Site icon Vistara News

ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

golden memory ರಾಜಮಾರ್ಗ ಅಂಕಣ

ಮೆಮೊರಿ ಒಂದು ಮಿರಾಕಲ್

ರಾಜಮಾರ್ಗ ಅಂಕಣ: ನೆನಪು (Memory) ಒಂದು ವಿಸ್ಮಯಕಾರಿ ಆದ ವಿದ್ಯಮಾನ. ಒಳ್ಳೆಯ ಮೆಮೊರಿ ಪವರ್ (memory Power) ಇದ್ದವರು ಜಗತ್ತನ್ನು ಗೆಲ್ಲಬಹುದು. ಪರೀಕ್ಷೆಗಳಲ್ಲಿ ಟಾಪರ್ (Exam Topper) ಆಗಲು, ಉದ್ಯೋಗವನ್ನು ಚೆನ್ನಾಗಿ ಮಾಡಲು, ವ್ಯಕ್ತಿಗಳನ್ನು ಸರಿಯಾಗಿ ಗುರುತಿಸಲು, ಹಣಕಾಸಿನ ವ್ಯವಹಾರ ಚಂದವಾಗಿ ಮಾಡಲು, ಸಂಬಂಧಗಳನ್ನು ಸರಿಯಾಗಿ ನಿಭಾಯಿಸಲು, ಒಳ್ಳೆಯ ಲೇಖಕರಾಗಲು, ಉತ್ತಮ ಭಾಷಣಕಾರರಾಗಲು ಎಲ್ಲದಕ್ಕೂ ಮೆಮೊರಿ ಬೇಕು. ಗೋಲ್ಡನ್ ಮೆಮೊರಿ (Golden Memory) ನಿಮ್ಮದಾಗಿದ್ದರೆ ಅದು ನಿಮ್ಮ ಯಶಸ್ಸಿನ ಮೊದಲ ಮೆಟ್ಟಿಲು ಆಗಬಲ್ಲದು. ಈ ಗೋಲ್ಡನ್ ಮೆಮೊರಿಯನ್ನು ನಿಮ್ಮದಾಗಿಸಲು ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿ.

1) ಅರ್ಥ ಮಾಡಿಕೊಂಡು ಕಲಿಯಿರಿ. ಬಾಯಿಪಾಠವು ಲಾಂಗ್ ರೇಂಜಿನಲ್ಲಿ ಸೋಲುತ್ತದೆ.

2) ಯಾಕೆ ಓದಬೇಕು? ಎನ್ನುವುದು ಮೂಲಭೂತವಾದ ಪ್ರಶ್ನೆ. ಅದು ಕಲಿಕೆಯ ಉದ್ದೇಶ (PURPOSE). ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ ನಾನು ಜ್ಞಾನಕ್ಕಾಗಿ ಓದುತ್ತೇನೆ. ಇನ್ನೂ ಕೆಲವರು ಖುಷಿಗಾಗಿ ಓದುತ್ತಾರೆ. ಮತ್ತೂ ಕೆಲವರು ಓದಿದ ಅಂಶಗಳನ್ನು ಬೇರೆಯವರಿಗೆ ಹಂಚಲು ಓದುತ್ತಾರೆ. ವಿದ್ಯಾರ್ಥಿಗಳು ಉತ್ತಮ ಮಾರ್ಕ್ ಪಡೆಯಲು ಓದುತ್ತಾರೆ ಇತ್ಯಾದಿ.

3) ಕಲಿಯಬೇಕಾದ ವಿಷಯಗಳನ್ನು ವ್ಯವಸ್ಥಿತವಾಗಿ ಜೋಡಿಸಿ. ಅಂದರೆ ಸುಲಭವಾದ ವಿಷಯಗಳನ್ನು ಮೊದಲು ಕಲಿಯುವುದು, ಕಷ್ಟವಾದ ವಿಷಯಗಳನ್ನು ನಂತರ ಕಲಿಯುವುದು ಇತ್ಯಾದಿ.

4) ಶಬ್ದಗಳು ಬೇಗನೇ ಮರೆತು ಹೋಗುತ್ತವೆ. ಆದರೆ ಚಿತ್ರಗಳು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತವೆ. ದೀರ್ಘಕಾಲದ ಮೆಮೊರಿಗೆ ಚಿತ್ರಗಳ ನೆರವು ಪಡೆಯಿರಿ.

5) ನಾನು ನೆನಪು ಇಡಬಲ್ಲೆ ಎಂಬ ಆತ್ಮವಿಶ್ವಾಸವು ನಿಮ್ಮನ್ನು ಗೆಲ್ಲಿಸುತ್ತದೆ. ಆತ್ಮವಿಶ್ವಾಸವು ನಿಮ್ಮ ಅಷ್ಟೂ ಧನಾತ್ಮಕ ಯೋಚನೆಗಳ (POSSITIVE THINKING) ಉತ್ಪನ್ನ ಆಗಿರುತ್ತದೆ.

6) ಬಹುಮಾಧ್ಯಮ ಕಲಿಕೆಯು ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುತ್ತದೆ. ಅಂದರೆ ಬಣ್ಣದ ಚಿತ್ರಗಳ ಮೂಲಕ ಕಲಿಕೆ, ವಿಡಿಯೋಗಳ ಮೂಲಕ ಕಲಿಕೆ, ಮ್ಯೂಸಿಕ್ ಬಳಸಿಕೊಂಡು ಕಲಿಕೆ, ಆಡಿಯೋ ಬಳಸಿಕೊಂಡು ಕಲಿಕೆ ಇತ್ಯಾದಿ.

7) ಒತ್ತಡ ಇಲ್ಲದೆ ಕಲಿಯುವುದು ತುಂಬಾ ಮುಖ್ಯ. ಈ ಒತ್ತಡವು ನಿಮ್ಮ ಕಲಿಯುವ ಸಾಮರ್ಥ್ಯವನ್ನು ಮತ್ತು ಮೆಮೊರಿ ಪವರನ್ನು ಇಂಚಿಂಚು ಸಾಯಿಸುತ್ತದೆ.

8) ಭಾವನಾತ್ಮಕ ಕಲಿಕೆ ನಿಮ್ಮ ಮೆಮೊರಿ ಪವರನ್ನು ಹಲವು ಪಟ್ಟು ವೃದ್ಧಿಸುತ್ತದೆ. ಅಂದರೆ ನಾವು ಕಲಿಯುವ ವಿಷಯವನ್ನು ಪ್ರೀತಿ ಮಾಡುತ್ತಾ ಕಲಿಯುವುದು ಎಂದರ್ಥ. ಅದು ಹೇಗೆ ಎಂದು ಯೋಚಿಸಿ.

9) ಸಣ್ಣ ತರಗತಿಗಳಲ್ಲಿ ಗಟ್ಟಿಯಾಗಿ ಓದುವುದು (Loud Reading) ಹೆಚ್ಚು ಅನುಕೂಲಕರ. ಆದರೆ ಪ್ರೌಢಶಾಲೆಯ ಹಂತಕ್ಕೆ ಬಂದಾಗ ಮೌನ ಓದು (Silent Reading) ನಿಮಗೆ ಹೆಚ್ಚು ಫಲಿತಾಂಶ ನೀಡುತ್ತದೆ.

10) ಪ್ಯಾಸಿವ್ ರೀಡಿಂಗ್ (PASSIVE READING) ಮಾಡುವುದಕ್ಕಿಂತ ಕ್ರಿಯೇಟಿವ್ ರೀಡಿಂಗ್ ಹೆಚ್ಚು ಮೆಮೊರಿಯನ್ನು ಖಾತ್ರಿ ಪಡಿಸುತ್ತದೆ. ಅಂದರೆ ಹೊಸ ಹೊಸ ರೀತಿಯಿಂದ ಕಲಿಯಲು ತೊಡಗುವುದು.

11) ಹೆಚ್ಚು ಏಕಾಗ್ರತೆಯಿಂದ ಓದುವುದು ತುಂಬಾ ಮುಖ್ಯ. ಪ್ರಶಾಂತವಾದ ಮನಸ್ಸು ಹೆಚ್ಚು ಮೆಮೊರಿಯನ್ನು ಉತ್ತೇಜನ ಮಾಡುತ್ತದೆ.

13) ನಮ್ಮ ಮೆದುಳಿನಲ್ಲಿ ಮೆಮೊರಿಯನ್ನು ಉತ್ತೇಜನ ಮಾಡುವ SEROTONIN ಎಂಬ ಹಾರ್ಮೋನ್ ಉತ್ಪತ್ತಿ ಆಗ್ತಾ ಇರುತ್ತದೆ. ಮೆದುಳಿಗೆ ಸರಿಯಾದ ವಿಶ್ರಾಂತಿ ಕೊಟ್ಟಾಗ, ದಿನಕ್ಕೆ ಕನಿಷ್ಟ 6-8 ಘಂಟೆ ನಿದ್ರೆ ಮಾಡಿದಾಗ, ಮೆದುಳಿಗೆ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳನ್ನು ಕೊಟ್ಟಾಗ, ಉತ್ತಮ ಹವ್ಯಾಸಗಳನ್ನು ರೂಡಿ ಮಾಡಿದಾಗ ಆ ಹಾರ್ಮೋನ್ ಮಿರಾಕಲಸ್ ಮೆಮೊರಿ ಕ್ರಿಯೇಟ್ ಮಾಡುತ್ತದೆ.

14) ಮುಖ್ಯಾಂಶಗಳನ್ನು ಬರೆಯುವ ಅಭ್ಯಾಸವು ತುಂಬಾ ಒಳ್ಳೆಯದು. ಚೆಂದವಾಗಿ ಬರೆಯುವುದರಿಂದ ನಿಮ್ಮ ಬಲ ಮೆದುಳು (ರೈಟ್ ಬ್ರೈನ್) ಹೆಚ್ಚು ಚುರುಕು ಆಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಹಾಗೆಯೇ ಪ್ರತೀ ದಿನವೂ ದಿನಚರಿ (ಡೈರಿ) ಬರೆಯುವುದು ಕೂಡ ನಿಮ್ಮ ಮೆಮೊರಿಗೆ ಪೂರಕ.

15) ಯೋಗಾಸನ, ಪ್ರಾಣಾಯಾಮ , ಧ್ಯಾನ, ಪೌಷ್ಟಿಕ ಆಹಾರದ ಸೇವನೆ, ಮೌನವಾದ ವಾಕಿಂಗ್ ನಿಮ್ಮ ಮೆಮೊರಿ ಪವರನ್ನು ಹೆಚ್ಚು ಮಾಡುವ ಚಟುವಟಿಕೆಗಳು. ಮೆದುಳಿಗೆ ಹೆಚ್ಚು ರಕ್ತ ಸರಬರಾಜು ಆಗುವ ಆಸನಗಳನ್ನು ಒಳ್ಳೆಯ ಗುರುಗಳ ಮೂಲಕ ಕಲಿಯಲು ಪ್ರಯತ್ನಿಸಿ.

16) ಓದಲು ಆರಂಭಿಸುವ ಮೊದಲು 10-15 ನಿಮಿಷ ಕ್ಲಾಸಿಕಲ್ ಸಂಗೀತ ಅಥವಾ INSTRUMENTAL MUSIC (ಸಿತಾರ್, ವೀಣೆ, ವಯಲಿನ್ ಇತ್ಯಾದಿ) ಕೇಳುವುದರಿಂದ ನಿಮ್ಮ ಓದುವ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ಮೆಮೊರಿ ಪವರ್ ಕೂಡ ಹೆಚ್ಚುತ್ತದೆ.

17) ನೀವು ಓದಿದ್ದನ್ನು ಇನ್ನೊಬ್ಬರಿಗೆ ವಿವರಿಸುವಾಗ ಅದು ನಿಮ್ಮ ಮೆಮೊರಿ ಪವರನ್ನು ಉತ್ತೇಜನ ಮಾಡುತ್ತದೆ. ಆದ್ದರಿಂದ ಗ್ರೂಪ್ ಸ್ಟಡಿಯು ಮೆಮೊರಿ ಜಾಸ್ತಿ ಮಾಡಲು ಅತ್ಯುತ್ತಮ ವಿಧಾನ ಎಂದು ಮಾನ್ಯತೆ ಪಡೆದಿದೆ.

18) ಮೆಮೊರಿ ಹೆಚ್ಚು ಮಾಡಲು ಪುನರ್ ಮನನ (Recalling) ಅತ್ಯುತ್ತಮ ವಿಧಾನ. ರಾತ್ರಿ ಮಲಗುವ ಮೊದಲು ಒಂದು ಹತ್ತು ನಿಮಿಷ ಬಿಡುವು ಮಾಡಿಕೊಂಡು ಇಂದು ನಾನು ಯಾವುದನ್ನು ಯಾವ ಅನುಕ್ರಮದಲ್ಲಿ ಕಲಿತೆ? ಯಾರನ್ನು ಇಂದು ಭೇಟಿ ಮಾಡಿದೆ? ಯಾವ ಹೊಸ ಅನುಭವ ಪಡೆದುಕೊಂಡೆ? ಇತ್ಯಾದಿ ರಿಕಾಲ್ ಮಾಡುತ್ತಾ ಹೋದಾಗ ನಿಮ್ಮ ಮೆಮೊರಿ ನೂರು ಪಟ್ಟು ವೃದ್ಧಿ ಆಗುತ್ತದೆ. ಹಾಗೆಯೇ ಪ್ರತೀ ಒಂದು ಘಂಟೆಯ ಓದಿನ ನಂತರ 5-10 ನಿಮಿಷ ರಿಕಾಲ್ ಮಾಡುತ್ತಾ ಹೋದರೆ ಮೆಮೊರಿ ಗೆಲ್ಲುತ್ತದೆ.

19) ನಿಮ್ಮ ಮೆದುಳಿನಲ್ಲಿ ಜಂಕ್ (ತಂಗಳು) ಸಂಗತಿಗಳು ಹೆಚ್ಚು ಪ್ರವೇಶ ಮಾಡದ ಹಾಗೆ ಪ್ಲಾನ್ ಮಾಡಿಕೊಳ್ಳಿ. ಉದಾಹರಣೆಗೆ ಅನಗತ್ಯವಾದ ಇಸವಿಗಳು, ಉದ್ದುದ್ದವಾದ ಮೊಬೈಲ್ ನಂಬರು ಅನಗತ್ಯವಾದ ಕ್ರಿಕೆಟ್ ದಾಖಲೆಗಳು, ನೋವು ಕೊಡುವ ಸಂಗತಿಗಳು ಇತ್ಯಾದಿ.

20) ಮೆಮೊರಿ ಹೇಗೆ ಸಹಜವೋ ಮರೆಯುವುದು (Forgetting) ಕೂಡಾ ಅಷ್ಟೇ ಸಹಜ! ಯಾವ ಮೆಮೊರಿ ನಿಮಗೆ ಮುಂದೆ ಅಗತ್ಯ ಬೀಳುವುದಿಲ್ಲವೋ ಅವುಗಳನ್ನು ನಿಮ್ಮ ಮೆದುಳು ಚಂದವಾಗಿ ಒರೆಸುತ್ತಾ (Erasing) ಮುಂದೆ ಹೋಗುತ್ತದೆ. ಆದ್ದರಿಂದ ಏನಾದರೂ ಸಣ್ಣ ಪುಟ್ಟ ಮರೆವು ಉಂಟಾದರೆ ಆತಂಕ ಮಾಡದೇ ಮುಂದೆ ಹೋಗುವುದೇ ಒಳ್ಳೇದು.

ಅದ್ಭುತವಾದ ಗೋಲ್ಡನ್ ಮೆಮೊರಿ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

Exit mobile version