1965 ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಿಂತು ದೇಶದ ಎರಡನೇ ಪ್ರಧಾನಿಯಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಗುಡುಗಿದಾಗ ಅನುಮಾನ ಪಟ್ಟವರೆ ಹೆಚ್ಚು! ಅದುವರೆಗೆ ಭಾರತೀಯರು ಅವರ ಸಜ್ಜನಿಕೆ ಮತ್ತು ವಿದ್ವತ್ತನ್ನು ಮಾತ್ರ ನೋಡಿದ್ದರು!
ಆದರೆ ಶಾಸ್ತ್ರೀಜಿಯವರು ತಾನು ‘ವಜ್ರಕ್ಕಿಂತ ಕಠಿಣ, ಕುಸುಮಕ್ಕಿಂತ ಮೃದು’ ಎಂದು ಪ್ರೂವ್ ಮಾಡುವ ಒಂದು ಸಂದರ್ಭವು ಹದಿನೈದು ದಿನಗಳ ಒಳಗೆ ಬಂದೇ ಬಿಟ್ಟಿತ್ತು!
ಆಗಸ್ಟ್ 31ನೇ ತಾರೀಕು ಮಧ್ಯಾಹ್ನ ಶಾಸ್ತ್ರೀಜಿಯವರು ಮನೆಗೆ ಊಟಕ್ಕೆ ಬಂದಿದ್ದರು. ಅವರ ಹೆಂಡತಿ ಲಲಿತಾ ಶಾಸ್ತ್ರಿ ಊಟ ಬಡಿಸಿ ಉಪಚಾರ ಆರಂಭ ಮಾಡಿದ್ದರು. ಅದೇ ಹೊತ್ತಿಗೆ ಓಡಿ ಬಂದ ಅವರ ಆಪ್ತ ಕಾರ್ಯದರ್ಶಿ ಅವರ ಕಿವಿಯಲ್ಲಿ ಏನೋ ಉಸುರಿದ. ಶಾಸ್ತ್ರೀ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಕಾರ್ ಹತ್ತಿ ತನ್ನ ಕಚೇರಿ (10, ಜನಪಥ್ ರಸ್ತೆ)ಗೆ ದೌಡಾಯಿಸಿದರು!
ಭಾರತ ಪಾಕ್ ಯುದ್ಧದ ಕಾರ್ಮೋಡ!
ಆಗಲೇ ಮೂರೂ ಸೇನೆಗಳ ಮುಖ್ಯಸ್ಥರು ಅಲ್ಲಿ ಸೇರಿ ಪ್ರಧಾನಿಯವರ ದಾರಿಯನ್ನು ಕಾಯುತ್ತಿದ್ದರು. ಪಾಕಿಸ್ತಾನ್ ಆಗಲೇ ಭಾರತದ ಮೇಲೆ ಯುದ್ಧ ಸಾರಿತ್ತು! ಅದು ಯಾರೂ ನಿರೀಕ್ಷೆ ಮಾಡದ ಯುದ್ಧ! ಜಮ್ಮುವಿನ ಚಾಂಭ್ ಪ್ರಾಂತ್ಯದಲ್ಲಿ ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಜತೆಗೆ ಪಾಕಿಸ್ತಾನ್ ಭಾರತದ ಗಡಿಯ ಒಳಗೆ ಬಂದಾಗಿತ್ತು! ಭಾರತದ ಪ್ರಧಾನಿ ದುರ್ಬಲ ಎಂದು ಪಾಕ್ ಮುಖ್ಯಸ್ಥರಾದ ಆಯೂಬ್ ಖಾನ್ ಲೆಕ್ಕಾಚಾರ ಆಗಿತ್ತು! ಅದರ ಜೊತೆಗೆ ಚೀನಾ ಮತ್ತು ಅಮೆರಿಕ ದೇಶಗಳು ಪಾಕ್ ಪರವಾಗಿ ನಿಂತು ಬಿಟ್ಟಿದ್ದವು! ಎರಡನೇ ವಿಶ್ವ ಸಮರದ ನಂತರ ಅದು ಅತೀ ದೊಡ್ಡ ಸಂಘರ್ಷ ಆಗುವ ಅಪಾಯ ಇತ್ತು!
ಗುಡುಗಿದರು ಲಾಲ್ ಬಹಾದ್ದೂರ್ ಶಾಸ್ತ್ರಿ!
ಶಾಸ್ತ್ರೀಜಿ ತನ್ನ ಮೂರೂ ಸೇನೆಗಳ ಮುಖ್ಯಸ್ಥರಿಗೆ ಒಂದೇ ಗುಡುಗಿನ ಆದೇಶ ನೀಡಿದರು! ಕೇವಲ ಐದೇ ನಿಮಿಷದಲ್ಲಿ ಶಾಸ್ತ್ರೀಜಿ ದಿಟ್ಟ ನಿರ್ಧಾರ ತೆಗೆದುಕೊಂಡಾಗಿತ್ತು! ಜಮ್ಮುವಿನ ಚಾಂಭ್ ಪ್ರಾಂತ್ಯವನ್ನು ಉಳಿಸಿಕೊಳ್ಳಲು ಕಷ್ಟ ಅಂದರು ಸೇನಾ ಮುಖ್ಯಸ್ಥರು. ಇನ್ನು ಕೆಲವೇ ಘಂಟೆಗಳಲ್ಲಿ ಕಾಶ್ಮೀರವೇ ಭಾರತದ ಜೊತೆಗೆ ಸಂಪರ್ಕ ಕಡಿದುಕೊಳ್ಳುವ ಅಪಾಯ ಇದೆ ಅಂದರು ಅವರು.
ಶಾಸ್ತ್ರೀಜಿ ಆಗ ಗುಡುಗಿದರು.
“ಹೇಡಿಗಳ ಹಾಗೆ ಮಾತಾಡಬೇಡಿ! ಇಡೀ ಭಾರತ ನಿಮ್ಮ ಜೊತೆಗೆ ಇದೆ. ಲಾಹೋರ್ ಮೊದಲು ವಶಪಡಿಸಿಕೊಳ್ಳಿ!” ಎಂದರು. ಹತ್ಯಾರೋನ್ ಕಾ ಜವಾಬ್ ಹತ್ಯಾರೋನ್ ಸೇ ದೇಂಗೇ ಎಂದರು ಲಾಲ್ ಬಹಾದ್ದೂರ್ ಶಾಸ್ತ್ರಿ! ಕೆಲವೇ ಕ್ಷಣಗಳಲ್ಲಿ ಯುದ್ಧದ ಘೋಷಣೆ ಮಾಡಿ ವಾರ್ ರೂಮ್ ಸೇರಿದರು. ಊಟ, ತಿಂಡಿ, ನಿದ್ರೆ ಎಲ್ಲವನ್ನೂ ಮರೆತರು! ಪ್ರತೀ ಗಂಟೆಗೆ ಒಮ್ಮೆ ಅವರು ಯದ್ಧದ ವರದಿ ಕೊಡಬೇಕು ಎಂದು ಆದೇಶ ನೀಡಿದ್ದರು.
ಮೊದಲು ಪಾಕ್ ಕೈ ಮೇಲಾಯಿತು. ಅವರ ಹತ್ತಿರ ಅಮೆರಿಕ ನೀಡಿದ ಎಂ – 48 ಪ್ಯಾಟೆನ್ ಟಾಂಕಗಳು ಇದ್ದವು. ಪಾಕ್ ಎರಡು ಸೇನಾ ತುಕಡಿ ತೆಗೆದುಕೊಂಡು ಬಂದಿದ್ದರೆ ಭಾರತದ ಹತ್ತಿರ ಒಂದೇ ಸೇನಾ ತುಕಡಿ ಇತ್ತು!
ಆದರೆ ಸೆಪ್ಟೆಂಬರ್ 11 ರಂದು ‘ಅಸಲ್ ಉತ್ತರ’ ಬಳಿ ನಡೆದ ಘನ ಘೋರವಾದ ಯುದ್ಧದಲ್ಲಿ ಭಾರತವು ಪಾಕಿಸ್ತಾನದ 97 ಟ್ಯಾಂಕ್‌ಗಳನ್ನು ತನ್ನ ವಶಕ್ಕೆ ಪಡೆಯಿತು! ಪಾಕ್ ಜನರಲ್ ಆಯೂಬ್ ಖಾನ್‌ಗೆ ಬೆವರಲು ಆರಂಭ ಆಯಿತು! ಶಾಸ್ತ್ರಿ ದುರ್ಬಲ ಪ್ರಧಾನಿ ಎಂದು ಭಾವಿಸಿದ್ದ ಆತನಿಗೆ ಶಾಸ್ತ್ರಿಯವರ ಇನ್ನೊಂದು ಮುಖ ಪರಿಚಯ ಆಗಿತ್ತು!
ಯಾರ ಬೆದರಿಕೆಗೂ ಶಾಸ್ತ್ರೀ ಬೆದರಲಿಲ್ಲ!
ಅದೇ ಹೊತ್ತಿಗೆ ಶಾಸ್ತ್ರೀಜಿಯವರು ಇನ್ನೊಂದು ದಾಳವನ್ನು ಎಸೆದರು. ವಿಶ್ವಸಂಸ್ಥೆಯ ಮೇಲೆ ಪ್ರಭಾವವನ್ನು ಬೀರಿ ಚೀನಾ ಈ ಯುದ್ಧದಲ್ಲಿ ಮೂಗು ತೂರಿಸದ ಹಾಗೆ ಮಾಡಿದರು. ಚೀನಾದ ಯಾವ ಬೆದರಿಕೆಗೂ ಭಾರತ ಬೆದರುವುದಿಲ್ಲ ಅಂದರು!
ಭಾರತ ಆ ಕದನವನ್ನು ಗೆದ್ದೇ ಬಿಟ್ಟಿತ್ತು!
ಭಾರತವು ಪಾಕಿಸ್ತಾನದ 152 ಟ್ಯಾಂಕ್‌ಗಳನ್ನು ನಾಶ ಮಾಡಿದಾಗ ಪಾಕ್ ಧರಾಶಾಯಿ ಆಗಿತ್ತು! ಅದೊಂದು ಮುಟ್ಟಿ ನೋಡುವ ಪೆಟ್ಟನ್ನು ಶಾಸ್ತ್ರೀಜಿ ಪಾಕಿಸ್ತಾನಕ್ಕೆ ಕೊಟ್ಟಿದ್ದರು! ಆಯೂಬ್ ಖಾನ್ ದರ್ಪಕ್ಕೆ ತನ್ನ ಬಹಾದ್ದೂರಿಕೆಯ ಮೂಲಕ ಶಾಸ್ತ್ರೀಜಿ ಭಾರೀ ದೊಡ್ಡ ಏಟು ಕೊಟ್ಟಿದ್ದರು. ಪಾಕ್ ಸೋತು ಸುಣ್ಣ ಆಯಿತು.
ಮುಂದೆ ತಾಶ್ಕೆಂಟ್ ಒಪ್ಪಂದದಲ್ಲಿ ಕೂಡ ಭಾರತದ ಕೈ ಮೇಲಾಯಿತು!
ಆಗ ಮಧ್ಯಪ್ರವೇಶ ಮಾಡಿದ ವಿಶ್ವ ಸಂಸ್ಥೆಯು ಸೆಪ್ಟೆಂಬರ್ 21 ರಂದು ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆ ಮಾಡಿತು. ಆದರೆ ಗೆದ್ದು ಬೀಗುತ್ತಿದ್ದ ಶಾಸ್ತ್ರೀಜಿ ಸುಮ್ಮನೆ ಬಿಟ್ಟುಕೊಡುವ ಆಸಾಮಿ ಅಲ್ಲವಲ್ಲ! ಮುಂದೆಂದೂ ಪಾಕ್ ಭಾರತದ ಮೇಲೆ ಆಕ್ರಮಣ ಮಾಡಿ ಕಿರುಕುಳ ಕೊಡಬಾರದಲ್ಲ! ಅದಕ್ಕೆ ಒಂದು ಅಂತಾರಾಷ್ಟ್ರೀಯ ಒಪ್ಪಂದದ ಅಗತ್ಯ ಇತ್ತು.
ರಷ್ಯಾದ ತಾಷ್ಕೆಂಟ್‌ನಲ್ಲಿ ರಷ್ಯಾ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966 ಜನವರಿ 11ರಂದು ಭಾರತದ ಪ್ರಧಾನಿ ಶಾಸ್ತ್ರೀಜಿ ಮತ್ತು ಆಯೂಬ್ ಖಾನ್ ನಡುವೆ ತಾಶ್ಕೆಂಟ್ ಒಪ್ಪಂದಕ್ಕೆ ವೇದಿಕೆ ಸಿದ್ಧವಾಯಿತು.
‘ಮುಂದೆಂದೂ ಬಲ ಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವುದಿಲ್ಲ ಎಂದು ಪಾಕ್ ಲಿಖಿತ ಭರವಸೆ ನೀಡಬೇಕು’ ಎಂದು ಶಾಸ್ತ್ರೀಜಿ ಪಟ್ಟು ಹಿಡಿದು ಕೂತರು. ಆಯೂಬ್ ಖಾನ್ ಒಪ್ಪದೇ ಹೋದಾಗ ಶಾಸ್ತ್ರೀಜಿ ಮತ್ತೆ ಗುಡುಗಿದರು – “ಹಾಗಾದರೆ ಒಪ್ಪಂದವೆ ಬೇಡ. ನನ್ನ ಮುಂದಿನ ಪ್ರಧಾನಿ ಬಂದ ನಂತರ ನೀವು ಒಪ್ಪಂದ ಮಾಡಿಕೊಳ್ಳಿ!” ಎಂದು ಎದ್ದರು. ಆಗ ಆಯೂಬ್ ಖಾನ್ ಸಹಿ ಮಾಡಲೇಬೇಕಾಯಿತು!
ಅಲ್ಲಿಯೇ ನಡೆಯಿತು ದುರಂತ!
ಆದರೆ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಮಾಡಿದ ಶಾಯಿಯು ಆರುವ ಮೊದಲೇ ಅದೇ ಮಧ್ಯರಾತ್ರಿ ಅಲ್ಲಿಯೇ ಶಾಸ್ತ್ರಿಯವರ ಉಸಿರು ನಿಂತಿತ್ತು. ಹೃದಯಾಘಾತ ಎಂದರು ರಷ್ಯಾದ ವೈದ್ಯರು! ಅವರ ನೀಲಿಗಟ್ಟಿದ್ದ ಪಾರ್ಥಿವ ಶರೀರ ಭಾರತಕ್ಕೆ ಬಂದಿತು! ಮರಣೋತ್ತರ ಪರೀಕ್ಷೆ ಮಾಡದೆ ಶಾಸ್ತ್ರಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆದುಹೋಯಿತು! ಹಲವು ಅನುಮಾನಗಳು ಉಳಿದುಹೋದವು! ಆದರೆ, ಕೇವಲ 17 ತಿಂಗಳು ಭಾರತದ ಪ್ರಧಾನಿ ಆಗಿದ್ದ ಲಾಲ ಬಹಾದ್ದೂರ್ ಶಾಸ್ತ್ರಿ ಇತಿಹಾಸ ನಿರ್ಮಿಸಿ ನಿರ್ಗಮಿಸಿದ್ದರು.
ಇದನ್ನೂ ಓದಿ | ರಾಜ ಮಾರ್ಗ | ಬಲಗಾಲು ಕತ್ತರಿಸುವಾಗ ಆಕೆ ಚೀರಿ ಚೀರಿ ಕೇಳಿದ್ದು ಒಂದೇ ಪ್ರಶ್ನೆ: ಡಾಕ್ಟರ್ ನಾನು ಮತ್ತೆ ಡ್ಯಾನ್ಸ್ ಮಾಡಬಹುದಾ?