Site icon Vistara News

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

ರಾಜಮಾರ್ಗ ಅಂಕಣ nagara panchami

ತುಳುನಾಡಿನ ನಾಗಾರಾಧನೆಗೆ – ನೂರಾರು ಆಯಾಮಗಳು

ರಾಜಮಾರ್ಗ ಅಂಕಣ: ತಮಗೆಲ್ಲರಿಗೂ ನಾಗರಪಂಚಮಿ (Nagara Panchami) ಹಬ್ಬದ ಶುಭಾಶಯಗಳು. ನಾಗಾರಾಧನೆಯು ನಮ್ಮ ಹಿರಿಯರ ಪ್ರಕೃತಿ ಪ್ರೇಮ, ಕೃತಜ್ಞತೆಯ ಪ್ರತೀಕ ಎಂದೇ ಭಾವಿಸಲಾಗುತ್ತದೆ. ಜಗತ್ತಿನಾದ್ಯಂತ ನಾಗಾರಾಧನೆಯು ಇದ್ದರೂ ತುಳುನಾಡಿನ (Tulunadu) ನಾಗಾರಾಧನೆಯ (nagaradhane) ವಿಸ್ತಾರ ಮತ್ತು ಹರಹು ದೊಡ್ಡದು. ಅದಕ್ಕೆ ನೂರಾರು ಕಾರಣಗಳೂ ಇವೆ.

ತುಳುನಾಡು ಅಂದರೆ ನಾಗದೇವರ ಭೂಮಿ

ಭಾರತದ ಎಲ್ಲ 18 ಪುರಾಣಗಳಲ್ಲಿ ನಾಗದೇವರ ಉಲ್ಲೇಖವು ಬರುತ್ತದೆ ಅನ್ನುತ್ತದೆ ಒಂದು ಆಯಾಮ. ಇನ್ನೊಂದು ಈ ಕರಾವಳಿಯ ಭಾಗವು ‘ನಾಗರಖಂಡ ‘ಎಂದು ಕರೆಯಲ್ಪಟ್ಟಿದೆ. ಈ ಭೂಮಿಯನ್ನು ನಾಗದೇವರು ನಮಗೆ ದಾನವಾಗಿ ನೀಡಿದರು ಅನ್ನುವುದು ಇನ್ನೊಂದು ಆಯಾಮ. ಅದರಿಂದಾಗಿ ನಾಗಾರಾಧನೆ ಅಂದರೆ ನಮ್ಮ ಹಿರಿಯರ ಕೃತಜ್ಞತೆಯ ಸಂಕೇತವೇ ಆಗಿದೆ. ಇಲ್ಲಿನ ಸಡಿಲ ಮಣ್ಣು, ತೇವಾಂಶ ಮತ್ತು ವಾತಾವರಣದ ಉಷ್ಣತೆ ಇವುಗಳು ನಾಗನ ನಡೆಗೆ ಪೂರಕವಾಗಿಯೇ ಇವೆ. ಆದ್ದರಿಂದ ಇಡೀ ತುಳುನಾಡು ನಾಗದೇವರ ನಡೆಯೇ ಆಗಿದೆ. ನಾಗದೇವರು ನಮ್ಮ ಪೂರ್ವಜ ಎಂಬಲ್ಲಿಗೆ ಸರ್ಪ ಸಂಸ್ಕಾರ ಇತ್ಯಾದಿ ವಿಧಿಗಳೂ ನಡೆದುಬಂದವು. ಭೂಮಿಯನ್ನು ಹೊತ್ತವನು ಮಹಾಶೇಷ ಎಂಬ ಕಾರಣಕ್ಕೆ ಕೂಡ ನಾಗದೇವರ ಆರಾಧನೆಯು ಪ್ರಾಮುಖ್ಯತೆ ಪಡೆಯುತ್ತದೆ.

ತುಳುನಾಡಿನಲ್ಲಿ ನಾಗದೇವರು ಮತ್ತು ದೈವಗಳೇ ಸಾರ್ವಭೌಮರು. ಇಲ್ಲಿನ ಜನಗಳು ಅವೆರಡನ್ನು ನಂಬಿದಷ್ಟು ಬೇರೆ ಯಾವುದನ್ನೂ ನಂಬುವುದಿಲ್ಲ. ಕುಟುಂಬದ ಹಿರಿಯರು ಮೂಲನಾಗನಿಗೆ ತನು ಹಾಕುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ನಾಗನ ಬಗ್ಗೆ ಇರುವ ಭಕ್ತಿ, ಗೌರವ ಮತ್ತು ಭಯಗಳು ನಮ್ಮ ಜನ್ಮದಿಂದಲೂ ನಮ್ಮ ಹೊಕ್ಕಳಬಳ್ಳಿಯ ಒಳಗೇ ಕೂತಿರುತ್ತವೆ.

ತುಳುನಾಡಿನ ನಾಗಾರಾಧನೆ ನೂರು ವಿಧ

ಹುತ್ತಪೂಜೆ, ನಾಗದೇವರ ಶಿಲಾ ಪೂಜನ, ತನು ಹಾಕುವುದು, ಆಶ್ಲೇಷಾ ಪೂಜೆ, ನಾಗಮಂಡಲ, ತಂಬಿಲ ನೀಡುವುದು, ಢಕ್ಕೆಬಲಿ, ಸರ್ಪ ಸಂಸ್ಕಾರ…ಹೀಗೆ ನೂರಾರು ಆಯಾಮಗಳಲ್ಲಿ ತುಳುನಾಡಿನ ನಾಗಾರಾಧನೆಯು ಸಾಗಿಬಂದಿದೆ. ಇವೆಲ್ಲವೂ ತುಳುನಾಡಿನಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಶ್ರಾವಣ ಶುಕ್ಲ ಪಂಚಮಿಯಂದು ನಡೆಸುವ ನಾಗಬನದಲ್ಲಿ ತನು ಹಾಕುವ ವಿಧಿಯನ್ನು ಯಾವ ಕುಟುಂಬವೂ ತಪ್ಪಿಸಿಕೊಳ್ಳುವುದಿಲ್ಲ. ಶ್ರದ್ಧೆ ಒಂದಿಂಚೂ ಕಡಿಮೆ ಆಗುವುದಿಲ್ಲ. ಇಡೀ ಕುಟುಂಬವು ಮೂಲನಾಗನನ್ನು ಹುಡುಕಿಕೊಂಡು ಬಂದು ಭಾಗವಹಿಸುವುದರಿಂದ ನಾಗರಪಂಚಮಿಯು ಕೂಡು ಕುಟುಂಬದ ಹಬ್ಬ.

ನಾಗಾರಾಧನೆಯ ವೈಜ್ಞಾನಿಕ ಹಿನ್ನೆಲೆ

ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ನಾಗಾರಾಧನೆಯ ಬಣ್ಣ ಬಣ್ಣದ ಮಂಡಲಗಳು, ಸುವಾಸನೆ ಬೀರುವ ಹೂವುಗಳು, ಆ ಬಣ್ಣಗಳ ವಿನ್ಯಾಸಗಳು, ನಾಗದೇವರ ಬನದ ಪರಿಸರ, ಅಲ್ಲಿರುವ ಔಷಧಿಯ ಸಸ್ಯಗಳು ಇವೆಲ್ಲವೂ ಸೇರಿ ನಮ್ಮ ದೇಹದ ಮತ್ತು ಮಾನಸಿಕ ಆರೋಗ್ಯವು ಅಭಿವೃದ್ದಿ ಆಗುತ್ತದೆ ಎನ್ನುತ್ತದೆ ವಿಜ್ಞಾನ. ನಾಗನ ನಡೆಯ ಮಣ್ಣು ಔಷಧೀಯ ಗುಣವನ್ನು ಹೊಂದಿದ್ದು ಅದರ ಸ್ಪರ್ಶದಿಂದ ಚರ್ಮರೋಗ ಗುಣವಾಗುವುದು ಸಾಬೀತು ಆಗಿದೆ. ಹಾಗೆಯೇ ಸಂತಾನ ದೋಷ ಪರಿಹಾರ, ದೃಷ್ಟಿದೋಷ ಪರಿಹಾರ ಕೂಡ ಆಗಿರುವ ಸಾವಿರಾರು ಉದಾಹರಣೆಗಳು ನಮಗೆ ಇಲ್ಲಿ ದೊರೆಯುತ್ತವೆ. ನಾಗಾರಾಧನೆಯ ವಿಷಯದಲ್ಲಿ ನಂಬಿಕೆ ಮತ್ತು ವಿಜ್ಞಾನಗಳು ಜೊತೆ ಜೊತೆಯಾಗಿ ಮುನ್ನಡೆಯುತ್ತವೆ.

ಕಾಂಕ್ರೀಟ್ ಕಾಡುಗಳು ಮತ್ತು ನಾಗದೇವರ ಬನ

ಸಾವಿರಾರು ವರ್ಷಗಳಿಂದ ಹರಿದುಬಂದ ‘ನಾಗದೇವರ ನೈಸರ್ಗಿಕ ಬನದ ಕಲ್ಪನೆ ‘ಯು ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಗನನ್ನು ಕೃತಕವಾದ ಕಾಂಕ್ರೀಟ್ ಕಾಡನ್ನು ಮಾಡಿ ಪೂಜೆ ಮಾಡುವುದಕ್ಕಿಂತ ನೈಸರ್ಗಿಕವಾದ ನಾಗನ ಬನ (ಬನ ಅಂದರೆ ಕಾಡು ಎಂದರ್ಥ)ದಲ್ಲಿಯೇ ನಾಗನ ಪೂಜೆ ನೆರವೇರಿಸಬೇಕು ಎಂಬ ಬೃಹತ್ ಅಭಿಯಾನವು ಇಂದು ಕರಾವಳಿಯ ಉದ್ದಕ್ಕೂ ಜಾಗೃತಿ ಮೂಡಿಸುತ್ತಿದೆ. ಅಂದರೆ ನಿರ್ದಿಷ್ಟವಾದ ಗಿಡಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಅಲ್ಲಿ ಬೆಳೆಸಿ ಅಲ್ಲಿಯೇ ತಂಪಾದ ಜಾಗದಲ್ಲಿ ನಾಗನ ಆವಾಸ ಸ್ಥಾನವನ್ನು ನಿರ್ಮಾಣ ಮಾಡುವ ಮತ್ತು ಅಲ್ಲಿಯೇ ನಾಗಾರಾಧನೆ ಮಾಡುವ ಅದ್ಭುತ ಕಲ್ಪನೆ ಇಂದು ಜನಪ್ರಿಯತೆ ಪಡೆಯುತ್ತಿದೆ. ಅದು ವೈಜ್ಞಾನಿಕವಾಗಿ ಕೂಡ ಪುಷ್ಟಿಯನ್ನು ಪಡೆಯುತ್ತಿದೆ. ವಿಶೇಷವಾಗಿ ಉಡುಪಿಯ ಉರಗತಜ್ಞರಾದ ಗುರುರಾಜ್ ಸನಿಲ್ ಹಲವಾರು ಪುಸ್ತಕಗಳನ್ನು ಬರೆದು ಮತ್ತು ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ. ಅವರು ಮತ್ತು ಅವರ ಗೆಳೆಯರು ಅಂತಹ ಹತ್ತಾರು ಕಡೆ ನಾಗಬನ ನಿರ್ಮಾಣ ಕೂಡ ಮಾಡಿದ್ದಾರೆ. ಹಾಗೆಯೇ ಉಡುಪಿಯ ಸಂವೇದನಾ ಫೌಂಡೇಶನ್ (ಸಂಚಾಲಕರು – ಪ್ರಕಾಶ್ ಮಲ್ಪೆ) ನೂರು ಪ್ರಾಕೃತಿಕ ನಾಗಬನಗಳನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಅವರಿಗೆ ನಮ್ಮ ನೆರವು ದೊರೆಯಲಿ.

ನಾಡಿನ ಎಲ್ಲ ಧಾರ್ಮಿಕ ಬಂಧುಗಳಿಗೆ ನಾಡಿನ ಅತೀ ದೊಡ್ಡ ಹಬ್ಬ ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

Exit mobile version