ರಾಜಮಾರ್ಗ ಅಂಕಣ: ನೀವು ಯಾರಿಗಾದರೂ ಧನ್ಯವಾದ (Thanks) ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು!
ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೇ ಕ್ಷಮೆ ಕೇಳಿಬಿಡಿ. ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!
ನೀವು ಯಾರಿಗಾದರೂ ಬೆನ್ನು ತಟ್ಟಲು ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆಯು ಬೇಡವಾಗಿ ಹೋಗಬಹುದು!
ನೀವು ಯಾರಿಗಾದರೂ ‘ ಆಲ್ ದ ಬೆಸ್ಟ್’ (All the Best) ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಾಭಾಷ್ ಹೇಳಲು ಕಾಯುತ್ತಿರಬಹುದು!
ನೀವು ಯಾರಿಗಾದರೂ ನಿಮ್ಮ ಪ್ರೀತಿಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ತುಂಬ ನೋವಾಗಬಹುದು!
ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಟಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!
ನಿಮಗೆ ಯಾರಿಗಾದರೂ ಸಾರಿ ಹೇಳಲು ಬಾಕಿ ಇದ್ದರೆ ಇಂದೆ ಹೇಳಿಬಿಡಿ, ಯಾಕೆಂದರೆ ಆ ನಾಳೆ ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!
ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!
ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!
ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ ಇದ್ದರೆ ಇಂದೆ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!
ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಮೋಹ ಹೆಚ್ಚಾಗಬಹುದು!
ಯಾರದಾದರೂ ಆಳುವ ಕಣ್ಣೀರಿಗೆ ನಿಮ್ಮ ಹೆಗಲು ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!
ನೀವು ಯಾರಿಗಾದರೂ ಬೆಸ್ಟ್ ಫ್ರೆಂಡಗೆ ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!
ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!
ನೀವು ಯಾವುದೇ ಹುಡುಗಿಗೆ ಪ್ರೊಪೋಸ್ ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರೊಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ‘ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ’ ಎಂದು ಹೇಳಬಹುದು!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!