Site icon Vistara News

ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

Vinesh Phogat ರಾಜಮಾರ್ಗ ಅಂಕಣ

ಭಾರತವು ತನ್ನ ಮನೆಮಗಳನ್ನು ವೀರೋಚಿತವಾಗಿ ಸ್ವಾಗತಿಸಬೇಕು

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಭಾರತೀಯರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬುಧವಾರ ಆಗಿರುವ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮಂಗಳವಾರ ರಾತ್ರಿ ಆಕೆಯ (Vinesh Phogat) ಮೂರು ಪಂದ್ಯಗಳನ್ನು ನೋಡಿದವರು ಆಕೆಯನ್ನು ‘ಹೆಣ್ಣುಹುಲಿ’ ಎಂದು ಕರೆದಿದ್ದರು. ಆಕೆ ಫೈನಲ್ ಪ್ರವೇಶ ಮಾಡಿದ್ದಾಗ ‘ಚಿನ್ನವನ್ನೇ ಗೆದ್ದು ಬಾ’ ಎಂಬ ಕನವರಿಕೆಯು ದೇಶದಾದ್ಯಂತ ಆರಂಭ ಆಗಿತ್ತು. ಆಕೆಯನ್ನು ಭಾರತವು ಮನೆಮಗಳಾಗಿ ಸ್ವೀಕಾರ ಮಾಡಿತ್ತು.

ಆಕೆಯ ತೂಕವು ಅಷ್ಟೊಂದು ವೇಗವಾಗಿ ಏರಿದ್ದು ಹೇಗೆ?

ಸೆಮಿಸ್ ಗೆಲ್ಲುವತನಕ ಆಕೆಯ ದೇಹತೂಕ ಸರಿ ಇತ್ತು.ಆದರೆ ರಾತ್ರಿ ಸ್ಪರ್ಧೆಗಳು ಮುಗಿದು ಊಟ ಮುಗಿಸಿದಾಗ ಆಕೆಯ ತೂಕವು ಎರಡು ಕೆಜಿ ಹೆಚ್ಚು ಇರುವುದು ಆಕೆಗೆ ಗೊತ್ತಾಗಿದೆ. ಅದನ್ನವಳು ತನ್ನ ವಿದೇಶಿ ಕೋಚಗೆ ತಕ್ಷಣ ತಿಳಿಸಿದ್ದಾರೆ. ರಾತ್ರಿ ಇಡೀ ಕೋಚ್ ಸಲಹೆ ಪಡೆದು ತೂಕವನ್ನು ಇಳಿಸಲು ಭಾರೀ ಬೆವರು ಬಸಿದಿದ್ದಾರೆ. ಇಡೀ ರಾತ್ರಿ ಜಾಗಿಂಗ್, ಸೈಕ್ಲಿಂಗ್, ವಾರ್ಮ್ ಅಪ್ ಎಲ್ಲವನ್ನೂ ಮಾಡಿದ್ದಾರೆ. ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಆಕೆ ತಲೆಕೂದಲು ಕಟ್ ಮಾಡಿದ್ದಾರೆ. ರಕ್ತವನ್ನೂ ನೀಡಿದ್ದಾರೆ! ಒಂದು ಘಂಟೆ ಸ್ಟೀಮ್ ಬಾತ್ ಮಾಡಿದ್ದಾರೆ. ಇಡೀ ರಾತ್ರಿ ಆಕೆ ಮಲಗಲೇ ಇಲ್ಲ.

ಆಕೆಯು ಹರ್ಯಾಣದ ರಣ ಭೂಮಿಯಿಂದ ಬಂದವರು!

ಆಕೆ ಹುಟ್ಟು ಹೋರಾಟಗಾರ್ತಿ ಎನ್ನುವುದು ಹಿಂದೆ ಕೂಡ ಹಲವು ಬಾರಿ ಸಾಬೀತಾಗಿದೆ. ಆಮೀರ್ ಖಾನ್ ಅಭಿನಯಿಸಿದ ಅತ್ಯಂತ ಯಶಸ್ವೀ ಚಿತ್ರ ದಂಗಲ್ ಈಕೆಯ ಅಪ್ಪನ ಸಾಧನೆಯ ಕುರಿತು ಹೆಣೆದ ಕಥೆಯಾದರೂ ಮಿಂಚಿದ್ದು ಇದೇ ವಿನೇಶ್ ಫೊಗಟ್!

ಆಕೆಯು ಈಗಾಗಲೇ ಮೂರು ಕಾಮನ್ ವೆಲ್ತ್ ಕೂಟಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಏಷಿಯಾಡ್ ಕೂಟದಲ್ಲಿ ಕೂಡ ಆಕೆ ಚಿನ್ನವನ್ನು ಗೆದ್ದು ಭಾರತವನ್ನು ಗೆಲ್ಲಿಸಿದ್ದಾರೆ. ಕುಸ್ತಿ ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಕೂಡ
ಆಕೆ ಪದಕವನ್ನು ಗೆದ್ದಿದ್ದಾರೆ. ಆದರೆ ಕಳೆದ ಒಲಿಂಪಿಕ್ಸ್ ಕೂಟದಲ್ಲಿ ಆಕೆಯು ಕ್ವಾರ್ಟರ್ ಫೈನಲ್ ತನಕ ಬಂದು ಇಂಜುರಿ ಆಗಿ ಕಣ್ಣೀರು ಹಾಕುತ್ತಾ ಹಿಂದೆ ಬಂದದ್ದನ್ನು ಭಾರತವು ಇನ್ನೂ ಮರೆತಿಲ್ಲ. ಅಂತಹ ವಿನೇಶ್ ಈ ಬಾರಿ ದೇಹತೂಕದ ಕಾರಣಕ್ಕೆ ಅನರ್ಹರಾಗಿದ್ದಾರೆ. ಅದು ದುರಂತ.

ಆಕೆಗೆ ಈಗಲೇ 29 ವರ್ಷ ವಯಸ್ಸು. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಆಕೆಯು ಮತ್ತೆ ಸ್ಪರ್ಧಿಸುವುದು ತುಂಬಾ ಕಷ್ಟ. ಇದು ಆಕೆಗೂ ಗೊತ್ತಿದೆ. ಅದಕ್ಕಾಗಿ ಇಡೀ ರಾತ್ರಿ ದೇಹತೂಕವನ್ನು ಇಳಿಸಲು ಆಕೆಯು ಹೋರಾಟಕ್ಕೆ ಇಳಿದಿದ್ದಾರೆ. ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆ. ಒಂದು ರಾತ್ರಿಯ ಅವಧಿಯಲ್ಲಿ ಒಂದು ಕೆಜಿ ಒಂಬೈನೂರು ಗ್ರಾಂ ಇಳಿಸುವುದು ಸುಲಭದ ಮಾತಲ್ಲ. ಇನ್ನೂ ನೂರು ಗ್ರಾಮ್ ಇಳಿಸಲು ಆಗಿಲ್ಲ ಎಂಬ ನೋವಿಗಿಂತ ಭಾರತವು ಪದಕವನ್ನು ಮಿಸ್ ಮಾಡಿಕೊಂಡಿತು ಎಂಬ ನೋವು ಆಕೆಗೆ ದೊಡ್ಡದು. ನಮಗೆ ಅದಕ್ಕಿಂತ ದೊಡ್ಡ ನೋವು ಎಂದರೆ ಆಕೆಯು ತನ್ನ ದೇಹದ ಮೇಲೆ ಮಾಡಿದ ಅಮಾನುಷ ಪ್ರಯೋಗಗಳು! ಅದಕ್ಕಿಂತ ದೊಡ್ಡ ನೋವು ಭಾರತೀಯರಿಗೆ ಅಂದರೆ ನಮ್ಮ ಮನೆಮಗಳು ಫೈನಲಿಗೂ ಮೊದಲು ಅನರ್ಹ ಆದದ್ದು!

ಆಕೆಯ ದೇಹತೂಕವು ಸಡನ್ನಾಗಿ ಎರಡು ಕೆಜಿ ಹೆಚ್ಚಾದದ್ದು ಹೇಗೆ?

ಓರ್ವ ಅಂತಾರಾಷ್ಟ್ರೀಯ ವೃತ್ತಿಪರ ಕ್ರೀಡಾಪಟು ಯಾವ ಆಹಾರವನ್ನು ತೆಗೆದುಕೊಳ್ಳುವ ಮೊದಲು ತನ್ನ ಕೋಚ್‌ಗೆ ತೋರಿಸಿ ನಂತರ ತಿನ್ನಬೇಕು. ಇದು ನಿಯಮ. ಭಾರತೀಯ ಒಲಿಂಪಿಕ್ ತಂಡದಲ್ಲಿ ವೈದ್ಯರು, ಡಯಟೀಶಿಯನ್, ಫಿಸಿಯೋ ಎಲ್ಲರೂ ಇರುತ್ತಾರೆ. ಕ್ರೀಡಾಪಟುಗಳು ತಿನ್ನುವ ಪ್ರತಿಯೊಂದು ಆಹಾರ ಪದಾರ್ಥವು ಪರೀಕ್ಷೆಗೆ ಒಳಗಾಗುತ್ತದೆ. ಒಂದು ಮಾತ್ರೆ, ಒಂದು ಇಂಜೆಕ್ಷನ್ ಕೂಡ ಅನುಮತಿ ಪಡೆಯದೆ ತೆಗೆದುಕೊಳ್ಳುವ ಹಾಗೆ ಇಲ್ಲ. ಹಾಗಿರುವಾಗ ಆಕೆಯ ದೇಹತೂಕ ಅಷ್ಟೊಂದು ಹೆಚ್ಚಳ ಆದದ್ದು ಹೇಗೆ? ಅದರಲ್ಲಿ ಯಾರ ಕೈವಾಡವು ಇದೆ ಅನ್ನುವುದು ವಿಚಾರಣೆಗೆ ಒಳಗಾಗಬೇಕಾದ ವಿಷಯ. ಆ ದಿಸೆಯಲ್ಲಿ ಭಾರತೀಯ ಒಲಿಂಪಿಕ್ ಸಮಿತಿಯು ಸರಿಯಾಗಿ ವಿಚಾರಣೆ ನಡೆದು ವಿವರಣೆ ನೀಡಬೇಕು. ಆಗ ಮಾತ್ರ ಆಕೆಗೆ ಮತ್ತು ಭಾರತಕ್ಕೆ ಸ್ವಲ್ಪ ಮಟ್ಟದ ನೆಮ್ಮದಿ ಸಿಗಬಹುದು.

ಆಕೆಯನ್ನು ವೀರೋಚಿತವಾಗಿಯೇ ಭಾರತ ಬರಮಾಡಿಕೊಳ್ಳಬೇಕು!

ಆಕೆಗೆ ಪದಕವು ಸಿಗಲಿಲ್ಲ ಎಂಬ ನೋವಿನ ನಡುವೆಯೂ ಆಕೆಯು ಪ್ಯಾರಿಸ್ ನಗರದಲ್ಲಿ ಮಾಡಿದ ಹೋರಾಟವನ್ನು ನಾವು ಕಣ್ಣಾರೆ ನೋಡಿದ್ದೇವೆ. ಇದುವರೆಗೂ ಸೋಲೇ ಕಾಣದ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಆಕೆಯು ಸೋಲಿಸಿದ್ದು, ಸೆಮಿಯಲ್ಲಿ ಒಂದು ಅಂಕವನ್ನು ಬಿಟ್ಟುಕೊಡದೆ ಗೆದ್ದದ್ದು ಇದನ್ನೆಲ್ಲ ನಾವು ನೋಡಿದ್ದೇವೆ. ಇದೇನೂ ಸಣ್ಣ ಗೆಲುವಲ್ಲ. ಆದ್ದರಿಂದ ವಿನೆಶ್ ಫೊಗಾಟ್ ಭಾರತದ ಮನೆಮಗಳಾಗಿ ಭಾರತಕ್ಕೆ ಹಿಂದಿರುಗುತ್ತಾಳೆ. ಒಲಿಂಪಿಕ್ ಪದಕ ವಿಜೇತರಿಗೆ ಸಿಗುವ ಗೌರವ ಮತ್ತು ಬಹುಮಾನಗಳು ಆಕೆಗೂ ದೊರಕಬೇಕು ಎನ್ನುವುದೇ ಆಶಯ.

ಏನಂತೀರಿ?

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?ಇದನ್ನೂ ಓದಿ:

Exit mobile version