ಭಾರತದ ಬ್ಯಾಡ್ಮಿಂಟನ್ ಭರವಸೆಗೆ ಇಂದು ಹುಟ್ಟಿದ ಹಬ್ಬ(ಆಗಸ್ಟ್ 16)
ರಾಜಮಾರ್ಗ ಅಂಕಣ: ಮೊನ್ನೆ ಮುಗಿದುಹೋದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಭಾರತದ (India) ಕನಿಷ್ಠ ಆರು ಕ್ರೀಡಾಪಟುಗಳು ಕೂದಲೆಳೆಯ ಅಂತರದಲ್ಲಿ ಪದಕ ಮಿಸ್ ಮಾಡಿದ್ದರು. ಅದರಲ್ಲಿ ಒಂದು ಪ್ರಮುಖವಾದ ಹೆಸರು ಬ್ಯಾಡ್ಮಿಂಟನ್ (Badminton) ಪ್ರತಿಭೆ ಲಕ್ಷ್ಯ ಸೇನ್ (Lakshya Sen) . ಈ ಒಲಿಂಪಿಕ್ಸ್ ಕೂಟದಲ್ಲಿ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸೆನ್ ( Victor Axelsen)ಗೆ ಬೆವರು ಇಳಿಸಿದ ಕೀರ್ತಿ ಈತನದ್ದು. ಇಂದಾತನಿಗೆ 24ನೇ ಹುಟ್ಟಿದ ಹಬ್ಬ (2001,ಆಗಸ್ಟ್ 16).
ಭಾರತದ ಬ್ಯಾಡ್ಮಿಂಟನ್ ಭರವಸೆ – ಲಕ್ಷ್ಯ ಸೇನ್
ಉತ್ತರಾಖಂಡ್ ರಾಜ್ಯದ ಅಲ್ಮೋರ ಎಂಬ ನಗರದಲ್ಲಿ ಹುಟ್ಟಿದ ಈತನಿಗೆ ಬಾಲ್ಯದಿಂದಲೂ ಅಪ್ಪ ಡಿ ಕೆ ಸೇನ್ ಅವರೇ ಕೋಚ್. ಹಾಗೆಯೇ ಆತನಿಗೆ ಲೆಜೆಂಡ್ ಪ್ರಕಾಶ್ ಪಡುಕೋಣೆ ಅವರೇ ಸ್ಫೂರ್ತಿ. ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಗಿದ ದಾರಿಯಲ್ಲಿ ಬೆಳೆಯಬೇಕು ಎಂದು ಹುರುಪು ತುಂಬಿದ್ದೇ ಅಪ್ಪ. ಈ ಹುಡುಗ ಕಠಿಣ ಪರಿಶ್ರಮಿ. ಬೆವರು ಹರಿಸುವುದರಲ್ಲಿ ಹೆಚ್ಚು ನಂಬಿಕೆ. ಈಗ ಅವನ ಕೋಚ್ ಆಗಿರುವ ವಿಮಲ್ ಕುಮಾರ್ ಹೇಳಿದ ಪ್ರತೀಯೊಂದು ಮಾತು ವೇದವಾಕ್ಯ. ‘ನಿನ್ನ ಹಿಂಗೈ ಹೊಡೆತ ಸ್ವಲ್ಪ ವೀಕ್ ಇದೆ ಹುಡುಗಾ’ ಎಂದು ಕೋಚ್ ಹೇಳಿದರೆ ‘ಮೂರು ದಿನ ಟೈಮ್ ಕೊಡಿ ಸರ್. ಸರಿ ಮಾಡಿಕೊಂಡು ಬರುತ್ತೇನೆ ‘ ಎಂದವನು. ನುಡಿದಂತೆಯೇ ನಡೆದವನು.
ಕೋಚ್ ಆತನಿಗೆ ಹೇಳಿದ ಮಾತುಗಳು
ಬ್ಯಾಡ್ಮಿಂಟನ್ ಆಟಕ್ಕೆ ದೇಹದ ಕಸುವು ತುಂಬಾ ಮುಖ್ಯ. ಫೋಕಸ್ ಅದಕ್ಕಿಂತ ಮುಖ್ಯ. ಕೊನೆಯ ಸರ್ವಿಸ್ ತನಕ ಆಟವನ್ನು ಕೈ ಚೆಲ್ಲಬಾರದು. ಎಷ್ಟು ಪಾಯಿಂಟ್ ಹಿಂದೆ ಇದ್ದರೂ ನಿನಗೆ ಕಮ್ ಬ್ಯಾಕ್ ಮಾಡಲು ಅವಕಾಶ ಇರುತ್ತದೆ. ಎದುರಾಳಿ ಎಷ್ಟು ಬಲಿಷ್ಠ ಎಂದು ತಲೆಗೆ ತೆಗೆದುಕೊಳ್ಳಬಾರದು. ನಿನ್ನ ಸಾಮರ್ಥ್ಯಗಳ ಮೇಲೆ ಭರವಸೆ ಇಟ್ಟು ಆಡು – ಇದು ಅವರ ಕೋಚ್ ಪದೇ ಪದೇ ಹೇಳುತ್ತಿದ್ದ ಮಾತುಗಳು. ಪ್ಯಾರಿಸ್ ಒಲಿಂಪಿಕ್ಸನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ವಿಕ್ಟರ್ ಅವರನ್ನು
ಎದುರಿಸುವಾಗಲೂ ಕಿವಿಯಲ್ಲಿ ರಿಬೌಂಡ್ ಆಗ್ತಾ ಇದ್ದದ್ದು ಕೋಚ್ ಹೇಳಿದ ಈ ಮಾತುಗಳೇ.
ಪ್ರಕಾಶ್ ಪಡುಕೋಣೆ – ನನ್ನ ಸ್ಫೂರ್ತಿ ದೇವತೆ
ಯಾಕೆಂದರೆ ಒಂದು ಕಾಲದಲ್ಲಿ ಇಂಡೋನೇಷಿಯಾ ಮತ್ತು ಚೀನಾ ಪ್ರಭುತ್ವ ಸ್ಥಾಪನೆ ಮಾಡಿದ್ದ ಈ ಕ್ರೀಡೆಯನ್ನು ಭಾರತದ ಮಗ್ಗುಲಿಗೆ ತಂದವರೇ ಪಡುಕೋಣೆ ಸರ್. 80ರ ದಶಕದಲ್ಲಿ ಅವರು ವರ್ಲ್ಡ್ ನಂಬರ್ ಒನ್ ಆಗಿದ್ದರು ಮತ್ತು ಅದೇ ವರ್ಷ ಅವರು ಆಲ್ ಇಂಗ್ಲೆಂಡ್ ಓಪನ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯರಾದರು. ಆವಾಗ ಲಕ್ಷ್ಯ ಸೇನ್ ಹುಟ್ಟಿರಲೇ ಇಲ್ಲ. ಮುಂದೆ ಅವರನ್ನು ಅವರ ಟ್ರೈನಿಂಗ್ ಆಕಾಡೆಮಿಯಲ್ಲಿ ಭೇಟಿ ಆದಾಗ ಅವರು ಕೊಟ್ಟ ಟಿಪ್ಸ್, ಆಶೀರ್ವಾದ ನನ್ನನ್ನು ಬೆಳೆಸುತ್ತಿದೆ. ನಾನು ಅವರಿಗೆ ಆಭಾರಿ ಎನ್ನುತ್ತಾರೆ ನಮ್ಮ ಚಾಂಪ್.
ಈ ಬಾರಿ ಪ್ಯಾರಿಸ್ ಒಲಿಂಪಿಕ್ಸನಲ್ಲಿ..
ಪ್ರತೀಯೊಂದು ಪಂದ್ಯವು ಅವರಿಗೆ ಸ್ಪರ್ಧಾತ್ಮಕವಾಗಿಯೇ ಇತ್ತು. ಅವುಗಳನ್ನು ಗೆದ್ದು ಸೆಮೀಸ್ ಪ್ರವೇಶ ಮಾಡಿದಾಗ ಭಾರತಕ್ಕೆ ಒಂದಾದರೂ ಪದಕವನ್ನು ಗೆಲ್ಲಬೇಕು ಎಂಬ ಕನಸು ಸ್ಟ್ರಾಂಗ್ ಆಗಿತ್ತು. ಆದರೆ ಪಂದ್ಯದ ಆರಂಭದಲ್ಲಿಯೇ ಮೊಣಕೈಗೆ ಬಲವಾದ ಗಾಯವಾಗಿ ರಕ್ತ ಸುರಿಯಲು ಆರಂಭವಾಯಿತು. ಹಲವು ಬಾರಿ ಫಿಸಿಯೋ ಮೈದಾನಕ್ಕೆ ಕಿಟ್ ತೆಗೆದುಕೊಂಡು ಬಂದರೂ ನೋವು ಕಡಿಮೆ ಆಗಲಿಲ್ಲ. ಆದರೂ ವಿಶ್ವ ಚಾಂಪಿಯನ್ ಆಟಗಾರನಿಗೆ ಫೈಟ್ ಕೊಟ್ಟ ತೃಪ್ತಿ ಇದೆ. ಭಾರತಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಅದಕ್ಕಿಂತ ದೊಡ್ಡದು. ಮುಂದಿನ ಒಲಿಂಪಿಕ್ಸ್ ಕೂಟಕ್ಕೆ ಈಗಿನಿಂದಲೇ ಸಿದ್ಧತೆ ಮಾಡುತ್ತೇನೆ ಎಂದು ಲಕ್ಷ್ಯ ಸೇನ್ ಹೇಳಿದ್ದಾರೆ.
ಆತನ ಬಗ್ಗೆ ವಿಶ್ವಚಾಂಪಿಯನ್ ವಿಕ್ಟರ್ ಹೇಳಿದ ಮಾತುಗಳು ಇನ್ನೂ ಸ್ಫೂರ್ತಿದಾಯಕ ಆಗಿವೆ. ʼನಾನು ಇದುವರೆಗೂ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧಿ ಎಂದರೆ ಲಕ್ಷ್ಯ ಸೇನ್. ಆತನಿಗೆ ಉಜ್ವಲ ಭವಿಷ್ಯ ಇದೆ. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ನಾನು ಇರುವುದಿಲ್ಲ. ಆತನು ಖಂಡಿತವಾಗಿ ಪದಕ ಗೆಲ್ಲುವ ಫೇವರಿಟ್ ಆಗಿರುತ್ತಾನೆ!’ ಈ ಮಾತುಗಳು ಪದಕಕ್ಕಿಂತ ಹೆಚ್ಚು ಮೌಲ್ಯ ಹೊಂದಿವೆ ಎಂದು ನಿಮಗೆ ಅನ್ನಿಸುತ್ತದೆಯಾ?
ಅದ್ಭುತವಾದ ಟ್ರಾಕ್ ರೆಕಾರ್ಡ್
ವರ್ಲ್ಡ್ ಜ್ಯೂನಿಯರ್ ವಿಭಾಗದಲ್ಲಿ ಆತನು ನಂಬರ್ ಒನ್ ರಾಂಕ್ ಹೊಂದಿದ್ದ ಆಟಗಾರ. ಯೂತ್ ಒಲಿಂಪಿಕ್ಸನಲ್ಲಿ ಎರಡು ಪದಕ, ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಕಂಚಿನ ಪದಕ, ಥಾಮಸ್ ಕಪ್, ಕಾಮನ್ ವೆಲ್ತ್ ಗೇಮ್ಸ್, ಏಷಿಯನ್
ಬ್ಯಾಡ್ಮಿಮಿಂಟನ್ ಕೂಟ…ಎಲ್ಲ ಕಡೆಯಲ್ಲಿಯೂ ಲಕ್ಷ್ಯ ಸೇನ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅವರು ಈಗಾಗಲೇ ಒಟ್ಟು 15 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಅವರ ಸಕ್ಸೆಸ್ ರೇಟ್ 236 ಗೆಲುವು/102 ಸೋಲು! ಇಂದಿನ ದಿನಕ್ಕೆ ಆತನ ವರ್ಲ್ಡ್ ರಾಂಕಿಂಗ್ 16. ಅದು ಇಂಪ್ರೂವ್ ಆಗ್ತಾ ಇದೆ ಅನ್ನೋದು ನಮಗೆ ಸಿಹಿಸುದ್ದಿ.
ಐದು ಅಡಿ 10 ಇಂಚು ಎತ್ತರದ, ಅಹಂಕಾರದ ಸೊಂಕೂ ಇಲ್ಲದ, ಕೀರ್ತಿ ಶನಿ ಇನ್ನೂ ತಲೆಗೆ ಹತ್ತದೆ ಇರುವ, ಬಲಿಷ್ಠ ಹಿಂಗೈ ಮತ್ತು ಮುಂಗೈ ಹೊಡೆತಗಳ ಆಟಗಾರ, ಇಡೀ ಕೋರ್ಟಿನಲ್ಲಿ ಚಿರತೆಯಂತೆ ಪಾದ ಚಲನೆ ಹೊಂದಿರುವ ಲಕ್ಷ್ಯ ಸೇನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸನಲ್ಲಿ ಒಂದು ಪದಕಕ್ಕೆ ಲಕ್ಷ್ಯ ಇಡುವುದನ್ನು ಯಾರೂ ತಡೆಯಲು ಅಸಾಧ್ಯ ಎನ್ನುವುದು ಭಾರತೀಯರ ನಂಬಿಕೆ.
ಆಲ್ ದ ಬೆಸ್ಟ್ ಮತ್ತು ಹ್ಯಾಪಿ ಬರ್ತಡೇ ಚಾಂಪಿಯನ್.
ಇದನ್ನೂ ಓದಿ: ರಾಜಮಾರ್ಗ ಅಂಕಣ: ಸ್ವಾತಂತ್ರ್ಯದ ಕನವರಿಕೆಯಲ್ಲಿ ಮಿಂದೆದ್ದ ಭಾರತ