Site icon Vistara News

ರಾಜಮಾರ್ಗ ಅಂಕಣ: ಅಳಿಸಲಾಗದ ನೋವು ಬಿಟ್ಟು ಹೋದ ಮಂಗಳೂರು ವಿಮಾನ ದುರಂತ!

rajamarga column mangalore flight crash 1

ರಾಜಮಾರ್ಗ ಅಂಕಣ: ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ (Mangalore Airport) 14 ವರ್ಷಗಳ ಹಿಂದೆ ಇದೇ ದಿನ (2010 ಮೇ 22) ನಡೆದ ಆ ಒಂದು ದುರ್ಘಟನೆಯು (Mangalore flight crash) ದೇಶದಾದ್ಯಂತ ಉಂಟುಮಾಡಿದ ನೋವಿನ ಅಲೆಗಳನ್ನು ಈಗ ಕಲ್ಪನೆ ಮಾಡಲೂ ಭಯವಾಗುತ್ತದೆ! ದಕ್ಷಿಣ ಭಾರತದ ಅತೀ ದೊಡ್ಡ ವಿಮಾನ ದುರಂತವದು.

ಅಂದು ಮೇ 22, 2010 ಮಧ್ಯರಾತ್ರಿ…

ದುಬೈಯಿಂದ ಹೊರಟ ಭಾರತದ ವೈಭವದ ಬೋಯಿಂಗ್ 737-800 ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಅದರಲ್ಲಿ ಎಲ್ಲ ಪ್ರಾಯದವರೂ ಇದ್ದರು. ಹೆಚ್ಚಿನವರು ಕರ್ನಾಟಕ ಮತ್ತು ಕೇರಳದವರು. ನೂರಾರು ಕನಸುಗಳನ್ನು ಹೊತ್ತು ತಮ್ಮ ತಾಯ್ನೆಲಕ್ಕೆ ಹೊರಟವರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಜಾನೆ ಸೂರ್ಯೋದಯಕ್ಕೆ ಮೊದಲು ಅವರು ಮಂಗಳೂರು ತಲುಪಿ ತಮ್ಮ ತಮ್ಮ ಊರಿಗೆ ಟ್ಯಾಕ್ಸಿ ಏರಬೇಕಾಗಿತ್ತು. ಆದರೆ ವಿಧಿಯ ಆಟ ಬೇರೆಯೇ ಇತ್ತು.

ಟೇಬಲ್ ಟಾಪ್ ರನ್ ವೇ…

ಮುಂಜಾನೆ ಆರು ಘಂಟೆಯ ಹೊತ್ತಿಗೆ ಜನರು ಕಣ್ಣುಜ್ಜಿ ಹೊರಗೆ ನೋಡಲು ತೊಡಗಿದಾಗ ವಿಮಾನ ಬಜಪೆ ವಿಮಾನ ನಿಲ್ದಾಣದ ರನ್ ವೇ ಸ್ಪರ್ಶ ಮಾಡಿ ಓಡತೊಡಗಿತ್ತು. ಅದು ಟೇಬಲ್ ಟಾಪ್ ರನ್ ವೇ. ಅಂದರೆ ಎತ್ತರದ ಪರ್ವತದ ಮೇಲೆ ಸಮತಟ್ಟು ಮಾಡಿ ನಿರ್ಮಿಸಿದ್ದ ರನ್ ವೇ. ವಿಮಾನದ ಕ್ಯಾಪ್ಟನ್ ಗ್ಲುಸಿಕಾ (Glusica) ಮತ್ತು ಫಸ್ಟ್ ಆಫೀಸರ್ ಹರಿಂದರ್ ಸಿಂಘ್ ಅಹ್ಲುವಾಲಿಯಾ ಇಬ್ಬರೂ ಅನುಭವಿಗಳು. ಅದರಲ್ಲಿ ಕ್ಯಾಪ್ಟನ್ ಗ್ಲುಸಿಕಾ ಅದೇ ರನ್ ವೇ ಮೇಲೆ ಹಿಂದೆ 16 ಬಾರಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ ದಾಖಲೆ ಹೊಂದಿದ್ದರು. 2448 ಮೀಟರ್ ಉದ್ದವಾದ ರನ್ ವೇಯಲ್ಲಿ ವಿಮಾನವನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸುವುದು ಕಷ್ಟ ಆಗಿರಲಿಲ್ಲ. ವಾತಾವರಣವೂ ಪೂರಕವಾಗಿತ್ತು. ಬಜಪೇ ವಿಮಾನ ನಿಲ್ದಾಣದಿಂದ ಪೂರಕ ಸಂಕೇತಗಳು ದೊರೆಯುತ್ತಿದ್ದವು.

ಕಣ್ಣು ಮುಚ್ಚಿ ತೆರೆಯುವ ಒಳಗೆ..

ಈ ಬಾರಿ ರನ್ ವೇಯಲ್ಲಿ ಓಡಲು ತೊಡಗಿದ ವಿಮಾನ ನಿಯಂತ್ರಣಕ್ಕೆ ಬರಲಿಲ್ಲ. ರನ್ ವೇ ಪೂರ್ತಿ ಓಡಿದ ನಂತರವೂ ವೇಗ ಕಡಿಮೆ ಆಗಲಿಲ್ಲ. ಅಪಾಯದ ಗೆರೆ ದಾಟಿ ಓಡಿದ ವಿಮಾನ ಮುಂದೆ ಇರುವ ಕೆಂಜಾರು ಎಂಬ ಜಾಗದ ಕಂದಕದಲ್ಲಿ ಉರುಳಿ ಬಿದ್ದು ಎರಡು ಭಾಗವಾಯಿತು. ಕ್ಷಣ ಮಾತ್ರದಲ್ಲಿ ಇಂಜಿನ್ ಟ್ಯಾಂಕ್ ಬೆಂಕಿ ಹಿಡಿದು ವಿಮಾನ ಹೊತ್ತಿ ಉರಿಯಲು ಆರಂಭವಾಯಿತು. ಆಕಾಶದ ಎತ್ತರಕ್ಕೆ ಬೆಂಕಿ ಮತ್ತು ಹೊಗೆ ಏರುತ್ತಾ ಹೋದಂತೆ ಒಳಗಿದ್ದ ಪ್ರಯಾಣಿಕರಿಗೆ ಏನಾಗ್ತಾ ಇದೆ ಎಂದು ಅರಿವಾಗುವ ಮೊದಲೇ ಇಡೀ ವಿಮಾನ ಸುಟ್ಟು ಹೋಯಿತು. ಸಣ್ಣಗೆ ಮಳೆ ಸುರಿಯುತ್ತಿದ್ದರೂ ವಿಮಾನದ ಬೆಂಕಿ ಆರಲಿಲ್ಲ.

ರೆಸ್ಕ್ಯೂ ಆಪರೇಶನ್ ಆರಂಭ.

ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಮಂಗಳೂರಿನಿಂದ ಅಗ್ನಿ ಶಾಮಕ ವಾಹನಗಳು, ಆಂಬ್ಯುಲೆನ್ಸಗಳು ಸ್ಥಳಕ್ಕೆ ಧಾವಿಸಿ ಬಂದವು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸ್ಥಳಕ್ಕೆ ಧಾವಿಸಿದರು. ಬೆಂಕಿ ಆರಿಸುವ ಪ್ರಯತ್ನವು ಹಲವು ಘಂಟೆ ನಡೆಯಿತು. ವಿಮಾನದಿಂದ ಸುಟ್ಟು ಕರಕಲಾದ ಶವಗಳನ್ನು ಹೊರಗೆ ತೆಗೆಯುವುದೇ ಕಷ್ಟ ಆಯಿತು. ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಂದು ಸುಟ್ಟು ಹೋದವರ ಸಂಖ್ಯೆಯೇ 158!

ವಿಮಾನದಲ್ಲಿ ಇದ್ದ ಪ್ರಯಾಣಿಕರ ಸಂಖ್ಯೆ 166. ಆರು ಜನ ಕ್ರೂ (Crew) ಸದಸ್ಯರು ಬೇರೆ ಇದ್ದರು. ಅಂದು ಬದುಕಿ ಉಳಿದವರ ಸಂಖ್ಯೆ 8 ಮಾತ್ರ. ತೀವ್ರವಾಗಿ ಗಾಯಗೊಂಡವರ ಸಂಖ್ಯೆ 8. ಅಂದರೆ 158 ಜನರು ಸುಟ್ಟು ಕರಕಲಾಗಿ ಹೋಗಿದ್ದರು! ಕ್ರೂ (Crew) ಸದಸ್ಯರೂ ಬೂದಿ ಆಗಿದ್ದರು. ಶವಗಳನ್ನು ಗುರುತು ಹಿಡಿಯುವುದು ತುಂಬಾನೇ ಕಷ್ಟ ಆಯಿತು. ಒಂದೊಂದು ಶವವನ್ನು ಎತ್ತಿ ಆಂಬುಲೆನ್ಸಗೆ ಸಾಗಿಸುವಾಗ ಜನರ ಆಕ್ರಂದನ ಹೃದಯ ವಿದ್ರಾವಕ ಆಗಿತ್ತು.

ಆಸ್ಪತ್ರೆಗೆ ಧಾವಿಸಿ ತಮ್ಮವರನ್ನು ಶವಗಳ ರಾಶಿಯಲ್ಲಿ ಹುಡುಕುತ್ತಾ ಅಳುವವರ ದೃಶ್ಯವು ನಿಜಕ್ಕೂ ಕರುಣಾಜನಕ ಆಗಿತ್ತು. ಅದರಲ್ಲಿಯೂ 12 ಶವಗಳ ಗುರುತು ಹಿಡಿಯುವುದೇ ಕಷ್ಟವಾಗಿ ಅವುಗಳನ್ನು ಮುಂದೆ ಕೂಳೂರಿನ ಫಲ್ಗುಣಿ ನದಿ ತೀರದಲ್ಲಿ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

ಪೈಲಟ್ ನಿದ್ದೆ ರೆಕಾರ್ಡ್ ಆಗಿತ್ತು!

ಇಂತಹ ಅಪಘಾತಗಳು ನಡೆದಾಗ ಗಂಭೀರವಾದ ವಿಚಾರಣೆಗಳು ನಡೆಯುತ್ತವೆ. ಕಾಕ್‌ಪಿಟ್ ರೆಕಾರ್ಡರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಗ್ಲುಸಿಕಾ ಅವರ ನಿದ್ದೆ ರೆಕಾರ್ಡ್ ಆಗಿತ್ತು. ಅಂದರೆ 55 ವರ್ಷ ಪ್ರಾಯದ ಆತನು ಸುಮಾರು ಹೊತ್ತು ವಿಮಾನದ ಹಾರಾಟದ ಅವಧಿಯಲ್ಲಿ ಮಲಗಿದ್ದು ನಿಚ್ಚಳವಾಯಿತು! ಇದೇ ಅಪಘಾತಕ್ಕೆ ಕಾರಣ ಎಂದು ಧೃಡವಾಗಿತ್ತು.

ಮುಂದೆ ಏನಾಯಿತು?

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೃತರಾದವರಿಗೆ ಪರಿಹಾರ ಕೊಟ್ಟವು. ವಿಮಾನ ಯಾನ ಸಂಸ್ಥೆ ಮತ್ತು ಖಾಸಗಿ ವಿಮಾ ಕಂಪೆನಿಗಳು ಪರಿಹಾರಗಳನ್ನು ನೀಡಿದವು. ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ದುರಂತದ ಸ್ಮಾರಕವನ್ನು ನಿರ್ಮಾಣ ಮಾಡಿ ಮೃತರಾದವರಿಗೆ ಶ್ರದ್ಧಾಂಜಲಿ ಕೊಟ್ಟಿತ್ತು. ಆದರೆ ತಮ್ಮವರನ್ನು ಕಳೆದುಕೊಂಡು ಇಂದಿಗೂ ರೋಧಿಸುತ್ತಿರುವ, ನೋವು ಪಡುತ್ತಿರುವ ಮಂದಿಗೆ ಈ ದುರಂತವು ಮರೆತು ಹೋಗುವುದು ಹೇಗೆ? ಅಂದು ಮಡಿದ ನೂರಾರು ಮಂದಿಗೆ ಒಂದು ಹನಿ ಕಣ್ಣೀರು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Exit mobile version