Site icon Vistara News

ರಾಜಮಾರ್ಗ ಅಂಕಣ: RCB- ʼಹೊಸ ಅಧ್ಯಾಯʼ ಆರಂಭ ಆಗೋದು ಯಾವಾಗ?

RCB team 2024

ಪಾಯಿಂಟ್ಸ್ ಟೇಬಲಿನಲ್ಲಿ ಕೊನೆಯ ಸ್ಥಾನದಲ್ಲಿ RCB !

ರಾಜಮಾರ್ಗ ಅಂಕಣ: RCB ಟೀಮ್ ಸೋತರೆ ಬೇಜಾರಿಲ್ಲ. ಆದರೆ ಈ ರೀತಿ ಸೋಲಬಾರದು!

ಈ ಬಾರಿ RCB ಮಹಿಳಾ ತಂಡ ʼಮಹಿಳಾ ಪ್ರೀಮಿಯರ್ ಲೀಗ್’ ಟ್ರೋಫಿ ಗೆದ್ದ ನಂತರ ನಮ್ಮ RCB ತಂಡದ ಬಗ್ಗೆ ಒಂದಿಷ್ಟು ಭರವಸೆ ಮೂಡಿದ್ದು ಸುಳ್ಳಲ್ಲ. RCB ತಂಡ ಸಾಮಾನ್ಯವಾದ ತಂಡ ಅಲ್ಲವೇ ಅಲ್ಲ. ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅದು! 16 ಆವೃತ್ತಿಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡ ಆದರೂ ಆ ತಂಡಕ್ಕೆ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶ ಮಾಡಿದ ತಂಡ ಎಂಬ ಹೆಗ್ಗಳಿಕೆ ಬೇರೆ ಅವರಿಗಿದೆ.

ಆದರೆ ಈ ಬಾರಿ ಏನಾಗಿದೆ ನಮ್ಮ ತಂಡಕ್ಕೆ?

ಈ ವರ್ಷವೂ ಬಲಿಷ್ಠ ಆಟಗಾರರನ್ನು ಹೊಂದಿರುವ ಆ ತಂಡದ ಆಟಗಾರರು ತಮ್ಮ ಚಾಂಪಿಯನ್ ಆಟವನ್ನು ಶೋಕೇಸ್ ಮಾಡಲು ಪದೇ ಪದೇ ಸೋಲುತ್ತಿರುವುದು ಅದರ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣ ಆಗಿದೆ. ಸೋಮವಾರದ ಹೈದರಾಬಾದ್ ವಿರುದ್ಧದ ಪಂದ್ಯವು ಮುಗಿದಾಗ RCB ತಂಡವು ಕೇವಲ 2 ಅಂಕ ಗಳಿಸಿ ಪಾಯಿಂಟ್ಸ್ ಟೇಬಲಿನಲ್ಲಿ ಕೊನೆಯ ಸ್ಥಾನ ಪಡೆದಿರುವುದನ್ನು ನೋಡುವುದು ಆ ತಂಡದ ಅಭಿಮಾನಿಗಳಿಗೆ ಆಘಾತಕಾರಿ ಆಗಬಹುದು. ಏಳು ಪಂದ್ಯಗಳಲ್ಲಿ ಆ ತಂಡವು ಗೆದ್ದಿರುವುದು ಕೇವಲ ಒಂದೇ ಪಂದ್ಯ.

ಹೆಚ್ಚಿನ ಪಂದ್ಯಗಳನ್ನು ಅವರು ದೊಡ್ಡ ಮಾರ್ಜಿನಿನಲ್ಲಿ ಫೈಟ್ ಕೊಡದೆ ಸೋತಿರುವುದನ್ನು ನೋಡುವಾಗ ನಿಜವಾಗಿಯೂ ದುಃಖ ಆಗುತ್ತದೆ. ಇಡೀ ತಂಡದ ಆತ್ಮವಿಶ್ವಾಸ ಪಾತಾಳಕ್ಕೆ ಕುಸಿದು ಹೋಗಿರುವುದು ಮೈದಾನದಲ್ಲಿ ಆಟಗಾರರ ಬಾಡಿ ಲ್ಯಾಂಗ್ವೇಜ್ ನೋಡಿದರೆ ಗೊತ್ತಾಗುತ್ತದೆ. ಇಡೀ ತಂಡವು ಒಂದು ತಂಡವಾಗಿ
ಆಡುವುದರಲ್ಲಿ ಪದೇ ಪದೇ ಎಡವುತ್ತಿದೆ. ಪ್ಲೇ ಆಫ್ ಸುತ್ತಿಗೆ RCB ಇನ್ನು ಪ್ರವೇಶ ಪಡೆಯಬೇಕಾದರೆ ಭಾರೀ ದೊಡ್ಡ ಮಿರಾಕಲ್ ನಡೆಯಬೇಕು ಎಂಬಲ್ಲಿಗೆ RCB ಅಭಿಮಾನಿಗಳು ‘ಈ ಬಾರಿ ಕಪ್ ನಂದೇ ‘ ಎಂದು ಹೇಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಅನ್ನಿಸುತ್ತದೆ.

ಆಟಗಾರರ ಘನಘೋರ ವೈಫಲ್ಯ

ವಿರಾಟ್ ಕೊಹ್ಲಿ ಬಿಟ್ಟರೆ ಬೇರೆ ಯಾವ ಆಟಗಾರರ ಬ್ಯಾಟ್ ಸಿಡಿಯುತ್ತಿಲ್ಲ. ಇಡೀ ತಂಡದ ಒತ್ತಡ ವಿರಾಟ್ ಮೇಲೆ ಬಿದ್ದ ಕಾರಣ ಅವರ ಆಕ್ರಮಣಶೀಲತೆ ಕಡಿಮೆ ಆಗುತ್ತಾ ಇದೆ. ನಾಯಕ ಫ್ಲಾಪ್ ಡುಪ್ಲೇಸಿಸ್ ಅಲ್ಲೊಂದು, ಇಲ್ಲೊಂದು ಇನ್ನಿಂಗ್ಸ್ ಬಿಟ್ಟರೆ ಸ್ಥಿರ ಪ್ರದರ್ಶನ ಇಲ್ಲ. ರಜತ್ ಪಾಟಿದಾರ್ ಮತ್ತು ಭಾರೀ ಹೋರಾಟದ ಹಿನ್ನೆಲೆ ಇರುವ ಮ್ಯಾಕ್ಸ್ವೆಲ್ ಸತತವಾಗಿ ಸೋಲುತ್ತಿರುವುದು RCB ತಂಡದ ಸೋಲಿಗೆ ಮುನ್ನುಡಿ ಬರೆದಿದೆ ಎಂದು ಖಚಿತವಾಗಿ ಹೇಳಬಹುದು. ವಿಶೇಷವಾಗಿ ಮ್ಯಾಕ್ಸ್ವೆಲ್ ಅಂತಹ ಆಟಗಾರ ಒಂದು ಪಂದ್ಯದಲ್ಲಿಯೂ ಆಡುತ್ತಿಲ್ಲ ಅನ್ನುವುದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಸ್ಲಾಗ್ ಓವರಗಳಲ್ಲಿ ದಿನೇಶ್ ಕಾರ್ತಿಕ್ ಸಿಡಿದು ನಿಲ್ಲುತ್ತಿದ್ದಾರೆ. ಆದರೆ ಅವರ ಎಲ್ಲ ಹೋರಾಟಗಳು ವ್ಯರ್ಥ ಆಗುತ್ತಿವೆ. ರೀಸ್ ಟಾಪ್ಲಿ, ಕ್ಯಾಮರೂನ್ ಗ್ರೀನ್ ಮೊದಲಾದ ವಿದೇಶೀ ಆಟಗಾರರು ಅವರ ಕೀರ್ತಿಗೆ ಸರಿಯಾಗಿ ಆಡುತ್ತಿಲ್ಲ.

ಫಾಫ್‌ ನಾಯಕತ್ವ ಫ್ಲಾಫ್ ಆಗ್ತಾ ಇದೆ

RCB ಕಪ್ತಾನ ಫಾಫ್‌ ನಾಯಕತ್ವ, ಅವರ ತಂತ್ರಗಾರಿಕೆ, ಫೀಲ್ಡಿಂಗ್ ಬದಲಾವಣೆಗಳು ಗೆಲುವು ತಂದುಕೊಡುತ್ತಿಲ್ಲ. ವೇಗದ ಮತ್ತು ಸ್ಪಿನ್ ಬೌಲರಗಳು ಎಲ್ಲರೂ ಸಾಲು ಸಾಲಾಗಿ ಹೊಡೆಸಿಕೊಳ್ಳುವಾಗ ಯಾವ ಕ್ಯಾಪ್ಟನ್ ಆದರೂ ಏನು ಮಾಡಲು ಸಾಧ್ಯ ಹೇಳಿ? ಮುಂಬೈ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಮ್ಮ ಬೌಲರಗಳು ದಯನೀಯವಾಗಿ ವಿಫಲವಾದ ದೃಶ್ಯ ನಮ್ಮ ಕಣ್ಣ ಮುಂದಿವೆ. ಹಿಂದೆ RCB ಮಾಡಿದ್ದ ಬ್ಯಾಟಿಂಗ್ ದಾಖಲೆಯನ್ನು ಅದೇ ತಂಡದ ವಿರುದ್ಧ ಹೈದರಾಬಾದ್ ಮುರಿದು 287 ರನ್ನುಗಳ ಪರ್ವತವನ್ನು ಏರಿದಾಗ RCB ಅಭಿಮಾನಿಗಳ ಎದೆ ಒಡೆದೇ ಹೋಗಿದೆ.

ಪಂಜಾಬ್ ಬಿಟ್ಟು ಬೇರೆಲ್ಲ ಟೀಮ್ ವಿರುದ್ಧ RCB ಸೋಲನ್ನೇ ಕಂಡ ಕಳಪೆ ದಾಖಲೆ ಈ ಬಾರಿಯದ್ದು. ಇನ್ನು ಬಾಕಿ ಉಳಿದ ಎಲ್ಲ ಪಂದ್ಯಗಳನ್ನು ಗೆದ್ದು ಅವರು ಎದ್ದುಬರಲಿ ಎನ್ನುವುದು ಭಾರೀ ದೊಡ್ಡ ಆಶಾವಾದ ಆಗಬಹುದು.

ಅದೃಷ್ಟವೂ ಅವರ ಜೊತೆಗೆ ಇಲ್ಲ

ತಂಡದ ಆಟಗಾರರ ಆಯ್ಕೆಯಲ್ಲಿ ಟೀಮ್ ಮ್ಯಾನೇಜಮೆಂಟ್ ಎಡವಿದೆ ಎನ್ನುವುದು ಸ್ಪಷ್ಟ. ತಂಡದಿಂದ ಬೇರ್ಪಟ್ಟು ಬೇರೆ ತಂಡಕ್ಕೆ ಹೋದ ಆಟಗಾರರು ಅಲ್ಲಿ ಶೈನ್ ಆಗ್ತಾ ಇದ್ದಾರೆ. T20 ಪಂದ್ಯಗಳಲ್ಲಿ ಇರಲೆಬೇಕಾದ ಆಕ್ರಮಣಶೀಲತೆ ಮತ್ತು ವೃತ್ತಿಪರತೆ ಎರಡೂ ಅಲ್ಲಿ ಮಿಸ್ ಆಗಿದೆ.

RCB ಕಪ್ ಗೆಲ್ಲಲಿ ಎಂದು 17 ವರ್ಷಗಳಿಂದ ಕಾದು ಕೂತಿರುವ ಅವರ ಅಭಿಮಾನಿಗಳು ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕೋ ದೇವರೇ ಬಲ್ಲ!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಬೇಂದ್ರೆ ಎಂಬ ಶಬ್ದ ಗಾರುಡಿಗ

Exit mobile version