ಭಾರತದಲ್ಲಿ ಯಾಕೆ ಶ್ರೇಷ್ಠ ಕ್ರೀಡಾ ಪ್ರತಿಭೆಗಳು ಅರಳುತ್ತಿಲ್ಲ?
:: ರಾಜೇಂದ್ರ ಭಟ್ ಕೆ.
ರಾಜಮಾರ್ಗ ಅಂಕಣ: ಬಹಳ ನಿರೀಕ್ಷೆಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕೂಟಕ್ಕೆ ತೆರೆಬಿದ್ದಾಗಿದೆ. ಭಾರತಕ್ಕೆ (India) ದೊರಕಿದ್ದು 5 ಕಂಚಿನ ಪದಕಗಳು (Bronze medal) ಮತ್ತು ಒಂದು ಬೆಳ್ಳಿಯ ಪದಕ (Silver Meadl). ಒಲಿಂಪಿಕ್ ಗ್ರಾಮದಲ್ಲಿ ಒಮ್ಮೆ ಕೂಡ ಭಾರತದ ರಾಷ್ಟ್ರಗೀತೆ ಮೊಳಗಲೇ ಇಲ್ಲ ಎಂಬ ದುಃಖ ನಮಗೆ. ಭಾರತಕ್ಕೆ ದೊರಕಿದ್ದು 71ನೇ ಸ್ಥಾನ. ಈ ಒಲಿಂಪಿಕ್ ಕೂಟದಲ್ಲಿ ಭಾರತದ ಸಾಧನೆಯು ಕಳಪೆ ಎಂದು ಹಲವರು ವಿಶ್ಲೇಷಣೆ ಮಾಡುತ್ತಾ ಇದ್ದಾರೆ. ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದು ಚಿನ್ನದ ಪದಕ (Gold Medal) ಸೇರಿ ಏಳು ಪದಕಗಳು ದೊರೆತಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಭಾರತ ಸ್ವಲ್ಪ ಹಿಂದೆ ಬಿದ್ದಿದೆ.
ನಮಗೆ ಈ ಬಾರಿ 7-8 ಪದಕಗಳು ಕೂದಲೆಳೆಯ ಅಂತರದಲ್ಲಿ ಮಿಸ್ ಆದವು!
ಇದು ಕಳಪೆ ಒಲಿಂಪಿಕ್ಸ್ ಅನ್ನೋದಕ್ಕಿಂತ ಭಾರತಕ್ಕಿದು ದುರದೃಷ್ಟದ ಒಲಿಂಪಿಕ್ಸ್ ಎಂದೇ ಹೇಳಬಹುದು. ದೇಶದ 6 ಮಂದಿ ಕ್ರೀಡಾಪಟುಗಳು ಕೂಟದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದು ಪದಕವಂಚಿತರಾದರು. ಅರ್ಜುನ್ ಬಬುತಾ, ಅಂಕಿತ ಧೀರಜ್, ಮನು ಭಾಕರ್ (Manu Bhaker – ಮೂರನೇ ಪದಕ), ಅನಂತ್ ಜೀತ್, ಮಹೇಶ್ವರಿ, ಲಕ್ಷ್ಯ ಸೇನ್, ಮೀರಾಬಾಯಿ ಚಾನು ಇವರು ನಾಲ್ಕನೇ ಸ್ಥಾನಿಗಳಾಗಿ ಸ್ಪರ್ಧೆಯನ್ನು ಮುಗಿಸಿದವರು. ಹಾಗೆಯೇ ವಿನೇಶ್ ಫೊಗಟ್ (Vinesh Phogat), ನಿಶಾ ದಹಿಯ, ರಿತಿಕ ಹೂಡ ಮೊದಲಾದ ಕುಸ್ತಿ ಪಟುಗಳು ಒಲಿಂಪಿಕ್‌ನ ಕರಾಳ ನಿಯಮಕ್ಕೆ ಬಲಿಯಾಗಿ ಪದಕ ಮಿಸ್ ಮಾಡಿಕೊಂಡರು ಅನ್ನೋದು ನಮ್ಮ ನೋವು. ಇವರೆಲ್ಲರೂ ಪದಕ ಪಡೆದಿದ್ದರೆ ಭಾರತದ ಟೋಟಲ್ ಪದಕಗಳ ಸಂಖ್ಯೆ 15 ದಾಟುತ್ತಿತ್ತು ಅಲ್ಲವೇ? ಕೆಲವೊಮ್ಮೆ ಪ್ರತಿಭೆ, ಸಾಮರ್ಥ್ಯಗಳು ಇದ್ದರೆ ಸಾಕಾಗುವುದಿಲ್ಲ, ಅದೃಷ್ಟವೂ ಜೊತೆಗೆ ಇರಬೇಕು ಎಂಬ ಸಿದ್ಧಾಂತವನ್ನು ನಾವು ಈ ಬಾರಿ ಒಪ್ಪಿಕೊಳ್ಳಲೇಬೇಕಾಯಿತು.
130 ಕೋಟಿ ಜನಸಂಖ್ಯೆ ಇರುವ, ಅದರಲ್ಲಿ 60%ಕ್ಕಿಂತ ಅಧಿಕ ಯುವಜನತೆ (Below 40) ಇರುವ ದೇಶವಾದ ಭಾರತದಲ್ಲಿ ಶ್ರೇಷ್ಠ ಕ್ರೀಡಾಪ್ರತಿಭೆಗಳು ಯಾಕೆ ಅರಳುತ್ತಿಲ್ಲ ಅನ್ನುವುದು ಹಲವರು ಕೇಳುವ ಪ್ರಶ್ನೆ. ಭಾರತಕ್ಕೆ ಈಗ ಅದರದ್ದೇ ಆದ ಕ್ರೀಡಾನೀತಿ ಇದೆ. ಒಳ್ಳೆಯ ಬಜೆಟ್ ಇದೆ. ವಿದೇಶದ ಕೋಚುಗಳ ನೇಮಕ ಆಗಿದೆ. ಸ್ವತಃ ಕ್ರೀಡಾಪಟು ಆಗಿದ್ದ ಪಿಟಿ ಉಷಾ ಅಧ್ಯಕ್ಷೆಯಾಗಿರುವ ಬಲಿಷ್ಠವಾದ ಒಲಿಂಪಿಕ್ ಸಮಿತಿ ಇದೆ. ಆದರೂ ಅದಕ್ಕೆ ಅನುಗುಣವಾದ ಫಲಿತಾಂಶ ಈ ಬಾರಿ ದೊರೆತಿಲ್ಲ. ಯಾಕೆ?
ಎಲ್ಲರೂ ಉತ್ತರಿಸಲೇ ಬೇಕಾದ ಪ್ರಶ್ನೆಗಳು
1) ಅಮೇರಿಕಾ, ಚೀನಾದಂತಹ ದೇಶಗಳಲ್ಲಿ ಬಾಲ್ಯದಲ್ಲಿಯೇ ಮಗುವಿನ ಕ್ರೀಡಾಪ್ರತಿಭೆಗಳನ್ನು ಹುಡುಕಿ ತರಬೇತು ಆರಂಭ ಮಾಡುತ್ತಾರೆ. ಆದರೆ ನಮ್ಮಲ್ಲಿ ಬಾಲ್ಯದಲ್ಲಿ ಮಗು ಮೈದಾನಕ್ಕೆ ಇಳಿಯುವುದನ್ನು ಹೆತ್ತವರು ಇಷ್ಟ ಪಡುವುದಿಲ್ಲ. ಕ್ರೀಡೆಯ ಮೂಲಕ ಮಗುವಿನ ಭವಿಷ್ಯ ಕಟ್ಟುವ ಭರವಸೆ ಭಾರತದ ಹೆಚ್ಚಿನ ಪೋಷಕರಿಗೆ ಇಲ್ಲ.
2) ಒಳ್ಳೆಯ ಕ್ರೀಡಾಪಟು ರೂಪುಗೊಳ್ಳಬೇಕು ಅಂತಾದರೆ ಪರಿಣತ ಕೋಚ್, ತರಬೇತುದಾರ ಬೇಕು. ಭಾರತವು ಇನ್ನೂ ಉತ್ತಮ ಕೋಚುಗಳನ್ನು ಬೆಳೆಸಿಲ್ಲ. ಕ್ರೀಡಾ ಸಲಕರಣೆಗಳು, ಜಿಮ್ ಗಳು ಮಕ್ಕಳಿಗೆ ಹತ್ತಿರದಲ್ಲಿ ದೊರೆಯುತ್ತಿಲ್ಲ. ವಿದೇಶದ ಕೋಚಗಳನ್ನು ನೇಮಕ ಮಾಡುವಷ್ಟು ಭಾರತದ ಗ್ರಾಮಾಂತರ, ಮಧ್ಯಮವರ್ಗದ ಪೋಷಕರು ಶ್ರೀಮಂತರಾಗಿಲ್ಲ.
3) ಒಬ್ಬ ಒಳ್ಳೆಯ ಕ್ರೀಡಾಪಟುವು ಅರಳಬೇಕಾದರೆ ದೈಹಿಕ ಕ್ಷಮತೆ (ಫಿಸಿಕಲ್ ಫಿಟ್ನೆಸ್)ಯು ತುಂಬಾನೆ ಪ್ರಾಮುಖ್ಯ. ಅಂದರೆ ಸಣ್ಣ ಪ್ರಾಯದಲ್ಲಿ ಪೌಷ್ಟಿಕ ಆಹಾರ, ವಿಟಮಿನಗಳು ದೊರೆಯಬೇಕು. ಆ ಮಗು ಬೆವರು ಬಸಿದು ಕೆಲಸ ಮಾಡಬೇಕು. ಜಿಮ್, ಟೆನಿಸ್ ಕೋರ್ಟ್, ಬ್ಯಾಡ್ಮಿಂಟನ್ ಕೋರ್ಟು ಹತ್ತಿರದಲ್ಲಿ ಇರಬೇಕು. ಇದೆಲ್ಲ ಸಾಧ್ಯ ಆಗ್ತಾ ಇದೆಯಾ?
4) ಯಾವುದೇ ರಾಜ್ಯದಲ್ಲಿ ಕ್ರೀಡೆಗೆ ಪ್ರತ್ಯೇಕ ಸಚಿವಾಲಯ ಬೇಕು. ಒಳ್ಳೆಯ ಬಜೆಟ್ ಬೇಕು. ಆದರೆ ನಮ್ಮಲ್ಲಿ ಕ್ರೀಡಾ ಇಲಾಖೆಯು ಯುವಜನ ಸೇವಾ ಇಲಾಖೆಯ ಜೊತೆಗೆ ಇದೆ. ಬಜೆಟ್ ಕೇಳಿದರೆ ನೀವು ಖಂಡಿತವಾಗಿ ನಗುತ್ತೀರಿ. ಇನ್ನು ಪದಕ ನಿರೀಕ್ಷೆ ಮಾಡುವುದು ಹೇಗೆ?
5) ನಮ್ಮ ಶೈಕ್ಷಣಿಕ ವರ್ಷವು ಆರಂಭವಾಗುವುದೇ ಮಳೆಗಾಲದಲ್ಲಿ. ಮೊದಲ ನಾಲ್ಕು ತಿಂಗಳ ಒಳಗೆ ಎಲ್ಲ ಪಂದ್ಯಾಟಗಳು, ಕ್ರೀಡಾಕೂಟಗಳು ಮುಗಿಯಬೇಕು. ಅಂದರೆ ನಮ್ಮ ಪುಟ್ಟ ಮಕ್ಕಳು ಮಳೆಗೆ ತಲೆಕೊಟ್ಟು, ಜಾರುವ ಮೈದಾನದಲ್ಲಿ ಓಡಬೇಕು. ಮಳೆಗಾಲದ ಹೊತ್ತಲ್ಲಿ ತರಬೇತಿ ಪಡೆಯುವುದು ಯಾವಾಗ? ಒಳಾಂಗಣ ಕ್ರೀಡಾಂಗಣಗಳು ಎಷ್ಟು ಕಡೆ ಇವೆ? ಇದು ಕ್ರೀಡೆಗೆ ಪೂರಕವೇ?
6) ಕೆಲವು ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಮೀಸಲು ಕೋಟಾ ಇದೆ. ಕೃಪಾಂಕದ ವ್ಯವಸ್ಥೆ ಇದೆ. ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ನಮ್ಮಲ್ಲಿ?
7) ಬಾಲ್ಯದಿಂದ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವ, ಅದೇ ಕನಸುಗಳನ್ನು ಮಗುವಿನ ತಲೆಗೆ ತುಂಬುವ ಹೆತ್ತವರು ಮಕ್ಕಳು ಮೈದಾನಕ್ಕೆ ಇಳಿಯುವುದನ್ನು ಇಷ್ಟ ಪಡುವುದೇ ಇಲ್ಲ. ಕ್ರೀಡೆಗಳಲ್ಲಿ ಸಾಧನೆ ಮಾಡಬೇಕಾದರೆ ಮಗು ತರಗತಿ ಪಾಠ, ಪರೀಕ್ಷೆಗಳು ಇತ್ಯಾದಿಗಳಲ್ಲಿ ರಿಯಾಯಿತಿ ಪಡೆಯಬೇಕು. ಆಗ್ತಾ ಇದೆಯಾ?
8) ಎಷ್ಟೋ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಪದವಿಪೂರ್ವ ಕಾಲೇಜುಗಳ ಹಂತಕ್ಕೆ ಬಂದರೆ 50% ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ದೊಡ್ಡ ದೊಡ್ಡ ಶಾಲೆಗಳ ಕಟ್ಟಡಗಳನ್ನು ಕಟ್ಟುವ ಕಾಲೇಜುಗಳು ಗ್ರೌಂಡ್ ಇಲ್ಲದೆ ಕೂಡ ಕ್ಲಾಸ್ ನಡೆಸುತ್ತವೆ ಎಂದರೆ ನೀವು ನಂಬಲೇಬೇಕು.
9) ಶೂಟಿಂಗ್, ಗಾಲ್ಫ್, ಜಿಮ್ನಾಸ್ಟಿಕ್ ಉಪಕರಣಗಳು ತುಂಬಾ ದುಬಾರಿ. ಸರಕಾರಿ ಬ್ಯಾಡ್ಮಿಂಟನ್ ಕೋರ್ಟು, ಸ್ವಿಮ್ಮಿಂಗ್ ಪೂಲ್, ಜಿಮ್ ಗಳು ಇರುವುದು ತಾಲೂಕಿಗೆ ಒಂದೇ! ಎಷ್ಟೋ ಕಡೆಗಳಲ್ಲಿ ಅದೂ ಇಲ್ಲ. ಖಾಸಗಿಯವರು ಹೆಚ್ಚು ಫೀಸ್ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಕ್ರೀಡಾಪ್ರತಿಭೆಗಳು ತರಬೇತು ಪಡೆಯಲು ತುಂಬಾ ದೂರಕ್ಕೆ ಹೋಗಬೇಕು. ಹಾಗಿರುವಾಗ ಪ್ರತಿಭೆಗಳು ಅರಳುವುದು ಹೇಗೆ?
10) ಸ್ಥಳೀಯ, ತಾಲೂಕು, ಜಿಲ್ಲಾಮಟ್ಟದ ಕ್ರೀಡಾಕೂಟಗಳಿಗೆ ಅದರಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಅನುದಾನದ ಬೆಂಬಲ ತುಂಬ ಕಡಿಮೆ. ಹೆತ್ತವರು ಅಥವಾ ಶಿಕ್ಷಕರೇ ಖರ್ಚು ಮಾಡಬೇಕು ಅಂತಾದಾಗ ಸಹಜವಾಗಿ ಎಲ್ಲರ ಆಸಕ್ತಿ ಕಡಿಮೆ ಆಗುತ್ತದೆ.
11) ಏಷಿಯಾಡ್, ಕಾಮನ್ ವೆಲ್ತ್ ಅಥವಾ ಒಲಿಂಪಿಕ್ಸ್ ಮೊದಲಾದ ಕೂಟಗಳಲ್ಲಿ ಅರ್ಹತೆಯನ್ನು ಪಡೆಯಬೇಕಾದರೆ ಒಬ್ಬ ಕ್ರೀಡಾಪಟು ದಿನಕ್ಕೆ ಕನಿಷ್ಟ 10-12 ಘಂಟೆ ಮೈದಾನದಲ್ಲಿ ಕಠಿಣ ಪರಿಶ್ರಮಪಡಬೇಕು. ಬೆವರು ಸುರಿಸಬೇಕು. ಒಳ್ಳೆಯ ತರಬೇತುದಾರರು ಸಿಗಬೇಕು. ಸರಕಾರಗಳು ಅಂತಹ ಕ್ರೀಡಾ ಪ್ರತಿಭೆಗಳನ್ನು ದತ್ತುಸ್ವೀಕಾರ ಮಾಡಬೇಕು. ಒಳ್ಳೆಯ ಸೌಲಭ್ಯಗಳನ್ನು ಖಾತರಿ ಪಡಿಸಬೇಕು. ಪೌಷ್ಟಿಕವಾದ ಆಹಾರದ ವ್ಯವಸ್ಥೆ ಮಾಡಬೇಕು. ನೀನು ಕ್ರೀಡೆಯಲ್ಲಿ ಗಮನ ಕೊಡು, ನಾನಿದ್ದೇನೆ ಎಂದು ಭರವಸೆಯನ್ನು ತುಂಬಬೇಕು. ಇದು ಆಗ್ತಾ ಇದೆಯಾ?
12) ಎಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರಮಟ್ಟದ ಕ್ರೀಡಾತಾರೆಗಳನ್ನು ನ್ಯಾಶನಲ್ ಹೀರೋಗಳಾಗಿ ಘೋಷಣೆ ಮಾಡಬೇಕು. ಅವರ ಬದುಕಿನ ಕಥೆಗಳು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕದಲ್ಲಿ ಇರಬೇಕು. ಕ್ರಿಕೆಟ್ ನಮ್ಮ ಧರ್ಮ ಆಗಿರುವ, ಕ್ರಿಕೆಟರಗಳು ನಮಗೆ ದೇವರಾಗಿರುವ ಈ ದೇಶದಲ್ಲಿ ಕ್ರೀಡಾಪಟುಗಳಿಗೆ ಸ್ಟಾರ್ ವ್ಯಾಲ್ಯೂ ತರುವುದು ಸಾಧ್ಯ ಆಗಿದೆಯಾ?
ಎಲ್ಲಕ್ಕಿಂತ ಹೆಚ್ಚಾಗಿ ಹೆತ್ತವರ ಮೈಂಡ್ ಸೆಟ್ ಬದಲಾಗಬೇಕು. ಇಲ್ಲಾಂದರೆ ನಾವು ಭಾರತದ ಕ್ರೀಡಾ ಸಾಧನೆಯನ್ನು ಕಳಪೆ ಎಂದು ದೂರುವುದನ್ನು ಬಿಡಬೇಕು.
ಏನಂತೀರಿ?
ಇದನ್ನೂ ಓದಿ: ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!