Site icon Vistara News

ರಾಜಮಾರ್ಗ ಅಂಕಣ: ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಪದಕ ಗೆದ್ದ ಕಾರ್ಕಳದ ಬೋಳ ಅಕ್ಷತಾ ಪೂಜಾರಿ

ರಾಜಮಾರ್ಗ ಅಂಕಣ bola akshta pujari

ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ವಿಭಾಗದಲ್ಲಿ ಮತ್ತೆ ಆಕೆಯಿಂದ ವಿಶ್ವವಿಕ್ರಮ!

ರಾಜಮಾರ್ಗ ಅಂಕಣ: ಈ ಶನಿವಾರ ದಕ್ಷಿಣ ಆಫ್ರಿಕಾದ ಫೊಚೇಫಸ್ಟಮ್ ನಗರದಲ್ಲಿ ನಡೆದ ಏಷಿಯಾ ಪೆಸಿಫಿಕ್ ಆಫ್ರಿಕನ್ (ಅಂದರೆ ಎರಡು ಖಂಡಗಳ ಮಟ್ಟದ) ಪವರ್ ಲಿಫ್ಟಿಂಗ್ (power lifting) ಮತ್ತು ಬೆಂಚ್ ಪ್ರೆಸ್ (bench press) ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಬೋಳ ಅಕ್ಷತಾ ಪೂಜಾರಿ (Bola Akshata Pujrai ಈ ಬಾರಿಯೂ ಚಿನ್ನದ ಪದಕ (gold medal) ಗೆದ್ದಿದ್ದಾರೆ! ಆಕೆ ನನ್ನೂರು ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದವರು ಅನ್ನೋದು ನಮಗೆಲ್ಲ ಹೆಮ್ಮೆ. ನಾನು ಬಾಲ್ಯದಿಂದಲೂ ಆಕೆಯ ಬೆಳವಣಿಗೆಯನ್ನು ಗಮನಿಸಿದ್ದೇನೆ ಅನ್ನುವುದು ನನಗೆ ಅಭಿಮಾನ.

ಈ ಬಾರಿ ಆಕೆ ಸ್ಪರ್ಧೆ ಮಾಡಿದ್ದು 52 ಕೆಜಿ ದೇಹತೂಕದ ಸೀನಿಯರ್ ವಿಭಾಗದಲ್ಲಿ. ಅಲ್ಲಿ ಸ್ಪರ್ಧೆ ತುಂಬಾ ಕಠಿಣ ಆಗಿದ್ದು 18 ಮಂದಿ ವಿದೇಶದ ಸ್ಪರ್ಧಿಗಳು ಇದ್ದರು! ಅಲ್ಲಿ ಅಕ್ಷತಾ ಪೂಜಾರಿ ಚಿನ್ನದ ಪದಕ ಗೆದ್ದು ತ್ರಿವರ್ಣ ಧ್ವಜ ಹಾರಿಸಿದ್ದಾರೆ ಅಂದರೆ ಅದು ಎಷ್ಟೊಂದು ದೊಡ್ಡ ಸಾಧನೆ!

ಆಕೆ ವಿಶ್ವಮಟ್ಟದ ಪದಕ ಗೆದ್ದಿರುವುದು ಇದೇ ಮೊದಲಲ್ಲ!

ಆಕೆಯ ಯಶೋಗಾಥೆಯು ಆರಂಭ ಆದದ್ದು 2011ರಲ್ಲಿ. ಅಂದು ಆಕೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಭಾಗವಹಿಸಿ 8 ಚಿನ್ನದ ಪದಕ ಪಡೆದಿದ್ದರು! ಅದರ ಮುಂದಿನ ವರ್ಷ (2012) ಮತ್ತೆ ಏಷಿಯನ್ ಕೂಟದಲ್ಲಿ ಗೋಲ್ಡ್! ಮತ್ತೆ 2014ರಲ್ಲಿ ವರ್ಲ್ಡ್ ಚಾಂಪಿಯನಶಿಪನಲ್ಲಿ ಗೋಲ್ಡ್! 2018ರಲ್ಲಿ ಏಷಿಯನ್ ದುಬಾಯಿ ಕೂಟದ ಗೋಲ್ಡ್! 2022ರಲ್ಲಿ ಕಝಾಕ್ ಸ್ಥಾನ ಕೂಟದಲ್ಲಿ ಸಿಲ್ವರ್ ಮೆಡಲ್! ಮತ್ತು ಈ ಬಾರಿ ಸೌಥ್ ಆಫ್ರಿಕಾ ಕೂಟದಲ್ಲಿ ಗೋಲ್ಡ್ ಮೆಡಲ್!

ಒಬ್ಬಳು ಹಳ್ಳಿಯ ಸಾಮಾನ್ಯ ಕೃಷಿಕ ಕುಟುಂಬದಿಂದ ಬಂದ ಓರ್ವ ಸೀದಾಸಾದಾ ಹುಡುಗಿ ಇಷ್ಟೊಂದು ವಿದೇಶದ ಕೂಟಗಳಿಗೆ ಹೋಗಿ ಭಾರತವನ್ನು ಪ್ರತಿನಿಧಿಸುವುದೇ ದೊಡ್ಡ ಅಚ್ಚರಿ ಆಗಿರುವಾಗ ಈಕೆ ಹೋದಲ್ಲೆಲ್ಲ ಪದಕಗಳ ಗೊಂಚಲನ್ನು ಗೆದ್ದು ತರುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ. ಅದರ ಜೊತೆಗೆ ಕಳೆದ 14 ವರ್ಷಗಳಲ್ಲಿ ಆಕೆ ಭಾರತದಲ್ಲಿ ಬೇರೆ ಬೇರೆ ನಗರಗಳಲ್ಲಿ ನಡೆದ ಪವರ್ ಲಿಫ್ಟಿಂಗ್ ಕೂಟಗಳಲ್ಲಿ ಭಾಗವಹಿಸಿ ಹೋದಲ್ಲೆಲ್ಲ ಪದಕಗಳನ್ನು ಗೆದ್ದಿದ್ದಾರೆ! ಆಕೆಯ ಬೋಳದ ಮನೆಯ ಶೋಕೇಸಿನಲ್ಲಿ ಮಿಂಚುತ್ತಿರುವ ಹೊಳೆಯುವ ಪದಕಗಳು ಯಾರಿಗಾದರೂ ಸ್ಫೂರ್ತಿಯ ಚಿಲುಮೆ ಆಗುವುದು ಖಂಡಿತ!

ಅಕ್ಷತಾ ಬಾಲ್ಯದಿಂದಲೂ ಗಟ್ಟಿಗಿತ್ತಿ!

ಅಕ್ಷತಾ ಬೋಳ ಗ್ರಾಮದ ಕೃಷಿ ಸಂಸ್ಕೃತಿಯ ಕೆಳಮಧ್ಯಮ ಕುಟುಂಬದಿಂದ ಬಂದವರು. ಅವರ ಮನೆಯಲ್ಲಿ ಯಾರೂ ಹೆಚ್ಚು ಓದಿದವರು ಇರಲಿಲ್ಲ. ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಆಕೆ 6-7 ಕಿಮೀ ದೂರದ ಬೆಳ್ಮಣ್ ಜ್ಯೂ. ಕಾಲೇಜಿಗೆ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಬರುತ್ತಿದ್ದರು! ಹಸಿವು ಆಕೆಗೆ ಅಭ್ಯಾಸ ಆಗಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಆಕೆಗೆ ಹೇಗೆ ಬಂತು ಎನ್ನುವುದು ಆಕೆಗೇ ಗೊತ್ತಿಲ್ಲ. ಮುಂದೆ ಪದವಿಯ ಶಿಕ್ಷಣಕ್ಕಾಗಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸೇರಿದ್ದು ಆಕೆಯ ಬದುಕಿನಲ್ಲಿ ಮಹತ್ವದ ತಿರುವು ಆಯಿತು. ಅಲ್ಲಿ ಆಕೆಗೆ ಪವರ್ ಲಿಫ್ಟಿಂಗ್ ಆರಿಸಿಕೊಳ್ಳಲು ಸಲಹೆ ದೊರೆಯಿತು ಮತ್ತು ಒಳ್ಳೆಯ ಕೋಚ್ ದೊರಕಿದರು. ಅಲ್ಲಿ ಅಕ್ಷತಾ ಬೆಳಿಗ್ಗೆ ಮತ್ತು ಸಂಜೆ ಕನಿಷ್ಠ 4 ಘಂಟೆ ಜಿಮ್ ನಲ್ಲಿ ಬೆವರು ಬಸಿಯುತ್ತಿದ್ದರು. ಸಾಧನೆಯ ಹಸಿವು ಕಿಡಿ ಆಗಿದ್ದು ನಿಟ್ಟೆಯಲ್ಲೇ ಎಂದು ಹೇಳಬಹುದು. ʼಪವರ್ ಲಿಫ್ಟಿಂಗ್ ಇಂಡಿಯಾ’ ಎಂಬ ರಾಷ್ಟ್ರಮಟ್ಟದ ಸಂಸ್ಥೆಯು ಆಕೆಗೆ ಇಷ್ಟೊಂದು ಅವಕಾಶಗಳನ್ನು ಮಾಡಿಕೊಟ್ಟಿತು ಮತ್ತು ಇದೇ ವಿಭಾಗದಲ್ಲಿ ಮಿಂಚುತ್ತಿದ್ದ ವಿಜಯ್ ಕಾಂಚನ್ ಎಂಬ ಸಾಧಕರು ಆಕೆಗೆ ಗುರುವಾಗಿ ಸಿಕ್ಕರು.

ಮನೆಯಂಗಳದಲ್ಲಿ ಬಾವಿಯನ್ನು ಕೊರೆದರು

ಅಕ್ಷತಾ ಸಾಧನೆಯ ಹಾದಿಯು ಸುಲಭದ್ದು ಆಗಿರಲಿಲ್ಲ. ತನಗಾದ ಕಿರುಕುಳ, ಅಪಮಾನ, ನೋವು ಎಲ್ಲವೂ ಆಕೆಯನ್ನು ಗಟ್ಟಿ ಮಾಡಿತು ಎಂದು ನನ್ನ ಭಾವನೆ. ತನ್ನದೇ ಮನೆಯಂಗಳದಲ್ಲಿ ಆಕೆ ತನ್ನ ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಒಂದು ಆಳವಾದ ಬಾವಿ ಕೊರೆದದ್ದು ಬಹಳ ದೊಡ್ಡ ಸುದ್ದಿ ಆಗಿತ್ತು. ಕೊರೋನಾ ಸಮಯದಲ್ಲಿ ಕೂಡ ಆಕೆ ತನ್ನ ತರಬೇತಿಯನ್ನು ನಿಲ್ಲಿಸಲಿಲ್ಲ ಅನ್ನುವುದು ನಿಜಕ್ಕೂ ಗ್ರೇಟ್!

ನನಗೆ ಅದಕ್ಕಿಂತ ಕಠಿಣ ಅನ್ನಿಸಿದ್ದು ಆಕೆ ಉದ್ಯೋಗ ಪಡೆಯಲು ಮಾಡಿದ ಸ್ವಾಭಿಮಾನಿ ಹೋರಾಟ. ತನ್ನ ಚಿನ್ನದ ಪದಕಗಳನ್ನು ಆಕೆ ತೆಗೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುವ ದೃಶ್ಯ ನನಗೆ ಭಾರೀ ನೋವು ಕೊಡುತ್ತಿತ್ತು. ಆಗ ನಿಟ್ಟೆಯ ಒಂದು ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ (ಈಗ ಮಾಜಿ) ಬಂದಿದ್ದಾಗ ನಾನು ಆಕೆಯನ್ನು ಕರೆದುಕೊಂಡು ಫೈಲ್ ಮುಂದಿಟ್ಟು ಸರಕಾರಿ ನೌಕರಿ ನೀಡಲು ವಿನಂತಿ ಮಾಡಿದ್ದೆ. ಆಗ ಆ ಸಿಎಂ ನಿರುತ್ಸಾಹ ತೋರಿಸಿ ‘ಏನಮ್ಮಾ, ಪವರ್ ಲಿಫ್ಟಿಂಗಿಗೆ ಮಾನ್ಯತೆ ಇದೆಯಾ? ಅದು ಒಲಿಂಪಿಕ್ಸ್ ಕೂಟದಲ್ಲಿ ಬರ್ತದಾ?’ ಎಂದೆಲ್ಲ ಕೇಳಿದ್ದರು.

ಈ ಪ್ರಶ್ನೆಯನ್ನು ಅಕ್ಷತಾ ಹಲವು ಬಾರಿ ಎದುರಿಸಿದ್ದಾರೆ. ಆದರೆ ಲಂಡನ್ ಕಾಮನ್ ವೆಲ್ತ್ ಕೂಟದಲ್ಲಿ ಆಕೆ 8 ಪದಕಗಳನ್ನು ಗೆದ್ದದ್ದು, ವರ್ಲ್ಡ್ ಚಾಂಪಿಯನಶಿಪ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದದ್ದು ಭಾರತವನ್ನು ಪ್ರತಿನಿಧಿಸಿ ಎನ್ನುವುದನ್ನು ಎಲ್ಲರೂ ಮರೆಯುತ್ತಾರೆ! ಇದು ನಿಜವಾಗಿಯೂ ಕ್ರೀಡಾಲೋಕದ ದುರಂತ ಅಲ್ಲವೇ?

ಇದಕ್ಕಿಂತ ದೊಡ್ಡ ದುರಂತ ಎಂದರೆ…

ಆಕೆ ಪ್ರತೀ ಬಾರಿ ವಿದೇಶದ ಲಿಫ್ಟಿಂಗ್ ಕೂಟಗಳಿಗೆ ಹಾಜರಾಗುವಾಗ ‘ಪವರ್ ಲಿಫ್ಟಿಂಗ್ ಇಂಡಿಯಾ’ ಸಂಸ್ಥೆಯು ಅನುಮತಿ ಮತ್ತು ಮಾರ್ಗದರ್ಶನ ಮಾಡುತ್ತದೆ. ಆದರೆ ಆಕೆಯ ಪ್ರಯಾಣದ ಮತ್ತು ಇತರ ಖರ್ಚುಗಳಿಗೆ ಸರಕಾರದ ಅನುದಾನ ಇಲ್ಲ, ನೀವೇ ಹೊಂದಿಸಿಕೊಳ್ಳಬೇಕು ಎನ್ನುವ ಪತ್ರ ಬರೆಯುತ್ತದೆ. ಆಗೆಲ್ಲ ಅಕ್ಷತಾ ನೆರವಿಗೆ ಬರುವುದು ಆಕೆಯ ಅಭಿಮಾನಿಗಳು, ಗೆಳೆಯರು ಮತ್ತು ಒಂದಿಷ್ಟು ಕ್ರೀಡಾಭಿಮಾಮಾನಿ ಸಂಘಟನೆಗಳು ಅಂದರೆ ನೀವು ನಂಬಲೇಬೇಕು. ಸ್ವಾಭಿಮಾನಿ ಅಕ್ಷತಾ ಅವರಿಗೆ ಇದು ತುಂಬಾ ನೋವು ಕೊಡುವ ಸಂಗತಿ. ಈ ಬಾರಿ ಕೂಡ ಆಕೆ ತನ್ನ ಆಫ್ರಿಕಾ ಪ್ರಯಾಣಕ್ಕೆ ಒಂದು ಲಕ್ಷ ಮೂವತ್ತು ಸಾವಿರ ದುಡ್ಡು ಹೊಂದಿಸಬೇಕಾಯಿತು! ಇದನ್ನೆಲ್ಲ ಗಮನಿಸಿದಾಗ ಆಕೆಯ ಕ್ರೀಡಾ ಸಾಧನೆ ನಮಗೆ ಇನ್ನಷ್ಟು ಹೊಳೆದು ಕಾಣುತ್ತದೆ. ಸರಕಾರದ ಕ್ರೀಡಾ ಇಲಾಖೆ, ಕ್ರೀಡಾಭಿಮಾನಿ ಸಂಘಟನೆಗಳು, ಜನಪ್ರತಿನಿಧಿಗಳು ಅಕ್ಷತಾ ಅವರಂತಹ ಕ್ರೀಡಾ ಸಾಧಕರ ನೆರವಿಗೆ ನಿಲ್ಲದೆ ಹೋದರೆ ನೂರಾರು ಕ್ರೀಡಾ ಪ್ರತಿಭೆಗಳು ನಲುಗಿ ಹೋಗುವ ಅಪಾಯ ಇದೆ. ಅಂದಹಾಗೆ ಅಕ್ಷತಾಗೆ ಆಫ್ರಿಕಾದಲ್ಲಿ ಬೆಸ್ಟ್ ಲಿಫ್ಟರ್ ಆಫ್ ದ ಟೂರ್ನಿ ಪ್ರಶಸ್ತಿ ಕೂಡ ದೊರೆತಿದೆ.

ಭರತವಾಕ್ಯ

ಏನಿದ್ದರೂ ಕಾರ್ಕಳ ತಾಲೂಕಿನ ಬೋಳ ಎಂಬ ಪುಟ್ಟ ಗ್ರಾಮದಿಂದ ಲಂಡನ್, ಅಮೆರಿಕ, ಆಫ್ರಿಕ, ದುಬಾಯಿ, ಕಝಾಕಿಸ್ತಾನ್ ತಲುಪಿದ ಆಕೆಯ ಹೋರಾಟ ಮತ್ತು ಸಾಹಸಗಳು ಸಾವಿರಾರು ಗ್ರಾಮೀಣ ಸಾಧಕರಿಗೆ ಸ್ಫೂರ್ತಿ ಆಗಬಲ್ಲದು. ಸರಕಾರ ಆಕೆಯನ್ನು ದೊಡ್ಡದಾಗಿ ಗುರುತಿಸಬೇಕು. ಆಕೆಯ ಬದುಕಿನ ಕಥೆಯು ಹೈಸ್ಕೂಲಿನ ಕನ್ನಡ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆಯಬೇಕು. ಏನಂತೀರಿ?

ಅಭಿನಂದನೆಗಳು ಅಕ್ಷತಾ. ಯು ಮೇಡ್ ಅಸ್ ಪ್ರೌಡ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

Exit mobile version