ಒಬ್ಬ ಚಾಂಪಿಯನ್ ಕ್ರಿಕೆಟರ್ ಈ ರೀತಿ ನೈತಿಕ ಅಧಃಪತನ ಹೊಂದಲು ಕಾರಣವೇನು?
:: ರಾಜೇಂದ್ರ ಭಟ್ ಕೆ.
ರಾಜಮಾರ್ಗ ಅಂಕಣ: ಭಾರತದ ಮಾಜಿ ಕ್ರಿಕೆಟರ್, ಬಲಿಷ್ಠ ಎಡಗೈ ದಾಂಡಿಗ ವಿನೋದ್ ಕಾಂಬ್ಳಿಗೆ (Vinod Kambli) ಸಂಬಂಧಪಟ್ಟ ಇತ್ತೀಚಿನ ಒಂದು ವಿಡಿಯೋ ನೋಡಿ ಕರುಳು ಕಿತ್ತು ಬಂತು! ಒಂದು ಬೈಕಿಗೆ ಸ್ಟ್ಯಾಂಡ್ ಹಾಕಲೂ ಆಗದೆ ದೇಹದ ಬ್ಯಾಲೆನ್ಸ್ ತಪ್ಪಿದಾಗ ಆತನನ್ನು ಕೆಲವು ದಾರಿಹೋಕರು ಎತ್ತಿಹಿಡಿದು ನಡೆಸಿಕೊಂಡು ಹೋಗುವ ವಿಡಿಯೋ ನಿಜವಾಗಿಯೂ ನೋವು ಕೊಟ್ಟಿತು.
ಅದೇ ವಿನೋದ್ ಕಾಂಬ್ಳಿ ಕಳೆದ ವರ್ಷ ಟಿವಿ ಕ್ಯಾಮೆರಾದ ಮುಂದೆ ಬಂದು ನನಗೆ ತೀವ್ರ ಆರ್ಥಿಕ ಸಮಸ್ಯೆ ಇದೆ, ಬದುಕು ಸಂಭಾಳಿಸುವುದೆ ಕಷ್ಟ ಆಗ್ತಾ ಇದೆ ಎಂದು ಗಳಗಳನೆ ಅತ್ತಿದ್ದರು! ತೀರಾ ಹತಾಶೆ ತೋಡಿಕೊಂಡಿದ್ದರು!
ನನ್ನ ಮನಸ್ಸು ಆಗ 38 ವರ್ಷಗಳ ಹಿಂದಕ್ಕೆ ಓಡಿತು.
ಗೆಳೆಯರಿಬ್ಬರ ದಾಖಲೆಯ ಇನ್ನಿಂಗ್ಸ್!
ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರು ಮುಂಬೈಯ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಕಾಂಬ್ಳಿಯು ಸಚಿನಗಿಂತ ಎರಡು ವರ್ಷ ದೊಡ್ಡವನು.
1988ರ ಒಂದು ದಿನ ಇಬ್ಬರೂ ಸೇರಿ ತಮ್ಮ ಶಾರದಾಶ್ರಮ ಶಾಲೆಯ ಪರವಾಗಿ ಒಂದು ಪಂದ್ಯದಲ್ಲಿ 664 ರನ್ನುಗಳ ಜೊತೆಯಾಟ ಮಾಡಿ ಇಡೀ ಭಾರತದ ಗಮನ ಸೆಳೆದಿದ್ದರು. ಅಂದು ಇಬ್ಬರದೂ ತ್ರಿಶತಕವು ದಾಖಲು ಆಗಿತ್ತು! ಆಗ ಸಚಿನಗೆ 14 ವರ್ಷ. ಕಾಂಬ್ಳಿಗೆ 16 ವರ್ಷ!
ನಂತರ ಇಬ್ಬರೂ ತಮ್ಮ ಶಾಲೆಯನ್ನು ಬಿಟ್ಟು ಖ್ಯಾತ ಕ್ರಿಕೆಟ್ ಕೋಚ್ ರಮಾಕಾಂತ್ ಆಚರೇಕರ್ ಅವರ ಕೋಚಿಂಗ್ ಕ್ಯಾಂಪ್ ಸೇರಿದರು. ಮಹಾಗುರುಗಳಾದ ಆಚರೇಕರ್ ಸರ್ ತಮ್ಮ ಇಬ್ಬರು ಶಿಷ್ಯರ ಬಗ್ಗೆ ಹೇಳಿದ ಮಾತು ತುಂಬಾ ಮುಖ್ಯ ಆದದ್ದು.
“ಸಚಿನ್ ತುಂಬಾ ಬದ್ಧತೆಯ ಹುಡುಗ. ಹೇಳಿದ ಸಮಯಕ್ಕೆ ಮೊದಲೇ ಕ್ಯಾಂಪಿಗೆ ಬರುತ್ತಿದ್ದ. ನಾನು ಹೇಳಿದ್ದನ್ನು ಚಾಚೂ ತಪ್ಪದೇ ಗಮನಿಸುತ್ತಿದ್ದ. ಹೇಳಿದ್ದನ್ನು ಪೂರ್ತಿಯಾಗಿ ಕಲಿತು ಬರುತ್ತಿದ್ದ. ಅವನ ಶ್ರದ್ಧೆ ಮತ್ತು ನನ್ನ ಬಗ್ಗೆ ಇದ್ದ ಗೌರವಗಳು ಎರಡೂ ಅದ್ಭುತ ಆಗಿತ್ತು”
“ಆದರೆ ಈ ವಿನೋದ್ ಕಾಂಬ್ಳಿ ಶಿಸ್ತಿಲ್ಲದ ಹುಡುಗ. ಆಗಲೇ ಶೋಕಿ ಮಾಡುವುದನ್ನು ಕಲಿತಿದ್ದ. ನನ್ನ ತರಗತಿಗೆ ತಡವಾಗಿ ಬರುತ್ತಿದ್ದ. ಕ್ಲಾಸು ಮುಗಿಯುವ ಮೊದಲೇ ಬೈಕನ್ನು ಏರಿ ವೇಗವಾಗಿ ಓಡುತ್ತಿದ್ದ. ಸಿಗರೇಟ್, ಕುಡಿತ ಎಲ್ಲ ಚಟಗಳನ್ನು ಕಲಿತಿದ್ದ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನ ಪಡುತ್ತಿದ್ದ”
ಸಚಿನ್ ತೆಂಡೂಲ್ಕರಗಿಂತ ಹೆಚ್ಚು ಬಲಿಷ್ಠ ಆಟಗಾರ
“ಪ್ರತಿಭೆಯಲ್ಲಿ ಆತನು ಸಚಿನಗಿಂತ ಒಂದು ತೂಕ ಹೆಚ್ಚೇ ಇದ್ದನು. ಬಲಿಷ್ಠ ಎಡಗೈ ಆಟಗಾರ. ಹೆಚ್ಚು ಆಕ್ರಮಣಕಾರಿ ಆಟಗಾರ. ಆದರೆ ಬದ್ಧತೆ ಮತ್ತು ನಿರಂತರತೆ ಇಲ್ಲ. ಬಹಳ ಮುಖ್ಯವಾಗಿ ಫೋಕಸ್ ಇರಲಿಲ್ಲ. ನನ್ನ ಮಾತು ಕೇಳುತ್ತಲೇ ಇರಲಿಲ್ಲ. ಪರಿಣಾಮವಾಗಿ ಆತ ತನ್ನ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡಿಕೊಂಡ!”
ಮುಂದೆ ಗುರುಗಳು ಹೇಳಿದ ಭವಿಷ್ಯದ ಮಾತು ಅಷ್ಟೂ ನಿಜ ಆಯಿತು.
ಕಾಂಬ್ಳಿ ಆರಂಭದ ಜೋರು ಅಬ್ಬರ!
ಸಚಿನ್ ಮತ್ತು ಕಾಂಬ್ಳಿ ಹೆಚ್ಚು ಕಡಿಮೆ ಒಂದೇ ವರ್ಷದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಕಾಂಬ್ಳಿ ಆರಂಭದಲ್ಲಿ ಭಾರೀ ಅಬ್ಬರಿಸಿದ. ಸತತವಾಗಿ ನಾಲ್ಕು ಶತಕ ಸಿಡಿಸಿದ! ಅದರಲ್ಲಿ ಎರಡು ಡಬ್ಬಲ್ ಸೆಂಚುರಿಗಳು! ಕೇವಲ 14 ಇನ್ನಿಂಗ್ಸಗಳಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ! ಏಕದಿನ ಪಂದ್ಯದಲ್ಲಿ ಕೂಡ ದಾಖಲೆ ಮಾಡಿದ.
ಆತನ ಆರಂಭಿಕ ಅಬ್ಬರ ನೋಡಿದಾಗ ಭಾರತೀಯ ಕ್ರಿಕೆಟ್ ತಂಡಕ್ಕೆ ಒಬ್ಬ ಚಾಂಪಿಯನ್ ಆಟಗಾರ ಸಿಕ್ಕಿದ ಎಂದು ಲೀಡ್ ಪತ್ರಿಕೆಗಳು ಬರೆದವು!
ಹಿಸ್ ಆಟಿಟ್ಯೂಡ್ ವಾಸ್ ರಾಂಗ್!
ಆದರೆ ಆತ ಬಹುಬೇಗನೆ ತನ್ನ ಫೋಕಸನ್ನು ಕಳೆದುಕೊಂಡ. ಚಟಗಳು ಮುಂದುವರೆದವು. ಶೋಕಿಯು ಮಿತಿಮೀರಿತು. ಕುಡಿತ, ಜೂಜು, ಸಿಗರೇಟ್ ಎಲ್ಲವೂ ಆತನನ್ನು ಖಾಲಿ ಮಾಡಿದವು. ಪರಿಣಾಮವಾಗಿ ಆತನ ಚಾಪಿಯನ್ ಆಟ ತನ್ನ ಆಕರ್ಷಣೆ ಕಳೆದುಕೊಂಡಿತು! ಕೇವಲ 23ನೆಯ ವಯಸ್ಸಿನಲ್ಲಿ ಟೆಸ್ಟ್ ತಂಡದಿಂದ ಹೊರಬಿದ್ದ! ಆಗ ಆತನ ಬ್ಯಾಟಿಂಗ್ ಸರಾಸರಿ ಭಾರತದಲ್ಲಿಯೇ ಅತಿ ಹೆಚ್ಚು (54)ಇತ್ತು! ಒಂದೆರಡು ವರ್ಷಗಳಲ್ಲಿ ಏಕದಿನದ ಅವಕಾಶಗಳು ಬರಿದಾದವು.
ಆತ ಭಾರೀ ಜಗಳಗಂಟ. ಸಹ ಆಟಗಾರರ ಜೊತೆ, ಆಯ್ಕೆ ಸಮಿತಿಯವರ ಜೊತೆಗೆ, ಕೋಚ್ ಜೊತೆ, ಹೀಗೆ ಎಲ್ಲರ ಜೊತೆಗೆ ಕಾಲುಕೆರೆದು ಜಗಳಕ್ಕೆ ನಿಂತ! ಅವನ ಮೇಲೆ ಎಲ್ಲರಿಗೂ ಇದ್ದ ಸಿಂಪತಿ ಖಾಲಿ ಆಯ್ತು! ಪರಿಣಾಮವಾಗಿ ತಂಡದಿಂದ ಮತ್ತೆ ಮತ್ತೆ ಹೊರಬಿದ್ದ!
ಅದೇ ಹೊತ್ತಿಗೆ ಸಚಿನ್ ಹೇಗೆ ತನ್ನ ಕ್ರಿಕೆಟ್ ಕೆರಿಯರ್ ಗ್ರಾಫ್ ಏರಿಸಿದ, ಯಾವ ರೀತಿ ದಾಖಲೆಗಳ ಮೇಲೆ ದಾಖಲೆ ಬರೆದ, ಹೇಗೆ ಗಾಡ್ ಆಫ್ ಕ್ರಿಕೆಟ್ ಆದ? ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ! ಆದರೆ ಅವನಿಗಿಂತ ಹೆಚ್ಚು ಪ್ರತಿಭೆ ಮತ್ತು ತಾಕತ್ತು ಹೊಂದಿದ್ದ ವಿನೋದ್ ಕಾಂಬ್ಳಿ ಹೇಗೆ ದಾರಿ ತಪ್ಪಿದ ಅನ್ನುವುದನ್ನು ಕೂಡ ಎಂದು ನಾವು ನೋಡಿದ್ದೇವೆ!
ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೋದರತೆಯ ಮಹಾ ಪರ್ವ – ರಕ್ಷಾ ಬಂಧನ
ಖಾಸಗಿ ಜೀವನದಲ್ಲಿ ನೂರಾರು ಎಡವಟ್ಟುಗಳು
ತನ್ನ ಖಾಸಗಿ ಜೀವನದಲ್ಲಿಯೂ ಕಾಂಬ್ಳಿ ಒಂದರ ಮೇಲೊಂದು ಎಡವಟ್ಟುಗಳನ್ನೇ ಮಾಡಿಕೊಂಡನು! ಹೋಟೆಲ್ ರಿಸೆಪ್ಶನಿಷ್ಟ ಒಬ್ಬಳನ್ನು ಹಾರಿಸಿಕೊಂಡು ಹೋಗಿ ಮದುವೆ ಆದ. ತಾನೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ. ನಂತರ ಆಕೆಗೆ ಡೈವೋರ್ಸ್ ಕೊಟ್ಟು ಎರಡನೇ ಮದುವೆ ಆದ. ಕುಡಿತ, ಜೂಜು, ಸಿಗರೇಟ್ ಎಲ್ಲವೂ ನಿರಂತರವಾಗಿ ಮುಂದುವರೆದವು. ಚಟಕ್ಕೆ ಬಿದ್ದು ದೊಡ್ಡ ದೊಡ್ಡ ಬ್ಯಾಂಕ್ ಸಾಲ ಮಾಡಿದ. ಬ್ಯಾಂಕಿನವರು ಹುಡುಕಿಕೊಂಡು ಬಂದಾಗ ಅಡಗಿ ಕೂತ!
ಒಂದು ಸಣ್ಣ ರಾಜಕೀಯ ಪಕ್ಷವನ್ನು ಸೇರಿ ಮುಂಬೈಯ ವಿಧಾನಸಭಾ ಚುನಾವಣೆಗೆ ನಿಂತ. ತುಂಬಾನೆ ಖರ್ಚು ಮಾಡಿದ. ಆದರೆ ಚುನಾವಣೆಯಲ್ಲಿ ಹೀನಾಯವಾಗಿ ಸೋತುಹೋದ! ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಆಂಜಿಯೋಪ್ಲಾಸ್ಟಿ ಕೂಡ ಆಯ್ತು. ಇನ್ನೊಮ್ಮೆ ಕಾರು ಡ್ರೈವ್ ಮಾಡಿಕೊಂಡು ಹೋಗಿ ತೀವ್ರ ಆಕ್ಸಿಡೆಂಟ್ ಮಾಡಿಕೊಂಡ!
ವೈದ್ಯರು ಇನ್ನು ಕುಡಿಯಲೇ ಬಾರದು. ಕುಡಿದರೆ ಆಸ್ಪತ್ರೆಗೆ ಅಡ್ಮಿಟ್ ಮಾಡುವುದಿಲ್ಲ ಎಂದು ಬೈದು ಕಳಿಸಿದರು! ಆತ ಕುಡಿಯುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ಅಬ್ಬರಿಸಿ ಹೊರಬಂದ!
ಎರಡು ಹಿಂದೀ, ಒಂದು ಕನ್ನಡ ಸಿನೆಮಾದಲ್ಲಿ ಸಣ್ಣ ಸಣ್ಣ ಪಾತ್ರ ಮಾಡಿದ. ಅಲ್ಲೂ ಹೆಸರು ಕೆಡಿಸಿಕೊಂಡ. ಇತ್ತೀಚೆಗೆ ಕ್ಯಾಮೆರಾದ ಮುಂದೆ ಬಂದು ನನಗೆ ಹೊಟ್ಟೆಪಾಡು ಕಷ್ಟ ಆಗ್ತಾ ಇದೆ ಎಂದು ಕಣ್ಣೀರು ಹಾಕಿದ್ದಾನೆ!
ಅದಕ್ಕಿಂತ ಶೋಚನೀಯ ಎಂದರೆ ಇತ್ತೀಚಿನ ವಿಡಿಯೋ.
ವಿನೋದ್ ಕಾಂಬ್ಳಿ – ದ ಲೋಸ್ಟ್ ಹೀರೋ!
ಪತ್ರಕರ್ತ ಕುಣಾಲ್ ಪುರಂದರೆ ಅವರು ಬರೆದಿರುವ ಆತನ ಬದುಕಿನ ಕತೆಯ ಪುಸ್ತಕದ ಹೆಸರು ಅವನ ದುರಂತ ಬದುಕಿಗೆ ಅನ್ವರ್ಥ ಆಗಿದೆ. ಅದು THE LOST HERO!
ಒಬ್ಬ ಅತ್ಯಂತ ಪ್ರತಿಭಾವಂತ ಕ್ರಿಕೆಟರ್ ಹೇಗೆಲ್ಲ ತನ್ನ ಬದುಕನ್ನು ಮತ್ತು ಕೆರಿಯರನ್ನು ಕೆಡಿಸಿಕೊಂಡ? ಹೇಗೆ ನೈತಿಕ ಅಧಃಪತನ ಹೊಂದಿದ? ಎಂಬುದಕ್ಕೆ ಒಂದು ಸಮರ್ಪಕ ನಿದರ್ಶನ ಕೊಡಬೇಕು ಅಂತಾದರೆ ನೀವು ವಿನೋದ್ ಕಾಂಬ್ಳಿ ಹೆಸರು ಹೇಳಬಹುದು!
ಇದನ್ನೂ ಓದಿ: ENG VS NZ: ವಿನೋದ್ ಕಾಂಬ್ಳಿ ಹೆಸರಿನಲ್ಲಿದ್ದ ವಿಶ್ವ ದಾಖಲೆ ಮುರಿದ ಹ್ಯಾರಿ ಬ್ರೂಕ್