Site icon Vistara News

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

ರಾಜಮಾರ್ಗ ಅಂಕಣ captain pranjal shaurya award

ಕರ್ನಾಟಕದ ಸೈನಿಕನಿಗೆ ದೊರೆಯಿತು ರಾಷ್ಟ್ರದ ಗೌರವ

ರಾಜಮಾರ್ಗ ಅಂಕಣ: ಕಳೆದ ವರ್ಷವಿಡೀ ಕನ್ನಡ ನಾಡಿನಲ್ಲಿ (Karnataka) ಮೊಳಗಿದ್ದು ಇದೇ ಸೈನಿಕನ (Soldier) ಯಶೋಗಾಥೆ! ಅದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿ ಮಾಡಿದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಅವರು ದೇಶಕ್ಕಾಗಿ ಹುತಾತ್ಮರಾದ (Martyr) ರೋಮಾಂಚಕ ಕಥೆ.

ನಾನು ಅಂದು ಬರೆದ ಹಾಗೆ ಪ್ರಾಂಜಲ್ ಅವರು ಆಗರ್ಭ ಶ್ರೀಮಂತ ಕುಟುಂಬದ ಒಬ್ಬನೇ ಮಗ ಆಗಿದ್ದರು. ಅವರ ತಂದೆ ವೆಂಕಟೇಶ್ ಅವರು ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ MRPL ಇದರ ಎಂಡಿ ಆಗಿ ನಿವೃತ್ತಿಯನ್ನು ಹೊಂದಿದ್ದರು. ಹಾಗಿದ್ದರೂ ಮಗ ಸ್ವ ಇಚ್ಛೆಯಿಂದ ಸೈನ್ಯಕ್ಕೆ ಹೊರಟು ನಿಂತಾಗ ವೆಂಕಟೇಶ್ ಅಥವಾ ಅವರ ಪತ್ನಿ ತಡೆಯಲಿಲ್ಲ ಅನ್ನುವುದು ಶ್ರೇಷ್ಠ ನಿದರ್ಶನ.

ಅಂತಿಮ ಸಂಸ್ಕಾರದ ಹೊತ್ತು ಮಿಡಿಯಿತು ವೆಂಕಟೇಶ್ ಕುಟುಂಬ

ಪ್ರೀತಿ ಮಾಡಿ ಮದುವೆಯಾದ ಪತ್ನಿ ಅದಿತಿ ಕೂಡ ಗಂಡನ ಉಜ್ವಲ ರಾಷ್ಟ್ರಪ್ರೇಮಕ್ಕೆ ನೆರಳಾಗಿ ನಿಂತರು. ಮುಂದೆ ಪ್ರಾಂಜಲ್ ಅವರು ಭಯೋತ್ಪಾದಕರ ಜೊತೆಗೆ ಕೊನೆಯ ಉಸಿರಿನವರೆಗೂ ಹೋರಾಡಿ ಉಸಿರು ಚೆಲ್ಲಿದ ಘಟನೆಯು ನಡೆದಾಗ, ತ್ರಿವರ್ಣ ಧ್ವಜ ಹೊದ್ದು ಮಲಗಿದ ಪ್ರಾಂಜಲ್ ಪಾರ್ಥಿವ ಶರೀರ ಮನೆಯ ಅಂಗಳಕ್ಕೆ ಬಂದಾಗ ಸೈನಿಕನ ಕುಟುಂಬವು ಒಮ್ಮೆ ನಡುಗಿದ್ದು ಹೌದು.

ಹುತಾತ್ಮ ಸೈನಿಕನ ಹೆಂಡತಿ ಹೊರಗೆ ಅಳಲಿಲ್ಲ

ಆದರೆ ತಕ್ಷಣ ಸಾವರಿಸಿಕೊಂಡ ಆ ರಾಷ್ಟ್ರಭಕ್ತ ಕುಟುಂಬ ಪ್ರಾಂಜಲ್ ಅಂತಿಮ ಸಂಸ್ಕಾರದ ಅವಧಿಯಲ್ಲಿ ತೋರಿದ್ದು ಸಾವಧಾನದ ಮತ್ತು ಭಾವನೆಗಳ ನಿಯಂತ್ರಣದ ಅನನ್ಯ ಮಾದರಿಯನ್ನು. ಅದರಲ್ಲಿಯೂ ಹುತಾತ್ಮ ಸೈನಿಕನ ಪತ್ನಿ ಅಳಬಾರದು ಎಂದು ಮನದಲ್ಲಿ ಸಂಕಲ್ಪಿಸಿ ಅದಿತಿ ಅಂದು ಕಲ್ಲುಬಂಡೆಯ ಹಾಗೆ ನಿಂತಿದ್ದರು. ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಕರ್ನಾಟಕದ ವೀರ ಸೇನಾನಿಯ ಅಂತ್ಯ ಇಡೀ ನಾಡನ್ನು ದುಃಖದ ಮಡುವಿನಲ್ಲಿ ದೂಡಿತ್ತು.

Raja Marga Column Captain MV Pranjal Memorial

ಕಲ್ಯಾ ಶಾಲೆಯಲ್ಲಿ ನಿರ್ಮಾಣವಾಯಿತು ಕ್ಯಾ. ಪ್ರಾಂಜಲ್ ಸ್ಮಾರಕ

ಇಡೀ ಕನ್ನಡ ನಾಡು ದುಃಖ ಮತ್ತು ಸೂತಕದ ಛಾಯೆಯಲ್ಲಿ ಮುಳುಗಿದ್ದಾಗ ನಾಡಿನಾದ್ಯಂತ ಶ್ರದ್ಧಾಂಜಲಿ ಸಭೆಗಳು ನಡೆದವು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಅಂಗಳದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಿರ್ಮಿಸಿದರು. ಈ ವರ್ಷ ಜನವರಿ 26ರಂದು ಸಂಜೆ ನಡೆದ ಈ ಭಾವುಕ ಕಾರ್ಯಕ್ರಮದಲ್ಲಿ ಸೈನಿಕನ ತಂದೆ ವೆಂಕಟೇಶ್ ಮತ್ತು ತಾಯಿ ಇಬ್ಬರೂ ಭಾಗವಹಿಸಿದ್ದರು. ನಿವೃತ್ತ ಸೈನಿಕರ ವೇದಿಕೆಯು ಗೌರವಾರ್ಪಣೆ ಮಾಡಿತ್ತು. ಕಲ್ಯಾ ಎಂಬ ಪುಟ್ಟ ಗ್ರಾಮ, ಅಲ್ಲಿನ ಸರಕಾರಿ ಶಾಲೆ, ಅಧ್ಯಾಪಕರು, ಮಕ್ಕಳು, ಹೆತ್ತವರು, ನೂರಾರು ಸಂಖ್ಯೆಯ ಗ್ರಾಮಸ್ಥರು ಸೇರಿ ಕಂಬನಿ ಮಿಡಿದ ಅತ್ಯಪೂರ್ವ ಕಾರ್ಯಕ್ರಮ ಅದಾಗಿತ್ತು.

Raja Marga Column Captain MV Pranjal Memorial

ಅದೇ ವೀರ ಸೈನಿಕನಿಗೆ ಇಂದು ದೊರೆಯಿತು ರಾಷ್ಟ್ರದ ಗೌರವ

ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು. ಹುತಾತ್ಮ ಸೈನಿಕನ ಪತ್ನಿ ಅದಿತಿಯವರ ಅದೇ ಭಾವುಕ ಮುಖ, ಅಮ್ಮನ ಅಕ್ಕರೆ ತುಂಬಿದ ಆಳವಾದ ಕಣ್ಣುಗಳು, ಪ್ರಾಂಜಲ್ ಹೆಸರು ಮೊಳಗಿದಾಗ ದೃಢವಾದ ಹೆಜ್ಜೆಗಳೊಂದಿಗೆ ತಾಯಿ ಮತ್ತು ಪತ್ನಿ ಇಬ್ಬರೂ ವೇದಿಕೆಯೇರಿದ್ದು, ಎದೆಯಲ್ಲಿ ಜ್ವಾಲಾಮುಖಿ ಇದ್ದರೂ ತುಟಿಯಲ್ಲಿ ಅರಳಿದ ಹೂ ನಗು, ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಅದಿತಿಯವರ ಕಣ್ಣಲ್ಲಿ ಒಮ್ಮೆ ಮಿಂಚಿ ಮರೆಯಾದ ಪ್ರೌಡ್ ಫೀಲಿಂಗ್.

ಈ ದೃಶ್ಯವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ರಕ್ತವನ್ನು ಬಿಸಿ ಮಾಡುವುದು ಖಂಡಿತ. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Exit mobile version