75 ವರ್ಷಗಳಲ್ಲಿ ಕನ್ನಡಕ್ಕೆ ದೊರಕಿದ ಕೇವಲ ನಾಲ್ಕನೇ ಪ್ರಶಸ್ತಿ ಇದು!
:: ರಾಜೇಂದ್ರ ಭಟ್ ಕೆ.
ರಾಜಮಾರ್ಗ ಅಂಕಣ: ಕೋರೋನಾ ಮಹಾಮಾರಿಯಿಂದ ರಾಡಿ ಆಗಿದ್ದ ಕನ್ನಡದ ಮನಸ್ಸುಗಳಿಗೆ 2022ರಲ್ಲಿ ಒಂದು ಬಿಗ್ ಎಕ್ಸೈಟ್‌ಮೆಂಟ್ ಕೊಡುವ ಸಿನೆಮಾ ಆಗಿ ಬಂದದ್ದು ಕಾಂತಾರ! ಆ ಸಿನೆಮಾ (Kantara Movie) ಯಾವ ರೀತಿ ಹಿಟ್ ಆಯ್ತು ಅಂದರೆ ನೋಡಿದವರೇ ಮತ್ತೆ ಮತ್ತೆ ನೋಡಿದರು. ಹೊಂಬಾಳೆ ಫಿಲಂಸ್ (Hombale Films) ಕೇವಲ 16 ಕೋಟಿ ದುಡ್ಡಲ್ಲಿ ನಿರ್ಮಾಣ ಮಾಡಿದ ಈ ಸಿನೆಮಾ 450 ಕೋಟಿ ದುಡಿಯಿತು! ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆದ ಸಿನೆಮಾ ಒಂದು ವರ್ಷದ ಅವಧಿಯಲ್ಲಿ ತಮಿಳು, ತೆಲುಗು, ಮಲಯಾಳಂ, ತುಳು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗಿ ಪಾನ್ ಇಂಡಿಯಾ ಹಿಟ್ ಆಯ್ತು. ರಿಷಬ್ ಶೆಟ್ಟಿ (Rishab Shetty) ಪಾನ್ ಇಂಡಿಯಾ ಸ್ಟಾರ್ (Pan India) ಆದರು. ಕನ್ನಡದಲ್ಲಿ ಅತೀ ಹೆಚ್ಚು ದುಡ್ಡು ಮಾಡಿದ ಎರಡನೇ ಸಿನಿಮಾ ಆಗಿ ಕಾಂತಾರ ರಿಜಿಸ್ಟರ್ ಆಯ್ತು. ಅದರಲ್ಲಿ ಮೂಡಿಬಂದಿದ್ದ ಗ್ರಾಮೀಣ ಸೊಗಡಿನ ದೃಶ್ಯಗಳು, ಕರಾವಳಿಯ ಸಂಸ್ಕೃತಿ ಮತ್ತು ದೈವದ ಮೇಲಿನ ನಂಬಿಕೆ, ಸುಂದರವಾದ ಹಾಡುಗಳು ಎಲ್ಲವೂ ಅದ್ಭುತವಾಗಿಯೇ ಇದ್ದವು.
ಆ ಸಿನೆಮಾದ ಮಾಸ್ಟರ್ ಬ್ರೈನ್ ಮತ್ತು ಸ್ಟಾರ್ ಆಕರ್ಷಣೆ ಆಗಿದ್ದರು ರಿಶಭ್! 80% ಸ್ಥಳೀಯ ಕಲಾವಿದರು ಅದ್ಭುತವಾಗಿ ಅಭಿನಯ ಮಾಡಿದ್ದು ಕೂಡ ಸಿನೆಮಾದ ಹೆಚ್ಚುಗಾರಿಕೆ.
75 ವರ್ಷಗಳಲ್ಲಿ ಕನ್ನಡಕ್ಕೆ ಇದು ಕೇವಲ 4ನೆಯ ರಾಷ್ಟ್ರಪ್ರಶಸ್ತಿ!
ಶುಕ್ರವಾರ 70ನೆಯ ಸಿನೆಮಾ ರಾಷ್ಟ್ರಪ್ರಶಸ್ತಿಗಳ ಘೋಷಣೆ ಆಗಿದ್ದು ಕಾಂತಾರ ಸಿನೆಮಾಕ್ಕೆ 2 ಪ್ರಶಸ್ತಿಗಳು ದೊರೆತಿವೆ. ಅದರಲ್ಲಿ ಬೆಲೆ ಕಟ್ಟಲು ಸಾಧ್ಯವೇ ಇಲ್ಲದ್ದು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ! ಏಕೆಂದರೆ ರಾಷ್ಟ್ರಪ್ರಶಸ್ತಿಗಳು ಆರಂಭವಾಗಿ 75 ವರ್ಷಗಳಲ್ಲಿ ಕನ್ನಡಕ್ಕೆ ದೊರೆತದ್ದು ಕೇವಲ ನಾಲ್ಕನೆಯ ಪ್ರಶಸ್ತಿ ಇದು! 1975ರಲ್ಲಿ ಚೋಮನ ದುಡಿ ಸಿನೆಮಾದಲ್ಲಿ ಎಂ.ವಿ. ವಾಸುದೇವ್ ರಾವ್, 1986ರಲ್ಲಿ ತಬರನ ಕಥೆ ಸಿನೆಮಾದಲ್ಲಿ ಚಾರುಹಾಸನ್, 2014ರಲ್ಲಿ ನಾನು ಅವನಲ್ಲ, ಅವಳು ಸಿನೆಮಾದಲ್ಲಿ ಸಂಚಾರಿ ವಿಜಯ್ ಈವರೆಗೆ ಅಭಿನಯಕ್ಕಾಗಿ ಪ್ರಶಸ್ತಿಗಳನ್ನು ಗೆದ್ದವರು. ಕನ್ನಡಕ್ಕೆ ರಿಶಭ್ ಶೆಟ್ಟಿ ಮೂಲಕ ನಾಲ್ಕನೆಯ ರಾಷ್ಟ್ರಪ್ರಶಸ್ತಿಯು ಈ ವಿಭಾಗದಲ್ಲಿ ಬಂದಿದೆ. ಅದರಲ್ಲಿಯೂ ರಿಶಭ್ ಈ ಬಾರಿ ಮಲಯಾಳಂ ಲೆಜೆಂಡ್ ನಟ ಮಮ್ಮುಟ್ಟಿ ಜೊತೆಗೆ ಸ್ಪರ್ಧೆಯಲ್ಲಿ ಇದ್ದರು ಅಂದಾಗ ಪ್ರಶಸ್ತಿಯ ಮೌಲ್ಯವು ಭಾರೀ ಎತ್ತರಕ್ಕೆ ತಲುಪುತ್ತದೆ. ಕಾಂತಾರ ಸಿನೆಮಾ ನೋಡಿದವರು ಆಗಲೇ ಕಾಡಬೆಟ್ಟು ಶಿವನ ಅಭಿನಯಕ್ಕೆ ಫಿದಾ ಆಗಿದ್ದರು. ಅದರಲ್ಲಿಯೂ ಸಿನೆಮಾದ ಕೊನೆಯ 20 ನಿಮಿಷಗಳ ಕ್ಲೈಮ್ಯಾಕ್ಸ್ ಕನ್ನಡಕ್ಕೆ ಹೊಸದಾಗಿತ್ತು. ಅದು ಮೈ ರೋಮಾಂಚನ ಮಾಡುವ ಅಭಿನಯ ಆಗಿತ್ತು. ಅದಕ್ಕೆ ಅರ್ಹವಾಗಿ ರಿಶಭ್ ಶೆಟ್ಟರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಅದರಲ್ಲಿ ಕೂಡ ತಾನೇ ನಿರ್ದೇಶಿಸಿ, ಅಭಿನಯ ಮಾಡಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ನಟ ಎನ್ನುವ ಕೀರ್ತಿ ನಮ್ಮ ಕುಂದಾಪುರದ ಹೈದನಿಗೆ ಸಿಕ್ಕಿದೆ. ಇನ್ನೇನು ಬೇಕು?
ರಿಶಭ್ ಸಾಗಿ ಬಂದ ದಾರಿ ಕೇವಲ ಹೂವಿನದ್ದು ಆಗಿರಲಿಲ್ಲ!
1983ರಲ್ಲಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಿಶಭ್ ಶೆಟ್ಟಿ ಅಲ್ಲಿಯೇ ತಮ್ಮ ಬಾಲ್ಯವನ್ನು, ಶಿಕ್ಷಣವನ್ನು ಸಂಭ್ರಮಿಸಿದವರು. ಮುಂದೆ ಪದವಿ ಪಡೆಯಲು ಬೆಂಗಳೂರು ವಿಜಯಾ ಕಾಲೇಜಿಗೆ ಸೇರಿದಾಗ ನಾಟಕ, ಯಕ್ಷಗಾನಗಳ ಸೆಳೆತ ತೀವ್ರವಾಯಿತು. ಹೊಟ್ಟೆಪಾಡಿಗಾಗಿ ನೀರಿನ ಬಾಟಲಿ ವ್ಯಾಪಾರ, ಸಣ್ಣ ಹೋಟೆಲ್, ರಿಯಲ್ ಎಸ್ಟೇಟ್ ಮಾಡಿದರೂ ವ್ಯವಹಾರ ಕೈಗೆ ಹತ್ತಲಿಲ್ಲ. ಸಿನೆಮಾಗಳ ಮೂಲಕವೇ ಅದೃಷ್ಟ ಪರೀಕ್ಷೆ ಮಾಡಬೇಕು ಎಂದು ನಿರ್ಧರಿಸಿ ಆರಂಭದಲ್ಲಿ ಕ್ಲಾಪ್ ಬಾಯ್, ಸ್ಪಾಟ್ ಬಾಯ್, ಸಹಾಯಕ ನಿರ್ದೇಶಕ…..ಹೀಗೆಲ್ಲ ಮುಂದುವರೆದರು. ಸಿನೆಮಾ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದದ್ದು ಇದೇ ಹಸಿವಿನ ದಿನಗಳಲ್ಲಿ!
ಆಗ ಅವರಿಗೆ ದೊರೆತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗೆಳೆತನ ಅವರ ಬದುಕಿನ ದಾರಿಯನ್ನೇ ಬದಲಾಯಿಸಿತು. ಈ ಇಬ್ಬರು ಶೆಟ್ಟರು ಸೇರಿ ಕನ್ನಡ ಸಿನೆಮಾಗಳನ್ನು ನೆಕ್ಸ್ಟ್ ಲೆವಲಿಗೆ ತೆಗೆದುಕೊಂಡು ಹೋಗುವ ಕನಸು ಕಂಡರು.
2012, ಸ್ಪ್ಲೆಂಡರ್ ಬೈಕ್, ಗೆಳೆಯರು ಮತ್ತು ತುಫಲಕ್!
ಇಬ್ಬರು ಶೆಟ್ಟರು ತುಂಬಾ ಆಸೆ ಪಟ್ಟು ಮಾಡಿದ ಸಿನೆಮಾ ಅಂದರೆ ಅದು ತುಘಲಕ್. ಅದರ ಮೊದಲ ದಿನ ಸಿನೆಮಾ ಥಿಯೇಟರಗೆ ಬೈಕಲ್ಲಿ ಬಂದು ಗೆಳೆಯರು ಸಿಗರೇಟ್ ಸೇದುತ್ತಾ ಪ್ರೇಕ್ಷಕರನ್ನು ಕಾದು ನಿಂತಿದ್ದರು. ಎಷ್ಟು ಸಿಗರೇಟ್ ಖಾಲಿಯಾದರೂ ಥಿಯೇಟರಿಗೆ ಪ್ರೇಕ್ಷಕರೇ ಬರಲಿಲ್ಲ! ಇದು ರಿಶಭ್ ಅವರ ಓಪನಿಂಗ್ ಇನ್ನಿಂಗ್ಸ್! ಮುಂದೆ ಲೂಸಿಯಾ, ಉಳಿದವರು ಕಂಡಂತೆ, ರಿಕ್ಕಿ ಯಾವುದೂ ಆರ್ಥಿಕವಾಗಿ ಗೆಲ್ಲಿಸಲಿಲ್ಲ. ಉಳಿದವರು ಕಂಡಂತೆ ರಕ್ಷಿತ್ ಶೆಟ್ಟಿ ಅವರಿಗೆ ಭಾರೀ ಬ್ರೇಕ್ ಕೊಟ್ಟರೂ ದುಡ್ಡು ಮಾಡಲಿಲ್ಲ. ರಿಶಭ್ ಹೀರೋ ಆಗಿ ಅಭಿನಯಿಸಿದ ಬೆಲ್ ಬಾಟಮ್ ಸಿನೆಮಾ ನಿರ್ಮಾಪಕರನ್ನು ಗೆಲ್ಲಿಸಿತ್ತು.
ಕಿಸೆ ಮತ್ತು ಹೊಟ್ಟೆ ಖಾಲಿಯಾದಾಗ ಹೆಚ್ಚು ಕ್ರಿಯೇಟಿವ್ ಯೋಚನೆಗಳು ಬರುತ್ತವೆ ಎನ್ನುತ್ತಾರೆ ರಿಶಭ್! ಎಂತಹ ಬಿಕ್ಕಟ್ಟು ಬಂದಾಗಲೂ ರಿಶಭ್ ಮತ್ತು ರಕ್ಷಿತ್ ಧೈರ್ಯ ಕೆಡಲಿಲ್ಲ ಮತ್ತು ಗೆಳೆತನ ಬಿಡಲಿಲ್ಲ.
ಕಿರಿಕ್ ಪಾರ್ಟಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ!
ವರ್ಷಾನುಗಟ್ಟಲೆ ಸ್ಕ್ರಿಪ್ಟ್ ಬರೆದು ಆಸ್ತೆಯಿಂದ ಮಾಡಿದ ಸಿನೆಮಾಗಳು ಇವು. ಇಬ್ಬರು ಶೆಟ್ಟರು ಸೇರಿ ಮಾಡಿದ ಇವೆರಡೂ ಸಿನೆಮಾಗಳು ಸಾಂಡಲ್ ವುಡನಲ್ಲಿ ಸುನಾಮಿಯನ್ನೇ ಕ್ರಿಯೇಟ್ ಮಾಡಿದವು. ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳು ಹರಿದು ಬಂದವು. ಹಿಂದಿನ ಸಿನೆಮಾಗಳಲ್ಲಿ ಕೈಕೊಟ್ಟಿದ್ದ ಅದೃಷ್ಟವು ಈಗ ಕೈ ಹಿಡಿಯಿತು.
ಆಗ ಇನ್ನೊಬ್ಬ ಸೃಜನಶೀಲವಾಗಿ ಯೋಚನೆ ಮಾಡುವ ಶೆಟ್ಟರು ಈ ತಂಡವನ್ನು ಸೇರಿಕೊಂಡರು. ಅದು ರಾಜ್ ಬಿ ಶೆಟ್ಟಿ! ಇವರ ಕಾಂಬಿನೇಶನ್ ಕನ್ನಡ ಸಿನೆಮಾ ಉದ್ಯಮವನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಯಿತು. ರಿಶಭ್ ಶೆಟ್ಟರಿಗೆ ಲಕ್ ಖುಲಾಯಿಸಿತು. ಇದೀಗ ಅವರ ಪ್ರತಿಭೆಗೆ ನ್ಯಾಶನಲ್ ಅವಾರ್ಡ್ ಕೂಡ ಒಲಿದಿದೆ. ಮುಂದಿನ ಹತ್ತಾರು ವರ್ಷಗಳ ಕಾಲ ಈ ಮೂವರು ಗೆಳೆಯರು ಸಾಂಡಲ್ ವುಡನ್ನು ರೂಲ್ ಮಾಡುವುದು ಖಂಡಿತ. ರಾಷ್ಟ್ರಪ್ರಶಸ್ತಿ ಗೆದ್ದ ರಿಶಭ್ ಶೆಟ್ಟರಿಗೆ ಅಭಿನಂದನೆಗಳು.
ಈ ಬಾರಿ ಕನ್ನಡದ ನಾಲ್ಕು ಸಿನೆಮಾಗಳಿಗೆ ದೊರೆತಿವೆ 7 ರಾಷ್ಟ್ರಪ್ರಶಸ್ತಿಗಳು!
ಕಳೆದ ಒಂದೆರಡು ವರ್ಷಗಳಿಂದ ಪ್ರಖರ ಸೂರ್ಯನಿಗೆ ಮೋಡ ಮುಸುಕಿದ ಹಾಗೆ ಆಗಿದ್ದ ಕನ್ನಡ ಚಿತ್ರರಂಗಕ್ಕೆ ಚೇತೋಹಾರಿ ಸುದ್ದಿ ಇದು. ಬಹಳ ಶ್ರಮದಿಂದ ಜನರ ಮುಂದೆ ಬಂದ ಕೆ ಜಿ ಎಫ್ (ಚಾಪ್ಟರ್ 2) ಚಿತ್ರಕ್ಕೆ ಕೂಡ ಎರಡು ಪ್ರಶಸ್ತಿಗಳು ಬಂದಿವೆ.
ಪ್ರಶಸ್ತಿ ಗೆದ್ದ ಎಲ್ಲ ಸಿನೆಮಾಗಳಿಗೆ ನಮ್ಮ ಅಭಿನಂದನೆ ಇರಲಿ. ಅಲ್ಲವೇ?
ಇದನ್ನೂ ಓದಿ: ರಾಜಮಾರ್ಗ ಅಂಕಣ: ಪದಕವೊಂದೇ ಲಕ್ಷ್ಯ – ಲಕ್ಷ್ಯ ಸೇನ್!