲ್! ಇನ್ನೊಬ್ಬರು ಅಮೆರಿಕದ ಆಗಿನ ಜನಪ್ರಿಯ ಅಧ್ಯಕ್ಷರಾದ ರೂಸ್‌ವೆಲ್ಟ್‌!
ಒಂದು ಇಡೀ ದಿನ ಇಬ್ಬರೂ ಸೇರಿ ಒಬ್ಬ ಭಾರತೀಯ ನಾಯಕನ ಬಗ್ಗೆ ಮಾತಾಡಿದ್ದರು. ಅವರಿಬ್ಬರೂ ಆಗಿನ ಕಾಲದ ಮಹಾ ಮುತ್ಸದ್ದಿ ಎಂದು ಕರೆಸಿಕೊಂಡವರು!

ಬ್ರಿಟನ್ ಪ್ರಧಾನಿ ಚರ್ಚಿಲ್ ಧ್ವನಿಯಲ್ಲಿ ಆತಂಕ ಎದ್ದು ಕಾಣುತ್ತಿತ್ತು! ಭಾರತದ ಮೇಲೆ ಬ್ರಿಟನ್ ಹಿಡಿತ ಕಳೆದುಕೊಳ್ಳುವ ಭೀತಿಯು ಅವರ ಮುಖದಲ್ಲಿ ಆಗ ಎದ್ದು ಕಾಣುತ್ತಿತ್ತು. ಅವರಿಬ್ಬರೂ ಮಾತಾಡುತ್ತಿದ್ದದ್ದು ಭಾರತದ ಸ್ವಾತಂತ್ರ್ಯದ ಕಿಡಿ ಎಂದು ಕರೆಸಿಕೊಂಡ ನೇತಾಜಿ ಸುಭಾಸಚಂದ್ರ ಬೋಸರ ಬಗ್ಗೆ!

ಬ್ರಿಟನ್ ಪ್ರಧಾನಿ ಚರ್ಚಿಲ್ ನೇತಾಜಿ ಬಗ್ಗೆ ಹೇಳುತ್ತಾ ಹೋದ ಮಾತುಗಳನ್ನು ಕೇಳಿ.
ಆ ಮನುಷ್ಯ ಅತ್ಯಂತ ಅಪಾಯಕಾರಿ. ಆತನನ್ನು ಯಾಮಾರಿಸಲು ಸಾಧ್ಯವೇ ಇಲ್ಲ! ಅವನ ಮೈಯ್ಯಲ್ಲಿ ಸೈತಾನ ಹೊಕ್ಕಿದ್ದಾನೆ. ಅವನೊಬ್ಬ ಸಂಹಾರಕ ಮತ್ತು ಉದ್ರೇಕಕಾರಿ ಶಕ್ತಿ. ಅವನು ನಮ್ಮ ಇಂಗ್ಲೆಂಡಿಗೆ ಬಂದು ಐಸಿಎಸ್ ಪರೀಕ್ಷೆ ಮಾಡಿ ಹೋಗಿದ್ದಾನೆ. ನಾಲ್ಕನೇ ರಾಂಕ್ ಕೂಡ ಪಡೆದಿದ್ದಾನೆ. ಆದರೆ ನಮ್ಮ ಸರಕಾರದಲ್ಲಿ ನೌಕರಿ ಮಾಡಲು ಅವನು ತಯಾರಿಲ್ಲ ಎಂದು ಎದ್ದು ಹೋಗಿದ್ದಾನೆ. ಇಡೀ ಭಾರತದ ಯುವಕರು ಅವನ ಜೊತೆ ಇದ್ದಾರೆ. ಭಾರತದ ಎಲ್ಲರ ಹೃದಯದಲ್ಲಿ ಅವನು ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಿದ್ದಾನೆ. ಭಾರತೀಯ ಯುವಕರು ಅವರನ್ನು ಮುಂದಿನ ಪ್ರಧಾನಿ ಎಂಬಂತೆ ನೋಡುತ್ತಿದ್ದಾರೆ!

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವನು ಸ್ಪರ್ಧೆ ಮಾಡಿ ಗಾಂಧೀಜಿಯವರ ಅಭ್ಯರ್ಥಿಯನ್ನು ಸೋಲಿಸಿದ್ದಾನೆ! 1930ರ ಜನವರಿ 26ರಂದು ಕಾಂಗ್ರೆಸ್ ಪಕ್ಷವು ಅವನ ಪ್ರೇರಣೆಯಿಂದ ‘ಸಂಪೂರ್ಣ ಸ್ವರಾಜ್ ದಿನ’ವನ್ನು ಆಚರಣೆ ಮಾಡಿದೆ! ಆತನು ಭಾರಿ ಧೈರ್ಯಶಾಲಿ. ತಕಲಿ ನೂಲುವುದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಸಾಧ್ಯವಿಲ್ಲ ಎಂದು ಗಾಂಧೀಜಿಗೆ ಪದೇಪದೆ ಸವಾಲು ಹಾಕುತ್ತಾನೆ! ಬಂದೂಕಿನ ಮೊನೆಯಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದಾನೆ! ಎಲ್ಲ ಕಡೆ ಅದನ್ನೇ ಹೇಳುತ್ತಾನೆ. ಅವನಿಗೆ ಶಾಂತಿ ಮಂತ್ರದ ಮೇಲೆ ನಂಬಿಕೆ ಇಲ್ಲ.

ಚರ್ಚಿಲ್‌-ರೂಸ್‌ವೆಲ್ಟ್‌

ನಮ್ಮ ವೈಸರಾಯ್ ಅವನನ್ನು 11 ಬಾರಿ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ! ಆದರೂ ಅವನು ಬುದ್ಧಿ ಕಲಿಯದ ಮಹತ್ವಾಕಾಂಕ್ಷಿ! ಅವನ ಕಲ್ಕತ್ತಾದ ಮನೆಯ ಗೃಹ ಬಂಧನದಿಂದ ಅವನು ನಮ್ಮ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ! ಜರ್ಮನಿ ಮತ್ತು ಇಟೆಲಿಗೆ ಹೋಗಿ ಹಿಟ್ಲರ್ ಮತ್ತು ಮುಸಲೊನಿಯ ಗೆಳೆತನ ಮಾಡಿ ಬಂದಿದ್ದಾನೆ. ಹಿಟ್ಲರ್ ಅವನ ಬಗ್ಗೆ ಭಾರಿ ಮೆಚ್ಚುಗೆಯ ಮಾತು ಹೇಳಿದನಂತೆ! ಮಹಾ ಗಟ್ಟಿತನ ಅವನದ್ದು.

ಸಬ್ ಮೆರೀನ್‌ನಲ್ಲಿ 90 ದಿನಗಳ ಕಾಲ ಪ್ರಯಾಣ ಮಾಡಿ ಜಪಾನ್ ತಲುಪಿದ್ದಾನೆ. ಅಲ್ಲಿ ಎರಡನೇ ಮಹಾಯುದ್ಧಕ್ಕೆ ಹೋಗಿದ್ದ ಬ್ರಿಟಿಷ್ ಇಂಡಿಯಾ ಸೈನ್ಯದ 45,000 ಸೈನಿಕರ ಜೊತೆಗೆ ಮಾತಾಡಿದ್ದಾನೆ! ಅದರಲ್ಲಿ 25,000 ಸೈನಿಕರನ್ನು ಜಪಾನ್ ಸರಕಾರವು ಭಾರತದ ನೆರವಿಗೆ ಕಳುಹಿಸಲು ಒಪ್ಪಿ ಆಗಿದೆ! ಎಂತಹ ಚಾಣಾಕ್ಷ ಅವನು!

ಜಪಾನ್ ಅವನಿಗೆ ವೈಮಾನಿಕ ದಳ, ಮದ್ದು ಗುಂಡು ಎಲ್ಲವನ್ನೂ ಕೊಡಲು ಒಪ್ಪಿದೆ ಎನ್ನುವ ಸುದ್ದಿ ಬಂದಿದೆ. ಅದೇನೋ ‘ಆಜಾದ್ ಹಿಂದ್ ಫೌಜ್’ ಎಂಬ ಸೈನ್ಯ ಕಟ್ಟಿದ್ದಾನಂತೆ! ಸೈನಿಕರಿಗೆ ಆಧುನಿಕ ಶಸ್ತ್ರಗಳ ಬಗ್ಗೆ ತರಬೇತು ಕೊಡುತ್ತಿದ್ದಾನೆ ಎಂಬ ಸುದ್ದಿ ಬಂದಿದೆ.

‘ನನಗೆ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದೆಲ್ಲ ಉರಿ ಚೆಂಡಿನ ಭಾಷಣ ಮಾಡುತ್ತಾನೆ. ಪ್ರತೀ ವಾಕ್ಯದ ಕೊನೆಗೆ ಜೈ ಹಿಂದ್ ಘೋಷಣೆ ಕೂಗುತ್ತಾನೆ! ಸಾವಿರ ಸಾವಿರ ಸೈನಿಕರು ಅವನನ್ನು ದೇವರ ಹಾಗೆ ನೋಡುತ್ತಾರೆ.

‘ಆಜಾದ್ ಹಿಂದ್ ಫೌಜ್’ ಭಾರತಕ್ಕೆ ಹೊರಟಿತು ಎಂದರೆ ನಮ್ಮ ಶತ್ರು ದೇಶಗಳೆಲ್ಲ ಅವನ ನೆರವಿಗೆ ನಿಲ್ಲುತ್ತವೆ. ಅದೇನೋ ‘ಚಲೋ ದಿಲ್ಲಿ’ ಎಂಬ ಘೋಷಣೆಯನ್ನು ತನ್ನ ಸೈನಿಕರಿಗೆ ಕೊಟ್ಟಿದ್ದಾನೆ. ಈ ಯುವಕ ನಮ್ಮ ನಿದ್ದೆ ಕೆಡಿಸಿದ್ದಾನೆ.

ನಮ್ಮದೇ ಬ್ರಿಟಿಷ್ ಇಂಡಿಯಾ ಸೇನೆಯಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು ನಮ್ಮ ವಿರುದ್ಧ ನಿಲ್ಲುತ್ತಾರೆ! ನಮ್ಮ ವಿರುದ್ಧ ಖಂಡಿತ ದಂಗೆ ಏಳುತ್ತಾರೆ. ಅಲ್ಲಿಗೆ ನಾವು ಭಾರತದ ಮೇಲೆ ನಮ್ಮ ಬಿಗಿ ಹಿಡಿತವನ್ನು ಕಳೆದುಕೊಳ್ಳುವುದು ಖಂಡಿತ! ಇದುವರೆಗೆ ನಾವು ಭಾರತದಲ್ಲಿ ಯಾರ ಬಗ್ಗೆ ಕೂಡ ಇಷ್ಟೊಂದು ಆತಂಕ ಪಟ್ಟಿರಲಿಲ್ಲ! ಇವನೊಬ್ಬ ಎಲ್ಲಿಂದ ಬಂದನೋ ಸೈತಾನ? ಎಂದು ಚರ್ಚಿಲ್ ಒಮ್ಮೆ ಉಸಿರು ತೆಗೆದುಕೊಂಡು ಹಿಂದಕ್ಕೆ ಒರಗಿ ಕೂತರು! ಒಂದು ಗುಟುಕು ವಿಸ್ಕಿ ಹೀರಿ ಅಲ್ಲಿಯೇ ಕಣ್ಣು ಮುಚ್ಚಿದರು. ವಿಸ್ಕಿ ಅವರಿಗೆ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡ ಅನುಭವ ಆಯಿತು.

ಅಮೆರಿಕದ ಪ್ರಬಲ ಅಧ್ಯಕ್ಷರಾದ ರೂಸ್‌ವೆಲ್ಟ್ ಮುದುಕ ಚರ್ಚಿಲ್‌ನ ಮಾತುಗಳನ್ನು ಆಲಿಸುತ್ತ ಕೂತಿದ್ದರು. ಅವರ ಕೈಯ್ಯಲ್ಲಿದ್ದ ಸಿಗಾರ್ ಇನ್ನೂ ಹೊಗೆ ಉಗುಳುತ್ತಿತ್ತು. ಅವರಿಗೆ ಕೇವಲ ಎರಡು ವರ್ಷಗಳ ಹಿಂದೆ ನಡೆದ ಪರ್ಲ್ ಹಾರ್ಬರ್ ದಾಳಿ, ಅದರಲ್ಲಿ ಅಮೆರಿಕಾಕ್ಕೆ ಆದ ಮುಖಭಂಗ ಎಲ್ಲವೂ ನೆನಪಿಗೆ ಬಂತು! ಸಿಗಾರ್ ನೆಲಕ್ಕೆ ಎಸೆದು ಬೂದಿಯನ್ನು ಬೂಟಿನಿಂದ ಒರೆಸಿದರು ಆಗಿನ ಅಮೆರಿಕಾದ ಅಧ್ಯಕ್ಷ ರೂಸ್‌ವೆಲ್ಟ್!

ಹೇಗೆ ನೇತಾಜಿ ಸುಭಾಷ್ ಚಂದ್ರ ಬೋಸರು ಆಗಿನ ಬಲಿಷ್ಠ ರಾಷ್ಟ್ರಗಳಿಗೆ ಬಿಸಿತುಪ್ಪ ಆಗಿದ್ದರು ಎಂದು ನಿಮಗೆ ಇಷ್ಟು ಹೊತ್ತಿಗೆ ಅರ್ಥ ಆಗಿರಬಹುದು! ಬ್ರಿಟಿಷರು ನೇತಾಜಿ ಅವರಿಗೆ ಎಷ್ಟು ಹೆದರಿದ್ದರು ಎಂದು ನಾವು ಅರ್ಥ ಮಾಡಿಕೊಂಡರೆ ಸಾಕು!

ಮುಂದೆ 1945ರ ಆಗಸ್ಟ್ 18ರಂದು ಥೈಪೆಯಲ್ಲಿ ವಿಮಾನ ಅಪಘಾತವಾಗಿ ನೇತಾಜಿ ಸುಭಾಷ್ ಕಣ್ಮರೆ ಆಗದೆ ಹೋಗಿದ್ದರೆ…..? ಅದರ ಹಿಂದೆ ಯಾರದ್ದಾದರೂ ಕೈವಾಡ ಇರಬಹುದೇ?
ಒಮ್ಮೆ ಯೋಚನೆ ಮಾಡಿ. ಜೈ ಹಿಂದ್!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ತನ್ನ ಒಬ್ಬನೇ ಮಗ ಪಾಕ್‌ ಸೇನೆ ಕೈಯಲ್ಲಿ ಸಿಕ್ಕಾಕಿಕೊಂಡಾಗಲೂ ಬಿಡುಗಡೆ ಭಿಕ್ಷೆ ಬೇಕಿಲ್ಲ ಎಂದವರು ಜ. ಕಾರ್ಯಪ್ಪ!

Exit mobile version